ನೋಟು ರದ್ದತಿಗೆ 10ರಲ್ಲಿ 8 ಸದಸ್ಯರ ಒಪ್ಪಿಗೆ

7
ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಆರ್‌ಬಿಐ ಗವರ್ನರ್‌ ಸ್ಪಷ್ಟನೆ

ನೋಟು ರದ್ದತಿಗೆ 10ರಲ್ಲಿ 8 ಸದಸ್ಯರ ಒಪ್ಪಿಗೆ

Published:
Updated:
ನೋಟು ರದ್ದತಿಗೆ 10ರಲ್ಲಿ 8 ಸದಸ್ಯರ ಒಪ್ಪಿಗೆ

ನವದೆಹಲಿ:  ಭಾರತೀಯ ರಿಸರ್ವ್‌ ಬ್ಯಾಂಕ್‌ನ (ಆರ್‌ಬಿಐ) ಕೇಂದ್ರ ಮಂಡಳಿಯ ಹತ್ತು ನಿರ್ದೇಶಕರ ಪೈಕಿ ಎಂಟು ಮಂದಿಯ ಶಿಫಾರಸಿನಂತೆ ಗರಿಷ್ಠ  ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲಾಗಿದೆ ಎಂದು ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಆರ್‌ಬಿಐ ಗವರ್ನರ್‌ ಉರ್ಜಿತ್‌ ಪಟೇಲ್‌ ಮಾಹಿತಿ ನೀಡಿದ್ದಾರೆ.₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯುವುದಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ನವೆಂಬರ್‌ 8ರಂದು ರಾತ್ರಿ ಘೋಷಿಸಿದರು. ಅದೇ ದಿನ ಸಂಜೆ 5.30ಕ್ಕೆ ಆರ್‌ಬಿಐ ಸಭೆ ನಡೆಯಿತು ಎಂದು ಕಾಂಗ್ರೆಸ್‌ ಮುಖಂಡ ಕೆ.ವಿ. ಥಾಮಸ್‌ ನೇತೃತ್ವದ ಸಮಿತಿಗೆ ಅವರು ತಿಳಿಸಿದರು.ಆರ್‌ಬಿಐ ಮಂಡಳಿಯ ಮೂವರು ನಿರ್ದೇಶಕರು ನೋಟು ರದ್ದತಿ ನಿರ್ಧಾರ ಕೈಗೊಂಡಿದ್ದಾರೆ ಎಂದು ಮಾಜಿ ಹಣಕಾಸು ಸಚಿವ ಮತ್ತು ಕಾಂಗ್ರೆಸ್‌ ಮುಖಂಡ ಪಿ. ಚಿದಂಬರಂ ಅವರು ಇತ್ತೀಚೆಗೆ ಆರೋಪಿಸಿದ್ದರು. ಆರ್‌ಬಿಐ ಸ್ವಾಯತ್ತೆಗೆ ಸಂಬಂಧಿಸಿ ಅವರು ಪ್ರಶ್ನೆಗಳನ್ನು ಎತ್ತಿದ್ದರು.ನೋಟು ರದ್ದತಿ ನಿರ್ಧಾರದ ನಂತರ ಸಹಕಾರ ಬ್ಯಾಂಕುಗಳಲ್ಲಿ ನಡೆದಿದೆ ಎನ್ನಲಾದ ಭಾರಿ ಮೊತ್ತದ ವಹಿವಾಟಿನ ಬಗ್ಗೆ ತನಿಖೆ ನಡೆಸುವಂತೆ ಪಿಎಸಿ ಸದಸ್ಯರು ಆರ್‌ಬಿಐಗೆ ಹೇಳಿದ್ದಾರೆ. ಸಹಕಾರ ಬ್ಯಾಂಕುಗಳಲ್ಲಿ ಹೊಸ ಖಾತೆಗಳನ್ನು ತೆರೆದು ಅವುಗಳಲ್ಲಿ ಭಾರಿ ಮೊತ್ತದ ಹಣ ಜಮಾ ಮಾಡಲಾಗಿದೆ. ಹಾಗೆಯೇ ಬಹಳ ಕಾಲದಿಂದ ನಿಷ್ಕ್ರಿಯವಾಗಿದ್ದ ಖಾತೆಗಳಿಗೂ ಹಣ ಜಮಾ ಮಾಡಲಾಗಿದೆ ಎಂಬ ಉದಾಹರಣೆಗಳನ್ನು ಪಿಎಸಿ ಸದಸ್ಯರು ನೀಡಿದರು.ಸಹಕಾರ ಬ್ಯಾಂಕುಗಳಲ್ಲಿ ಅವ್ಯವಹಾರ ಆರೋಪಗಳ ಬಗೆಗಿನ ತನಿಖೆಯನ್ನು ಹಣಕಾಸು ಗುಪ್ತಚರ ಘಟಕಕ್ಕೆ ವಹಿಸಲಾಗುವುದು ಎಂದು ಉರ್ಜಿತ್‌ ತಿಳಿಸಿರುವುದಾಗಿ ಪಿಎಸಿ ಸದಸ್ಯರೊಬ್ಬರು ಹೇಳಿದ್ದಾರೆ.ನೋಟು ರದ್ದತಿ ನಂತರದಿಂದ ಜನವರಿ 4ರವರೆಗಿನ ಅವಧಿಯಲ್ಲಿ ಆದಾಯ ತೆರಿಗೆ ಇಲಾಖೆಯು ₹474.37 ಕೋಟಿ ವಶಪಡಿಸಿಕೊಂಡಿದೆ. ಅದರಲ್ಲಿ ₹112.29 ಕೋಟಿ ಹೊಸ ನೋಟುಗಳು ಎಂದು ಅವರು ಮಾಹಿತಿ ನೀಡಿದ್ದಾರೆ.ಆದರೆ, ಕೇಂದ್ರ ಅಬಕಾರಿ ಮತ್ತು ಕಸ್ಟಮ್ಸ್‌ ಮಂಡಳಿಯ ಅಡಿಯಲ್ಲಿ ಬರುವ ಸಂಸ್ಥೆಗಳು ಕಳೆದ ಡಿಸೆಂಬರ್‌ 30 ವರೆಗೆ  ಖೋಟಾ ನೋಟು ವಶಪಡಿಸಿಕೊಂಡಿಲ್ಲ ಎಂದೂ ಅವರು ಹೇಳಿದ್ದಾರೆ.ಆನ್‌ಲೈನ್‌ ಪಾವತಿ ವೆಚ್ಚ ಕಡಿತ: ಆನ್‌ಲೈನ್‌ ಪಾವತಿಯ ಮೇಲೆ ಬ್ಯಾಂಕುಗಳು ಹಾಕುವ ವಹಿವಾಟು ವೆಚ್ಚವನ್ನು ಕಡಿಮೆ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಉರ್ಜಿತ್‌ ಹೇಳಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry