7

ಗೆಲ್ಲುವುದೇ ‘ಡೊನಾಲ್ಡ್ ಟ್ರಂಪ್‌ ಕಾರ್ಡ್‌’?

ಪೃಥ್ವಿ ದತ್ತ ಚಂದ್ರ ಶೋಭಿ
Published:
Updated:
ಗೆಲ್ಲುವುದೇ ‘ಡೊನಾಲ್ಡ್ ಟ್ರಂಪ್‌ ಕಾರ್ಡ್‌’?

ಇಂದು ಅಮೆರಿಕದ 45ನೆಯ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಲಿದ್ದಾರೆ. ಜಾಗತಿಕ ವ್ಯವಹಾರಗಳಲ್ಲಿ ಎರಡನೆಯ ಮಹಾಯುದ್ಧದ ನಂತರ ಅಮೆರಿಕಕ್ಕಿರುವ ಅಳತೆ ಮೀರಿದ ಪ್ರಭಾವದ ಕಾರಣದಿಂದ ಅಲ್ಲಿನ ಎಲ್ಲ ಹೊಸ ಅಧ್ಯಕ್ಷರ ಬಗ್ಗೆಯೂ ಸಹಜವಾಗಿಯೇ ಕುತೂಹಲವಿರುತ್ತದೆ. ಅದರ ಜೊತೆಗೆ ಕಳೆದ ಶತಮಾನದಲ್ಲಿ ಆಯ್ಕೆಯಾಗಿರುವ ಅಧ್ಯಕ್ಷರ ಪೈಕಿ ಟ್ರಂಪ್ ಅವರದು ಲೆಕ್ಕಕ್ಕೆ ಸಿಗದ, ಯಾವುದೇ ಸ್ಥಿರತೆ ಇಲ್ಲದ ವ್ಯಕ್ತಿತ್ವ. ಹಾಗಾಗಿ ಅವರೇನು ಮಾಡಬಹುದು ಎನ್ನುವ ಕುರಿತಾಗಿ ಕುತೂಹಲದ ಜೊತೆಗೆ ಆತಂಕವೂ ಇದೆ.ಈ ಹಿನ್ನೆಲೆಯಲ್ಲಿ ಈ ವಾರ ಚರ್ಚೆಯಾಗುತ್ತಿರುವ ಮುಖ್ಯ ವಿಚಾರಗಳಿವು. ತಮ್ಮ ಎರಡು ಅವಧಿಗಳನ್ನು ಮುಗಿಸಿ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡುತ್ತಿರುವ ಬರಾಕ್ ಒಬಾಮರ ಸಾಧನೆಗಳು ಮತ್ತು ಬಳುವಳಿ (ಲೆಗಸಿ) ಏನು? ಈ ಚರ್ಚೆಗೆ ಪೂರ್ವಭಾವಿಯಾಗಿ ಎರಡು ವಿಚಾರಗಳನ್ನು ಒಬಾಮರ ಬಗ್ಗೆ ಪ್ರಸ್ತಾಪಿಸಬೇಕು. ಮೊದಲನೆಯದಾಗಿ, ಒಬಾಮರ ಮೇಲಿನ ಎಲ್ಲ ಮೌಲ್ಯಮಾಪನಗಳು ಅವರ ಸಭ್ಯತೆ, ಶಿಷ್ಟ ನಡವಳಿಕೆ ಮತ್ತು ಕುಟುಂಬ ಜೀವನವನ್ನು ಎತ್ತಿಹಿಡಿಯುತ್ತವೆ.ಇದು ಕೇವಲ ಅವರ ವೈಯಕ್ತಿಕ ನಡವಳಿಕೆಗೆ ಸೀಮಿತವಾದುದಲ್ಲ. ಅದರ ಜೊತೆಗೆ ಒಬಾಮರ ಮಂತ್ರಿಮಂಡಳವೂ ಬಹುಮಟ್ಟಿಗೆ ಯಾವುದೇ ಹಗರಣಗಳಲ್ಲಿ ಸಿಕ್ಕಿಕೊಂಡಿರಲಿಲ್ಲ, ಬಹುಮಟ್ಟಿಗೆ ಕಳಂಕರಹಿತವಾಗಿತ್ತು. ಅವರಿಗಿಂತ ಹಿಂದೆ ಎರಡು ಬಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಜಾರ್ಜ್ ಬುಷ್‌, ಬಿಲ್ ಕ್ಲಿಂಟನ್, ರೊನಾಲ್ಡ್ ರೇಗನ್ ಮತ್ತು ರಿಚರ್ಡ್ ನಿಕ್ಸನ್‌ರು ತಮ್ಮ ಎರಡನೆಯ ಅವಧಿಯಲ್ಲಿ ದೊಡ್ಡ ಹಗರಣಗಳಲ್ಲಿ ಸಿಲುಕಿಕೊಂಡಿದ್ದರು.ನಿಕ್ಸನ್ ಅವರಂತೂ ವಾಟರ್‌ಗೇಟ್ ಪ್ರಕರಣದ ತಮ್ಮ ರಾಜಕೀಯ ಎದುರಾಳಿಗಳ ಮೇಲೆ ಗೂಢಚಾರ ನಡೆಸಿದ ಆರೋಪಗಳನ್ನು ಹೊತ್ತು 1974ರಲ್ಲಿ ರಾಜೀನಾಮೆಯನ್ನು ನೀಡಬೇಕಾಯಿತು.ಎರಡನೆಯ ಅಂಶವೆಂದರೆ, ಒಬಾಮ ಒಬ್ಬ ಮಹತ್ವಾಕಾಂಕ್ಷಿ ಅಧ್ಯಕ್ಷ. ತಾನು ಫ್ರಾಂಕ್ಲಿನ್ ಡಿ ರೂಸ್‌ವೆಲ್ಟ್ ಮತ್ತು ರೊನಾಲ್ಡ್ ರೇಗನ್ ಅವರಂತೆ ಪರಿವರ್ತಕ ಅಧ್ಯಕ್ಷನಾಗಬೇಕೆಂದು ಆಶಿಸಿದ್ದರು. 1980ರ ದಶಕದಲ್ಲಿ ರೇಗನ್ ಅಧ್ಯಕ್ಷರಾದ ಕಾಲದಿಂದಲೂ ಸರ್ಕಾರದ ಪಾತ್ರವನ್ನು ಕುಗ್ಗಿಸುವ ಪ್ರಯತ್ನದಲ್ಲಿ ರಿಪಬ್ಲಿಕನ್ನರು ಯಶಸ್ವಿಯಾಗಿದ್ದರು. ಅದನ್ನು ಬದಲಿಸುವ ಮಹತ್ವಾಕಾಂಕ್ಷೆ ಒಬಾಮರದು. ರೂಸ್‌ವೆಲ್ಟರಂತೆ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳ ಮೂಲಕವೇ ಸಾಮಾಜಿಕ ಭದ್ರತೆಯನ್ನು ಒದಗಿಸಲು ಅವರು ಬಯಸಿದ್ದರು.2008ರ ಎರಡನೆಯ ಭಾಗದಲ್ಲಿ ಪ್ರಾರಂಭವಾದ ಆರ್ಥಿಕ ಕುಸಿತದ ಸಂದರ್ಭದಲ್ಲಿ ಅಧ್ಯಕ್ಷರಾಗಿ ಆಯ್ಕೆಯಾದ ಒಬಾಮ ತಮ್ಮ ಅಧಿಕಾರದ ಅವಧಿಯ ಪ್ರಾರಂಭದಲ್ಲಿಯೇ ದೊಡ್ಡ ಬಿಕ್ಕಟ್ಟೊಂದನ್ನು ಎದುರಿಸಬೇಕಾಯಿತು.ಇದಕ್ಕೆ ಉತ್ತರವಾಗಿ ಅವರು ರೂಪಿಸಿದ ಆರ್ಥಿಕ ಉತ್ತೇಜನ (ಎಕನಾಮಿಕ್ ಸ್ಟಿಮ್ಯುಲಸ್) ಕಾರ್ಯಕ್ರಮವು ಮೂಲಭೂತ ಸೌಕರ್ಯಗಳನ್ನು  ಸೃಷ್ಟಿಸುವ ಸರ್ಕಾರಿ ಯೋಜನೆಗಳು ಮತ್ತು ಖಾಸಗಿ ವಲಯಕ್ಕೆ ಸಾಲ-ಸಬ್ಸಿಡಿಗಳ ಮೂಲಕ ಅಮೆರಿಕದ ಆರ್ಥಿಕ ವ್ಯವಸ್ಥೆಗೆ ಹೊಸ ಚೈತನ್ಯ ನೀಡಿತು ಎನ್ನುವುದರಲ್ಲಿ ಅನುಮಾನವಿಲ್ಲ. ಅದರಲ್ಲೂ ನವೀಕರಿಸಬಹುದಾದ ಇಂಧನಗಳ (ಸೌರಶಕ್ತಿ ಮತ್ತು ಪವನಶಕ್ತಿ) ತಂತ್ರಜ್ಞಾನಗಳು ಮತ್ತು ಉತ್ಪಾದನೆಯ ಮೇಲೆ ಹೂಡಿರುವ ಸುಮಾರು ಹತ್ತು ಸಾವಿರ ಕೋಟಿ ಡಾಲರುಗಳ ಬಂಡವಾಳ ಅಮೆರಿಕದ ಅರ್ಥವ್ಯವಸ್ಥೆಗೆ ಮುಂದಿನ ದಶಕಗಳಲ್ಲಿ ದೊಡ್ಡ ವರವಾಗಲಿದೆ. ಈ ಸಾಧನೆಗಳ ಶ್ರೇಯಸ್ಸನ್ನು ಒಬಾಮರಿಗೆ ಕೊಡಲು ಯಾರೂ ಸಿದ್ಧರಿಲ್ಲ.ಆರ್ಥಿಕ ಕುಸಿತದ ಬಿಕ್ಕಟ್ಟಿನಿಂದ ಅಮೆರಿಕವನ್ನು ಹೊರತರುವ ಪ್ರಯತ್ನದ ಜೊತೆಗೆ ಒಬಾಮ ಅವರ ಮತ್ತೊಂದು ಮಹತ್ವಾಕಾಂಕ್ಷಿ ಪ್ರಯತ್ನವೆಂದರೆ ಅಮೆರಿಕದ ಆರೋಗ್ಯ ವಿಮೆ ವ್ಯವಸ್ಥೆಯನ್ನು ಸರ್ಕಾರದ ಮಧ್ಯಪ್ರವೇಶದ ಮೂಲಕ ವಿಸ್ತರಿಸಿದ್ದು. ‘ಒಬಾಮಕೇರ್’ ಎಂದೇ ಪ್ರಸಿದ್ಧವಾದ ಅವರ ಈ ಪ್ರಯತ್ನ ಎಲ್ಲ ಅಮೆರಿಕನ್ನರಿಗೂ ಆರೋಗ್ಯ ಸೇವೆಗಳನ್ನು ಒದಗಿಸುವ ಉದ್ದೇಶವನ್ನು ಹೊಂದಿತ್ತು.ಹಲವು ದಶಕಗಳಿಂದ ರಿಪಬ್ಲಿಕನ್ ಮತ್ತು ಡೆಮೊಕ್ರಾಟಿಕ್‌ ಪಕ್ಷಗಳಿಗೆ ಸೇರಿದ ಅಧ್ಯಕ್ಷರು ಪ್ರಯತ್ನಿಸಿದ್ದರೂ, ಒಬಾಮರ ತನಕ ಅದನ್ನು ಸಾಧಿಸಲಾಗಿರಲಿಲ್ಲ. ಈಗ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಮತ್ತು ರಿಪಬ್ಲಿಕನ್ ಪಕ್ಷವು ಅಮೆರಿಕದ ಕಾಂಗ್ರೆಸ್ಸಿನ ನಿಯಂತ್ರಣವನ್ನು ಹೊಂದಿದೆ. ಹಾಗಾಗಿ ಒಬಾಮರ ಆರೋಗ್ಯ ವಿಮೆ ಶಾಸನವನ್ನು ವಾಪಸು ಪಡೆಯುವ ಪ್ರಯತ್ನಗಳು ಪ್ರಾರಂಭವಾಗಿವೆ. ಇದರಲ್ಲಿ ರಿಪಬ್ಲಿಕನ್ನರು ಯಶಸ್ವಿಯಾದರೆ ಒಬಾಮರ ಅತಿದೊಡ್ಡ ಸಾಧನೆ ನಗಣ್ಯವಾಗಲಿದೆ.ಒಬಾಮರ ವಿದೇಶಾಂಗ ನೀತಿಯು ಸಹ ಬಹುಮಟ್ಟಿಗೆ ಸಂಯಮದ ನೆಲೆಯ ಮೇಲೆ ರೂಪುಗೊಂಡಿದ್ದಾಗಿತ್ತು. ಬುಷ್‌ ಅವರು ಪ್ರಾರಂಭಿಸಿದ ಇರಾಕ್ ಯುದ್ಧವನ್ನು ತ್ವರಿತವಾಗಿ ಮುಗಿಸಲು ಬಯಸಿದ ಒಬಾಮ, ಮಧ್ಯಪ್ರಾಚ್ಯದ ಇತರ ಕಡೆಗಳಲ್ಲಿ ಘರ್ಷಣೆಗಳು ಮತ್ತು ಗಲಭೆಗಳು ಪ್ರಾರಂಭವಾದಾಗ ಅಮೆರಿಕವೊಂದೇ ಮಧ್ಯಪ್ರವೇಶ ಮಾಡುವುದನ್ನು ಬಯಸಲಿಲ್ಲ. ವಿಶ್ವಸಂಸ್ಥೆ ಇಲ್ಲವೆ ಬಹುರಾಷ್ಟ್ರಗಳ ಮೈತ್ರಿಕೂಟದ ಮೂಲಕ ಲಿಬಿಯಾ ಅಥವಾ ಸಿರಿಯಾಗಳಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕೆಂದು ಬಯಸಿದರು.ಹಾಗೆಯೇ ಹವಾಮಾನ ಬದಲಾವಣೆಯನ್ನು ಎದುರಿಸಲು ಬಹುರಾಷ್ಟ್ರೀಯ ಒಪ್ಪಂದಗಳನ್ನು ರೂಪಿಸಲು ಉತ್ಸುಕರಾಗಿದ್ದರು. ಒಬಾಮರ ವಿದೇಶಾಂಗ ನೀತಿಯು ನಾವು ನಿರೀಕ್ಷಿಸುವಷ್ಟು ರ‍್ಯಾಡಿಕಲ್‌  ಅಲ್ಲದಿದ್ದರೂ ಅಮೆರಿಕ ದಲ್ಲಿದ್ದ ಇತರ ರಿಪಬ್ಲಿಕನ್ ಪರ್ಯಾಯಗಳಿಗೆ ಹೋಲಿಸಿದಾಗ, ಹೆಚ್ಚು ವ್ಯಾವಹಾರಿಕವಾದುದು ಮತ್ತು ಅಮೆರಿಕನ್ನರಲ್ಲದವರ ಒಳಿತನ್ನೂ ಗಮನದಲ್ಲಿರಿಸಿಕೊಂಡಿದ್ದು.ಇವುಗಳೆಲ್ಲದರ ಜೊತೆಗೆ ನಾವು ಪರಿಗಣಿಸಬೇಕಾಗಿರುವ ಮತ್ತೊಂದು ಅಂಶವಿದೆ. ಅದೇನೆಂದರೆ ಒಬಾಮ ಕೇವಲ ತಮ್ಮ ಒಲವಿನ ಸಾರ್ವಜನಿಕ ನೀತಿಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಮಾತ್ರ ಆಸಕ್ತಿ ಹೊಂದಿದ್ದವರಲ್ಲ. ಪಕ್ಷ ರಾಜಕಾರಣದ ಮಿತಿಗಳನ್ನು ಮೀರುತ್ತ, ಅವರು ಅಮೆರಿಕದ ರಾಜಕೀಯ ಸಂಸ್ಕೃತಿಯನ್ನು ಬದಲಿಸುವ ಆಶಯವನ್ನು ಹೊಂದಿದ್ದವರು.ತಮ್ಮ ಎದುರಾಳಿಗಳನ್ನು ಕೆಡುಕಿನ ಅವತಾರವೆಂದು ಬಣ್ಣಿಸುವ ಬದಲು, ಅವರನ್ನು ಗೌರವಿಸುವ, ಅವರೊಂದಿಗೆ ಹೊಂದಿರುವ ಸಾಮಾನ್ಯ ಅಂಶಗಳನ್ನು ಹುಡುಕುವ ಆಸಕ್ತಿ ಒಬಾಮರಿಗಿತ್ತು. ಇದು ಒಬಾಮರ ಸ್ವಭಾವದಲ್ಲಿಯೇ ಇದ್ದ ಗುಣ. ಅದರ ಜೊತೆಗೆ ಈ ಬಗೆಯ ಸಮಾಧಾನಿಯಾಗಿರದಿದ್ದರೆ ಒಬಾಮರಂತಹ ಆಫ್ರಿಕನ್ ಅಮೆರಿಕನ್ ವ್ಯಕ್ತಿಯೊಬ್ಬ ಅಧ್ಯಕ್ಷನಾಗಿ ಆಯ್ಕೆಯಾಗುವುದು ಸಾಧ್ಯವಿರಲಿಲ್ಲ. ಅಂದರೆ ಕಪ್ಪು ವರ್ಣೀಯನಾದರೂ ಒಬಾಮ ಉಗ್ರವಾದಿಯಾಗಿರಲಿಲ್ಲ.ನಾಗರಿಕ ಹಕ್ಕುಗಳಿಗಾಗಿ 1950–60ರ ದಶಕಗಳಲ್ಲಿ ಹೋರಾಡಿದ ಮಾರ್ಟಿನ್‌ ಲೂಥರ್ ಕಿಂಗ್ ಇಲ್ಲವೆ ಮಾಲ್ಕಮ್ ಎಕ್ಸ್ ಅವರಂತೆ ಅಮೆರಿಕದ ನಾಗರಿಕತೆಯ ಕಟುವಿಮರ್ಶೆಯನ್ನು ಮಾಡಲಿಲ್ಲ. ವರ್ಣೀಯ ಸಮಸ್ಯೆಗಳು, ಬಡತನ ಮತ್ತು ಆರ್ಥಿಕ ಅಸಮಾನತೆ ಇವುಗಳ ಬಗ್ಗೆ ಮಾತನಾಡುವಾಗಲೂ ಅಮೆರಿಕಕ್ಕೆ ಈ ಸವಾಲುಗಳನ್ನು ಎದುರಿಸುವ ಶಕ್ತಿಯಿದೆ ಎನ್ನುವ ಆಶಾವಾದದ ಮಾತುಗಳನ್ನು ಅವರು ಉದ್ದಕ್ಕೂ ಆಡುತ್ತ ಬಂದರು. ಇದು ಅಮೆರಿಕದ ಮುಖ್ಯವಾಹಿನಿಗೆ ಸೇರಿದವರು ಹೇಳುವ ಮಾತುಗಳು.ಒಬಾಮ ಎದುರಿಸಿದ ವಿಪರ್ಯಾಸವೆಂದರೆ ಇದು: ಅವರು ಸಭ್ಯರು, ಸಮಾಧಾನಿ ಎನ್ನುವ ಕಾರಣದಿಂದಲೇ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಅದೇ ಅವರ ಮಿತಿಯೂ ಆಯಿತು. ಯಾಕೆಂದರೆ ರಾಜಕಾರಣವನ್ನು ಮೀರುವ, ರಾಜಕೀಯ ಭಿನ್ನತೆಗಳನ್ನು ಮರೆಯಬೇಕೆನ್ನುವ ಒಬಾಮರ ಆಶಯಗಳು ವಿಫಲವಾದವು. ರಿಪಬ್ಲಿಕನ್ನರು ಸಹ ಒಬಾಮರಿಗೆ ಯಾವುದೇ ಸಹಕಾರವನ್ನು ನೀಡಬಾರದು,ಅವರು ವಿಫಲರಾಗಬೇಕು ಎನ್ನುವ ನಿಲುವನ್ನು ತಳೆದರು. ಇದು ಅವರ ಅಧಿಕಾರ ಅವಧಿಯ ಪ್ರಾರಂಭದಲ್ಲಿಯೇ ಸ್ಪಷ್ಟವಾದ ವಿಚಾರ. ಹಾಗಾಗಿ ಒಬಾಮರ ಬೆಂಬಲಿಗರು ಸಹ ರಿಪಬ್ಲಿಕನ್ನರ ವಿರುದ್ಧ ಹೆಚ್ಚು ಆಕ್ರಮಕವಾಗಿ ಹೋರಾಡಬೇಕೆಂಬ ನಿರೀಕ್ಷೆಯನ್ನು, ಅವರ ತಾಳ್ಮೆಯ ರಾಜಕಾರಣದ ಬಗ್ಗೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದೂ ಉಂಟು.ಈ ಹಿನ್ನೆಲೆಯಲ್ಲಿ ಟ್ರಂಪ್ ಅಧ್ಯಕ್ಷರಾಗಿರುವುದು ಹಾಗೂ ರಿಪಬ್ಲಿಕನ್ನರು ಅಮೆರಿಕದ ಶಾಸನಸಭೆಗಳ ನಿಯಂತ್ರಣ ಪಡೆದಿದ್ದರೆ ಇದು ಒಬಾಮರ ವೈಫಲ್ಯ ಎಂದೇ ಭಾವಿಸಲಾಗುತ್ತಿದೆ. ಅದರಲ್ಲೂ ಟ್ರಂಪ್‌ರಂತಹ ಜನಾಂಗವಾದಿ (ರೇಸಿಸ್ಟ್), ಅಹಂಕಾರಿ, ಸ್ವಜನಪಕ್ಷಪಾತಿ ಸುಳ್ಳನೊಬ್ಬ ಒಬಾಮರ ಉತ್ತರಾಧಿಕಾರಿಯಾಗುತ್ತಿರುವುದು ವಿಪರ್ಯಾಸವೇ ಸರಿ. ಇವರಿಬ್ಬರ ವ್ಯಕ್ತಿತ್ವಗಳೂ ಇನ್ನೂ ಹೆಚ್ಚು ಭಿನ್ನವಾಗಿರಲು ಸಾಧ್ಯವಿಲ್ಲ ಎನ್ನುವಷ್ಟು ಬೇರೆಯವು.ಒಬಾಮ ಅಧ್ಯಕ್ಷರಾದಾಗ ಅಮೆರಿಕ ತನ್ನ ಜನಾಂಗೀಯ ಇತಿಹಾಸವನ್ನು ಮೀರಿ ಪೋಸ್ಟ್-ರೇಶಿಯಲ್ ಸಮಾಜವಾಗಿದೆ ಎನ್ನುವ ಆಶಾವಾದವಿತ್ತು. 2016ರ ಚುನಾವಣೆಗಳ ಸಂದರ್ಭದಲ್ಲಿ ಕೇಳಿಬಂದ ಶ್ವೇತವರ್ಣೀಯರ ಅಸಹನೆಯ ಮಾತುಗಳ ನಂತರ ಅಂತಹ ಯಾವ ಭ್ರಮೆಗಳೂ ಉಳಿದಿಲ್ಲ. ಆದರೆ ಇಂತಹ ಬೆಳವಣಿಗೆಗಳು ಆಗಿರುವುದು ಸಹ ಒಬಾಮರ ಸೋಲು ಎನ್ನುವ ಅಭಿಪ್ರಾಯವೂ ಮೂಡಿದೆ.ನಾಳಿನ ಟ್ರಂಪ್‌ರ ಅಮೆರಿಕ ಹೇಗೆ ಬದಲಾಗಬಹುದು? ಇಂದು ಅಧಿಕಾರ ಸ್ವೀಕರಿಸುವ ಸಂದರ್ಭದಲ್ಲಿ ಅವರ ಜನಪ್ರಿಯತೆಯ ಪ್ರಮಾಣ ಹಿಂದಿನ ಅಧ್ಯಕ್ಷರಿಗೆ ಹೋಲಿಸಿದರೆ ಗಮನಾರ್ಹವಾಗಿ ಕಡಿಮೆಯಿದೆ. ಅವರ ನೀತಿಗಳೇನಿರಬಹುದು ಎನ್ನುವ ಬಗ್ಗೆ ಅಸ್ಪಷ್ಟತೆಯಿದೆ. ಟ್ರಂಪ್ ಅವರ ವ್ಯಾವಹಾರಿಕ ಹಿತಾಸಕ್ತಿಗಳು ಮತ್ತು ಅಶಿಸ್ತುಗಳ ಕಾರಣದಿಂದಲೇ ಅವರು ತಮ್ಮ ನಾಲ್ಕು ವರ್ಷಗಳ ಮೊದಲ ಅವಧಿ ಮುಗಿಸುವ ಮೊದಲೇ ಅಧಿಕಾರ ಬಿಡಬೇಕಾಗುವ ಪರಿಸ್ಥಿತಿ ಉದ್ಭವವಾಗಬಹುದೇನೊ ಎನ್ನುವ ಮಾತುಗಳೂ ಕೇಳಿಬಂದಿವೆ.ಈ ಹಿನ್ನೆಲೆಯಲ್ಲಿ ಟ್ರಂಪ್ ಅವರಿಗಿಂತ ರಿಪಬ್ಲಿಕನ್ ಪಕ್ಷದ ಇತರ ನಾಯಕರು, ಅದರಲ್ಲೂ ಪ್ರತಿನಿಧಿಗಳ ಸಭೆಯ ಸ್ಪೀಕರ್ ಪಾಲ್ ರಯಾನ್ ಅಂತಹವರು ಹೆಚ್ಚು ಪ್ರಭಾವಿಗಳಾಗಿ ಹೊರಹೊಮ್ಮಬಹುದು. ರಯಾನ್ ಮತ್ತಿತರರ ಮೂಲ ಉದ್ದೇಶ ಒಬಾಮರ ಶಾಸನಗಳನ್ನು, ಅದರಲ್ಲೂ ಮುಖ್ಯವಾಗಿ ‘ಒಬಾಮಕೇರ್’  ರದ್ದು ಮಾಡುವುದು.ಜೊತೆಗೆ ಹಲವಾರು ದಶಕಗಳಿಂದಲೂ ಚಾಲ್ತಿಯಲ್ಲಿರುವ ಮೆಡಿಕೇರ್‌ನಂತಹ ಸಾಮಾಜಿಕ ಭದ್ರತೆಯ ಕಾರ್ಯಕ್ರಮಗಳನ್ನು ಬದಲಿಸಿ, ಸರ್ಕಾರದ ವ್ಯಾಪ್ತಿ- ಪಾತ್ರಗಳನ್ನು ಕುಗ್ಗಿಸುವುದು.  ಟ್ರಂಪ್‌ರ ರಿಪಬ್ಲಿಕನ್ ಸಹೋದ್ಯೋಗಿಗಳಿಗೆ ಜಾಗತಿಕ ವ್ಯವಹಾರಗಳ ಬಗ್ಗೆ ಹೆಚ್ಚಿನ ಆಸಕ್ತಿಯೇನಿಲ್ಲ. ಸ್ವತಃ ಟ್ರಂಪ್ ಅವರೇ ಹವಾಮಾನ ವೈಪರೀತ್ಯ ಮತ್ತು ವ್ಯಾಪಾರಕ್ಕೆ ಸಂಬಂಧಿಸಿದ  ಒಪ್ಪಂದಗಳನ್ನಾಗಲಿ ಹಾಗೂ ಅಮೆರಿಕ ದಶಕಗಳಿಂದ ಭಾಗಿಯಾಗಿರುವ ಮೈತ್ರಿಕೂಟಗಳ ಬಗ್ಗೆ ತಮ್ಮ ಸಂಶಯಗಳನ್ನು ವ್ಯಕ್ತಪಡಿಸಿದ್ದಾರೆ. ಅಮೆರಿಕ ಹಿಂದೆ ನೀಡಿದ್ದ ವಚನಗಳನ್ನು ಪಾಲಿಸದಿರಬಹುದು ಎನ್ನುವ ಮಾತುಗಳನ್ನೂ ಆಡಿದ್ದಾರೆ. ಆದ್ದರಿಂದ ಜಗತ್ತಿನ ಜೊತೆಗೆ ಅಮೆರಿಕದ ಸಂಬಂಧವು ಟ್ರಂಪ್‌ರ ಆಡಳಿತದ ಸಂದರ್ಭದಲ್ಲಿ ಹೇಗಿರುತ್ತದೆ ಎನ್ನುವುದು ಸ್ಪಷ್ಟವಾಗುತ್ತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry