ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಗರ್: ಮತ್ತೂ ಸನಿಹ...

ವಿಮರ್ಶೆ
Last Updated 14 ಜನವರಿ 2017, 19:30 IST
ಅಕ್ಷರ ಗಾತ್ರ
ಸಿಂಗರ್ ಕತೆಗಳು
ಅನು: ಓ.ಎಲ್. ನಾಗಭೂಷಣಸ್ವಾಮಿ
ಪ್ರ: ಅಭಿರುಚಿ ಪ್ರಕಾಶನ, ನಂ. 386, 14ನೇ ಮೇನ್, 3ನೇ ಕ್ರಾಸ್, ಸರಸ್ವತೀಪುರ, ಮೈಸೂರು–9 
 
**
ಅನುವಾದವೆನ್ನುವುದು ಓ.ಎಲ್. ನಾಗಭೂಷಣಸ್ವಾಮಿ ಅವರಿಗೆ ಅಭಿರುಚಿ ಮತ್ತು ಅನಿವಾರ್ಯ ಅಗತ್ಯಗಳ ಸಂಗತಿ ಮಾತ್ರವಲ್ಲ; ಅದು ಅವರ ಸಾಮಾಜಿಕ ಮತ್ತು ರಾಜಕೀಯ ಆಯ್ಕೆಯೂ ಹೌದು ಎನ್ನುವುದು ಅವರ ಅನುವಾದಗಳ ಬಗ್ಗೆ ಯಾವಾಗಲೂ ನಮ್ಮ ಆಸಕ್ತಿಯನ್ನು ಹೆಚ್ಚಿಸುತ್ತದೆ. ಕೃತಿಯೊಂದನ್ನು ಅನುವಾದಿಸುವಾಗ, ಅದು ಈ ಕಾಲದ ಅಗತ್ಯಕ್ಕಾಗಿ ಸೃಷ್ಟಿಯಾಗುತ್ತಿರುವ ಹೊಚ್ಚ ಹೊಸ ರಚನೆ ಎನ್ನುವ ನಂಬಿಕೆಯಲ್ಲಿ ಓಎಲ್ಎನ್ ತೊಡಗಿಕೊಳ್ಳುತ್ತಾರೆ. ಅವರ ಎಲ್ಲ ಅನುವಾದಗಳೂ ಇದಕ್ಕೆ ಉದಾಹರಣೆ.
 
ಸಿಂಗರ್‌ನ ಕತೆಗಳನ್ನು ಓದುತ್ತಿರುವಾಗ, ನಮ್ಮ ಸಂದರ್ಭದ ಮುಖ್ಯ ಪ್ರಶ್ನೆಗಳೆಲ್ಲ ಸ್ಪಷ್ಟವಾಗುತ್ತಿರುವಂತೆ ಭಾಸವಾಗುವ ಅನುಭವ ಒಂದು ಕಡೆಗಾದರೆ, ಕೊನೆಗೂ ತ್ರಿಕಾಲ ಪ್ರಜ್ಞೆಯ ಶಕ್ತಿ ಇರುವವರು ಮಾತ್ರ ಮುಖ್ಯ ಕತೆಗಾರರಾಗಲು ಸಾಧ್ಯ ಅಲ್ಲವೆ ಎನ್ನುವ ಸತ್ಯದ ದರ್ಶನ ಇನ್ನೊಂದು ಕಡೆ. ಬದುಕು, ವ್ಯಕ್ತಿಗಳು, ಸಂಬಂಧಗಳು ಮತ್ತು ಸಂದರ್ಭಗಳು – ಈ ಯಾವುದನ್ನೂ ಸಿಂಗರ್ ಸಿದ್ಧ ನಿಲುವಿನಲ್ಲಿ, ನೈತಿಕ ಮಾನದಂಡಗಳ ನೆಲೆಯಲ್ಲಿ ಗ್ರಹಿಸುವುದಿಲ್ಲ. ಹಾಗೆಂದು ಯಾರನ್ನೂ ಕರುಣೆಯ ಕೂಸೂ ಆಗಿಸುವುದಿಲ್ಲ. ಅಪರಿಹಾರ್ಯವಾದ ಇಕ್ಕಟ್ಟು ಮತ್ತು ಮಾನವ ದೌರ್ಬಲ್ಯಗಳಲ್ಲಿ ಸಿಂಗರ್ ಮನುಷ್ಯರನ್ನು ಒಳಗಣ್ಣಿನಿಂದ ನೋಡುತ್ತಾ ಹೋಗುತ್ತಾನೆ. ಕನ್ನಡದ ಇತರ ಯಾವುದೇ ಕತೆಗಾರರಷ್ಟೇ ಸಿಂಗರ್ ನಮಗೆ ಆಪ್ತವಾಗುವುದಕ್ಕೆ ಇದೇ ಮೂಲ ಕಾರಣ. ಜಗತ್ತನ್ನೇ ತಲ್ಲಣಗೊಳಿಸಿದ ಯಹೂದಿ ಸವಾಲು ಸಿಂಗರ್‌ಗೆ ವಿಶ್ವದ ಯಾವುದೇ ಭಾಗದಲ್ಲೂ ಯಾವುದೇ ಕಾಲದಲ್ಲೂ ಸಂಭವಿಸಬಹುದಾದ ಸಾಧ್ಯತೆಯಾಗಿ ‘ಕಾಣಿಸಲು’ ಸಾಧ್ಯವಾಗುತ್ತದೆ. ಹಿಂಸೆ ಮತ್ತು ಶೋಷಣೆಗಳು ಮೇರೆ ಮೀರುತ್ತಲೇ ಬಂದಿರುವ ಯಾವುದರ ಜೊತೆಗೂ ಇದನ್ನು ಸಮೀಕರಿಸಿಕೊಳ್ಳಲು ನಾವು ಕಷ್ಟ ಪಡಬೇಕಾಗೇ ಇಲ್ಲ. 
 
‘‘ಅವರಲ್ಲಿ ಧರ್ಮದ ಸುಡು ಉರಿಯನ್ನು ಹೊತ್ತಿಸಿಬಿಟ್ಟಿದ್ದೇನೆ. ಆ ಸೀಮೆಯಲ್ಲಿ ಒಂದೊಂದು ಹಳ್ಳಿಯಲ್ಲೂ ಒಂದು ಚರ್ಚ್ ಇದೆ. ಹತ್ತು ಹತ್ತು ಮನೆಗೊಂದು ದೇಗುಲ ಇದೆ. ...ಇದೆಲ್ಲಾ ಹೀಗಿದ್ದರೂ ಏನಿದ್ದರೂ ಜನ ತಮ್ಮ ನಂಬಿಕೆ, ವಿಶ್ವಾಸ ಬಿಡುವುದೇ ಇಲ್ಲ. ಅನಾದಿ ಕಾಲದಿಂದಲೂ ಇದು ಹೀಗೇ ನಡೆದಿದೆ. ಯಾವ ಮನೆಯೂ ನೆಟ್ಟಗೆ ನಿಂತಿಲ್ಲ. ನೆಲವೆಲ್ಲ ಅರ್ಧ ಕುಸಿದ ಹಾಗಿದೆ’’. 
 
ಈ ನಮ್ಮ ಕಾಲವನ್ನೇ ಸಿಂಗರ್ ವ್ಯಾಖ್ಯಾನಿಸುತ್ತಿರುವುದಲ್ಲವೆ? ತಮ್ಮ ಅನುವಾದಕ್ಕಾಗಿ ಓಎಲ್ಎನ್ ಆರಿಸಿಕೊಂಡಿರುವ ಅನುವಾದಗಳಾದರೂ ಇದಕ್ಕೆ ಪೂರಕವಾದುವೇ ಆಗಿವೆ. ಇಲ್ಲಿರುವ ಹದಿನಾರೂ ಕತೆಗಳು ವೈಯಕ್ತಿಕ ಮತ್ತು ಸಾರ್ವಜನಿಕ ಎಂದು ಬೇರೆ ಮಾಡಲು ಸಾಧ್ಯವಾಗದ ಸಮುದಾಯದ ಕಥನಗಳಾಗಿವೆ. ಕಳೆದುಹೋದ ಕಾಲವೊಂದರ ಕಥನವು ನಮ್ಮ ಕಾಲದ ಕನ್ನಡಿಯಾಗುತ್ತಿದೆ ಎಂದಾಗಲಂತೂ ಆ ಕಥನದ ಮಹತ್ವ ಮತ್ತು ಪ್ರಸ್ತುತತೆ ಇನ್ನೂ ಹೆಚ್ಚಾಗುತ್ತದೆ. ಮತ್ತಷ್ಟು ಆಪ್ತವಾಗಿ ಅದರ ಜೊತೆ ಸಂವಾದಿಸಲು ಸಾಧ್ಯವಾಗುತ್ತದೆ. ಮನುಷ್ಯ ಸ್ವಭಾವವೇ ಮೂಲವಾಗಿ ಬದುಕು ಸಂಗತವೆನಿಸುತ್ತಲೇ ಅಸಂಗತವಾಗುವ ವಿಲಕ್ಷಣತೆಯನ್ನೇ ಎಲ್ಲ ಮಹತ್ವದ ಬರಹಗಾರರೂ ಬೆನ್ನತ್ತುವುದು ಎನ್ನುವುದಕ್ಕೆ ಸಿಂಗರ್ ಬಹುದೊಡ್ಡ ಉದಾಹರಣೆ. ಉರಿಯುವ ಬೆಂಕಿಯಂತಹ ಸಾಮಾಜಿಕ, ರಾಜಕೀಯ ಸಂಗತಿಗಳ ಜೊತೆಗೇ ತೀರಾ ಕ್ಷುಲ್ಲಕವೆನಿಸುವಂತಹ ದೈನಂದಿನ ವಿವರಗಳು ಸೇರಿ, ‘ಇದು ಬಾಳು ನೋಡು, ಇದ ತಿಳಿವೆನೆಂದರೂ ತಿಳಿದ ಧೀರನಿಲ್ಲ’ ಎನ್ನುವ ಉದ್ಗಾರ ಸಹಜವಾಗಿಯೇ ನಮ್ಮ ಮನಸ್ಸಿನಲ್ಲಿ ಹುಟ್ಟುತ್ತದೆ. ಬೇಕು ಬೇಡಗಳ, ವಾಸ್ತವ ಮತ್ತು ಬಯಕೆಗಳ ನಡುವಿನ ಸಂಘರ್ಷವು ಗೊಂದಲಮಯವಾಗುತ್ತಾ ಅಯೋಮಯವಾದ ಒಳಹೊರಗುಗಳಲ್ಲಿ ಮನುಷ್ಯ ತೊಳಲುತ್ತಾ ಹೋಗುವ ‘ಅವಸ್ಥೆ’ಯೊಂದನ್ನು ಸಿಂಗರ್‌ನ ಕಥೆಗಳು ಮಾನವಾನುಭೂತಿಯ ನೆಲೆಯಲ್ಲಿ ಚಿತ್ರಿಸುತ್ತಾ ಹೋಗುತ್ತವೆ. 
 
ಸಿಂಗರ್‌ನ ಬಹಳ ಜನಪ್ರಿಯವಾದ ಕತೆ ‘ಪೆದ್ದ ಗಿಂಪೆಲ್’ ಅನ್ನೇ ಉದಾಹರಣೆಯಾಗಿ ನೋಡಬಹುದು. ಪೆದ್ದ, ಜಾಣ ಎನ್ನುವ ವರ್ಗೀಕರಣಗಳೇ ಹಾಸ್ಯಾಸ್ಪದವಾಗುವಂತೆ ಈ ಕತೆಯಿದೆ. ಇಷ್ಟಕ್ಕೂ ಬದುಕಿನಲ್ಲಿ, ವ್ಯಕ್ತಿಗಳಲ್ಲಿ ಜಾಣತನವೋ ವ್ಯಾವಹಾರಿಕತೆಯೋ ಬೇಕೇ ಎನ್ನುವ ಮೂಲಭೂತವಾದ ಪ್ರಶ್ನೆಯನ್ನು ಈ ಕತೆ ಎತ್ತುತ್ತದೆ. ಈ ಕತೆಯ ಅದ್ಭುತ ಯಶಸ್ಸೆಂದರೆ, ಪೆದ್ದುತನವೆಂದು ಕರೆಯುವ ಗುಣ ಲಕ್ಷಣಗಳನ್ನೇ ಮಾನವೀಯ ಶೋಧವಾಗಿ ಕಾಣಿಸುವುದರಲ್ಲಿ. ಗಿಂಪೆಲ್ ತನ್ನನ್ನು ಪೆದ್ದ ಎಂದು ಅದೆಷ್ಟು ಹೆಸರುಗಳಲ್ಲಿ ಕರೆಯುತ್ತಿದ್ದರು ಎನ್ನುವುದನ್ನು ಹೇಳುವುದಂತೂ ವೈದೃಶ್ಯದ ತುದಿಯಂತೆ ಕಾಣಿಸುತ್ತದೆ. ಇಷ್ಟಾಗಿ ಕತೆಗಾರ ಯಾರ, ಯಾವುದರ ಪರವಾಗಿಯೂ ವಕಾಲತ್ತು ವಹಿಸದೇ ‘ನೋಡಿ ಸ್ವಾಮಿ, ಮನುಷ್ಯರಾಗಿ ಇದು ನಮ್ಮ ಯೋಗ್ಯತೆ , ನಮ್ಮ ಶಕ್ತಿ, ಮಿತಿ ಇಷ್ಟರ ಮೇಲೆ ನೀವೇ ತೀರ್ಮಾನಿಸಿ’ ಎನ್ನುವ ನಿಲುವನ್ನು ತಾಳುತ್ತಾನೆ. ಮಾಸ್ತಿಯಂತಹ ಕತೆಗಾರರು ನೆನಪಾಗುತ್ತಲೇ ಅವರಿಗಿಂತ ಈತ ಭಿನ್ನ ಎನ್ನುವುದೂ ಓದುಗರಿಗೆ ಥಟ್ಟನೆ ಹೊಳೆಯುತ್ತದೆ. ದೊಡ್ಡ ಕತೆಗಾರರ ಸಾಮ್ಯತೆ ಮತ್ತು ಭಿನ್ನತೆಗಳು ಹೀಗೆ ಓದಿಗೆ ದಕ್ಕುವ ಬಗೆಯೇ ರೋಮಾಂಚಕಾರಿಯಾಗಿರುತ್ತದೆ.
 
‘‘ನನ್ನ ಕಾಲ ಬಂದಾಗ ಖುಷಿಯಾಗಿ ಹೊರಡುತ್ತೇನೆ. ಅಲ್ಲಿ ಏನೇ ಇದ್ದರೂ ಎಲ್ಲ ನಿಜವಾಗಿ ಇರುತ್ತವೆ. ತೊಡಕಿಲ್ಲದೆ, ಲೇವಡಿ ಇಲ್ಲದೆ, ಮೋಸವಿಲ್ಲದೆ ನಿಜವಾಗಿ ಇರುತ್ತವೆ. ದೇವರು ದೊಡ್ಡವನು. ಅಲ್ಲಿ ಗಿಂಪೆಲ್‌ನಂಥವನಿಗು ಮೋಸ ಮಾಡುವುದಕ್ಕೆ ಸಾಧ್ಯವೇ ಇಲ್ಲ’’. ಸರಳಾತಿಸರಳ ಎನ್ನುವಂತಿರುವ ಈ ಕತೆ, ಪೆದ್ದ ನಾಮಾಂಕಿತನಾದ ಗಿಂಪೆಲ್‌ನ ಈ ತಾತ್ವಿಕತೆ – ಈ ಎರಡನ್ನೂ ನೋಡುತ್ತಿದ್ದರೆ ‘ಅಬ್ಬಾ ಜೀವನದ ಶಕ್ತಿಯೇ’ ಎನ್ನುವಂತಾಗುತ್ತದೆ. ಅದೆಂಥ ಸ್ಪಷ್ಟತೆಯಲ್ಲಿ ಗಿಂಪೆಲ್ ತನ್ನ ಲೋಕದೃಷ್ಟಿಯನ್ನು ಉದ್ದಕ್ಕೂ ಪ್ರತಿಪಾದಿಸುತ್ತಾನೆಂದರೆ, ‘ಲೀಲೆಯಲಿ ಯಾವುದೂ ವಿಫಲವಲ್ಲ’ ಅನಿಸಿಬಿಡುತ್ತದೆ. ಸಾರ್ಥಕ, ಅರ್ಥಪೂರ್ಣ ಎನ್ನುವ ಬದುಕನ್ನು ಕುರಿತ ನಮ್ಮ ಮಾನದಂಡಗಳು ಮತ್ತು ನಿರೀಕ್ಷೆಗಳೇ ಅಲ್ಲೋಲಕಲ್ಲೋಲವಾಗಿಬಿಡುತ್ತವೆ. ‘ಹಳೆಯ ಪ್ರೀತಿ’, ‘ದಿ ಪವರ್ ಆಫ್ ಡಾರ್ಕ್ ನೆಸ್’, ‘ಪಲಾಯನ’ ಕತೆಗಳೂ ಕೂಡ ಮೊದಲ ಓದಿಗೇ ನಮಗೆ ಆಪ್ತವಾಗುವುದು ಈ ಕಾರಣಕ್ಕೆ.
 
ಒಂದು ಅನುವಾದಿತ ಕೃತಿ ಹೇಗಿರಬೇಕು ಎನ್ನುವುದಕ್ಕೆ ಈ ಕೃತಿಯೊಂದು ಮಾದರಿಯಾಗಿದೆ. ಸಿಂಗರ್‌ನ ಬದುಕು–ಬರಹ ಈ ಎಲ್ಲದರ ಸೂಕ್ತ ಪರಿಚಯ, ಆತನ ಕತೆಗಾರಿಕೆಯ ಅನನ್ಯತೆಯ ಚರ್ಚೆ – ಈ ಎಲ್ಲವೂ ಇಲ್ಲಿರುವುದರಿಂದ ಒಬ್ಬ ಬರಹಗಾರನ ಪೂರ್ಣ ಪರಿಚಯ ಹೊಸ ಓದುಗರಿಗೂ ಸಿಕ್ಕುತ್ತದೆ. ಒಂದು ಸಾಂಸ್ಕೃತಿಕ ಪದಕೋಶವನ್ನೂ ಓಎಲ್ಎನ್ ಸಿದ್ಧಪಡಿಸಿದ್ದಾರೆ. ಇನ್ನೊಂದು ವಿಶೇಷವನ್ನೂ ಇಲ್ಲಿ ಅವರು ಮಾಡಿದ್ದಾರೆ. ಕನ್ನಡದ ಹನ್ನೆರಡು ಕತೆಗಾರರು ಸಿಂಗರ್‌ಗೆ ನೀಡಿರುವ ಸ್ಪಂದನವನ್ನೂ ಇಲ್ಲಿ ಕೊಡಲಾಗಿದೆ. ಈ ಪ್ರಯೋಗವಂತೂ ಸಿಂಗರ್‌ನನ್ನು ಕನ್ನಡೀಕರಿಸುವುದಕ್ಕೆ ಮಾಡಿದ ಸಾರ್ಥಕ ಪ್ರಯತ್ನವೆನಿಸುತ್ತದೆ. ಮಾತ್ರವಲ್ಲ, ಅವನ ಕತೆಗಳಿಗೆ ಸಾಧ್ಯವಿರುವ ಎಷ್ಟೆಲ್ಲ ಸಾಧ್ಯತೆಗಳನ್ನೂ ಈ ಕತೆಗಾರರು ತೆರೆದಿಟ್ಟಿದ್ದಾರೆ. 
 
ಓಎಲ್ಎನ್ ‘ಡಿಕನ್‌ಸ್ಟ್ರಕ್ಷನ್’ನ ಪರಮ ಆರಾಧಕರು. ಅನುವಾದದ ಸಾಂಪ್ರದಾಯಿಕ ನಿಯಮಗಳನ್ನೆಲ್ಲಾ ಅವರು ತಮ್ಮ ಅನುವಾದಗಳಲ್ಲಿ ಉದ್ದಕ್ಕೂ ಮುರಿಯುತ್ತಲೇ ಬಂದಿದ್ದಾರೆ. ಅನುವಾದವನ್ನು ಶಿಷ್ಟಗೊಳಿಸುವುದಕ್ಕಿಂತ ಸಹಜಗೊಳಿಸುವುದರಲ್ಲಿ ಅವರಿಗಿರುವ ನಂಬಿಕೆ ಈ ಅನುವಾದದಲ್ಲಿ ಇನ್ನೂ ಎದ್ದು ಕಾಣುತ್ತದೆ. ನಮ್ಮ ಬಳಕೆಯಲ್ಲಿ ಹಾಸು ಹೊಕ್ಕಾಗಿರುವ ಇಂಗ್ಲಿಷ್ ಪದಗಳನ್ನು ಬಳಸಿಕೊಂಡಿರುವುದು ಅನುವಾದದ ಯಶಸ್ಸಿಗೆ ನೆರವಾಗಿದೆ. ಜಗತ್ತಿನ ಶ್ರೇಷ್ಠ ಕತೆಗಾರನೊಬ್ಬನನ್ನು ಅತ್ಯುತ್ತಮ ಅನುವಾದದ ಮೂಲಕ ಮತ್ತೊಮ್ಮೆ ತಂದಿದ್ದಕ್ಕಾಗಿ ಅಭಿನಂದನೆಗಳು ಮತ್ತು ಕೃತಜ್ಞತೆಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT