7

‘ತಮನ್ ನೆಗಾರಾ’ ಅಮ್ಮನ ಮಡಿಲಲ್ಲಿ...

Published:
Updated:
‘ತಮನ್ ನೆಗಾರಾ’ ಅಮ್ಮನ ಮಡಿಲಲ್ಲಿ...

-ಎಸ್. ಪಿ. ವಿಜಯಲಕ್ಷ್ಮಿ

 

**

ಬೆಟ್ಟಗುಡ್ಡಗಳ ಮೌನಗಾನ ಆಲಿಸಬೇಕೆ? ಹೊಚ್ಚಹೊಸ ಕಂಪಿನ ಹಸಿರ ಪಿಸುಮಾತು ಕೇಳಬೇಕೆ? ನದಿಗಳ ಮಂಜುಳನಾದವನ್ನೂ ತಾರಕಸ್ವರವನ್ನೂ ಆಸ್ವಾದಿಸಬೇಕೆ? ಹಕ್ಕಿಪಕ್ಷಿಗಳ ಕಲರವ ಕಿವಿ ತುಂಬಿಕೊಳ್ಳಬೇಕೆ? ‘ರಿಮ್‌ಜಿಮ್’ ಎನ್ನುವ, ‘ಸೋ’ ಎನ್ನುವ ‘ಜೊರ್ರೋ–ಟಪಟಪ’ ಎನ್ನುವ ಸೋನೆಮಳೆಯ ಸೌಂದರ್ಯ, ಮಂದ ಮೆಲುಶ್ರುತಿಯ, ತಾರಕ ಅಬ್ಬರಗಳ ಗಂಧರ್ವಗಾನ – ಇದೆಲ್ಲದರ ಅನುಭವಕ್ಕೆ ಒಳಗಾಗಬೇಕೆ? 

 

ಮೇಲಿನ ಪ್ರಶ್ನೆಗಳಿಗೆ ನಿಮ್ಮ ಉತ್ತರ ‘ಹೌದು’ ಎಂದಾದಲ್ಲಿ ಮಲೇಷ್ಯಾದ ‘ತಮನ್ ನೆಗಾರಾ’ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿಕೊಡಬೇಕು.

 

‘ತಮನ್ ನೆಗಾರಾ’ ಮಲೇಷ್ಯಾದ ಅಪೂರ್ವ ಪ್ರಾಕೃತಿಕ ಸಂಪತ್ತಿನ ತವರು. ದೇಶದ ಮೂರು ರಾಜ್ಯಗಳ ಪರಿಧಿಯಲ್ಲಿರುವ, ಸುಮಾರು ನಾಲ್ಕು ಸಾವಿರ ಕಿ.ಮೀ. ವಿಸ್ತೀರ್ಣದಲ್ಲಿ ಹರಡಿಕೊಂಡ ಈ ಅರಣ್ಯವನ್ನು ಸರ್ಕಾರ ತುಂಬಾ ಜತನದಿಂದ ಕಾಪಾಡಿಕೊಂಡಿದೆ. ‘ತಮನ್ ನೆಗಾರಾ ನ್ಯಾಷನಲ್ ಪಾರ್ಕ್’ ಎನ್ನುವುದು ಮಲೇಷ್ಯಾದ ಹೆಮ್ಮೆಯ ಅಭಿವ್ಯಕ್ತಿ. ಇದನ್ನು ವಿಶ್ವದ ಅತೀ ಪ್ರಾಚೀನವಾದ ಮಳೆ ಕಾಡು ಎಂದು ಬಣ್ಣಿಸಲಾಗುತ್ತದೆ.

 

ಸುಮಾರು 130 ದಶಲಕ್ಷ ವರ್ಷಗಳ ಚರಿತ್ರೆ ಈ ಕಾಡಿಗಿದೆ. ‘ಟಿಟಿವಾಂಗ್ಸಾ’ ಪರ್ವತಪ್ರದೇಶದಲ್ಲಿ ಅತಿದಟ್ಟವಾಗಿ, ವಿಸ್ತಾರವಾಗಿ ಹರಡಿಕೊಂಡಿರುವ ಈ ಅರಣ್ಯ, ವರ್ಷದ ಬಹುತೇಕ ದಿನಗಳಲ್ಲಿ ಮಳೆಯನ್ನು ಕಾಣುತ್ತದಂತೆ. 1938ರಲ್ಲಿ ಮಲಯಾ ಸರ್ಕಾರ ಈ ಅರಣ್ಯಪ್ರದೇಶವನ್ನು ಪ್ರವಾಸಿಗರಿಗಾಗಿ ಅಭಿವೃದ್ಧಿಪಡಿಸಿತು. ಅನೇಕ ವಿಧದ ಪರಿಸರಸ್ನೇಹಿ ಆಕರ್ಷಣೆಗಳನ್ನು ಇಲ್ಲಿ ಹುಟ್ಟುಹಾಕಲಾಗಿದೆ. ವಿಶ್ವದ ವಿವಿಧ ಭಾಗಗಳ ಪ್ರವಾಸಿಗರು ‘ತಮನ್‌ ನವೇರಾ’ ಕನವರಿಸುತ್ತಾ ಮಲೇಷ್ಯಾಕ್ಕೆ ಬರುತ್ತಾರೆ. ಹಾಗಾಗಿ ದೇಶಕ್ಕೆ ಇದೊಂದು ಆದಾಯದ ಮೂಲವೂ ಆಗಿದೆ. 

 

ಅಡಿಗಡಿಗೆ ಹಸಿರು!

ಕೌಲಾಲಾಂಪುರದಿಂದ 4 ದಿನದ ಪ್ರವಾಸಕ್ಕಾಗಿ ಈ ತಾಣಕ್ಕೆ ನಾವು ಹೊರಟಿದ್ದು ಕಾರಿನಲ್ಲಿ. (ಪ್ರವಾಸಿಗರು ಬಸ್ಸು, ರೈಲು, ಟ್ಯಾಕ್ಸಿಗಳಲ್ಲೂ ಹೋಗಬಹುದು). ‘ಕೌಲಾತಹನ್’ ಎನ್ನುವ ಪುಟ್ಟ ಊರು ಈ ಅರಣ್ಯದ ಹೆಬ್ಬಾಗಿಲು. ಕೌಲಾಲಾಂಪುರದಿಂದ ಇಲ್ಲಿಗೆ ಮೂರೂವರೆ ಗಂಟೆ ರಸ್ತೆ ಪಯಣ. ರಸ್ತೆಯಂತೂ ಬಲುಚಂದ. ಜೊತೆಗೆ ಪ್ರಯಾಣದುದ್ದಕ್ಕೂ ಜೊತೆಯಾಗುವುದು ದಟ್ಟ ಅರಣ್ಯ ಮತ್ತು ‘ಬೆರ್ಜಯಹಿಲ್ಸ್’ನ ವಿಹಂಗಮ ನೋಟ. 

 

ನಾನಂತೂ ಕೌಲಾಲಾಂಪುರದಲ್ಲಿ ಹಾಗೂ ಸುತ್ತಮುತ್ತ ಇರುವ ದಟ್ಟಹಸಿರನ್ನು ಕಂಡು ದಂಗಾದೆ. ಆದರೆ, ಕೆಲವು ಪರಿಸರಪ್ರಿಯರು ‘ಛೇ, ದಟ್ಟಕಾಡನ್ನು ಕಡಿದು ನಾಡಾಗಿಸಿದ್ದಾರೆ’ ಎಂದು ಉದ್ಗರಿಸಿರುವುದೂ ಇದೆ. ಇರಲೂಬಹುದು, ‘ಅಭಿವೃದ್ಧಿ’ ಎನ್ನುವ ಮಂತ್ರ ಜಪಿಸುವ ಈ ಶತಮಾನದ ವೈರುಧ್ಯ ಇದುವೇ ಅಲ್ಲವೇ? ಒಂದನ್ನು ಕಳೆದುಕೊಂಡು ಇನ್ನೊಂದನ್ನು ಗಳಿಸುವುದು.

 

ಮಲೇಷ್ಯಾದ ಹೆದ್ದಾರಿಗಳು ಕೂಡ ಆಕರ್ಷಕವಾಗಿವೆ. ಹೈವೇ ಪಕ್ಕದಲ್ಲಿ ಉದ್ದಕ್ಕೂ ಬೆಟ್ಟಗಳಿವೆ. ಆದರೆ, ಅವುಗಳನ್ನು ಯಥಾವತ್ತು ಹಾಗೇ ಬಿಟ್ಟಿಲ್ಲ. ಕೆಳಗಿಂದ ಮೇಲಿನವರೆಗೂ ಮೆಟ್ಟಿಲುಗಳಂತೆ ‘ಲೆವೆಲ್’ಗಳನ್ನು ನಿರ್ಮಿಸಿ, ಅಲ್ಲಿ ಕೂಡ ಹಸಿರನ್ನು ಬೆಳೆಸಿದ್ದಾರೆ. ಹಾಗಾಗಿ ಎಷ್ಟೇ ಮಳೆ ಸುರಿದರೂ (ಇಲ್ಲಿ ಹಗಲೆಲ್ಲ ರಣರಣ ಬಿಸಿಲು, ಸಂಜೆ ಅಬ್ಬರದ ಮಳೆ) ಬೆಟ್ಟಗಳಲ್ಲಿ ಭೂಕುಸಿತ ಉಂಟಾಗುವುದಿಲ್ಲ. ಹೆದ್ದಾರಿಯಲ್ಲಿ ಅಪಘಾತ, ಜೀವಹಾನಿ ಆಗುವುದಿಲ್ಲ. ಅಂಚಿನ ಮಣ್ಣು ರಸ್ತೆಗೆ ಬರುವುದಿಲ್ಲ. 

 

ರಾಷ್ಟ್ರೀಯ ಉದ್ಯಾನದ ಹೆಬ್ಬಾಗಿಲಾದ ಕೌಲಾತಹನ್ ಎನ್ನುವ ಪುಟ್ಟ ಊರು ಸಾಮಾನ್ಯ ಊರೇ ಹೌದು. ಆದರೆ, ಊರಿನ ಸ್ವಚ್ಛತೆ ಎದ್ದುಕಾಣುತ್ತದೆ. ಇಲ್ಲಿ ‘ಟೆಂಬೆಲ್ಲಿಂಗ್’ ನದಿ ಹರಿಯುತ್ತದೆ. ಸದಾಕಾಲ ಸುರಿಯುವ ಮಳೆಯಿಂದಾಗಿ ಈ ನದಿ ತುಂಬಿ ಹರಿಯುತ್ತದೆ ಮತ್ತು ಮಣ್ಣಿನ ಬಣ್ಣವನ್ನು ಹೊಂದಿದೆ. 

 

ಈ ಊರಿನಲ್ಲಿ ನಾಲ್ಕಾರು ಹೋಟೆಲ್‌ಗಳಿದ್ದರೂ, ಹೆಚ್ಚಿನಮಂದಿ ರೆಸಾರ್ಟುಗಳಲ್ಲಿನ ವಾಸ್ತವ್ಯವನ್ನೇ ಬಯಸುತ್ತಾರೆ. ಈ ಅರಣ್ಯದಲ್ಲಿ ರೆಸಾರ್ಟ್‌ ಉದ್ಯಮ ಏರುಗತಿಯಲ್ಲಿದೆ. ನಾವು ತಂಗಿದ್ದು ಹೊಳೆಯಾಚೆಯ ದಡದ ‘ಮುತಿಯಾರಾ ರೆಸಾರ್ಟ್’ನಲ್ಲಿ. 

 

ಹೃದಯದಲಿ ಇದೇನಿದು...

ಊರನ್ನು ಇಬ್ಭಾಗವಾಗಿಸಿದ ಹೊಳೆಯ ಹತ್ತಿರ ಬಂದರೆ ಸಾಕು, ಗಾಳಿಯ ತುಂಬ ಹಸಿರಹವೆಯ ಅನುಭವವಾಗಿ ಕಚಗುಳಿಯಿಟ್ಟಂತೆ ಮನಸ್ಸು ಅರಳಿಬಿಡುತ್ತದೆ. ಕಣ್ಣು ಹಾಯಿಸಿದಲ್ಲೆಲ್ಲಾ ಸಸ್ಯಶಾಮಲೆಯ ಉನ್ಮೇಷ. ಭರಪೂರವಾಗಿ ತುಂಬಿಹರಿವ ನದಿ, ನದಿಯೊಡಲಲ್ಲಿ ಹಾಯಾಗಿ ತೇಲುವ ದೋಣಿಗಳು, ಪ್ರವಾಸಿಗರ ಸಂಭ್ರಮದ ಮುಖಗಳು, ಹೊಟ್ಟೆಪಾಡಿನ ಸ್ಥಳೀಯರ ಕಾದುನಿಂತ ಮುಖಗಳು, ಪಟ್ಟಣದ ಗಿಲೀಟು ಕಾಣದ ಸ್ವಚ್ಛಂದ ಪ್ರಕೃತಿಯ ಸನ್ನಿಧಾನದಲ್ಲಿ ಮನಸ್ಸಿನ ತುಂಬ ಲಹರಿಯ ತೇಕಾಟವೇ ಸರಿ.  

 

ಊರಿನ ದಿಬ್ಬದಿಂದ ಹೊಳೆಯ ದಡಕ್ಕಿಳಿದು ದೋಣಿಯಲ್ಲಿ ಕೂತು ಆಚೆದಡ ಮುಟ್ಟಿ, ಗುಡ್ಡದ ಮೇಲಣ ರೆಸಾರ್ಟಿಗೆ ಹೋಗಲು ಮೆಟ್ಟಿಲೇರುವಾಗ ಇದು ಪೂರ್ತಿ ನನ್ನ ಮಲೆನಾಡು ಎನ್ನಿಸಿಬಿಟ್ಟಿತು. ಮುಗಿಲುಮುಟ್ಟುವ ಗಗನಚುಂಬಿಗಳಿರದೆ ಮುಗಿಲೇ ಪ್ರಧಾನವಾಗಿ ಕಾಣುವ ಆಕಾಶ, ನದಿಯಲ್ಲಿ ಜಳಕಕ್ಕಾಗಿ ಕಾದಿವೆಯೇ ಎಂದು ಭ್ರಮೆಹುಟ್ಟಿಸುವಂತೆ ನೀರಮೇಲೇ ಕುಳಿತ ಮೋಡಸಾಲು, ಸುತ್ತುವರಿದ ಬೆಟ್ಟಸಾಲು, ಪ್ರವಾಸಿಗರಿಗಾಗಿ ಕಾಡಿನೊಳಗೇ ನಿರ್ಮಿಸಿರುವ ಪುಟ್ಟಪುಟ್ಟ ಮರದ ಜೋಪಡಿಗಳು(ಒಳಗೆ ಹವಾನಿಯಂತ್ರಿತ, ಸಾಲಂಕೃತ ಕೊಠಡಿ), ಇಲ್ಲೇ ವಾಸ್ತವ್ಯ! ರಾತ್ರಿ ‘ಜೀರ್..’ ಎನ್ನುವ ಕಾಡಿನಕೀಟಗಳ ಸದ್ದು. ಹಾರಾಡುವ, ನೆಲದಲ್ಲಿ ಕಣ್ಣೆದುರೇ ಆಟವಾಡುವ ಬಗೆಬಗೆಯ ಹಕ್ಕಿಪಕ್ಷಿಗಳು... ಅಬ್ಬಬ್ಬಾ, ನಾಡಿನ ಗದ್ದಲಗೌಜುಗಳು ಸಾಕಾದವರಿಗೆ ಪೂರ್ತಿ ಕಾಡಿನ ಮೌನಧ್ಯಾನ....!

 

ಆಟ–ನೋಟ ಮತ್ತು ಪಾಠ 

ಇಲ್ಲಿ ಪ್ರವಾಸಿಗರಿಗೆ ಕಾಲಕಳೆಯಲು ಸಾಕಷ್ಟು ಚಟುವಟಿಕೆಗಳಿವೆ. ದಟ್ಟಕಾಡಿನಲ್ಲಿ ವುಡ್‌ವಾಕ್, ನೈಟ್‌ವಾಕ್, ಪರ್ವತಗಳಲ್ಲಿ ಟ್ರೆಕ್ಕಿಂಗ್, ಆನೆ ಸಫಾರಿ, ಗುಹೆಗಳ ಪ್ರವಾಸ, ಹೊಳೆಯಲ್ಲಿ ಗಂಟೆಗಟ್ಟಲೆ ಬೋಟಿಂಗ್, ಮೂಲನಿವಾಸಿಗಳ ತಾಣ, ಕ್ಯಾನೋಪಿ ವಾಕ್ – ಹೀಗೇ ಹತ್ತಾರು ಅತ್ಯಾಕರ್ಷಕ ಚಟುವಟಿಕೆಗಳು ಇವೆ. ಸಾಹಸಪ್ರಧಾನ ಚಟುವಟಿಕೆಗಳೂ ಇವೆ. ಕಗ್ಗತ್ತಲಿನಲ್ಲಿ, ದಟ್ಟಕಾಡಿನಲ್ಲಿ ಹೆಡ್‌ಲೈಟ್ ಕಟ್ಟಿಕೊಂಡು ನಡೆಯುವುದು ಅಳ್ಳೆದೆಯವರಿಗೆ ಕಷ್ಟಸಾಧ್ಯ! 

 

300 ಮೀ ಉದ್ದದ ಇಲ್ಲಿನ ತೂಗುಸೇತುವೆ ಏಳುಭಾಗಗಳಾಗಿ ವಿಂಗಡಣೆಯಾಗಿದೆ. ಈ ತಾಣ ಕಂಡುಬರಲು ಕಾಡಿನಲ್ಲಿ ನಿರ್ಮಿಸಿರುವ ಸರಿಸುಮಾರು ಇನ್ನೂರು ಮೆಟ್ಟಿಲು ಹತ್ತಿ ಅಷ್ಟೇ ಮೆಟ್ಟಿಲು ಇಳಿಯಬೇಕು. ಇನ್ನು ಈ ಸೇತುವೆಯ ತಳ ಕೇವಲ ಒಂದಡಿ ಅಗಲವಿದೆ. ಒಬ್ಬರು ಮಾತ್ರ ಒಮ್ಮೆ ಅಲ್ಲಿ ಇಳಿಯಬೇಕು. ಈ ವ್ಯಕ್ತಿ 2 ಮೀ ಮುಂದೆ ಹೋದಮೇಲೆ ಇನ್ನೊಬ್ಬರು ಪ್ರವೇಶ ಮಾಡಬೇಕು. ಹೀಗಾಗಿ ನಮ್ಮ ತೀರಾ ಸನಿಹದಲ್ಲಿ ಯಾರೂ ಇರುವುದಿಲ್ಲ. ಸೇತುವೆಯ ನಡುವೆ ಬಂದಾಗ ಅದರ ಹೊಯ್ದಾಟ ಕಂಗೆಡಿಸಿಬಿಡುವುದೂ ಉಂಟು.

 

ಹೀಗೆ ಒಮ್ಮೆ ಹತ್ತಿದರೆ, ಭಯವೆಂದು ಹಿಂದಕ್ಕೆ ಬರಲು ಸಾಧ್ಯವೇ ಇಲ್ಲ. ಕೆಳಗಿನ ಪ್ರಪಾತ ನೋಡುತ್ತ, ಸುತ್ತಕಾಡಿನ ಮೌನವನ್ನು ಭರಿಸುತ್ತ, ಒಮ್ಮೊಮ್ಮೆ ಯಾರದೋ ಕಿರುಚುವಿಕೆ ಕೇಳುತ್ತ, ತೂಗಾಡಿಸಿ ಬೆದರಿಸುವ ಹಗ್ಗಸೇತುವೆಯನ್ನೇ ನಂಬುತ್ತ, ಇಂತಹ ಆರುಸೇತುವೆಗಳನ್ನು ಜೊತೆಗೆ, ಇನ್ನೂಒಂದು ಹಗ್ಗದ ಏಣಿಯನ್ನೂ ಹತ್ತಿಳಿದು ಗೆದ್ದು ಹೊರಬಂದಾಗ ಏಳುಸುತ್ತಿನ ಕೋಟೆಯನ್ನು ಜಯಿಸಿದ ಹಿಗ್ಗು ನಮ್ಮ ಮುಖದಲ್ಲಿ...! ಆದರೂ ಇದೆಲ್ಲ ಅಪಾಯಕಾರಿ ಚಟುವಟಿಕೆಗಳೇನಲ್ಲ. ಭದ್ರತಾ ಸಿಬ್ಬಂದಿಯ ಕಣ್ಗಾವಲು ಇರುತ್ತದೆ. 

 

ಇಲ್ಲಿ ನಾವಿದ್ದ ನಾಲ್ಕು ದಿನಗಳಲ್ಲಿ ಮೂರುದಿನ ದಟ್ಟಕಾಡಿನ ಆರ್ಭಟದ ಮಳೆಯನ್ನೂ ಕಂಡಾಯ್ತು. ಮಳೆ ಸುರಿವಾಗ ಅಲ್ಲಿನ ಸೌಂದರ್ಯ, ಕುಟೀರಗಳ ಮರದ ಚಾವಣಿಯಿಂದ ಪಟಪಟನೆಂದು ಸುರಿವ ಮಳೆನೀರಿನ ವೈಭವ, ಮಸುಕಾಗಿ ಕಾಣುವ ಪರ್ವತಸಾಲು, ಮಳೆಯ ಅಭಿಷೇಕಕ್ಕೆ ಧನ್ಯತೆಯನ್ನು ಅನುಭವಿಸುತ್ತ ಧ್ಯಾನಸ್ಥವಾಗಿ ನಿಂತಂತ ವೃಕ್ಷರಾಶಿ – ಇವನ್ನೆಲ್ಲ ವರ್ಣಿಸಲು ಪದಗಳೇ ದೊರಕವು. ಛತ್ರಿಯಂತೂ ಇಲ್ಲಿ ಅತ್ಯವಶ್ಯ. ಸುರಿವ ಮಳೆಯಲ್ಲೇ ಹೊಳೆಯ ದೋಣಿಯಾನ ರೋಚಕ ಅನುಭವ ನೀಡುತ್ತದೆ.

 

**

ಜೀವ ವೈವಿಧ್ಯದ ಅಕ್ಷಯಪಾತ್ರೆ


ಅಪರೂಪದ ಪ್ರಾಣಿ–ಪಕ್ಷಿ ಇಲ್ಲಿವೆ. ಹಂದಿಯಂತೆ ಕಾಣುವ ‘ತೇಪಿರ್’ ಎನ್ನುವ ಪ್ರಾಣಿ ಕತ್ತಲಲ್ಲಿ ಕತ್ತಲಂತೇ ನಡೆಯುವಾಗ, ನಾವದನ್ನು ನೋಡಲು ಮುಗಿಬಿದ್ದು ಹೋದರೂ, ಅದು ನಿರಾತಂಕವಾಗಿ ತಾನೊಬ್ಬನೇ ಇಲ್ಲಿರೋದು ಎಂಬಂತೆ ನಿಧಾನಗತಿಯಲ್ಲಿ ಹೆಜ್ಜೆ ಹಾಕುತಿತ್ತು. ಕಂದುಬಣ್ಣದ ನವಿಲಿನಂಥ ಪಕ್ಷಿಗಳು ಭಯವಿಲ್ಲದೆ ಕುಣಿದು ಕುಪ್ಪಳಿಸಿದ್ದು ಕಾಡಿನ ಸಂಭ್ರಮಕ್ಕೆ ತೋರಣ ಕಟ್ಟಿದಂತಿತ್ತು. 


 


ಅಮ್ಮನ ಮಡಿಲಿನಂಥ ಶುದ್ಧ ಅನುಭವ ಬೇಕೆಂದರೆ, ನಿಜಕ್ಕೂ ಇದು ಪ್ರಶಸ್ತ ತಾಣ. ಕಾಡುಗಳು ನಮ್ಮ ಉಸಿರನ್ನು ಬೆಳೆಸುವ ತಾಯಿಯಿದ್ದಂತೆ. ಅವುಗಳನ್ನು ಕಾಪಾಡಿಕೊಂಡಷ್ಟೂ ಮನುಕುಲಕ್ಕೇ ಲಾಭ. 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry