7

ಸರಳೀಕೃತ ಪರಿಹಾರ ಹೇಳುವ ಜನಪ್ರಿಯ ನಾಯಕರು

Published:
Updated:

ಅಮೆರಿಕದ ಅಧ್ಯಕ್ಷೀಯ ಅಭ್ಯರ್ಥಿಗಳು ಸಾಮಾನ್ಯವಾಗಿ ಮೂರು ವಿಷಯಗಳ ಬಗ್ಗೆ ಮಾತನಾಡುತ್ತಾರೆ– ವಾಷಿಂಗ್ಟನ್‌ನಲ್ಲಿ ಬದಲಾವಣೆ ತರುವುದು, ಅಮೆರಿಕಕ್ಕೆ ಮೊದಲ ಆದ್ಯತೆ ನೀಡುವುದು ಮತ್ತು ಅಮೆರಿಕನ್ನರಿಗೆ ಉದ್ಯೋಗ ಸೃಷ್ಟಿಸುವುದು.

ಮೊದಲ ಕೆಲಸ ಸಾಧ್ಯವಾಗುವುದೇ ಇಲ್ಲ. ಏಕೆಂದರೆ, ವಾಷಿಂಗ್ಟನ್‌ ಎಂಬುದು 200 ವರ್ಷಗಳಿಗೂ ಹಳೆಯದಾದ ಮಹಾನ್‌ ಗಣರಾಜ್ಯವೊಂದರ ರಾಜಧಾನಿ. ಪ್ರಪಂಚದ ಅತಿದೊಡ್ಡ ಅರ್ಥವ್ಯವಸ್ಥೆಯನ್ನು, ಅತ್ಯಂತ ಶಕ್ತಿಯುತವಾದ ಮಿಲಿಟರಿಯನ್ನು ನಿಯಂತ್ರಿಸುವ ನಗರ ಇದು. ರಕ್ಷಕನೊಬ್ಬ ತನಗಾಗಿ ಅವತರಿಸಲಿ ಎಂದು ಕಾಯುತ್ತಿರುವ ನಗರ ಇದಲ್ಲ. ಈ ನಗರದಲ್ಲಿ ಮಹತ್ತರ ಬದಲಾವಣೆ ಆಗುವುದಿದ್ದರೆ, ಅದು ಕೆಟ್ಟ ಬದಲಾವಣೆ ಆಗುವ ಸಾಧ್ಯತೆಯೇ ಹೆಚ್ಚು.

‘ಅಮೆರಿಕಕ್ಕೆ ಮೊದಲ ಆದ್ಯತೆ’ ಎಂಬುದು ಅರ್ಥಹೀನ ಘೋಷಣೆ. ಏಕೆಂದರೆ, ಈ ಹಿಂದಿನ ಅಧ್ಯಕ್ಷರು ಅಮೆರಿಕವನ್ನು ಎರಡನೆಯ ಅಥವಾ ಮೂರನೆಯ ಆದ್ಯತೆಯನ್ನಾಗಿ ಪರಿಗಣಿಸಿದ್ದರು ಎಂದು ಈ ಘೋಷಣೆ ಭಾವಿಸುತ್ತದೆ. ಹಿಂದಿನ ಅಧ್ಯಕ್ಷರು ಅಂಥ ಕೆಲಸ ಮಾಡಿಲ್ಲ. ರಿಚರ್ಡ್‌ ನಿಕ್ಸನ್‌ ಅವಧಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ಆಗಿದ್ದ ಹೆನ್ರಿ ಕಿಸಿಂಜರ್ ಅವರು, ‘ಎಲ್ಲ ವಿದೇಶಾಂಗ ನೀತಿಗಳು ನಮಗಾಗಿ ರೂಪಿಸಿದ ನೀತಿಗಳು’ ಎಂದು ಹೇಳಿದ್ದರು. ಆಂತರಿಕ ಅಗತ್ಯಗಳಿಗೆ ಪ್ರತಿಕ್ರಿಯೆ ಎಂಬಂತೆ ಅಮೆರಿಕ ಹೊರ ದೇಶಗಳಲ್ಲಿ ಯುದ್ಧ ನಡೆಸಿತು ಎಂಬುದು ಅವರ ಮಾತಿನ ಅರ್ಥ. ಹಾಗಾಗಿ, ಈ ವಿಚಾರದಲ್ಲಿ ಕೂಡ ಮಹತ್ವದ ಬದಲಾವಣೆ ತರಲು ಡೊನಾಲ್ಡ್‌ ಟ್ರಂಪ್ ಅವರಿಗೆ ಸಾಧ್ಯವಾಗಲಿಕ್ಕಿಲ್ಲ. ಗೆಲ್ಲಲಾಗದ ಯುದ್ಧ ನಡೆಯುತ್ತಿರುವ ಜಾಗಗಳಿಂದ ಟ್ರಂಪ್‌ ಅವರು ಅಮೆರಿಕದ ಪಡೆಗಳನ್ನು ವಾಪಸ್‌ ಕರೆಸುತ್ತಾರೆ. ಆದರೆ ಅವರು ಅಂತಹ ಕೆಲಸ ಮಾಡುವ ಮೊದಲ ಅಧ್ಯಕ್ಷರಲ್ಲ.

ಮೂರನೆಯ ವಿಚಾರ ಅತ್ಯಂತ ಕುತೂಹಲದ್ದು. ಏಕೆಂದರೆ, ಅಮೆರಿಕದ ಚುನಾವಣೆಯಲ್ಲಿನ ನೈಜ ವಿಚಾರ ಅಲ್ಲಿನ ಉದ್ಯೋಗಗಳು ಹಾಗೂ ಅರ್ಥವ್ಯವಸ್ಥೆಗೆ ಸಂಬಂಧಿಸಿದ್ದಾಗಿತ್ತು ಎಂದು ನಾವು ಹಲವು ಬಾರಿ ಕೇಳಿದ್ದೇವೆ. ದೈಹಿಕ ಶ್ರಮದ ಕೆಲಸ ಮಾಡುವ ಶ್ವೇತವರ್ಣೀಯರು ಟ್ರಂಪ್‌ ಅವರ ಮತದಾರರು. ಇಂಥ ಕೆಲಸ ಮಾಡುವ ಅಮೆರಿಕನ್ನರು ಮಧ್ಯಮವರ್ಗದ ಜೀವನ ನಡೆಸುವಂತೆ ಮಾಡಿದ್ದು ಹೆನ್ರಿ ಫೋರ್ಡ್‌. ಫೋರ್ಡ್‌ ಅವರು ತಯಾರಿಸಿದ ಕೈಗೆಟಕುವ ಬೆಲೆಯ ಕಾರುಗಳನ್ನು, ಆ ಕಾರುಗಳ ಬಿಡಿಭಾಗ ಜೋಡಿಸುವವರೂ ಖರೀದಿಸಬಹುದಾಗಿತ್ತು.

ವಿಸ್ಕಾನ್ಸಿನ್‌ನ ಜೇನ್ಸ್‌ವಿಲ್‌ನಲ್ಲಿ ನಾನು ಮೂವತ್ತು ವರ್ಷಗಳ ಹಿಂದೆ ವಿದ್ಯಾರ್ಥಿಯಾಗಿದ್ದೆ. ನಾನು ಜಾನ್ಸನ್ ಎಂಬುವರ ಕುಟುಂಬದ ಜೊತೆ ಇದ್ದೆ. ಜಾನ್ಸನ್‌ ಅವರು ಕಾರಿನ ಚಕ್ರ ಜೋಡಿಸುವ ಕೆಲಸವನ್ನು ದಶಕಗಳಿಂದ ಮಾಡುತ್ತಿದ್ದರು. ಅವರಿಗೆ ಬರುತ್ತಿದ್ದ ಕೆಲಸ ಅದೊಂದೇ. ಆ ಕೆಲಸದಿಂದ ಸಂಪಾದಿಸಿದ ಹಣ ಬಳಸಿ ಅವರು ಚೆಂದದ ಮನೆ ಕಟ್ಟಿಸಿದ್ದರು, ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದರು. ಅವರು 1919ರಲ್ಲಿ ಈ ಘಟಕ ಆರಂಭಿಸಿ, ಐದು ಸಾವಿರಕ್ಕೂ ಹೆಚ್ಚು ಜನರಿಗೆ ಕೆಲಸ ನೀಡಿದ್ದರು. ಆದರೆ ಅದು 2009ರಲ್ಲಿ ಮುಚ್ಚಿಹೋಯಿತು. ಏಕೆಂದರೆ ಚೀನಾ ಮತ್ತು ದಕ್ಷಿಣ ಅಮೆರಿಕದಲ್ಲಿ ಕಡಿಮೆ ವೇತನಕ್ಕೆ ಕೆಲಸಗಾರರು ಸಿಗುವ ಕಾರಣ, ಅಲ್ಲಿ ಕಾರಿನ ಬಿಡಿಭಾಗಗಳ ಜೋಡಣೆ ಕಡಿಮೆ ವೆಚ್ಚದಲ್ಲಿ ಆಗುತ್ತದೆ.

ಇಂದು, ಚೀನಾ, ದಕ್ಷಿಣ ಅಮೆರಿಕ ಮತ್ತು ಭಾರತದಲ್ಲಿ ಕೂಡ ಉದ್ಯೋಗ ನಾಶ ಕಂಡಬರುತ್ತಿದೆ. ಕೆಲಸಗಳು ಸ್ವಯಂಚಾಲಿತವಾಗಿ ಆಗುತ್ತಿವೆ, ದಿನಕಳೆದಂತೆ ಅವು ಹೆಚ್ಚು ದಕ್ಷವಾಗುತ್ತಿವೆ. ಹಾಗಾಗಿ ಈ ದೇಶಗಳಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡಿಸುವುದಕ್ಕಿಂತಲೂ, ಸ್ವಯಂಚಾಲಿತ ವ್ಯವಸ್ಥೆ ಮೂಲಕ ಕೆಲಸ ಮಾಡಿಸುವುದು ಸೋವಿ ಆಗುತ್ತಿದೆ. ತಯಾರಿಕಾ ವಲಯ ಮತ್ತೆ ಅಮೆರಿಕದತ್ತ ಮುಖ ಮಾಡಿದೆ. ಆದರೆ, ಇಲ್ಲಿ ತಯಾರಿಕೆಯು ಕಾರ್ಮಿಕರ ಬಳಕೆಯೇ ಇಲ್ಲದೆ ಆಗುತ್ತದೆ.

ಆದರೆ, ಉದ್ಯೋಗ ಇಲ್ಲದಿರುವ ಸ್ಥಿತಿಯ ಹಾಗೂ ಪ್ರಜಾತಾಂತ್ರಿಕ ರಾಜಕೀಯದ ನಿಜ ಸಮಸ್ಯೆ ಭಾರತದಲ್ಲಿ ಕಾಣಿಸುತ್ತಿದೆ. ಸಮಸ್ಯೆ ನಮ್ಮ ಕಣ್ಣೆದುರೇ ಇದೆ. ಕೆಲಸಗಳು ಸ್ವಯಂಚಾಲಿತ ಆಗಿರುವ ಕಾರಣ ಇನ್ಫೊಸಿಸ್‌ ಕಂಪೆನಿಯಿಂದ ಎಂಟು ಸಾವಿರ ಜನರನ್ನು ಕೆಲಸದಿಂದ ಹೊರಹಾಕಿರುವುದು ಕೆಲವು ದಿನಗಳ ಹಿಂದೆ ಗೊತ್ತಾಗಿದೆ.

ಇದು ಸಾಮಾನ್ಯ ಮಾಹಿತಿ ಅಲ್ಲ. ಏಕೆಂದರೆ ಭಾರತದ ಸಾಫ್ಟ್‌ವೇರ್‌ ಕಂಪೆನಿಗಳು ಜನರನ್ನು ಎರಡು ದಶಕಗಳಿಂದ ದೊಡ್ಡ ಪ್ರಮಾಣದಲ್ಲಿ ನೇಮಿಸಿಕೊಳ್ಳುತ್ತಿದ್ದವು. ಕಂಪೆನಿಗಳು ಹೇಳುವ ಪ್ರಕಾರ, ಈ ರೀತಿ ನೇಮಕ ಮಾಡಿಕೊಳ್ಳುವ ಪ್ರಕ್ರಿಯೆ ಈಗ ಕೊನೆಗೊಂಡಿದೆ. ಕಂಪೆನಿಗಳು ಈಗ ಸಣ್ಣ ಸಂಖ್ಯೆಯಲ್ಲಿ, ಹೆಚ್ಚಿನ ಕೌಶಲ ಇರುವ ನೌಕರರನ್ನು ನೇಮಿಸಿಕೊಳ್ಳುತ್ತಿವೆ. ಅವು ಇನ್ನು ಮುಂದೆ ಜನರನ್ನು ದೊಡ್ಡ ಸಂಖ್ಯೆಯಲ್ಲಿ ನೇಮಿಸಿಕೊಳ್ಳುವುದಿಲ್ಲ.

ಸುಶಿಕ್ಷಿತ, ಬೌದ್ಧಿಕ ಸಾಮರ್ಥ್ಯ ಆಧರಿಸಿ ಕೆಲಸ ಮಾಡುವ ನಗರವಾಸಿ ಭಾರತೀಯರ ಸ್ಥಿತಿಯೇ ಹೀಗಾದರೆ, ಪಟ್ಟಣ ಹಾಗೂ ಹಳ್ಳಿಗಳಲ್ಲಿನ ಲಕ್ಷಾಂತರ ಜನರ ಪಾಡು ಏನು? ಅವರು ನಿಜಕ್ಕೂ ತೊಂದರೆಗೆ ಸಿಲುಕಿದ್ದಾರೆ.

ದೇಶದಲ್ಲಿ ಬೇರೆ ಬೇರೆ ವಿಷಯಗಳ ಬಗ್ಗೆ ನಡೆಯುತ್ತಿರುವ ಪ್ರತಿಭಟನೆಗಳನ್ನು ಈ ಕ್ಷೋಭೆಯ ಹಿನ್ನೆಲೆಯಲ್ಲಿ ನಾವು ಅರ್ಥ ಮಾಡಿಕೊಳ್ಳಬೇಕು. ಗುಜರಾತಿನ ಪಟೇಲರು, ಹರಿಯಾಣದ ಜಾಟರು, ಮಹಾರಾಷ್ಟ್ರದ ಮರಾಠರ ಮುಖ್ಯ ಬೇಡಿಕೆ ಉತ್ತಮ ವೇತನ ನೀಡುವ ದೈಹಿಕ ಶ್ರಮದ ಉದ್ಯೋಗ. ಆದರೆ, ಇಂದಿನ ಸ್ಥಿತಿಯಲ್ಲಿ ಇಂಥದ್ದೊಂದು ಕೆಲಸ ದೇಶದಲ್ಲಿ ದೊಡ್ಡ ಪ್ರಮಾಣದಲ್ಲಿ ಸಿಗುವುದು ಅಸಾಧ್ಯ. ಜಗತ್ತಿನ ಬೇರೆಡೆ ಕೂಡ ದೊಡ್ಡ ಪ್ರಮಾಣದಲ್ಲಿ ಇಂಥ ಕೆಲಸ ಸಿಗದು.ಹೆಚ್ಚಿನ ಕೆಲಸಗಾರರ ಮೂಲಕ ಅಥವಾ ದಕ್ಷತೆಯನ್ನು ಹೆಚ್ಚಿಸುವ ಮೂಲಕ ಉತ್ಪಾದನೆ ಹೆಚ್ಚಾದಾಗ ಆರ್ಥಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಆದರೆ, ಭಾರತದಲ್ಲಿ ಕೌಶಲ ಇಲ್ಲದ ಕಾರ್ಮಿಕರ ಸಂಖ್ಯೆ ಹೆಚ್ಚಾಗಿದೆ. ಅವರು ಪಡೆದಿರುವ ಶಿಕ್ಷಣದ ಪ್ರಮಾಣ ಕಡಿಮೆ, ಅವರಲ್ಲಿನ ತಯಾರಿಕಾ ಸಾಮರ್ಥ್ಯವೂ ಕಡಿಮೆ. ಕಡಿಮೆ ಖರ್ಚಿನಲ್ಲಿ ಕೆಲಸ ಆಗುತ್ತದೆ ಎಂಬುದೇ ದೊಡ್ಡ ಅನುಕೂಲ ಅಲ್ಲ. ಈ ಪರಿಸ್ಥಿತಿಯನ್ನು ಯಾವುದೇ ಯಕ್ಷಿಣಿ ನೀತಿ, ಘೋಷಣೆ ಅಥವಾ ಲಾಂಛನದಿಂದ ಬದಲಿಸಲು ಆಗದು.

ಸರಳೀಕೃತ ಪರಿಹಾರಗಳನ್ನು ಹೇಳುವ ಜನಪ್ರಿಯ ನಾಯಕನ ಬಗ್ಗೆ ನಾವು ಎಚ್ಚರಿಕೆಯಿಂದ ಇರಬೇಕು. ಇದು ಅಮೆರಿಕದ ಮಟ್ಟಿಗೆ ಎಷ್ಟು ಸತ್ಯವೋ ಭಾರತದ ಮಟ್ಟಿಗೂ ಅಷ್ಟೇ ಸತ್ಯ. ಜಗತ್ತು ಸಂಕೀರ್ಣವಾಗಿದೆ. ಜಗತ್ತಿನ ಅರ್ಥವ್ಯವಸ್ಥೆ ಹೇಗೆ ವಿಕಾಸಗೊಂಡಿದೆ ಎಂದರೆ, ಒಬ್ಬ ವ್ಯಕ್ತಿಯಿಂದ, ಆತ ಎಷ್ಟೇ ಬುದ್ಧಿವಂತ ಆಗಿರಲಿ, ಅದನ್ನು ಬದಲಿಸಲು ಸಾಧ್ಯವಿಲ್ಲ.

ಈ ಎಲ್ಲ ಕಾರಣಗಳಿಂದಾಗಿ, ಅಮೆರಿಕನ್ನರಿಗೆ ಉದ್ಯೋಗ ಕೊಡಿಸುವ ಟ್ರಂಪ್‌ ಅವರ ಭರವಸೆ ಟೊಳ್ಳು. ಹಾಗೆಂದು, ಮುಂದಿನ ಅಧ್ಯಕ್ಷರು ‘ವಾಷಿಂಗ್ಟನ್‌ ನಗರವನ್ನು ಬದಲಿಸುತ್ತೇನೆ, ಅಮೆರಿಕಕ್ಕೆ ಮೊದಲ ಆದ್ಯತೆ ನೀಡುತ್ತೇನೆ, ಉದ್ಯೋಗ ಸೃಷ್ಟಿಸುತ್ತೇನೆ’ ಎಂಬ ಹಳೆಯ ಮಾತುಗಳನ್ನೇ ಹೇಳುವುದನ್ನು ತಡೆಯಲು ಸಾಧ್ಯವಿಲ್ಲ.

(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry