7

ಕಡಲ ತೀರದಲ್ಲಿ ಪುಟಾಣಿ ಹೆಜ್ಜೆಗಳು!

Published:
Updated:
ಕಡಲ ತೀರದಲ್ಲಿ ಪುಟಾಣಿ ಹೆಜ್ಜೆಗಳು!

ಶಾಲಾ ಪ್ರವಾಸಕ್ಕೆ ನಾವು ಹೊನ್ನಾವರಕ್ಕೆ ಹೋಗುತ್ತಿದ್ದೇವೆ ಎಂದು ಗೊತ್ತಾದಾಗ, ನನಗೆ ಈ ಜಾಗದ ಕುರಿತು ಕುತೂಹಲ ಮೂಡಿತು. ಪ್ರವಾಸದ ಐದೂ ದಿನಗಳೂ ಚಾರಣವಿದೆ ಎಂದು ತಿಳಿದಾಗ ಬಹಳ ಸಂತೋಷವಾಯಿತು. ಹೌದು. ಈ ಪ್ರವಾಸದಲ್ಲಿ ನಾವು ಹೊನ್ನಾವರದಿಂದ ಗೋಕರ್ಣದವರೆಗೆ ಸುಮಾರು 50 ಕಿ.ಮೀ. ಸಮುದ್ರತೀರದಲ್ಲಿ ನಡೆಯುತ್ತಾ ಸಾಗಿ – ಅಲ್ಲಿನ ಪರಿಸರ ಹಾಗೂ ಜನರ ಬಗ್ಗೆ ತಿಳಿಯುತ್ತಾ, ಮಧ್ಯೆ ಮಧ್ಯೆ ಕೆಲವು ಪ್ರವಾಸೀ ಕ್ಷೇತ್ರಗಳನ್ನು ಸಂದರ್ಶಿಸಲಿದ್ದೆವು.

ಪ್ರವಾಸ ಪ್ರಾರಂಭವಾಗುವವರೆಗೂ ನಾನು ಆಗಾಗ ‘ಗೂಗಲ್‌’ನಲ್ಲಿ ಹೊನ್ನಾವರದ ಕುರಿತು ಮಾಹಿತಿ ಹುಡುಕುತ್ತಿದ್ದೆ. ಉತ್ತರಕನ್ನಡ ಜಿಲ್ಲೆಯ ಭಾಗವಾದ ಹೊನ್ನಾವರ ಒಂದು ತಾಲೂಕು ಕೇಂದ್ರ, ಈ ತಾಲೂಕಿನಲ್ಲಿ ಸಮುದ್ರತೀರ, ದ್ವೀಪ, ಕಾಡು ಹೀಗೆ ಅನೇಕ ಪ್ರವಾಸೀ ಸ್ಥಳಗಳಿವೆ ಎಂದು ತಿಳಿಯಿತು. ನಮ್ಮ ಪ್ರವಾಸವನ್ನು ಹೊನ್ನಾವರದ ‘ಬುಡ’ ಸಂಸ್ಥೆ ಆಯೋಜಿಸಿತ್ತು. ಬೆಂಗಳೂರಿನಿಂದ ರೈಲಿನಲ್ಲಿ ಹೊನ್ನಾವರಕ್ಕೆ ಬಂದ ನಾವು, ರೈಲ್ವೆ ನಿಲ್ದಾಣದಿಂದ ಸೀದಾ ‘ಬುಡ’ ಮುಖ್ಯಸ್ಥೆ ಸವಿತಾ ಅವರ ಮನೆಗೆ ಹೋದೆವು. ಅಲ್ಲಿ ನಮ್ಮ ಚಾರಣದ ಮಾರ್ಗದರ್ಶಿಗಳಾದ ಪೂರ್ಣಿಮಾ ಹಾಗೂ ಶೈಲೇಶ್ ನಮಗೆ ಚಾರಣದ ಎಲ್ಲ ವಿವರಗಳನ್ನು ನೀಡಿದರು. ಅವರ ಸಲಹೆಯಂತೆ ಅನಗತ್ಯ ಸಾಮಾನುಗಳನ್ನು ಪಕ್ಕದಲ್ಲಿಟ್ಟು, ಚಾರಣದ ಚೀಲವನ್ನು ಹಗುರ ಮಾಡಿಕೊಂಡೆವು. ಮಾವಿನಕುರುವೆ ದ್ವೀಪ

ಆ ದಿನ ಸಾಯಂಕಾಲ ದೋಣಿಯ ಮೂಲಕ ನಾವು ಮಾವಿನಕುರುವೆ ಎಂಬ ದ್ವೀಪಕ್ಕೆ ಹೋದೆವು. ಈ ಸ್ಥಳ ಒಂದು ಕಾಲದಲ್ಲಿ ಬೀಗ ತಯಾರಿಕೆಗೆ ಪ್ರಸಿದ್ಧಿ ಪಡೆದಿತ್ತಂತೆ. ಕೆಲವು ವರ್ಷಗಳ ಹಿಂದೆ ಪ್ರವಾಹ ಬಂದಾಗ ಇಡೀ ದ್ವೀಪ ಮುಳುಗಿತ್ತಂತೆ. ಈಗಲೂ ಇಲ್ಲಿ ಜನವಸತಿ ಇದೆ. ಅಲ್ಲಿನ ದೇವಾಲಯಕ್ಕೆ ಭೇಟಿ ನೀಡಿ, ರುಚಿಯಾದ ಕಷಾಯ ಕುಡಿದೆವು. ಬಿಸಿ ಬಿಸಿ ವಡೆಯನ್ನೂ ತಿಂದು ದೋಣಿ ಹತ್ತಿದೆವು.

ನಾವು ಸಮುದ್ರದಲ್ಲಿ ಅರ್ಧ ದಾರಿ ಹೋದ ನಂತರ ಮೋಟಾರ್ ಆಫ್ ಮಾಡಿ ಪ್ರಕೃತಿಯ ಸದ್ದನ್ನು ಕೇಳಿಸಿಕೊಂಡೆವು. ಪಕ್ಷಿ, ನೀರು, ನಾಯಿ, ಮನುಷ್ಯರು ಹಾಗೂ ಮೀನುಗಳ ಸದ್ದು ಕೇಳಿಸಿತು. ವಾಪಸ್ ಬರುವ ಹಾದಿಯಲ್ಲಿ ರೈಲು ನಮ್ಮ ಪಕ್ಕದಿಂದಲೇ ಹಾದು ಹೋಯಿತು. ಅದೆಂಥ ಅನುಭವ! ‘ಬುಡ’ಕ್ಕೆ ವಾಪಾಸಾಗಿ, ಸೂರ್ಯ ಮುಳುಗಿದ ಮೇಲೆ ಡೇರೆಯಲ್ಲಿ ಮಲಗಿದೆವು.ಮರುದಿನದ ಚಾರಣದ ಕುರಿತು ಎಲ್ಲರಿಗೂ ಕಾತರ, ಆತುರ. ನಮಗೆ ಏಳಲಿಕ್ಕೆ ಹೇಳಿದ್ದು ಬೆಳಗ್ಗೆ 6.30ಕ್ಕೆ. ಆದರೆ ನನಗೆ ಅತಿ ಉತ್ಸಾಹದಿಂದ ನಿದ್ದೆಯೇ ಬರಲಿಲ್ಲ. ಸ್ವಲ್ಪ ಹೊತ್ತು ಮಲಗಿ ‘ಬೆಳಗಾಯಿತು’ ಎಂದು ಎದ್ದೆ. ನನ್ನ ಸ್ನೇಹಿತರು ಯಾರೂ ಎದ್ದಿರಲಿಲ್ಲ. ಗಂಟೆ ಎಷ್ಟು ಎಂದು ನೋಡಲು ಬೆಳಕಿರುವ ಕಡೆ ಹೋದಾಗ ಮನೆಯಲ್ಲಿ ಯಾರೋ ಎದ್ದಹಾಗೆ ಕಾಣಿಸಿತು. ಅಲ್ಲಿ ಹೋದರೆ ಆಗಿನ್ನೂ ಮಧ್ಯರಾತ್ರಿ ಕಳೆದು 2.30 ಗಂಟೆ ಆಗಿತ್ತಷ್ಟೆ. ಎಚ್ಚರವಾಗಿದ್ದ ಸವಿತಾ ಅವರ ಅಮ್ಮ ನನ್ನನ್ನು ಮಲಗಲು ವಾಪಸ್ ಕಳುಹಿಸಿದರು.ಬೆಳಗ್ಗೆ 6.30ಕ್ಕೆ ನಾವು ಬಸ್‌ನಲ್ಲಿ ಅಲ್ಲೇ ಹತ್ತಿರವಿದ್ದ ತೂಗು ಸೇತುವೆಗೆ ಹೋದೆವು. ಅಲ್ಲಿಂದ ನಮ್ಮ ಚಾರಣದ ಆರಂಭ. ಸುಮಾರು ಒಂದು ಕಿ.ಮೀ. ದೂರ ಕಡಲ ಬದಿಯಲ್ಲೇ ಹೆಜ್ಜೆ ಹಾಕುತ್ತಾ ರಾಮನಗುಂಡಿ ಕಡಲತೀರದತ್ತ ಸಾಗಿದೆವು. ಟೆಂಪೊದಲ್ಲಿ ಬಂದ ಸತೀಶ್  ನಮಗೆಲ್ಲ ತಿಂಡಿ ಕೊಟ್ಟರು. ತಿಂದಮೇಲೆ ಅಲ್ಲೇ ಇದ್ದ ಬೆಟ್ಟ ಹತ್ತಿ, ರಾಮನಗುಂಡಿ ಬೀಚ್ ತಲುಪಿದೆವು. ಅಲ್ಲಿ ಅಲೆಗಳೊಡನೆ ಆಡಿ ಮೈ ಒದ್ದೆ ಮಾಡಿಕೊಂಡೆವು. ಕಬಡ್ಡಿ ಆಡಿ ಖುಷಿಪಟ್ಟೆವು.

ಆ ನಿರ್ಜನ ಸಮುದ್ರತೀರದಲ್ಲಿ ಊಟವನ್ನೂ ಸವಿದೆವು. ಇದು ಈ ವಿಶೇಷವಾದ ಚಾರಣದ ಪ್ರಾರಂಭ ಮಾತ್ರ. ಸಮುದ್ರತೀರದುದ್ದಕ್ಕೂ ನಡೆಯುತ್ತಾ, ನೀರಿನ ಹತ್ತಾರು ರೂಪಗಳನ್ನೂ, ಅದನ್ನು ಆಧರಿಸಿರುವ ಜೀವರಾಶಿಯನ್ನೂ ನೋಡುವ ಅವಕಾಶ ನಮಗೆ ಈ ಐದು ದಿನಗಳಲ್ಲಿ ದೊರೆಯಿತು.ನಡೆದಷ್ಟೂ ಚೆಲುವು

ಈ ದಿನ ನಾವು ಸುಪ್ರಸಿದ್ಧ ಅಘನಾಶಿನಿ ನದಿ, ತದಡಿ ಬಂದರು, ಓಂ ಹಾಗು ಕುಡ್ಲೆ ಕಡಲ ತೀರಗಳಿಗೆ ಹೋಗಬೇಕಿತ್ತು. ಮೊದಲು ಭೇಟಿ ಕೊಟ್ಟಿದ್ದು, ಬಾಡ–ಕಾಗಲ್ ಕಡಲತೀರ. ಅಲ್ಲಿ ತಿಂಡಿಗೆ ಕುಳಿತಾಗ ಮೀನುಗಾರರು ಹಿಡಿದ ಸ್ಟಿಂಗ್ರೇ, ಸ್ಕ್ವಿಡ್ ಹಾಗೂ ವಿವಿಧ ತರಹದ ಮೀನು ನೋಡಿದೆವು. ಈ ಕಡಲತೀರವನ್ನು ನಡೆದು ಮುಗಿಸಲು ಸುಮಾರು ಒಂದೂವರೆ ಗಂಟೆ ಬೇಕಾಯಿತು. ಆನಂತರ ಬಸ್‌ನಲ್ಲಿ ಆಘನಾಶಿನಿ ನದಿಯವರೆಗೆ ಹೋದೆವು.ಅಲ್ಲಿನ ಭೂವಿನ್ಯಾಸವೇ ಬೇರೆ – ದೊಡ್ಡ ನದಿ, ಆಚೆ ಕಡೆ ಬಂದರು. ಒಂದು ದೊಡ್ಡ ದೋಣಿ ನಮ್ಮನ್ನು ತದಡಿ ಬಂದರಿಗೆ ತಲುಪಿಸಿತು. ಅಲ್ಲಿನ ವಾಸನೆ ಕೆಟ್ಟದಾಗಿತ್ತು. ಆದರೆ ಚಿಪ್ಪುಗಳು ಸುಂದರವಾಗಿದ್ದವು. ನಾವು ತದಡಿ ಗ್ರಾಮದ ಒಳಗೆ ಹೋಗಿ ಅಲ್ಲಿಂದ ಬಾಳೆಕಾನ್ ಬೀಚ್‌ಗೆ ಹೋದೆವು.ದೋಣಿಯ ಮೂಲಕ ಪ್ಯಾರಡೈಸ್ ಹಾಗೂ ಅರ್ಧ ಚಂದ್ರ (ಹಾಫ್ ಮೂನ್ ಅದರ ಆಕಾರ ಹಾಗಿದೆಯಂತೆ) ಬೀಚ್‌ಗಳನ್ನು ದಾಟಿದೆವು. ಆಗ ನಮಗೆ ನಾಲ್ಕು ಡಾಲ್ಫಿನ್‌ಗಳು ನೋಡಲು ಸಿಕ್ಕವು. ಮುಂದಿನ ಕಿನಾರೆ, ಅದರ ಆಕಾರಕ್ಕೆ ಪ್ರಸಿದ್ಧವಾದ ಓಂ ಬೀಚ್. ಅಲ್ಲಿ ಜನವೋ ಜನ.ವಿಶಾಲವಾದ ಕಿನಾರೆಯಲ್ಲಿ ಮಧ್ಯಾಹ್ನದ ಬಿಸಿಲಿನಲ್ಲಿ ತಣ್ಣನೆ ಇರುವ ನೀರಿನಲ್ಲಿ ಆಡಿದೆವು. ರಭಸದಿಂದ ಬಂದ ಅಲೆಗಳಿಗೆ ಗಟ್ಟಿಯಾಗಿ ನಿಂತೆವು. ಅವು ನಮ್ಮನ್ನು ಮರಳಿನತ್ತ ಸೆಳೆದುಕೊಂಡು ಹೋಗಿ ಬೀಳಿಸುತ್ತಿದ್ದವು. ಮುಂದಿನ ಕಿನಾರೆ ಕುಡ್ಲೆ ಬೀಚ್ ಆಗಿತ್ತು. ಅಲ್ಲಿ ನಮಗಾಗಿ ಒಂದು ಹೋಟೆಲ್‌ನಲ್ಲಿ ರೂಮ್ ಬುಕ್ ಮಾಡಿದ್ದರು. ಆದರೂ ನಮಗೆ ಹೊರಗೆ ಮಲಗುವ ಆಸೆ. ನಾವೆಲ್ಲರೂ ಸೂರ್ಯ ಮುಳುಗುವವರೆಗೂ ಮುಟ್ಟಾಟ ಆಡಿದೆವು.ಮಾರನೇ ದಿನ ಗೋಕರ್ಣದತ್ತ ನಡೆದೆವು. 2.7 ಕಿಲೊಮೀಟರ್ ನಡೆದ ನಂತರ ಸಿಕ್ಕಿತು ಶಿವ ದೇವಸ್ಥಾನಕ್ಕೆ ಪ್ರಸಿದ್ಧವಾದ ಗೋಕರ್ಣ. ಅಲ್ಲಿನ ರಸ್ತೆ, ಮನೆಗಳು ಬೇರೆ ತರಹ ಕಾಣಿಸಿದವು.ಮನಸ್ಸಿನ ತುಂಬ ಸಮುದ್ರದಷ್ಟು ನೆನಪುಗಳನ್ನೂ, ಹೊಸ ವಿಷಯಗಳನ್ನೂ ತುಂಬಿಕೊಂಡು ಬೆಂಗಳೂರಿಗೆ ವಾಪಾಸಾದೆವು. ಅಲ್ಲಿನ ಪರಿಸರ ಹಾಗೂ ಜನರನ್ನು ನೋಡಿದಾಗ ಹೊನ್ನಾವರ ‘ಪರಿಸರದ ಹೊನ್ನು’ ಎನ್ನಿಸಿತು. 

ಮೇಲೂ ಕೆಳಗೂ ನಕ್ಷತ್ರ

ರಾತ್ರಿ ಸಮುದ್ರತೀರದಲ್ಲಿ ಚಂದ್ರನನ್ನು ನೋಡುತ್ತಾ ನಕ್ಷತ್ರಗಳನ್ನು ಗುರುತಿಸುತ್ತಾ ಹಾಡನ್ನು ಹಾಡುತ್ತಾ, ಬೆಂಕಿ ಸುತ್ತ ಕುಣಿಯುತ್ತ, ಊಟ ಮಾಡಿದ ನಾವು ಮರುದಿನದ ಚಾರಣದ ಬಗ್ಗೆ ಚರ್ಚಿಸಿದೆವು. ಊಟವಾದ ನಂತರ ಯಾವ ಡೇರೆಯಲ್ಲಿ ಮಲಗುವ ಎಂದು ವಿಚಾರ ಮಾಡುತ್ತಾ, ನಾವು ಸವಿತಾ ಅವರನ್ನು ‘ಎಲ್ಲಿ ಮಲಗುತ್ತೀರಾ?’ ಎಂದು ಪ್ರಶ್ನಿಸಿದೆವು.

ಅವರು ‘ಟಾರ್ಪಲ್ ಮೇಲೆ’ ಎಂದರು. ನಮಗೆಲ್ಲ ಆಶ್ಚರ್ಯವಾಯಿತು. ಆಗ ವಿವರಿಸಿದ ಅವರು – ‘ನಾವು ಡೇರೆಯೊಳಗಲ್ಲ, ಹೊರಗೆ ಮಲಗುತ್ತಿದ್ದೇವೆ’ ಎಂದರು. ಅದಾದ ತಕ್ಷಣ ನಾವೆಲ್ಲ ನಮ್ಮ ನಮ್ಮ ಹೊದಿಕೆ ತಂದು ಟರ್ಪಲ್ ಮೇಲೆ ಹಾಕಿದೆವು. ಆ ರಾತ್ರೆ ಸುಂದರವಾದ ಆಕಾಶ ನೋಡುತ್ತಾ, ಸಮುದ್ರದ ಅಲೆಗಳ ಸದ್ದು ಕೇಳಿಸಿಕೊಳ್ಳುತ್ತಾ, ಮಿಣ ಮಿಣ ಮಿನುಗುತ್ತಿದ್ದ ನಕ್ಷತ್ರಗಳನ್ನು ಎಣಿಸುತ್ತಿದ್ದ ನಮಗೆ ನಿದ್ದೆ ಬಂದದ್ದೇ ತಿಳಿಯಲಿಲ್ಲ.ಬೆಳಗ್ಗೆ ಎದ್ದು ನೋಡಿದಾಗ ನಮಗೆ ಉಸುಕಿನ ಮೇಲೆ ನೂರಾರು ನಕ್ಷತ್ರ ಮೀನುಗಳು ಕಾಣಿಸಿಕೊಂಡವು. ಆಗ ನನ್ನಲ್ಲಿ ಒಂದು ಪ್ರಶ್ನೆ ಮೂಡಿತು – ‘ಪ್ರಾಣಿಗಳೂ ಆತ್ಮಹತ್ಯೆ ಮಾಡುತ್ತವಾ?’. ಆ ಮೀನುಗಳಿಗೇನೋ ತೊಂದರೆ ಆಗಿರಬೇಕು ಎಂದು ನಾವೆಲ್ಲ ಅವನ್ನು ಸಮುದ್ರಕ್ಕೆ ಬಿಡಲು ಪ್ರಯತ್ನಿಸಿದವು. ನೋಡಿದರೆ ಅವೆಲ್ಲ ಕೈಯಿಂದ ಪುಳಕ್ಕನೆ ಜಾರಿ ಮರಳಿನೊಳಗೆ ಮರೆಯಾದವು. ಅವು ಆಹಾರ ಹುಡುಕುತ್ತಾ ಮರಳಿನೊಳಗೆ ಬಿಲ ತೋಡುತ್ತವೆ ಎಂದು ನಂತರ ತಿಳಿಯಿತು.ನಾವು ಮತ್ತೆ ಚಾರಣ ಪ್ರಾರಂಭಿಸಿದೆವು. 30 ನಿಮಿಷದ ನಡಿಗೆಯ ನಂತರ ನಮ್ಮ ಮುಂದಿತ್ತು ಧಾರೇಶ್ವರ ಸಮುದ್ರ ಕಿನಾರೆ! ಅದೊಂದು ಸುಂದರ ಕಡಲತೀರ. ಅಲ್ಲಿ ಹತ್ತಾರು ಮೀನುಗಾರರು ಕಾಣಿಸಿದರು. ಅವರು ಮೀನು–ಏಡಿ ಮಾರುತ್ತಿದ್ದರು. ನಾವು ಅಲ್ಲೇ ಹತ್ತಿರ ಇದ್ದ ‘ಆಯುರ್ವೇದಿಕ್ ಸ್ಪಾ’ಗೆ ಹೋದೆವು. ಅಲ್ಲಿ ಅನೇಕ ವಿದೇಶಿಯರಿದ್ದರು.ಆ ಬೀಚ್‌ನಲ್ಲಿ ನಾವು ಬಹಳ ಹೊತ್ತು ಆಡಿದೆವು. ಅಲ್ಲಿನ ವಿಶೇಷ ತಿಂಡಿ ಬನ್ಸ್ ತಿಂದೆವು. ಸಂಜೆಯವರೆಗೆ ನಾವು ಬೇರೆ ಬೇರೆ ಚಟುವಟಿಕೆಗಳಲ್ಲಿ ಭಾಗವಹಿಸಿದೆವು – ಸಮುದ್ರ ಚಿಪ್ಪುಗಳಿಂದ ಆಭರಣ ಮಾಡುವುದು, ಆಟವಾಡುವುದು, ಕಥೆ ಕೇಳುವುದು... ಇತ್ಯಾದಿ. ನಂತರ ಹಿನ್ನೀರನ್ನು ದೋಣಿ ಮೂಲಕ ದಾಟಿ ಮುಂದಿನ ಕಿನಾರೆಗೆ ಹೋದೆವು.ಸಂಜೆ 4ರ ಹೊತ್ತಿಗೆ ನಾವು ಹೊನ್ನಳ್ಳಿ ಬೀಚ್‌ನತ್ತ ಪ್ರಯಾಣ ಬೆಳೆಸಿದೆವು. ಹೊನ್ನಳ್ಳಿ ಕಡಲ ತೀರದಲ್ಲಿ ನಮಗೆ ಸೂರ್ಯಾಸ್ತ ನೋಡಲು ಸಿಕ್ಕಿತು. ಸಾವಿರಾರು ಚಿಪ್ಪುಗಳೂ ಸಿಕ್ಕವು. ಅಲ್ಲಿ ಕೆಲವರು ಬೀಚ್ ಕಾಲ್ಚೆಂಡು, ಕ್ರಿಕೆಟ್ ಆಡುವುದನ್ನು ನೋಡಿ ನಮಗೂ ಆಡಬೇಕೆಂದೆನಿಸಿತು. ಆದರೆ ಸಮಯವಿರಲಿಲ್ಲ. ಕತ್ತಲಾಗುವ ಮೊದಲು ಮಂಗೊಡ್ಲು ಕಡಲ ತೀರ ತಲುಪಬೇಕಿತ್ತು. ಬೇಗ ಬೇಗನೆ ಬೆಟ್ಟ ಹತ್ತಲು ಶುರು ಮಾಡಿದೆವು.6 ಗಂಟೆ ವೇಳೆಗೆ ಬೆಟ್ಟದ ತುದಿ ತಲುಪಿದರೂ, ಅಲ್ಲಿಂದ ಮುಂದೆ ದಾರಿ ಕಾಣಿಸಲಿಲ್ಲ. ಹಾಗಾಗಿ ರಸ್ತೆಯ ಮೂಲಕ ಮಂಗೊಡ್ಲು ಕಡಲತೀರಕ್ಕೆ ಹೋದೆವು. ಅಲ್ಲಿ ತಲುಪಿದ ಮೇಲೆ ಕ್ಯಾಂಪ್ ಫೈರ್ ಮಾಡಿ ಖುಷಿಪಟ್ಟೆವು. ಹತ್ತಿರದ ಮನೆಯೊಂದರಲ್ಲಿ ನಮಗಾಗಿ ಊಟ ತಯಾರಿತ್ತು. ಊಟ ಮುಗಿಸಿ ನಮ್ಮ ನಮ್ಮ ಡೇರೆಗಳಿಗೆ ಹೋದೆವು. ಆ ರಾತ್ರಿಯಂತೂ ಅವಸ್ಮರಣೀಯ. ಮನದ ತುಂಬೆಲ್ಲಾ ನಕ್ಷತ್ರಗಳ ಮಿಂಚು, ಅಲೆಗಳ ಶಬ್ದ!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry