ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಸಭಿಜ್ಞತೆಯ ಆಕರ್ಷಕ ನೃತ್ಯ

ನಾದನೃತ್ಯ
Last Updated 23 ಜನವರಿ 2017, 19:30 IST
ಅಕ್ಷರ ಗಾತ್ರ

ರವೀಂದ್ರ ಕಲಾಕ್ಷೇತ್ರದಲ್ಲಿ ಇತ್ತೀಚೆಗೆ ಶಾಸ್ತ್ರೀಯ ಚೌಕಟ್ಟಿನೊಳಗೆ ಮೂಡಿಬಂದ ಡಾ. ಅನಘಾ ಸಂಪಿಗೆಯವರ ರಂಗಪ್ರವೇಶವು  ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರ ಮನಗೆದ್ದಿತು.

ನೃತ್ಯ ಗುರು ಶಕುಂತಲಾ ಆರ್. ಪ್ರಭಾತ್ ಅವರ ಗರಡಿಯಲ್ಲಿ ಅನೇಕ ವರ್ಷ ಪಳಗಿ ‘ಮಾರ್ಗಂ’  ಶೈಲಿಯ ಸುಂದರ  ಭರತನಾಟ್ಯ ನೃತ್ಯಾರ್ಪಣೆ ಮಾಡಿದರು. ಹಂಸನಾದ ರಾಗದ ಪುಷ್ಪಾಂಜಲಿ, ಗಣೇಶಸ್ತುತಿಯೊಂದಿಗೆ ನೃತ್ಯ ಪ್ರಸ್ತುತಿ ಆರಂಭಿಸಿದರು. ನೃತ್ತ ಪ್ರತಿಭೆ ತೋರಿಸಲು ಬಹಳಷ್ಟು ಅವಕಾಶವಿರುವ ‘ಜತಿಸ್ವರ’ದಲ್ಲಿ (ಮಿಶ್ರ ಛಾಪು ತಾಳ-ರಾಗಮಾಲಿಕೆ) ಶುದ್ಧ ನೃತ್ತದ ಭಾಗವನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸಿದರು.

ರೂಪಕತಾಳದ, ಅಮೃತವರ್ಷಿಣಿ ರಾಗದ ‘ದೇವಿ ಸ್ತುತಿ’ ‘ನಮೋ ನಮೋ ಶ್ರೀ ತುಳಸೀ’ (ರಚನೆ- ಪ್ರಾಣೇಶ ವಿಠಲದಾಸರು) ಎಂದು ಪಾಪ ಪರಿಹಾರಿಣಿ, ಅಮೃತದಾಯಿನಿಯಾದ ತುಳಸೀಮಾತೆಯ ಗುಣಗಾನವನ್ನು ಮಾಡಿದರು.

ನರ್ತನದ ಪ್ರಮುಖ ಘಟ್ಟ- ‘ವರ್ಣ’. ರೀತಿಗೌಳ- ಆದಿತಾಳದಲ್ಲಿ ಆಚಾರ್ಯ ರಾಘವೇಂದ್ರ ಜೆ. ಪ್ರಭಾತ್ ರಚಿಸಿದ ಈ ಕೃತಿಗೆ ತಿರುಮಲೆ ಶ್ರೀನಿವಾಸ್ ಸಂಗೀತ ಸಂಯೋಜನೆ ಮಾಡಿದ್ದರು.

ಅಭಿನಯಕ್ಕೆ ವಿಪುಲ ಅವಕಾಶವಿರುವ ಈ ಕೃತಿಯನ್ನು ತನ್ನ ಅಭಿನಯ ಸಾಮರ್ಥ್ಯ ಪ್ರದರ್ಶನಕ್ಕೆ ಅವರು ಸಾರ್ಥಕವಾಗಿ ಬಳಸಿಕೊಂಡರು. ‘ಶ್ರೀ ಕೃಷ್ಣ ಕಮಲಾನಾಥೋ ವಾಸುದೇವ’ -ಇಡೀ ಭಾಗವತದ ಸುಂದರ ದರ್ಶನ ಸಾಕ್ಷಾತ್ಕಾರವಾಯಿತು. ಸಂಚಾರಿ ಭಾಗದಲ್ಲಿ ಅನಘಾ, ಅನೇಕ ಸೂಕ್ಷ್ಮ ಅಭಿವ್ಯಕ್ತಿಗಳೊಂದಿಗೆ ಕಥಾನಡೆಗೆ ಜೀವ ತುಂಬಿದಳು.

ಸೆರೆಮನೆಯಲ್ಲಿ ಶ್ರೀಕೃಷ್ಣನ ಜನನ, ವಾಸುದೇವ ಆದಿಶೇಷನ ರಕ್ಷಣೆಯಲ್ಲಿ, ಸುರಿವ ಮಳೆಯಲ್ಲಿ ಮಗುವನ್ನು ಗೋಕುಲಕ್ಕೆ ಸಾಗಿಸಿ, ಯಶೋದೆಯ ಆಸರೆಯಲ್ಲಿ ಬಿಡುವುದು. ಮಗುವನ್ನು ಕೊಲ್ಲಲು ಬಂದ ಪೂತನಿ ಸಾಯುವ ದೃಶ್ಯದಲ್ಲಿ ಕಲಾವಿದೆ, ಪೂತನಿಯ ದೈತ್ಯ ಹೆಜ್ಜೆ, ಒರಟು ನಡವಳಿಕೆ, ಮುಖಚರ್ಯೆಯ ಅಭಿನಯವನ್ನು ಪರಿಣಾಮಕಾರಿಯಾಗಿ ಅಭಿನಯಿಸಿ ಮೆಚ್ಚುಗೆ ಪಡೆದಳು.

ಕಾಳಿಂಗಮರ್ದನ, ಗೋಪಿಕೆಯರೊಡನೆ ಜಲಕ್ರೀಡೆ ಮುಂತಾದ ಭಾಗ ಸುಂದರವಾಗಿ ಮೂಡಿಬಂದಿತು. ಯುದ್ಧರಂಗದಲ್ಲಿ ಅರ್ಜುನ ಹಿಂಜರಿದಾಗ, ಕೃಷ್ಣ, ಅರ್ಜುನನ ಸಾರಥಿಯಾಗಿ ಉಪದೇಶಿಸುವ ಭಗವದ್ಗೀತೆಯ ಅಭಿನಯ ಮತ್ತು ವಿಶ್ವರೂಪ ದರ್ಶನದ ಪರಾಕಾಷ್ಠೆಯ ಹಂತವಂತೂ ಚಿತ್ತಾಕರ್ಷಕವಾಗಿತ್ತು.
ಉತ್ತರದಲ್ಲಿ ಕೃಷ್ಣ ಭಕ್ತೆ ಮೀರಾ, ನಮ್ಮಲ್ಲಿ ಅಕ್ಕ ಮಹಾದೇವಿ ಇದ್ದಂತೆ  ‘ಆಂಡಾಳ್’ ಕೃಷ್ಣ ಪರಮಾತ್ಮನನ್ನೇ ಗಂಡನೆಂದು ಆರಾಧಿಸುತ್ತಿದ್ದ ಮಹಾಭಕ್ತೆ.

ಅವಳು ತನ್ನ ಆರಾಧ್ಯದೈವನನ್ನು ಕುರಿತು  ಕಂಡ ಸುಂದರ ಕನಸಿನ ದೃಶ್ಯವನ್ನು ನೃತ್ಯಕಲಾವಿದೆ ಸುಂದರ ನರ್ತನ, ಅಭಿನಯಗಳಿಂದ ಸಾಕಾರಗೊಳಿಸಿದಳು. ಮುಂದೆ, ಧರ್ಮಪುರಿ ಸುಬ್ಬರಾವ್ ರಚನೆಯ (ರಾಗ-ಫರ್ಜ್, ಆದಿತಾಳ)  ಜಾವಳಿ ಹಾಗೂ ವಲಾಚಿ ರಾಗದ ‘ತಿಲ್ಲಾನ’ (ದ್ವಾರಕಿ ಕೃಷ್ಣಸ್ವಾಮಿ -ರಚನೆ) ದಲ್ಲಿನ  ಸಂಕೀರ್ಣ ಜತಿಗಳನ್ನು ಸಮರ್ಥವಾಗಿ ನಿರ್ವಹಿಸಿದಳು. ನೃತ್ಯ ಸಂಯೋಜನೆಗಳಲ್ಲಿ ಹೊಸ ವಿನ್ಯಾಸ, ಜತಿಗಳಲ್ಲಿ ವೈವಿಧ್ಯತೆ ಅಳವಡಿಸಿಕೊಂಡಿದ್ದರೆ ಕೃತಿಗಳು ಇನ್ನಷ್ಟು ಆಕರ್ಷಕವಾಗುತ್ತಿದ್ದವು.

ನಟುವಾಂಗದಲ್ಲಿ ಗುರು ಶಕುಂತಲಾ, ಗಾಯನದಲ್ಲಿ  ಶ್ರೀವತ್ಸ ಮತ್ತು ವಾದ್ಯಸಹಕಾರದಲ್ಲಿ ಮೃದಂಗ- ಜಿ.ಗುರುಮೂರ್ತಿ ಮತ್ತು ಕೊಳಲು-ಮಹೇಶಸ್ವಾಮಿ ಅವರ ಪಾತ್ರ ಹಿರಿದಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT