ಸೋಮವಾರ, ಜೂಲೈ 6, 2020
23 °C

ವಾಯುಮಾಲಿನ್ಯದ ಎಚ್ಚರಿಕೆ ಗಂಟೆ ರಾಷ್ಟ್ರೀಯ ಸಮಸ್ಯೆಯಾಗಿ ಗ್ರಹಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಾಯುಮಾಲಿನ್ಯದ ಎಚ್ಚರಿಕೆ ಗಂಟೆ ರಾಷ್ಟ್ರೀಯ ಸಮಸ್ಯೆಯಾಗಿ ಗ್ರಹಿಸಿ

ರಾಜ್ಯದ ಬೆಂಗಳೂರು, ತುಮಕೂರು ನಗರಗಳಲ್ಲಿನ ವಾಯುಮಾಲಿನ್ಯ ಆತಂಕಕಾರಿ ಸ್ಥಿತಿ ತಲುಪಿದೆ ಎಂಬಂಥ ಗ್ರೀನ್‌ಪೀಸ್‌ ಇಂಡಿಯಾ ಸಂಸ್ಥೆಯ  ವರದಿ ಎಚ್ಚರಿಕೆಯ ಗಂಟೆಯಾಗಿದೆ. ಹಾಗೆಯೇ  ದಾವಣಗೆರೆ, ರಾಯಚೂರು, ಹುಬ್ಬಳ್ಳಿ  ನಗರಗಳಲ್ಲಿಯೂ ವಾಯುಮಾಲಿನ್ಯ ಪ್ರಮಾಣ ರಾಷ್ಟ್ರೀಯ ಮಿತಿಗಿಂತ ಹೆಚ್ಚಿದೆ ಎಂಬುದು ಆತಂಕಕಾರಿ.ದೆಹಲಿಯಲ್ಲಿ ವಾಯುಮಾಲಿನ್ಯ ಮಿತಿಮೀರಿದೆ ಎಂಬುದು ಇತ್ತೀಚಿನ ತಿಂಗಳುಗಳಲ್ಲಿ ವ್ಯಾಪಕ ಪ್ರಚಾರ ಪಡೆದಿತ್ತು, ಜೊತೆಗೆ ಇದರ ನಿಯಂತ್ರಣಕ್ಕಾಗಿ ಅಲ್ಲಿ ಸಮ  ಮತ್ತು ಬೆಸ  ಸಂಖ್ಯೆಯ ಕಾರುಗಳು ದಿನಬಿಟ್ಟು ದಿನ ನಿರ್ದಿಷ್ಟ ದಿನಗಳಂದು ಮಾತ್ರ ರಸ್ತೆಗೆ ಇಳಿಯಬಹುದಾದ ನಿಯಮವನ್ನೂ  ಜಾರಿಗೊಳಿಸಲಾಗಿತ್ತು. ಆದರೆ ಈಗ  ರಾಷ್ಟ್ರದ ದಕ್ಷಿಣ ಭಾಗದ ರಾಜ್ಯಗಳೂ ವಾಯುಮಾಲಿನ್ಯ ಸಮಸ್ಯೆಯಿಂದ ನರಳುತ್ತಿವೆ ಎಂಬುದು ಈ ವರದಿಯಿಂದ ಬಯಲಾಗಿದೆ.ಚೆನ್ನೈ, ಗುಂಟೂರುಗಳಲ್ಲೂ ವಾಯು ಗುಣಮಟ್ಟ ಕುಸಿದಿರುವುದು ಗಮನಿಸಬೇಕಾದ ಸಂಗತಿ. ದೇಶದಲ್ಲಿ ಪ್ರತಿವರ್ಷ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಅನಾರೋಗ್ಯದಿಂದ ಸುಮಾರು 12 ಲಕ್ಷ ಜನ ಮೃತಪಡುತ್ತಿದ್ದಾರೆ. ಪ್ರತಿದಿನ 3,283 ಜನರು ಸಾಯುತ್ತಿದ್ದಾರೆ ಎಂಬಂಥ ಅಂಕಿಅಂಶಗಳು ಕಡೆಗಣಿಸುವಂತಹವಲ್ಲ.

ವಾಯುಮಾಲಿನ್ಯದ ಪ್ರತ್ಯಕ್ಷ ಹಾಗೂ ಪರೋಕ್ಷ ಪರಿಣಾಮಗಳಿಂದ ರಾಷ್ಟ್ರದ ಜಿಡಿಪಿಗೆ ಶೇ 3ರಷ್ಟು ನಷ್ಟವಾಗುತ್ತಿದೆ ಎಂಬುದು ಅಭಿವೃದ್ಧಿ ಹಾದಿಯಲ್ಲಿ  ಹಿನ್ನಡೆಗೆ ಕಾರಣವಾಗುವಂತಹದ್ದು. ಹೀಗಾಗಿ ವಾಯುಮಾಲಿನ್ಯವನ್ನು  ರಾಷ್ಟ್ರೀಯ ಸಮಸ್ಯೆಯಾಗಿ ಆದ್ಯತೆ ನೀಡಿ ನಿರ್ವಹಿಸಬೇಕಾದುದು ಅವಶ್ಯ.ಪಳೆಯುಳಿಕೆ ಇಂಧನದ ವಿಪರೀತ ಬಳಕೆಯಿಂದ ದೇಶದಲ್ಲಿ ವಾಯಮಾಲಿನ್ಯ ಹೆಚ್ಚಾಗುತ್ತಿದೆ ಎಂಬುದು ಗೊತ್ತಿರುವ ಸಂಗತಿ. ವಿದ್ಯುತ್‌ ಉತ್ಪಾದನೆ ಮತ್ತು ಸಾರಿಗೆ ಕ್ಷೇತ್ರಗಳಲ್ಲಿ ಈ ಇಂಧನಗಳ ಬಳಕೆ ಹೆಚ್ಚಿನ ಪ್ರಮಾಣದಲ್ಲಿದೆ. ವಾಯುಮಾಲಿನ್ಯವನ್ನು ನಿಯಂತ್ರಣಕ್ಕೆ ತರಬೇಕೆಂದರೆ ಪಳೆಯುಳಿಕೆ ಇಂಧನದ ಬಳಕೆಯ ಪ್ರಮಾಣವನ್ನು ಮೊದಲಿಗೆ ನಿಯಂತ್ರಿಸಬೇಕು. ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನೆ ಕಡಿಮೆಯಾಗಬೇಕು.

ಸೌರಶಕ್ತಿ ಸೇರಿದಂತೆ ಶುದ್ಧ ಇಂಧನ ಉತ್ಪಾದನೆಗೆ ಆದ್ಯತೆ ಸಿಗಬೇಕು.  10 ವರ್ಷಕ್ಕಿಂತ ಹಳೆಯದಾದ ಡೀಸೆಲ್‌ ಚಾಲಿತ ವಾಹನಗಳ ಸಂಚಾರವನ್ನು ದೆಹಲಿಯಲ್ಲಿ ನಿಷೇಧಿಸಲು ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೊಗೆ ಉಗುಳಿ ವಾಯುಮಾಲಿನ್ಯ ಹೆಚ್ಚಿಸುವ ವಾಹನಗಳ ಬದಲಿಗೆ ಬ್ಯಾಟರಿಚಾಲಿತ ವಾಹನ, ಸಮೂಹ ಸಾರಿಗೆ, ಮೆಟ್ರೊರೈಲು ಹಾಗೂ ಸೈಕಲ್‌ ಬಳಕೆಗೆ ಒತ್ತು ನೀಡುವಂತಹ ನೀತಿಗಳನ್ನು  ಜಾರಿಗೊಳಿಸುವುದು ಅಗತ್ಯ.  ಏಕೆಂದರೆ ವಾಯುಮಾಲಿನ್ಯಕ್ಕೆ ವಾಹನಗಳ ಕೊಡುಗೆಯೇಶೇ 42ರಷ್ಟು ಇದೆ. ಹೀಗಾಗಿ  ಸ್ವಂತ ವಾಹನ ಬಳಕೆಗಿಂತ ಸಾರ್ವಜನಿಕ ಸಾರಿಗೆಯನ್ನೇ  ಜನರು ಬಳಸುವಷ್ಟರ ಮಟ್ಟಿಗೆ  ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಬಲಪಡಿಸಬೇಕಾದುದು ಸರ್ಕಾರಗಳ ಕರ್ತವ್ಯ. ರಸ್ತೆಗಳಲ್ಲಿ ಪಾದಚಾರಿಗಳು ಮತ್ತು ಸೈಕಲ್‌ ಸವಾರರಿಗೆ ಸಾಕಷ್ಟು ಅವಕಾಶ ಕಲ್ಪಿಸಿಕೊಡಬೇಕಾದುದೂ ಸರ್ಕಾರಿ ನೀತಿಯ ಭಾಗವಾಗಬೇಕು.ಹೆಚ್ಚುತ್ತಿರುವ ನಗರೀಕರಣ ಹಾಗೂ ಬದಲಾಗುತ್ತಿರುವ ಜೀವನಶೈಲಿ ಅನುಸರಿಸುವ ಮಾನವನ ಚಟುವಟಿಕೆಗಳು ಭೂಮಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತಿವೆ. ಅದರಿಂದ ಆಗುತ್ತಿರುವ ಹವಾಮಾನ ಬದಲಾವಣೆಗಳು ಮನುಕುಲವನ್ನು ವಿನಾಶದ ಅಂಚಿಗೆ ದೂಡುವಂತಹವು ಎಂಬ ಎಚ್ಚರ ನಮಗಿರಬೇಕು.

ಕಟ್ಟಡ ನಿರ್ಮಾಣ  ಮತ್ತಿತರ ಕಾಮಗಾರಿಗಳಿಂದ ಏಳುವ ದೂಳು,  ಕಸ ಅಥವಾ ಕೃಷಿ ತ್ಯಾಜ್ಯ ಸುಡುವುದರಿಂದ ಏಳುವ ಹೊಗೆ ಮತ್ತು ವಾಹನಗಳು ಹೊರಸೂಸುವ ಹೊಗೆಯಿಂದ ಉಂಟಾಗುವ ವಾಯುಮಾಲಿನ್ಯ ವನ್ನು ತಡೆಯಲು ಕ್ರಮಗಳನ್ನು ಕೈಗೊಳ್ಳಬೇಕು. ರಸ್ತೆ ದೂಳು ಸಹ ರಾಷ್ಟ್ರದಲ್ಲಿ ವಾಯುಮಾಲಿನ್ಯಕ್ಕೆ ಶೇ 20ರಷ್ಟು ಕಾರಣವಾಗುತ್ತಿದೆ ಎಂಬುದು ನಮ್ಮ ಕಣ್ಣು ತೆರೆಸಬೇಕು.

ನಗರಗಳಲ್ಲಿ ರಾಶಿಬೀಳುವ ಕಸ ನಿರ್ವಹಣೆಯ ಸಮಸ್ಯೆ  ಪರಿಹಾರಕ್ಕೆ ಸರ್ಕಾರಗಳು ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಬೇಕು. ಈ ಎಲ್ಲ ಮಾಲಿನ್ಯಕಾರಕ ಸಮಸ್ಯೆಗಳ ನಿವಾರಣೆಗೆ ಸಾರ್ವಜನಿಕ– ಖಾಸಗಿ ಸಹಭಾಗಿತ್ವದಲ್ಲಿ  ಕಾರ್ಯತಂತ್ರಗಳನ್ನು ರೂಪಿಸುವುದು ಹೆಚ್ಚು ಪ್ರಯೋಜನಕಾರಿ. 

ವಾಯುಮಾಲಿನ್ಯವು  ವಿಶ್ವದ ಅತಿದೊಡ್ಡ ಪರಿಸರ ಗಂಡಾಂತರವಾಗಿ ವ್ಯಾಪಿಸುತ್ತಿದೆ ಎಂಬುದನ್ನು ನಮ್ಮ ನೀತಿನಿರೂಪಕರು ಅರಿತುಕೊಳ್ಳಬೇಕು. ಇದು ಜನರಲ್ಲಿ ಕೊನೆ–ಮೊದಲಿಲ್ಲದ ಕಾಯಿಲೆ ಮತ್ತು ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತಿದೆ. ಹೀಗಾಗಿ ಆದ್ಯತೆ ಮೇರೆಗೆ ಇದಕ್ಕೆ ಪರಿಹಾರ ಕಂಡುಕೊಳ್ಳಲೇಬೇಕಾದ ತುರ್ತು ಎದುರಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.