ಶನಿವಾರ, 5 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಿಲ್ಲಿಸಲು ಒತ್ತಾಯ

Published : 13 ಜನವರಿ 2017, 19:43 IST
ಫಾಲೋ ಮಾಡಿ
Comments

ಬೆಂಗಳೂರು: ‘ನಗರದ ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆಗಳನ್ನು ತಡೆಯಲು ಬಿಬಿಎಂಪಿ ಅಧಿಕಾರಿಗಳು ಮುಂದಾಗಬೇಕು’ ಎಂದು ನಗರದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಅಧ್ಯಕ್ಷರು ಒತ್ತಾಯಿಸಿದರು.

‘ನಮ್ಮ ಬೆಂಗಳೂರು ಪ್ರತಿಷ್ಠಾನ’ ಶುಕ್ರವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಸಿಟಿಜನ್‌ ಆ್ಯಕ್ಷನ್‌ ಫೋರಂನ ಸದಸ್ಯ ವಿಜಯನ್‌ ಮೆನನ್‌ ಮಾತನಾಡಿ, ‘40 ಅಡಿ ಹಾಗೂ ಅದಕ್ಕಿಂತಲೂ ಕಡಿಮೆ ಅಗಲವಿರುವ ರಸ್ತೆಗಳು ಮತ್ತು ವಸತಿ ಪ್ರದೇಶಗಳಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಅನುಮತಿ ನೀಡಬಾರದೆಂದು ಹೈಕೋರ್ಟ್‌ 2015ರಲ್ಲಿ ಆದೇಶ ನೀಡಿದೆ. ಅದನ್ನು ಬಿಬಿಎಂಪಿಯ ಆಯುಕ್ತರು, ಅಧಿಕಾರಿಗಳು ಸರಿಯಾಗಿ ಜಾರಿಗೆ ತರುತ್ತಿಲ್ಲ. ಇದರಿಂದಾಗಿ ನಿವಾಸಿಗಳು ಹಲವಾರು ಸಮಸ್ಯೆ ಅನುಭವಿಸುತ್ತಿದ್ದಾರೆ’ ಎಂದರು.

‘ಸ್ಥಳೀಯ ಪ್ರಭಾವಿಗಳು ಹಣ ಸಂಪಾದನೆಗಾಗಿ ವ್ಯಾಪಾರ ನಡೆಸಲು ಸ್ಥಳಾವಕಾಶ ನೀಡುತ್ತಾರೆ. ಇದರಿಂದ ಶಬ್ದ ಮಾಲಿನ್ಯ, ಸಂಚಾರ ದಟ್ಟಣೆ, ಮೂಲಸೌಕರ್ಯಗಳ ಕೊರತೆ ಉಂಟಾಗುತ್ತಿದೆ’ ಎಂದು ದೂರಿದರು.

‘ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಲು ಪರವಾನಗಿ ನೀಡಿದ ಬಿಬಿಎಂಪಿ ಅಧಿಕಾರಿಗಳು ಹಾಗೂ ವಿದ್ಯುತ್‌, ನೀರು, ಒಳಚರಂಡಿ ವ್ಯವಸ್ಥೆಯನ್ನು ಕಲ್ಪಿಸಿದ ಬೆಸ್ಕಾಂ, ಜಲಮಂಡಲಿ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಅವರು ಒತ್ತಾಯಿಸಿದರು.

ಎಚ್‌ಎಎಲ್‌ 2ನೇ ಹಂತದ ಬಡಾವಣೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷೆ ಅರುಣಾ ನ್ಯೂಟನ್‌ ಮಾತನಾಡಿ, ‘ವಾಣಿಜ್ಯ ಚಟುವಟಿಕೆಗಳಿಂದಾಗಿ ವಸತಿ ಪ್ರದೇಶದಲ್ಲಿ ಭದ್ರತೆ ಸಮಸ್ಯೆ ಹೆಚ್ಚುತ್ತಿದೆ. ಈ ಚಟುವಟಿಕೆ ನಡೆಸುವ ಶೇ 90 ರಷ್ಟು ಜನ ಸರ್ಕಾರದಿಂದ ಪರವಾನಗಿ ಪಡೆದಿಲ್ಲ. ಈ ಕುರಿತು ಬಿಬಿಎಂಪಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದೇವೆ. ಆದರೆ, ಈವರೆಗೂ ಅವರು ಕ್ರಮ ತೆಗೆದುಕೊಂಡಿಲ್ಲ’ ಎಂದರು.

‘ನಗರದ ಇಂದಿರಾನಗರ ಪ್ರದೇಶದಲ್ಲಿ ಮಾದಕ ವಸ್ತು ಬಳಕೆದಾರರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲದೇ ವೇಶ್ಯಾವಾಟಿಕೆ ಕೂಡ ಹೆಚ್ಚಾಗಿದೆ. ಇದನ್ನು ಪೊಲೀಸರು ತಡೆಯಬೇಕು’ ಎಂದರು.

ಎಸ್‌.ಟಿ.ಬೆಡ್‌ ಪ್ರದೇಶದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಸಿ.ಎನ್‌.ಕುಮಾರ್‌ ಮಾತನಾಡಿ,‘ವಸತಿ ಪ್ರದೇಶಗಳಲ್ಲಿ ಔಷಧಿ ಮಳಿಗೆ, ಹಾಲಿನ ಮಾರಾಟದ ಅಂಗಡಿಯಂತಹ ಅಗತ್ಯ ಸೇವೆ ನೀಡುವ ಮಳಿಗೆ ನಡೆಸಲು ವಿರೋಧವಿಲ್ಲ. ಬದಲಾಗಿ ಲಾಡ್ಜ್‌, ಹೋಟೆಲ್‌, ಸಣ್ಣ ಕೈಗಾರಿಕೆಗಳು ನಡೆಯುತ್ತಿವೆ. ಅವುಗಳನ್ನು ಬಿಬಿಎಂಪಿ ಮುಚ್ಚಬೇಕು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT