‘ನೋಟು ರದ್ದು: ಸೊಳ್ಳೆ ಕೊಲ್ಲಲು ಕೊಡಲಿ ಬಳಸಿದಂತೆ’

7

‘ನೋಟು ರದ್ದು: ಸೊಳ್ಳೆ ಕೊಲ್ಲಲು ಕೊಡಲಿ ಬಳಸಿದಂತೆ’

Published:
Updated:
‘ನೋಟು ರದ್ದು: ಸೊಳ್ಳೆ ಕೊಲ್ಲಲು ಕೊಡಲಿ ಬಳಸಿದಂತೆ’

ಬೆಂಗಳೂರು: ‘ನೋಟು ರದ್ದತಿ ಕ್ರಮ ಸೊಳ್ಳೆ ಕೊಲ್ಲಲು ಕೊಡಲಿ ಎತ್ತಿದಂತಾಗಿದ್ದು, ಇದು ಸ್ವತಂತ್ರ ಭಾರತದ ವಿತ್ತೀಯ ಮಹಾ ಪ್ರಮಾದ’ ಎಂದು ಹಿರಿಯ ಪತ್ರಕರ್ತ  ಅರುಣ್ ಶೌರಿ ವ್ಯಾಖ್ಯಾನಿಸಿದ್ದಾರೆ.ನಗರದ  ನಿಯಾಸ್‌ನಲ್ಲಿ ಮಂಗಳವಾರ  ‘ಅಭಿವೃದ್ಧಿಯ ರಾಜಕಾರಣ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, ‘ನೋಟು ರದ್ದತಿಯ ಹೊಡೆತದ ಪರಿಣಾಮದಿಂದ ದೇಶವು ಸಾಮಾನ್ಯ ಸ್ಥಿತಿಗೆ ಬರಲು ಕನಿಷ್ಠ ಎರಡು ವರ್ಷವಾದರೂ ಬೇಕು’ ಎಂದರು.ಈ  ಕ್ರಮವು ಸಾಮಾನ್ಯ ಜನರ ಮತ್ತು ಹೂಡಿಕೆದಾರರ ಮನೋಸ್ಥೈರ್ಯವನ್ನೇ ಅಲುಗಾಡಿಸಿದೆ. ಅವರು ಸರ್ಕಾರದ ಮೇಲೆ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದರು.ನೋಟು ರದ್ದತಿಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮವನ್ನು  ಹುಂಬ ಚಕ್ರವರ್ತಿಯೊಬ್ಬನ (ಬಾದ್‌ಷಾ) ಅಪಕ್ವ ನಡವಳಿಕೆಗೆ ಹೋಲಿಸಿದರು.ಅರುಣ್‌ ಶೌರಿ  ಅದನ್ನು ಒಂದು ರೂಪಕದ ಮೂಲಕ ಸಭಿಕರಿಗೆ ವಿವರಿಸಿದ್ದು ಹೀಗೆ;  ಒಮ್ಮೆ  ಬಾದ್‌ಷಾ ತನ್ನ ತೋಟದಲ್ಲಿ ಮುಂಜಾನೆ ವಾಯು ಸೇವನೆಗೆ ಹೊರಟಿದ್ದ. ಆಗ ಸುಂದರವಾದ ಅಪ್ಪಟ ಬಿಳಿಯ ಪಾರಿವಾಳ ನೋಡಿ ಸಂತಸಗೊಂಡ.  ಅದರಿಂದ ರುಚಿಕರ ಬರ್ಫಿ ಮಾಡಬೇಕು ಎಂದು ಬಯಸಿದ. ಅದನ್ನು ಸಹಚರರಿಗೆ ಹೇಳಿದ. ಆತನ ಸುತ್ತಮುತ್ತ ಇದ್ದವರು,  ಇದರಿಂದ ಅದ್ಭುತ ಬರ್ಫಿ ಮಾಡಲು ಸಾಧ್ಯ ಎಂದು ಹೇಳಿ ಸಂಭ್ರಮಿಸಿದರು. ಮೋದಿ ಅವರ ನೋಟು ರದ್ದತಿಯ ಕತೆಯೂ ಹೀಗೆಯೇ ಆಗಿದೆ ಎಂದು ವ್ಯಂಗ್ಯವಾಡಿದರು.ಪ್ರಧಾನಿ ಕಚೇರಿಯು ಆರ್‌ಬಿಐ, ಸಿಬಿಐನಂತಹ ಸ್ವತಂತ್ರ ಸಂಸ್ಥೆಗಳನ್ನು ತಮ್ಮ ತಾಳಕ್ಕೆ ತಕ್ಕಂತೆ ಕುಣಿಸುವ ಮೂಲಕ ಅಡಿಯಾಳಾಗಿಸಿಕೊಂಡಿದೆ. ಈ ಮೂಲಕ ಸಂಸ್ಥೆಗಳ ಸ್ವಾಯತ್ತತೆಗೆ ಸರಿಪಡಿಸಲಾಗದ ಪೆಟ್ಟು ನೀಡಲಾಗುತ್ತಿದೆ. ಸ್ವತಂತ್ರ ಧ್ವನಿಗಳನ್ನು ಮೌನಗೊಳಿಸಲಾಗುತ್ತಿದೆ ಎಂದರು.ಅಭಿವೃದ್ಧಿ ರಾಜಕಾರಣ ಎಂಬುದು ಈಗ ಅವಕಾಶವಾದಿ ರಾಜಕಾರಣವಾಗಿದೆ. ಪರಿಣಿತರ ನೆರವು ಇಲ್ಲದೆ ತಮಗೆ ಕಂಡ ರೀತಿಯಲ್ಲಿ ಯೋಜನೆಗಳನ್ನು ರೂಪಿಸಿ ಅದನ್ನೇ ಅಭಿವೃದ್ಧಿ ಎಂದು ಬಿಂಬಿಸುವ ಪರಿಪಾಠ ಎಲ್ಲ ಪಕ್ಷಗಳಲ್ಲೂ ಬೆಳೆದಿದೆ ಎಂದರು.ದೇಶದಲ್ಲಿ ಅರ್ಹತೆಗೆ ಬೆಲೆಯೇ ಇಲ್ಲವಾಗಿದೆ. ಕೇವಲ ರಾಜಕೀಯ ಲಾಭಕ್ಕಾಗಿ ಮೀಸಲಾತಿ, ಜಾತಿ ರಾಜಕಾರಣವನ್ನು ಪೋಷಿಸುತ್ತಿದ್ದಾರೆ ಮತ್ತು ಇನ್ನಷ್ಟು ವ್ಯಾಪಕಗೊಳಿಸುತ್ತಿದ್ದಾರೆ. ಅಂಬೇಡ್ಕರ್‌ ಹೆಸರನ್ನೂ ಮತ ರಾಜಕೀಯ ಉದ್ದೇಶಕ್ಕಾಗಿ ಬಳಸಲಾಗುತ್ತಿದೆ ಎಂದು ಅರುಣ್‌ ಶೌರಿ ಹೇಳಿದರು.ಅಂಬೇಡ್ಕರ್‌ ಸಂವಿಧಾನ ಕರಡು ರಚನೆ ಸಮಿತಿಯ ಅಧ್ಯಕ್ಷರಾಗಿದ್ದರು. ಆದರೆ, ಸಂವಿಧಾನ ರಚನೆಯಲ್ಲಿ ಬಹುಮುಖ್ಯ ಪಾತ್ರವಹಿಸಿದವರು ಕರ್ನಾಟಕ ಮೂಲದವರೇ ಆದ ಬಿ.ವಿ.ರಾವ್‌.  ಅದರ ಶ್ರೇಯಸ್ಸು ಹೋಗಿದ್ದು ಅಂಬೇಡ್ಕರ್‌ ಅವರಿಗೆ. ಈ ಬಗ್ಗೆಯೂ ಮುಕ್ತವಾಗಿ ಮಾತನಾಡುವಂತಿಲ್ಲ ಎಂದು ಶೌರಿ ವಿಷಾದಿಸಿದರು.ಉತ್ತರದಾಯಿತ್ವ ಇಲ್ಲದ ಮಾಧ್ಯಮ

ಬಹುಪಾಲು ಮಾಧ್ಯಮಗಳು ಉತ್ತರದಾಯಿತ್ವ ಇಲ್ಲದಂತೆ ವರ್ತಿಸುತ್ತಿವೆ. ಒಂದಲ್ಲ ಒಂದು ಪಕ್ಷ ಅಥವಾ ರಾಜಕೀಯ ನಾಯಕರೊಂದಿಗೆ ತಳುಕು ಹಾಕಿಕೊಂಡಿವೆ ಎಂದು ಶೌರಿ ಹೇಳಿದರು.

ಸಾಮಾಜಿಕ ಮಾಧ್ಯಮಗಳಲ್ಲಿ ನರೇಂದ್ರಮೋದಿ ವಿರೋಧಿಗಳನ್ನು ಅತ್ಯಂತ ಕೆಟ್ಟದಾಗಿ ಬೈಯ್ಯುವವರಿಗೆ ಬಿಜೆಪಿಯಲ್ಲಿ ಮಣೆ ಹಾಕಲಾಗಿದೆ. ಒಟ್ಟಾರೆ, ಮಾಧ್ಯಮ ಈಗ ದೇಶದ  ಸಮಸ್ಯೆಯ ಒಂದು ಭಾಗವಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry