ಕೂಚಿಪುಡಿ ನೃತ್ಯವೈಭವದ ರಸಧಾರೆ

7
ನೃತ್ಯಲೋಕ

ಕೂಚಿಪುಡಿ ನೃತ್ಯವೈಭವದ ರಸಧಾರೆ

Published:
Updated:
ಕೂಚಿಪುಡಿ ನೃತ್ಯವೈಭವದ ರಸಧಾರೆ

ಉದಯೋನ್ಮುಖ ನೃತ್ಯ ಕಲಾವಿದೆ ಮಹಿಮಾ   ಅವರು ಜೆ.ಎಸ್.ಎಸ್. ಸಭಾಂಗಣದಲ್ಲಿ ಇತ್ತೀಚೆಗೆ ಕೂಚಿಪುಡಿ ರಂಗಪ್ರವೇಶ  ಮಾಡಿದರು.ಗುರು ರಾಜಶ್ರೀ ಹೊಳ್ಳ ಅವರೊಂದಿಗೆ ಜೊತೆಯಾಗಿ ಅನೇಕ ಪ್ರತಿಷ್ಠಿತ ಕಲೋತ್ಸವಗಳಲ್ಲಿ ಪಾಲ್ಗೊಂಡ ಅನುಭವವಿರುವ ಮಹಿಮಾ, ದಾಸಶ್ರೇಷ್ಠ ಪುರಂದರದಾಸರ (ರಾಗ-ಹಂಸಧ್ವನಿ, ಆದಿತಾಳ) ‘ಗಜವದನ ಬೇಡುವೆ’ ಕೃತಿಗೆ ಪರಿಣಾಮಕಾರಿಯಾಗಿ ನರ್ತಿಸಿದಳು.  ಮುಂದಿನ ಕೃತಿ ‘ಹರ ಹರ ಶಂಭೋ, ಶಿವ ಶಿವ ಶಂಭೋ’ವನ್ನು ಅನುಪಮವಾಗಿ ಪ್ರದರ್ಶಿಸಿದಳು.ಮುಂದಿನ ಸಂಚಾರಿಯ ಭಾಗವಂತೂ ಕಣ್ಣಿಗೆ ಕಟ್ಟುವ ದೃಶ್ಯಾತ್ಮಕ ಸೊಬಗು ಪಡೆದಿತ್ತು. ಶಿವನ ದರ್ಶನಕ್ಕೆ ಕೈಲಾಸಕ್ಕೆ ಬಂದ ರಾವಣನನ್ನು ನಂದಿ ತಡೆದಾಗ, ಭಕ್ತಿಭಾವದಿಂದ ಪ್ರದಕ್ಷಿಣೆ ಹಾಕುವ ಅವನ ಆರ್ತತೆಯನ್ನು, ದೇವನನ್ನು ಕಾಣಲೇಬೇಕೆಂಬ ಅಭೀಪ್ಸೆಯನ್ನು ಕಲಾವಿದೆ ತನ್ನ ವೇಗಗತಿಯ, ಸಂಕೀರ್ಣ ಜತಿಗಳ ಚಲನೆಯಿಂದ, ಅರೆಮಂಡಿಯ ಭಾವಾವೇಶದಿಂದ ನೋಡುಗರ ಕಾಣ್ಕೆಗೊಂದು ಕಾವು ತಂದಳು.ರೋಷಾವೀಷ್ಟನಾದ ರಾವಣ ಕೈಲಾಸವನ್ನು ಹಿಡಿದೆತ್ತಿದ ರೀತಿ, ಭಾವಪರವಶನಾಗಿ ತನ್ನ ಕರುಳನ್ನೇ ಬಗೆದು ರುದ್ರವೀಣೆ ಮಾಡಿ ನುಡಿಸಿದ ಬಗೆ ಅನನ್ಯವಾಗಿ ಮೂಡಿಬಂತು. ಅಭಿನಯಕ್ಕೆ ಇಲ್ಲಿ ನಟುವಾಂಗ ಬಳಸಿದ್ದು  ವಿಶೇಷ.ನೃತ್ಯನಾಟಕ ಸಂಪ್ರದಾಯದಲ್ಲಿನ ‘ಕೃಷ್ಣ ಶಬ್ದಂ’ ( ಮೋಹನ ರಾಗ)- ‘ಯದುವಂಶ ಸುಧಾಂಬುಧಿ ಚಂದ್ರ’- ಪರಮಾತ್ಮನೆಡೆ ಜೀವಾತ್ಮನ ಹುಡುಕಾಟವನ್ನು ನಾಯಿಕಾ (ವಾಸಿಕಾಸಜ್ಜಾ) ಪ್ರೇಮಪ್ರಲಾಪದ ರೂಪಕದ ಮೂಲಕ ಚಿತ್ರಿಸುವ ವಿಪ್ರಲಂಭ ಶೃಂಗಾರ ಪ್ರಸ್ತುತಿ. ಅಭಿಸಾರಿಕೆಯಾಗಿ ಹೊರಟ ನಾಯಕಿಯ ರೂಪ-ಲಾವಣ್ಯ, ವಯ್ಯಾರದ ನಡೆ, ಅನುಪಮ ಭಂಗಿಗಳಿಂದ ಮೋಡಿ ಮಾಡಿದಳು.ಮುಂದಿನ ಭಾಗದಲ್ಲಿ, ಊತುಕಾಡು ವೆಂಕಟಸುಬ್ಬಯ್ಯ ರಚನೆಯ ‘ಮರಕತ ಮಣಿಮಯಚೇಲ’ ಸುಂದರಾಂಗ ಶ್ರೀಕೃಷ್ಣನ ಅಸೀಮ ಚೆಲುವನ್ನು ಬಣ್ಣಿಸುವ ಕೃತಿಯಲ್ಲಿ ಕಲಾವಿದೆ ಮೃದಂಗದ ಲಯಕ್ಕೆ ರೋಚಕವಾಗಿ ಹೆಜ್ಜೆಯಿಟ್ಟಳು.ಕೂಚಿಪುಡಿಯ ಪಾರಂಪರಿಕ ಬಂಧ ‘ತರಂಗ’ ಶೃಂಗಾರ ಭಕ್ತಿಪ್ರಧಾನವಾದುದು. ತಾಳಲಯಬದ್ಧ ನಡೆಯ ಇದು ಸಂಗೀತ-ಸಾಹಿತ್ಯದಿಂದ ಕೂಡಿದ ‘ನಾಟ್ಯಯೋಗ’ ವಿದ್ಯೆ, ಮನೋದೃಢತೆಗೆ ಸೂಚಕ. ಹಿತ್ತಾಳೆಯ ತಟ್ಟೆಯ ಅಂಚಿನ ಮೇಲೆ ನಿಂತು ಕಲಾವಿದೆ ಅದೇ ಹಸನ್ಮುಖತೆಯಿಂದ, ವಿವಿಧ ಜತಿಗಳನ್ನು ಲಯಬದ್ಧವಾಗಿ ನಿರ್ವಹಿಸಿದ್ದು, ಕಲಾವಿದೆಯ ರಂಗಪ್ರಜ್ಞೆ ಪ್ರಶಂಸೆಗೆ ಪಾತ್ರವಾಯಿತು.ಕೇದಾರಗೌಳ ರಾಗದ ‘ಪಾತ್ರ ಪ್ರವೇಶ ದರುವು’- ವಿಪ್ರನಾರಾಯಣ ಚರಿತೆ ನೃತ್ಯರೂಪಕದಿಂದ ಆಯ್ದಭಾಗ. ಅರಣ್ಯದ ಮಧ್ಯಭಾಗದಲ್ಲಿ ವಾಸಿಸುತ್ತಿದ್ದ ವಿಪ್ರನಾರಾಯಣನನ್ನು ಹುಡುಕಿಕೊಂಡು ಹೊರಟವಳ ಪರಿಚಯವನ್ನು ಮೂರನೆಯ ವ್ಯಕ್ತಿ  ಮಾಡಿಕೊಡುವ ತಂತ್ರವನ್ನು ಇಲ್ಲಿ ಕಾಣಿಸಲಾಯಿತು.ನಾಟ್ಯಗುರು ರಾಜಶ್ರೀ ಅವರ ನಟುವಾಂಗದೊಡನೆ ರಮಾ ಜಗನ್ನಾಥ್ ಗಾಯನ ಕಾರ್ಯಕ್ರಮಕ್ಕೆ ರಂಗೇರಿಸಿತ್ತು. ಮೃದಂಗದಲ್ಲಿ ಜನಾರ್ಧನ್ ರಾವ್, ಕೊಳಲಿನಲ್ಲಿ ಎಚ್.ಎಸ್. ವೇಣುಗೋಪಾಲ್, ವೀಣೆಯಲ್ಲಿ  ವಿ.ಗೋಪಾಲ್ ಅವರ ವಾದ್ಯಸಹಕಾರ ಸುಮಧುರವಾಗಿ ಬೆರೆತಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry