6

ಸಚಿವರಿಗೆ ಯೋಗ್ಯವಲ್ಲದ ಬೌದ್ಧಿಕ ಕಸರತ್ತುಗಳು

Published:
Updated:

ಆನ್‌ಲೈನ್‌ ಮಾರಾಟ ಕ್ಷೇತ್ರದಲ್ಲಿನ ಜಗತ್ತಿನ ಅತಿದೊಡ್ಡ ಕಂಪೆನಿಯು ತಲೆಬಾಗುವಂತೆ ಮಾಡಿ ನಮ್ಮ ವಿದೇಶಾಂಗ ಸಚಿವರು ರಾಷ್ಟ್ರದ ಸ್ವಾಭಿಮಾನವನ್ನು ಮತ್ತೆ ಗಳಿಸಿಕೊಟ್ಟಿರುವಂತಿದೆ. ಘಟನೆ ಹೀಗೆ ನಡೆಯಿತು: ಅಮೆಜಾನ್‌ ಕೆನಡಾದ ಆನ್‌ಲೈನ್‌ ಅಂಗಡಿಯ ಚಿತ್ರವೊಂದನ್ನು ಭಾರತೀಯರೊಬ್ಬರು ಜನವರಿ 11ರಂದು ಟ್ವೀಟ್ ಮಾಡಿದರು. ಅದರಲ್ಲಿ ಮಾರಾಟಕ್ಕಿದ್ದ ಕೆಲವು ಕಾಲೊರಸುಗಳು ತ್ರಿವರ್ಣಧ್ವಜದ ಮಾದರಿಯಲ್ಲಿದ್ದವು.

ಸಚಿವೆ ಸುಷ್ಮಾ ಸ್ವರಾಜ್ ಅವರ ಪತ್ರವ್ಯವಹಾರ ನಡೆಸುವವರು, ‘ಮೇಡಂ, ಅಮೆಜಾನ್‌ ಕೆನಡಾ ಕಂಪೆನಿಯನ್ನು ಖಂಡಿಸಬೇಕು. ಭಾರತದ ರಾಷ್ಟ್ರಧ್ವಜದ ಮಾದರಿಯ ಕಾಲೊರಸುಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಬೇಕು. ಈ ಬಗ್ಗೆ ದಯವಿಟ್ಟು ಕ್ರಮ ಕೈಗೊಳ್ಳಿ’ ಎಂದು ಬರೆದರು. ‘ಮೇಡಂ’ ಅವರು ಮೂರು ಟ್ವೀಟ್‌ಗಳ ಮೂಲಕ ಕ್ರಮ ಜರುಗಿಸಿದರು. ಬೆಳಿಗ್ಗೆ 5.43ಕ್ಕೆ ಬರೆದ ಟ್ವೀಟ್‌ನಲ್ಲಿ: ‘ಕೆನಡಾದಲ್ಲಿನ ಭಾರತೀಯ ಹೈಕಮಿಷನ್: ಇದನ್ನು ಒಪ್ಪಲಾಗದು.

ಅಮೆಜಾನ್‌ನ ಉನ್ನತ ಅಧಿಕಾರಿಗಳ ಬಳಿ ಈ ವಿಷಯ ಪ್ರಸ್ತಾಪಿಸಿ’ ಎಂದು ಬರೆಯಲಾಗಿತ್ತು. ಸ್ವರಾಜ್ ಅವರು ಸಂದರ್ಭದ ಗಾಂಭೀರ್ಯವನ್ನು ಅರಿತ ನಂತರ ಮಾಡಿದ ಎರಡನೆಯ ಟ್ವೀಟ್‌ನಲ್ಲಿ: ‘ಅಮೆಜಾನ್‌ ಕಂಪೆನಿಯು ಬೇಷರತ್ ಕ್ಷಮೆ ಕೇಳಬೇಕು. ನಮ್ಮ ರಾಷ್ಟ್ರಧ್ವಜವನ್ನು ಅವಮಾನಿಸುವ ಉತ್ಪನ್ನಗಳನ್ನು ಅವರು ತಕ್ಷಣ ಹಿಂಪಡೆಯಬೇಕು’ ಎಂದು ಬರೆಯಲಾಗಿತ್ತು.

ಎರಡು ನಿಮಿಷಗಳ ನಂತರ ಸ್ವರಾಜ್ ಅವರು ಕೊನೆಯ ಟ್ವೀಟ್ ಮೂಲಕ ಎಚ್ಚರಿಕೆಯೊಂದನ್ನು ರವಾನಿಸಿದರು. ‘ಈ ಕೆಲಸವನ್ನು ತಕ್ಷಣಕ್ಕೆ ಮಾಡದಿದ್ದರೆ ನಾವು ಅಮೆಜಾನ್‌ನ ಯಾವುದೇ ಅಧಿಕಾರಿಗೆ ಭಾರತದ ವೀಸಾ ನೀಡುವುದಿಲ್ಲ. ಮೊದಲು ನೀಡಿದ್ದ ವೀಸಾಗಳನ್ನು ರದ್ದು ಮಾಡುತ್ತೇವೆ’ ಎಂದು ಅದರಲ್ಲಿ ಹೇಳಲಾಗಿತ್ತು.

ಆ ಕಾಲೊರಸು ಸಿದ್ಧಪಡಿಸಿದವರಿಗೆ ಭಾರತದ ಸಂಸ್ಕೃತಿ ಬಗ್ಗೆ ತಿಳಿದಿರಲಿಲ್ಲ. ಪಾಶ್ಚಿಮಾತ್ಯ ದೇಶಗಳಲ್ಲಿನ ಕಾಲೊರಸುಗಳಲ್ಲಿ ‘ಸುಸ್ವಾಗತ’ ಎಂಬ ಬರಹ ಇರುತ್ತದೆ. ಅವುಗಳ ಮೇಲೆ ಕಾಲಿಡುವುದು ಸಾಂಸ್ಕೃತಿಕ ಅಪರಾಧ ಅಲ್ಲ. ಅಲ್ಲಿ, ವಿವಿಧ ದೇಶಗಳ ರಾಷ್ಟ್ರಧ್ವಜಗಳ ಬಣ್ಣದ ಕಾಲೊರಸು ಸಿದ್ಧಪಡಿಸಲಾಗುತ್ತದೆ. ಜನ ತಮಗೆ ಬೇಕಾಗಿದ್ದನ್ನು ಹೆಮ್ಮೆಯಿಂದ ಖರೀದಿಸುತ್ತಾರೆ. ಭಾರತದಲ್ಲಿ, ಅಥವಾ ದಕ್ಷಿಣ ಏಷ್ಯಾದಲ್ಲಿ, ಕಾಲುಗಳು ಸ್ವಚ್ಛವಾಗಿರುವುದಿಲ್ಲ ಎಂಬ ನಂಬಿಕೆ ಇದೆ (ಬಹುಶಃ, ನಾವು ನಮ್ಮ ಸುತ್ತಲಿನ ಜಾಗವನ್ನು ಸ್ವಚ್ಛವಾಗಿಟ್ಟುಕೊಳ್ಳದಿರುವುದಕ್ಕೆ ಇರಬಹುದು). ಹಾಗಾಗಿ ನಮ್ಮಲ್ಲಿ ಕಾಲೊರಸುಗಳನ್ನು ಬೇರೆಯದೇ ದೃಷ್ಟಿಯಿಂದ ಕಾಣಲಾಗುತ್ತದೆ.

ಟ್ವೀಟ್‌ಗಳಿಗೆ ತಕ್ಷಣ ಪ್ರತಿಕ್ರಿಯಿಸಿದ ಅಮೆಜಾನ್‌ ಕೆನಡಾ, ಈ ಕಾಲೊರಸಿನ ಲಿಂಕ್‌ಅನ್ನು ತೆಗೆಯಿತು. ಆ ಕಾಲೊರಸನ್ನು ಒಬ್ಬ ಮಾರಾಟಗಾರ ಅಮೆಜಾನ್‌ ಮೂಲಕ ಮಾರಾಟಕ್ಕೆ ಇಟ್ಟಿದ್ದ. ಅಮೆಜಾನ್‌ ಎಂಬುದು ಮಾರುಕಟ್ಟೆ ಮಾತ್ರ. ಅಲ್ಲಿ ಬೇರೆ ಬೇರೆ ವಸ್ತುಗಳನ್ನು ಮಾರಾಟಕ್ಕೆ ಇಡಲಾಗುತ್ತದೆ.

ಟ್ವಿಟರ್‌ನಲ್ಲಿ ಬಂದ ಬಹುತೇಕ ಪ್ರತಿಕ್ರಿಯೆಗಳು ಸ್ವರಾಜ್‌ ಕೈಗೊಂಡ ಕ್ರಮದ ಪರ ಇದ್ದವು. ಏಕೆಂದರೆ ಭಾರತದಲ್ಲಿ ‘ರಾಷ್ಟ್ರದ ಹೆಮ್ಮೆ’ ಎಂಬ ಭಾವನೆ ಬಲವಾಗಿದೆ. ಸ್ವರಾಜ್‌ ಅವರು ಅತಿಯಾಗಿ ಪ್ರತಿಕ್ರಿಯೆ ನೀಡಿದರು ಎಂದು ಕೆಲವರು ಭಾವಿಸಿದರು. ‘ಭಾರತದ ಆತ್ಮಾಭಿಮಾನವು ಇಂಥ ಸಂಗತಿಗಳಿಂದ ಹಾನಿಯಾಗುವಷ್ಟು ದುರ್ಬಲವಲ್ಲ.

ಅಮೆಜಾನ್‌ ಕಂಪೆನಿಯು ಭಾರತದಲ್ಲಿ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿರುವ ಕಾರಣ, ಕಂಪೆನಿ ಜೊತೆ ಇನ್ನಷ್ಟು ಗೌರವದಿಂದ ವರ್ತಿಸಬೇಕಿತ್ತು’ ಎಂದು ಇವರು ಹೇಳಿದರು.

ಇದನ್ನು ನಾನು ಒಪ್ಪುವುದಿಲ್ಲ. ಸಂಸ್ಥೆ ಅಥವಾ ವ್ಯಕ್ತಿ ಯಾವುದಾದರೂ/ ಯಾರಾದರೂ ಆಗಿರಲಿ. ಸರ್ಕಾರ ಎಲ್ಲರನ್ನೂ ಒಂದೇ ರೀತಿ ಕಾಣಬೇಕು. ಸ್ವರಾಜ್ ಕೈಗೊಂಡ ಕ್ರಮದ ಬಗ್ಗೆ ನಾನು ಬೇರೆಯದೇ ಆದ ತಕರಾರು ಹೊಂದಿದ್ದೇನೆ. ಮೊದಲನೆಯದು: ಭಾರತದ ಬಗ್ಗೆ ಹಲವರು ಹೊಂದಿರುವ ಅನುಮಾನಗಳು ನಿಜ ಎನ್ನುವಂತಿದೆ ಸ್ವರಾಜ್ ಅವರ ಎಚ್ಚರಿಕೆ ಸಂದೇಶ. ಭಾರತವು ಕಾನೂನಿಗೆ ಅನುಗುಣವಾಗಿ ವರ್ತಿಸುವ ದೇಶ ಅಲ್ಲ, ಅದು ಸರಿಯಾಗಿ ಆಲೋಚನೆ ಮಾಡದೆ ತೀರ್ಮಾನ ಕೈಗೊಳ್ಳುವ ದೇಶ ಎಂಬುದು ಆ ಅನುಮಾನ.

ಅಮೆಜಾನ್‌ ಅಧಿಕಾರಿಗಳು ನಿಯಮಗಳ ಅನುಸಾರ ವೀಸಾ ಪಡೆದಿದ್ದರೆ, ಅವುಗಳನ್ನು ರದ್ದು ಮಾಡುವುದಾಗಿ ಸ್ವರಾಜ್ ಎಚ್ಚರಿಕೆ ನೀಡಿದ್ದು ಯಾವ ಕಾನೂನಿನ ಅಡಿ? ಅಪರಾಧ ಆಗಿದೆ ಎಂದು ಸ್ವರಾಜ್ ಅವರಿಗೆ ಅನಿಸಿದ್ದರೆ, ಕಾನೂನಿಗೆ ಗೌರವ ನೀಡುವ ಪ್ರಜೆಯಾಗಿ ಅವರು ದೂರು ಸಲ್ಲಿಸಬೇಕಿತ್ತು, ಎಫ್‌ಐಆರ್‌ ದಾಖಲಾಗುವಂತೆ ಮಾಡಬೇಕಿತ್ತು. ಇದರ ಬದಲು ಸ್ವರಾಜ್ ಅವರು ಟ್ವಿಟರ್ ಮೂಲಕ ಫತ್ವಾ ಹೊರಡಿಸಿದರು, ದಬ್ಬಾಳಿಕೆಯ ವರ್ತನೆ ತೋರಿದರು.

ಎರಡನೆಯ ವಿಚಾರ ಎಂದರೆ, ಅಮೆಜಾನ್ ಎಂಬುದು ಜಾಗತಿಕ ಮಾರುಕಟ್ಟೆ. ಅದನ್ನು ಸರಿಯಾಗಿ ಗಮನಿಸಿದರೆ, ಅಮೆಜಾನ್‌ನಲ್ಲಿ ಸಿಗುವ ಹಲವು ವಸ್ತುಗಳು ಒಬ್ಬರದಲ್ಲದಿದ್ದರೆ ಇನ್ನೊಬ್ಬರ ದೇವರಿಗೆ, ದೇವದೂತರಿಗೆ ಅವಮಾನ ಆಗುವಂತಿವೆ. ಕಾಲೊರಸನ್ನು ಮಾರಾಟದಿಂದ ಹಿಂಪಡೆದ ನಂತರ ಈ ಸ್ಥಿತಿಯೇನೂ ಬದಲಾಗಿಲ್ಲ ಎಂಬುದನ್ನು ಖಚಿತವಾಗಿ ಹೇಳಬಲ್ಲೆ.

ವಾಸ್ತವವಾಗಿ, ಭಾರತದ ಧ್ವಜ ಇರುವ ಬೂಟುಗಳನ್ನು (ಇದು ಕೂಡ ನಮ್ಮಲ್ಲಿ ತಪ್ಪು) ಮಾರಾಟ ಮಾಡಲಾಗುತ್ತಿದೆ ಎಂಬ ವರದಿಗಳು ಮಾರನೆಯ ದಿನವೇ ಬಂದವು. ಇಂಥದ್ದೊಂದು ವಿಚಾರ ತಮ್ಮ ಗಮನಕ್ಕೆ ಮತ್ತೆ ಬಂದರೆ ಸ್ವರಾಜ್ ಏನು ಮಾಡುತ್ತಾರೆ? ಕೋಪದಿಂದ ಉಂಟಾಗುವ, ಈ ಮಾದರಿಯ ಸಾರ್ವಜನಿಕ ರಾಷ್ಟ್ರೀಯತೆ ನಮ್ಮ ನಾಯಕರಲ್ಲಿ ಬಹುಬೇಗ ಮೂಡುತ್ತದೆ. ಕಳೆದ ವರ್ಷ ಇದೇ ಹೊತ್ತಿನಲ್ಲಿ ನಾವು ರಾಷ್ಟ್ರೀಯತೆಯ ಬಗ್ಗೆಯೇ ಚರ್ಚಿಸುತ್ತಿದ್ದೆವು.

ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಘೋಷಣೆ ಕೂಗಿದ ವಿವಾದ ಚರ್ಚೆಯ ವಸ್ತುವಾಗಿದ್ದು ಕಳೆದ ವರ್ಷದ ಫೆಬ್ರುವರಿಯಲ್ಲಿ. ಅಲ್ಲಿ ಕೂಗಿದ ಘೋಷಣೆಗಳು ದೇಶಕ್ಕೆ ಬಹಳ ಹಾನಿ ಮಾಡಿದವೇನೋ ಎಂಬಂತೆ ಅವು ಮಾಧ್ಯಮಗಳಲ್ಲಿ ಎರಡು ವಾರ ಪ್ರಮುಖ ಸುದ್ದಿಯಾಗಿದ್ದವು. ಈ ಬಗ್ಗೆ ಲೋಕಸಭೆಯಲ್ಲಿ ಮೂರು ದಿನ ಚರ್ಚೆಯಾಯಿತು.

ಅಂದಿನ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರು ಎಷ್ಟು ಭಾವಾವೇಶಕ್ಕೆ ಒಳಗಾಗಿದ್ದರು ಎಂದರೆ, ತಮ್ಮ ಶಿರವನ್ನೇ ಕತ್ತರಿಸಿ ಇಡುವುದಾಗಿ ಹೇಳಿದ್ದರು. ಲಷ್ಕರ್ ಎ ತಯಬಾ ಮತ್ತು ಹಫೀಜ್ ಸಯೀದ್‌ ಈ ಘೋಷಣೆ ಕೂಗಿದ ವಿದ್ಯಮಾನದ ಹಿಂದಿದ್ದಾರೆ ಎಂದು ಗೃಹ ಸಚಿವರು ಹೇಳಿದ್ದರು. ಈ ಚರ್ಚೆಯಲ್ಲಿ ಪ್ರಧಾನಿಯವರೂ ಪ್ರವೇಶಿಸಿದ್ದರು, ‘ಸತ್ಯಮೇವ ಜಯತೇ’ ಎಂದು ಟ್ವೀಟ್ ಮಾಡಿದ್ದರು.

ಘೋಷಣೆ ಕೂಗಿದ ಘಟನೆ ಬಗ್ಗೆ ರಾಷ್ಟ್ರೀಯ ತನಿಖಾ ಸಂಸ್ಥೆ ತನಿಖೆ ನಡೆಸಲಿದೆ ಎಂಬ ಮಾತು ಕೇಳಿಬಂದಿತ್ತು. ತಪ್ಪು ಮಾಡಿದ ಯುವಕರನ್ನು ಬಂಧಿಸಲಾಯಿತು, ಅವರಲ್ಲಿ ಒಬ್ಬ ಪೊಲೀಸ್ ವಶದಲ್ಲಿ ಇದ್ದಾಗಲೇ ಹಲ್ಲೆಗೆ ಒಳಗಾದ.

ಇಷ್ಟೆಲ್ಲ ನಾಟಕಗಳ ನಂತರದ ಫಲಿತಾಂಶ ಏನು? ಬಿಜೆಪಿ ಸರ್ಕಾರ ಇದುವರೆಗೂ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ. ಆಗಿದ್ದು ಆಯಿತು, ಅಷ್ಟೇ! ಸುಷ್ಮಾ ಸ್ವರಾಜ್ ಅವರು ತೋರಿಸಿದ್ದು ಇದೇ ಮಾದರಿಯ ವಂಚನೆಯ, ಡೋಂಗಿ, ನಾಟಕೀಯ, ಭಾವನಾತ್ಮಕ ಹಾಗೂ ತಿರುಳಿಲ್ಲದ ರಾಷ್ಟ್ರೀಯತೆಯನ್ನು. ಇದು ದೇಶದ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡಿದಂತೆ. ಮಹತ್ವದ ಜವಾಬ್ದಾರಿ ಹೊತ್ತಿರುವ ಸಚಿವರು ಇಂಥ ಸರ್ಕಸ್‌ಗಳಲ್ಲಿ ಯಾವತ್ತೂ ಪಾಲ್ಗೊಳ್ಳಬಾರದು.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry