5
ವಿಮರ್ಶೆ

ಭಾರತದ ಹಕ್ಕಿಯ ರೋಚಕ ವಲಸೆ

Published:
Updated:
ಭಾರತದ ಹಕ್ಕಿಯ ರೋಚಕ ವಲಸೆ

ಬಸವನೆ ಮಾಮರ (ಹೊರನಾಡ ಕನ್ನಡಿಗನ ಹೋರಾಟಕಥನ)

ಲೇ:
ಎಲ್‌.ಎನ್‌. ಮುಕುಂದರಾಜ್‌, ಪದ್ಮ ಟಿ. ಚಿನ್ಮಯಿ

ಪ್ರ: ಶಶಿ ಪಬ್ಲಿಕೇಶನ್ಸ್, ಜಾಲಮಂಗಲ, ರಾಮನಗರಜಿಲ್ಲೆ

 

*

‘ಲಂಡನ್ ಮಹದೇವಯ್ಯ’ ಎಂದೇ ಕನ್ನಡ ಸಾಂಸ್ಕೃತಿಕ ನೆಲದಲ್ಲಿ ಖ್ಯಾತರಾಗಿರುವ ಧೀರೋದಾತ್ತ ಸಜ್ಜನರೊಬ್ಬರ ಪುಟ್ಟ ರೂಪಕ ಈ ಕೃತಿಯಲ್ಲಿ ಅಡಕಗೊಂಡಿದೆ. ಮಾಗಡಿ ಹತ್ತಿರದ ಕನ್ನಲಿ ಎಂಬ ಹಳ್ಳಿಯಲ್ಲಿ ಜನಿಸಿದ ಮಹದೇವಯ್ಯ ಕಡುಬಡತನದಲ್ಲಿ ಹುಟ್ಟಿದವರು. ತಂದೆ ವೀಳ್ಯದೆಲೆ ಮಾರಾಟಗಾರರು. ಮಠದಲ್ಲಿದ್ದುಕೊಂಡು ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಪಡೆಯುತ್ತಾರೆ. ಬೆಂಗಳೂರಿನಲ್ಲಿ ಉನ್ನತ ವ್ಯಾಸಂಗ ಪೂರೈಸಿದ ಇವರಿಗೆ ಪ್ರತಿಭಾವಂತರಿಗೆ ಇಂಗ್ಲೆಂಡಿನಲ್ಲಿ ಸೂಕ್ತ ಉದ್ಯೋಗದ ಮಾಹಿತಿ ದೊರಕುತ್ತದೆ. ತಂದೆಯ ವಿರೋಧದ ನಡುವೆ ಗೆಳೆಯರ ಆರ್ಥಿಕ ನೆರವಿನಿಂದ ಇಂಗ್ಲೆಂಡಿಗೆ ಹೊರಟುಬಿಡುತ್ತಾರೆ. ಅಲ್ಲಿಂದ ಅವರ ಬದುಕಿನ ಹೋರಾಟ ಮತ್ತೊಂದು ದಿಕ್ಕಿನ ಕಡೆ ವಾಲುತ್ತದೆ. ಇಂಗ್ಲೆಂಡಿನಲ್ಲಿರುವಾಗಲೇ ಇವರಿಗೆ ಜಾತಿ, ಧಾರ್ಮಿಕ ಮೌಢ್ಯದ ಅರಿವಾಗುತ್ತದೆ. ವೀರಶೈವ ಜನಾಂಗದವರೊಬ್ಬರು ತೀರಿಕೊಳ್ಳುತ್ತಾರೆ. ‘ಯುಕೆ’ಯ ಕನ್ನಡ ಬಳಗ ಈ ಕೆಲಸವನ್ನು ನಿರ್ವಹಿಸಬೇಕು, ಆದರೆ ಅವರು ಮುಂದಾಗುವುದಿಲ್ಲ. ಏಕೆಂದರೆ ಅದು ಬ್ರಾಹ್ಮಣರ ಅಧಿಪತ್ಯದಲ್ಲಿರುತ್ತದೆ. ತಮ್ಮ ಆಪ್ತಗೆಳೆಯರ ನೆರವಿನಿಂದ ಮೃತದೇಹವನ್ನು ಭಾರತಕ್ಕೆ ತಲುಪಿಸುವ ಕಾರ್ಯವನ್ನು ಕೈಗೊಳ್ಳುತ್ತಾರೆ. 

 

ಇಲ್ಲಿಂದ ಮಹದೇವಯ್ಯನವರ ಹೋರಾಟ ನಿರಂತರವಾಗುತ್ತದೆ. ಆಕ್ಸ್‌ಫರ್ಡ್‌ನ ವೇದಾಂತ ಕೇಂದ್ರದ ಮುಖ್ಯಸ್ಥರಾದ ಭವ್ಯಾನಂದರು, ‘ವಚನ ಸಾಹಿತ್ಯ ವಿವೇಕಾನಂದರು ಜಗತ್ತಿಗೆ ಪ್ರತಿಪಾದಿಸಿದ ತಾತ್ವಿಕತೆಗಿಂತ ಮಿಗಿಲಾದದ್ದು’ ಎಂದು ಹೇಳಿದ ಮಾತು ಇವರನ್ನು ಗಾಢವಾಗಿ ತಟ್ಟುತ್ತದೆ. ‘ಕನ್ನಡಿಗರಾದ ನಾವು, ವಚನ ಸಾಹಿತ್ಯವನ್ನು ಓದಿ ಗ್ರಹಿಸುವ, ಅರ್ಥ ಮಾಡಿಕೊಳ್ಳುವ ಪ್ರಯತ್ನವನ್ನೇ ಮಾಡಿಲ್ಲ. ಮಠದ ಸ್ವಾಮಿಗಳು ಮಂತ್ರದಂತೆ ಹೇಳುವ ಮಾತುಗಳನ್ನೇ ಮುಗ್ಧವಾಗಿ ನಂಬಿಕೊಂಡಿದ್ದೇವೆ. ಬಸವಾದಿ ಶರಣರ ವಚನಗಳನ್ನು ನಾವೇ ಸ್ವಂತವಾಗಿ ಓದಿಕೊಂಡರೆ ನಮ್ಮೊಳಗಿನ ಮಾನವೀಯ ನೆಲೆಗಳು ಅದ್ಭುತವಾಗಿ ವಿಸ್ತರಿಸಿಕೊಳ್ಳುತ್ತವೆ’ ಎಂಬ ಸತ್ಯ ಇವರಿಗೆ ಬಂದಿದ್ದೇ, ವಚನ ಸಾಹಿತ್ಯವನ್ನು ಗಂಭೀರವಾಗಿ ಅಧ್ಯಯನ ಮಾಡುತ್ತಾರೆ. 

 

ಭಾರತದ ಪ್ರಥಮ ಬಂಡಾಯಗಾರ ಗುರು ಬಸವ ತತ್ವವನ್ನು ಇಡೀ ‘ಯುಕೆ’ಯಲ್ಲಿ ಹಬ್ಬಿಸುವ ಚಟುವಟಿಕೆಗೆ ಕೈಹಾಕುತ್ತಾರೆ. ಈ ಕೃತಿ ‘ಬಸವ ಕ್ರಾಂತಿಯ ಲಕ್ಷದ ತೊಂಬತ್ತಾರು ಸಾವಿರ ಕಲ್ಯಾಣದ ಶರಣ ಹುತಾತ್ಮ’ರಿಗೆ ಅರ್ಪಿತಗೊಂಡಿದೆ. ಮೂವತ್ತೆಂಟು ಅಧ್ಯಾಯಗಳನ್ನು ಒಳಗೊಂಡಿರುವ ಈ ಕೃತಿ ಭಾರತ ಮತ್ತು ಇಂಗ್ಲೆಂಡಿನ ಸಾಮಾಜಿಕ ಮತ್ತು ಸಂಸ್ಕೃತಿ ಕಥನವನ್ನು ಮನಮುಟ್ಟುವಂತೆ ನಿರೂಪಿಸುತ್ತದೆ.

ಘೋರ ಯುದ್ಧಗಳು, ದಾರುಣ ಕಗ್ಗೊಲೆಗಳ, ಭ್ರಷ್ಟ ರಾಜಕಾರಣ, ಧಾರ್ಮಿಕ ರಕ್ತ ಗೀಚುಗಳಿಗೆ ಕಾರಣವಾದ ಬ್ರಿಟನ್ನಿನ ಕುರಿತು ಬಹು ಮುಖ್ಯ ಅಧ್ಯಾಯಗಳು ಇಲ್ಲಿವೆ. ಕರಿಯರ ನಾಯಕ ಬರ್ನಿಗ್ರ್ಯಾಂಟ್ ಹೇಳುತ್ತಿದ್ದ, ‘ಬ್ರಿಟನ್ನಿನ ಯಾವುದೇ ಕಟ್ಟಡದ ಗೋಡೆಗಳನ್ನು ಗೀಚಿ, ಕೆರೆದರೆ ಅಲ್ಲಿ ಕಪ್ಪುಮನುಷ್ಯನ ರಕ್ತ ಕಾಣುತ್ತದೆ’ ಎಂಬ ಮಾತನ್ನು ಮಹದೇವಯ್ಯ ನೆನಪಿಸಿಕೊಳ್ಳುತ್ತಾರೆ.

 

ವಿದೇಶಗಳಲ್ಲಿ ಅವಿತ ಭಾರತೀಯರ ನಡಾವಳಿಗಳು ಹಾಸ್ಯಾಸ್ಪದ ಮತ್ತು ಅಸಂಬದ್ಧವಾಗಿ ಕೂಡಿರುತ್ತವೆ. ಈ ನೆಲದ ಗಿಡಗಳ ಮೇಲೆ ಸುಳಿಯುವ ಮಿಡತೆಗಳು, ಗಿಡಮರ, ಓಣಿಗಳ ಕುರಿತು ಕೇಳಿದರೆ, ಗೊತ್ತಿಲ್ಲವೆಂಬಂತೆ ನಟಿಸಿ ಸ್ವತಃ ಅವರೇ ದಿಗ್ಭ್ರಮೆಗೊಳಗಾಗುತ್ತಾರೆ. ಸರಿಸುಮಾರು ನಾಲ್ಕೈದು ದಶಕಗಳಿಂದ ಇಂಗ್ಲಿಷ್ ನೆಲದಲ್ಲಿ ನೆಲೆಸಿರುವ ಮಹದೇವಯ್ಯ ಅವರಿಗೆ ಇಂಟರ್ನೆಟ್, ಫೇಸ್‌ಬುಕ್, ವಾಟ್ಸ್‌ಆ್ಯಪ್ ಗೊತ್ತಿಲ್ಲ. ಆದರೆ, ಹನ್ನೆರಡನೇ ಶತಮಾನದ ವಚನ ಚಳುವಳಿಯ ಕುರಿತು ನಿರರ್ಗಳವಾಗಿ ಮಾತಾಡಬಲ್ಲರು, ಜನಸಾಮಾನ್ಯರಲ್ಲಿ ಗೀಳು ಹತ್ತಿಸಬಲ್ಲರು... ತಾನು ಬಾಲ್ಯದಲ್ಲಿ ಓದಿದ, ತಂಗಿದ ಮಠದ ಮನೆಯ ಮುಂದೆ ನಿಂತು ಥರಹೇವಾರಿ ಭಾವಚಿತ್ರಗಳನ್ನು ತೆಗೆಸಿಕೊಂಡು ಆ ಕಾಲದೊಳಕ್ಕೆ ಇಳಿದುಬಿಡಬಲ್ಲ ಮುಗ್ಧ, ಆದರೆ ನೇರ ನಡೆನುಡಿಯ ವ್ಯಕ್ತಿತ್ವ ಇವರದ್ದು. 

 

ಬಸವ ಮಾರ್ಗವನ್ನು ಇಂಗ್ಲಿಷ್ ನೆಲದಲ್ಲಿ ಬಿತ್ತಿದ ಚಿತ್ರಣ ಈ ಕೃತಿಯಲ್ಲಿ ಬೃಹತ್ ಹೆದ್ದಾರಿಯಾಗಿ ನುಗ್ಗಿದೆ. ಶೇಕ್‌ಸ್‍ಪಿಯರ್ ಮತ್ತು ವರ್ಡ್ಸ್‌ವರ್ತ್ ತುಳಿದ ಹೆಜ್ಜೆಗಳ ಆಳದಲ್ಲಿ ಮಹದೇವಯ್ಯ ಅವರ ಹೆಜ್ಜೆಗಳೂ ನುಡಿದಿರಬಹುದಾದ ಪಿಸುಮಾತುಗಳನ್ನು ಕೃತಿಯ ಲೇಖಕರು ರಾಜಕೀಯ ಮತ್ತು ಸಾಂಸ್ಕೃತಿಕವಾಗಿ ಹೆಕ್ಕಿ ತೆಗೆದಿದ್ದಾರೆ. ಭಾರತವನ್ನು ಒಂದು ಕಾಲಕ್ಕೆ ರಕ್ತದಿಂದ ಕುದಿಸಿದವರ ಅಹಂ ಮತ್ತು ಪ್ರತಿಷ್ಠೆಗೆ ತಕ್ಕ ಉತ್ತರವೂ ಇಲ್ಲಿದೆ.  

 

ಕವಿ, ನಾಟಕಕಾರ ಎಲ್.ಎನ್. ಮುಕುಂದರಾಜ್ ಮತ್ತು ಪದ್ಮಾ ಟಿ. ಚಿನ್ಮಯಿ ನಿರೂಪಿಸಿದ ‘ಬಸವನೆ ಮಾಮರ’ ವಿದೇಶಿ ಪ್ರವಾಸ ಕಥನಗಳ ಸವಕಲು ಮಾದರಿಗಳನ್ನು ಮುರಿದು ಸಮೃದ್ಧ ಹೊಲ ಬೆಳೆದ ಕೃತಿ ಎನ್ನುವುದರಲ್ಲಿ ಸಂದೇಹವೇ ಇಲ್ಲ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry