7

ಅಸಹನೆಯ ದಿಗಿಲು ಜಾಗತಿಕ ಜಾಡ್ಯವೇ?

ಸುಧೀಂದ್ರ ಬುಧ್ಯ
Published:
Updated:
ಅಸಹನೆಯ ದಿಗಿಲು ಜಾಗತಿಕ ಜಾಡ್ಯವೇ?

ಕಳೆದ ವಾರ ಅವಳಿ ದಿನಗಳಂದು ಜೈಕಾರ ಮತ್ತು ಧಿಕ್ಕಾರದ ಘೋಷಣೆಗಳು ಅಮೆರಿಕದಲ್ಲಿ ಒಟ್ಟಿಗೇ ಕೇಳಿಬಂದವು. ಜನವರಿ 20ರಂದು ವಾಷಿಂಗ್ಟನ್‌ನಲ್ಲಿ ಟ್ರಂಪ್ ಬೆಂಬಲಿಗರ ಜೈಕಾರ ಮೊಳಗಿದರೆ, ಮರುದಿನ 21ರಂದು ವಿವಿಧ ನಗರಗಳಲ್ಲಿ ಮಹಿಳೆಯರು ಧಿಕ್ಕಾರದ ಮೆರವಣಿಗೆಯಲ್ಲಿ ಪಾಲ್ಗೊಂಡರು. ಹೊಸ ಅಧ್ಯಕ್ಷರು ಶ್ವೇತಭವನ ಹೊಕ್ಕ ಮರುದಿನವೇ ದೊಡ್ಡ ಮಟ್ಟದ ಪ್ರತಿಭಟನೆಯ ಕೂಗು ಎದ್ದದ್ದು ಈ ಬಾರಿಯ ವಿಶೇಷ. ಮೊದಲಿಗೆ ವಾಷಿಂಗ್ಟನ್ ಮಟ್ಟಿಗೆ ಆಯೋಜನೆಯಾಗಿದ್ದ ಪ್ರತಿಭಟನಾ ಜಾಥ, ನಂತರ ಅಮೆರಿಕದ ವಿವಿಧ ನಗರಗಳನ್ನು ವ್ಯಾಪಿಸಿಕೊಂಡು, ಹಲವು ದೇಶಗಳಿಗೂ ಹಬ್ಬಿ ತನ್ನ ಧ್ಯೇಯ, ಆಗ್ರಹದ ವ್ಯಾಪ್ತಿಯನ್ನು ಹಿರಿದಾಗಿಸಿಕೊಂಡಿತು. ಪ್ರತಿಭಟನೆಯ ಸ್ವರೂಪವೂ ಬದಲಾಯಿತು. ಪ್ರತಿಭಟನೆಯ ವೇಳೆ ಮಾನವ ಹಕ್ಕುಗಳ ವಿಶಾಲ ಭೂಮಿಕೆಯಲ್ಲಿ ಮಾತು ಬಂದರೂ, ಆಂತರ್ಯದಲ್ಲಿ ಅವು ಟ್ರಂಪ್ ವಿರೋಧಿ ಮಾತುಗಳೇ ಆಗಿದ್ದವು. ಇಂತಹ ಪ್ರತಿಭಟನೆಗಳು ಚುನಾವಣಾ ಫಲಿತಾಂಶ ಬಂದ ದಿನದಿಂದಲೂ ಅಮೆರಿಕದಲ್ಲಿ ನಡೆಯುತ್ತಲೇ ಇವೆ ಮತ್ತು ಮಾತುಮಾತಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಗೌರವಿಸುತ್ತೇವೆ ಎನ್ನುವವರೂ ಜನಾದೇಶದ ವಿರುದ್ಧ ಧ್ವನಿಯೆತ್ತುತ್ತಿದ್ದಾರೆ!

 

ಅದಿರಲಿ, ಟ್ರಂಪ್ ತಮ್ಮ ಪದಗ್ರಹಣ ಭಾಷಣದಲ್ಲಿ ರವಾನಿಸಿದ ಸಂದೇಶಗಳನ್ನು ಮೊದಲು ನೋಡೋಣ. ಸಾಮಾನ್ಯವಾಗಿ ಪದಗ್ರಹಣ ಭಾಷಣಗಳು ನಿರ್ದಿಷ್ಟ ಯೋಜನೆಗಳ ಕುರಿತಾಗಿ ಇರುವುದಿಲ್ಲ. ಬಹುತೇಕ ಒಂದೇ ಧಾಟಿಯಲ್ಲಿರುತ್ತವೆ. ಇದುವರೆಗೆ ಮಹತ್ವದ್ದು ಎನಿಸಿಕೊಂಡಿರುವ ಪ್ರಮಾಣವಚನ ಭಾಷಣಗಳು ಕೆಲವು ಮಾತ್ರ. ಎರಡನೇ ವಿಶ್ವಯುದ್ಧದ ನೆರಳಲ್ಲಿ ರೂಸ್ವೆಲ್ಟ್ ನಾಲ್ಕನೇ ಬಾರಿಗೆ ಅಧ್ಯಕ್ಷರಾಗಿ ಪ್ರಮಾಣ ಸ್ವೀಕರಿಸಿದಾಗ ಚುಟುಕಾದ, ಆದರೆ ಪರಿಣಾಮಕಾರಿಯಾದ ಭಾಷಣ ಮಾಡಿದ್ದರು. ‘ಒಬ್ಬಂಟಿಗರಾಗಿ ನಾವು ಬಾಳುವುದು ಸಾಧ್ಯವಿಲ್ಲ. ನಮಗಿಂತ ಬಹುದೂರ ಇರುವ ರಾಷ್ಟ್ರದಲ್ಲಿ ಬೇಗುದಿ ಇದ್ದರೆ ನಾವು ನೆಮ್ಮದಿಯಿಂದ ಬದುಕಲು ಸಾಧ್ಯವಿಲ್ಲ. ಪ್ರಾಣಿ, ಪಕ್ಷಿಗಳಂತೆ ಜೀವಿಸಲು ಆಗುವುದಿಲ್ಲ. ಮನುಷ್ಯರಂತೆಯೇ ಬದುಕಬೇಕೆಂಬುದು ನಮಗೆ ಅರಿವಾಗಿದೆ. ನಾವು ಅಮೆರಿಕದ ಪ್ರಜೆಗಳಷ್ಟೇ ಅಲ್ಲ. ಈ ವಿಶ್ವದ ನಾಗರಿಕರು, ಮಾನವಕುಲದ ಸದಸ್ಯರು’ ಎಂಬುದು ರೂಸ್ವೆಲ್ಟ್ ಮಾತಿನ ಹೂರಣವಾಗಿತ್ತು. ಇತ್ತೀಚಿನ ದಶಕಗಳಲ್ಲಿ ಕೆನಡಿ ಅಂತಹದ್ದೊಂದು ಭಾಷಣ ಮಾಡಿದ್ದರು. ‘We observe today not a victory of party but a celebration of freedom-symbolizing an end as well as a beginning- signifying renewal as well as change’ ಎಂಬ ಕೆನಡಿ ಮಾತು ಪ್ರಶಂಸೆಗೆ ಒಳಗಾಗಿತ್ತು.

 

ನಂತರ ಬಂದ ಹಲವು ಅಧ್ಯಕ್ಷರು ತಮ್ಮದೇ ಶೈಲಿಯಲ್ಲಿ ದೇಶಕ್ಕೆ ನವಚೈತನ್ಯ ತುಂಬುವ ಮಾತುಗಳನ್ನು ಆಡಿದ್ದರು. ಈ ಬಾರಿಯ ಟ್ರಂಪ್ ಭಾಷಣ ಭಿನ್ನವಾಗಿತ್ತು. ಹಾಗಾಗಿ ಅದು ಜಾಗತಿಕ ವೇದಿಕೆಯಲ್ಲಿ ಅಮೆರಿಕವನ್ನು ಋಣಾತ್ಮಕವಾಗಿ ಚಿತ್ರಿಸಿತು.  ಟ್ರಂಪ್ ತಮ್ಮ ಚುನಾವಣಾ ಭಾಷಣದ ಗುಂಗಿನಲ್ಲೇ ಮಾತನಾಡಿದರು ಎಂಬ ಅಭಿಪ್ರಾಯ ಹಲವು ವಿಶ್ಲೇಷಕರಿಂದ ಬಂತು. ಆದರೆ ಟ್ರಂಪ್ ಅವರ ರಾಜಕೀಯ ಬೆಳವಣಿಗೆ ಗಮನಿಸಿದರೆ, ಇದುವರೆಗೆ ‘ಪೊಲಿಟಿಕಲಿ ಕರೆಕ್ಟ್’ ಎನಿಸುವ ಮಾತು ಆಡಿದ್ದು ಕಡಿಮೆ. ತಾವು ಪ್ರತಿಪಾದಿಸಿಕೊಂಡು ಬಂದ ನಿಲುವುಗಳನ್ನು ಪದಗ್ರಹಣ ಭಾಷಣದಲ್ಲೂ ಪುನರುಚ್ಚರಿಸಿದರು. ‘ವಾಷಿಂಗ್ಟನ್ ಕೇಂದ್ರಿತ ಅಧಿಕಾರವನ್ನು ಜನರ ಬಳಿ ಕೊಂಡೊಯ್ಯುವೆ’, ‘ತೆರಿಗೆ, ವಲಸೆ, ವಾಣಿಜ್ಯ, ವಿದೇಶಾಂಗ ನೀತಿ ಕುರಿತ ಎಲ್ಲ ನಿರ್ಧಾರಗಳನ್ನೂ ಅಮೆರಿಕದ ನೌಕರ ವರ್ಗವನ್ನು ಗಮನದಲ್ಲಿಟ್ಟುಕೊಂಡು ಮಾಡಲಾಗುತ್ತದೆ’ ಇತ್ಯಾದಿ ಮಾತನ್ನು ಚುನಾವಣಾಪೂರ್ವ ವೇದಿಕೆಯಲ್ಲೂ ಟ್ರಂಪ್ ಆಡಿದ್ದರು. ‘ವಾಷಿಂಗ್ಟನ್ ಭ್ರಷ್ಟಾಚಾರವನ್ನು ಕಿತ್ತೊಗೆಯುತ್ತೇವೆ’ ಎಂಬ ಮಾತು 'Drain the Swamp' ಎನ್ನುವ ಜನಪ್ರಿಯ ಘೋಷಣೆಯಾಗಿತ್ತು. ಜೊತೆಗೆ ಟ್ರಂಪ್, ಹಿಂದಿನ ಅಧ್ಯಕ್ಷರು ಆಡಿದ್ದ ಮಾತುಗಳನ್ನೇ ಇನ್ನೊಂದು ರೀತಿ ಆಡಿದರು. ‘ಜನರಿಗೆ ಅಧಿಕಾರ ದೊರೆತಿದೆ’ ಎಂಬರ್ಥದ ಮಾತನ್ನು ರೇಗನ್ ಮತ್ತು ಕಾರ್ಟರ್ ಆಡಿದ್ದರು ಎಂದು ಗುರುತು ಮಾಡಬಹುದು. 

 

ಉಳಿದಂತೆ ಟ್ರಂಪ್ ಪ್ರಸ್ತಾಪಿಸಿದ ಬಹುತೇಕ ಅಂಶಗಳು ಅವರ ನೂರು ದಿನದ ಕಾರ್ಯ ಯೋಜನೆಯದ್ದು. ‘Every journey starts with a single step, and every presidency begins with the First 100 Days’ ಎನ್ನುವ ಮಾತು ಅಮೆರಿಕದಲ್ಲಿದೆ. 1933ರಲ್ಲಿ ಅಧ್ಯಕ್ಷ ಫ್ರಾಂಕ್ಲಿನ್ ರೂಸ್ವೆಲ್ಟ್ ಅಮೆರಿಕವನ್ನು ಆರ್ಥಿಕ ಸಂಕಷ್ಟದಿಂದ ಪಾರುಮಾಡಲು ಸರಣಿ ಯೋಜನೆಗಳನ್ನು ತಮ್ಮ ಮೊದಲ 100 ದಿನಗಳಲ್ಲಿ ರೂಪಿಸಿದ್ದರು. ಅಲ್ಲಿಂದ ಈಚೆಗೆ ಪ್ರತೀ ಅಧ್ಯಕ್ಷರಿಗೂ ಮೊದಲ 100 ದಿನ ಸವಾಲು ಮತ್ತು ಮೈಲಿಗಲ್ಲು. 1933ರಲ್ಲಿ, ಕುಸಿದ ಆರ್ಥಿಕತೆಯನ್ನು ಮೇಲೆತ್ತುವುದೇ ರೂಸ್ವೆಲ್ಟ್ ಅವರ ನೂರು ದಿನದ ಗುರಿಯಾಗಿತ್ತು. ಟ್ರೂಮನ್ ಅವರಿಗೆ ಎರಡನೇ ವಿಶ್ವಸಮರವನ್ನು ನಿಭಾಯಿಸುವುದು ಮೊದಲ ಸವಾಲಾಯಿತು. ಐಸೆನ್ ಹೋವರ್ ಚುನಾವಣಾ ಆಶ್ವಾಸನೆ ಪೂರ್ಣಗೊಳಿಸುವತ್ತ ಚಿತ್ತ ನೆಟ್ಟರು, ಕೊರಿಯಾ ಯುದ್ಧಕ್ಕೆ ಕೊನೆ ಹಾಡುವುದು ಪ್ರಥಮ ಆದ್ಯತೆಯಾಯಿತು. ಕೆನಡಿ, ವಿದೇಶಾಂಗ ನೀತಿಯನ್ನು ನೂರು ದಿನಗಳಲ್ಲಿ ಮರುರೂಪಿಸುವ ಕೆಲಸಕ್ಕೆ ಕೈ ಹಾಕಿದರು. ನಿರುದ್ಯೋಗ, ಹಣದುಬ್ಬರಕ್ಕೆ ಮದ್ದು ಹುಡುಕುವ ಕೆಲಸ ರೇಗನ್ ಅವರದ್ದಾಗಿತ್ತು. ನಿಕ್ಸನ್, ಜೆರಾಲ್ಡ್ ಫೋರ್ಡ್, ಕಾರ್ಟರ್, ಬುಷ್ ಮತ್ತು ಕ್ಲಿಂಟನ್ ಮೊದಲ ನೂರು ದಿನಗಳಲ್ಲಿ ಹೆಚ್ಚೇನನ್ನೂ ಮಾಡಲು ಸಾಧ್ಯವಾಗಲಿಲ್ಲ. ಗುರಿಯೆಡೆಗೆ ಮೊದಲು ದಾಪುಗಾಲಿಟ್ಟು, ನಂತರ ಕುಂಟುತ್ತಾ ನಡೆದ ಅಧ್ಯಕ್ಷರ ಉದಾಹರಣೆಗಳೂ ಇವೆ.

 

ಟ್ರಂಪ್ ತಮ್ಮ 100 ದಿನಗಳ ಕಾರ್ಯಸೂಚಿಯಲ್ಲಿ ಉಲ್ಲೇಖಿಸಿರುವ ಅಂಶಗಳು ಇವು. ಸಾಂವಿಧಾನಿಕ ತಿದ್ದುಪಡಿ ತಂದು ಕಾಂಗ್ರೆಸ್ ಸದಸ್ಯರ ಅವಧಿಗೆ ಮಿತಿ ನಿಗದಿಪಡಿಸುವುದು. ಟ್ರಾನ್ಸ್ ಪೆಸಿಫಿಕ್ ಪಾರ್ಟನರ್‌ಶಿಪ್‌ನಿಂದ (12 ರಾಷ್ಟ್ರಗಳ ನಡುವಿನ ಜಾಗತಿಕ ವಾಣಿಜ್ಯ ಒಪ್ಪಂದ)  ಹೊರಬರುವುದು. ಉದ್ಯೋಗ ಸೃಷ್ಟಿ ಸಾಮರ್ಥ್ಯ ಹೊಂದಿರುವ ಇಂಧನ ಕ್ಷೇತ್ರದ ಉದ್ದಿಮೆಗಳ ಮೇಲಿನ ನಿರ್ಬಂಧ ಸಡಿಲಿಸುವುದು. ಅಪರಾಧ ಹಿನ್ನೆಲೆಯ ಅಕ್ರಮ ವಲಸಿಗರನ್ನು ದೇಶದಿಂದ ಹಿಮ್ಮೆಟ್ಟಿಸುವ ಕೆಲಸಕ್ಕೆ ಚಾಲನೆ ನೀಡುವುದು. ತೆರಿಗೆ ಕಡಿತ ಮತ್ತು ಸರಳೀಕರಣದಿಂದ ಉದ್ಯೋಗ ಸೃಷ್ಟಿಯಾಗುವಂತೆ ನೋಡಿಕೊಳ್ಳುವುದು. ಸ್ಥಳೀಯರನ್ನು ಕೆಲಸದಿಂದ ತೆಗೆದು ಹೊರಗುತ್ತಿಗೆ ನೀಡಿ, ಉತ್ಪನ್ನಗಳನ್ನು ಅಮೆರಿಕದ ಮಾರುಕಟ್ಟೆಗೆ ತರುವುದರ ಮೇಲೆ ಕಣ್ಣಿಡುವುದು. ‘ಒಬಾಮಕೇರ್’ ಯೋಜನೆಯನ್ನು ಕಿತ್ತೊಗೆದು, ಬದಲೀ ಆರೋಗ್ಯ ವಿಮಾ ಯೋಜನೆ ರೂಪಿಸುವುದು.

 

ಈ ಗುರಿಯೆಡೆಗೆ ಅವರು ದಾಪುಗಾಲಿಟ್ಟಿರುವುದು ಈ ಮೂರ್ನಾಲ್ಕು ದಿನಗಳಲ್ಲಿ ಹೊರಡಿಸಿರುವ ಆದೇಶಗಳಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ‘ಒಬಾಮಕೇರ್’ಗೆ ಇತಿಶ್ರೀ ಹಾಡಲು ಅಂಕಿತ ಬಿದ್ದಿದೆ. ‘ಟಿಪಿಪಿ ಅಮೆರಿಕಕ್ಕೆ ಮಾರಕವಾಗುವ ವಾಣಿಜ್ಯ ಒಪ್ಪಂದ’ ಎಂಬ ಮಾತನ್ನು ಸಾಕಷ್ಟು ಬಾರಿ ಟ್ರಂಪ್ ಆಡಿದ್ದರು. ಅದನ್ನು ರದ್ದುಮಾಡುವ ಆಡಳಿತಾತ್ಮಕ ಆದೇಶವನ್ನು ಹೊರಡಿಸಿದ್ದಾರೆ. ಇದರಿಂದ ಅಮೆರಿಕದ ಮಾರುಕಟ್ಟೆಗೆ ತೆರಿಗೆರಹಿತವಾಗಿ ಬರುತ್ತಿದ್ದ ಸರಕುಗಳು ನಿಲ್ಲಲಿವೆ. ಅಮೆರಿಕದ ಉದ್ದಿಮೆಗಳಿಗೂ ಅನುಕೂಲವಾಗಲಿದೆ. ಭಾರತದ ದೃಷ್ಟಿಯಿಂದ ನೋಡಿದರೆ, ಭಾರತದ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಲಿದೆ, ಗಾರ್ಮೆಂಟ್ಸ್ ಕ್ಷೇತ್ರದಲ್ಲಿ ಹೆಚ್ಚು ವಾಹಿವಾಟು ಸಾಧ್ಯವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ. ದಕ್ಷಿಣ ಗಡಿಯಲ್ಲಿ ತಡೆಗೋಡೆ ನಿರ್ಮಿಸುವ ಕುರಿತ ಯೋಜನೆಗೆ, ಅಪರಾಧ ಹಿನ್ನೆಲೆಯ ಅಕ್ರಮ ವಲಸಿಗರನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ದೊರೆತಿದೆ. 10,000 ಗಡಿರಕ್ಷಣಾ ಸಿಬ್ಬಂದಿಯ ಹೊಸ ನೇಮಕಾತಿಗೆ ಒಪ್ಪಿಗೆ ದೊರೆತಿದೆ. ಇಂಧನ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಲು ರೂಪಿಸಲಾಗಿದ್ದ ‘ಡಕೋಟ ಪೈಪ್‌ಲೈನ್’ ಯೋಜನೆ ಪರಿಸರಕ್ಕೆ ಮಾರಕ, ಜನವಸತಿಗೆ ಸುರಕ್ಷಿತವಲ್ಲ ಎಂಬ ಪ್ರತಿಭಟನೆಯ ಕಾರಣದಿಂದ ಮಂದಗತಿಯಲ್ಲಿ ಸಾಗಿತ್ತು. ಯೋಜನೆಗಿದ್ದ ಅಡ್ಡಿಯನ್ನು ಈಗ ತೆರವುಗೊಳಿಸಿ ಟ್ರಂಪ್ ಆದೇಶ ಹೊರಡಿಸಿದ್ದಾರೆ. ಹೀಗೆ ಭಾಷಣಕ್ಕೆ ಸೀಮಿತವಾಗಬಹುದು ಎಂದುಕೊಂಡಿದ್ದ ಹಲವು ಯೋಜನೆಗಳಿಗೆ ವಾರದೊಳಗೇ ಚಾಲನೆ ಸಿಕ್ಕಿದೆ.

 

ಟ್ರಂಪ್ ತಮ್ಮ ಭಾಷಣದಲ್ಲಿ 'Buy American, Hire American' ಎಂಬ ಸೂತ್ರವನ್ನು ಪಾಲಿಸಲಿದ್ದೇವೆ ಎಂದಿದ್ದರು. ಇದರ ಅನುಷ್ಠಾನ ಅಷ್ಟು ಸುಲಭವಲ್ಲ. ಅಧ್ಯಕ್ಷರ ಈ ಧೋರಣೆ ಸ್ಥಳೀಯರಿಗೆ ಉದ್ಯೋಗಾವಕಾಶ ಹೆಚ್ಚಿಸಬಲ್ಲುದಾದರೂ, ಉತ್ಪಾದನಾ ವೆಚ್ಚವನ್ನು ಹೆಚ್ಚಿಸಲಿದೆ. ಇಂದು ‘ಮೇಡ್ ಇನ್ ಅಮೆರಿಕ’ ಎಂಬ ಮುದ್ರೆ ಹೊತ್ತು ಮಾರುಕಟ್ಟೆಯಲ್ಲಿರುವ ವಸ್ತುಗಳಲ್ಲಿ ಬಹುಪಾಲು ತಯಾರಾಗುತ್ತಿರುವುದು ಅಥವಾ ಕಚ್ಚಾವಸ್ತುಗಳನ್ನು ಪಡೆಯುತ್ತಿರುವುದು ಹೊರದೇಶಗಳಿಂದ. ಟ್ರಂಪ್ ಅವರ ಈ ಘೋಷಣೆಯ ಬೆನ್ನಲ್ಲೇ ನಡೆಸಲಾದ ಸಮೀಕ್ಷೆಯ ಪ್ರಕಾರ ಶೇಕಡ 80 ರಷ್ಟು ಜನ, ‘ನಮಗೆ ಉತ್ಪನ್ನಗಳ ಬೆಲೆ ಮುಖ್ಯವೇ ಹೊರತು ಅದು ಎಲ್ಲಿ ತಯಾರಾಗುತ್ತದೆ ಎಂಬುದಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಈ ಘೋಷಣೆಯನ್ನು ಅಂದುಕೊಂಡಂತೆ ಜಾರಿಗೆ ತರಲಾಗುವುದೇ ಎಂಬುದು ಅನುಮಾನ. ಮುಖ್ಯವಾಗಿ ಟ್ರಂಪ್ ಮಾಡಬೇಕಿರುವ ಮೊದಲ ಕೆಲಸ ಉದ್ಯೋಗ ಸೃಷ್ಟಿ. ಆ ಭರವಸೆಯಿಂದಲೇ ಯಶಸ್ವಿ ಉದ್ಯಮಿಯನ್ನು ನಿರುದ್ಯೋಗಿ ಯುವಸಮೂಹ ಚುನಾವಣೆಯಲ್ಲಿ ಬೆಂಬಲಿಸಿದ್ದು. ಟ್ರಂಪ್ ಆ ನಿಟ್ಟಿನಲ್ಲಿ ಉದ್ಯಮಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಇಂಡಿಯಾನ, ಕೆಂಟಕಿಯಲ್ಲಿ ಬಾಗಿಲೆಳೆದಿದ್ದ ‘ಕ್ಯಾರಿಯರ್’, ‘ಫೋರ್ಡ್’ ಸಂಸ್ಥೆಗಳು ನಿರ್ಧಾರ ಬದಲಿಸಿವೆ. ಇನ್ನು ಹಲವು ಸಂಸ್ಥೆಗಳು ಹೊಸ ಉತ್ಪಾದನಾ ಘಟಕ ತೆರೆಯುವ ಮಾತನಾಡುತ್ತಿವೆ. ಇದು ಅಮೆರಿಕನ್ನರ ಪಾಲಿಗೆ ಒಳ್ಳೆಯ ಬೆಳವಣಿಗೆ. ಟ್ರಂಪ್ ಅವರಿಗೆ ಆರಂಭದ ಸುಯೋಗ.

 

ಇನ್ನು ಜಾಗತಿಕವಾಗಿ ನೋಡುವುದಾದರೆ, ಭಯೋತ್ಪಾದನೆಗೆ ಸಂಬಂಧಿಸಿದಂತೆ ಒಬಾಮ ನೀತಿಯಿಂದ ಹಿಂದೆ ಸರಿದು, ಐಎಸ್ ಮಣಿಸುವ ದೃಷ್ಟಿಯಿಂದ ಇರಾನ್ ಬದಲಿಗೆ ರಷ್ಯಾಕ್ಕೆ ಹತ್ತಿರವಾಗುವ ಸಾಧ್ಯತೆ ಕಾಣುತ್ತಿದೆ. ರಷ್ಯಾ ಅಧ್ಯಕ್ಷ ಪುಟಿನ್ ಅವರೊಂದಿಗೆ ಟ್ರಂಪ್ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಆ ಗೆಳೆತನ ರಷ್ಯಾ-ಅಮೆರಿಕದ ಮಧ್ಯೆ ಸ್ನೇಹಸೇತುವೆಯಂತೆ ಕೆಲಸ ಮಾಡಿ, ಎರಡು ದೈತ್ಯಶಕ್ತಿಗಳು ಜಾಗತಿಕ ಭಯೋತ್ಪಾದನೆಯ ಮೂಲೋತ್ಪಾಟನೆಗೆ ನಿಂತರೆ ವಿಶ್ವಕ್ಕೆ ಒಂದಿಷ್ಟು ಒಳಿತಾಗಬಹುದು. ಭಾರತದ ದೃಷ್ಟಿಯಿಂದ ನೋಡುವುದಾದರೆ, ಅಧ್ಯಕ್ಷ ಸ್ಥಾನದಲ್ಲಿ ಟ್ರಂಪ್ ಅಲ್ಲದೆ ಬೇರೆ ಯಾರೇ ಇದ್ದರೂ ಭಾರತದತ್ತ ನೋಡಲೇಬೇಕಾದ ಸನ್ನಿವೇಶ ಇದೆ. ಟ್ರಂಪ್ ಅಧ್ಯಕ್ಷರಾದ ಬಳಿಕ ಕರೆ ಮಾಡಿದ ಐದು ಪ್ರಮುಖ ನಾಯಕರಲ್ಲಿ ಭಾರತದ ಪ್ರಧಾನಿ ಸೇರಿರುವುದು, ಭಾರತ-ಅಮೆರಿಕ ಬಾಂಧವ್ಯ ಇನ್ನಷ್ಟು ಗಟ್ಟಿಗೊಳ್ಳಬಹುದು ಎಂಬುದರ ಸೂಚನೆ.

 

ಒಟ್ಟಾರೆ, ಟ್ರಂಪ್ ತಮ್ಮ ಗುರಿಯೆಡೆಗೆ ಓಡುವ ಉತ್ಸಾಹದಲ್ಲಿದ್ದಾರೆ, ಎಡವಬಾರದಷ್ಟೇ. ನಿಜ, ಟ್ರಂಪ್ ವೈಯಕ್ತಿಕವಾಗಿ ಒಂದಷ್ಟು ಬದಲಾಗಬೇಕಾದ ಅನಿವಾರ್ಯವನ್ನು ಅಧ್ಯಕ್ಷ ಪದವಿ ಸೃಷ್ಟಿಸಿದೆ. ಉದ್ಯಮಿಯಾಗಿ ನಡೆದುಕೊಂಡ ಹಾಗೆ ಅಧ್ಯಕ್ಷರಾದಾಗ ನಡೆದುಕೊಳ್ಳಲಾಗದು. ಗಾಂಭೀರ್ಯವನ್ನು ಆವಾಹಿಸಿಕೊಳ್ಳಬೇಕಾಗುತ್ತದೆ. ಅಳೆದು ತೂಗಿ ಮಾತನಾಡಬೇಕಾಗುತ್ತದೆ. 

 

ದಿಢೀರ್ ಸುದ್ದಿಯನ್ನೋ, ವಿವಾದವನ್ನೋ ಹುಟ್ಟುಹಾಕುವಷ್ಟು, ಒಂದು ಬಿಕ್ಕಟ್ಟನ್ನೋ, ಸಮಸ್ಯೆಯನ್ನೋ ಪರಿಹರಿಸುವುದು ಸುಲಭವಲ್ಲ. ಜೊತೆಗೆ ಟ್ರಂಪ್ ವಿರೋಧಿಗಳೂ ಸಮಯಕೊಟ್ಟು ಸಾಧನೆಯ ವಿಮರ್ಶೆಗೆ ಇಳಿಯುವಷ್ಟು ಸಂಯಮ ತೋರಬೇಕು. ಟ್ರಂಪ್ ಗೆಲುವು ಘೋಷಣೆಯಾದಾಗ ಒಬಾಮ ‘ಮುಕ್ತ ಮನಸ್ಸಿನಿಂದ ನಾವು ಟ್ರಂಪ್ ಯಶಸ್ಸಿಗೆ ಸಹಕರಿಸಬೇಕಿದೆ. ಅಧ್ಯಕ್ಷನಾಗಿ ಟ್ರಂಪ್ ಯಶಸ್ವಿಯಾದರೆ, ಅದು ಅಮೆರಿಕದ ಮತ್ತು ನಮ್ಮೆಲ್ಲರ ಯಶಸ್ಸು’ ಎಂಬ ಮಾತನ್ನು ಆಡಿದ್ದರು. ಆದರೆ ಅಮೆರಿಕದ ಮಾಧ್ಯಮಗಳಿನ್ನೂ, ಟ್ರಂಪ್ ಅಮೆರಿಕದ ಅಧ್ಯಕ್ಷ ಎಂದು ಒಪ್ಪಿಕೊಂಡಂತೆ ಕಾಣುವುದಿಲ್ಲ. ಉದಾರವಾದಿ ಹಣೆಪಟ್ಟಿಯ ಬುದ್ಧಿಜೀವಿ ವರ್ಗಕ್ಕೆ, ಚುನಾವಣೆ ಫಲಿತಾಂಶವನ್ನು ಜೀರ್ಣಿಸಿಕೊಳ್ಳುವುದು ಇನ್ನೂ ಸಾಧ್ಯವಾಗಿಲ್ಲ. ಹಾಗಾಗಿ ಕಳೆದ ವರ್ಷ ಭಾರತದಲ್ಲಿ ನಡೆದಂತೆ ಪ್ರತಿಭಟನೆ, ಪ್ರಶಸ್ತಿ ವಾಪಸಿಗಳು ಇನ್ನೊಂದಿಷ್ಟು ದಿನ ಅಮೆರಿಕದಲ್ಲಿ ನಡೆದರೆ ಅಚ್ಚರಿಯಲ್ಲ. ‘ಅಘೋಷಿತ ತುರ್ತುಸ್ಥಿತಿ’ ಎಂಬ ಮಾತು ಅಮೆರಿಕದ ಸಾಹಿತ್ಯಗೋಷ್ಠಿಯಲ್ಲಿ ಕೇಳಿಬಂದರೆ ಆಶ್ಚರ್ಯಪಡಬೇಕಿಲ್ಲ. ಅಷ್ಟಕ್ಕೂ ಅಸಹಿಷ್ಣುತೆ, ಭಯದ ವಾತಾವರಣ ಎಂದು ದಿಗಿಲುಗೊಳ್ಳುವುದು ಇದೀಗ ಜಾಗತಿಕ ವ್ಯಾಧಿಯಾಗಿದೆಯೇ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry