7

ಭರವಸೆ ಹೊತ್ತುತಂದ ಒಬಾಮ ಕೊಟ್ಟದ್ದೇನು?

ಸುಧೀಂದ್ರ ಬುಧ್ಯ
Published:
Updated:
ಭರವಸೆ ಹೊತ್ತುತಂದ ಒಬಾಮ ಕೊಟ್ಟದ್ದೇನು?

1965ರ ಮಾರ್ಚ್ 7ರಂದು ನೂರಾರು ಮಂದಿ ವರ್ಣೀಯರು, ಘೋಷಣೆ ಕೂಗುತ್ತಾ ಅಲಬಾಮಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ  ‘ಎಡ್ಮಂಡ್ ಪೆಟಸ್’ ಸೇತುವೆಯನ್ನು ದಾಟಿ ಸೆಲ್ಮಾದಿಂದ ಮಾಂಟಗೋಮೆರಿಯತ್ತ ಹೊರಟಿದ್ದರು. ಆದರೆ ಸೇತುವೆಯ ಇನ್ನೊಂದು ತುದಿಯಲ್ಲಿ ಅಷ್ಟೇ ಸಂಖ್ಯೆಯ ಪೊಲೀಸರು ಲಾಠಿ ಹಿಡಿದು ಕಾದಿದ್ದರು. ಚಳವಳಿಗಾರರು ಸೇತುವೆಯ ತುದಿ ಮುಟ್ಟುವ ಹೊತ್ತಿಗೇ ಅಶ್ರುವಾಯು ಪ್ರಯೋಗಿಸಲಾಯಿತು. ಲಾಟಿ ಬೀಸಲಾಯಿತು.

ವರ್ಣೀಯರ ನೆತ್ತರು ಅಲಬಾಮಾ ನದಿ ಸೇರಿತು.ಆ ದಿನ ‘Bloody Sunday’ ಎಂದು ಚರಿತ್ರೆಯಲ್ಲಿ ದಾಖಲಾಯಿತು, ಆ ‘ನಡಿಗೆ’ ನಾಗರಿಕ ಹಕ್ಕು ಚಳವಳಿಯ ಮೈಲುಗಲ್ಲಾಗಿ ಇತಿಹಾಸದಲ್ಲಿ ಉಳಿಯಿತು. 2015ರ ಮಾರ್ಚ್ 7ರಂದು ಆ ಐತಿಹಾಸಿಕ ಘಟನೆಗೆ 50 ತುಂಬಿದಾಗ, ಸಾಂಕೇತಿಕವಾಗಿ ಮತ್ತೊಮ್ಮೆ ‘ಎಡ್ಮಂಡ್ ಪೆಟಸ್’ ಸೇತುವೆಯನ್ನು ದಾಟುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಕೂಡ ಸೇತುವೆಯ ಮೇಲೆ ಹೆಜ್ಜೆ ಹಾಕಿದ್ದರು. ‘ಅಲಬಾಮಾ ನದಿ ತೀರದ ಈ ಪುಟ್ಟ ನಗರ, ಅಮೆರಿಕದ ಚಹರೆಯನ್ನೇ ಬದಲಿಸುವ ಚಳವಳಿಗೆ ಜನ್ಮ ನೀಡಿತು. ಅಂದು ಈ ಸೇತುವೆಯನ್ನು ದಾಟುವಾಗ ಜೊತೆಯಲ್ಲಿದ್ದ ಯಾರಾದರೂ, ಮುಂದೊಂದು ದಿನ ನೀನು ಇದೇ ಸೇತುವೆಯ ಮೇಲೆ ನಿಂತು, ಕಪ್ಪು ಸಮುದಾಯದ ವ್ಯಕ್ತಿಯನ್ನು ಅಮೆರಿಕದ ಅಧ್ಯಕ್ಷ ಎಂದು ಪರಿಚಯಿಸುವ ಕಾಲ ಬರುತ್ತದೆ ಎಂದಿದ್ದರೆ, ನಿನಗೆಲ್ಲೋ ಮತಿ ಭ್ರಮಣೆಯಾಗಿದೆ ಎಂದು ಸುಮ್ಮನಾಗುತ್ತಿದ್ದೆ.

ಆದರೆ ಆ ಕಾಲ ಬಂದಿದೆ ಎಂದರೆ ಅಮೆರಿಕಕ್ಕೆ ಹಿಡಿದಿದ್ದ ಹುಚ್ಚು ಬಿಟ್ಟಿದೆ ಎಂದರ್ಥ’ ಎಂಬ ಮಾತನ್ನು 1965ರ ಐತಿಹಾಸಿಕ ನಡಿಗೆಯ ನೇತೃತ್ವ ವಹಿಸಿದ್ದ ಜಾನ್ ಲೆವಿಸ್ ಭಾವುಕರಾಗಿ ನುಡಿದಿದ್ದರು. ಲೆವಿಸ್ ಮಾತು ಕೇಳುತ್ತಾ ಪಕ್ಕದಲ್ಲಿ ನಿಂತಿದ್ದ ಒಬಾಮ, ಕೂಡಲೇ ಲೆವಿಸ್ ಅವರನ್ನು ಬಿಗಿದು ಅಪ್ಪಿಕೊಂಡರು.

ತೊಗಲಿನ ಭೇದ ಅರಿಯದೇ ನಿಂತಿದ್ದ 60 ಸಾವಿರ ಮಂದಿ ಆ ಆಲಿಂಗನಕ್ಕೆ ಸಾಕ್ಷಿಯಾಗಿದ್ದರು. ನಂತರ ಮಾತನಾಡಿದ ಒಬಾಮ, ‘ಅಂದು ಈ ಸೇತುವೆಯನ್ನು ದಾಟಿದವರಿಗೆ ಅಧಿಕಾರ ಹಿಡಿಯುವ ಬಯಕೆ ಇರಲಿಲ್ಲ. ಆದರೆ ತಮ್ಮ ನಡೆಯ ಮೂಲಕ ಲಕ್ಷಾಂತರ ಜನರಿಗೆ ಆತ್ಮಸ್ಥೈರ್ಯ ತುಂಬಿದರು. ದೇಶದ ಆಲೋಚನಾ ಕ್ರಮವನ್ನೇ ಬದಲಿಸಿದರು’ ಎಂದು ಭಾವುಕರಾಗಿದ್ದರು.ಬಿಡಿ, ಬರಾಕ್ ಒಬಾಮ ಎಂದ ಕೂಡಲೇ ನೆನಪು ಮಾಡಿಕೊಳ್ಳಲು ಇಂತಹ ಅನೇಕ ಘಟನೆಗಳು ಸಿಗುತ್ತವೆ. ಮುಖ್ಯವಾಗಿ ಒಬಾಮ, ತಮ್ಮ ಮಾತು ಮತ್ತು ಭಾವನಾತ್ಮಕ ಪ್ರತಿಸ್ಪಂದನೆಯಿಂದಲೇ ಅಮೆರಿಕನ್ನರ ಮನ ಗೆದ್ದವರು. ಭರವಸೆಯನ್ನು ಹೊತ್ತು ತಂದು ಹುರುಪು ಹಂಚಿದವರು. ಅಧ್ಯಕ್ಷರಾಗಿ ಅವರ 8 ವರ್ಷಗಳ ಅಧಿಕಾರ ಅವಧಿ, ಇನ್ನು 7 ದಿನ ಕಳೆದರೆ ಮುಗಿಯುತ್ತದೆ. ಹಾಗಾಗಿ ಅಮೆರಿಕದ ಅಧ್ಯಕ್ಷರಾಗಿ ಒಬಾಮ ಸಾಧಿಸಿದ್ದೇನು ಎಂಬ ಪ್ರಶ್ನೆ ಸಹಜವಾಗಿ ಚರ್ಚೆಯಲ್ಲಿದೆ.ಅಧ್ಯಕ್ಷರಾಗಿ ಒಬಾಮರ ಸಾಧನೆ, ವೈಫಲ್ಯಗಳನ್ನು ನಾಲ್ಕಾರು ವಿಭಾಗಗಳಲ್ಲಿ ನೋಡಬೇಕಾಗುತ್ತದೆ. ಅಮೆರಿಕದ ಅಂದಿನ ಪರಿಸ್ಥಿತಿ, ಇಂದಿನ ಸ್ಥಿತಿಗತಿಯನ್ನು ತಾಳೆ ಮಾಡಿ, ಆಡಳಿತಗಾರನಾಗಿ ಒಬಾಮ ಯಶಸ್ವಿಯಾದರೆ, ಅವರ ವೈಫಲ್ಯ ಯಾವುದು ಎಂಬುದನ್ನು ನಿರ್ಧರಿಸಬೇಕಾಗುತ್ತದೆ. ಒಮ್ಮೆ ನೆನಪಿಸಿಕೊಳ್ಳಿ, 2008ರ ಹೊತ್ತಿಗೆ ಅರ್ಧ ಜಗತ್ತು ಆರ್ಥಿಕ ಹೊಡೆತದಿಂದ ತತ್ತರಿಸಿ ಹೋಗಿತ್ತು. ಅಮೆರಿಕದ ಗೃಹ ನಿರ್ಮಾಣ ವಲಯ ಉರುಳಿ ಬಿದ್ದು, ಬ್ಯಾಂಕಿಂಗ್ ವ್ಯವಸ್ಥೆ ಕಂಪಿಸಿತ್ತು. ನಿರುದ್ಯೋಗದ ಪ್ರಮಾಣ ಹೆಚ್ಚಿತ್ತು.ಅದೇ ಸಮಯದಲ್ಲಿ ‘Yes, We can’ ಎನ್ನುತ್ತಾ ಒಬಾಮ ಅಮೆರಿಕದ ಅಧ್ಯಕ್ಷರಾದರು. ಹಾಗಂತ ಶ್ವೇತಭವನದ ಹೊಣೆ ಸುಲಭದ್ದೇನೂ ಆಗಿರಲಿಲ್ಲ. ಅಮೆರಿಕದ ಮುಂದೆ ಹಲವು ಸವಾಲುಗಳಿದ್ದವು. ಆ ಸವಾಲುಗಳನ್ನು ಯಶಸ್ವಿಯಾಗಿ ದಾಟಬೇಕಾದರೆ, ಪಕ್ಷ ಭೇದ ಮರೆತು ಕೆಲಸ ಮಾಡಬೇಕು ಎಂಬುದು ಒಬಾಮರ ನಿಲುವಾಗಿತ್ತು. We are not ‘red states’ and ‘blue states’ but ‘the united states of America’ ಎಂಬ ಮಾತಿನ ಮೂಲಕವೇ ಒಬಾಮ ಕೆಲಸಕ್ಕೆ ಚಾಲನೆ ಕೊಟ್ಟರು. ಆರ್ಥಿಕ ಕುಸಿತದಿಂದ ಅಮೆರಿಕವನ್ನು ಪಾರು ಮಾಡುವುದು ಮೊದಲ ಆದ್ಯತೆಯಾಯಿತು.ಆರೋಗ್ಯ, ಶಿಕ್ಷಣ, ಇಂಧನ, ಪರಿಸರ ಮತ್ತು ವಾಣಿಜ್ಯ ಕ್ಷೇತ್ರಗಳಲ್ಲಿ ಮಹತ್ವದ ಬದಲಾವಣೆಗೆ ನಾವು ಸಜ್ಜಾಗಬೇಕಿದೆ ಎನ್ನುತ್ತಲೇ ಒಬಾಮ ಯೋಜನೆಗಳನ್ನು ರೂಪಿಸಿದರು. ಮೊದಲೆರಡು ವರ್ಷ ಅಮೆರಿಕದ ಕಾಂಗ್ರೆಸ್, ಡೆಮಾಕ್ರಟಿಕ್ ಪಕ್ಷದ ಹಿಡಿತದಲ್ಲಿದ್ದ ಕಾರಣ ಒಬಾಮ ದಾಪುಗಾಲಿಡುವುದು ಸಾಧ್ಯವಾಯಿತು. ಆದರೆ ನಂತರದ ವರ್ಷಗಳಲ್ಲಿ ಅವರ ನಡೆ ರಭಸ ಕಳೆದುಕೊಂಡಿತು.ಕುಸಿದುಬಿದ್ದ ಆರ್ಥಿಕತೆಯನ್ನು ಮೇಲೆತ್ತಲು ಫ್ರಾಂಕ್ಲಿನ್ ರೂಸ್ವೆಲ್ಟ್ ಮತ್ತು ರೇಗನ್ ಮಾದರಿಯನ್ನು ಅನುಸರಿಸಿದ ಒಬಾಮ, ತೆರಿಗೆ ನೀತಿಯಲ್ಲಿ ಸುಧಾರಣೆ ತಂದರು. ಸಣ್ಣ ಉದ್ದಿಮೆಗಳಿಗೆ ಉತ್ತೇಜನ ನೀಡಿದರು. ಆದರೆ ಪಾತಾಳಕ್ಕೆ ಕುಸಿದ ಮೇಲೆ, ಸಾವರಿಸಿಕೊಂಡೇ ಎದ್ದು ಕೂರಬೇಕು. ಬದಲಾವಣೆ ತ್ವರಿತವಾಗಿ ಗೋಚರಿಸಲಿಲ್ಲ. ಇನ್ನಷ್ಟು ಕುಸಿತ ತಪ್ಪಿತು. ನಂತರ ಒಬಾಮ ಆರೋಗ್ಯ ವಿಮಾ ಕ್ಷೇತ್ರದ ಸುಧಾರಣೆಗೆ ಮುಂದಾದರು.

ಅಮೆರಿಕದಲ್ಲಿ ಆರೋಗ್ಯ ಸೇವೆ ತುಟ್ಟಿ. ಯಾವುದೋ ಮೆಟ್ಟಿಲ ಮೇಲೆ ಕೂತು ಔಷಧಿ ಬರೆದುಕೊಡುವ, ಕೇವಲ 5 ರೂಪಾಯಿ ಪಡೆದು ಚಿಕಿತ್ಸೆ ನೀಡುವ ಡಾ. ಶಂಕರೇಗೌಡರಂತಹ ವೈದ್ಯರು ನಮ್ಮ ಮಂಡ್ಯದಲ್ಲಿ ಸಿಕ್ಕಾರು, ಊಹು ಅಮೆರಿಕದಲ್ಲಿ ಕೇಳಬೇಡಿ. ಆರೋಗ್ಯ ವಿಮೆ ಇಲ್ಲದವರು ಆಸ್ಪತ್ರೆ ಒಳಹೊಕ್ಕರೆ ಜೇಬು ಬರಿದು ಮಾಡಿಕೊಂಡೇ ಹೊರಬರಬೇಕಾದ ಪರಿಸ್ಥಿತಿ ಅಮೆರಿಕದಲ್ಲಿದೆ. ಹಾಗಾಗಿ ಒಬಾಮ ತಮ್ಮ ಮಹತ್ವಾಕಾಂಕ್ಷಿ ಯೋಜನೆ ‘ಒಬಾಮ ಕೇರ್’ ರೂಪಿಸಿದರು. ಈ ಯೋಜನೆಯಿಂದ ತಳ ಸಮುದಾಯದ ಸುಮಾರು 80 ಲಕ್ಷ ಮಂದಿ ಮೊದಲ ಬಾರಿಗೆ ಆರೋಗ್ಯವಿಮೆ ಪಡೆಯುವುದಕ್ಕೆ ಸಾಧ್ಯವಾಯಿತು. ಆದರೆ ‘ಒಬಾಮ ಕೇರ್’ ಯೋಜನೆಯಲ್ಲಿ ಸಾಕಷ್ಟು ದೋಷಗಳಿದ್ದವು.

ಯೋಜನೆಯ ವ್ಯಾಪ್ತಿ ಕಿರಿದಾಗಿತ್ತು. ಒಂದು ವರ್ಗಕ್ಕೆ ಪೆಟ್ಟುಕೊಟ್ಟು, ಮತ್ತೊಂದು ವರ್ಗವನ್ನು ಸಮಾಧಾನಗೊಳಿಸುವ ಯೋಜನೆ ಎಂಬ ಟೀಕೆ ಕೇಳಿಬಂತು. ಕೊನೆಗೆ ರಿಪಬ್ಲಿಕನ್ನರ ವಿರೋಧದಿಂದ 2013ರಲ್ಲಿ ಆಯವ್ಯಯಕ್ಕೆ ಅನುಮೋದನೆ ದೊರಕದೆ, ಫೆಡರಲ್ ಸರ್ಕಾರ ಎರಡು ವಾರ ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿತು.ಅಮೆರಿಕ, ಜಗತ್ತಿನ ಹಿರಿಯಣ್ಣ ಎಂದು ಎಷ್ಟೇ ಬೀಗಿದರೂ ಇಂದಿಗೂ ಭಾರತದ ಪರಿಣತ ಎಂಜಿನಿಯರ್, ನುರಿತ ವೈದ್ಯರಿಲ್ಲದಿದ್ದರೆ ಅಮೆರಿಕ ಭಣಭಣ. ಈ ಬಗ್ಗೆ ಕೂಡ ಒಬಾಮ ಮಾತನಾಡಿದ್ದರು. ಮುಖ್ಯವಾಗಿ ‘ಶ್ರೇಷ್ಠ ದರ್ಜೆಯ ಶಿಕ್ಷಣ ನಮ್ಮ ಯುವಕರಿಗೆ ಸಿಗಬೇಕು, ಕೌಶಲ ಹೆಚ್ಚಿಸಿಕೊಂಡು ಭಾರತದಂತಹ ರಾಷ್ಟ್ರಗಳ ಯುವಕರೊಂದಿಗೆ ಸ್ಪರ್ಧಿಸಬಲ್ಲ ಸಾಮರ್ಥ್ಯ ಗಳಿಸಿಕೊಳ್ಳಬೇಕು’ ಎಂಬ ನಿಟ್ಟಿನಲ್ಲಿ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಆದ್ಯತೆ ಕೊಡಲಾಯಿತು.

ಅವಕಾಶವಂಚಿತ ನೀಗ್ರೊ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ‘ಮೈ ಬ್ರದರ್ ಕೀಪರ್’ ಎನ್ನುವ ಯೋಜನೆಗೆ ಚಾಲನೆ ಕೊಟ್ಟರು. ಅವಕಾಶವಂಚಿತ ಮಕ್ಕಳನ್ನು ಶಾಲೆಗಳತ್ತ ಕರೆತರುವ, ಯುವಕರಿಗೆ ಉದ್ಯೋಗಾವಕಾಶಗಳ ಬಗ್ಗೆ ಮಾಹಿತಿ ಒದಗಿಸುವ, ಹೆಚ್ಚಿನ ತರಬೇತಿ ನೀಡಿ ನೌಕರಿಗೆ ಸಿದ್ಧಗೊಳಿಸುವ, ದುಶ್ಚಟದಿಂದ ದೂರ ಮಾಡುವ, ಅಪರಾಧಿಗಳಾಗದಂತೆ ತಡೆಯುವ ಆರು ಮುಖ್ಯ ಅಂಶಗಳನ್ನು ಒಳಗೊಂಡ ಯೋಜನೆ ಅದು. ಅದಲ್ಲದೇ ತೆರಿಗೆ ರಿಯಾಯಿತಿ ಯೋಜನೆಗಳೂ (ಇಐಟಿಸಿ, ಸಿಟಿಸಿ) ಒಬಾಮ ಅವಧಿಯಲ್ಲಿ ಬಂದವು.ಇನ್ನು, ಇಂಧನ ಕ್ಷೇತ್ರದಲ್ಲಿ ಸ್ವಾವಲಂಬಿ ಮಾರ್ಗ ಹುಡುಕಿದ್ದು, ಪ್ಯಾರಿಸ್ ಒಪ್ಪಂದದ ಮೂಲಕ ಪರಿಸರ ಕಾಳಜಿ ಮೆರೆದಿದ್ದು, ಇಸ್ರೇಲ್ ವಿರೋಧ ಕಟ್ಟಿಕೊಂಡರೂ ಅಣು ಒಪ್ಪಂದಕ್ಕೆ ಇರಾನ್ ಮನವೊಲಿಸಿದ್ದು, ಹಗೆ ಮರೆತು ಕ್ಯೂಬಾದೊಂದಿಗೆ ಕೈ ಕುಲುಕಿದ್ದು, ಚೀನಾವನ್ನು ಹಣಿಯಲು ಭಾರತ, ಜಪಾನ್ ಜೊತೆಗಿನ ಮೈತ್ರಿ ಬಲಪಡಿಸಿಕೊಂಡದ್ದು ಜಾಗತಿಕ ಮಟ್ಟದಲ್ಲಿ ಒಬಾಮ ಇರಿಸಿದ ಮಹತ್ವದ ಹೆಜ್ಜೆಗಳು. ಜೊತೆಗೆ ಬಿನ್ ಲಾಡೆನ್ ಹುಡುಕಿ ಕೊಂದದ್ದು, 8 ವರ್ಷಗಳ ಅವಧಿಯಲ್ಲಿ ದೊಡ್ಡ ಮಟ್ಟದ ಭಯೋತ್ಪಾದಕ ದಾಳಿ ಆಗದಂತೆ ಎಚ್ಚರ ವಹಿಸಿದ್ದು ಒಬಾಮ ಮುಕುಟಕ್ಕೆ ಗರಿಯಾಯಿತು.

ಅನಿರೀಕ್ಷಿತವಾಗಿ ಬಂದ ನೊಬೆಲ್ ಪುರಸ್ಕಾರ ಖುದ್ದು ಅವರಿಗೇ ಅಚ್ಚರಿ ಉಂಟು ಮಾಡಿತ್ತು. ಜೊತೆಗೆ ಒಬಾಮ ಹಲವು ವಿಷಯಗಳಲ್ಲಿ ಎಡವಿದರು. ಸಿರಿಯಾ ಮತ್ತು ಉಕ್ರೇನ್ ಸಮಸ್ಯೆ ಜಟಿಲಗೊಂಡಿತು. ಲಿಬಿಯಾದಲ್ಲಿ ಅರಾಜಕತೆ ಉಂಟಾಯಿತು. ಉತ್ತರ ಕೊರಿಯಾ ಉಪಟಳ ಮುಂದುವರೆಯಿತು. ಪುಟಿನ್-ಒಬಾಮ ಕೊನೆಗೂ ಮುಖ ಸಡಿಲಿಸಿ ಮಾತನಾಡಲಿಲ್ಲ. ಐಎಸ್ ಉಗ್ರ ಸಂಘಟನೆ ದೈತ್ಯಾಕಾರದಲ್ಲಿ ಬೆಳೆದ ಮೇಲಷ್ಟೇ ಒಬಾಮ ಕತ್ತೆತ್ತಿ ನೋಡಿದರು.ಇತ್ತೀಚೆಗೆ ‘ಫಾಕ್ಸ್’ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಒಬಾಮ, ‘ಕನೆಕ್ಟಿಕಟ್ ಶೂಟೌಟ್ ಪ್ರಕರಣದಲ್ಲಿ 20 ಮಕ್ಕಳು ಮತ್ತು 6 ಯುವಕರು ತೀರಿಕೊಂಡ ದಿನ ನಾನು ಅಸಹಾಯಕನಾಗಿದ್ದೆ’ ಎಂದಿದ್ದರು. ನಿಜ, ಎಂಟು ವರ್ಷದ ಅವಧಿಯಲ್ಲಿ ಹಲವು ಶೂಟೌಟ್ ಪ್ರಕರಣಗಳು ನಡೆದವು, ಕೆಲವೊಮ್ಮೆ ಒಬಾಮ ತೀರ ಭಾವನಾತ್ಮಕವಾಗಿ ಅದಕ್ಕೆ ಸ್ಪಂದಿಸಿದರು.

ಆದರೆ ಆಡಳಿತಗಾರನಾಗಿ ಬಂದೂಕು ಲಾಬಿಯನ್ನು ಮಣಿಸುವುದು ಅವರಿಗೆ ಸಾಧ್ಯವಾಗಲಿಲ್ಲ. ಬಿಳಿಯರ ಹಿಡಿತದಲ್ಲಿರುವ ಪೊಲೀಸ್‌ ಇಲಾಖೆಯ ಜನಾಂಗೀಯ ವರ್ತನೆ ಆಗಾಗ ಸುದ್ದಿಯಾಯಿತು. ಪೊಲೀಸ್ ಮತ್ತು ಕಪ್ಪು ಜನರ ನಡುವೆ ಸೌಹಾರ್ದ ವಾತಾವರಣ ನಿರ್ಮಿಸುವ ನಿಟ್ಟಿನಲ್ಲಿ, ಒಬಾಮ ಪ್ರಯತ್ನಗಳನ್ನೇನೋ ಮಾಡಿದರು. ಆದರೆ ಯಶಸ್ಸು ಕೈಗೆಟುಕಲಿಲ್ಲ.1964ರಲ್ಲಿ ನಾಗರಿಕ ಹಕ್ಕುಗಳ ಮಸೂದೆಯನ್ನು ತರಲು ಹೊರಟಾಗ ಲಿಂಡನ್ ಜಾನ್ಸನ್ ಕೈಕಟ್ಟಿಹಾಕುವ ಹಲವು ಪ್ರಯತ್ನಗಳಾಗಿದ್ದವು. ಆದರೆ ಜಾನ್ಸನ್ ‘ಈ ಅಧ್ಯಕ್ಷ ಪದವಿ ಇರುವುದು ಅಂಜುತ್ತಾ ಕೂರುವುದಕ್ಕಲ್ಲ’ ಎಂದು ತಮ್ಮ ಮಗಳ ಹುಟ್ಟಿದ ಹಬ್ಬದಂದು ನಾಗರಿಕ ಹಕ್ಕು ಮಸೂದೆಗೆ ಸಹಿ ಮಾಡಿದ್ದರು.

ಅಂತಹ ಯಾವ ಕ್ರಾಂತಿಕಾರಕ ಹೆಜ್ಜೆಗೂ ಒಬಾಮ ಮನಸ್ಸು ಮಾಡಲಿಲ್ಲ. ಮುಖ್ಯವಾಗಿ ಒಬಾಮ, ಇಷ್ಟೂ ವರ್ಷ ವಿವಿಧ ಜನಾಂಗಗಳನ್ನು, ವ್ಯವಸ್ಥೆಯ ವಿವಿಧ ಅಂಗಗಳನ್ನು ಜೋಡಿಸುವ ಕೆಲಸ ಮಾಡಿದರು. ‘ಬದಲಾವಣೆ’ ಎನ್ನುತ್ತಾ ಗದ್ದುಗೆ ಏರಿದ್ದರಿಂದ, ಒಬಾಮ ಹೆಗಲ ಮೇಲೆ ನಿರೀಕ್ಷೆಯ ಭಾರ ಹೆಚ್ಚಿತ್ತು. ಹಾಗಾಗಿ ಆಡಳಿತಗಾರನಾಗಿ ಅವರು ಕ್ರಮಿಸಿದ ದೂರ ಕಡಿಮೆಯಾಗಿ ಕಾಣುತ್ತಿದೆ. ಇದಿಷ್ಟು ಒಬಾಮ ಅವಧಿಯ ಮುಖ್ಯಾಂಶ.ಅಂದಹಾಗೆ, ಜನವರಿ 20ರಂದು ಟ್ರಂಪ್ ಪದಗ್ರಹಣದೊಂದಿಗೆ ಅಮೆರಿಕ ರಾಜಕೀಯ ಇತಿಹಾಸದ ಅಧ್ಯಾಯವೊಂದು ಮುಗಿಯುತ್ತಿದೆ. ಒಬಾಮ, ಅಮೆರಿಕ ಅಧ್ಯಕ್ಷರಾಗಿ ಸಾಧಿಸಿದ್ದೇನು ಎಂಬುದರ ತುಲನೆಗೆ ಹಲವು ಮಾನದಂಡಗಳನ್ನು ಹುಡುಕಬಹುದು. ಆದರೆ ಅಮೆರಿಕದ ಚರಿತ್ರೆ ಓದಿರುವ ಯಾರಿಗಾದರೂ ಅವರು ಅಧ್ಯಕ್ಷರಾಗಿದ್ದೇ ಮಹಾನ್ ಸಾಧನೆಯಲ್ಲವೇ ಎಂದೂ ಅನ್ನಿಸುತ್ತದೆ.

ಅಂದು ರೇವ್ ಬ್ರೌನ್, ತನ್ನ ಮಗುವೂ ಶ್ವೇತ ವರ್ಣೀಯ ಮಕ್ಕಳೊಂದಿಗೆ ಶಾಲೆಯಲ್ಲಿ ಕಲಿಯಬೇಕು ಎಂದು ಪಟ್ಟು ಹಿಡಿಯದಿದ್ದರೆ, ರೋಸಾ ಪಾರ್ಕ್ಸ್, ಬಿಳಿತೊಗಲಿನವರು ಬಂದಾಕ್ಷಣ ಬಸ್ಸಿನ ಸೀಟು ಬಿಡಲಾರೆ ಎಂದು ಸಿಟ್ಟು ಮಾಡಿಕೊಳ್ಳದಿದ್ದರೆ, ಮಾರ್ಟಿನ್ ಲೂಥರ್ ಕಿಂಗ್ ಅಹಿಂಸೆಯ ಮಾರ್ಗ ಹಿಡಿದು, ನಾಗರಿಕ ಹಕ್ಕುಗಳಿಗಾಗಿ ಧ್ವನಿ ಹೊರಡಿಸದಿದ್ದರೆ ಅಮೆರಿಕದ ಮನಸ್ಸುಗಳು ಬದಲಾಗುತ್ತಿದ್ದವೇ?

ಒಬಾಮ ಅಧ್ಯಕ್ಷರಾಗುವುದು ಸಾಧ್ಯವಿತ್ತೇ? ನಿಜ, ಅಮೆರಿಕದ ಪಥ ಬದಲಿಸಿದ ಲಿಂಕನ್, ರೂಸ್ವೆಲ್ಟ್ ಮತ್ತು ರೇಗನ್ ಸಾಲಿನಲ್ಲಿ ಒಬಾಮ ಅವರನ್ನು ಇಡಲಾಗದು, ಆದರೆ ಒಬಾಮ ಒಂದು ಪೀಳಿಗೆಯ ಆತ್ಮಸ್ಥೈರ್ಯ ವೃದ್ಧಿಸುವ ಕೆಲಸವನ್ನಂತೂ ಮಾಡಿದ್ದಾರೆ. ಇಂದು ಆಫ್ರಿಕನ್ ಅಮೆರಿಕನ್ ಸಮುದಾಯದ ಮಗುವೊಂದು ಶಾಲೆಯಲ್ಲಿ ಎದ್ದುನಿಂತು ‘ಮುಂದೆ ನಾನೂ ಅಮೆರಿಕ ಅಧ್ಯಕ್ಷನಾಗುತ್ತೇನೆ’ ಎಂದು ಹೇಳಿದರೆ ಯಾರೂ ಅನುಮಾನಿಸಲಾರರು.

ಅದು ಒಬಾಮ ಸಾರ್ಥಕತೆ. ಇಷ್ಟಲ್ಲದೇ ವ್ಯಕ್ತಿಯಾಗಿ ಅವರು ವಿವಿಧ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ರೀತಿ, ತಮ್ಮ ಸಿಬ್ಬಂದಿಯೊಂದಿಗೆ ನಡೆದುಕೊಂಡ ಪರಿ, ಪತ್ನಿ ಮಕ್ಕಳೊಂದಿಗೆ ಕಾಣಿಸಿಕೊಂಡ ಬಗೆಯನ್ನು ಇಡೀ ಜಗತ್ತು ಮೆಚ್ಚುಗೆಯಿಂದ ಗಮನಿಸಿದೆ.

ಶ್ವೇತಭವನದ ಘನತೆ ಹೆಚ್ಚಿಸಿದ ಈ ಸರಳ, ಸಭ್ಯ ಅಧ್ಯಕ್ಷ ಜನರ ಸ್ಮೃತಿ ಕೋಶದಲ್ಲಂತೂ ಬಹುಕಾಲ ಉಳಿಯುತ್ತಾರೆ. ಶ್ವೇತಭವನದತ್ತ ಕುತೂಹಲದಿಂದ ನೋಡುವ ಯಾರಿಗಾದರೂ, ಇನ್ನೊಂದಿಷ್ಟು ದಿನ ಅಲ್ಲಿ ಒಬಾಮ ಅನುಪಸ್ಥಿತಿ ಎದ್ದು ಕಾಣುತ್ತದೆ. ‘Dear President Obama, We will

miss you!’

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry