ಮೂರು ವರ್ಷದಲ್ಲಿ 27 ಜನರು ಬಲಿ

7
ಕೊಡಗು ಜಿಲ್ಲೆಯಲ್ಲಿ ಕಾಫಿ ಹಣ್ಣು ತಿನ್ನಲು ಅರಣ್ಯದಂಚಿನ ತೋಟಗಳಿಗೆ ಕಾಡಾನೆಗಳ ಲಗ್ಗೆ

ಮೂರು ವರ್ಷದಲ್ಲಿ 27 ಜನರು ಬಲಿ

Published:
Updated:
ಮೂರು ವರ್ಷದಲ್ಲಿ 27 ಜನರು ಬಲಿ

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕಾಡಾನೆ– ಮಾನವ ಸಂಘರ್ಷ ನಿರಂತರವಾಗಿದ್ದು, ಮೂರು ವರ್ಷಗಳ ಅವಧಿಯಲ್ಲಿ 27 ಜನರು ಆನೆ ದಾಳಿಗೆ ಬಲಿಯಾಗಿದ್ದಾರೆ. ಈ ಸಂಘರ್ಷ ತಪ್ಪಿಸಲು ಅರಣ್ಯ ಇಲಾಖೆ ಹಾಗೂ ತೋಟದ ಮಾಲೀಕರು ಹೊಸ ಯೋಜನೆಗಳನ್ನು ಅನುಷ್ಠಾನಕ್ಕೆ ತಂದರೂ ಅವು ಜಿಲ್ಲೆಯಲ್ಲಿ ಫಲ ನೀಡುತ್ತಿಲ್ಲ.

ಜಿಲ್ಲೆಯ ಗ್ರಾಮೀಣ ಪ್ರದೇಶ, ಅರಣ್ಯದಂಚಿನ ಗ್ರಾಮಗಳಿಗೆ ಕಾಡಾನೆ ಹಾವಳಿ ದೊಡ್ಡ ಸಮಸ್ಯೆ. ರೈತರು ಬೆಳೆದ ಬೆಳೆಗಳನ್ನು ರಕ್ಷಿಸಿಕೊಳ್ಳುವುದೇ ದೊಡ್ಡ ಸವಾಲಾಗಿದೆ. ನಾಡಿಗೆ ಬರುವ ಕಾಡಾನೆಗಳು ಬೆಳೆಯನ್ನಷ್ಟೇ ನಾಶಪಡಿಸುವುದಿಲ್ಲ; ಬದಲಿಗೆ ತೋಟದ ಕಾರ್ಮಿಕರ ಪ್ರಾಣವನ್ನೇ ತೆಗೆಯುತ್ತಿವೆ. ಉತ್ತರ ಕೊಡಗಿನ ಶನಿವಾರಸಂತೆ, ಸೋಮವಾರಪೇಟೆ ಹಾಗೂ ಕುಶಾಲನಗರ, ದಕ್ಷಿಣ ಕೊಡಗಿನ ತಿತಿಮತಿ, ಪಾಲಿಬೆಟ್ಟ, ಶ್ರೀಮಂಗಲ, ಕುಟ್ಟ ವ್ಯಾಪ್ತಿಯಲ್ಲಿ ಹಲವು ವರ್ಷಗಳಿಂದ ಈ ಸಮಸ್ಯೆಯಿದೆ ಎನ್ನುತ್ತಾರೆ ರೈತರು. ಅರಣ್ಯ ಒತ್ತುವರಿ ಮಾಡಿಕೊಂಡು ತೋಟ ನಿರ್ಮಿಸಿಕೊಂಡಿರುವುದೇ ಈ ಸಮಸ್ಯೆ ಹೆಚ್ಚಲು ಕಾರಣ ಎನ್ನುತ್ತಾರೆ ಅರಣ್ಯಾಧಿಕಾರಿಗಳು.

ನವೆಂಬರ್‌ನಲ್ಲಿ ಚೆಟ್ಟಳ್ಳಿ, ಸಿದ್ದಾಪುರ, ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ನಾಡಿಗೆ ಲಗ್ಗೆಯಿಡುತ್ತಿದ್ದ ಕೆಲವು ಪುಂಡಾನೆಗಳನ್ನು ಸೆರೆ ಹಿಡಿದು, ದುಬಾರೆ ಶಿಬಿರಕ್ಕೆ ಬಿಡಲಾಯಿತು. ಆದರೆ, ಮತ್ತೆ ಸಿದ್ದಾಪುರ ವ್ಯಾಪ್ತಿಯಲ್ಲಿ ಆನೆ ಹಾವಳಿ ಆರಂಭಗೊಂಡಿದೆ ಎಂದು ನೋವು ತೋಡಿಕೊಳ್ಳುತ್ತಾರೆ ಬೆಳೆಗಾರರು.

ಕಾಡಿನಿಂದ ನಾಡಿಗೆ ನುಗ್ಗುವ ಆನೆಗಳನ್ನು ತಡೆಯಲು ಆರಣ್ಯ ಇಲಾಖೆ ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಕಂದಕ ನಿರ್ಮಾಣ, ಸೋಲಾರ್‌ ಬೇಲಿ ಅಳವಡಿಕೆ, ಸಿಮೆಂಟ್‌ ತಡೆಗೋಡೆ, ಕಬ್ಬಿಣದ ಗೇಟ್‌ ಅಳವಡಿಕೆ ಮಾಡಲಾಗಿದೆ. ಆದರೆ ಇದ್ಯಾವುದಕ್ಕೂ ಕಾಡಾನೆಗಳು ಕ್ಯಾರೆ ಎನ್ನುತ್ತಿಲ್ಲ. ಸಿಮೆಂಟ್‌ ಗೋಡೆಗಳನ್ನೇ ಮುರಿದು ಮುನ್ನುಗ್ಗುತ್ತಿವೆ. ಈಗ ಕಾಫಿ ಹಣ್ಣು ತಿನ್ನಲು ಅರಣ್ಯದಂಚಿನ ತೋಟಗಳಿಗೆ ಲಗ್ಗೆಯಿಡುತ್ತಿವೆ. ಅರಣ್ಯ ಪ್ರದೇಶದಲ್ಲಿ ಆನೆಗಳಿಗೆ ಅಗತ್ಯವಿರುವ ಆಹಾರ ಬೆಳೆಯಲು ಕ್ರಮ ತೆಗೆದುಕೊಳ್ಳಲಾಗಿದೆ. ಅಲ್ಲಲ್ಲಿ ಹೊಸದಾಗಿ ಕೆರೆ ನಿರ್ಮಿಸಲಾಗಿದೆ. ಉತ್ತಮ ಮಳೆ ಬೀಳದೇ ಕೆರೆಗಳೂ ಭರ್ತಿಯಾಗಿಲ್ಲ. ಆನೆಗಳಿಗೆ ಆಹಾರ ನೀಡಬೇಕಾದ ಸಸಿಗಳು ಚಿಗುರೊಡೆದಿಲ್ಲ ಎನ್ನುತ್ತಾರೆ ಇಲಾಖೆ ಅಧಿಕಾರಿಗಳು.

ಕಾಡು ಪ್ರಾಣಿಗಳ ದಾಳಿಯಿಂದ ಬೆಳೆ ನಷ್ಟ, ಮಾನವ ಹಾಗೂ ಜಾನುವಾರು ಸಾವು, ಗಾಯ, ಬೆಳೆ ನಷ್ಟಕ್ಕೆ ದೊಡ್ಡ ಮೊತ್ತದ ಪರಿಹಾರ ವಿತರಿಸಲಾಗಿದೆ. 2014ರಲ್ಲಿ ಕೊಡಗು ವೃತ್ತದ ವ್ಯಾಪ್ತಿಯಲ್ಲಿ 4,217 ಬೆಳೆ ನಷ್ಟ ಪ್ರಕರಣಗಳು ವರದಿಯಾಗಿದ್ದವು. ಇದಕ್ಕೆ ₹ 1.62 ಕೋಟಿ ಪರಿಹಾರ ನೀಡಲಾಗಿದೆ. 8 ಮಂದಿ ಆನೆ ದಾಳಿಗೆ ಬಲಿಯಾಗಿದ್ದರೆ, 5 ಮಂದಿ ಗಾಯಗೊಂಡಿದ್ದರು. 25 ಜಾನುವಾರುಗಳೂ ಕಾಡು ಪ್ರಾಣಿಗಳ ಆಕ್ರೋಶಕ್ಕೆ ಬಲಿಯಾಗಿವೆ.

2015ರಲ್ಲಿ 3,010 ಬೆಳೆ ನಷ್ಟ ಪ್ರಕರಣಗಳಲ್ಲಿ ₹ 1.28 ಕೋಟಿ ಪರಿಹಾರ ವಿತರಿಸಲಾಗಿದೆ. 13 ಮಂದಿ ಸಾವನ್ನಪ್ಪಿದ್ದರೆ, 8 ಮಂದಿ ಗಾಯಗೊಂಡಿದ್ದರು. 22 ಜಾನುವಾರುಗಳನ್ನೂ ಸಾಯಿಸಿದ್ದವು. 2016ರಲ್ಲಿ 2,115 ಬೆಳೆ ನಷ್ಟ ಪ್ರಕರಣಗಳಿಗೆ ₹ 92.77 ಲಕ್ಷ ಪರಿಹಾರ ವಿತರಿಸಲಾಗಿದೆ (ನವೆಂಬರ್‌ ಅಂತ್ಯಕ್ಕೆ). ಆನೆ ದಾಳಿಗೆ ಆರು ಮಂದಿ ಬಲಿಯಾಗಿದ್ದರೆ, ನಾಲ್ಕು ಮಂದಿ ಗಾಯಗೊಂಡಿದ್ದರು. 22 ಜಾನುವಾರುಗಳು ಮೃತಪಟ್ಟಿದ್ದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry