ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸವತ್ತಾದ ಪ್ರಶ್ನೆಗಳು... ಉತ್ತರಿಸಲು ಪೈಪೋಟಿ

ವಿದ್ಯಾರ್ಥಿಗಳ ಅದಮ್ಯ ಉತ್ಸಾಹಕ್ಕೆ ಸಾಕ್ಷಿಯಾದ ‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌’
Last Updated 21 ಜನವರಿ 2017, 20:07 IST
ಅಕ್ಷರ ಗಾತ್ರ

ಬೆಂಗಳೂರು: ರಸವತ್ತಾದ ಪ್ರಶ್ನೆಗಳು, ಪ್ರತಿಯೊಂದು ಪ್ರಶ್ನೆಗಳಿಗೆ ನಾವೇ ಉತ್ತರಿಸಬೇಕೆಂಬ ತವಕ,   ಉತ್ತರ ಸರಿಯೋ ತಪ್ಪೋ ಎಂಬ ಕುತೂಹಲ, ಉತ್ತರ ಸರಿಯಾದಾಗ ಮುಖದ ತುಂಬಾ ಸಂತಸದ ಹೊನಲು...

‘ಪ್ರಜಾವಾಣಿ ಕ್ವಿಜ್‌ ಚಾಂಪಿಯನ್‌ಷಿಪ್‌ನ’ ಫೈನಲ್‌ ಸ್ಪರ್ಧೆ ಹಾಗೂ ಬೆಂಗಳೂರು ವಲಯದ ಮಟ್ಟದ ಸ್ಪರ್ಧೆ   ಶಾಲಾ ವಿದ್ಯಾರ್ಥಿಗಳ ಅದಮ್ಯ ಉತ್ಸಾಹಕ್ಕೆ ಸಾಕ್ಷಿಯಾಯಿತು.

ಕ್ಲಿಷ್ಟಕರ ಪ್ರಶ್ನೆಗಳಿಗೆ ಸಲೀಸಾಗಿ ಉತ್ತರಿಸಿ ಜಾಣ್ಮೆ ಪ್ರದರ್ಶಿಸುತ್ತಿದ್ದ ಸ್ಪರ್ಧಿಗಳೂ ಕೆಲವು ಸರಳ ಪ್ರಶ್ನೆಗಳಿಗೆ ತಲೆ ಕೆಡಿಸಿಕೊಂಡರು.  ಈ ಪ್ರಶ್ನೆಗಳಿಗೆ ಪ್ರೇಕ್ಷಕರಿಂದ ಉತ್ತರ ಬಂದಾಗ, ಅಯ್ಯೋ ಗೊತ್ತಿದ್ದರೂ ಹೇಳಲಾಗಲಿಲ್ಲವಲ್ಲಾ ಎಂದು ಚಡಪಡಿಕೆ ವ್ಯಕ್ತಪಡಿಸಿದರು.  

ಪ್ರಶ್ನೆ ಪೂರ್ಣಗೊಳ್ಳುವುದಕ್ಕೂ ಮುನ್ನವೇ ಬಜರ್‌ ಒತ್ತಲು  ವಿದ್ಯಾರ್ಥಿಗಳಲ್ಲಿ ಪೈಪೋಟಿ ಏರ್ಪಟ್ಟಿತ್ತು. ಪ್ರಶ್ನೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಆತುರದಲ್ಲಿ ಬಜರ್‌ ಒತ್ತಿ ಕೆಲವರು ಅಂಕಗಳನ್ನೂ ಕಳೆದುಕೊಂಡರು. ಕಠಿಣ ಪ್ರಶ್ನೆಗಳು ಎದುರಾದಾಗ ಯಾರೂ ಬಜರ್‌ ಒತ್ತದೇ  ಜಾಣತನ ಪ್ರದರ್ಶಿಸಿದರು.

ಸಭಿಕರ ಪೈಪೋಟಿ: 1992ರಲ್ಲಿ ಬಿಡುಗಡೆಯಾದ ‘ಮರಣಮೃದಂಗ’ ಚಿತ್ರದಲ್ಲಿ ನಟಿಸಿದ್ದ ಕರ್ನಾಟಕದ ಮಾಜಿ ಮುಖ್ಯಮಂತ್ರಿ ಯಾರು ಎಂಬ ಪ್ರಶ್ನೆಗೆ ಸ್ಪರ್ಧಿಗಳು ‘ಮುಖ್ಯಮಂತ್ರಿ’ ಚಂದ್ರು, ಎಸ್‌.ಎಂ.ಕೃಷ್ಣ, ಬಂಗಾರಪ್ಪ, ದೇವರಾಜ ಅರಸು, ಎಚ್‌.ಡಿ.ಕುಮಾರಸ್ವಾಮಿ, ಎಚ್‌.ಡಿ.ದೇವೇಗೌಡ ಹೆಸರುಗಳನ್ನು ಹೇಳಿದರು. ಉತ್ತರ ಸರಿಯಿಲ್ಲದ ಕಾರಣ ಪ್ರಶ್ನೆ ಪ್ರೇಕ್ಷಕರ ಗ್ಯಾಲರಿಯತ್ತ ಹೋಯಿತು. ಆಗ ಬಾಲಕನೊಬ್ಬ ರಾಮಕೃಷ್ಣ ಹೆಗಡೆ ಎಂದು ಸರಿಯಾಗಿ ಉತ್ತರಿಸಿ ಬಹುಮಾನ ಗಿಟ್ಟಿಸಿದ.

ಟ್ವಿಟರ್‌ ಆರಂಭವಾಗುವುದಕ್ಕೂ ಮುನ್ನವೇ ಬೆಂಗಳೂರಿನಲ್ಲಿರುವ ಸಂಸ್ಥೆಯೊಂದು ತನ್ನ ನೋಟಿಸ್‌ ಬೋರ್ಡ್‌ನಲ್ಲಿ  ದಿನದ ಪ್ರಮುಖ ಘಟನೆ ಕುರಿತ ಮಾಹಿತಿಯನ್ನು 140 ಪದಗಳಿಗೆ ಮೀರದಂತೆ ಪ್ರಕಟಿಸುತ್ತಿತ್ತು. ಆ ಸಂಸ್ಥೆ ಯಾವುದು? ಎಂಬ ಪ್ರಶ್ನೆಗೆ  ಸ್ಪರ್ಧಿಗಳಿಂದ ಉತ್ತರ ಬರಲಿಲ್ಲ. ‘ಅದು ಪ್ರಜಾವಾಣಿ ಕಚೇರಿ’ ಎಂದು ಉತ್ತರಿಸುವ ಮೂಲಕ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಬಾಲಕನೊಬ್ಬ ಮೆಚ್ಚುಗೆಗಳಿಸಿದ.

ಸರಸ್ವತಿ ವಿಗ್ರಹದ ಚಿತ್ರವೊಂದನ್ನು ತೋರಿಸಿ,  ‘ಇದು  ₹7 ಲಕ್ಷ ಮೌಲ್ಯದ ಪ್ರಶಸ್ತಿಯೊಂದಿಗೆ ಸಂಬಂಧ ಹೊಂದಿದೆ, ಅದು ಯಾವ ಪ್ರಶಸ್ತಿ?’ ಎಂದು ಕೇಳಿದ ಪ್ರಶ್ನೆಗೆ ಸ್ಪರ್ಧಿಯೊಬ್ಬ ‘ಸರಸ್ವತಿ ಸಮ್ಮಾನ್’ ಎಂದು ಥಟ್‌ ಅಂತ ಉತ್ತರಿಸಿದ. ಅದು ತಪ್ಪು ಉತ್ತರವಾಗಿತ್ತು.   ಸಭೆಯಲ್ಲಿದ್ದ ವಿದ್ಯಾರ್ಥಿಯೊಬ್ಬ ‘ಜ್ಞಾನಪೀಠ ಪ್ರಶಸ್ತಿ’ ಎಂದು ಉತ್ತರಿಸಿ ಚಪ್ಪಾಳೆ ಗಿಟ್ಟಿಸಿದ.

ಸಾಹಿತ್ಯ ಸಂಭ್ರಮ ಲಾಂಛನ: ಲಾಂಛನವೊಂದರ ಕುರಿತ ಪ್ರಶ್ನೆಗೆ ತಕ್ಷಣ ಬಜರ್‌ ಒತ್ತಿದ ತಂಡ ಇದು ಪ್ರವಾಸಿ ಭಾರತೀಯ ದಿವಸ್‌ನ ಲಾಂಛನ ಎಂದು ತಪ್ಪು ಉತ್ತರ ನೀಡಿ ಅಂಕ ಕಳೆದುಕೊಂಡಿತು. ಪ್ರೇಕ್ಷಕರ ಸಾಲಿನಲ್ಲಿ ಕುಳಿತಿದ್ದ ರಾಜರಾಜೇಶ್ವರಿ ನಗರದ ಎನ್‌ಎಚ್‌ವಿ ಪಬ್ಲಿಕ್‌ ಸ್ಕೂಲ್‌ನ ಮೂರನೇ ತರಗತಿ ವಿದ್ಯಾರ್ಥಿ ಅಭಿನವ,  ಇದು  ‘ಧಾರವಾಡ ಸಾಹಿತ್ಯ ಸಂಭ್ರಮ’ದ ಲಾಂಛನ ಎಂದು ಉತ್ತರಿಸಿ  ಬಹುಮಾನ ಪಡೆದ.

ಒಬಾಮ ಸೋದರ ಗೊತ್ತು.... ಅರ್ಕಾವತಿ ಗೊತ್ತಿಲ್ಲ!
ಡೊನಾಲ್ಡ್‌ ಟ್ರಂಪ್‌ ಕಟ್ಟಾ ಬೆಂಬಲಿಗರಾದ ಈ ವ್ಯಕ್ತಿಯ ಹೆಸರಿನ ಪೂರ್ವಾರ್ಧ ಮಲಿಕ್‌;  ಉತ್ತರಾರ್ಧ ಏನು? ಈ ಪ್ರಶ್ನೆಗೆ  ಸ್ಪರ್ಧಿಯೊಬ್ಬರು ತಕ್ಷಣವೇ ಬರಾಕ್‌ ಎಂಬ ಸರಿ ಉತ್ತರ ನೀಡಿದರು. ಅಮೆರಿಕದ ಮಾಜಿ ಅಧ್ಯಕ್ಷ  ಬರಾಕ್‌ ಒಬಾಮ ಸಹೋದರ  ಮಲಿಕ್‌ ಒಬಾಮ ಅವರು   ಡೊನಾಲ್ಡ್‌ ಟ್ರಂಪ್‌ ಅವರನ್ನು ಬೆಂಬಲಿಸಿದ್ದರು. ನಂದಿಬೆಟ್ಟದಲ್ಲಿ ಹುಟ್ಟುವ,  ಬೆಂಗಳೂರಿಗೆ ನೀರುಣಿಸು­ತ್ತಿದ್ದ ನದಿಯ  ಹೆಸರೇನು ಎಂಬ ಪ್ರಶ್ನೆಗೆ ಸ್ಪರ್ಧಿಗಳಿಗೆ ಉತ್ತರ  ಗೊತ್ತಿರಲಿಲ್ಲ.  ಸಭಿಕರು  ಅರ್ಕಾವತಿ ಎಂದು ಉತ್ತರಿಸಿದರು.

ಸೇಂಟ್‌ ಪಾಲ್ಸ್‌ ಸ್ಕೂಲ್ ಪ್ರಥಮ
ಬೆಂಗಳೂರಿನ ಜೆ.ಪಿ.ನಗರದ ಸೇಂಟ್‌ ಪಾಲ್ಸ್‌ ಇಂಗ್ಲಿಷ್‌ ಸ್ಕೂಲ್‌ ತಂಡವು  ‘ಪ್ರಜಾವಾಣಿ  ಕ್ವಿಜ್‌ ಚಾಂಪಿಯನ್‌ಶಿಪ್‌’ನ ಬೆಂಗಳೂರು ವಲಯ ಮಟ್ಟದ ಸ್ಪರ್ಧೆಯಲ್ಲಿ  ಪ್ರಶಸ್ತಿ ಗೆದ್ದುಕೊಂಡಿತು. ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ಶನಿವಾರ ನಡೆದ ಸ್ಪರ್ಧೆಯಲ್ಲಿ  ಚಂದ್ರಚೂಡ್‌ ಹಾಗೂ ಸುಚೇತ್‌ ಅವರಿದ್ದ ಈ ತಂಡಕ್ಕೆ ತೀವ್ರ ಪೈಪೋಟಿ ನೀಡಿದ ಶ್ರಿಕುಮಾರನ್ಸ್‌ ಐಸಿಎಸ್‌ಇ ಶಾಲಾ ತಂಡವು ದ್ವಿತೀಯ ಸ್ಥಾನ  ಹಾಗೂ ಪ್ರಸಿಡೆನ್ಸಿ ಸ್ಕೂಲ್‌ ತಂಡವು ಮೂರನೇ ಸ್ಥಾನ ಪಡೆಯಿತು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಿ.ತಿಮ್ಮೇಗೌಡ ಅವರು  ಸ್ಪರ್ಧೆಯನ್ನು ಉದ್ಘಾಟಿಸಿದರು. ರಸಪ್ರಶ್ನೆಗೆ ಸರಿ ಉತ್ತರ ನೀಡಿದ ವಿದ್ಯಾರ್ಥಿಗಳಾದ ವೈಷ್ಣವಿ, ಪ್ರಥಮ್‌ ಬೋಂಗೆ, ಶರತ್‌ ಎಂ. ಹಾಗೂ ಸಂದೀಪ್‌ ಉದ್ಘಾಟನಾ ಸಮಾರಂಭದ ಅತಿಥಿಗಳಾದರು.  ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್‌ ಆರ್‌.ಹಿತೇಂದ್ರ ವಿಜೇತರಿಗೆ ಬಹುಮಾನ ವಿತರಿಸಿದರು. ವಾಲ್‌ನಟ್‌ ನಾಲೆಡ್ಜ್‌ ಸೊಲ್ಯೂಷನ್ಸ್‌ ಸಂಸ್ಥೆ ರಸಪ್ರಶ್ನೆಯನ್ನು ನಡೆಸಿಕೊಟ್ಟಿತು.

ವಿಜೇತರು ಏನನ್ನುತ್ತಾರೆ?

ನಿರೀಕ್ಷೆಗಿಂತ ಕ್ಲಿಷ್ಟಕರ
ನಮ್ಮ ನಿರೀಕ್ಷೆಗಿಂತಲೂ ಕಠಿಣ ಪ್ರಶ್ನೆಗಳಿದ್ದವು. ಇತರ ತಂಡಗಳೂ ತೀವ್ರ ಪೈಪೋಟಿ ನೀಡಿದವು.  ಅಂತಿಮ ಸುತ್ತಿನಲ್ಲಿ ಹೆಚ್ಚು ಆತ್ಮವಿಶ್ವಾಸದಿಂದ ಉತ್ತರಿಸಿದ್ದರಿಂದ ಗೆಲುವು ಒಲಿಯಿತು. 
ಸುಚೇತ್‌ ಮತ್ತು ಚಂದ್ರ ಚೂಡ್‌, ಸೇಂಟ್‌ ಪಾಲ್ಸ್‌ ಇಂಗ್ಲಿಷ್‌ ಸ್ಕೂಲ್‌
ಬೆಂಗಳೂರು


ಫೈನಲ್‌ ಕಠಿಣ
ವಲಯ ಮಟ್ಟದ ಸ್ಪರ್ಧೆಗಿಂತ ಫೈನಲ್‌ ಕಠಿಣವಾಗಿತ್ತು. ರಾಜ್ಯ, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಪ್ರಶ್ನೆಗಳು ಹೆಚ್ಚಿದ್ದವು.  ಮುಂದಿನ ವರ್ಷಕ್ಕೆ  ಈಗಿನಿಂದಲೇ ತಯಾರಿ ಆರಂಭಿಸುತ್ತೇವೆ
ಪ್ರಜ್ವಲ್‌ ಯಾಜಿ ಮತ್ತು ಚಿನ್ಮಯ್‌ ಹೆಗಡೆ,
ಲಯನ್ಸ್‌ ಸ್ಕೂಲ್‌, ಶಿರಸಿ  

ಆತ್ಮ ವಿಶ್ವಾಸ ಹೆಚ್ಚಿದೆ
ಪ್ರಜಾವಾಣಿ ಕ್ವಿಜ್‌ ನಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಿಸಿದೆ. ಮುಂದೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು ಬೇಕಾದ ಶಕ್ತಿ ತುಂಬಿದೆ. 
– ಆದಿತ್ಯ ಮತ್ತು ಅನೂಪ್ 
ಯುನೈಟೆಡ್‌ ಅಕಾಡೆಮಿ, ಹಾಸನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT