ಉತ್ಸಾಹದ ಪ್ರತಿಕ್ರಿಯೆ

7

ಉತ್ಸಾಹದ ಪ್ರತಿಕ್ರಿಯೆ

Published:
Updated:
ಉತ್ಸಾಹದ ಪ್ರತಿಕ್ರಿಯೆ

‘ಮುಕ್ತಛಂದ’ದ ಜ. 15ರ ಸಂಚಿಕೆಯಲ್ಲಿ ಪ್ರಕಟವಾದ ಡಿ.ಎ. ಶಂಕರ್ ಅವರ ‘ಮಂಕುತಿಮ್ಮನ ಕಗ್ಗದ ಖ್ಯಾತಿಯ ಗುಟ್ಟೇನು?’ ಲೇಖನಕ್ಕೆ ಓದುಗರಿಂದ ಉತ್ಸಾಹದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಯ್ದ ಕೆಲವು ಪ್ರತಿಕ್ರಿಯೆಗಳು ಇಲ್ಲಿವೆ.

 

**

ಜನಪ್ರಿಯತೆಯನ್ನು ಹೇರಲಾಗದು!

1. ಲೇಖಕರ ಪ್ರಕಾರ ಕಗ್ಗದಲ್ಲಿ ಯಾವುದೋ ಕಾಲದ ಶಬ್ದಗಳ ಜೊತೆಗೆ ಹಳಗನ್ನಡ-ನಡುಗನ್ನಡಮಿಶ್ರಿತ ಬರವಣಿಗೆಯಿದೆ. ಅಂದರೆ ಇಂದು ಚಾಲ್ತಿಯಲ್ಲಿರದ ಪದಗಳೇ ಕಗ್ಗದಲ್ಲಿ ಹೆಚ್ಚು ಎಂದಾಯಿತು. ಸಾಮಾನ್ಯ ಜನರಿಗೆ ಅರ್ಥವಾಗದಿದ್ದರೂ ಯಾವುದೋ ಶಿಷ್ಟವರ್ಗ ಇದನ್ನು ಜನಪ್ರಿಯಗೊಳಿಸಿದೆಯೆನ್ನುವುದು ಅವರ ಅಭಿಪ್ರಾಯ. ಯಾವುದಾದರೊಂದು ಕೃತಿ ಜನಪ್ರಿಯ ಎಂದು ಹೇಳುವುದಾದರೆ ಅದು ಜನರಿಂದ, ಅಂದರೆ ಸಾಮಾನ್ಯ ಜನರಿಂದ ಜನಪ್ರಿಯವಾಗುವುದೇ ಹೊರತು ಒಂದು ವರ್ಗದ ಜನರಿಂದ ಮಾತ್ರ ಆಗಲಾರದು. ಸಾಮಾನ್ಯ ಜನರಿಗೆ ಪ್ರಿಯವಾಗದೆ ಅದನ್ನು ಜನಪ್ರಿಯ ಎಂದು ಹೇಳಲಸಾಧ್ಯ. ಇದು ಸರಳ ಸತ್ಯ. ಆದರೆ, ಕಗ್ಗದ ಜನಪ್ರಿಯತೆಯನ್ನು ಒಪ್ಪಿರುವ ಲೇಖಕರು ಅದರ ವಿಶ್ಲೇಷಣೆಯಲ್ಲಿ ಈ ವಿರೋಧಾಭಾಸವನ್ನು ನಮ್ಮ ಮುಂದಿಟ್ಟಿದ್ದಾರೆ. ಶಿಷ್ಟವರ್ಗದ ಪಾತ್ರವೇ ಮೇಲಾಗಿದ್ದಲ್ಲಿ ಕೃತಿಯು ‘ಶಿಷ್ಟಪ್ರಿಯ’ ಎನಿಸಿಕೊಳ್ಳುವುದೇ ಹೊರತು ಅವರ ಹೇರಿಕೆಯಿಂದ ಅದಕ್ಕೆ ಜನಪ್ರಿಯತೆಯ ಸ್ಥಾನ ಸಿಗಬಹುದೆ? 

 

2. ಕೃತಿಯೊಂದು ಪ್ರಿಯವಾಗಲು ಲೇಖಕರು ಹೇಳಿರುವ ಮಾನದಂಡವಿದು: ‘ಅದರ ಕನ್ನಡ ನಮಗೆ ಪ್ರಿಯವಾಗಬೇಕು, ಆಪ್ತ ಅನ್ನಿಸಬೇಕು, ಹಾಗೆಯೇ ಕಿವಿಗೆ  ಹಿತ ಅನ್ನಿಸಿ, ಅದನ್ನುಓದುವುದೇ ಮನಸ್ಸಿಗೆ ಸಂತೋಷ ಅನ್ನಿಸಬೇಕು, ಓದಿಸಿಕೊಳ್ಳುವ ಗುಣ ಅದಕ್ಕೆ ಅಗತ್ಯವಾಗಿ ಇರಬೇಕು’. ಮಂಕುತಿಮ್ಮನ ಕಗ್ಗದ ಹಲವು ಪದ್ಯಗಳ ಮೊದಲ ಸಾಲುಗಳನ್ನು ಉದಾಹರಿಸಿ ಅಲ್ಲಿನ ಭಾಷೆ ಅವರ ಮಾನದಂಡಕ್ಕೆ ಒಳಪಡದಿರುವುದನ್ನು ತಿಳಿಸುತ್ತಾ ಅದನ್ನು ರೂಕ್ಷ ಬರವಣಿಗೆ ಎಂದಿದ್ದಾರೆ.

 

ಸಾಮಾನ್ಯ ಮಟ್ಟದ ಸ್ವಲ್ಪ ಕನ್ನಡ ಬಲ್ಲ ಜನರಿಗೆ ಇದು ಸುಲಭಕ್ಕೆ ಅರ್ಥವಾಗದ ಕಾವ್ಯ ಎನ್ನುತ್ತಲೇ ಸಾಮಾನ್ಯ ಓದುಗರು ಅಷ್ಟಾಗಿ ತಿಳಿಯದ ಕಾವ್ಯ ವಿಮರ್ಶೆಯ ಪರಿಭಾಷೆಯಾದ ‘ಶಯ್ಯೆ’ಯನ್ನೂ ಪ್ರಮಾಣವಾಗಿಸಿಕೊಂಡಿದ್ದಾರೆ. ಆದರೆ ಕಾವ್ಯವನ್ನೂ ಒಳಗೊಂದಂತೆ ಯಾವುದೇ ಕಲಾ ಮೀಮಾಂಸೆಯಲ್ಲಿ ಮುಖ್ಯವಾಗುವ ರಸ, ಧ್ವನಿ, ವಕ್ರೋಕ್ತಿ, ಔಚಿತ್ಯಗಳ ಪ್ರಸ್ತಾಪ ಲೇಖಕರ ವಿಶ್ಲೇಷಣೆಯಲ್ಲಿ ಇಲ್ಲವೇ ಇಲ್ಲ. ರಾಜಶೇಖರನು ತನ್ನ ಕಾವ್ಯಮೀಮಾಂಸೆಯಲ್ಲಿ ಕವಿತೆಯ ಪರಿಕರಗಳಲ್ಲಿ ಬಹುಮುಖ್ಯ ಎನ್ನಲಾಗಿರುವ ವ್ಯುತ್ಪತ್ತಿ ಮತ್ತು ಪ್ರತಿಭೆ – ಇವಾವುವೂ ಲೇಖಕರಿಗೆ ಕಾವ್ಯದ ಬಗೆಯನ್ನು ಬಗೆಯುವಲ್ಲಿ ಮುಖ್ಯವೆನಿಸಿದಂತಿಲ್ಲ. ಹಾಗೆಯೇ, ಲೇಖಕರ ದೃಷ್ಟಿಯಲ್ಲಿ ಕಗ್ಗಕ್ಕಿಂತಲೂ ಹೆಚ್ಚು ಜನಪ್ರಿಯವಾಗಿರುವ ಲಕ್ಷ್ಮೀಶನ ‘ಜೈಮಿನಿ ಭಾರತ’ ಮತ್ತು ಕನಕದಾಸರ ‘ನಳ ಚರಿತ್ರೆ’ಗಳಿಗೆ ವಿಶಿಷ್ಟ ಸ್ಥಾನವಿರುವುದು ಯಾವ ಕಾರಣಕ್ಕೆ ಎನ್ನುವುದು ಲೇಖನದಲ್ಲಿ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಅಲ್ಲಿನ ಭಾಷೆ ಕಗ್ಗಕ್ಕಿಂತ ಯಾವ ರೀತಿಯಲ್ಲಿ ಸಲೀಸು ಮತ್ತು ಸುಭಗ ಎನ್ನುವುದನ್ನು ಅವರು ತಿಳಿಸಿಲ್ಲ. ಹೀಗಿರುವಾಗ ಲೇಖಕರಂಥ ಶಿಷ್ಟ ಓದುಗ ವರ್ಗದಿಂದ ಮಾತ್ರ ಕೆಲವು ಜನರ ನಾಲಗೆ ಮೇಲೆ ‘ಜೈಮಿನಿ ಭಾರತ’ ಮತ್ತು ‘ನಳ ಚರಿತ್ರೆ’ ಕಾವ್ಯಗಳಿವೆ ಎನ್ನಲು ಸಾಧ್ಯವೆ?

 

3. ಲೇಖಕರೇ ಹೇಳಿರುವಂತೆ ಕಗ್ಗದ ಬಹುಪಾಲು ಪದ್ಯಗಳು ವೇದೋಪನಿಷತ್ತುಗಳ, ಗೀತೆಯ ವಿಸ್ತಾರವಾದ ಓದಿನಿಂದ ಎರವು ಪಡೆದುಕೊಂಡವು. ಹಾಗಿದ್ದ ಮೇಲೆ ಅನೇಕರು ಅದನ್ನು ವೇದೋಪನಿಷತ್ತು, ಗೀತೆಗಳಂತೆ ಕಂಡು ಅದಕ್ಕೆ ಭಾಷ್ಯ–ವ್ಯಾಖ್ಯಾನ, ವಿವರಣೆಗಳನ್ನು ಕೊಟ್ಟಿರುವುದರಲ್ಲಿ ಯಾವ ಆಶ್ಚರ್ಯ ಅಥವಾ ಸಮಸ್ಯೆಯಿದೆ?   

 

4. ಕಗ್ಗದ ಪದ್ಯಗಳಲ್ಲಿನ ವಿಚಾರಗಳಲ್ಲಿ ಸ್ವೋಪಜ್ಞತೆ ಇಲ್ಲವೇ ಇಲ್ಲ ಎನ್ನುವುದು ಲೇಖಕರ ದೃಷ್ಟಿಯಲ್ಲಿ ತಪ್ಪಲ್ಲ. ಒಂದೇ ಒಂದು ಸ್ವತಂತ್ರ ಆಲೋಚನೆಯೂ ಇಲ್ಲಿ ಇಲ್ಲ, ಎಲ್ಲವೂ ಒಂದೋ ಭಾರತೀಯ ದರ್ಶನಗಳಿಂದ ಇಲ್ಲವೇ ಪಾಶ್ಚಾತ್ಯ ಸಾಹಿತ್ಯದಿಂದ ಎರವಲು ಪಡೆದ ವಿಚಾರಗಳು ಎಂದು ತೀರ್ಮಾನಿಸಿದ್ದಾರೆ. ‘ನಗುವು ಸಹಜದ ಧರ್ಮ… ’(917), ‘ಹುಲ್ಲಾಗು ಬೆಟ್ಟದಡಿ…’(789), ‘ಗಗನನೀಲಿಮೆಯೆನ್ನ ಕಣ್ಗೆ...’ (52), ‘ಪುಸ್ತಕದಿ ದೊರೆತರಿವು...’(65), ‘ಗ್ರೀಸಿನಾ ಕಬ್ಬಗಳನೋದುವರು...’(60), ‘ರಾಮನಡಿಯಿಟ್ಟ ನೆಲ...’ (120), ‘ಪರದ ಮೇಲ್ಕಣ್ಣಿಟ್ಟು...’ (256), ‘ಸರ್ವರುಂ ಸಾಧುಗಳೆ...’(275), ‘ಧಾರುಣೀಸುತೆಯವೊಲು ದೃಢಮನಸ್ಕರದಾರು...’ (277), ‘ನರರ ಸ್ವಭಾವ ವಕ್ರಗಳನೆಣಿಸುವುದೇಕೆ?...’‘ (287), ‘ಇಳೆಯಿಂದ ಮೊಳಕೆಯೊಗೆವಂದು...’ (661), ‘ಗೌರವಿಸು ಜೀವನವ...’ (475), ‘ಹೊಸ ಚಿಗುರು ಹಳೆ ಬೇರು...’ (522) , ‘ಅಕ್ಕಿಯೊಳಗನ್ನವನು ಮೊದಲಾರು...’ (655), ಮುಂತಾದ ಪದ್ಯಗಳನ್ನು ಅವಲೋಕಿಸಿದರೆ ಕಗ್ಗದ ಪದ್ಯಗಳು ಶಾಸ್ತ್ರಾಧ್ಯಯನ ಮಾತ್ರವಲ್ಲದೆ ಗಾಢವಾದ ಜೀವನಾನುಭವದಿಂದ ಡಿವಿಜಿಯವರಿಗೆ ದಕ್ಕಿರುವ ಸ್ವೋಪಜ್ಞ ಚಿಂತನೆಗಳೆನ್ನುವ ಅರಿವು ತಾನಾಗಿಯೇ ಮೂಡುತ್ತದೆ. ಸ್ವಾರಸ್ಯವೆಂದರೆ ಉದಾಹರಿಸಿರುವ ಈ ಎಲ್ಲ ಪದ್ಯಗಳೂ ಸಾಮಾನ್ಯ ಜನರಿಗೂ ಸುಲಭಗ್ರಾಹ್ಯವಾಗಿದ್ದು, ಅಲ್ಲಿನ ಭಾಷೆಯು ಕಾವ್ಯಾಲಂಕಾರ ಸೌಂದರ್ಯದ ದೃಷ್ಟಿಯಿಂದಲೂ ತತ್ತ್ವ ವಿಚಾರಗಳಿಂದಲೂ ಅನನ್ಯವಾಗಿವೆ. ನಾನು ಗಮನಿಸಿದಂತೆ ಕಗ್ಗದ ಜನಪ್ರಿಯತೆಗೆ ಕಾರಣವಾಗಿರುವುದು ಇಂತಹ ಪದ್ಯಗಳೇ ಹೊರತು ಕ್ಲಿಷ್ಟತೆಯಿಂದ ಕೂಡಿದವಲ್ಲ.

 

5. ವೇದೋಪನಿಷತ್ತು, ಗೀತೆಗಳ ಗಹನ ವಿಚಾರಗಳು, ಪಾಶ್ಚಾತ್ಯರ ತತ್ತ್ವ ಚಿಂತನೆಗಳು ಕಗ್ಗದಲ್ಲಿ ಹೇರಳವಾಗಿ ಕಂಡುಬಂದಲ್ಲಿ ಅವುಗಳಾವುವೂ ದೋಷವೆನಿಸುವುದಿಲ್ಲ. ಜಗತ್ತಿನ ಅತ್ಯುನ್ನತ ವಿಚಾರಗಳನ್ನೂ ತತ್ತ್ವಸಾರವನ್ನೂ ಕಾವ್ಯವಾಗಿಸಿರುವ ಹಿರಿಮೆ ಡಿವಿಜಿ ಅವರದೆನ್ನಬೇಕು. ಪ್ರಪಂಚದ ಉತ್ಕೃಷ್ಟ ಚಿಂತನೆಗಳನ್ನು ಕನ್ನಡದ ಸಂವೇದನೆಗೆ ಅಳವಡಿಸುವುದು ಸಾಮಾನ್ಯ ಸಂಗತಿಯಲ್ಲ. 

–ಸೂರ್ಯಕಿರಣ ಜೋಯಿಸ್ 

 

***

ಸ್ವಾಗತಾರ್ಹ ಎರವಲು

ಡಿವಿಜಿ ಅವರನ್ನು ಟೀಕಿಸಬೇಕು ಅನ್ನುವ ಉದ್ದೇಶ ಇಟ್ಟುಕೊಂಡು ಬರೆದಂತಿದೆ. ಡಿವಿಜಿ ಅವರು ಇಂಗ್ಲಿಷ್, ಸಂಸ್ಕೃತದಿಂದ  ಎರವಲು ತೆಗೆದುಕೊಂಡಿದ್ದಾರೆ ಎನ್ನುವುದು ಇಲ್ಲಿಯ ಆರೋಪ. ಡಿವಿಜಿ ಹೆಚ್ಚುಗಾರಿಕೆ ಇರುವುದು ಅಷ್ಟೆಲ್ಲಾ ಓದಿದ್ದನ್ನು ಅರಗಿಸಿಕೊಂಡು, ತಮ್ಮದೇ ಭಾಷೆಯಲ್ಲಿ ಕನ್ನಡಿಗರಿಗೆ ಉಣಬಡಿಸಿರುವುದರಲ್ಲಿ. ಇದರ ಜನಪ್ರಿಯತೆಯನ್ನು ‘ಶಿಷ್ಟವರ್ಗದ ವ್ಯಾನಿಟಿ ಬ್ಯಾಗ್’ ಎನ್ನುವುದು ಉಡಾಫೆಯ ಮಾತು.

–ನಾರಾಯಣ, ನವಿಲೇಕೆರೆ

 

***

ಬಾಳ್ವೆಯೇ ಬರಹ

ಡಿವಿಜಿ ತಾವು ನಂಬಿದ ತತ್ತ್ವಕ್ಕನುಗುಣವಾಗಿ ಬದುಕಿದರು. ಸಮಾಜದ ಎಲ್ಲಾ ಸ್ತರಗಳ ಜನರನ್ನು ಹತ್ತಿರದಿಂದ ಕಂಡು ಸ್ಪಂದಿಸಿದರು. ವಿಸ್ತಾರವಾದ ಬಾಳನ್ನು ಬದುಕಿ, ತಾವು ಕಂಡ ದರ್ಶನವನ್ನು ‘ಉಸುರಿಕೊಳೆ ತನ್ನ ಮನಸಿಗೆ ತಾನೆ ಬಗೆದು’, ತನ್ನ ನಿಶ್ಚಿತಜ್ಞಾನವನ್ನು ‘ಗ್ರಂಥಾನುಭವಗಳಿಂದಾರಿಸುತ’ ಕಗ್ಗವನ್ನು ಹೊಸದೆ ಎನ್ನುತ್ತಾರೆ. ಡಿವಿಜಿಯವರು ಯಾವ ನಂಬಿಕೆಯಿಂದ ತಮ್ಮ ಬಾಳನ್ನು ನಡೆಸಿದರೂ ಅದನ್ನೇ ತಮ್ಮ ಕೃತಿಗಳಲ್ಲೂ ಬಿಂಬಿಸಿದ ಪ್ರಾಮಾಣಿಕತೆ ಒಂದು ಪ್ರಮುಖವಾದ ಅಂಶ. 

 

ಶಾಸ್ತ್ರವಿಚಾರಗಳನ್ನು, ಪಾಶ್ಚಾತ್ಯ ಚಿಂತನೆಯನ್ನು ಬಿಂಬಿಸುವ ಪದ್ಯಗಳಿದ್ದರೂ, ಸ್ವತಂತ್ರ ಆಲೋಚನೆಯ ನೂರಾರು ಪದ್ಯಗಳು ಕಗ್ಗದಲ್ಲಿವೆ. ನಾನಾ ಭಾಷೆಗಳ, ಗ್ರಂಥಗಳ  ಅದ್ಭುತವಾಣಿಯನ್ನು ಕನ್ನಡದಲ್ಲಿ ಕಟ್ಟಿಕೊಟ್ಟದ್ದು ದೊಡ್ಡ ಉಪಕಾರವೇ ಹೊರತು, ವೈಚಾರಿಕತೆಯ ಕೊರತೆಯಲ್ಲ. 

 

ಭಾಷೆಯ ಬಗ್ಗೆ ಹೇಳುವುದಾದರೆ, ಚೌಪದಿಯ ಸುಭಗವಾದ ನಡೆಗೆ ಮತ್ತು ತನಗೆ ತಾನೇ ಯಾರಾದರೂ ಹಾಡಿಕೊಳ್ಳಬಹುದಾದ ಲಯಕ್ಕೆ ಹಳೆಗನ್ನಡ – ನಡುಗನ್ನಡದ ಮಿಶ್ರಣ ಒಗ್ಗುವ ಭಾಷೆಯಾಗುತ್ತದೆಯೇ ಹೊರತು ತೊಡಕಾಗಲಾರದು. ಹತ್ತು ಪುಟದಲ್ಲಿ ಹೇಳಬಹುದಾದದ್ದನ್ನು ಒಂದು ಚೌಪದಿಯಲ್ಲಿ ಕಟ್ಟಿಕೊಡಬೇಕಾದ ಅನಿವಾರ್ಯತೆ, ಪಂಚಮಾತ್ರಾ ಗಣ, ಪ್ರಾಸ ನಿಯಮದಿಂದ, ರಚನೆಯಲ್ಲಿ ಕೆಲವು ಪದ್ಯಗಳು ಓದಲು ಮತ್ತು ಅರ್ಥೈಸಲು ಕ್ಲಿಷ್ಟವೆನ್ನಿಸಬಹುದು.

 

ಸುಲಭವಾಗಿ ಅರ್ಥವಾಗದ ಪದ್ಯಗಳಿಗೆ ಜಿ.ಪಿ. ರಾಜರತ್ನಂ ಅವರು ಒಪ್ಪಮಾಡಿಕೊಟ್ಟ ವಿವರಣೆ ಇದ್ದೇಇದೆ. ‘ನಿಮ್ಮ ಕಾವ್ಯಗಳಲ್ಲಿ ಇಂಥ ಕ್ಲಿಷ್ಟವಾದ ಭಾಷೆಯ ಅಗತ್ಯವಿತ್ತೇ?’ ಎಂಬ ಪ್ರಶ್ನೆಗೆ ಕುವೆಂಪು ನೀಡಿದ ಉತ್ತರ: ‘ಬೃಹತ್ತಾದ ಗಜವನ್ನು ಬಂಧಿಸಿ ನಿಲ್ಲಿಸಬೇಕಾದರೆ ಸಣ್ಣ ದಾರದಿಂದ ಕಟ್ಟಲಾಗದು. ಅದಕ್ಕೆ ಸರಿಯಾದ ಹಗ್ಗ ಸರಪಣಿಗಳೇ ಬೇಕು’. ಪದಮೈತ್ರಿ, ಶಯ್ಯೆ, ಕಾವ್ಯಾಲಂಕಾರ ಇಂಥವಕ್ಕಾಗಿ ಕಗ್ಗ ರಚಿತವಾಗಿಲ್ಲ. ಹಾಗೆ ರಚಿತವಾದ ಎಷ್ಟೋ ಕೃತಿಗಳು ಜನಮನದಲ್ಲಿ ಇಂದು ನಿಂತಿಲ್ಲ. ಕಗ್ಗ ಹುಟ್ಟಿದ್ದು ತಮ್ಮ ಚಿಂತನೆಗಳನ್ನು ಸಾಮಾನ್ಯ ಜನರಿಗೆ ತಿಳಿಸುವ ಆರ್ದ್ರಭಾವದಿಂದ.  

 

ವ್ಯಾಕರಣ ಕಾವ್ಯಲಕ್ಷಣಗಳನು ಗಣಿಸದೆಯೆ।

ಲೋಕತಾಪದಿ ಬೆಂದು ತಣಿಪನೆಳಸಿದವಂ।।

ಈ ಕಂತೆಯಲಿ ತನ್ನ ನಂಬಿಕೆಯ ನೆಯ್ದಿಹನು।

ಸ್ವೀಕರಿಕೆ ಬೇಳ್ವವರು - ಮಂಕುತಿಮ್ಮ।।

 

ಎಂದು ಡಿವಿಜಿ, ಕಗ್ಗದ ಉದ್ದೇಶವನ್ನು ಸ್ಪಷ್ಟವಾಗಿಯೇ ತಿಳಿಸಿದರು. ತನ್ನ ಕೃತಿಯಲ್ಲಿ ಕುಂದು ಕಂಡುಬಂದರೆ ‘ತಿದ್ದಿಕೊಳೆ ಮನಸುಂಟು, ಇಂದಿಗೀ ಮತವುಚಿತ’ ಎಂಬ ನಿಸ್ಪೃಹನುಡಿಯೂ ಅವರದೇ.

 

ಕಗ್ಗದ ಖ್ಯಾತಿಗೆ ನಿರ್ದಿಷ್ಟ ಕಾರಣಗಳನ್ನು ಹೇಳುವುದು ಕಷ್ಟ. ‘ಕಂಗೊಳಿಸುವ ಹಸುರಿನ ಸೊಬಗಿಗೆ ಕಾರಣವೇನು? ಬೇರು? ಮಣ್ಣು? ಬೆಳಕು? ಯಾವುದು ಕಾರಣ’ ಎನ್ನುವ  ಡಿವಿಜಿಯವರ ಮಾತನ್ನೇ ಪುನರುಚ್ಚರಿಸಬೇಕಾಗುತ್ತದೆ.

 

ಕಗ್ಗ, ಪ್ರಖ್ಯಾತಿಗಾಗಿ, ಪ್ರಶಸ್ತಿಗಾಗಿ ಮೂಡಿಬಂದ ಕೃತಿಯಲ್ಲ. ‘...ಮಸ್ತಕಕ್ಕಿಟ್ಟು ಗಂಭೀರವಾದೆ, ನಿನ್ನ ಪುಸ್ತಕಕೆ ಕೈಮುಗಿದೆ ಮಂಕುತಿಮ್ಮ’ ಎಂದು ಕಗ್ಗದ ಬಗ್ಗೆ  ಕುವೆಂಪು ಹಾಡಿದರೆ, ಅ ಮಟ್ಟದ ಅರಿವಿನಿಂದ ಕಗ್ಗವನ್ನು ಕಾಣದ ‘ಜ್ಞಾನಪೀಠ’ ಅದನ್ನು ನಮ್ಮ ಹೃದಯಪೀಠದಲ್ಲೇ ಇಂದಿಗೂ ನಿಲ್ಲಿಸಿದೆ. 

–ಎಂ.ಆರ್. ಚಂದ್ರಮೌಳಿ

 

***

ಸಾರ್ವಕಾಲಿಕ ಸತ್ಯಸಾರುವ ಕೃತಿ

* ಡಿವಿಜಿ ಅವರು ತಮ್ಮ ಪದ್ಯವೊಂದರಲ್ಲಿ ‘ಕವಿಯಲ್ಲ, ವಿಜ್ಞಾನಿಯಲ್ಲ, ಬರಿ ತಾರಾಡಿ... ವಿವಿಧ ಗ್ರಂಥಾನುಭವಗಳಿಂದ ಹೊಸದೇನೀ ಕಗ್ಗವನು’ ಎಂದು ಹೇಳಿರುವುದನ್ನು ಡಿ.ಎ. ಶಂಕರ ಅವರು ಗಮನಿಸಬೇಕು. ವೇದ, ಉಪನಿಷತ್ತು, ಇಂಗ್ಲಿಷ್ ಸಾಹಿತ್ಯದಿಂದ ಮೂಡಿಬಂದ ಹೊಸ ಹೊಸ ಆಲೋಚನೆಗಳನ್ನು ಅವರು ಮುಕ್ತವಾದ ಛಂದೋಗತಿಯಲ್ಲಿ ಎರಕಹೊಯ್ದಿದ್ದಾರೆ. ಒಳ್ಳೆಯ ಚಿಂತನೆಗಳು ಜಗತ್ತಿನ ಯಾವುದೇ ಭಾಗದಿಂದ ಬಂದರೂ ತೆಗೆದುಕೊಳ್ಳಬೇಕು ಎಂಬ ಉಪನಿಷತ್ತಿನ ಮಂತ್ರವನ್ನು ಡಿವಿಜಿ ಕಗ್ಗದಲ್ಲಿ ಪರಿಪಾಲಿಸಿದ್ದಾರೆ. 

 

* ಎಷ್ಟೋ ಸಲ ನನಗೆ ದುಃಖವಾದಾಗ ಕಗ್ಗದ ಪದ್ಯಗಳನ್ನು ಮತ್ತೆ ಮತ್ತೆ ಹೇಳಿಕೊಂಡು ಮನಸ್ಸನ್ನು ಹಗುರು ಮಾಡಿಕೊಳ್ಳುತ್ತೇನೆ. ಈ ಪದ್ಯಗಳು ನೊಂದ ಮನಸ್ಸಿಗೆ ಸಾಂತ್ವನ ನೀಡುವ ಕಾರಣ ಇಂದಿಗೂ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿವೆ ಎನ್ನಬಹುದು. 

 

* ಕನ್ನಡದಲ್ಲಿ ಓದುವ ಮಕ್ಕಳಿಗೆ ಅಪಾರವಾದ ಶಬ್ದಸಂಪತ್ತನ್ನು ಕಲಿಸಿಕೊಡುವ ಒಂದು ಅಪರೂಪದ ಕಾವ್ಯ ‘ಮಂಕುತಿಮ್ಮನ ಕಗ್ಗ’. ಇಲ್ಲಿ ಬರುವ ಸಂಸ್ಕೃತ, ಹಳಗನ್ನಡ ಪದಸಂಪತ್ತಿನಿಂದ ನಮ್ಮ ಕನ್ನಡ ಭಾಷಾಭಿವೃದ್ಧಿ ಇಮ್ಮಡಿ, ಮುಮ್ಮಡಿಗೊಳ್ಳುವುದರಲ್ಲಿ ಸಂದೇಹವಿಲ್ಲ. 

 

* ‘ಇದು ಶಿಷ್ಟವರ್ಗದವರು ಮಾತ್ರ ಓದುವ ಕಾವ್ಯ’ ಎನ್ನುವ ಮಾತು ಸರಿಯಲ್ಲ. ಸಾಮಾನ್ಯರು ಕೂಡ ಕಗ್ಗಕ್ಕೆ ಮಾರುಹೋಗಿದ್ದಾರೆ. ಬೌದ್ಧಿಕ ವಾನಿಟಿ ಬ್ಯಾಗ್, ಬೌದ್ಧಿಕ ಪೌರೋಹಿತ್ಯಕ್ಕೆ ಅನುಕೂಲಕರವಾದ ಒಣ ಸಮ್ಮಿತ್ತು ಎಂದಿರುವುದೂ ಒಪ್ಪುವ ಮಾತಲ್ಲ. ಜನರು ಕಗ್ಗವನ್ನು ‘ಕನ್ನಡದ ಭಗವದ್ಗೀತೆ’ ಎಂದು ಭಾವಿಸಿ, ಮಹತ್ವದ ಸ್ಥಾನ ನೀಡಿದ್ದಾರೆ. ಕಾವ್ಯದ ಮೂಲಕ ಓದುಗರಲ್ಲಿ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸುವ, ಅವರಲ್ಲಿ ಚೈತನ್ಯವನ್ನು ತುಂಬುವ, ಕ್ರಿಯಾಶೀಲ ಚಟುವಟಿಕೆಗಳಿಗೆ ಸಿದ್ಧಗೊಳಿಸುವ ಕಾರ್ಯವನ್ನು ಡಿವಿಜಿ ಅರ್ಥಪೂರ್ಣವಾಗಿ ಮಾಡಿದ್ದಾರೆ.    

–ಪ್ರಕಾಶ ಗಿರಿಮಲ್ಲನವರ, ಬೆಳಗಾವಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry