ಹಿಮಕುಸಿತ: ಬೆಳಗಾವಿ ಯೋಧ ಪಾರು

7

ಹಿಮಕುಸಿತ: ಬೆಳಗಾವಿ ಯೋಧ ಪಾರು

Published:
Updated:
ಹಿಮಕುಸಿತ: ಬೆಳಗಾವಿ ಯೋಧ ಪಾರು

ಬೆಳಗಾವಿ: ಜಮ್ಮು ಮತ್ತು ಕಾಶ್ಮೀರದ ಗುರೆಜ್‌ ವಲಯದ ಗಂಧೇರ್ಬಲ್‌ ಜಿಲ್ಲೆಯ ಸೋನಮಾರ್ಗ್‌ ಸೇನಾ ಕ್ಯಾಂಪ್‌ನಲ್ಲಿ ಸಂಭವಿಸಿದ ಹಿಮಕುಸಿತದಲ್ಲಿ ಬೆಳಗಾವಿ ಮೂಲದ ಸೇನಾಧಿಕಾರಿ, 115ನೇ ಮಹಾರ್‌ ಬೆಟಾಲಿಯನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಮೇಜರ್‌ ಶ್ರೀಹರಿ ಕುಗಜಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.

ಘಟನೆಯಲ್ಲಿ ಅಸ್ವಸ್ಥಗೊಂಡ ಶ್ರೀಹರಿ ಅವರಿಗೆ ಸೇನಾ ಶಿಬಿರದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅವರನ್ನು ಕೆಲ ತಿಂಗಳುಗಳ ಹಿಂದೆ ಸೋನಮಾರ್ಗ್ ಸೇನಾ ಕ್ಯಾಂಪ್‌ಗೆ ನಿಯುಕ್ತಿಗೊಳಿಸಲಾಗಿತ್ತು. ಬುಧವಾರ ಬೆಳಗಿನ ಜಾವ ನಡೆದ ಹಿಮಕುಸಿತದಲ್ಲಿ ಅವರು ಅಸ್ವಸ್ಥಗೊಂಡಿದ್ದಾರೆ. ಇವರೊಂದಿಗೆ 97 ಮಂದಿ ಹಿಮಕುಸಿತದಲ್ಲಿ ಸಿಲುಕಿಕೊಂಡಿದ್ದರು. ಸತತ ಎರಡು ಗಂಟೆಗಳ ಕಾಲ ಸಾವು–ಬದುಕಿನ ನಡುವೆ ಹೋರಾಟ ನಡೆಸಿ, ಹಿಮದಿಂದ ಕೈ ಹೊರಹಾಕುವಲ್ಲಿ ಯಶಸ್ವಿಯಾಗಿದ್ದಾರೆ.ಆ ವೇಳೆಗೆ, ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಸಿಬ್ಬಂದಿ ಶ್ರೀಹರಿ ಕುಗಜಿ ಸೇರಿದಂತೆ ಇತರರ ಸಹಾಯಕ್ಕೆ ಧಾವಿಸಿದ್ದಾರೆ. ಕೂಡಲೇ ಅವರನ್ನು ರಕ್ಷಿಸಲಾಗಿದೆ. ಆಸ್ಪತ್ರೆಗೆ ಸಾಗಿಸುವುದಕ್ಕೆ ಕಷ್ಟವಾಗಿರುವುದರಿಂದ, ಸೇನಾ ಶಿಬಿರದಲ್ಲಿಯೇ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಮಾಹಿತಿ ಬಂದಿದೆ ಎಂದು ಅವರ ತಂದೆ, ಬೆಳಗಾವಿಯ ಹಿಂದವಾಡಿಯ ನಿವಾಸಿ ಸೇನಾಪಡೆಯ ನಿವೃತ್ತ ಸುಬೇದಾರ್‌ ಆಗಿರುವ ಅನಂತ ಕುಗಜಿ ಮಾಹಿತಿ ನೀಡಿದರು.‘ನಾನು ಅಲ್ಲಿಗೆ ಹೋಗಬೇಕು ಎಂದುಕೊಂಡಿದ್ದೆ. ಆದರೆ, ದುರ್ಗಮ ಪ್ರದೇಶ ಅದಾಗಿರುವುದರಿಂದ ಹೋಗುವುದಕ್ಕೆ ಆಗುತ್ತಿಲ್ಲ. ರಕ್ಷಣಾ ಇಲಾಖೆಯ ಹೆಲಿಕಾಪ್ಟರ್‌ಗಳನ್ನು ಬಳಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ. ಶ್ರೀಹರಿಯೂ ಕೂಡ ಕರೆ ಮಾಡಿದ್ದು, ಚೆನ್ನಾಗಿದ್ದೇನೆ ಎಂದು ತಿಳಿಸಿದ್ದಾನೆ. ಪ್ರಾಣಾಪಾಯದಿಂದ ಅದೃಷ್ಟವಶಾತ್‌ ಪಾರಾದೆ ಎಂದು ಹೇಳಿದ್ದಾನೆ’ ಎಂದು ತಿಳಿಸಿದರು.ಇಲ್ಲಿನ ರಾಜಾ ಲಖಮಗೌಡ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿರುವ ಶ್ರೀಹರಿ, ಸೇನೆ ಸೇರುವುದಕ್ಕಿಂತ ಮುಂಚೆ ಬೆಳಗಾವಿಯಲ್ಲಿ ಪರಿಸರ ಸಂರಕ್ಷಣೆಯ ಅರಿವು ಹಾಗೂ ಹೋರಾಟದ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. ಭೀಮಗಡ ಅಭಯಾರಣ್ಯ ಹಾಗೂ ಜೀವವೈವಿಧ್ಯ ಸಂರಕ್ಷಣೆಗಾಗಿ ಜನಜಾಗೃತಿ ಕಾರ್ಯಕ್ರಮ ನಡೆಸಿ ಗಮನಸೆಳೆದಿದ್ದರು. ಇವರ ತಂದೆ ಸೇನಾಪಡೆಯಲ್ಲಿ ಸುಬೇದಾರ್‌ ಆಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಸಹೋದರಿ ಪಂಕಜಾ ರಾಜಸ್ತಾನದಲ್ಲಿ ಮೇಜರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry