ಮಂಗಳವಾರ, ಜೂನ್ 28, 2022
21 °C

ನೀರುನಾಯಿಗಿಲ್ಲ ರಕ್ಷಣೆ

ಶಶಿಕಾಂತ ಎಸ್‌. ಶೆಂಬಳ್ಳಿ Updated:

ಅಕ್ಷರ ಗಾತ್ರ : | |

ನೀರುನಾಯಿಗಿಲ್ಲ ರಕ್ಷಣೆ

ತುಂಗಭದ್ರಾ ನದಿಗುಂಟ ಅಪಾರ ಸಂಖ್ಯೆಯಲ್ಲಿ ಅಪರೂಪದ ‘ನೀರುನಾಯಿ’ಗಳಿವೆ (ಆಟರ್‌). ಆದರೆ, ಅವುಗಳಿಗೆ ಸೂಕ್ತ ರಕ್ಷಣೆಯೇ ಇಲ್ಲ. ಇದರಿಂದ ನೀರುನಾಯಿಗಳ ಸಂತತಿಗೆ ಬಹುದೊಡ್ಡ ಕಂಟಕ ಎದುರಾಗಿದೆ.ಜಲಬಾಂಬ್‌ ಸಿಡಿಸಿ ನಡೆಸುವ ಮೀನುಗಾರಿಕೆ, ಅಕ್ರಮ ಮರಳು ಗಣಿಗಾರಿಕೆ ಹಾಗೂ ನೀರು ಮಲಿನ ಆಗುತ್ತಿರುವ ಕಾರಣ ಅವುಗಳಿಗೆ ಸಂಕಷ್ಟ ಎದುರಾಗಿದೆ. ನೀರು ನಾಯಿಗಳ ಸಂತತಿ ಹೆಚ್ಚಳಕ್ಕೆ ತುಂಗಭದ್ರಾ ನದಿ ಹರಿಯುವ ಪ್ರದೇಶ ಪ್ರಶಸ್ತ ಸ್ಥಳ ಎಂದು ಗುರುತಿಸಲಾಗಿದೆ. ಆದರೆ, ಕೆಲ ಕಾನೂನುಬಾಹಿರ ಚಟುವಟಿಕೆಗಳಿಂದ ಅವುಗಳಿಗೆ ಆಪತ್ತು ಎದುರಾಗಿದೆ.ಕೊಪ್ಪಳ ಜಿಲ್ಲೆಯ ಮುದ್ಲಾಪುರ ಗ್ರಾಮದಿಂದ ಹೊಸಪೇಟೆ ತಾಲ್ಲೂಕಿನ ಹಂಪಿ, ಕಂಪ್ಲಿ ಪಟ್ಟಣದವರೆಗೆ ಹೆಚ್ಚಿನ ಸಂಖ್ಯೆಯಲ್ಲಿ ನೀರುನಾಯಿಗಳನ್ನು ಕಾಣಬಹುದು. ಈ ಭಾಗಗಳ ಮೂಲಕ ತುಂಗಭದ್ರೆ ಹರಿಯುವ ಕಾರಣದಿಂದ ಈ ಪ್ರದೇಶವನ್ನೇ ನೀರುನಾಯಿಗಳು ಆವಾಸ ಸ್ಥಾನ ಮಾಡಿಕೊಂಡಿವೆ.

ಸ್ಥಳೀಯ ವನ್ಯಜೀವಿ ಮತ್ತು ಪರಿಸರ ಪ್ರೇಮಿಗಳ ಸತತ ಪ್ರಯತ್ನದಿಂದ 2015ರ ಏಪ್ರಿಲ್‌ನಲ್ಲಿ ಅರಣ್ಯ ಮತ್ತು ಪರಿಸರ ಇಲಾಖೆಯು 34 ಕಿ.ಮೀ. ಪ್ರದೇಶವನ್ನು ‘ನೀರು ನಾಯಿ ಸಂರಕ್ಷಿತ ಪ್ರದೇಶ’ ಎಂದು ಘೋಷಿಸಿದೆ.

ಸಂರಕ್ಷಿತ ಪ್ರದೇಶ ಎಂದು ಘೋಷಣೆ ಆಗಿರುವುದರಿಂದ ಈ ಭಾಗದಲ್ಲಿ ಮೀನುಗಾರಿಕೆ, ಕುಡಿಯುವ ನೀರಿನ ಯೋಜನೆ, ಜಲವಿದ್ಯುತ್‌ ಯೋಜನೆ, ಅಕ್ರಮ ಮರಳುಗಾರಿಕೆ ಸೇರಿದಂತೆ ನೀರು ನಾಯಿಗಳಿಗೆ ಯಾವುದೇ ರೀತಿಯಿಂದ ತೊಂದರೆ ಆಗದಂತೆ ಮುತುವರ್ಜಿ ವಹಿಸಬೇಕು. ಆದರೆ, ಸಂರಕ್ಷಿತ ಪ್ರದೇಶವೆಂದು ಘೋಷಣೆಯಾಗಿ ಸುಮಾರು ಒಂದುವರೆ ವರ್ಷಕ್ಕೂ ಹೆಚ್ಚು ಸಮಯ ಕಳೆದರೂ ಅರಣ್ಯ ಇಲಾಖೆ ಅವುಗಳ ಸಂರಕ್ಷಣೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ನೀರುನಾಯಿಗಳ ಸಂತತಿಯ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯ ಪರಿಸರ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.‘ನದಿಯ ಎರಡೂ ಕಡೆ ಅಪಾರ ಸಂಖ್ಯೆಯಲ್ಲಿ ನೀರುನಾಯಿಗಳಿವೆ. ಆದರೆ, ಅವೈಜ್ಞಾನಿಕವಾಗಿ ನಡೆಯುತ್ತಿರುವ ಮೀನುಗಾರಿಕೆ, ಮರಳುಗಾರಿಕೆಯಿಂದ ಅವುಗಳಿಗೆ ತೊಂದರೆ ಆಗುತ್ತಿದೆ. ತುಂಗಭದ್ರಾ ಕಾಲುವೆಗಳಲ್ಲೂ ನೀರುನಾಯಿಗಳು ಸುರಕ್ಷಿತವಿಲ್ಲ. ಮೀನುಗಾರಿಕೆಯೇ ಇದಕ್ಕೆಲ್ಲ ಕಾರಣ. ಮೀನುಗಾರಿಕೆಗೆ ನಿರ್ದಿಷ್ಟ ಜಾಗ ಗೊತ್ತು ಮಾಡಬೇಕು’ ಎಂದು ವನ್ಯಜೀವಿ ತಜ್ಞ ಸಮದ್‌ ಕೊಟ್ಟೂರು, ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯ ಮಳಿಮಠ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.‘ವಾಟರ್‌ಬಾಂಬ್‌ ಸಿಡಿಸಿ ಮೀನುಗಾರಿಕೆ ಮಾಡುತ್ತಿರುವ ಕಾರಣ ನೀರುನಾಯಿಗಳು ಸಾಯುತ್ತಿವೆ. ಇದಕ್ಕೆ ಕಡಿವಾಣ ಹಾಕಿ ಅವುಗಳ ಬೆಳವಣಿಗೆಗೆ ಪೂರಕ ವಾತಾವರಣ ನಿರ್ಮಿಸಬೇಕು. ಕೇವಲ ಸಂರಕ್ಷಿತ ಪ್ರದೇಶವೆಂದು ಘೋಷಣೆ ಮಾಡಿದರೆ ಸಾಲದು.

ಕಾವಲುಗಾರರು, ವೀಕ್ಷಣಾ ಗೋಪುರ, ದೋಣಿಗಳು ಸೇರಿದಂತೆ ಇತರ ಕೆಲಸಗಳು ಈಗಾಗಲೇ ಆಗಬೇಕಿತ್ತು’ ಎಂದು ಹವ್ಯಾಸಿ ಛಾಯಾಗ್ರಾಹಕ ಹಾಗೂ ಪರಿಸರಪ್ರೇಮಿ ಶಿವಶಂಕರ ಬಣಗಾರ ಹೇಳಿದರು.‘ನೀರುನಾಯಿಗಳ ಸಂರಕ್ಷಣೆಗೆ ಸೂಕ್ತ ಕ್ರಮ ಜರುಗಿಸಬೇಕೆಂದು ಸಂಬಂಧಿಸಿದ ಇಲಾಖೆಯ ಮೇಲಧಿಕಾರಿಗಳಿಗೆ ಪತ್ರ ಬರೆದರೂ ಯಾವುದೇ  ಪ್ರಯೋಜನವಾಗಿಲ್ಲ’ ಎಂದೂ ಹೇಳಿದರು.  

ಏನೆನ್ನುತ್ತಾರೆ ಅರಣ್ಯ ಸಂರಕ್ಷಣಾಧಿಕಾರಿ

*ನೀರುನಾಯಿಗಳ ಸಂರಕ್ಷಣೆಗೆ ಸಂಬಂಧಿಸಿ ಕ್ರಿಯಾಯೋಜನೆ ಸಿದ್ಧಪಡಿಸಿ ಕಳುಹಿಸಲಾಗಿದೆ. ಸಿಬ್ಬಂದಿ ನೇಮಕ, ವೀಕ್ಷಣಾ ಗೋಪುರ ಸೇರಿದಂತೆ ಇತರ ಕೆಲಸಗಳು ಆಗಬೇಕಿದೆ.ಮೀನುಗಾರಿಕೆಯಿಂದ ನೀರುನಾಯಿಗಳು ಸಾಯುತ್ತಿವೆ ಎನ್ನುವ ವಿಷಯ ಗಮನಕ್ಕೆ ಬಂದಿಲ್ಲ. ಆದರೆ, ಅವುಗಳ ರಕ್ಷಣೆಗೆ ಎಲ್ಲ ರೀತಿಯ ಅಗತ್ಯ ಕ್ರಮ ತೆಗೆದುಕೊಳ್ಳಲಾಗುವುದು.

–ಭಾಸ್ಕರ್‌, ನೀರುನಾಯಿ ವಲಯ ಅರಣ್ಯ ಸಂರಕ್ಷಣಾಧಿಕಾರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.