ಅಕಾಲಿಕ ಋತುಪ್ರಾಪ್ತಿ

7

ಅಕಾಲಿಕ ಋತುಪ್ರಾಪ್ತಿ

Published:
Updated:
ಅಕಾಲಿಕ ಋತುಪ್ರಾಪ್ತಿ

ಪ್ರತಿ ಹೆಣ್ಣಿನ ಜೀವನದಲ್ಲೂ ಮಾಸಿಕ ಋತುಚಕ್ರ ಪ್ರಾರಂಭವಾಗುವಿಕೆ (ಋತುಪ್ರಾಪ್ತಿ ಅಥವಾ ಮೈನೆರೆಯವುದು), ಒಂದು ಅಭೂತಪೂರ್ವ ಹಾಗೂ ಮಹತ್ತರವಾದ ಘಟನೆ. ಮುಗ್ಧಬಾಲಿಕೆಯಲ್ಲಿ ಸ್ತ್ರೀತ್ವ ಅರಳುವ ಸಂಕೇತ. ಹೆಣ್ಣು ಸಂತಾನೋತ್ಪತ್ತಿ ಕಾರ್ಯಕ್ಕೆ ಸಜ್ಜಾಗುತ್ತಿದ್ದಾಳೆ ಎಂಬ ಮುನ್ಸೂಚನೆ ಬಾಲಕಿಯರಲ್ಲಿ ಋತುಚಕ್ರ ಪ್ರಾರಂಭದ ವಯಸ್ಸು ಅವರ ಕೌಟುಂಬಿಕ ಹಿನ್ನೆಲೆ, ಸಾಮಾಜಿಕ ಅಂತಸ್ತು, ಜನಾಂಗ, ಭೌಗೋಳಿಕ ಹವಾಮಾನ, ಆಹಾರಪದ್ಧತಿ, ಪರಿಸರ, ಆರೋಗ್ಯದಮಟ್ಟ ಎಲ್ಲವನ್ನೂ ಅವಲಂಭಿಸಿರುತ್ತದೆ.

ಶ್ರೀಮಂತರಲ್ಲಿ, ಪಟ್ಟಣವಾಸಿಗಳಲ್ಲಿ ಬೇಗನೆ ಮೈನೆರೆದರೆ, ಬಡವರಲ್ಲಿ ಹಳ್ಳಿಗರಲ್ಲಿ ಸ್ವಲ್ಪ ತಡವಾಗಿ ಮೈನೆರೆಯಬಹುದು. ಇಂದು ವಿಶ್ವದಾದ್ಯಂತ ಋತುಪ್ರಾಪ್ತಿಯ ವಯಸ್ಸು ಗಮನಾರ್ಹವಾಗಿ ಕಡಿಮೆಯಾಗುತ್ತಿರುವುದಂತೂ ಸತ್ಯ. ಇದಕ್ಕೆ ಕಾರಣ ಹೆಚ್ಚು ಹೆಚ್ಚು ಪೌಷ್ಟಿಕ ಆಹಾರಸೇವನೆ, ಕಡಿಮೆ ದೈಹಿಕ ಚಟುವಟಿಕೆ ಎಂಬುದು ತಜ್ಞರ ಅಭಿಪ್ರಾಯ.ನಮ್ಮ ಭಾರತದಲ್ಲಿ ಸರಾಸರಿ ಋತುಪ್ರಾಪ್ತಿಯ ವಯಸ್ಸು 10–16ವರ್ಷಗಳು. ಋತುಪ್ರಾಪ್ತಿಯೊಂದು ಸಂತೋಷಕರ ಘಟನೆಯೂ ಹೌದು. ಕೆಲವರು ಆರತಿ, ಮಡಿಲು ತುಂಬುವುದು ಎಂದೆಲ್ಲಾ ಸಂಭ್ರಮಾಚರಣೆ ಮಾಡುತ್ತಾರೆ. ಆದರೂ ಆಡಿ-ಕುಣಿಯುವ ಬಾಲೆಯರು ಕೆಲವೊಮ್ಮೆ ಕಸಿವಿಸಿಗೊಂಡು ಗಾಬರಿಯಿಂದ ಹೆದರಿಕೊಳ್ಳಲೂಬಹುದು. ಆದರೆ ಋತುಚಕ್ರ ನಿರ್ವಹಣೆ ಮಾಡುವ ತಿಳಿವಳಿಕೆ ಹಾಗೂ ಸೂಕ್ತ ಮಾರ್ಗದರ್ಶನವಿದ್ದರೆ ಬಾಲೆಯರು ಇದನ್ನು ಧೈರ್ಯವಾಗಿ ಎದುರಿಸಬಹುದು. ಆತ್ಮವಿಶ್ವಾಸ ಹೊಂದಬಹುದು.

ಇದಕ್ಕೆ ಋತುಪ್ರಾಪ್ತಿಯ ಹಿನ್ನೆಲೆಯ ಬಗ್ಗೆ ಸರಿಯಾದ ಜ್ಞಾನ ಹೊಂದಿರಬೇಕು. ಬಾಲೆಯು ಒಂಬತ್ತು ವರ್ಷ ತಲುಪುತ್ತಿದ್ದ ಹಾಗೆ ಪಿಟ್ಯುಟರಿ ಗ್ರಂಥಿಯ ಮುಂಭಾಗದಿಂದ ಬೆಳವಣಿಗೆಯ ಹಾರ್ಮೋನು ಸ್ರವಿಸಿ, ಎತ್ತರ, ತೂಕ ಹೆಚ್ಚಾಗುತ್ತದೆ. ಅಸ್ತಿಕುಹರ (ಪೆಲ್ವಿಸ್), ದೊಡ್ಡದಾಗುತ್ತದೆ. ಬೊಜ್ಜಿನ ಶೇಖರಣೆ ಪ್ರಾರಂಭವಾಗಿ ಶರೀರ ಗುಂಡು ಗುಂಡಾಗಿ ಬೆಳೆಯುತ್ತದೆ. ಸ್ತನಗಳ ಬೆಳವಣಿಗೆ ಪ್ರಾರಂಭವಾಗುತ್ತದೆ.ಅಡ್ರಿನಲ್ ಗ್ರಂಥಿಯ ಕಾರ್ಯ ಚಟುವಟಿಕೆ ಹೆಚ್ಚಿ ಕಂಕುಳಲ್ಲಿ ಕೂದಲು, ಯೋನಿಕೂದಲು ಬೆಳವಣಿಗೆ ಆರಂಭವಾಗುತ್ತದೆ. ಮೆದುಳಿನ ಭಾಗದಲ್ಲಿ ಉತ್ಪಾದನೆಯಾಗುವ ಜಿ.ಎನ್.ಆರ್.ಎಚ್. (ಗೊನೋಡ್ರೋಟ್ರೋಫಿನ್ ರಿಲೀಸಿಂಗ್ ಹಾರ್ಮೋನು) ಪಿಟ್ಯುಟರಿ ಗ್ರಂಥಿಯಿಂದ ಎಫ್.ಎಸ್.ಎಚ್ (Fo**ic*e Stimu*ating Hormone) ಹಾಗೂ ಲ್ಯೂಟಿನೈಸಿಂಗ್ ಹಾರ್ಮೋನ್ (*H)ಎಂಬ ಎರಡು ರೀತಿಯ ಹಾರ್ಮೋನ್‌ನನ್ನು ಬಿಡುಗಡೆ ಮಾಡಿ ಅಂಡಾಶಯವನ್ನು ಚುರುಕುಗೊಳಿಸಿ ಅಲ್ಲಿಂದ ಹೆಣ್ತನದ ಹಾರ್ಮೋನುಗಳಾದ ಇಸ್ಟ್ರೋಜನ್ ಹಾಗೂ ಪ್ರೊಜೆಸ್ಟ್ರಾನನ್ನು ಬಿಡುಗಡೆ ಮಾಡುವ ಹಾಗೆ ಮಾಡುತ್ತದೆ. ಪ್ರತಿ ತಿಂಗಳು ಅಂಡಾಶಯದಲ್ಲಿರುವ ಕೋಶಿಕೆಗಳಿಂದ ಒಂದು ಅಂಡಾಣು ಬಿಡುಗಡೆಯಾಗುತ್ತದೆ.

(ಓವ್ಯುಲೆಶನ್) ಈ ಸಂದರ್ಭದಲ್ಲಿ ಗರ್ಭಕೋಶದಲ್ಲಿ ಸ್ತ್ರೀ–ಹಾರ್ಮೋನುಗಳ ಪ್ರಭಾವದಿಂದ ಲೋಳೆಪದರ ಬೆಳೆದು ನಂತರ ಹಾರ್ಮೋನ್ ಮಟ್ಟ ಕಡಿಮೆಯಾದಾಗ ಲೋಳೆಪದರ ಚೂರು ಚೂರಾಗಿ ಹೊರಬರುವ ಪ್ರಕ್ರಿಯೆಯೇ ಮಾಸಿಕ ಋತುಚಕ್ರವೆನಿಸಿಕೊಂಡು ಪ್ರತಿ ತಿಂಗಳು ಗರ್ಭಧಾರಣೆಯಾಗದಿದ್ದಾಗ ಪುನರಾವರ್ತನೆಯಾಗುತ್ತದೆ. ಆದರೆ ಇತ್ತೀಚಿಗೆ ಋತುಪ್ರಾಪ್ತಿಯ ವಯಸ್ಸು ನಮ್ಮ ಭಾರತದಲ್ಲೂ ಗಮನಾರ್ಹವಾಗಿ ಕಡಿಮೆಯಾಗುತ್ತಿದೆ. ಮೊದಲು ಸರಾಸರಿ 14–16 ವರ್ಷವಿದ್ದು ಈಗ 12–14ರಷ್ಟಾಗಿದೆ. ಇದು ವಿದೇಶದಲ್ಲಿ ಇನ್ನೂ ಕಡಿಮೆ.ಕಾರಣ ನಿರ್ಧಿಷ್ಟವಾಗಿ ಗೊತ್ತಿಲ್ಲದಿದ್ದರೂ ಹೆಚ್ಚಿರುವ ಪೌಷ್ಟಿಕ ಆಹಾರಸೇವನೆಯು ಬಾಲಿಕೆಯರಲ್ಲಿ ಹೆಚ್ಚುತ್ತಿರುವ ಬೊಜ್ಜು ಅಥವಾ ಹೆಚ್ಚುತ್ತಿರುವ ಆರೋಗ್ಯಮಟ್ಟವೂ ಇರಬಹುದು. ಆದರೆ ಸಹಜ ಋತುಪ್ರಾಪ್ತಿಯನ್ನು ಹಿಂಜರಿಕೆಯಿಲ್ಲದೆ, ಸ್ವಚ್ಛತೆಯ ನಿಯಮಗಳನ್ನು ಪಾಲಿಸುತ್ತಾ ಎದುರಿಸಬಲ್ಲ ಆತ್ಮವಿಶ್ವಾಸ ಪ್ರತಿಯೊಬ್ಬರೂ ಪಡೆಯಬೇಕು.ಅಕಾಲಿಕ ಋತುಪ್ರಾಪ್ತಿ ಎಂದರೇನು?

ಅಪರೂಪಕ್ಕೊಮ್ಮೆ ಎಂಟು ವರ್ಷದೊಳಗೆ ಋತುಚಕ್ರ ಪ್ರಾರಂಭವಾದರೆ ಆಶ್ಚರ್ಯ ಹಾಗೂ ಮುಜುಗರ ಎನಿಸಬಹುದು. ಅಂತಹ ಬಾಲಕಿಯರಿಗೂ ತಾವು ತಮ್ಮ ಸಹವರ್ತಿಗಳಿಗಿಂತ ಬೇಗನೆ ಆಗುವ ಸ್ತನಗಳ ಬೆಳವಣಿಗೆ ಮತ್ತು ಕೂದಲಿನ ಬೆಳವಣಿಗೆ ಹಾಗೂ ಋತುಚಕ್ರ ಪ್ರಾರಂಭ, ಬೇರೆಯೇ ಎನಿಸಿ ಸಾಮಾಜಿಕ ಹಾಗೂ ಭಾವನಾತ್ಮಕ ಸಮಸ್ಯೆ ಎದುರಿಸಬೇಕಾಗಬಹುದು.ಒಬ್ಬ ಬಾಲೆಗೆ ಎಂಟು ವರ್ಷದೊಳಗೆ ಋತುಚಕ್ರ ಪ್ರಾಪ್ತಿಯಾದರೆ ಅದೇ ‘ಅಕಾಲಿಕ ಋತುಪ್ರಾಪ್ತಿ’ ಎನಿಸಿಕೊಳ್ಳುತ್ತದೆ. ಶೇ. 80–90ರಷ್ಟು ಸಂದರ್ಭಗಳಲ್ಲಿ ಇದಕ್ಕೆ ಕಾರಣ ತಿಳಿದಿಲ್ಲದಿದ್ದರೂ, ಹೆಚ್ಚಿನ ಸಂದರ್ಭಗಳಲ್ಲಿ ಹೈಪೋಥಲಾಮೋ-ಪಿಟ್ಯುಟರಿ ಅಂಡಾಶಯದ ಅಕ್ಷವು ಬೇಗನೆ ಪಕ್ವವಾಗುವುದು ಎಂದು ತಿಳಿಯಲಾಗಿದೆ.ಇನ್ನುಳಿದಂತೆ ಮೆದುಳಿನಲ್ಲಾಗುವ ಗಡ್ಡೆಗಳಿಂದ, ಮೆದುಳಿನ ಉರಿಯೂತ, ವಿಕಿರಣ ಚಿಕಿತ್ಸೆ ಇತ್ಯಾದಿಗಳಿಂದ ಹಾಗೂ ಹೈಪೋಥೈರಾಯ್ಡಿಸಮ್‌ನಿಂದ (ಪ್ರಾಥಮಿಕ)  ಬಾಹ್ಯಕಾರಣಗಳಾದ ಹಾರ್ಮೋನು ಉತ್ಪತ್ತಿ ಮಾಡುವ ಅಂಡಾಶಯ ಗಡ್ಡೆಗಳು ಹಾಗೂ ಅಡ್ರಿನಲ್ ಗ್ರಂಥಿಯ ಗಡ್ಡೆಗಳು, ಮ್ಯಾಕ್ಯೂನಿ ಆಲ್ಬರ್ಟ್ ಸಿಂಡ್ರೋಮ್ ಅಲ್ಲದೇ ಬಾಹ್ಯವಾಗಿ ಇಸ್ಟ್ರೋಜನ್ ಮುಲಾಮನ್ನು ಹಚ್ಚಿಕೊಳ್ಳುವುದು, ಮುಂತಾದವುಗಳಿಂದ ಬರಬಹುದು. ಯಾವುದಕ್ಕೂ ತಜ್ಞ ವೈದ್ಯರ ಸಲಹೆ, ಮಾರ್ಗದರ್ಶನ, ಚಿಕಿತ್ಸೆ ಇಂತಹ ಸಂದರ್ಭಗಳಲ್ಲಿ ಅಗತ್ಯವಾಗುತ್ತದೆ.ವೈದ್ಯರ ಕಾರ್ಯವೇನು?

ವೈದ್ಯರು ರೋಗನಿರ್ಧಾರ ಮಾಡುವ ಮೊದಲು ಗರ್ಭಕೋಶದೊಳಗಿಂದಲೇ ರಕ್ತಸ್ರಾವ ಆಗುತ್ತಿದೆಯೇ ಎನ್ನುವುದನ್ನು ಖಾತ್ರಿ ಮಾಡಿಕೊಳ್ಳುತ್ತಾರೆ. ಏಕೆಂದರೆ ಕೆಲವೊಮ್ಮೆ ಲೈಂಗಿಕ ಅತ್ಯಾಚಾರಕ್ಕೊಳಗಾದಾಗ, ಅಪಘಾತದಿಂದುಂಟಾದ ಗಾಯಗಳಿಂದ, ಸೋಂಕಿನಿಂದ ಪರಕಾಯ ವಸ್ತುಗಳ ಸೇರ್ಪಡೆಯಿಂದಲೂ ಯೋನಿಮಾರ್ಗದಲ್ಲಿ  ರಕ್ತಸ್ರಾವವಾದಂತೆನಿಸಬಹುದು. ಆದ್ದರಿಂದ ಅದನ್ನೆಲ್ಲಾ ಅಲ್ಲಗಳೆದ ನಂತರ ರೋಗಿಯಿಂದ ಸೂಕ್ತ ಚರಿತ್ರೆಯನ್ನು ತೆಗೆದುಕೊಳ್ಳುತ್ತಾರೆ.

ಕೌಟುಂಬಿಕ ಹಿನ್ನೆಲೆಯನ್ನು ವಿಚಾರಿಸಿ ನಂತರ ರೋಗಿಯ ತೂಕ, ಎತ್ತರ, ಮುಂತಾದ ಶಾರೀರಿಕ ಪರೀಕ್ಷೆ ನಡೆಸಿ ಹೊಟ್ಟೆಯಲ್ಲಿ ಅಂಡಾಶಯ ಗಡ್ಡೆಗಳಿವೆಯೇ ಎಂಬುದನ್ನು ಪರೀಕ್ಷಿಸಿ, ಅವಶ್ಯವಿದ್ದಲ್ಲಿ ಅಲ್ಟ್ರಾಸೌಂಡ್ ಪರೀಕ್ಷೆಯನ್ನು ಮಾಡಿಸುತ್ತಾರೆ. ಮೆದುಳಿನ ತೊಂದರೆಗಳಿದ್ದರೆ ಎಂ.ಆರ್.ಐ. ಸ್ಕ್ಯಾನಿಂಗ್ ಮಾಡಿಸುತ್ತಾರೆ. ಥೈರಾಯಿಡ್ ಹಾಗೂ ಇತರ ಹಾರ್ಮೋನುಗಳ ಬಗ್ಗೆ ರಕ್ತಪರೀಕ್ಷೆ ಜೊತೆಗೆ ಜಿ.ಎನ್.ಆರ್.ಎಚ್. ಸ್ಟಿಮ್ಯೂಲೇಶನ್ ಟೆಸ್ಟ್ ಮಾಡಿಸಿದಾಗ ಕಾರಣ ಬಾಹ್ಯವೇ ಅಥವಾ ಮೆದುಳಿನ ಕಾರಣವೇ ಎಂದು ತಿಳಿಯುತ್ತದೆ. ಮೂಳೆಗಳ ಎಕ್ಸರೆಯನ್ನೂ ಮಾಡಿಸಬಹುದು.ಅಕಾಲಿಕ ಋತುಪ್ರಾಪ್ತಿಯ ಸಂಭವನೀಯ ತೊಂದರೆಗಳೇನು?

ಉದ್ದನೆಯ ಮೂಳೆಗಳು ಬೇಗನೆ ಕೂಡಿಕೊಳ್ಳುವುದರಿಂದ ಕುಬ್ಜವಾಗುವ ಸಾಧ್ಯತೆ ಇದೆ. ಬೇಗನೆ ಲೈಂಗಿಕ ಆಸೆಗಳು ಪಕ್ವವಾಗುತ್ತವೆ. ಎಲ್ಲಕ್ಕಿಂತ ಹೆಚ್ಚಾಗಿ ತನ್ನಲ್ಲಾಗುತ್ತಿರುವ ಬದಲಾವಣೆಗಳು ಜೊತೆಗಾರ್ತಿಯರಿಗಿಂತ ಭಿನ್ನವಾಗಿದ್ದು, ಮುಜುಗರ ಹೆಚ್ಚಾಗಿ ಆತ್ಮವಿಶ್ವಾಸ ಕುಂದಿ, ಖಿನ್ನತೆ ಉಂಟಾಗಬಹುದು; ವ್ಯಸನಕ್ಕೀಡಾಗಬಹುದು. ಚಿಕಿತ್ಸೆ ಏನು?

ಮೆದುಳಿನ ಕಾರಣದಿಂದ ಅಕಾಲಿಕ ಋತುಪ್ರಾಪ್ತಿಯಾಗಿದೆ ಎಂದು ತಿಳಿದರೆ ವೈದ್ಯರಿಂದ ಜಿ.ಎನ್.ಆರ್.ಎಚ್. ಅನಲಾಗ್ ಇಂಜೆಕ್ಷನನ್ನು ತಿಂಗಳಿಗೊಮ್ಮೆ ತೆಗೆದುಕೊಳ್ಳಬೇಕಾಗುತ್ತದೆ. 2.–3 ವರ್ಷ ಚಿಕಿತ್ಸೆಯನ್ನು ಕೊಡಬೇಕಾಗುತ್ತದೆ. ಮೆದುಳಿನಲ್ಲಿ ಗಡ್ಡೆಗಳಿದ್ದರೆ ಸೂಕ್ತ ಶಸ್ತ್ರಚಿಕಿತ್ಸೆಯನ್ನು ನಡೆಸಲಾಗುತ್ತದೆ.

ಅಂಡಾಶಯದಲ್ಲಿ ಗಡ್ಡೆಗಳಿದ್ದರೂ ಸೂಕ್ತ ಶಸ್ತ್ರಚಿಕಿತ್ಸೆಯನ್ನು ನಡೆಸಿ ತೆಗೆಯಲಾಗುತ್ತದೆ. ಇನ್ನುಳಿದ ಕಾರಣಗಳಿಗೂ ಸೂಕ್ತ ಚಿಕಿತ್ಸೆ ಕೊಡಲಾಗುತ್ತದೆ. ಯಾವುದೇ ಕಾರಣ ಕಂಡುಹಿಡಿಯಲಾಗದಿದ್ದಲ್ಲಿ ಧೈರ್ಯವನ್ನು ಕೊಡುವುದೇ ಮುಖ್ಯ. ಎಲ್ಲಕ್ಕಿಂತ ಹೆಚ್ಚಾಗಿ ರೋಗಿಗೂ ಹಾಗೂ ಅವರ ಕುಟುಂಬದವರಿಗೂ ಸೂಕ್ತ ಆಪ್ತಸಮಾಲೋಚನೆ ನಡೆಸಿ ಪರಿಸ್ಥಿತಿಯನ್ನು ಎದುರಿಸಲು ತಯಾರು ಮಾಡಬೇಕಾಗುತ್ತದೆ.ಅಕಾಲಿಕ ಋತುಪ್ರಾಪ್ತಿಯಾದ ಹೆಣ್ಣುಮಕ್ಕಳು ಗರ್ಭಧಾರಣೆಯಾಗದ ಹಾಗೆ ಅತ್ಯಾಚಾರಕ್ಕೊಳಗಾಗದ ಹಾಗೆ ನೋಡಿಕೊಳ್ಳುವುದು; ಕೌಟುಂಬಿಕ ಹಾಗೂ ಸಾಮಾಜಿಕ ಭದ್ರತೆ ನೀಡುವ ಆವಶ್ಯಕತೆ ಇದೆ.

ಒಟ್ಟಿನಲ್ಲಿ ಋತುಪ್ರಾಪ್ತಿ ಅಕಾಲಿಕವಾಗಿರಲಿ ಅಥವಾ ಸರಿಯಾದ ಸಮಯಕ್ಕೆ ಆಗಿರಲಿ, ಕುಟುಂಬದ ಹಿರಿಯರ ಹಾಗೂ ತಜ್ಞರ ಮಾರ್ಗದರ್ಶನ ಸಕಾಲಿಕವಾಗಿ ದೊರೆತರೆ ಮುಂದಿನ ಪ್ರಬುದ್ಧವಾದ ಸಂತಾನೋತ್ಪತ್ತಿ ಅವಧಿಯನ್ನು ಧೈರ್ಯವಾಗಿ ಎದುರಿಸಲು ಪ್ರತಿಯೊಬ್ಬ ಬಾಲಿಕೆಯರಿಗೂ ಸಾಧ್ಯವಾಗುತ್ತದೆ.

* ಬಾಲೆಯು ಒಂಬತ್ತು ವರ್ಷ ತಲುಪುತ್ತಿದ್ದ ಹಾಗೆ ಪಿಟುಟರಿ ಗ್ರಂಥಿಯ ಮುಂಭಾಗದಿಂದ ಬೆಳವಣಿಗೆಯ ಹಾರ್ಮೋನು ಸ್ರವಿಸಿ, ಎತ್ತರ, ತೂಕ ಹೆಚ್ಚಾಗುತ್ತದೆ. ಅಸ್ತಿಕುಹರ (ಪೆಲ್ವಿಸ್), ದೊಡ್ಡದಾಗುತ್ತದೆ.

* ಗರ್ಭಕೋಶದಲ್ಲಿ ಸ್ತ್ರೀ–ಹಾರ್ಮೋನುಗಳ ಪ್ರಭಾವದಿಂದ ಲೋಳೆಪದರ ಬೆಳೆದು ನಂತರ ಹಾರ್ಮೋನ್ ಮಟ್ಟ ಕಡಿಮೆಯಾದಾಗ ಲೋಳೆಪದರ ಚೂರು ಚೂರಾಗಿ ಹೊರಬರುವ ಪ್ರಕ್ರಿಯೆಯೇ ಮಾಸಿಕ ಋತುಚಕ್ರವೆನಿಸಿಕೊಂಡು ಪ್ರತಿ ತಿಂಗಳು ಗರ್ಭಧಾರಣೆಯಾಗದಿದ್ದಾಗ ಪುನರಾವರ್ತನೆಯಾಗುತ್ತದೆ.* ಒಬ್ಬ ಬಾಲೆಗೆ ಎಂಟು ವರ್ಷದೊಳಗೆ ಋತುಚಕ್ರ ಪ್ರಾಪ್ತಿಯಾದರೆ ಅದೇ ‘ಅಕಾಲಿಕ ಋತುಪ್ರಾಪ್ತಿ’ ಎನಿಸಿಕೊಳ್ಳುತ್ತದೆ.* ಅಕಾಲಿಕ ಋತುಪ್ರಾಪ್ತಿಯಾದ ಹೆಣ್ಣುಮಕ್ಕಳು ಗರ್ಭಧಾರಣೆಯಾಗದ ಹಾಗೆ ಅತ್ಯಾಚಾರಕ್ಕೊಳಗಾಗದ ಹಾಗೆ ನೋಡಿಕೊಳ್ಳುವುದು; ಕೌಟುಂಬಿಕ ಹಾಗೂ ಸಾಮಾಜಿಕ ಭದ್ರತೆ ನೀಡುವುದು ಅವಶ್ಯಕ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry