ಭಾರತೀಯ ನೌಕಾಪಡೆ: ಖಾಂಡೇರಿ ಜಲಾಂತರ್ಗಾಮಿ ಲೋಕಾರ್ಪಣೆ

7

ಭಾರತೀಯ ನೌಕಾಪಡೆ: ಖಾಂಡೇರಿ ಜಲಾಂತರ್ಗಾಮಿ ಲೋಕಾರ್ಪಣೆ

Published:
Updated:
ಭಾರತೀಯ ನೌಕಾಪಡೆ: ಖಾಂಡೇರಿ ಜಲಾಂತರ್ಗಾಮಿ ಲೋಕಾರ್ಪಣೆ

ಮುಂಬೈ: ಸ್ಕಾರ್ಪೀನ್‌ ಸರಣಿಯ ಎರಡನೆಯ ಜಲಾಂತರ್ಗಾಮಿ ನೌಕೆ ‘ಖಾಂಡೇರಿ’ಯನ್ನು ರಕ್ಷಣಾ ಖಾತೆಯ ರಾಜ್ಯ ಸಚಿವ ಡಾ. ಸುಭಾಷ್ ಭಾಮ್ರೆ ಗುರುವಾರ ಉದ್ಘಾಟಿಸಿದರು.

ಜಲಾಂತರ್ಗಾಮಿ ನೌಕೆಗಳನ್ನು ದೇಶೀಯವಾಗಿ ನಿರ್ಮಿಸುವ ಭಾರತದ ಪ್ರಯತ್ನದಲ್ಲಿನ ಮಹತ್ವದ ಹೆಜ್ಜೆ ಇದಾಗಿದ್ದು ಖಾಂಡೇರಿಯು ಪರೀಕ್ಷೆಗೆ ಮುಕ್ತವಾಗಿದೆ. ಛತ್ರಪತಿ ಶಿವಾಜಿ ನಿಯಂತ್ರಣದಲ್ಲಿದ್ದ ‘ಖಾಂಡೇರಿ’ ಕೋಟೆಯ ಹೆಸರನ್ನೇ ಈ ಜಲಾಂತರ್ಗಾಮಿಗೆ ಇಡಲಾಗಿದೆ. ಸಮುದ್ರದ ನಡುವೆ ಇದ್ದ ಈ ಕೋಟೆಯ ಕಾರಣದಿಂದಾಗಿ ಶಿವಾಜಿಯ ನೌಕಾದಳ 17ನೇ ಶತಮಾನದಲ್ಲಿ ಪಾರಮ್ಯ ಸಾಧಿಸಿತ್ತು ಎನ್ನಲಾಗಿದೆ.

ಫ್ರಾನ್ಸ್‌ ಸಹಕಾರದಲ್ಲಿ ನಿರ್ಮಿತವಾದ ಜಲಾಂತರ್ಗಾಮಿ ನೌಕೆ ‘ಖಾಂಡೇರಿ’ಯನ್ನು ಇಲ್ಲಿನ ಮಜಗಾಂವ್‌ ಹಡಗುಕಟ್ಟೆಯಲ್ಲಿ  ಲೋಕಾರ್ಪಣೆ ಮಾಡಲಾಯಿತು. ಸಾಂಪ್ರದಾಯಿಕ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಿಸುವ ವಿಶ್ವದ ಕೆಲವೇ ದೇಶಗಳಲ್ಲಿ ಭಾರತವೂ ಒಂದು.  ಫ್ರಾನ್ಸ್‌ನ ಡಿಸಿಎನ್‌ಎಸ್‌ ಕಂಪೆನಿಯ ಸಹಭಾಗಿತ್ವದಲ್ಲಿ ಮಜಗಾಂವ್ ಹಡಗುಕಟ್ಟೆಯಲ್ಲಿ ಸ್ಕಾರ್ಪೀನ್ ಸರಣಿಯ ಒಟ್ಟು ಆರು ಜಲಾಂತರ್ಗಾಮಿಗಳನ್ನು ನಿರ್ಮಿಸಲಾಗುತ್ತಿದೆ.

ಈ ಜಲಾಂತರ್ಗಾಮಿಯನ್ನು ಡಿಸೆಂಬರ್‌ವರೆಗೆ ಬಂದರಿನಲ್ಲಿ ಹಾಗೂ ಸಮುದ್ರದಲ್ಲಿ ಕಠಿಣ ಪರೀಕ್ಷೆಗಳಿಗೆ ಒಡ್ಡಲಾಗುತ್ತದೆ. ಜಲಾಂತರ್ಗಾಮಿಯ ಪ್ರತಿ ವ್ಯವಸ್ಥೆ ಎಷ್ಟು ಪರಿಣಾಮಕಾರಿ ಆಗಿದೆ ಎಂಬುದನ್ನು ಅಳೆಯಲಾಗುತ್ತದೆ. ಈ ಪರೀಕ್ಷೆಗಳು ಪೂರ್ಣಗೊಂಡ ನಂತರ ಜಲಾಂತರ್ಗಾಮಿಯನ್ನು ನೌಕಾಪಡೆಗೆ ಸೇರಿಸಲಾಗುತ್ತದೆ.

ಸ್ಕಾರ್ಪೀನ್‌ ಜಲಾಂತರ್ಗಾಮಿಗಳು ಡೀಸೆಲ್‌ ಮತ್ತು ವಿದ್ಯುತ್‌ ಚಾಲಿತ ಎಂಜಿನ್ ಹೊಂದಿವೆ.

ಜಲಾಂತರ್ಗಾಮಿಯ ವೈಶಿಷ್ಟ್ಯಗಳು

*  ರಹಸ್ಯವಾಗಿ ಕಾರ್ಯಾಚರಣೆ  ನಡೆಸುವ ಸಾಮರ್ಥ್ಯ.

*  ನಿಖರ ದಾಳಿ ನಡೆಸುವ ಶಸ್ತ್ರಾಸ್ತ್ರ ಬಳಸಿ ವೈರಿಗೆ ಭಾರಿ ಹಾನಿ ಉಂಟು ಮಾಡುವುದು.

*  ನೌಕೆಗಳನ್ನು ಧ್ವಂಸಗೊಳಿಸುವ ಕ್ಷಿಪಣಿ, ಸ್ಫೋಟಕ ಬಳಸುವ ಸಾಮರ್ಥ್ಯ.

*  ಈ ಜಲಾಂತರ್ಗಾಮಿ ಎಲ್ಲಿದೆ ಎಂದು ಪತ್ತೆ ಮಾಡುವುದು ತೀರಾ ಕಷ್ಟ.

*  ಶತ್ರು ದೇಶದ ಕಡೆಯಿಂದ ನುಗ್ಗುವ ಜಲಾಂತರ್ಗಾಮಿಗಳನ್ನು ಹಿಮ್ಮೆಟ್ಟಿಸಲು ಸಹ ಈ ಜಲಾಂತರ್ಗಾಮಿಗಳನ್ನು ಬಳಸಿಕೊಳ್ಳಬಹುದು.

*  ಗುಪ್ತವಾಗಿ ಮಾಹಿತಿ ಕಲೆಹಾಕುವ ಕೆಲಸಕ್ಕೆ ಈ ನೌಕೆ ಹೇಳಿ ಮಾಡಿಸಿದಂತಿದೆ.

ಅರ್ಧ ಶತಮಾನದ ಸಂಭ್ರಮ

ಭಾರತೀಯ ನೌಕಾಪಡೆಯ ಜಲಾಂತರ್ಗಾಮಿ ವಿಭಾಗವು ಈ ವರ್ಷದ ಡಿಸೆಂಬರ್ 8ರಂದು 50 ವರ್ಷಗಳನ್ನು ಪೂರೈಸಲಿದೆ. 1967ರ ಡಿಸೆಂಬರ್‌ 8ರಂದು ನೌಕಾಪಡೆಗೆ ಐಎನ್‌ಎಸ್‌ ಕಲ್ವರಿ ಜಲಾಂತರ್ಗಾಮಿಯನ್ನು ಹಸ್ತಾಂತರಿಸಲಾಯಿತು. ಅಂದಿನಿಂದ ಪ್ರತಿವರ್ಷ ಡಿಸೆಂಬರ್‌ 8ರಂದು ಜಲಾಂತರ್ಗಾಮಿ ದಿನ ಆಚರಿಸಲಾಗುತ್ತಿದೆ.

ಭಾರತದ ನೌಕಾಪಡೆಯ ಶಕ್ತಿ –15. ಭಾರತೀಯ ನೌಕಾದಳದ ಬಳಿ ಈಗ ಇರುವ ಜಲಾಂತರ್ಗಾಮಿಗಳು. 7 ಜಲಾಂತರ್ಗಾಮಿಗಳು ನಿರ್ಮಾಣ, ಪರೀಕ್ಷಾ ಹಂತದಲ್ಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry