ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ₹1000 ನೋಟು ಶೀಘ್ರದಲ್ಲೇ ಚಲಾವಣೆಗೆ

Last Updated 27 ಜನವರಿ 2017, 4:40 IST
ಅಕ್ಷರ ಗಾತ್ರ

ನವದೆಹಲಿ: ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಶೀಘ್ರವೇ ಚಲಾವಣೆಗೆ ತರಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸಿದ್ಧತೆ ನಡೆಸಿದೆ. ಹೊಸ ವಿನ್ಯಾಸದ₹1,000 ಮುಖಬೆಲೆಯ ನೋಟುಗಳ ಮುದ್ರಣದ ಕೆಲಸವನ್ನು ಆರ್‌ಬಿಐ ತ್ವರಿತಗೊಳಿಸಿದೆ.

ಹಳೆಯ ₹1,000 ಮುಖಬೆಲೆಯ ನೋಟುಗಳಿಗಿಂತ ಹೊಸ ನೋಟು ಗಾತ್ರದಲ್ಲಿ ಚಿಕ್ಕದಾಗಿರಲಿದ್ದು, ಸುರಕ್ಷತೆಗೆ ಸಂಬಂಧಿಸಿ ಹೆಚ್ಚು ಅಂಶಗಳನ್ನು ಹೊಂದಿರಲಿದೆ. ಬಣ್ಣದಲ್ಲಿಯೂ ವ್ಯತ್ಯಾಸ ಇರಲಿದೆ ಎಂದು ಮೂಲಗಳು ತಿಳಿಸಿವೆ.

ಅಂಧರಿಗೆ ಗುರುತಿಸಲು ಸಾಧ್ಯವಾಗುವಂತೆ ಹೊಸ ನೋಟುಗಳು ಬ್ರೈಲ್‌ಸ್ನೇಹಿ ಆಗಿರಲಿವೆ.

ಹೊಸ ₹1,000 ಮುಖಬೆಲೆಯ ನೋಟುಗಳು ಚಲಾವಣೆಗೆ ಬರಲು ಇನ್ನೂ ಕೆಲವು ತಿಂಗಳು ಬೇಕು ಎಂದು ಸರ್ಕಾರ ಹಿಂದೆ ಹೇಳಿತ್ತು.

ಆದರೆ ₹2,000 ಮುಖಬೆಲೆಯ ನೋಟುಗಳಿಗೆ ಚಿಲ್ಲರೆ ದೊರೆಯುವುದು ಕಷ್ಟವಾಗುತ್ತಿದೆ. ಹಾಗಾಗಿ ₹1,000ದ ನೋಟುಗಳ ಮುದ್ರಣ ಕಾರ್ಯವನ್ನು ತ್ವರಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ. ಕಪ್ಪುಹಣ ಮತ್ತು ಖೋಟಾ ನೋಟು ಹಾವಳಿ ತಪ್ಪಿಸುವ ಪ್ರಯತ್ನವಾಗಿ ಕಳೆದ ನ.8ರಂದು ₹500 ಮತ್ತು ₹1,000 ಮುಖಬೆಲೆಯ ನೋಟುಗಳನ್ನು ಸರ್ಕಾರ ರದ್ದು ಮಾಡಿತು. ಹೊಸದಾಗಿ ₹500 ಮತ್ತು ₹2,000 ಮುಖಬೆಲೆಯ ನೋಟುಗಳನ್ನು ಚಲಾವಣೆಗೆ ತರಲಾಯಿತು.

₹2,000 ಮುಖಬೆಲೆಯ ನೋಟುಗಳನ್ನು ಕ್ರಮೇಣ ಚಲಾವಣೆಯಿಂದ ಹಿಂದಕ್ಕೆ ಪಡೆಯುವ ಚಿಂತನೆ ಇದೆ ಎಂದು ಮೂಲಗಳು ತಿಳಿಸಿವೆ.
‘ಹೆಚ್ಚು ಮುಖಬೆಲೆಯ ನೋಟುಗಳು ಕಪ್ಪುಹಣ ಸಂಗ್ರಹವನ್ನು ಸುಲಭವಾಗಿಸುತ್ತದೆ ಎಂಬುದು ಈ ನೋಟುಗಳನ್ನು ವಾಪಸ್‌ ಪಡೆಯಲು ಕಾರಣ. ನಗದು ಕೊರತೆ ಸಮಸ್ಯೆ ಪರಿಹಾರವಾದ ಬಳಿಕ  ಈ ಕ್ರಮ ಕಾರ್ಯರೂಪಕ್ಕೆ ಬರಬಹುದು’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ನಗದು ಕೊರತೆಯ ತೀವ್ರತೆ ಕಡಿಮೆಯಾಗುತ್ತಿದೆ. ಹಾಗಾಗಿ ಬ್ಯಾಂಕು ಮತ್ತು ಎಟಿಎಂಗಳಿಂದ ಹಣ ಪಡೆಯುವುದಕ್ಕೆ ಇರುವ ನಿರ್ಬಂಧವನ್ನು ಆರ್‌ಬಿಐ ಶೀಘ್ರವೇ ಕೈಬಿಡಲಿದೆ.

ಫೆಬ್ರುವರಿ ಕೊನೆಯ ವಾರ ಅಥವಾ ಮಾರ್ಚ್‌ ಮೊದಲ ವಾರದ ಹೊತ್ತಿಗೆ ನಗದು ಕೊರತೆಯ ಸಮಸ್ಯೆ ಪರಿಹಾರವಾಗಲಿದೆ ಎಂಬ ವಿಶ್ವಾಸವನ್ನು ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ ಕಳೆದ ವಾರ ವ್ಯಕ್ತಪಡಿಸಿತ್ತು.

ಎಟಿಎಂನಿಂದ ದಿನಕ್ಕೆ ಪಡೆಯಬಹುದಾದ ಗರಿಷ್ಠ ಮೊತ್ತವನ್ನು ಇತ್ತೀಚೆಗೆ ₹4,500ರಿಂದ ₹10 ಸಾವಿರಕ್ಕೆ ಏರಿಸಲಾಗಿದೆ.

₹1,000 ನೋಟು ಚಲಾವಣೆಗೆ ತರಲು ಕಾರಣ?

ನೋಟು ರದ್ದತಿ ನಂತರ ₹2,000 ಮುಖಬೆಲೆಯ ನೋಟು ಚಲಾವಣೆಗೆ ತರಲಾಗಿದೆ. ಆದರೆ ಅದಕ್ಕೆ ಚಿಲ್ಲರೆ ದೊರೆಯುವುದು ಕಷ್ಟ. ಈ ಸಮಸ್ಯೆ ನಿವಾರಣೆಗಾಗಿ ₹1,000 ನೋಟು ಬರಲಿದೆ.

₹2,000 ನೋಟು ರದ್ದತಿಗೆ ಚಿಂತನೆ

ಹೆಚ್ಚು ಮುಖಬೆಲೆಯ ನೋಟುಗಳು ಕಪ್ಪುಹಣ ಸಂಗ್ರಹವನ್ನು ಸುಲಭವಾಗಿಸುತ್ತದೆ. ಅದನ್ನು ತಡೆಯುವುದಕ್ಕಾಗಿ ₹2,000 ಮುಖಬೆಲೆಯ ನೋಟು ಹಿಂದಕ್ಕೆ ಪಡೆಯುವ ಚಿಂತನೆ ನಡೆಯುತ್ತಿದೆ.

ಅಂಕಿಅಂಶ

 ₹9.2 ಲಕ್ಷ ಕೋಟಿ– ಈತನಕ ಪೂರೈಕೆ ಮಾಡಲಾದ  ಹೊಸ ನೋಟುಗಳ ಮೊತ್ತ

₹15.44 ಲಕ್ಷ ಕೋಟಿ –ಕಳೆದ ನ. 8ರಂದು ಚಲಾವಣೆಯಿಂದ ಹಿಂದಕ್ಕೆ ಪಡೆಯಲಾದ ನೋಟುಗಳ ಮೊತ್ತ

ನೋಟಿನ ವೈಶಿಷ್ಟ್ಯ
ರದ್ದಾದ ₹1,000 ನೋಟಿಗಿಂತ ಗಾತ್ರದಲ್ಲಿ ಚಿಕ್ಕದು
ಹೊಸ ಬಣ್ಣ, ಅಂಧರ ಅನುಕೂಲಕ್ಕೆ ಬ್ರೈಲ್‌ಸ್ನೇಹಿ ವಿನ್ಯಾಸ
ನಕಲು ಮಾಡದಂತೆ ಹೆಚ್ಚು ಸುರಕ್ಷತಾ ಅಂಶಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT