ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಸ್ವಾರ್ಥ ಸೇವೆಗೆ ಪುರಸ್ಕಾರ: ಎಲೆಮರೆ ಕಾಯಿಗಳ ಅರಸಿ ಬಂದ ಗೌರವ

Last Updated 26 ಜನವರಿ 2017, 19:30 IST
ಅಕ್ಷರ ಗಾತ್ರ
ನವದೆಹಲಿ: ಹೆಚ್ಚು ಪ್ರಚಾರ ಪಡೆಯದೇ ಹಲವು ದಶಕಗಳಿಂದ ಸಮಾಜಕ್ಕೆ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವ ಹಲವರನ್ನು ಈ ಬಾರಿ ಪದ್ಮ ಗೌರವ ಅರಸಿಕೊಂಡು ಬಂದಿದೆ.
 
ಮಧ್ಯಪ್ರದೇಶದ ಇಂದೋರ್‌ನ ವೈದ್ಯೆ 91 ವರ್ಷ ವಯಸ್ಸಿನ ಭಕ್ತಿ ಯಾದವ್‌ ಅಂತಹವರಲ್ಲಿ ಒಬ್ಬರು. 2017ನೇ ಸಾಲಿನ ಪದ್ಮಶ್ರೀ ಪುರಸ್ಕಾರ ಅವರ ಮುಡಿಗೇರಿದೆ.
 
ಎಂಬಿಬಿಎಸ್‌ ಪದವಿ ಪಡೆದ ಮೊದಲ ಇಂದೋರ್‌ ಮಹಿಳೆ ಎಂಬ ಹೆಗ್ಗಳಿಕೆ ಭಕ್ತಿ ಯಾದವ್‌ ಅವರದು. ‘ಡಾಕ್ಟರ್‌ ದಾದಿ’ ಎಂದೇ ಪ್ರೀತಿಯಿಂದ ಕರೆಸಿಕೊಳ್ಳುವ ಅವರು 68 ವರ್ಷಗಳಿಂದ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಸಾವಿರಾರು ಗರ್ಭಿಣಿಯರ     ಹೆರಿಗೆಗೆ ನೆರವಾಗಿದ್ದಾರೆ.
 
‘ಖಡ್ಗ ಹಿಡಿದಿರುವ ಅಜ್ಜಿ’, ಕೇರಳದ ಮೀನಾಕ್ಷಿ ಅಮ್ಮ ಪ್ರಸಿದ್ಧ ಸಮರಕಲೆ ಕಳರಿಪಯಟ್ಟುವಿನ ಮಹಾನ್‌ ಸಾಧಕಿ.  76 ವರ್ಷದ ಮೀನಾಕ್ಷಿ ಅವರು ತಮ್ಮ 7ನೇ ವಯಸ್ಸಿನಿಂದಲೇ ಕಳರಿಪಯಟ್ಟು ಅಭ್ಯಾಸದಲ್ಲಿ ತೊಡಗಿದವರು. 
 
ಈ ಸಾಲಿನ ಪದ್ಮಶ್ರೀಗೆ ಆಯ್ಕೆಯಾಗಿರುವ ಅವರು ದೇಶದ ಅತ್ಯಂತ ಹಿರಿಯ ಮಹಿಳಾ ಕಳರಿಪಯಟ್ಟು ಪ್ರದರ್ಶಕಿ. 68 ವರ್ಷಗಳಿಂದ ಅವರು ಈ ಸಮರ ಕಲೆಯನ್ನು ಅಭ್ಯಾಸ ಮಾಡುವುದರ ಜೊತೆಗೆ ಇತರರಿಗೆ ಬೋಧಿಸುತ್ತಿದ್ದಾರೆ.
 
ಪೋಚಂಪಲ್ಲಿ ರೇಷ್ಮೆ ಸೀರೆಗಳನ್ನು ನೇಯುವುದಕ್ಕಾಗಿ ‘ಲಕ್ಷ್ಮಿ ಎಎಸ್‌ಯು ಯಂತ್ರ’ವನ್ನು ಅಭಿವೃದ್ಧಿ ಪಡಿಸಿರುವ ತೆಲಂಗಾಣದ ಚಿಂತಕಿಂಡಿ ಮಲ್ಲೇಶಮ್‌  ಪದ್ಮಶ್ರೀಗೆ ಭಾಜನರಾದ ಮತ್ತೊಬ್ಬ ಎಲೆಮರೆಕಾಯಿ ಸಾಧಕ.
 
ಈ ಯಂತ್ರವು ಸೀರೆ ನೇಯ್ಗೆಯ ಸಮಯ  ಮತ್ತು ಶ್ರಮವನ್ನು ಕಡಿಮೆ ಮಾಡುತ್ತದೆ.  ತಮ್ಮ ತಾಯಿ ಅನುಭವಿಸುತ್ತಿದ್ದ ನೋವನ್ನು ದೂರ ಮಾಡುವುದಕ್ಕಾಗಿ ಮಲ್ಲೇಶಮ್‌ ಈ ಯಂತ್ರ ರೂಪಿಸಿದ್ದರು.
 
ಶಾಲೆಯನ್ನು ಅರ್ಧದಲ್ಲೇ ಬಿಟ್ಟಿದ್ದ  44 ವರ್ಷದ ಮಲ್ಲೇಶಮ್‌ ಅಭಿವೃದ್ಧಿ  ಪಡಿಸಿರುವ ಯಂತ್ರದ ಮೂಲಕ ನಾಲ್ಕು ಗಂಟೆಯಲ್ಲಿ ನೇಯುವ ಸೀರೆಯನ್ನು ಕೇವಲ 1.5 ಗಂಟೆಯಲ್ಲಿ ನೇಯಬಹುದು. ಮಲ್ಲೇಶಮ್‌ ಅವರ ಆವಿಷ್ಕಾರವು ಪೋಚಂಪಲ್ಲಿ ಸೀರೆಯನ್ನು ನೇಯುತ್ತಿದ್ದ ಶೇ 60ರಷ್ಟು ಕೈಮಗ್ಗದ ಮೇಲೆ ಪ್ರಭಾವ ಬೀರಿತ್ತು.
 
ಒಂದು ಕೋಟಿಗೂ ಅಧಿಕ ಮರಗಳನ್ನು ಬೆಳೆಸಿರುವ ‘ಮರದ ಮನುಷ್ಯ’ ಎಂದು ಖ್ಯಾತಿ ಗಳಿಸಿರುವ ತೆಲಂಗಾಣದ ದಾರಿಪಲ್ಲಿ ರಾಮಯ್ಯ ಅವರಿಗೂ ಈ ಬಾರಿ ಪದ್ಮಶ್ರೀ ಒಲಿದಿದೆ.
 
68 ವರ್ಷದ ರಾಮಯ್ಯ ಅವರಿಗೆ ಹಸಿರು ಬೆಳೆಸುವುದು ಹವ್ಯಾಸ. ಖಾಲಿ ಜಮೀನು ಕಂಡಾಗಲೆಲ್ಲಾ ಜೇಬಿನಿಂದ ಬೀಜಗಳನ್ನು ತೆಗೆದು ಬಿತ್ತುವ ಕೆಲಸವನ್ನು ದಶಕಗಳಿಂದಲೂ ಅವರು ಮಾಡುತ್ತಾ ಬಂದಿದ್ದಾರೆ.
 
‘ರಂಗಬತಿ ಕಿ ಆವಾಜ್‌’ ಎಂದೇ ಖ್ಯಾತಿಗಳಿಸಿರುವ ಒಡಿಶಾದ ಜಿತೇಂದ್ರ ಹರಿಪಾಲ್‌ ಅವರನ್ನು ಪದ್ಮಶ್ರೀ ಮನ್ನಣೆ ಅರಸಿ ಬಂದಿದೆ. 
 
ಶಾಲೆಯನ್ನು ಅರ್ಧದಲ್ಲೇ ಬಿಟ್ಟ ಹರಿಪಾಲ್‌ ಅವರು ಕೊಸ್ಲಿ–ಸಂಬಾಲ್ಪುರಿ ಸಂಗೀತದ ಹಿರಿಯ ಗಾಯಕರು. ರಾಜ್ಯದ ಅತ್ಯಂತ ಜನಪ್ರಿಯ ಧ್ವನಿಮುದ್ರಿತ ಹಾಡಾದ ‘ರಂಗಬತಿ’ಗೆ ನೀಡಿದ ಕೊಡುಗೆಗಾಗಿ ಅವರನ್ನು ಪದ್ಮ ಗೌರವಕ್ಕೆ ಆಯ್ಕೆ ಮಾಡಲಾಗಿದೆ. 
 
1970ರಿಂದ ಈಶಾನ್ಯ ಭಾರತದಲ್ಲಿ ಮಹಿಳೆಯರಿಗಾಗಿಯೇ ನಿಯತಕಾಲಿಕವೊಂದನ್ನು ನಡೆಸುತ್ತಿರುವ ಅಸ್ಸಾಂನ ಎಲಿ ಅಹಮದ್‌ ಅವರಿಗೂ ಪದ್ಮಶ್ರೀಯ ಮನ್ನಣೆ ಸಿಕ್ಕಿದೆ.
 
ಅಗ್ನಿ ಅವಘಡಗಳ ಸಂದರ್ಭದಲ್ಲಿ ಬೆಂಕಿ ನಂದಿಸುವ ಕಾರ್ಯದಲ್ಲಿ ನಾಲ್ಕು ದಶಕಗಳಿಂದ ಸ್ವಯಂ ಸೇವಕರಾಗಿ ದುಡಿಯುತ್ತಿರುವ ಪಶ್ಚಿಮ ಬಂಗಾಳದ ಬಿಪಿನ್‌ ಗನಾತ್ರಾ ಅವರ ಕಿರೀಟಕ್ಕೆ ಪದ್ಮಶ್ರೀ ಗರಿ ಮೂಡಿದೆ. ಕಳೆದ 40 ವರ್ಷಗಳಲ್ಲಿ ಕೋಲ್ಕತ್ತದ  ಅಗ್ನಿ ಆಕಸ್ಮಿಕ ಸಂಭವಿಸಿದ ಸ್ಥಳಗಳಲ್ಲೆಲ್ಲ ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಬಿಪಿನ್‌ ಕೂಡ  ಅಗ್ನಿ ಶಮನ ಕಾರ್ಯದಲ್ಲಿ ಭಾಗಿಯಾಗಿದ್ದಾರೆ. 
 
59 ವರ್ಷದ ಬಿಪಿನ್‌ ಅವರ ಸೋದರ ಅಗ್ನಿ ದುರಂತವೊಂದರಲ್ಲಿ ಮೃತಪಟ್ಟಿದ್ದರು. ಆ ನಂತರ, ಅಗ್ನಿ ಆಕಸ್ಮಿಕದಲ್ಲಿ ಸಿಲುಕಿದವರನ್ನು ರಕ್ಷಿಸಲು ತಮ್ಮ ಜೀವನವನ್ನು ಮುಡುಪಾಗಿಡುವ ನಿರ್ಧಾರವನ್ನು ಅವರು ತೆಗೆದುಕೊಂಡಿದ್ದರು.
 
1985ರಲ್ಲಿ ದೇಶದಲ್ಲಿ ಮೊತ್ತಮೊದಲ ಬಾರಿಗೆ ಏಡ್ಸ್‌ ಪ್ರಕರಣವನ್ನು ಪತ್ತೆ ಮಾಡಿದ ಡಾ. ಸುನೀತಿ ಸೊಲೊಮೊನ್‌ ಅವರಿಗೆ ಮರಣೋತ್ತರವಾಗಿ ಪದ್ಮಶ್ರೀ ಗೌರವ ನೀಡಲಾಗಿದೆ.
 
ಎಲೆಮರೆಯಾಗಿದ್ದುಕೊಂಡೇ ಸಾಧನೆ ಮಾಡಿದ, ಸಮಾಜಕ್ಕೆ ಸೇವೆ ಸಲ್ಲಿಸಿದ  ದೇಶದ ಪ್ರತಿಭೆಗಳನ್ನು ಗುರುತಿಸುವುದಕ್ಕೆ ಈ ಬಾರಿ ಹೆಚ್ಚು ಗಮನ ನೀಡಲಾಗಿತ್ತು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
 
**
ನಮ್ಮ ನಾಡಿನ ಸಾಧಕರು
ಪದ್ಮವಿಭೂಷಣ
ಡಾ. ಯು.ಆರ್‌.ರಾವ್‌: ಉಡುಪಿ ರಾಮಚಂದ್ರರಾವ್‌  ಉಡುಪಿಯ ಅದಮಾರುವಿನಲ್ಲಿ 1932 ರಲ್ಲಿ  ಜನಿಸಿದರು. 
 
ಅಂತಾರಾಷ್ಟ್ರೀಯ ಖ್ಯಾತಿಯ ಬಾಹ್ಯಾಕಾಶ ವಿಜ್ಞಾನಿಯಾಗಿರುವ ರಾವ್‌ ಅವರು ಭಾರತದ ಮೊದಲ ಉಪಗ್ರಹ ‘ಆರ್ಯಭಟ’ದ ರೂವಾರಿ.  ಆ ಬಳಿಕ ಭಾಸ್ಕರ, ಆ್ಯಪಲ್‌, ರೋಹಿಣಿ, ಇನ್ಸಾಟ್‌–1, ಇನ್ಸಾಟ್‌–2, ಐಆರ್‌ಎಸ್‌–1 ಎ, ಐಆರ್‌ಎಸ್‌–1ಬಿ ಸೇರಿದಂತೆ ಒಟ್ಟು 18 ಉಪಗ್ರಹಗಳ ನಿರ್ಮಾಣದಲ್ಲಿ ಮುಖ್ಯ ಮಾರ್ಗದರ್ಶಕರು. 
 
**
ಪದ್ಮಶ್ರೀ
ಪ್ರೊ. ಜಿ.ವೆಂಕಟಸುಬ್ಬಯ್ಯ: ‘ಪದ ಬ್ರಹ್ಮ’ ಎಂದೇ ಖ್ಯಾತಿ ಪಡೆದಿರುವ ಭಾಷಾ ತಜ್ಞ ಪ್ರೊ. ಜಿ.ವೆಂಕಟಸುಬ್ಬಯ್ಯ ಶತಾಯುಷಿ. 1913 ರಲ್ಲಿ ಶ್ರೀರಂಗಪಟ್ಟಣದ ಗಂಜಾಂನಲ್ಲಿ ಜನಿಸಿದರು. ಕನ್ನಡ ಭಾಷೆ, ನಿಘಂಟು, ಪ್ರಾಚೀನ ಸಾಹಿತ್ಯ ಅಧ್ಯಯನ ಕ್ಷೇತ್ರಕ್ಕೆ ಜಿ.ವಿ ಅವರ ಕೊಡುಗೆ ಅಪಾರ.
‘ಪ್ರಜಾವಾಣಿ’ಯಲ್ಲಿ ಪ್ರಕಟಗೊಂಡ ಜಿ.ವಿ.ಯವರ  ‘ಇಗೋ ಕನ್ನಡ’  ನಾಡಿನಾದ್ಯಂತ ಜನಪ್ರಿಯವಾಗಿತ್ತು. 
 
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.
 
ಭಾರತಿ ವಿಷ್ಣುವರ್ಧನ್‌: 1948ರ ಆಗಸ್ಟ್ 15ರಂದು ಜನಿಸಿದ ಭಾರತಿ ವಿಷ್ಣುವರ್ಧನ್ 1966ರಲ್ಲಿ ಚಿತ್ರರಂಗ ಪ್ರವೇಶಿಸಿದರು. ಕನ್ನಡದ ‘ಲವ್ ಇನ್ ಬೆಂಗಳೂರು’ ಅವರ ವೃತ್ತಿಜೀವನದ ಮೊದಲ ಚಲನಚಿತ್ರ. ನಂತರ ತಮಿಳು, ತೆಲುಗು, ಹಿಂದಿ, ಮರಾಠಿ, ಮಲಯಾಳ ಭಾಷೆಗಳು ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿ ಜನಪ್ರಿಯತೆ ಗಳಿಸಿದರು. 1975ರಲ್ಲಿ ನಟ ವಿಷ್ಣುವರ್ಧನ್ ಅವರನ್ನು ವರಿಸಿದರು. ‘ಮೇಯರ್ ಮುತ್ತಣ್ಣ’, ಮನೆಯೇ ಮಂತ್ರಾಲಯ’, ‘ಭಲೇ ಜೋಡಿ’, ‘ಬಂಗಾರದ ಮನುಷ್ಯ’, ‘ಬಂಗಾರದ ಜಿಂಕೆ’,  ಅವರ ಕೆಲವು ಪ್ರಮುಖ ಚಿತ್ರಗಳು.
 
ಚ.ಮೂ. ಕೃಷ್ಣಶಾಸ್ತ್ರಿ: ಸಂಸ್ಕೃತ ಭಾರತಿ ಮೂಲಕ ಸಂಸ್ಕೃತ ಪ್ರಚಾರದಲ್ಲಿ ತೊಡಗಿರುವ ಚಕ್ರಕೋಡಿ ಮೂಡಂಬೈಲು ಕೃಷ್ಣಶಾಸ್ತ್ರಿ ಅವರು, ಮೂಲತಃ ಬಂಟ್ವಾಳ ತಾಲ್ಲೂಕಿನ ಕೆದಿಲ ಗ್ರಾಮದ ಬಡೆಕ್ಕಿಲದವರು. 
 
1956 ಜನವರಿ 23ರಂದು ಜನಿಸಿದ ಅವರು, ಕೆದಿಲದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿದ್ಯಾಪೀಠದಲ್ಲಿ ಪದವಿ ಮತ್ತು ಸಂಸ್ಕೃತ ಶಾಸ್ತ್ರಿ ಪದವಿ ಪಡೆದರು.  
 
ಕೃಷ್ಣಶಾಸ್ತ್ರಿ ಅವರು, ಅಮೆರಿಕ, ಫ್ರಾನ್ಸ್‌ ಸೇರಿ 12 ರಾಷ್ಟ್ರಗಳಲ್ಲಿ ಸಂಸ್ಕೃತ ಅಭಿಯಾನ ಕೈಗೊಂಡಿದ್ದಾರೆ. ಸಂಸ್ಕೃತದಲ್ಲಿ 14 ಕೃತಿಗಳನ್ನು ರಚಿಸಿದ್ದು, ಹಲವಾರು ಕೃತಿಗಳನ್ನು ಸಂಸ್ಕೃತಕ್ಕೆ ಅನುವಾದಿಸಿದ್ದಾರೆ. 
 
ಗಿರೀಶ್‌ ಭಾರದ್ವಾಜ್‌: ಅರಂಬೂರಿನ ಗಿರೀಶ್ ಭಾರದ್ವಾಜ್, ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಪದವಿ ಪಡೆದ ನಂತರ ಅಪ್ಪನ ಆಣತಿಯಂತೆ ಸುಳ್ಯದಲ್ಲಿ ಸಣ್ಣದೊಂದು ವರ್ಕ್‌ಶಾಪ್ ಶುರು ಮಾಡಿದರು. 1986ರಲ್ಲಿ ತಮ್ಮದೇ ಊರಲ್ಲಿ ಮೊದಲ ತೂಗು ಸೇತುವೆ ನಿರ್ಮಿಸಿದರು. 40 ಸ್ವಯಂ ಸೇವಕರ ತಂಡದೊಂದಿಗೆ ಕೆಲಸ ಶುರು ಮಾಡಿದ ಗಿರೀಶ್, ಕೆಲವೇ ದಿನಗಳಲ್ಲಿ ಸೇತುವೆ ಕಟ್ಟಿದರು. 30 ವರ್ಷಗಳ ನಂತರವೂ ಆ ಸೇತುವೆ ಜನರ ಸಂಪರ್ಕ ಕೊಂಡಿಯಾಗಿದೆ.
 
ಇದುವರೆಗೂ 127 ತೂಗು ಸೇತುವೆಗಳನ್ನು ಗಿರೀಶ್ ನಿರ್ಮಿಸಿದ್ದಾರೆ.  ಜಮ್ಮು ಕಾಶ್ಮೀರದ ಪೂಂಛ್ ಬಳಿ ತೂಗು ಸೇತುವೆ ನಿರ್ಮಿಸಿಕೊಡುವಂತೆ ಸೇನಾಧಿಕಾರಿಗಳು ಅವರಿಗೆ ಪತ್ರ ಬರೆದಿದ್ದಾರೆ. 
 
‘ಜನಪದ ಹಾಡುಗಳ ಕಣಜ’ ಸುಕ್ರಿ ಬೊಮ್ಮು ಗೌಡ:‘ಜನಪದ ಹಾಡುಗಳ ಕಣಜ’ ಎಂದೇ ಹೆಸರಾಗಿರುವ ಸುಕ್ರಿ ಬೊಮ್ಮು ಗೌಡ ಅವರು ಅಂಕೋಲ ತಾಲ್ಲೂಕಿನ ಬಡಗೇರಿ ಗ್ರಾಮದವರು.
 
ತಮ್ಮ ಪೂರ್ವಜರಿಂದ ಬಳುವಳಿಯಾಗಿ ಬಂದ ಜನಪದ ಹಾಡುಗಳನ್ನು ಹಾಡುತ್ತ, ಇಡೀ ಹಾಲಕ್ಕಿ ಸಮುದಾಯದಲ್ಲಿ ಮಾದರಿ ಮಹಿಳೆಯಾಗಿ ಗುರುತಿಸಿಕೊಂಡರು.
 
ಜಿಲ್ಲೆಯಲ್ಲಿನ ಸಾರಾಯಿ ವಿರೋಧಿ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದು ಹೋರಾಟ ನಡೆಸಿದ ಸುಕ್ರಿ, ಕುಡಿತದ ಕೆಡುಕುಗಳನ್ನು ತಮ್ಮ ಹಾಡುಗಳಲ್ಲಿ ಬಣ್ಣಿಸಿ ಜನಜಾಗೃತಿ ಮೂಡಿಸಿದ್ದಾರೆ. ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಪ್ರಶಸ್ತಿ, ಹಂಪಿ ವಿಶ್ವವಿದ್ಯಾಲಯದ ನಾಡೋಜ ಗೌರವ ಅವರಿಗೆ ದೊರೆತಿವೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT