ದೇಸಿ ಸಾಹಿತ್ಯದ ಫಸಲು ಇಂಗ್ಲಿಷಿನ ಘಮಲು

7

ದೇಸಿ ಸಾಹಿತ್ಯದ ಫಸಲು ಇಂಗ್ಲಿಷಿನ ಘಮಲು

Published:
Updated:
ದೇಸಿ ಸಾಹಿತ್ಯದ ಫಸಲು ಇಂಗ್ಲಿಷಿನ ಘಮಲು

ಭಾರತೀಯ ಸಾಹಿತ್ಯದ ಸಮೃದ್ಧ ಫಸಲು ಜಾಗತಿಕ ಭಾಷೆಯಲ್ಲೂ ದೊರೆಯಬೇಕು ಎನ್ನುವ ಉದ್ದೇಶದಿಂದ ಸ್ಥಾಪಿತವಾದದ್ದು ದಿ ಮೂರ್ತಿ ಕ್ಲಾಸಿಕಲ್ ಲೈಬ್ರರಿ ಆಫ್ ಇಂಡಿಯಾ (ಎಂಸಿಎಲ್ಐ).

ಎರಡು ಸಾವಿರ ವರ್ಷಗಳಷ್ಟು ಹಿಂದಿನ ಶ್ರೇಷ್ಠ ಭಾರತೀಯ ಕೃತಿಗಳನ್ನು ಇಂಗ್ಲಿಷ್ ಭಾಷೆಗೆ ಅನುವಾದಿಸಿ ಸಾಹಿತ್ಯಾಸಕ್ತರ ಮನ ತಣಿಸುವ ಉದ್ದೇಶದಿಂದ ಸ್ಥಾಪಿತವಾದ ಎಂಸಿಎಲ್ಐ ಹಿಂದಿರುವ ಶಕ್ತಿ, ಉದ್ಯಮಿ ನಾರಾಯಣಮೂರ್ತಿ ಅವರ ಮಗ  ರೋಹನ್ ಮೂರ್ತಿ.

ಭಾರತೀಯ ಸಾಹಿತ್ಯದ ಅನೇಕ ಕೃತಿಗಳು ಜಾಗತಿಕ ಸಾಹಿತ್ಯಾಸಕ್ತರಿಗಷ್ಟೇ ಅಲ್ಲ, ಎಷ್ಟೋ ಬಾರಿ ಭಾರತೀಯ  ಓದುಗರ ಕೈಗೆ ನಿಲುಕುವುದಿಲ್ಲ.  ಅಂಥ  ಕೃತಿಗಳು ಜಗತ್ತಿನ ಎಲ್ಲಾ ಸಾಹಿತ್ಯಾಸಕ್ತರಿಗೂ ದೊರೆಯುವಂತಾಗಬೇಕು ಎನ್ನುವ ಆಶಯದಿಂದ ಎಂಸಿಎಲ್ಐ ಯೋಜನೆಯನ್ನು ರೂಪಿಸಲಾಯಿತು.

ಹೊಸ ತಲೆಮಾರಿನ ಓದುಗರಿಗೆ ಶಾಸ್ತ್ರೀಯ ಸಾಹಿತ್ಯದ ಫಸಲು ಸುಲಭವಾಗಿ ತಲುಪಬೇಕೆಂದರೆ ಅನುವಾದ ಅಗತ್ಯವೆಂದು ಮನಗಾಣಲಾಯಿತು. ಅದಕ್ಕಾಗಿಯೇ  ಪ್ರಾದೇಶಿಕ ಭಾಷೆಗಳಲ್ಲಿರುವ ಕೃತಿಗಳನ್ನು ಇಂಗ್ಲಿಷಿಗೆ ಅನುವಾದಿಸುವ ಯೋಜನೆ ಅಸ್ತಿತ್ವಕ್ಕೆ ಬಂತು. ಈ ಯೋಜನೆಯಲ್ಲಿ ಎಷ್ಟೋ ಕೃತಿಗಳು ಮೊದಲ ಬಾರಿಗೆ ಇಂಗ್ಲಿಷಿಗೆ ಅನುವಾದಗೊಂಡಿರುವುದು ವಿಶೇಷ.

ಈಗಾಗಲೇ ಎರಡು ಸರಣಿಗಳಲ್ಲಿ ಪಾಳಿ, ತೆಲುಗು, ತಮಿಳು, ಹಿಂದಿ, ಸಂಸ್ಕೃತ, ಬಂಗಾಳಿ, ಮರಾಠಿ, ಸಿಂಧಿ ಮತ್ತು ಉರ್ದು ಭಾಷೆಗಳ ಕೃತಿಗಳು ಇಂಗ್ಲಿಷ್‌ಗೆ ಅನುವಾದಗೊಂಡಿವೆ.

ಈ ಯೋಜನೆಗೆ ಎಂಸಿಎಲ್‌ಐ ಜತೆಗೆ ಹಾರ್ವರ್ಡ್ ವಿಶ್ವವಿದ್ಯಾಲಯದ ಸಹಯೋಗವಿದ್ದು, 2015ರಲ್ಲಿ ಮೊದಲ ಸರಣಿಯಲ್ಲಿ ಐದು  ಕೃತಿಗಳು, 2016ರಲ್ಲಿ ಎರಡನೇ ಸರಣಿಯಲ್ಲಿ ನಾಲ್ಕು ಕೃತಿಗಳು ಮುದ್ರಣಗೊಂಡಿವೆ.ಇಂಗ್ಲಿಷ್‌ಗೆ ಹರಿಶ್ಚಂದ್ರ ಕಾವ್ಯ: ಮೂರನೇ ಸರಣಿಯಲ್ಲಿ ರಾಘವಾಂಕ ಕವಿಯ ‘ಹರಿಶ್ಚಂದ್ರ ಕಾವ್ಯ’ ಪ್ರಕಟವಾಗುತ್ತಿದೆ. ಜ.16ರಂದು ಈ ಕೃತಿ ಲೋಕಾರ್ಪಣೆಯಾಗುತ್ತಿದೆ.

800 ವರ್ಷಗಳಷ್ಟು ಹಿಂದೆ ರಾಘವಾಂಕ ವಾರ್ಧಕ ಷಟ್ಪದಿಯಲ್ಲಿ ರಚಿಸಿದ್ದ ಹರಿಶ್ಚಂದ್ರನ ಕಾವ್ಯವನ್ನು ಎ.ಆರ್.ಕೃಷ್ಣಶಾಸ್ತ್ರಿ, ಟಿ.ಎಸ್.ವೆಂಕಣ್ಣಯ್ಯ ಸಂಪಾದಿಸಿದ್ದರು. ಪಂಡಿತ್ ಬಸಪ್ಪ ಮತ್ತು ಬಸವಾರಾಧ್ಯ ಅವರು ಹರಿಶ್ಚಂದ್ರ ಕಾವ್ಯದ 728 ಪದ್ಯಗಳನ್ನು ಸಂಗ್ರಹ ರೂಪದಲ್ಲಿ ಮುದ್ರಿಸಿದ್ದರು.

ಅಂಥದೊಂದ್ದು ಕೃತಿಯನ್ನು ಮೂರ್ತಿ ಲೈಬ್ರರಿಗಾಗಿ ಇಂಗ್ಲಿಷಿಗೆ ಅನುವಾದ ಮಾಡಿದ್ದಾರೆ ಲೇಖಕಿ ವನಮಾಲಾ ವಿಶ್ವನಾಥ್‌

ಅಲ್ಲಲ್ಲಿ ಪದ್ಯದ ಸೊಗಸನ್ನು ಉಳಿಸಿಕೊಂಡು ಗದ್ಯ ಸ್ವರೂಪದಲ್ಲಿ ಬಂದಿರುವ ಈ ಕೃತಿ ಇಂಗ್ಲಿಷ್ ಓದುಗರಿಗೆ ಸುಲಭವಾಗಿ ತಲುಪುವ ನಿರೀಕ್ಷೆ ಮೂರ್ತಿ ಲೈಬ್ರರಿಯದ್ದು.

ಒಟ್ಟು 640 ಪುಟಗಳ ಈ ಕೃತಿಯಲ್ಲಿ ಕನ್ನಡ ಮತ್ತು ಇಂಗ್ಲಿಷಿನಲ್ಲಿ ರಾಘವಾಂಕನ ಪದ್ಯಗಳಿವೆ. ಈ ಮೂಲಕ 13ನೇ ಶತಮಾನದ ನಡುಗನ್ನಡದ ಕನ್ನಡ ಸಾಹಿತ್ಯದ ಫಸಲು ಇಂಗ್ಲಿಷಿನಲ್ಲಿ ಘಮಘಮಿಸಲು ಸಿದ್ಧವಾಗಿದೆ.

****

ಸಮಕಾಲೀನ ಸಾಹಿತ್ಯವನ್ನು ಇಂಗ್ಲಿಷಿನಲ್ಲಿ ದಾಟಿಸುವುದೇ ಕಷ್ಟವಾಗಿರುವಾಗ, ನಡುಗನ್ನಡದ ಹರಿಶ್ಚಂದ್ರ ಕಾವ್ಯವನ್ನು ಇಂಗ್ಲಿಷಿಗೆ ಅನುವಾದಿಸಿದ್ದು ನಿಜಕ್ಕೂ ಸವಾಲು.

–ವನಮಾಲಾ ವಿಶ್ವನಾಥ್,

ಅನುವಾದಕಿ


 

‘ದಿ ಲೈಫ್ ಆಫ್  ಹರಿಶ್ಚಂದ್ರ’ ಕೃತಿ ಲೋಕಾರ್ಪಣೆ:

ಮೂಲ– ರಾಘವಾಂಕ, ಇಂಗ್ಲಿಷಿಗೆ ಅನುವಾದ– ವನಮಾಲಾ ವಿಶ್ವನಾಥ್, ಆಯೋಜನೆ–ದಿ ಮೂರ್ತಿ ಕ್ಲಾಸಿಕಲ್‌ ಲೈಬ್ರರಿ ಆಫ್ ಇಂಡಿಯಾ, ಸ್ಥಳ: ಐಟಿಸಿ ಗಾರ್ಡೇನಿಯಾ ಹೋಟೆಲ್‌, ಮೈಸೂರು ಹಾಲ್, ರೆಸಿಡೆನ್ಸಿ ರಸ್ತೆ, ಸೋಮವಾರ ಸಂಜೆ 6.30.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry