7

ಮಂಟೇಸ್ವಾಮಿ ಪರಂಪರೆ ತೋರಿದ ದಾರಿ

ಪ್ರಸನ್ನ
Published:
Updated:
ಮಂಟೇಸ್ವಾಮಿ ಪರಂಪರೆ ತೋರಿದ ದಾರಿ

ದೈವ ವಿರೋಧಿಗಳು ಎಂಬ ಅನಗತ್ಯ ದೂಷಣೆಗೆ ಒಳಗಾಗಿರುವ ಪ್ರಜ್ಞಾವಂತ ಮಂದಿಯ ಆಸಕ್ತಿ ಕೆರಳಿಸುತ್ತಿರುವ ಒಂದು ವಿಶಿಷ್ಟ ದೈವ ಮಂಟೇಸ್ವಾಮಿ. ಪ್ರಜ್ಞಾವಂತರಲ್ಲಿ ಮಂಟೇಸ್ವಾಮಿಯ ಬಗೆಗಿರುವ ಆಕರ್ಷಣೆಗೆ ಹಲವು ಗಟ್ಟಿ ಕಾರಣಗಳಿವೆ. ಮಂಟೇಸ್ವಾಮಿ ಬಡವರ ದೈವ; ಬಡವರ ದೈವವಾಗಿಯೇ ಆಶ್ಚರ್ಯಕರ ರೀತಿಯಲ್ಲಿ ಈವರೆಗೆ ಉಳಿದು ಬಂದಿರುವ ದೈವ. ಇನ್ನೂ ಎರಡು ಕಾರಣಗಳಿವೆ. ಕತ್ತಲರಾಜ್ಯ ಬೆಳಗಬಲ್ಲ ತಂತ್ರ ಗೊತ್ತು ಮಂಟೇಸ್ವಾಮಿಗೆ. ಮೂರನೆಯ ಕಾರಣವೆಂದರೆ, ಈ ದೈವದ ಮಾಧ್ಯಮ ಭಿಕ್ಷುಕರು.ಮಂಟೇಸ್ವಾಮಿ ಪರಂಪರೆಯಲ್ಲಿ ಭಿಕ್ಷಾವೃತ್ತಿ ಕೀಳರಿಮೆಯಲ್ಲ, ಧಾರ್ಮಿಕ ಘನತೆ ಹೊತ್ತಿರುವ ಒಂದು ವೃತ್ತಿಯದು; ನೀಲಗಾರ ವೃತ್ತಿ. ಯಂತ್ರ ಸಂವಹನದ ಈ ಯುಗದಲ್ಲಂತೂ ನೀಲಗಾರರ  ಸಂವಹನದ ಮಹತ್ವವನ್ನು ಎಷ್ಟು ಹೊಗಳಿದರೂ ಸಾಲದು. ರಾಜಕೀಯ ಕ್ಷೇತ್ರಕ್ಕೆ ಹೋಲಿಸಿ ನೋಡಿದಾಗ,  ನೀಲಗಾರರು ಒಬ್ಬ ರಾಜಕೀಯ  ಕಾರ್ಯಕರ್ತ ಹಾಗೂ ರಾಜ್ಯದ ಪ್ರಜೆಯ ನಡುವೆ ಇರಬೇಕಾದ ಸೂಕ್ತ ಸಂಬಂಧವನ್ನು ಸೂಚಿಸುತ್ತಾರೆ.ಧಾರ್ಮಿಕ ಅರ್ಥದಲ್ಲಿ ನೋಡಿದಾಗ ಪೂಜಾರಿ, ಪುರೋಹಿತ, ಜಂಗಮ, ಪಾದ್ರಿ, ಮುಲ್ಲಾ ಎಂಬಿತ್ಯಾದಿ ಎಲ್ಲ ಮಧ್ಯವರ್ತಿ ವ್ಯವಸ್ಥೆಗಳಿಗಿಂತ ಭಿನ್ನವಾದ, ಸಮರ್ಥವಾದ ಹಾಗೂ ಶೋಷಣಾರಹಿತವಾದ ವ್ಯವಸ್ಥೆ ಇದು ಎಂದು ಸಾಬೀತುಪಡಿಸುತ್ತಾರೆ.ತಾಳ ತಂಬೂರಿ ಹೊತ್ತು ನೂರಾರು ಮೈಲು ನಡೆಯುತ್ತಾರೆ. ಇವರು ಸಮರ್ಥ ಕಾರ್ಯಕರ್ತರೂ ಹೌದು, ಕಲಾವಿದರೂ ಹೌದು, ಒಂದು ಧಾರ್ಮಿಕ ಮಾಧ್ಯಮವೂ ಹೌದು.ಇವರನ್ನು ಬಿಟ್ಟರೆ ಈ ಪರಂಪರೆಗೆ ಹೇಳಿಕೊಳ್ಳುವಂತಹ ಮತ್ತಾವ ವ್ಯವಸ್ಥೆಯೂ ಇಲ್ಲ. ದುಬಾರಿ ದೇವಸ್ಥಾನಗಳಿಲ್ಲ, ಮಠಗಳಿಲ್ಲ, ಪೂಜಾರಿ ಪುರೋಹಿತರಂತೂ ಇಲ್ಲವೇ ಇಲ್ಲ.ಒಂದು ಅಸಾಧಾರಣ ಆಧ್ಯಾತ್ಮಿಕ ಮಾದರಿಯಿದು. ಬೌದ್ಧರ ವ್ಯವಸ್ಥೆಯಲ್ಲಿ ವಿಹಾರಗಳಾದರೂ ಇದ್ದವು. ಬೌದ್ಧರೂ ಸೇರಿದಂತೆ ಇತರೆಲ್ಲ ಧಾರ್ಮಿಕ ವ್ಯವಸ್ಥೆಗಳಲ್ಲಿ ಬಗೆಬಗೆಯ ಸ್ಥಾವರಗಳು ಹಾಗೂ ಆಸ್ತಿಪಾಸ್ತಿ ಲಭ್ಯವಿರುತ್ತಿತ್ತು. ರಾಜರು, ಜಮೀನುದಾರರು, ವೈಶ್ಯರುಗಳ ಸಂಗ ಧಾರ್ಮಿಕ ವ್ಯವಸ್ಥೆಗಳಿಗೆ ಲಭ್ಯವಿರುತ್ತಿತ್ತು. ಮಂಟೇಸ್ವಾಮಿ ಯಾವ ವ್ಯವಸ್ಥೆಯನ್ನೂ ಮಾಡಲಿಲ್ಲ, ಬೇಕೆಂದೇ ಮಾಡಲಿಲ್ಲ. ಮಂಟೇಸ್ವಾಮಿ ಪರಂಪರೆಯ ‘ಬುದ್ಧಿಯೋರು’ ಸಹ ಸೀಮಿತವಾದ ಧರ್ಮದರ್ಶಿ ವ್ಯವಸ್ಥೆ ಮಾತ್ರ.ಹಾಗಂತ ಮಂಟೇಸ್ವಾಮಿ ಕಾಡು ಭೂತವೇನಲ್ಲ. ಒಂದು ವಿಕಸಿತ ಧಾರ್ಮಿಕ ಪರಂಪರೆ ಈ ದೈವಕ್ಕೆ ಲಭ್ಯವಿದೆ. ಜಗತ್ತಿನ ಅತ್ಯಂತ ಪುರಾತನ ಧರ್ಮದಲ್ಲಿ  ಮೊದಲ್ಗೊಳ್ಳುತ್ತದೆ ಈ ಪರಂಪರೆ. ಆ ಧರ್ಮದೊಳಗೆ ಹೆಪ್ಪುಗಟ್ಟಿ ನಿಂತಿದ್ದ ಬ್ರಾಹ್ಮಣ್ಯವೆಂಬ ವಿಷಪೂರಿತ ಕೆನೆಪದರವನ್ನು ಮೊದಲಬಾರಿಗೆ ತೆಗೆದೆಸೆಯುತ್ತದೆ ಹನ್ನೆರಡನೆಯ ಶತಮಾನದ ವಚನ ಚಳವಳಿ. ಆದರೆ, ಹದಿನಾಲ್ಕನೆಯ ಶತಮಾನದ ವೇಳೆಗೆ ವಚನ ಚಳವಳಿಯು ಕಾವಾರಿಸಿಕೊಂಡು  ಪುನಃ ಜಾತಿ ವ್ಯವಸ್ಥೆಯಾಗಿ ಕೆನೆಗಟ್ಟುತ್ತದೆ.ಜಂಗಮರೆಂಬ ವೀರಶೈವ ಬ್ರಾಹ್ಮಣರು ಲಿಂಗಾಯತ ಜನಾಂಗದ ತಲೆಯ ಮೇಲೆ ಹತ್ತಿ ಕೂರುತ್ತಾರೆ. ಇದೇ ಪರಂಪರೆಯಲ್ಲಿ ಮತ್ತೊಂದು ಕ್ರಾಂತಿ ಮಾಡುತ್ತಾನೆ ಮಂಟೇಸ್ವಾಮಿ.  ಕೆಳಜಾತಿ, ಕೆಳವರ್ಗಗಳ ಸಾಮಾಜಿಕ ಚಳವಳಿಯನ್ನು ಮತ್ತೊಮ್ಮೆ ಮುನ್ನೆಲೆಗಿಡುತ್ತಾನೆ.ಮಂಟೇಸ್ವಾಮಿ ಪ್ರಭುದೇವರ ಅವತಾರ.  ಪ್ರಭುದೇವರು ಎರಡನೆಯ ಅವತಾರದಲ್ಲಿ ಬಸವಣ್ಣ, ನೀಲಾಂಬಿಕೆ ಹಾಗೂ ಇತರೆ ಆದ್ಯ ವಚನಕಾರರನ್ನು ಜಂಗಮರ ಕಪಿಮುಷ್ಟಿಯಿಂದ ಬಿಡುಗಡೆಗೊಳಿಸಿ ಸ್ವರ್ಗಕ್ಕೆ ಕಳುಹುತ್ತಾರೆ ಹಾಗೂ  ಜಂಗಮರನ್ನು ಶಪಿಸುತ್ತಾರೆ.  ಚಳವಳಿಯನ್ನು ಹೊಸದಾಗಿ ಕಟ್ಟಲೆಂದೇ ಉತ್ತರದಿಂದ ದಕ್ಷಿಣಕ್ಕೆ ಹೊರಟು, ಆದ್ಯಂತ ನಡೆದು, ನಡೆದ ಹಾದಿಯಲ್ಲಿ  ಆದ್ಯಂತ ಶಿಷ್ಯಗಣವನ್ನು ಪಡೆದು, ಕತ್ತಲೆಯ ರಾಜ್ಯವಾಗಿದ್ದ ದಕ್ಷಿಣವನ್ನು ತಲುಪುತ್ತಾರೆ. ಈಗಿನ ಮಂಡ್ಯ, ಮೈಸೂರು, ಚಾಮರಾಜನಗರ ಜಿಲ್ಲೆಗಳನ್ನು ತಲುಪಿ ಕುಶಲಕರ್ಮಿಗಳು ಹಾಗೂ ಕೃಷಿಕಾರ್ಮಿಕ ಬಡಜನರ ಹೃದಯಗಳಲ್ಲಿ ಕಿರು ಬೆಳಕಾಗಿ ಸ್ಥಾಪಿತವಾಗುತ್ತಾರೆ.ಕಿರು ಬೆಳಕು ಎಂದೆ: ಬೆಳಕು ಯಾವತ್ತೂ ಕಿರಿದು, ಬೆಂಕಿಯೇ ಹಿರಿದು. ತಡವಾಗಿಯಾದರೂ ಸರಿ, ಪ್ರಜ್ಞಾವಂತರಿಗೆ ಸತ್ಯದ ಅರಿವಾಗತೊಡಗಿದೆ. ಬೃಹತ್ ರಾಜ್ಯಗಳು, ರಾಜಕೀಯ ಪಕ್ಷಗಳು, ಆಡಳಿತ ವ್ಯವಸ್ಥೆ ಎಲ್ಲವೂ ಕತ್ತಲೆಯ ರಾಜ್ಯವೇ ಸರಿ ಎಂಬ ಅರಿವಾಗತೊಡಗಿದೆ. ಈವರೆಗೆ ಇವರು ಮಾಡಿದ ರಾಜಕೀಯ ಕ್ರಾಂತಿಗಳೆಲ್ಲವೂ  ಬೆಳಕು ಮೂಡಿಸುವ ಬದಲು ಬೆಂಕಿ ಹಚ್ಚಿದ್ದವು. ಇವರ ಈವರೆಗಿನ  ಸಮಸ್ಯೆ ಸಿಟ್ಟಾಗಿತ್ತು. ವ್ಯವಸ್ಥೆಯ ಮೇಲೆ ವ್ಯರ್ಥ ಹರಿಹಾಯುತ್ತ ಬೆಳಕು ಮೂಡಿಸಲು ಯತ್ನಿಸಿದ್ದರು ಇವರು.ಬಡವರು ಮತ್ತಷ್ಟು ಕರಕಲಾಗಿ, ಮತ್ತಷ್ಟು ಕತ್ತಲಾವರಿಸಿದ ರಾಜ್ಯದೊಳಗೆ ಬಂದಿಗಳಾಗುತ್ತಿದ್ದರು. ಮಂಟೇಸ್ವಾಮಿಯದು ಭಿನ್ನ ವ್ಯವಸ್ಥೆ. ವ್ಯವಸ್ಥೆಯೇ ಇರದ ವ್ಯವಸ್ಥೆ.ಮಂಟೇಸ್ವಾಮಿ ಧರ್ಮ ಮತ್ತು ಸಮಾಜಕಾರಣವನ್ನು ಬೆರೆಸುತ್ತಾನೆ.  ಅದನ್ನು ನಾವು ರಾಜಕಾರಣ ಎನ್ನತೊಡಗಿದ್ದೇವೆ. ಆದರೆ ಮಂಟೇಸ್ವಾಮಿಯದ್ದು  ಇಂದಿನ ಬಲಪಂಥದ ಮಾದರಿ ಖಂಡಿತ ಅಲ್ಲ. ಹೇಗೆಂದರೆ, ಬಡವರಿಗೆ ಜವಾಬ್ದಾರಿ ಕಲಿಸುತ್ತಾನೆ ಅವನು.ಕಾಯಕಪ್ರಜ್ಞೆ ಹಾಗೂ ನೈತಿಕ ಜವಾಬ್ದಾರಿ ಕಲಿಸುತ್ತಾನೆ.  ವಚನ ಚಳವಳಿಯೂ ಇದೇ ಪ್ರಯತ್ನ ಮಾಡಿತ್ತು ನಿಜ. ಆದರೆ ಬಸವಣ್ಣ ಹೊಸ ಅಗಸನಾಗಿದ್ದ. ಹಾಗಾಗಿ ಬಟ್ಟೆ ಹರಿದಿತ್ತು. ಮಂಟೇಸ್ವಾಮಿ ಅನುಭವಿ ಅಗಸ.  ಬಸವನ ಸಾಮಾಜಿಕ ಉತ್ಸಾಹ ಹಾಗೂ ಪ್ರಭುದೇವರ ಶೂನ್ಯ ನಿರುತ್ಸಾಹಗಳನ್ನು ಮೇಳವಿಸಿ ಚಳವಳಿ ನಡೆಸಿದವನು.ಭಿಕ್ಷುಕ ಅಥವಾ ಬಿಕ್ಕು ಅಥವಾ ಮೂಲ ಜಂಗಮ. ಇದುವೆ ಮಂಟೇಸ್ವಾಮಿ. ಪ್ರಭುದೇವರು ಮಂಟೇಸ್ವಾಮಿಯಾಗಿ ಬದಲಾದ ಕತೆಯೇ ಅಸಾಧಾರಣವಾದದ್ದು. ಪ್ರಭುದೇವರು ತನ್ನ ಅಲೆದಾಟದ ನಡುವೆ, ಒಮ್ಮೆ ಹಳ್ಳಿ ಮನೆಯೊಂದರ ಮುಂದೆ ನಿಂತು ಭಿಕ್ಷೆ ಬೇಡಿ ಜಾಗಟೆ ಬಡಿಯುತ್ತಾರೆ. ಜಾಗಟೆಯ ಸದ್ದಿಗೆ ಹಾಲು ಕರೆಯುತ್ತಿದ್ದ ಹಸ ಬೆದರುತ್ತದೆ.ಹಾಲು ಚೆಲ್ಲುತ್ತದೆ. ಹಾಲು ಕರೆಯುತ್ತಿದ್ದ ಮನೆಯೊಡತಿ, ‘ನಿನ್ನ ಮಂಟೆ ಹೋಗ!’ ಎಂದು ಪ್ರಭುದೇವರನ್ನು ಶಪಿಸುತ್ತಾಳೆ. ಪ್ರಭುದೇವರು ನಗುನಗುತ್ತ, ತಾಯಿ ಇತ್ತ ಹೆಸರೆಂದು ಬೈಗುಳವನ್ನೇ ಸ್ವೀಕರಿಸುತ್ತಾರೆ.ಬೈಗುಳವನ್ನು  ನಗುತ್ತ ಸ್ವೀಕರಿಸದೆ ಹೋದರೆ,   ದೇವರೂ ಸೇರಿದಂತೆ, ಯಾರೂ ಬಡವರ ಜೊತೆಗಾರರಾಗಲು ಬರುವುದಿಲ್ಲ. ಜೊತೆಗೆ, ಬಡವ ಬಡವ ಮಾತ್ರವಲ್ಲ, ಇತರ ಅವನು.  ಪ್ರಭುದೇವರು ಮಂಟೇಸ್ವಾಮಿಯ ಅವತಾರದಲ್ಲಿ ಇತರನಾದರು. ಇತರನನ್ನು ಶೈವನನ್ನಾಗಿಸಲು ಹೆಣಗಿದ ಬಸವಣ್ಣ.  ಇತರನನ್ನು ಬ್ರಾಹ್ಮಣನನ್ನಾಗಿಸಲು ಹೆಣಗಿದರು ರಾಮಾನುಜರು. ಬೌದ್ಧರು, ಕ್ರೈಸ್ತರು, ಮುಸಲ್ಮಾನರು ಎಲ್ಲರೂ ಇತರನನ್ನು ಮತಾಂತರಿಸಲು ಹೆಣಗಿದರು. ಪ್ರಭುದೇವರು ಮಾತ್ರ ತನ್ನನ್ನೇ ಇತರನನ್ನಾಗಿಸಿಕೊಂಡರು.  ಹಾಗೆ ಮಾಡಿ, ಸಾಂಸ್ಥಿಕ ಧರ್ಮಗಳ ಸೀಮಿತ ಚೌಕಟ್ಟಿನಿಂದ ತನ್ನನ್ನು  ಕಳಚಿಕೊಂಡರು.ಮಂಟೇಸ್ವಾಮಿಯ ಬಗ್ಗೆ ನನಗೆ ಮೊದಲು ಆಸಕ್ತಿ ಮೂಡಿದ್ದು ಕತ್ತಲೆಯ ರಾಜ್ಯದಲ್ಲಲ್ಲ, ಉತ್ತರದ ರಾಜ್ಯದಲ್ಲಿ. ಕೆಲವು ವರ್ಷಗಳ ಕೆಳಗೆ ಕೊಡೇಕಲ್ಲಿನ ಹಿರಿಯ ನೇಕಾರನೊಬ್ಬನಿಗೆ ನಾವು ದೇಸಿ ಪ್ರಶಸ್ತಿ ನೀಡಿ ಗೌರವಿಸಿದ್ದೆವು. ಕೊಡೇಕಲ್ಲು ಇಂದಿನ ಯಾದಗಿರಿ ಜಿಲ್ಲೆಯಲ್ಲಿದೆ. ಮಂಟೇಸ್ವಾಮಿ ಕ್ಷೇತ್ರದಿಂದ ಅದು ಐದುನೂರು ಕಿಲೊ ಮೀಟರು ಉತ್ತರಕ್ಕಿದೆ. ಪ್ರಶಸ್ತಿ ಪಡೆದ ನೇಕಾರನ ಹೆಸರು ಸಂಗಪ್ಪ ಮಂಟೆ ಎಂದು. ವಯಸ್ಸು ಆಗಲೇ ಎಂಬತ್ತರ ಗಡಿ ದಾಟಿತ್ತು.ಸಂಗಪ್ಪನವರು ಆಗಾಗ ‘ಚರಕ’ಕ್ಕೆ ಬರುತ್ತಾರೆ. ಕಪ್ಪನೆಯ ಗಿಡ್ಡ ದೇಹದ ಗಟ್ಟಿ ಮುದುಕ ಈತ. ಬಿಳಿಯ ಶರಟು, ಬಿಳಿಯ ಕಚ್ಚೆ ಹಾಗೂ ಜರತಾರಿ ಪೇಟ ತೊಡುವ ನೀಟಾದ ಮನುಷ್ಯ. ಸಿಕ್ಕಾಗಲೆಲ್ಲ ಜೇಬಿನಿಂದ ಪ್ಯಾಕೆಟ್ ಸೈಜಿನ ಒಂದು ಪುಸ್ತಕ ಹೊರತೆಗೆದು ಮೊದಲು ತನ್ನ ಎರಡೂ ಕಣ್ಣಿಗೆ ಒತ್ತಿಕೊಂಡು ನಂತರ ನನಗೆ ನೀಡುತ್ತಿದ್ದರು. ಆ ಕಿರುಪುಸ್ತಕ ಕೊಡೇಕಲ್ ಬಸವಣ್ಣನ ವಚನಗಳ ಸಂಗ್ರಹವಾಗಿರುತ್ತಿತ್ತು. ಪುಸ್ತಕ ನೀಡಿ, ‘ಅಪ್ಪಾ!... ಒಮ್ಮೆ ಬಾರೋ ಕೊಡೇಕಲ್ಲಿಗೆ’ ಎಂದು ದುಂಬಾಲು ಬೀಳುತ್ತಿದ್ದರು.ಕೊಡೇಕಲ್ ಬಸವಣ್ಣನವರು ಪ್ರಭುದೇವರ ಮೊದಲ ಶಿಷ್ಯ. ಆದ್ಯ ವಚನಕಾರರ ದೈತ್ಯ ಪ್ರತಿಭೆಯ ಮುಂದೆ,  ಈ ಕೊಡೇಕಲ್ ಬಸವಣ್ಣನ  ವಚನ-ರಚನಾ ಪ್ರತಿಭೆ ಕೊಂಚ ಸಪ್ಪೆಯೇ ಅನ್ನಬೇಕು. ಆದರೆ, ಪ್ಯಾಕೆಟ್ ಪುಸ್ತಕದ ಕವಚದ ಮೇಲೆ ಮುದ್ರಿತವಾಗಿದ್ದ  ಆತನ  ಆಕೃತಿ ಮಾತ್ರ, ಯಾವ ವಚನವೂ ಹೇಳಲಾಗದ ಹಲವು ಸತ್ಯಗಳನ್ನು  ತೇಪೆ ಹಾಕಿದಂತಹ ಮೂರ್ತಿಯಾಗಿತ್ತು.ಮೂರ್ತಿ ಹೀಗಿದೆ: ಕೊಡೇಕಲ್ ಬಸವಣ್ಣನೂ ಬಸವಣ್ಣನೇ ಆಗಬೇಕಾಗಿರುವುದರಿಂದ  ಆತನನ್ನೂ ಬಿಳಿಯ ಕುದುರೆಯ ಮೇಲೆಯೇ ಕೂರಿಸಲಾಗಿದೆ. ಇಲ್ಲಿಗೆ ಇವರಿಬ್ಬರ ಸಾಮ್ಯ ಮುಗಿಯುತ್ತದೆ.  ಬಸವಣ್ಣ  ಕಿರೀಟ ತೊಟ್ಟು ಭಂಡಾರಿಯಾದರೆ ಕೊಡೇಕಲ್ ಬಸವಣ್ಣ ಜಡೆಕಟ್ಟಿದ ಬೇಡರವನು. ಅರ್ಥಾತ್‌ ಸನ್ಯಾಸಿ. ಬಸವಣ್ಣನ ಬಗಲಿಗೆ ಕತ್ತಿ ತೂಗಿದರೆ ಈತನ ಬಗಲಿಗೆ ಭಿಕ್ಷೆಯ ಜೋಳಿಗೆ ತೂಗುತ್ತಿದೆ.ಮೈಗೆ ಬೇಡರವನಂತೆ ಹುಲ್ಲೆಯ ಚರ್ಮ ಹೊದೆದಿದ್ದಾನೆ. ಕಾಲಿಗೆ ಸೂಫಿಸಂತ ಪರಂಪರೆಯ ಸೂಚನೆ ಎಂಬಂತೆ ಇಜ್ಜೋಡು ಧರಿಸಿದ್ದಾನೆ. ಒಂದು ಕಾಲಿಗೆ ಸಾಬರ ಚಡಾವು ಇನ್ನೊಂದು ಕಾಲಿಗೆ ಮರದ ಅಟ್ಟಿಗೆ ಇತ್ಯಾದಿ.ಒಮ್ಮೆ ಸಂಗಪ್ಪನ ಊರಿಗೆ ಹೋಗಿದ್ದೆ. ಅವರ ಮನೆಯಲ್ಲಿ ಊರೊಟ್ಟಿನ ನೇಕಾರರೊಡಗೂಡಿ ಮೃಷ್ಟಾನ್ನ ಭೋಜನ ಮಾಡಿ, ಕಷ್ಟ ಸುಖ ಹರಟಿ, ಸಣ್ಣದೊಂದು ನಿದ್ರೆ ತೆಗೆದು, ನಂತರ ಕೊಡೇಕಲ್ ಬಸವಣ್ಣನ ಮುಸಲ್ಮಾನ  ಗದ್ದುಗೆ ಸಂದರ್ಶಿಸಿ ಬಂದಿದ್ದೆ.  ಅದು  ಅಪ್ಪಟ ಮುಸಲ್ಮಾನ ಸ್ಥಾವರ. ಅದರೊಳಗೆ ಗೋರಿಯಿದೆ.ಗೋರಿಯ ಅರ್ಚಕ ಮಾತ್ರ ಹಿಂದು. ಗೋರಿಗೆ ಪ್ರದಕ್ಷಿಣೆ ಬಂದು ನಮಿಸಿದಾಗ, ಅರ್ಚಕ ಕೈಗಳ ಮೇಲೆ  ಪ್ರಸಾದ ರೂಪದಲ್ಲಿ ಹಾಕಿದ್ದು ಸೂಫಿ ಸಂಪ್ರದಾಯದ ಸಕ್ಕರೆ.ಮಂಟೇಸ್ವಾಮಿಯ ಹಿಂಬಾಲಕರೆಲ್ಲ ಹೀಗೆಯೇ.  ಬೆರಕಿ ಮಂದಿ. ಪಂಚಾಳರು, ಅರಸುಗಳು, ಉಪ್ಪಾರರು, ನೇಕಾರರು, ಕುರುಬರು, ಗೌಳಿಗರು, ಮಡಿವಾಳರು, ದಲಿತರು,  ಸೂಫಿ ಮುಸಲ್ಮಾನರು ಇತ್ಯಾದಿ.ಮಂಟೇಸ್ವಾಮಿ ಬೆರಕಿ ಮಾಡಿದ್ದು  ಕೆಳಜಾತಿಗಳನ್ನು ಮಾತ್ರವೇ ಅಲ್ಲ, ಧಾರ್ಮಿಕ ಸಂಪ್ರದಾಯಗಳನ್ನು ಸಹ ತುಂಬ ಯಶಸ್ವಿಯಾಗಿ ಬೆರಕಿ ಮಾಡಿದ ಅವನು. ಪ್ರಭುದೇವರ ಮೂಲ ವೀರಶೈವದ ಜೊತೆಗೆ ಮುತ್ತತ್ತಿರಾಯನ (ಹನುಮಂತ) ವೈಷ್ಣವ ಪರಂಪರೆ, ಚಂಡಿ ಚಾಮುಂಡಿಯರ ಶಾಕ್ತಪಂಥ, ಸೂಫಿ ಭಕ್ತಿ, ಅಸ್ಪೃಶ್ಯರ  ಎಡಗೈ ಬಲಗೈ ಪರಂಪರೆ ಎಲ್ಲವನ್ನೂ ಬೆರೆಸಿ ಜಗಳ ನಿವಾರಿಸಿದ.ನಾನು ಇತ್ತೀಚೆಗೆ ಚಿಕ್ಕಲ್ಲೂರಿನ ಬೆರಕಿ ಜಾತ್ರೆಗೆ ಹೋಗಿದ್ದೆ. ಚಿಕ್ಕಲ್ಲೂರು, ಮಂಟೇಸ್ವಾಮಿಯ ಪ್ರಿಯ ಶಿಷ್ಯ ಸಿದ್ದಪ್ಪಾಜಿಯ ಕ್ಷೇತ್ರ. ಆದರೆ ಮಂಟೇಸ್ವಾಮಿಯನ್ನು ಸಂದರ್ಶಿಸಬೇಕೆಂದರೆ ನೀವು ಯಾವ ಜಾತ್ರೆಗೂ ಹೋಗಬೇಕೆಂದಿಲ್ಲ. ಎಲ್ಲಿಗೂ ಹೋಗಬೇಕೆಂದಿಲ್ಲ. ನಿಮ್ಮ ಗುಡಿಸಲಿನಲ್ಲಿ ನೀವು ಬದುಕಬೇಕಷ್ಟೆ. ತಾನೇ, ತಾಳ ತಂಬೂರಿ ಹಿಡಿದು, ನೀಲಗಾರನ ವೇಷ ತೊಟ್ಟು, ನಿಮ್ಮ ಓಣಿಗೇ ಬಂದು ನಿಮ್ಮನ್ನು ಸಂದರ್ಶಿಸುತ್ತಾನೆ. ನಿಮ್ಮ ಮನರಂಜಿಸಿ, ಬದುಕುವ ಧೈರ್ಯ ನೀಡಿ, ನೀವು ನೀಡುವ ಭಿಕ್ಷೆ ಸ್ವೀಕರಿಸಿ, ಮುಂದಿನ ಮನೆಯತ್ತ ನಡೆಯುತ್ತಾನೆ.ನಿಮಗೆ ನಿಜಕ್ಕೂ ಧೈರ್ಯವಿದ್ದರೆ ನೀವೂ ಅವನಂತಾಗುತ್ತೀರಿ. ಇಲ್ಲದಿದ್ದರೆ ಗುಡಿಸಲು ತೊರೆದು ಶ್ರೀಮಂತರಾಗಲು ಹಪಹಪಿಸುತ್ತೀರಿ. ಆದರೆ, ನನಗೆ ಮಂಟೇಸ್ವಾಮಿಯ ಬಗ್ಗೆ ಬರೆಯಲಿಕ್ಕೆ ಹೆದರಿಕೆಯಾಗುತ್ತಿದೆ.ಎಲ್ಲಿ ಈ ಮೂಲಕ ಈತನನ್ನೂ ಜನಪ್ರಿಯಗೊಳಿಸಿ ಶ್ರೀಮಂತರ ತೆಕ್ಕೆಗೆ ತಳ್ಳಿಬಿಡುತ್ತಿರುವೆನೋ ನಾನು ಎಂಬ ಹೆದರಿಕೆ. ದೈವಗಳನ್ನು ಕೊಲ್ಲುವುದು ಸುಲಭ. ಶ್ರೀಮಂತರು, ಟಿ.ವಿ ಪ್ರಚಾರಕರು, ವಿಐಪಿ ದ್ವಾರಗಳು, ಮಂತ್ರಿಗಳು ಹಾಗೂ ಹಣದ ಹುಂಡಿಯನ್ನು ದೈವದ ಸುತ್ತ ಇಟ್ಟರೆ ಸಾಕು, ದೈವ ಸಾಯುತ್ತದೆ. ಮಂಟೇಸ್ವಾಮಿ ಭಿನ್ನವಾಗಿದ್ದಾನೆ.ಭಿನ್ನವಾಗಿಯೇ ಮುಂದುವರೆಯಲಿ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry