ಸೋಮವಾರ, ಜೂಲೈ 6, 2020
23 °C

ಪಕ್ಷ ಹೋಳಾದರೆ ಚಿಹ್ನೆ ಯಾರಿಗೆ: ಒಂದು ಹಿನ್ನೋಟ

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಪಕ್ಷ ಹೋಳಾದರೆ ಚಿಹ್ನೆ ಯಾರಿಗೆ: ಒಂದು ಹಿನ್ನೋಟ

ಉತ್ತರ ಪ್ರದೇಶದಲ್ಲಿ ಮುಲಾಯಂ ಸಿಂಗ್‌ ಯಾದವ್‌ ಅವರ ಕುಟುಂಬ ಕಲಹ, ಸಮಾಜವಾದಿ ಪಕ್ಷ ಇಬ್ಭಾಗವಾಗಲು ಕಾರಣವಾಗಿದೆ. ಪಕ್ಷದ ಸಂಸ್ಥಾಪಕ ಮುಲಾಯಂ ಸಿಂಗ್ ನೇತೃತ್ವದ  ಬಣ ಹಾಗೂ ಅವರ ಪುತ್ರ, ರಾಜ್ಯದ ಮುಖ್ಯಮಂತ್ರಿ ಅಖಿಲೇಶ್‌ ಯಾದವ್‌ ಅವರ ಬಣದ ನಡುವೆ ಪಕ್ಷದ ಚಿಹ್ನೆ ‘ಸೈಕಲ್‌’ ಪಡೆಯಲು ಪೈಪೋಟಿ ನಡೆಯುತ್ತಿದೆ.

ಕೇಂದ್ರ ಚುನಾವಣಾ ಆಯೋಗವು ಶುಕ್ರವಾರ (ಜ.13) ಎರಡೂ ಬಣಗಳ ವಿಚಾರಣೆ ನಡೆಸಲಿದೆ. ಬಣಗಳ ವಾದ ಪ್ರತಿ ವಾದ ಆಲಿಸಿ, ಎರಡೂ ಕಡೆಯವರು ಸಲ್ಲಿಸಿರುವ ದಾಖಲೆಗಳನ್ನು ಪರಿಶೀಲಿಸಿ, ಚಿಹ್ನೆ ಯಾರಿಗೆ ಸೇರಬೇಕು ಎಂಬ ನಿರ್ಧಾರವನ್ನು ಆಯೋಗ ಕೈಗೊಳ್ಳಲಿದೆ.ಆಯೋಗವೇ ‘ಸುಪ್ರೀಂ’

* ಪಕ್ಷದ ಚಿಹ್ನೆ ಹಂಚಿಕೆಗೆ ಸಂಬಂಧಿಸಿದಂತೆ  ನಿರ್ಧಾರ ಕೈಗೊಳ್ಳುವ ಅಧಿಕಾರವಿರುವುದು ಕೇಂದ್ರ ಚುನಾವಣಾ ಆಯೋಗಕ್ಕೆ ಮಾತ್ರ.

* ಪಕ್ಷದ ಚಿಹ್ನೆಗಾಗಿ ಬಣಗಳ ನಡುವೆ ತಿಕ್ಕಾಟ ಆರಂಭವಾದಾಗ ಚುನಾವಣಾ ಆಯೋಗವು 1968ರ ಚುನಾವಣಾ ಚಿಹ್ನೆಗಳು (ಕಾದಿರಿಸುವಿಕೆ ಮತ್ತು ಹಂಚಿಕೆ) ಆದೇಶದ ಅಡಿಯಲ್ಲಿ ನಿರ್ಣಯ ಕೈಗೊಳ್ಳುತ್ತದೆ.

* ಆಯಾ ಬಣಗಳ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಪಡೆದು ಆಯೋಗವು ಚಿಹ್ನೆ ಯಾರಿಗೆ ಸೇರಬೇಕು ಎಂದು  ತೀರ್ಮಾನ ಕೈಗೊಳ್ಳುತ್ತದೆ.

* ಒಡೆದಿರುವ ಪಕ್ಷದ ಬಣಗಳಲ್ಲಿ ಯಾವುದಕ್ಕೆ ಹೆಚ್ಚು ಬೆಂಬಲ ಇದೆಯೋ (ಶಾಸಕರ ಮತ್ತು ಪದಾಧಿಕಾರಿಗಳ) ಆ ಬಣಕ್ಕೆ ಪಕ್ಷದ ಮೂಲ ಚಿಹ್ನೆ ಹಂಚಿಕೆ ಮಾಡಿದ ಉದಾಹರಣೆಗಳಿವೆ.

* ಚಿಹ್ನೆ ಹಂಚಿಕೆ ಕಗ್ಗಂಟಾದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಚಿಹ್ನೆಯನ್ನು ಅಮಾನತಿನಲ್ಲಿಟ್ಟು, ಪಕ್ಷದ ಬಣಗಳಿಗೆ ಪ್ರತ್ಯೇಕ ಚಿಹ್ನೆಗಳನ್ನು ಹಂಚಿಕೆ ಮಾಡುವ ಅಧಿಕಾರವೂ ಆಯೋಗಕ್ಕಿದೆ.ಮೊದಲ ಘಟನೆ

ಪಕ್ಷದ ಚಿಹ್ನೆಗೆ ಸಂಬಂಧಿಸಿದಂತೆ ಎರಡು ಬಣಗಳ ನಡುವೆ ಮೊದಲ ಬಾರಿಗೆ ಸಂಘರ್ಷ ನಡೆದಿದ್ದು 1969ರಲ್ಲಿ.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಮೊದಲ ಬಾರಿಗೆ ವಿಭಜನೆಯಾದಾಗ, ಎಸ್‌. ನಿಜಲಿಂಗಪ್ಪ ನೇತೃತ್ವದ ಕಾಂಗ್ರೆಸ್‌ (ಒ) ಹಾಗೂ ಇಂದಿರಾ ಗಾಂಧಿ ಅವರು ಹೊಸದಾಗಿ ಸ್ಥಾಪಿಸಿದ್ದ ಕಾಂಗ್ರೆಸ್‌ (ಆರ್‌) ನಡುವೆ ಚಿಹ್ನೆಗಾಗಿ ಸಂಘರ್ಷ ನಡೆದಿತ್ತು.

ಕಾಂಗ್ರೆಸ್‌ನ ಹಳೆಯ ಚಿಹ್ನೆಯಾಗಿದ್ದ ‘ನೊಗ ಹೊತ್ತಿದ್ದ ಜೋಡೆತ್ತು’ ಕಾಂಗ್ರೆಸ್‌ (ಒ)ಗೆ ಸಿಕ್ಕಿತ್ತು. ಇಂದಿರಾ ಗಾಂಧಿ ಅವರ ಪಕ್ಷಕ್ಕೆ ‘ಹಸು ಮತ್ತು ಕರು’ವಿನ ಚಿಹ್ನೆಯನ್ನು  ಚುನಾವಣಾ ಆಯೋಗ ನೀಡಿತ್ತು.

1978ರಲ್ಲಿ ಕಾಂಗ್ರೆಸ್‌ (ಆರ್‌) ಮತ್ತೆ ವಿಭಜನೆ ಆಯಿತು. ಇಂದಿರಾ ಗಾಂಧಿ ಪಕ್ಷದಿಂದ ಹೊರ ಬಂದು ಕಾಂಗ್ರೆಸ್‌ (ಐ) ಸ್ಥಾಪಿಸಿದರು. ಆಗ ಅವರು ಹಳೆಯ ಚಿಹ್ನೆ ‘ಹಸು ಮತ್ತು ಕರು’ ಕೈ ಬಿಟ್ಟು, ಹಸ್ತದ ಚಿಹ್ನೆ ಆಯ್ಕೆ ಮಾಡಿಕೊಂಡಿದ್ದರು.ತಮಿಳುನಾಡಿನಲ್ಲಿ ವಿಚಿತ್ರ ಸನ್ನಿವೇಶ

ಎಐಎಡಿಎಂಕೆ ಸಂಸ್ಥಾಪಕ ಮತ್ತು ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಎಂ.ಜಿ. ರಾಮಚಂದ್ರನ್‌ ಅವರು 1987ರಲ್ಲಿ ನಿಧನಹೊಂದಿದಾಗ ಪಕ್ಷ ಹೋಳಾಗಿತ್ತು. ರಾಮಚಂದ್ರನ್‌ ಪತ್ನಿ ಜಾನಕಿ ಅವರು ಒಂದು ಬಣದ ನೇತೃತ್ವ ವಹಿಸಿದ್ದರೆ, ಜೆ. ಜಯಲಲಿತಾ ಅವರು ಮತ್ತೊಂದು ಬಣದ ಚುಕ್ಕಾಣಿ ಹಿಡಿದಿದ್ದರು.

ಪಕ್ಷದ ಚಿಹ್ನೆ ‘ಎರಡು ಎಲೆ’ಗಾಗಿ ತಮ್ಮ ಹಕ್ಕನ್ನು ಮಂಡಿಸಿ ಎರಡೂ ಬಣಗಳು ಚುನಾವಣಾ ಆಯೋಗದ ಮೆಟ್ಟಿಲೇರಿದ್ದವು.

ಅದುವರೆಗೂ ಹೆಚ್ಚಿನ ಸಂದರ್ಭಗಳಲ್ಲಿ, ಯಾವ ಬಣಕ್ಕೆ ಪಕ್ಷದ ಶಾಸಕರ ಮತ್ತು ಪದಾಧಿಕಾರಿಗಳ ಬೆಂಬಲ ಇರುತ್ತದೆಯೋ, ಆ ಬಣಕ್ಕೆ ಪಕ್ಷದ ಚಿಹ್ನೆಯನ್ನು ಆಯೋಗ ನೀಡುವ ಸಂಪ್ರದಾಯವನ್ನು ಪಾಲಿಸುತ್ತಾ ಬಂದಿತ್ತು.

ಆದರೆ, ಎಐಎಡಿಎಂಕೆ ಪ್ರಕರಣದಲ್ಲಿ ಪಕ್ಷದ ಶಾಸಕರು ಮತ್ತು ಸಂಸದರು ಜಾನಕಿ ಅವರ ಬಣಕ್ಕೆ ಬೆಂಬಲ ಸೂಚಿಸಿದ್ದರೆ, ಪದಾಧಿಕಾರಿಗಳು  ಜಯಲಲಿತಾ ಅವರನ್ನು ಬೆಂಬಲಿಸಿದ್ದರು.   ಆ ಸಂದರ್ಭದಲ್ಲಿ ಚುನಾವಣಾ ಆಯೋಗ ವಿಚಿತ್ರ ಸನ್ನಿವೇಶವನ್ನು ಎದುರಿಸಿತ್ತು. ಆದರೆ, ಚಿಹ್ನೆಯನ್ನು ಯಾವ ಬಣಕ್ಕೆ ನೀಡಬೇಕು ಎಂದು ಆಯೋಗ ನಿರ್ಧರಿಸುವುದಕ್ಕೂ ಮುನ್ನ ಎರಡೂ ಬಣಗಳು ಒಂದಾಗಿದ್ದವು.ಟಿಡಿಪಿ ಕಥೆ

ಆಂಧ್ರಪ್ರದೇಶದಲ್ಲಿ ಎನ್‌.ಟಿ. ರಾಮರಾವ್‌ ಅವರು ಸ್ಥಾಪಿಸಿದ್ದ ತೆಲುಗುದೇಶಂ ಪಕ್ಷವು (ಟಿಡಿಪಿ) 1995ರಲ್ಲಿ ಇಬ್ಭಾಗವಾದಗಲೂ ಪಕ್ಷದ ಚಿಹ್ನೆಯಾಗಿದ್ದ ‘ಸೈಕಲ್‌’ ಮಾಲೀಕತ್ವದ ಬಗ್ಗೆ ಹಗ್ಗಜಗ್ಗಾಟ ನಡೆದಿತ್ತು.

ಹಠಾತ್‌ ಬೆಳವಣಿಗೆಯಲ್ಲಿ ಆಂಧ್ರದ ಇಂದಿನ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ತಮ್ಮ ಮಾವ (ಪತ್ನಿಯ ತಂದೆ) ಎನ್‌.ಟಿ. ರಾಮರಾವ್‌ ಅವರನ್ನು ಪಕ್ಷದ ಅಧ್ಯಕ್ಷ ಹುದ್ದೆ ಮತ್ತು ಮುಖ್ಯಮಂತ್ರಿ ಸ್ಥಾನದಿಂದ ಕೆಳಕ್ಕಿಳಿಸಲು ಯಶಸ್ವಿಯಾಗಿದ್ದರು. ಅಲ್ಲದೇ ಟಿಡಿಪಿಯ ಬಹುತೇಕ ಶಾಸಕರ ಮತ್ತು ಮುಖಂಡರ ವಿಶ್ವಾಸವನ್ನೂ ಪಡೆದಿದ್ದರು.

ಆ ಸಂದರ್ಭದಲ್ಲಿ ನಾಯ್ಡು ಹಾಗೂ ರಾಮರಾವ್‌ ಬಣಗಳ ನಡುವೆ ಸೈಕಲ್ ಚಿಹ್ನೆಗಾಗಿ  ತಿಕ್ಕಾಟ ನಡೆದಿತ್ತು.

ಚುನಾವಣಾ ಆಯೋಗವು ಹಲವಾರು ಬಾರಿ ವಿಚಾರಣೆ ನಡೆಸಿ, ವಾದ ಮತ್ತು ಪ್ರತಿವಾದಗಳನ್ನು ಆಲಿಸಿ ಅಂತಿಮವಾಗಿ ಚಿಹ್ನೆಯನ್ನು ನಾಯ್ಡು ಅವರ ಬಣಕ್ಕೆ ಒಪ್ಪಿಸಿತ್ತು.ಹಿಂದೆಯೂ ಇತ್ತು...

1968ರಲ್ಲಿ ಹೊಸ ನಿಯಮ ಜಾರಿಯಾಗುವುದಕ್ಕೂ ಮೊದಲು ಚುನಾವಣಾ ಆಯೋಗವು ಚುನಾವಣಾ ‘1961ರ ನಿರ್ವಹಣಾ ನಿಯಮಗಳ’ ಅಡಿಯಲ್ಲಿ ನಿರ್ಧಾರ ಕೈಗೊಳ್ಳುತ್ತಿತ್ತು.

1964ರಲ್ಲಿ ಭಾರತೀಯ ಕಮ್ಯುನಿಸ್ಟ್‌ ಪಕ್ಷ (ಸಿಪಿಐ) ಇಬ್ಭಾಗವಾದಾಗ, ಒಂದು ಗುಂಪು ತನಗೆ ಸಿಪಿಐ (ಮಾವೋವಾದಿ) (ಸಿಪಿಎಂ) ಎಂಬ ಮಾನ್ಯತೆ ನೀಡಬೇಕು ಎಂದು ಚುನಾವಣಾ ಆಯೋಗಕ್ಕೆ ಮನವಿ ಮಾಡಿತ್ತು.

ಅದಕ್ಕೆ ಪೂರಕವಾಗಿ ಬಣವನ್ನು ಬೆಂಬಲಿಸುವ ಆಂಧ್ರ ಪ್ರದೇಶ, ಕೇರಳ ಮತ್ತು ಪಶ್ಚಿಮ ಬಂಗಾಳದ ಶಾಸಕರು ಮತ್ತು ಸಂಸದರ ಪಟ್ಟಿಯನ್ನೂ ಸಲ್ಲಿಸಿತ್ತು.  ಬಣವು ಸಲ್ಲಿಸಿದ್ದ ಪೂರಕ ದಾಖಲೆಗಳನ್ನು ಪರಿಶೀಲನೆ ನಡೆಸಿದ ಬಳಿಕ ಆಯೋಗವು ಅದಕ್ಕೆ ‘ಸಿಪಿಎಂ’ ಎಂದು ಮಾನ್ಯತೆ ನೀಡಿತ್ತು.* 1793 ಚುನಾವಣಾ ಆಯೋಗದಲ್ಲಿ ನೋಂದಣಿಯಾಗಿರುವ ರಾಜಕೀಯ ಪಕ್ಷಗಳ ಸಂಖ್ಯೆ

* 7 ರಾಷ್ಟ್ರೀಯ ಪಕ್ಷಗಳು

* 1786 ರಾಜ್ಯ ಮಟ್ಟದ ಪಕ್ಷಗಳು

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.