ಸೋಮವಾರ, ಏಪ್ರಿಲ್ 19, 2021
31 °C

ದಕ್ಷಿಣ ಏಷ್ಯಾದಲ್ಲಿ ಭಾರತದ ಏಕಸ್ವಾಮ್ಯ

ಜಿ. ಶಿವಕುಮಾರ Updated:

ಅಕ್ಷರ ಗಾತ್ರ : | |

ದಕ್ಷಿಣ ಏಷ್ಯಾದಲ್ಲಿ ಭಾರತದ ಏಕಸ್ವಾಮ್ಯ

ದಕ್ಷಿಣ ಏಷ್ಯಾ  ಕ್ರೀಡಾಕೂಟ ಮತ್ತು ಸ್ಯಾಫ್‌ ಕಪ್‌ ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದು ಫುಟ್‌ಬಾಲ್‌ ಲೋಕದಲ್ಲಿ ಛಾಪು ಮೂಡಿಸಿರುವ ಭಾರತ ಮಹಿಳಾ ತಂಡದವರು ಒಲಿಂಪಿಕ್ಸ್ ಮತ್ತು ವಿಶ್ವಕಪ್‌ಗಳಲ್ಲೂ ಎತ್ತರದ ಸಾಧನೆ ಮಾಡುವ ಭರವಸೆ ಮೂಡಿಸಿದ್ದಾರೆ. ತಂಡದ ಈ ಸಾಧನೆಯ ಹಾದಿಯ ಬಗ್ಗೆ ಜಿ. ಶಿವಕುಮಾರ ಬರೆದಿದ್ದಾರೆ.

ಸಾಫ್‌ ಕಪ್‌ ಮಹಿಳಾ ಫುಟ್‌ಬಾಲ್‌ ಚಾಂಪಿಯನ್‌ ಷಿಪ್‌ನ ಇತಿಹಾಸದ ಪುಟಗಳನ್ನು ಒಮ್ಮೆ ತಿರುವಿ ಹಾಕಿದರೆ ಅಲ್ಲಿ ಭಾರತದ ಹೆಸರು ರಾರಾಜಿಸುತ್ತದೆ.

ಈ ಚಾಂಪಿಯನ್‌ಷಿಪ್‌ನಲ್ಲಿ ತಮಗೆ ಯಾರೂ ಸಾಟಿಯಾಗಲಾರರು ಎಂಬುದನ್ನು ಭಾರತದ ವನಿತೆಯರು ಮತ್ತೊಮ್ಮೆ ನಿರೂಪಿಸಿದ್ದಾರೆ.

ಈ ವರ್ಷದ ಆರಂಭದಲ್ಲಿ ತವರಿನಲ್ಲಿ ನಡೆದಿದ್ದ  ನಾಲ್ಕನೇ ಆವೃತ್ತಿಯಲ್ಲೂ ಪ್ರಶಸ್ತಿ ಎತ್ತಿಹಿಡಿದು ಹೊಸ ಭಾಷ್ಯ ಬರೆದಿರುವ  ತಂಡ   ದಕ್ಷಿಣ ಏಷ್ಯಾದಲ್ಲಿ ತಾನೇ ಸಾಮ್ರಾಟ ಎಂಬುದನ್ನು ಜಗಜ್ಜಾಹೀರು ಮಾಡಿದೆ.

ಸ್ಯಾಫ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತ  ಸೋಲರಿಯದ  ಕುದುರೆಯಂತೆ ಓಡುತ್ತಿದೆ. ಇದುವರೆಗೂ ತಂಡ 19 ಪಂದ್ಯಗಳನ್ನು ಆಡಿದ್ದು ಈ ಪೈಕಿ ಒಂದ ರಲ್ಲಿ ಡ್ರಾ ಮಾಡಿಕೊಂಡಿದ್ದನ್ನು ಬಿಟ್ಟರೆ  ಉಳಿದೆಲ್ಲ ವುಗಳಲ್ಲೂ ಎದುರಾಳಿಗಳ ಸದ್ದಡಗಿಸಿದೆ.

ಇಷ್ಟೇ ಅಲ್ಲದೆ ಇನ್ನೂ ಅನೇಕ ಟೂರ್ನಿಗಳಲ್ಲೂ ಶ್ರೇಷ್ಠ ಆಟ ಆಡಿ ತಂಡ ಕಿರೀಟ ಮುಡಿಗೇರಿಸಿಕೊಂಡಿದೆ.  ತಂಡದ ಈ ಯಶಸ್ಸಿನ ಹಿಂದೆ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ ಶ್ರಮವೂ ಇದೆ.

42 ವರ್ಷಗಳ ಹಿಂದೆ ಫುಟ್‌ಬಾಲ್‌ ಪಯಣ ಆರಂಭಿಸಿದ ತಂಡ   ಈ ಹಾದಿಯಲ್ಲಿ ಹಲವು ಏಳು ಬೀಳುಗಳನ್ನು ಕಂಡಿದೆ.  ಫುಟ್‌ಬಾಲ್‌ ಲೋಕಕ್ಕೆ ಅಡಿ ಇಟ್ಟ ನಾಲ್ಕೇ ವರ್ಷಗಳಲ್ಲಿ ಎಎಫ್‌ಸಿ  ಏಷ್ಯಾಕಪ್‌ನಲ್ಲಿ ಆಡುವ ಅರ್ಹತೆ ಗಳಿಸಿದ್ದ ತಂಡ ಚೊಚ್ಚಲ ಪ್ರಯತ್ನದಲ್ಲೇ ರನ್ನರ್ಸ್‌ ಅಪ್‌ ಸ್ಥಾನ ಗಳಿಸಿ ಈ ಕ್ರೀಡೆಯಲ್ಲಿ ಹೊಸ ಅಧ್ಯಾಯ ಬರೆದಿತ್ತು.

1981ರ ಜೂನ್‌ನಲ್ಲಿ  ಹಾಂಕಾಂಗ್‌ನಲ್ಲಿ ನಡೆದಿದ್ದ  ಪಂದ್ಯವೊಂದರಲ್ಲಿ 5–0 ಗೋಲುಗಳಿಂದ  ಸಿಂಗಪುರವನ್ನು  ಹಣಿದಿದ್ದ ತಂಡ ಅದೇ           ವರ್ಷ ನಡೆದಿದ್ದ ಏಷ್ಯಾಕಪ್‌ನಲ್ಲಿ ಮೂರನೇ ಸ್ಥಾನ ಗಳಿಸಿತ್ತು.

ದಕ್ಷಿಣ ಏಷ್ಯಾ ಕ್ರೀಡಾಕೂಟದಲ್ಲೂ ತಂಡದ ಸಾಧನೆ ಅನನ್ಯ. 2010ರಲ್ಲಿ ಬಾಂಗ್ಲಾದೇಶದಲ್ಲಿ ನಡೆದಿದ್ದ   ಕೂಟದಲ್ಲಿ  ಪ್ರಶಸ್ತಿ ಗೆದ್ದಿದ್ದ ಭಾರತ, ಹೋದ ವರ್ಷ ತವರಿನಲ್ಲಿ ನಡೆದಿದ್ದ ಟೂರ್ನಿಯಲ್ಲೂ ಟ್ರೋಫಿ ಎತ್ತಿ ಹಿಡಿದು ಎಲ್ಲರ ಮನಗೆದ್ದಿತ್ತು.

ಹೀಗೆ ಒಂದೊಂದೆ ಯಶಸ್ಸಿನ ಮೆಟ್ಟಿಲುಗಳನ್ನು ಏರುತ್ತಾ ಸಾಗಿರುವ ತಂಡ ಮುಂದಿನ ದಿನಗಳಲ್ಲಿ ವಿಶ್ವಕಪ್‌ನಂತಹ ಮಹಾಕೂಟಕ್ಕೂ ಅರ್ಹತೆ ಗಳಿಸುವ ಭರವಸೆ ಮೂಡಿಸಿದೆ.

ಎಐಎಫ್‌ಎಫ್‌ನ ಪಣ

ಸ್ಯಾಫ್‌ ಮತ್ತು ದಕ್ಷಿಣ ಏಷ್ಯಾ ಕೂಟಗಳಲ್ಲಿ ಅಮೋಘ ಸಾಮರ್ಥ್ಯ ತೋರಿ ಗಮನ ಸೆಳೆದಿದ್ದ  ತಂಡವನ್ನು  ಇನ್ನಷ್ಟು ಬಲಪಡಿಸಲು ಪಣ ತೊಟ್ಟಿ ರುವ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ ಈ ನಿಟ್ಟಿನಲ್ಲಿ ಹಲವು ಮಹತ್ವದ ಯೋಜನೆಗಳನ್ನು ಹಮ್ಮಿಕೊಂಡಿದ್ದು,  ಎಳವೆಯಿಂದಲೇ ಮಕ್ಕಳಲ್ಲಿ ಫುಟ್‌ಬಾಲ್‌ ಬಗೆಗೆ ಆಸಕ್ತಿ ಮೂಡಿಸುವ ಉದ್ದೇ ಶದಿಂದ  12, 13, 14, 18, 19 ಹೀಗೆ ವಿವಿಧ ವಯೋಮಾನಗಳ ಟೂರ್ನಿಗಳನ್ನು ಆಯೋಜಿಸಿ  ಪ್ರತಿಭಾನ್ವೇಷಣೆಗೆ ನಾಂದಿ ಹಾಡಿದೆ.

ಹೀಗೆ ಹೆಕ್ಕಿ ತೆಗೆದವರಿಗೆ ನುರಿತ ಕೋಚ್‌ಗಳಿಂದ ಗುಣಮಟ್ಟದ ತರಬೇತಿ ಕೊಡಿಸಿ ಪ್ರತಿಭೆಗೆ ಸಾಣೆ ಹಿಡಿಯುವ ಕೆಲಸ ಮಾಡುತ್ತಿದೆ.  2013ರಲ್ಲಿ  ಶ್ರೀಲಂಕಾದಲ್ಲಿ ನಡೆದಿದ್ದ ಎಎಫ್‌ಸಿ 13 ಮತ್ತು 14 ವರ್ಷದೊಳಗಿನವರ ಟೂರ್ನಿಗಳಲ್ಲಿ ಜೂನಿಯರ್‌ ತಂಡಗಳು ಪ್ರಶಸ್ತಿ ಗೆದ್ದಿದ್ದವು. ಈ ಯಶಸ್ಸಿನ ಹಿಂದೆ  ಎಐಎಫ್‌ಎಫ್‌ನ  ಯೋಜನೆ ಕೆಲಸ ಮಾಡಿತ್ತು ಎಂಬುದು ಗಮನಿಸಬೇಕಾದ ಅಂಶ.

ಪುರುಷರ ವಿಭಾಗದ ಐ ಲೀಗ್‌ ಸಾಕಷ್ಟು ಜನ ಮನ್ನಣೆ ಗಳಿಸಿದ್ದು ಈ ಮಾದರಿಯಲ್ಲೇ ಮಹಿಳೆಯರ ವಿಭಾಗದಲ್ಲೂ ಲೀಗ್‌  ನಡೆಸಲು ಫೆಡರೇಷನ್‌ ಚಿಂತನೆ ನಡೆಸಿದೆ. ಇದನ್ನು ಇನ್ನಷ್ಟು ಪರಿಣಾಮಕಾರಿ ಗೊಳಿಸಲು ಮಣಿಪುರ, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರ ಸೇರಿದಂತೆ ಇತರ ರಾಜ್ಯ ಗಳಲ್ಲೂ ಇದರ ಕಂಪು ಪಸರಿಸಲು  ಅಣಿಯಾಗಿದೆ. 

ನನಸಾಗದ ವಿಶ್ವಕಪ್‌ ಅರ್ಹತೆ  ಕನಸು

ದಕ್ಷಿಣ ಏಷ್ಯಾದಲ್ಲಿ ದೊಡ್ಡ ಶಕ್ತಿಯಾಗಿ ಗುರುತಿಸಿಕೊಂಡಿರುವ ಭಾರತ  ಮಹಿಳಾ ತಂಡಕ್ಕೆ ಫಿಫಾ ವಿಶ್ವಕಪ್‌ ಅರ್ಹತೆ ಗಗನ ಕುಸುಮವಾಗಿದೆ.

1999 ಮತ್ತು 2003ರಲ್ಲಿ ಅಮೆರಿಕಾದಲ್ಲಿ ನಡೆದಿದ್ದ ಅರ್ಹತಾ ಟೂರ್ನಿಗಳಲ್ಲಿ ಮುಗ್ಗರಿಸಿದ್ದ ತಂಡ 2007ರಲ್ಲಿ ಚೀನಾದಲ್ಲಿ ನಡೆದಿದ್ದ  ಅರ್ಹತಾ ಹಂತದಲ್ಲೂ ನಿರಾಸೆ ಅನುಭವಿಸಿತ್ತು. 2015 ರಲ್ಲಾ ದರೂ  ಈ ಕನಸು ನನಸಾಗಬಹುದು ಎಂಬ ಫುಟ್‌ ಬಾಲ್‌ ಅಭಿಮಾನಿಗಳ ನಿರೀಕ್ಷೆಯೂ ಹುಸಿಯಾಗಿತ್ತು.

ಎಎಫ್‌ಸಿ ಏಷ್ಯಾಕಪ್‌ನಲ್ಲೂ ತಂಡಕ್ಕೆ ಟ್ರೋಫಿ ಕೈಗೆಟುಕದಾಗಿದೆ. 1979 ಮತ್ತು 1983ರಲ್ಲಿ ಪ್ರಶಸ್ತಿ ಸುತ್ತು ಪ್ರವೇಶಿಸಿ ಸೋತಿದ್ದ ತಂಡ 1981ರಲ್ಲಿ ಮೂರನೇ ಸ್ಥಾನ ಗಳಿಸಿತ್ತು. 1995, 1999, 2001 ಮತ್ತು 2003ರಲ್ಲಿ ನಡೆದಿದ್ದ ಟೂರ್ನಿಗಳಲ್ಲಿ ಗುಂಪು ಹಂತದಲ್ಲೇ ತಮ್ಮ ಅಭಿಯಾನ ಮುಗಿಸಿದ್ದ ವನಿತೆಯರು,  2006, 2008 ಮತ್ತು 2014ರಲ್ಲಿ   ಟೂರ್ನಿಗೆ ಅರ್ಹತೆ ಗಳಿಸಲು ವಿಫಲರಾಗಿದ್ದರು.

ರ‍್ಯಾಂಕಿಂಗ್‌ನಲ್ಲಿ ಎತ್ತರದ ಸಾಧನೆ

2009ರ ಸೆಪ್ಟೆಂಬರ್‌ನಲ್ಲಿ ಫಿಫಾ ಬಿಡುಗಡೆ ಮಾಡಿದ್ದ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಭಾರತ 100ನೇ ಸ್ಥಾನದಲ್ಲಿತ್ತು.

ಆ ನಂತರ    ಪ್ರದರ್ಶನ ಮಟ್ಟ ಉತ್ತಮ ಪಡಿಸಿಕೊಂಡು ಸಾಗಿದ್ದ ತಂಡ  2013ರಲ್ಲಿ 49ನೇ ಸ್ಥಾನಕ್ಕೇರಿ ಸರ್ವಶ್ರೇಷ್ಠ ಸಾಧನೆ  ಮಾಡಿತ್ತು.  ಪ್ರಸ್ತುತ 54ನೇ ಕ್ರಮಾಂಕದಲ್ಲಿರುವ ತಂಡಕ್ಕೆ  ಪಟ್ಟಿಯಲ್ಲಿ ಇನ್ನಷ್ಟು ಎತ್ತರಕ್ಕೆ ಏರುವ ಅವಕಾಶ ಇದೆ.    ಅದಕ್ಕಾಗಿ ಮುಂದಿನ ಟೂರ್ನಿಗಳಲ್ಲಿ ಶ್ರೇಷ್ಠ ಸಾಮರ್ಥ್ಯ ತೋರುವುದು ಅಗತ್ಯ.  

ಪ್ರಸ್ತುತ ತಂಡದ ಬಗ್ಗೆ 

ನಾಯಕಿ: ಒನಿಯಾಮ್‌ ಬೆಂಬೆಮ್‌ ದೇವಿ

ಮುಖ್ಯ ಕೋಚ್‌: ಸಾಜಿದ್‌ ಯೂಸುಫ್‌ ದಾರ್‌

ದೊಡ್ಡ ಅಂತರದ ಗೆಲುವು

18–0  ಭೂತಾನ್‌ ವಿರುದ್ಧ , (ಕಾಕ್ಸ್‌ ಬಜಾರ್‌, ಬಾಂಗ್ಲಾದೇಶ: 13 ಡಿಸೆಂಬರ್‌ 2010).

ಹೀನಾಯ ಸೋಲು

0–16 ಚೀನಾ  ಎದುರು, (ಬ್ಯಾಂಕಾಕ್‌, ಥಾಯ್ಲೆಂಡ್‌: 11 ಡಿಸೆಂಬರ್‌ 2010).

ಒಲಿಂಪಿಕ್ಸ್‌ ಅರ್ಹತೆಯ ಅವಕಾಶ ಕೈಚೆಲ್ಲಿದ ತಂಡ

2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಆಡುವ ಅರ್ಹತೆ ಗಳಿಸಲು ಭಾರತಕ್ಕೆ ಉತ್ತಮ ಅವಕಾಶ ಸಿಕ್ಕಿತ್ತು.

2011ರ ಮಾರ್ಚ್‌ನಲ್ಲಿ ನಡೆದಿದ್ದ ಅರ್ಹತಾ ಸುತ್ತಿನ ಗುಂಪು ಹಂತದ ಮೊದಲ ಪಂದ್ಯದಲ್ಲಿ 3–0 ಗೋಲು ಗಳಿಂದ ಬಾಂಗ್ಲಾದೇಶವನ್ನು ಮಣಿಸಿ ಭರವಸೆ ಮೂಡಿಸಿದ್ದ ತಂಡ ಉಜ್‌ ಬೆಕಿಸ್ತಾನ ವಿರುದ್ಧದ ಮೊದಲ ಲೆಗ್‌ನ ಪಂದ್ಯವನ್ನು 1–1ರಲ್ಲಿ ಸಮಬಲ ಮಾಡಿ ಕೊಂಡಿತ್ತು. ಆದರೆ ಎರಡನೇ ಲೆಗ್‌ನ ಹೋರಾಟದಲ್ಲಿ 1–5 ಗೋಲುಗಳಿಂದ  ಮಣಿದ ಕಾರಣ ತಂಡದ ಒಲಿಂಪಿಕ್ಸ್‌ ಅರ್ಹತೆಯ ಕನಸು ಭಗ್ನಗೊಂಡಿತ್ತು.

ನೆದರ್ಲೆಂಡ್ಸ್‌ ವಿರುದ್ಧ ಐತಿಹಾಸಿಕ ಜಯ

2013ರ ಜನವರಿ 26, ಭಾರತ ಮಹಿಳಾ ತಂಡದ ಪಾಲಿಗೆ ಸ್ಮರಣೀಯ ದಿನವಾಗಿ ಪರಿಣಮಿಸಿತ್ತು. ಅಂದು ನಡೆದಿದ್ದ  ಪಂದ್ಯವೊಂದರಲ್ಲಿ ಭಾರತದ  ವನಿತೆಯರು ಬಲಿಷ್ಠ ನೆದರ್ಲೆಂಡ್ಸ್‌ ತಂಡವನ್ನು ಮಣಿಸಿ ಇತಿಹಾಸ ರಚಿಸಿದ್ದರು.

ನೆದರ್ಲೆಂಡ್ಸ್‌ ತಂಡ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಭಾರತಕ್ಕಿಂತಲೂ 38 ಸ್ಥಾನ ಮೇಲಿದ್ದಿದ್ದರಿಂದ ಆ ಪಂದ್ಯದಲ್ಲಿ ಪ್ರವಾಸಿ ಬಳಗದ ಗೆಲುವು ಸುಲಭ ಎಂದೇ ಭಾವಿಸಲಾಗಿತ್ತು. ಆದರೆ ಮಣಿಪುರದ ಡಿಫೆಂಡರ್‌ ಆಶಾಲತಾ ದೇವಿ ಅವರ ಕಾಲ್ಚಳಕದಲ್ಲಿ ಅರಳಿದ್ದ ಏಕೈಕ ಗೋಲಿನ ಸಹಾಯದಿಂದ ಆತಿಥೇಯರು 1–0 ಗೋಲಿನಿಂದ ಎದುರಾಳಿಗಳಿಗೆ ಆಘಾತ ನೀಡಿ ಫುಟ್‌ಬಾಲ್‌ ಪಂಡಿತರ ಹುಬ್ಬೇರುವಂತೆ ಮಾಡಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.