ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2017ರ ಕೆಲವು ನಿರೀಕ್ಷಿತ ಕೃತಿಗಳು

ಸಾಹಿತ್ಯ ಸಂಕ್ರಮಣ
Last Updated 14 ಜನವರಿ 2017, 19:30 IST
ಅಕ್ಷರ ಗಾತ್ರ
ಬಳಗಾರರ ‘ಹಾಸು ಹೊಕ್ಕು’
ಕಥೆಗಾರ ಶ್ರೀಧರ ಬಳಗಾರ ‘ಹಾಸು ಹೊಕ್ಕು’ ಕಾದಂಬರಿ ಮುಗಿಸುವ ಉತ್ಸಾಹದಲ್ಲಿದ್ದಾರೆ. ‘ಕೈಮಗ್ಗದ ನೇಯ್ಗೆಗಳಿಗೆ ಹಾಸು–ಹೊಕ್ಕು ಪದ ಬಳಕೆಯಲ್ಲಿದೆ. ಆ ಅರ್ಥದಲ್ಲಿ ಕಾದಂಬರಿಗೆ ‘ಹಾಸು ಹೊಕ್ಕು’ ಎನ್ನುವ ಹೆಸರು. ‘ದೇಶದ ಸ್ವಾತಂತ್ರ್ಯ ಹೋರಾಟ ಮತ್ತು ಸಾಂಸಾರಿಕ ಅಸ್ತಿತ್ವವನ್ನು ಉಳಿಸಿಕೊಳ್ಳುವ ಸಂಘರ್ಷ, ದಾಂಪತ್ಯ ಬದುಕಿನಲ್ಲಿ ಹೆಣೆದುಕೊಳ್ಳುವ ಸಂಕೀರ್ಣ ಕಥನ ಕಾದಂಬರಿಯ ಹಿನ್ನೆಲೆ ಕೃತಿಯಲ್ಲಿ ಇರಲಿದೆ. ಸ್ತ್ರೀಯೊಬ್ಬಳ ಅಗ್ನಿದಿವ್ಯದ ಬಗೆಯ ಅನುಭವ ತೆರೆದಿಡುವ ಹಂದರ ಕಾದಂಬರಿಯದ್ದು. ನಿರೂಪಣೆಯಲ್ಲಿ ನಿರೂಪಿತ ಆತ್ಮಚರಿತ್ರೆ ಮತ್ತು ಜೀವನ ಚರಿತ್ರೆಯ ನಡುವಿನ ನೈತಿಕ ಸಂಕಟದ ಸುಳಿಗೆ ಸಿಕ್ಕಿಕೊಳ್ಳುವುದು ಕಾದಂಬರಿಯ ಇನ್ನೊಂದು ಆಯಾಮ’ ಎಂದು ತಮ್ಮ ಕಾದಂಬರಿಯ ಬಗ್ಗೆ ಬಳಗಾರರ ವಿವರಣೆ. ಕಾದಂಬರಿ ಈ ವರ್ಷದ ಕೊನೆಯಲ್ಲಿ ಪ್ರಕಟವಾಗಲಿದ್ದು, ‘ಅಭಿನವ’ ಪ್ರಕಾಶನ ಪ್ರಕಟಿಸಲಿದೆ.
 
**
ಎಚ್ಚೆಸ್ವಿ ಕಾವ್ಯಸಂಭ್ರಮ
‘ಷೆಫೀಲ್ಡ್ ಕವಿತೆಗಳು’, ‘ತಾವರೆಯ ಬಾಗಿಲು’ ಮತ್ತು ಅನುವಾದಿತ ಕವನಗಳ ಸಂಕಲನ – ಎಚ್‌.ಎಸ್‌. ವೆಂಕಟೇಶಮೂರ್ತಿ ಅವರ ಮೂರು ಕೃತಿಗಳು ಈ ವರ್ಷ ಬಿಡುಗಡೆ ಆಗಲಿವೆ. ತಮ್ಮ ಕೃತಿಗಳ ಬಗ್ಗೆ ಎಚ್ಚೆಸ್ವಿ ಹೇಳುವುದು: ‘‘ಇಂಗ್ಲೆಂಡ್‌ಗೆ ಹೋದಾಗಿನ ನನ್ನ ಅನುಭವಗಳನ್ನು ಕವಿತೆಗಳ ರೂಪದಲ್ಲಿ ದಾಖಲಿಸಿದ್ದು, ಅದು ‘ಷೆಫೀಲ್ಡ್ ಕವಿತೆಗಳು’ ಹೆಸರಿನಲ್ಲಿ ಪ್ರಕಟಗೊಳ್ಳಲಿದೆ. ಷೆಫೀಲ್ಡ್ ಎನ್ನುವುದು ಅಲ್ಲಿನ ಒಂದು ನಗರ. ಈ ಪುಸ್ತಕವನ್ನು ತಳಕಿನ ‘ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ’ ಪ್ರಕಟಿಸುತ್ತಿದೆ. ‘ತಾವರೆಯ ಬಾಗಿಲು’– ಬೇರೆ ಬೇರೆ ಕವಿಗಳ ಕವಿತೆಗಳನ್ನು ಇಟ್ಟುಕೊಂಡು ಅವುಗಳನ್ನು ಓದುವುದು ಹೇಗೆ, ಹೇಗೆ ಅರ್ಥ ಮಾಡಿಕೊಳ್ಳಬೇಕು ಎನ್ನುವ ಕಾವ್ಯಸೂಕ್ಷ್ಮಗಳ ಕುರಿತು ಪತ್ರಿಕೆಯಲ್ಲಿ ಬರೆದ ಸರಣಿ ಲೇಖನಗಳ ಸಂಗ್ರಹ. ಈ ಪುಸ್ತಕ ಪ್ರಕಟಿಸುತ್ತಿರುವುದು ‘ಮನೋಹರ ಗ್ರಂಥಮಾಲೆ’. ಇವೆರಡೂ ಪುಸ್ತಕಗಳು ಇನ್ನೊಂದು ತಿಂಗಳಲ್ಲಿ ಬಿಡುಗಡೆ ಆಗಲಿವೆ. ವರ್ಡ್ಸ್‌ವರ್ತ್‌, ಯೇಟ್ಸ್, ರವೀಂದ್ರನಾಥ ಟ್ಯಾಗೋರ್ ಹಾಗೂ ಕೆಲವು ಬಂಗಾಳಿ ಕವಿಗಳ ಮುಖ್ಯವಾದ ಕವನಗಳನ್ನು ಕನ್ನಡಕ್ಕೆ ಅನುವಾದ ಮಾಡಿರುವ ಕೃತಿಯೊಂದನ್ನು ‘ಸಪ್ನ ಬುಕ್ ಹೌಸ್’ ಪ್ರಕಟಿಸುತ್ತಿದೆ’’.
 
**
ಜಯಂತರ ‘ಕಂಪಿನ ಕರೆ’
ಕವಿ– ಕಥೆಗಾರ ಜಯಂತ ಕಾಯ್ಕಿಣಿ ಅವರ ‘ಕಂಪಿನ ಕರೆ’ ಪ್ರಕಟಣೆಗೆ ಸಿದ್ಧವಾಗುತ್ತಿರುವ ಲೇಖನಗಳ ಗುಚ್ಛ. ಬೆಂಗಳೂರಿನ ‘ಅಂಕಿತ ಪುಸ್ತಕ’ ಪ್ರಕಟಿಸುತ್ತಿರುವ ಈ ಕೃತಿ ಲೇಖಕರ ಬಹುಮುಖಿ ಆಸಕ್ತಿಗಳ ಪ್ರತಿಬಿಂಬ. ಜಯಂತರೇ ಹೇಳುವಂತೆ – ‘ಇದು ಯಾವುದೋ ಒಂದು ವಿಷಯದ ಕುರಿತು ಬರೆದ ಲೇಖನಗಳಲ್ಲ. ಸಾಹಿತ್ಯ, ಸಿನಿಮಾ, ಕಾವ್ಯ, ನನ್ನನ್ನು ಕಾಡುವ ಸಂಗತಿಗಳೆಲ್ಲದರ ಕುರಿತು ಬರೆದ ಲೇಖನಗಳ ಮಿಸಳ್‌ಬಾಜಿ’.
 
**
ಆರಿಫ್‌ ‘ನಕ್ಷತ್ರ ಮೋಹ’
ಕವಿ ಆರಿಫ್ ರಾಜ ಅವರ ನಕ್ಷತ್ರಗಳ ಧ್ಯಾನದ ಫಲ ‘ನಕ್ಷತ್ರ ಮೋಹ’ ಕವನಸಂಕಲನ. ‘ಪಲ್ಲವ’ ಪ್ರಕಾಶನ ಪ್ರಕಟಿಸುತ್ತಿರುವ ಈ ಕೃತಿ 39 ಕವಿತೆಗಳ ಗುಚ್ಛ. ಚುಕ್ಕಿಗಳ ಹಾರದ ಕುರಿತು ಕವಿ ಹೇಳುವುದು ಹೀಗೆ: ‘ಹಲವು ಹೂವುಗಳನ್ನು ಸೇರಿಸಿ ನೇಯ್ದ ಹಾರದ ಹಾಗಿರುವ ಸಂಕಲನ ಇದು. ಇಲ್ಲಿನ ಪದ್ಯಗಳನ್ನು ಬಿಡಿಬಿಡಿಯಾಗಿಯೂ ಓದಿಕೊಳ್ಳಬಹುದು, ಒಟ್ಟಿಗೇ ಓದಿಕೊಂಡರೆ ಒಂದು ಸುದೀರ್ಘ ಪದ್ಯದ ಅನುಭವವನ್ನೂ ಕೊಡುತ್ತದೆ’.
 
**
ಸುನಂದಾ ಹೊಸ ಪುಟ
ಕಥೆಗಾರ್ತಿ ಸುನಂದಾ ಕಡಮೆ ‘ತುದಿ ಮಡಚಿಟ್ಟ ಪುಟ’ವನ್ನು ಓದುಗರಿಗೆ ತಲುಪಿಸುವ ಸಡಗರದಲ್ಲಿದ್ದಾರೆ. ಹದಿಮೂರು ಕಥೆಗಳು ಇರುವ ಈ ಸಂಕಲನವನ್ನು ‘ಅಹರ್ನಿಶಿ’ ಪ್ರಕಾಶನ ಹೊರತರುತ್ತಿದೆ. ಇದು ಸುನಂದಾ ಅವರ ನಾಲ್ಕನೇ ಕಥಾಸಂಕಲನ. ‘ಈಗೀಗಂತೂ ಕಥೆ ಬರೆಯುವುದು ಅಂದರೆ ಟೆನ್ಷನ್‌ ಶುರುವಾಗುತ್ತವೆ. ಏನೇ ಬರೆದರೂ ಬೇರೆ ಇನ್ನೇನೋ ಬರಿಯಬೇಕಿತ್ತು ಅನಿಸುತ್ತಿರುತ್ತದೆ. ಬರವಣಿಗೆಯಲ್ಲಿ ನನ್ನನ್ನು ನಾನೇ ಮೀರಿಕೊಳ್ಳುವುದು ಅಂತರಂಗದ ಅಗತ್ಯ ಅನಿಸತೊಡಗಿದೆ. ಹಾಗೆ ಮೀರುವುದು ಸಾಧ್ಯವಾಗುತ್ತದೋ ಇಲ್ಲವೋ ಎಂಬ ಆತಂಕವೇ ಬರವಣಿಗೆಯನ್ನು ಇನ್ನಷ್ಟು  ಕಷ್ಟಗೊಳಿಸುತ್ತಿದೆಯೇನೋ. ಈ ಸಂಕಲನದಲ್ಲಿನ ಎಲ್ಲ  ಕಥೆಗಳೂ ನನ್ನನ್ನು ನಾನೇ ಮೀರಿಕೊಳ್ಳುವ ಪ್ರಯತ್ನದಲ್ಲಿ,  ಚಡಪಡಿಕೆಯಲ್ಲಿ ಹುಟ್ಟಿಕೊಂಡ ರಚನೆಗಳು’ ಎನ್ನುವುದು ‘ತುದಿ ಮಡಚಿಟ್ಟ ಪುಟ’ದ ಕುರಿತು ಕಥೆಗಾರ್ತಿಯ ಟಿಪ್ಪಣಿ.
 
**
ವೀರಣ್ಣರ ನಾಟಕ ಸಖ್ಯ
ಕವಿ ವೀರಣ್ಣ ಮಡಿವಾಳರ ‘ಸಿಂಗಾಪಾಲಾಪೆ’ ಮೂಲಕ ನಾಟಕಕಾರರಾಗಿದ್ದಾರೆ. ‘ಚಾನೂ ಪ್ರಕಾಶನ’ ಪ್ರಕಟಿಸುತ್ತಿರುವ ಇದು ವೀರಣ್ಣನವರ ಚೊಚ್ಚಿಲ ನಾಟಕ. ‘ಮಿಮಿಕ್ರಿ ಮಾಡುವ ಒಬ್ಬನೇ ಮನುಷ್ಯ ಸಾವಿರ ಧ್ವನಿಗಳಲ್ಲಿ ಮಾತನಾಡುತ್ತಿರುತ್ತಾನಲ್ಲ, ಇದು ಆ ಥರದ ಒಂದೇ  ಕೊರಳಿನ ಸಮೂಹ ಗಾನ. ಬದುಕಿನ ಸಾರ್ಥಕ್ಯ ಮತ್ತು ಆಳದ ದುಃಖಗಳ ಜುಗಲ್‌ಬಂದಿ. ಇದುವರೆಗಿನ ನನ್ನ ಒಟ್ಟೂ ಬದುಕಿನ ಸಾರೀಕೃತ ನೋವು, ಕಾಳಜಿಗಳನ್ನು ಕರುಣೆ–ಕ್ರೌರ್ಯದ ಯುದ್ಧವನ್ನು ಚಿತ್ರಾತ್ಮಕವಾಗಿ ವ್ಯಕ್ತಪಡಿಸಿದ್ದೇನೆ. ಇದು ಯಾರು ಬೇಕಾದರೂ ತಮ್ಮದೇ ಆದ ಓಘ ಸ್ವರದಲ್ಲಿ ಹಾಡಿಕೊಳ್ಳುವ ರೀತಿಯಲ್ಲಿ ಮೂಡಿರುವಂಥ ಸ್ವರಮೇಳ’ ಎನ್ನುವುದು ನಾಟಕದ ಬಗ್ಗೆ ವೀರಣ್ಣನವರ ಹೇಳಿಕೆ. ಇದರ ಜತೆಗೆ ಅವರ ಒಂದು ಕವನ ಸಂಕಲನವೂ ಇದೇ ವರ್ಷ ಬಿಡುಗಡೆಯಾಗಲಿದೆ.
 
**
‘ಪ್ರಬಂಧ ಸಮಯ’ದಲ್ಲಿ ಸಾಲಿ
ವಿವಿಧ ಪ್ರಕಾರಗಳಲ್ಲಿ ಬರೆಯುವ ಕವಿ ಚಿದಾನಂದ ಸಾಲಿ ಅವರ ಪ್ರಬಂಧ ಸಂಕಲನ ‘ಮಾತು ಮಾತು ಮಾತು...’ ಅಚ್ಚಿನಮನೆ ಹೊಸ್ತಿಲಲ್ಲಿದೆ. ‘ಪಲ್ಲವ’ ಪ್ರಕಾಶನ ಈ ಸಂಕಲನವನ್ನು ಹೊರತರುತ್ತಿದೆ. ‘ನಾನು ಮೂಲತಃ ಕಥೆಗಾರ. ನನ್ನ ಒಂದು ಕಥೆ ಪ್ರಬಂಧದ ಮಾದರಿಯಲ್ಲಿದೆ ಎಂದು ಸ್ನೇಹಿತರೊಬ್ಬರು ಹೇಳಿದರು. ಆಗ ನನ್ನೊಳಗೊಬ್ಬ ಪ್ರಬಂಧಕಾರ ಇದ್ದಾನೆ ಎಂದು ಗೊತ್ತಾಯಿತು. ಪ್ರಬಂಧಕಾರನಾಗಿ ವ್ಯಕ್ತಪಡಿಸಬೇಕಾಗಿರುವ ಎಷ್ಟೋ ಅಂಶಗಳು ನನ್ನೊಳಗಿದ್ದು ನುಗ್ಗುತ್ತಿವೆ ಮತ್ತು ಕಥೆಗಳು ನುಸುಳಿಕೊಳ್ಳುತ್ತಿವೆ ಎನ್ನುವುದೂ ನನ್ನ ಅರಿವಿಗೆ ಬಂತು. ಆದ್ದರಿಂದ ಪ್ರಬಂಧ ರಚನೆಗೆ ತೊಡಗಿದೆ’ ಎನ್ನುತ್ತಾರೆ ಸಾಲಿ. ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ಕನ್ನಡಕ್ಕೆ ತಂದಿರುವ ತೆಲುಗು ಕವಿ ಅಜಂತಾ ಅವರ ‘ಸ್ವಪ್ನಲಿಪಿ’ ಸಂಕಲನ ಹಾಗೂ ‘ಬಾರೀಗಿಡ’ ನಾಟಕ ಈ ವರ್ಷ ಪ್ರಕಟಗೊಳ್ಳಲಿರುವ ಸಾಲಿ ಅವರ ಇತರ ಕೃತಿಗಳು. 
 
**
ಗೌರೀಶರ ಸಮಗ್ರ ಸಂಭ್ರಮ
ವಿಮರ್ಶಕ ಎಂ.ಜಿ. ಹೆಗಡೆ ಅವರು ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ’ಗಾಗಿ ಕನ್ನಡದ ಪ್ರಮುಖ ಲೇಖಕರಲ್ಲೊಬ್ಬರಾದ ಗೌರೀಶ ಕಾಯ್ಕಿಣಿ ಅವರ ಸಮಗ್ರ ಸಾಹಿತ್ಯವನ್ನು ಸಂಪಾದಿಸಿದ್ದಾರೆ. ‘ಜಿಜ್ಞಾಸೆ’, ‘ಕಂಪಿನ ಕರೆ’, ‘ಒರೆಗಲ್ಲು’, ‘ಗಾಳಿಚಿಟ್ಟೆ’ ಎನ್ನುವ ನಾಲ್ಕು ಸಂಪುಟಗಳಲ್ಲಿ ಗೌರೀಶರ ಸಾಹಿತ್ಯ ಲಭ್ಯವಾಗಲಿದೆ. ಈ ಸಂಪುಟಗಳಲ್ಲಿ ಗೌರೀಶ ಕಾಯ್ಕಿಣಿ ಅವರ ಅನೇಕ ಅಪ್ರಕಟಿತ ಬರಹಗಳೂ ಸೇರಿವೆ. ಈ ಕೃತಿ ಸಂಪಾದನೆ ಬಗ್ಗೆ ಹೆಗಡೆ ಅವರು ಹೇಳುವುದು: ‘ಗೌರೀಶ ಕಾಯ್ಕಿಣಿ ಅವರ ಅನೇಕ ಕೃತಿಗಳು ಈಗ ಉಪಲಭ್ಯ ಇಲ್ಲ. ವೈಚಾರಿಕ ಸಾಹಿತ್ಯವನ್ನು ಮರುಮುದ್ರಿಸುವುದಕ್ಕೆ ಯಾರೂ ಸಿದ್ಧರಾಗುವುದಿಲ್ಲ. ಗೌರೀಶರ ಆಸಕ್ತಿಯ ವಿವಿಧ ಮುಖಗಳನ್ನು ಪರಿಚಯಿಸುವ ಉದ್ದೇಶದಿಂದ ವ್ಯವಸ್ಥಿತವಾಗಿ ವಿಭಜನೆ ಮಾಡಿ ಆಯ್ದ ಸಮಗ್ರ ಸಾಹಿತ್ಯ ಸಂಪುಟಗಳನ್ನು ಸಂಪಾದಿಸಿದ್ದೇನೆ’. 
 
**
ಹ್ಯಾಟ್ರಿಕ್ ತವಕದಲ್ಲಿ ನಟರಾಜ್ ಹುಳಿಯಾರ್
ಲೇಖಕ ನಟರಾಜ್ ಹುಳಿಯಾರ್‌ ಅವರ ಎರಡು ನಾಟಕಗಳು ಹಾಗೂ ಒಂದು ಕವನ ಸಂಕಲನ 2017ರಲ್ಲಿ ಪ್ರಕಟವಾಗಲಿವೆ. ‘ಶೀರ್ಷಿಕೆ ಇನ್ನೂ ಅಂತಿಮವಾಗದ ಈ ಪುಸ್ತಕಗಳ ರಚನೆ ಹಿಂದೆಯೇ ಆರಂಭವಾಗಿತ್ತು. ಆದರೆ, ಬೇರೆ ಬೇರೆ ಗ್ರಂಥಗಳ ಸಂಪಾದನೆಯಲ್ಲಿ ತೊಡಗಿಸಿಕೊಂಡಿದ್ದರಿಂದ ಪೂರ್ಣಗೊಳಿಸಲಾಗಿರಲಿಲ್ಲ. ಅರ್ಧಕ್ಕೆ ನಿಂತಿರುವ ಇವುಗಳಿಗೆ ಈ ವರ್ಷ ಪುಸ್ತಕರೂಪ ಕೊಡಲು ತೀರ್ಮಾನಿಸಿದ್ದೇನೆ’ ಎಂದು ನಟರಾಜ್‌ ಹೇಳಿದ್ದಾರೆ. ಒಟ್ಟಾರೆ, 2017ರ ಪಾಲಿಗೆ ಅವರ ಪಾಲಿಗೆ ‘ಪುಸ್ತಕಗಳ ಹ್ಯಾಟ್ರಿಕ್‌’ ವರ್ಷ ಆಗಲಿದೆ.
 
**
ಮರದ ನೆರಳಲ್ಲಿ ನಾಗವೇಣಿ
‘ಗಾಂಧಿ ಬಂದ’ ಖ್ಯಾತಿಯ ಎಚ್‌. ನಾಗವೇಣಿ ಅವರೀಗ ಮರದ ಧ್ಯಾನದಲ್ಲಿದ್ದಾರೆ. ‘ಆ ಮರ’ ಪ್ರಕಟಣೆ ಹಂತದಲ್ಲಿರುವ ಅವರ ಕಾದಂಬರಿ. ಈ ಕಾದಂಬರಿಯೊಂದನ್ನು ಎಂಟು ವರ್ಷದಿಂದ ಅವರು ಬರೆಯುತ್ತಿದ್ದು, ಈ ವರ್ಷ ಶತಾಯಗತಾಯ ಪೂರ್ಣಗೊಳಿಸುವ ಸಂಕಲ್ಪ ಅವರದು. ‘ಪ್ರಕೃತಿಕೇಂದ್ರಿತವಾದ ಈ ಕಾದಂಬರಿಯಲ್ಲಿ ಮರವೇ ಕಥಾನಾಯಕಿ’ ಎನ್ನುತ್ತಾರೆ. 2017ರಲ್ಲಿಯೇ ‘ಪ್ರಜಾವಾಣಿ’ ಸೇರಿದಂತೆ ವಿವಿಧೆಡೆ ಪ್ರಕಟವಾದ ಕಥೆಗಳನ್ನು ಒಟ್ಟುಗೂಡಿಸಿ ಕಥಾಸಂಕಲನವೊಂದನ್ನು ತರುವ ಹಂಬಲವೂ ಅವರಿಗಿದೆ. 
 
**
ಮೊಗಳ್ಳಿಯವರ ಚತುರ್ಮುಖ
‘ಗಾಂಧಿ ಜಾನಪದ’ವೆಂಬ ವಿಚಾರ ಪುಸ್ತಕ, ‘ಗತಿ’ ಕಾದಂಬರಿ, ‘ಹೂ ಬಂಡೆ’ ಪ್ರಬಂಧ ಸಂಕಲನ ಹಾಗೂ ‘ದೇವರ ದಾರಿ’ ಸಣ್ಣಕಥೆಗಳ ಸಂಕಲನ – ಇವು 2017ರಲ್ಲಿ ಪ್ರಕಟಣೆಗೆ ಸಿದ್ಧವಾಗಿರುವ ಮೊಗಳ್ಳಿ ಗಣೇಶ್‌ ಅವರ ಕೃತಿಗಳು. ಜಾತ್ಯತೀತ ಹಾಗೂ ಸಾಂಸ್ಕೃತಿಕ ನಾಯಕ ಗಾಂಧೀಜಿಯನ್ನು 20ನೇ ಶತಮಾನದಲ್ಲಿ ಜನ ಕಂಡುಕೊಂಡು ಬಗೆಯನ್ನು ಜಾನಪದ ಹಿನ್ನೆಲೆಯಲ್ಲಿ ನೋಡುವ ಪ್ರಯತ್ನ ‘ಗಾಂಧಿ ಜಾನಪದ’. ‘ಜಾನಪದ ಕಥೆಗಳ ರೂಪದಲ್ಲಿ ಇದನ್ನು ಕಟ್ಟಿಕೊಟ್ಟಿದ್ದೇನೆ. ಪಲ್ಲವ ಪ್ರಕಾಶನ ಹೊರತರಲಿರುವ ಈ ಪುಸ್ತಕ, ಗಾಂಧಿ ಕುರಿತ ಜನಸಾಮಾನ್ಯರ ಆತ್ಮಕಥನ ಎನ್ನಬಹುದು’ ಎನ್ನುತ್ತಾರೆ ಮೊಗಳ್ಳಿ. ವಿಜಯನಗರ ಸಾಮ್ರಾಜ್ಯ ಪತನವಾದ ಹಿನ್ನೆಲೆಯಲ್ಲಿ ಬರೆದ ಕಾದಂಬರಿ ‘ಗತಿ’ ಹಾಗೂ ಕಥೆ–ಕವನ ಸಂಕಲನಗಳನ್ನು ‘ಅಂಕಿತ ಪುಸ್ತಕ’ ಪ್ರಕಟಿಸಲಿದೆ.
 
**
ಪೈಗಳ ‘ಮಗದೊಬ್ಬನ ಆತ್ಮಕಥೆ’ 
‘ಸ್ವಪ್ನ ಸಾರಸ್ವತ’ ಕಾದಂಬರಿ ಖ್ಯಾತಿಯ ಗೋಪಾಲಕೃಷ್ಣ ಕೈ ಕಥೆಗಳಿಗೆ ಮರಳಿದ್ದಾರೆ. ‘ಸ್ವಲ್ಪ ದೀರ್ಘವಾದ ನೀಳ್ಗತೆಗಳನ್ನು ಬರೆಯುವ ತಯಾರಿಯಲ್ಲಿದ್ದೇನೆ. ಸದ್ಯದ ಸಾಮಾಜಿಕ ಕಥನವನ್ನೊಳಗೊಂಡಿರುವ ಈ ಪುಸ್ತಕಕ್ಕೆ ‘ಮಗದೊಬ್ಬನ ಆತ್ಮಕಥೆ’ ಎಂದು ಹೆಸರಿಡಬೇಕೆಂದುಕೊಂಡಿದ್ದೇನೆ. ಎ.ಕೆ.  ರಾಮಾನುಜಮ್ ಅವರು ‘ಮತ್ತೊಬ್ಬನ ಆತ್ಮಕಥೆ’ ಎಂದು ಈಗಾಗಲೇ ಬರೆದಿದ್ದಾರೆ. ಹಾಗಾಗಿ ನಾನು ‘ಮಗದೊಬ್ಬನ’ ಎಂದು ನಾಮಕರಣ ಮಾಡಿದ್ದೇನೆ. ಸದ್ಯ ನನ್ನ ಮುಂದಿರುವುದು ಇದೊಂದೇ ಯೋಜನೆ’ ಎನ್ನುತ್ತಾರೆ ಪೈ.
 
**
ಹೇಮಾ ಅವರ ‘ಶಾಂಪೇನ್’
‘ಚಕಾವ್ ಟು ಶಾಂಪೇನ್’ – ಹೇಮಾ ಪಟ್ಟಣಶೆಟ್ಟಿ ಅವರು 2017ರಲ್ಲಿ ಪ್ರಕಟಿಸಲು ಉದ್ದೇಶಿಸಿರುವ ಕೃತಿಯ ಹೆಸರು. ರಷ್ಯಾದ ಖ್ಯಾತ ನಾಟಕಕಾರ ಚಕಾವನ ಐದು ಕಥೆಗಳನ್ನು ಆಯ್ಕೆ ಮಾಡಿಕೊಂಡು, 2016ರಲ್ಲಿ ‘ಚಕಾವ್ ಟು ಶಾಂಪೇನ್’ ಎಂಬ ನಾಟಕವನ್ನು ಹೇಮಾ ರಚಿಸಿದ್ದರು. ಅದು ಈಗಾಗಲೇ ರಂಗರೂಪಕ್ಕಿಳಿದು ಪ್ರಯೋಗ ಕಾಣುತ್ತಿದೆ. ಇದೀಗ ಅದರ ಜೊತೆಗೆ ಚಕಾವನ ಸಿದ್ಧಾಂತ ಮತ್ತು ಬದುಕನ್ನು ಒಳಗೊಂಡ ಪುಸ್ತಕವನ್ನು ‘ಚಕಾವ್ ಟು ಶಾಂಪೇನ್’ ಹೆಸರಿನಲ್ಲಿ ಅವರು ಪ್ರಕಟಣೆಗೆ ಸಿದ್ಧಪಡಿಸುತ್ತಿದ್ದಾರೆ.
 
**
‘ಶಾಕ್ತ ಪಂಥ’ದ ಹಿಂದೆ ತರೀಕೆರೆ
‘ಕರ್ನಾಟಕ ಶಾಕ್ತ ಪಂಥ’ ಅಚ್ಚಿನ ಮನೆಯಲ್ಲಿರುವ ರಹಮತ್‌ ತರೀಕೆರೆ ಅವರ ಕೃತಿ. ‘ಕರ್ನಾಟಕ ವಿಶ್ವವಿದ್ಯಾನಿಲಯ’ ಈ ಪುಸ್ತಕವನ್ನು ಪ್ರಕಟಿಸುತ್ತಿದೆ. ರಹಮತ್ ಅವರು ಈ ಹಿಂದೆ ಬರೆದ ‘ಕರ್ನಾಟಕದ ಸೂಫಿಗಳು‘, ‘ಕರ್ನಾಟಕ ನಾಥ ಪಂಥ’ ಹಾಗೂ ‘ಕರ್ನಾಟಕ ಮೊಹರಂ’ ಪುಸ್ತಕಗಳ ಮುಂದುವರಿದ ಭಾಗವೇ ಈ ಪುಸ್ತಕ. ಅಲ್ಲದೆ, ಹಿಂದೆ ಪ್ರಕಟವಾಗಿದ್ದ ‘ಲೋಕವಿರೋಧಿಗಳ ಜತೆಯಲ್ಲಿ’ ಪುಸ್ತಕದ ಎರಡನೇ ಭಾಗ ‘ನ್ಯಾಯ ನಿಷ್ಠುರ’ವೂ ಈ ವರ್ಷ ಬರಲಿದೆ. ದೇವನೂರ ಮಹಾದೇವ, ಡಾ. ಎಂ.ಎಂ. ಕಲ್ಬುರ್ಗಿ, ಕೋ. ಚೆನ್ನಬಸಪ್ಪ ಸೇರಿದಂತೆ ಹಲವರ ದೀರ್ಘ ಸಂದರ್ಶನಗಳನ್ನು ಈ ಪುಸ್ತಕ ಒಳಗೊಂಡಿರಲಿದೆ.
 
**
ಲಲಿತಾ ಅವರ ಅವಳಿ–ಜವಳಿ
ಕವಯಿತ್ರಿ ಲಲಿತಾ ಸಿದ್ಧಬಸವಯ್ಯ ಅವರು ಪುಸ್ತಕಯುಗಳದ ಪುಲಕದಲ್ಲಿದ್ದಾರೆ. ಮೊದಲನೆಯದು, ‘ಮರಕತಮಣಿ’ ಎನ್ನುವ ಕವನ ಸಂಕಲನ. ಅವರದೇ ಆದ ‘ಚಿನ್ಮಯಿ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸುತ್ತಿದೆ. ‘ನನ್ನ ಹಳೆಯ ಜಾಡನ್ನು ಬಿಟ್ಟಿರುವ ಕವನಗಳು ಈ ಸಂಕಲನದಲ್ಲಿ ಇವೆ ಎಂದುಕೊಂಡಿದ್ದೇನೆ’ ಎನ್ನುತ್ತಾರೆ ಲಲಿತಾ. ಈ ವರ್ಷ ಪ್ರಕಟಗೊಳ್ಳಲಿರುವ ಅವರ ಮತ್ತೊಂದು ಕೃತಿ – ಈವರೆಗಿನ ಕವನಗಳ ಸಂಕಲನ. ‘ಓದುಗ ಸಾಕ್ಷಿ’ ಅದರ ಹೆಸರು. ಮಾರ್ಚ್‌ನಲ್ಲಿ ಇದು ಬಿಡುಗಡೆ ಆಗಬಹುದು.
 
**
ಈಶ್ವರಚಂದ್ರರ ‘ಅರೇಬಿಯನ್ ನೈಟ್ಸ್‌’
ಈಶ್ವರಚಂದ್ರ ಅವರು ಕನ್ನಡಕ್ಕೆ ತಂದಿರುವ ‘ಅರೇಬಿಯನ್ ನೈಟ್ಸ್’ ಕಥೆಗಳ ಸಂಕಲನವನ್ನು ‘ನಿವೇದಿತಾ ಪ್ರಕಾಶನ’ ಹೊರತರುತ್ತಿದೆ. ‘ಗೂನು ಬೆನ್ನಿನ ಮನುಷ್ಯ ಮತ್ತು ಇತರ ಅರೇಬಿಯನ್ ನೈಟ್ಸ್ ಕಥೆಗಳು’ ಈ ಕೃತಿಯ ಹೆಸರು. ಅರೇಬಿಯನ್‌ ನೈಟ್ಸ್‌ ಕಥೆಗಳ ಸ್ವಾರಸ್ಯ, ರಮ್ಯ–ರೋಚಕತೆ, ಕೌತುಕ ಗುಣಗಳು ಕನ್ನಡದ ಮಕ್ಕಳಿಗೆ ಇಷ್ಟವಾಗುವ ನಿರೀಕ್ಷೆ ಅವರದು. ಇದರ ಜೊತೆಗೆ, ತಮ್ಮ ಕಥೆಗಳ ಸಂಕಲನವೊಂದರನ್ನು ಹೊರತರಲು ಈಶ್ವರಚಂದ್ರ ಉದ್ದೇಶಿಸಿದ್ದಾರೆ. 
 
**
ರೂಪ ಅವರ ‘ಮಕ್ಕಳ ಹಕ್ಕುಗಳು’
ಮಕ್ಕಳ ಹಕ್ಕುಗಳ ಕುರಿತಂತೆ ಪತ್ರಿಕೆಗಳಲ್ಲಿ ಬರೆದ ಲೇಖನಗಳ ಸಂಕಲನವನ್ನು ಕವಯಿತ್ರಿ ರೂಪ ಹಾಸನ ಪ್ರಕಟಿಸುತ್ತಿದ್ದಾರೆ. ಇನ್ನೂ ಶೀರ್ಷಿಕೆ ಅಂತಿಮಗೊಂಡಿಲ್ಲ. ‘ಮಕ್ಕಳಿಗೆ ಆಪ್ತವೆನ್ನಿಸುವಂತೆ ಶೀರ್ಷಿಕೆ ಇರಬೇಕು ಎಂದುಕೊಂಡಿದ್ದೇನೆ. ಹಾಗೆಂದು ಇದು ಮಕ್ಕಳ ಸಾಹಿತ್ಯವಲ್ಲ. ‘ಅಭಿರುಚಿ’ ಪ್ರಕಾಶನ ಈ ಪುಸ್ತಕವನ್ನು ಬಿಡುಗಡೆ ಪ್ರಕಟಿಸುವ ಸಾಧ್ಯತೆ ಇದೆ. ಐದಾರು ತಿಂಗಳಲ್ಲಿ ಕೃತಿ ಪ್ರಕಟಗೊಳ್ಳಬಹುದು’ ಎನ್ನುತ್ತಾರೆ. ‘ಮತ್ತೊಂದು ತುಂಬಾ ಪ್ರಮುಖವಾದ ಪುಸ್ತಕ ಪ್ರಕಟಿಸುವ ಉದ್ದೇಶವಿದೆ’ ಎನ್ನುವ ಅವರು, ಅದರ ಸ್ವರೂಪದ ಬಗ್ಗೆ ಗುಟ್ಟು ಬಿಟ್ಟುಕೊಡುವುದಿಲ್ಲ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT