7

ಅಂಕಾರ್ಟೆಸ್‌ನಲ್ಲಿ ‘ವೇಲ್ ಸಫಾರಿ’

Published:
Updated:
ಅಂಕಾರ್ಟೆಸ್‌ನಲ್ಲಿ ‘ವೇಲ್ ಸಫಾರಿ’

ವಾಯವ್ಯ ಅಮೆರಿಕದ ವಾಷಿಂಗ್‌ಟನ್ ಪ್ರಾಂತ್ಯದ ಸಿಯಾಟಲ್ ನಗರಿ – ‘ಊರೊಳು ಹಸಿರೊ, ಹಸಿರೊಳು ಊರೊ’ ಎನ್ನುವಷ್ಟರಮಟ್ಟಿಗೆ ಸಸ್ಯಕಾಶಿ. ಎತ್ತ ನೋಡಿದರತ್ತ ತೊರೆ, ನದಿ, ಸರೋವರ, ಹಿಮ ಗುಡ್ಡ, ಜಲಪಾತಗಳು. ಶ್ರೀಕೃಷ್ಣ ಇದೀಗ ಬಂದಾನೆಂಬ ಭಾವ ಅರಳಿಸುವ ಬೃಂದಾವನದಂತಿದೆ ಇಡೀ ಊರು.ನಮ್ಮ ಮಗಳ ಮನೆ ಇರುವುದು ರೆಡ್‌ಮಂಡ್‌ನಲ್ಲಿ. ಯಾರ ಅನುಮತಿಗೂ ಕಾಯದೆ ವರುಣ ದೇವ ದಿಢೀರ್‌ ಎಂದು ಅವತರಿಸುವ ಪ್ರದೇಶ ಅದು. ಅಂದು ಶನಿವಾರದ ನಸುಕು. ‘ಅಪ್ಪ–ಅಮ್ಮ ಬೇಗ ಸಿದ್ಧರಾಗಿ. ತಿಮಿಂಗಿಲ ಬೇಟೆಗೆ ಹೋಗೋಣ. ಬಿಸಿಲು ಸೊಗಸಾಗಿದೆ. ಈಗ ಐದೂವರೆ ಗಂಟೆ. ಈಗಲೇ ಹೊರಟರೆ ಸಂಜೆಯೊಳಗೆ ವಾಪಸ್ಸು ಬರಬಹುದು’ ಅಂದಳು ಮಗಳು ದಿವ್ಯಾ.ತಿಮಿಂಗಿಲ ಭೂಮಿಯಲ್ಲೇ ಅತಿ ದೊಡ್ಡ ಪ್ರಾಣಿ, ಸಸ್ತನಿ. ಅದರ ಬೇಟೆಯೇ ಎಂದು ನನ್ನಾಕೆ ಗಾಬರಿಯಾದಳು. ‘ಹಾಗಲ್ಲಮ್ಮ, ತಿಮಿಂಗಿಲಗಳ ಕುಶಲ ವಿಚಾರಿಸಿಕೊಂಡು ಬರೋಣ... ನಾವು ಹೊರಟಿರುವುದು ‘ವೇಲ್ ಸಫಾರಿ’ಗೆ ಎನ್ನುವುದು ಮಗಳ ಸ್ಪಷ್ಟನೆ.ನಿದ್ರೆಯಿಂದೆದ್ದಿದ್ದ ಒಂದೂವರೆ ವರ್ಷದ ಕೂಸು ಅಹನಾಳನ್ನು ‘ಸ್ವಲ್ಪ ನೋಡಿಕೊಳ್ಳಿ’ ಅಂದ ಅಳೀಮಯ್ಯ ರಂಜನ್. ಇಪ್ಪತ್ತು ನಿಮಿಷಗಳಲ್ಲಿ ಕೇಸರಿಬಾತ್, ಪುಳಿಯೋಗರೆ ಜೊತೆಗೆ ಅಷ್ಟು ಚಪಾತಿಗಳ ಬುತ್ತಿಯನ್ನು ಅಳಿಯ–ಮಗಳು ಕಟ್ಟಿದರು. ಮಾಲ್‌ನಿಂದ ತಂದ ಉಪ್ಪೇರಿ, ಜ್ಯೂಸ್ ಕೂಡ ಜೊತೆಸೇರಿದವು.

ನಮ್ಮ ಕಾರು 150 ಕಿ.ಮೀ. ದೂರದ ಅಂಕಾರ್ಟೆಸ್ ಪೋರ್ಟ್‌ನತ್ತ ಹೊರಟಿತು. ಎರಡು ತಾಸು ಪ್ರಯಾಣ. ಹಾದಿಯಲ್ಲಿ ಅಂಕಾರ್ಟೆಸ್ ಎಂಬ ಗ್ರಾಮವಿದೆ. ಹಳೆಯ ಬೇರು, ಹೊಸ ಚಿಗುರು ಉಕ್ತಿಯನ್ನು ಸಾಕಾರವಾಗಿಸಿರುವ ದೇಸೀ ತಾಣ ಅದು – ಬಲು ಸುಂದರ, ಐತಿಹಾಸಿಕ. ಮರದ ಕಾಂಡ, ಕೊಂಬೆಗಳನ್ನು ಯಥಾವತ್ತಾಗಿರಿಸಿ ಪೀಠೋಪಕರಣಗಳನ್ನು ಸಜ್ಜುಗೊಳಿಸಿರುವ ಕಲೆಗಾರಿಕೆ ಪ್ರತಿ ಉಪಾಹಾರ ಗೃಹಗಳಲ್ಲಿ ಕಾಣಿಸುತ್ತದೆ.ಬಸ್‌ನಿಲ್ದಾಣದಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲು ಕಾದಿರುವ ಬಸ್‌ಗಳಂತೆ ಬಂದರಿನಲ್ಲಿ ಕಿರು ಹಡಗುಗಳಿದ್ದವು. ಅವುಗಳನ್ನು ‘ತೇಲು ಮಹಡಿ ಮನೆ’ ಎನ್ನುವುದೇ ಯುಕ್ತ. 85 ಅಡಿ ಉದ್ದ, 22 ಅಡಿ ಅಗಲದ ತೇಲುಮನೆಗಳವು. ಒಂದು ಸಫಾರಿ ಟ್ರಿಪ್‌ಗೆ 150 ಕಿ.ಮೀ. ಪ್ರಯಾಣಿಸಬಲ್ಲದು. ಅದೊರಳಗೆ ಬೇಕರಿ, ಉಪಾಹಾರ ಗೃಹವಿದೆ. ಸ್ನಾನದ ಮನೆ, ಶೌಚಾಲಯಗಳಿವೆ. ಅಲ್ಲಲ್ಲಿ ಫೋಟೊ ತೆಗೆಯಲಿಕ್ಕಾಗಿ ಕ್ಯಾಮೆರಾ ಕಟ್ಟೆಗಳಿವೆ. ಸಮುದ್ರದ ವೈಶಾಲ್ಯ ಇನ್ನಷ್ಟು ತಮ್ಮದಾಗಿಸಿಕೊಳ್ಳಲು ಹಲವರು ಬಾಲ್ಕನಿಯೇರಲು ಪೈಪೋಟಿಗಿಳಿಯುತ್ತಾರೆ.ಒಂದು ಕುಟುಂಬದವರೆಲ್ಲ ಹಡುಗುಗಳಲ್ಲಿನ ಕೊಠಡಿಗಳಲ್ಲಿ ಆರಾಮವಾಗಿ ಕುಳಿತು ಮನೆಯಲ್ಲಿದ್ದಂತೆಯೇ ಲೋಕಾಭಿರಾಮ ಹರಟಬಹುದು. ಖಾಸಗೀತನಕ್ಕೆ ಅಲ್ಲಿ ಭಂಗವಿಲ್ಲ. ತಮ್ಮಂತೆಯೇ ತಿಮಿಂಗಿಲ ನೋಡಲು ಬಂದ ನೆರೆಹೊರೆಯವರನ್ನು ಪರಿಚಯಿಸಿಕೊಳ್ಳಬಹುದು. ಇಡೀ ಕಿರು ಹಡಗು ಒಂದು ವಠಾರದಂತೆ ಅನ್ನಿ. ತೇಲುಮನೆಯ ಗೃಹಪ್ರವೇಶಕ್ಕೆ ಸರದಿ ಸಾಲು ನಿಂತೆವು. ನಮ್ಮ ಮಾರ್ಗದರ್ಶಕ ನಮಗೆ ಪುಟ್ಟ ತರಗತಿಯನ್ನೇ ಆರಂಭಿಸಿದ್ದರು. ನಡು ನಡುವೆ ನವಿರು ಹಾಸ್ಯ. ‘ಪರಿಸರ ಸಂರಕ್ಷಿಸಿ, ಕಡಲನ್ನು ಕಾಪಾಡಿ’ ಎಂಬ ನಿಸರ್ಗ ಪಾಠ.   ‘ಗೆಳೆಯರೇ, ನಾನು ತಿಮಿಂಗಿಲಗಳನ್ನು ಕರೆಯಲು ಸಾಧ್ಯವಿಲ್ಲ. ಆದರೆ ಅವುಗಳಿರುವ ಸಮೀಪಕ್ಕೆ ನಿಮ್ಮನ್ನು ಕರೆದೊಯ್ಯುವೆ. ಕಂಡರೆ ನಿಮ್ಮ ಅದೃಷ್ಟ. ತಿಮಿಂಗಿಲ ಗೋಚರಿಸಿದಾಗ ಹರ್ಷಾತಿರೇಕ ಬೇಡ. ಸೀಲ್, ನೀರುನಾಯಿ, ಬಗೆ ಬಗೆಯ ಕಡಲಕ್ಕಿಗಳನ್ನೂ ನೋಡಿ ಆನಂದಿಸಿ’ ಎಂದ ಅವರು – ‘ಶೌಚಾಲಯ ಬಳಸುವಾಗ ಟಿಶ್ಯೂ ಕಾಗದ ಆದಷ್ಟೂ ಕಡಿಮೆ ಉಪಯೋಗಿಸಿ’ ಎಂದು ಕಿವಿಮಾತನ್ನೂ ಹೇಳಿದರು.ತಿಮಿಂಗಿಲ ಬಂದಾಗ ನೋಡಿದರಾಯ್ತು ಅಂತ ನಮ್ಮ ಕೊಠಡಿಯಲ್ಲಿ ಆರಾಮವಾಗಿದ್ದೆವು. ಇದ್ದಕ್ಕಿದ್ದಂತೆ ಹೊರಗೆ ಬಾಲ್ಕನಿಯಲ್ಲಿದ್ದವರು ‘ಓ ಓ ವೇಲ್ಸ್  ವೇಲ್ಸ್’ ಎಂದು ಕೂಗಿದರು. ಅವರು ಹೀಗೆ ಕೂಗುವುದು, ನಾವೆಲ್ಲ ದುರ್ಬೀನು– ಕ್ಯಾಮೆರಾದೊಂದಿಗೆ ಹೊರಗೋಡುವುದು... ಹೀಗೆ ಅದೆಷ್ಟು ಬಾರಿ ಆಯಿತೋ ಲೆಕ್ಕವಿಲ್ಲ.ತಿಮಿಂಗಿಲಗಳಿಗೆ ಮನುಷ್ಯನೆಂದರೆ ಭಯ! ಅವು ಹಿಂಡು ಹಿಂಡಾಗಿಯೇ ಸಾಗುತ್ತವೆ. ಕನಿಷ್ಠ 300 ಅಡಿಗಳ ದೂರದಲ್ಲಿರುತ್ತವೆ. ಅವುಗಳ ದವಡೆ ರೇಡಾರ್‌ನಂತೆ ಕಾರ್ಯ ನಿರ್ವಹಿಸುತ್ತದೆ. ಅವು 300 ಅಡಿಗಳ ಅಂತರದಲ್ಲಿನ ಯಾವುದೇ ವಸ್ತುಗಳ ಅಸಿತ್ವವನ್ನು ಸುಲಭವಾಗಿ ಗ್ರಹಿಸಬಲ್ಲವು.ಮೊದಲ ಬಾರಿಗೆ ಸಫಾರಿಗೆ ಬಂದವರಿಗೆ ಕಾಣುತ್ತಿರುವುದು ತಿಮಿಂಗಿಲಗಳು ಅಂತ ಅನ್ನಿಸುವುದೇ ಇಲ್ಲ. ಸಣ್ಣ ಪುಟ್ಟ ವಿಮಾನಗಳು ನೀರಿನಲ್ಲಿ ಈಜುತ್ತಿರುವಂತೆ ಭಾಸವಾಗುತ್ತದೆ. ಸತತ ಅರ್ಧ ತಾಸಿನವರೆಗೆ ತಿಮಿಂಗಿಲ ನೀರಿನೊಳಗೆ ಇರಬಲ್ಲದು. ತಾಸಿಗೆ 55 ಕಿ.ಮೀ. ವೇಗದಲ್ಲಿ ಈಜುವುದು. ಅವುಗಳದು ಸಂಕೋಚದ ಸ್ವಭಾವ.‘ಅರ್ಕಾ’ ಎಂಬ ವರ್ಗದ ತಿಮಿಂಗಿಲಗಳು ನಮಗೆ ಕಂಡವು. 17ರಿಂದ 32 ಅಡಿಗಳ ಉದ್ದಕ್ಕೆ ಬೆಳೆಯುವ ತಿಮಿಂಗಿಲ ಇದು. 3200ರಿಂದ 11 ಸಾವಿರ ಕೇಜಿಯವರೆಗೆ ತೂಗುತ್ತವೆ.ತಿಮಿಂಗಿಲಗಳು 100 ವರ್ಷಗಳಿಗೂ ಹೆಚ್ಚಿಗೆ ಬದುಕುತ್ತವೆ. ಮೀನು, ಸೀಲ್ ಮತ್ತು ಇತರೆ ಸಾಗರ ಜೀವಿಗಳು ಅವುಗಳ ಆಹಾರ. ಆಗಿಂದಾಗ್ಗೆ ನೀರಿನ ಮೇಲ್ಮೈಗೆ ಒಂಟಿಯಾಗಿ ಬಂದು, ಕಣ್ಣಾಡಿಸಿ ಹೋಗುವ ಬೇಹುಗಾರಿಕೆ ಜಾಯಮಾನವೂ ಅವುಗಳಿಗುಂಟು.ಬೆಳಗ್ಗೆ ಒಂಬತ್ತಕ್ಕೆ ಆರಂಭವಾದ ಸಫಾರಿ ಮಧ್ಯಾಹ್ನ ಎರಡೂವರೆ ವೇಳೆಗೆ ಮುಗಿದಿತ್ತು. ತಿಮಿಂಗಿಲ ದರ್ಶನಕ್ಕೂ ಮಿಗಿಲಾಗಿ ಕಡಲಿನ ದಾರಿಯಲ್ಲಿ ಅಲ್ಲಲ್ಲಿ ಸಿಗುವ ನಡುಗಡ್ಡೆಗಳು ಮನಮೋಹಕ. ಸಾಗರವೇ ಒಂದು ಘನ ದೃಶ್ಯಕಾವ್ಯ ಅಲ್ಲವೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry