ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದುವೆ ದಿನ ಮೆರೆವ ಸೌಂದರ್ಯಕ್ಕೆ...

Last Updated 27 ಜನವರಿ 2017, 19:30 IST
ಅಕ್ಷರ ಗಾತ್ರ

ತಿ ಹೆಣ್ಣು ತನ್ನ ಮದುವೆಯಲ್ಲಿ ಪರಿಪೂರ್ಣವಾಗಿ ಕಾಣಲು ಬಯಸುತ್ತಾಳೆ. ಸಿನಿಮಾಗಳಲ್ಲಿ  ಸಿಂಗಾರಗೊಳ್ಳುವ ವಧುವಿನಂತೆಯೇ ತಾನು ಕಾಣಿಸಬೇಕು ಎಂಬುದು ಅವಳ ಬಯಕೆ.  ಆ ದಿನ ಆಕೆಯೇ ಸೌಂದರ್ಯ ಹಾಗೂ ಆಕರ್ಷಣೆಯ ಕೇಂದ್ರಬಿಂದು.

ಮದುವೆ ಎರಡು –ಮೂರು ದಿನಗಳ ಕಾರ್ಯಕ್ರಮವಾದರೂ ಸೀರೆ, ಆಭರಣ, ಚಪ್ಪಲಿ, ಬ್ಯಾಗು ಖರೀದಿ ಹೀಗೆ ಪೂರ್ವ ತಯಾರಿ ತಿಂಗಳ ಹಿಂದೆಯೇ ಶುರುವಾಗಿರುತ್ತದೆ.

ಮದುವೆ ದಿನ ಉಡಲು ಗುಲಾಬಿ ಅಥವಾ ಮೆರೂನ್‌ ಬಣ್ಣದ ಸೀರೆಯನ್ನೇ ಬಹುತೇಕ ಯುವತಿಯರು ಆಯ್ಕೆ ಮಾಡುತ್ತಾರೆ. ಈ ಪಟ್ಟಿಗೆ ತಿಳಿಗೆಂಪು, ಆಕಾಶ ನೀಲಿ, ಮೆಜೆಂಟಾ, ಕನಕಾಂಬರ ಬಣ್ಣವೂ ಸೇರಿದೆ. ಅತಿ ಭಾರದ ಸಾಂಪ್ರದಾಯಿಕ ಸೀರೆಗಳನ್ನು ಖರೀದಿಸುವ ಬದಲು ಎಲ್ಲಾ ಸಮಾರಂಭಗಳಿಗೆ ಸರಿಹೊಂದುವ ಹಗುರ ರೇಷ್ಮೆ ಸೀರೆಗಳನ್ನು ಖರೀದಿಸಿದರೆ ಭವಿಷ್ಯದಲ್ಲಿ ಇತರ ಕಾರ್ಯಕ್ರಮಗಳಿಗೂ ಇದನ್ನು ಧರಿಸಬಹುದು.

‘ಆರತಕ್ಷತೆಗೆ  ತಿಳಿ ಗುಲಾಬಿ ಮತ್ತು ಲಿಂಬೆ ಹಸಿರು ಸೀರೆ ಸೂಕ್ತ. ಗಿಳಿ ಹಸಿರು ಬಣ್ಣದ ಸೀರೆ ಕೂಡ ಸುಂದರವಾಗಿ ಕಾಣುತ್ತದೆ. ರಿಸೆಪ್ಷನ್‌, ಮೆಹೆಂದಿ ಕಾರ್ಯಕ್ರಮಕ್ಕೆ ಲೆಹೆಂಗಾ ಸರಿ ಹೊಂದುತ್ತದೆ’  ಎಂಬುದು ಹೊಸಕೆರೆಹಳ್ಳಿಯ ದಿಶಾ ಬ್ಯೂಟಿ ಸ್ಪಾಟ್‌ನ  ಆಯುರ್ವೆದಿಕ್‌ ಬ್ಯೂಟಿಷಿಯನ್‌ ದೀಪಾ ನಾಗೇಶ್‌ ಅವರ ಅನಿಸಿಕೆ.

ಮದುವೆಗೆ ಟೆಂಪಲ್‌ ವಿನ್ಯಾಸದ ಆಭರಣಗಳು, ಆ್ಯಂಟಿಕ್‌, ಕುಂದನ್‌... ಹೀಗೆ ವಿವಿಧ ವಿನ್ಯಾಸದ ಆಭರಣಗಳು ಈಗ ಲಭ್ಯ. ಇತರ ಶಾಸ್ತ್ರಗಳಾದ ಅರಿಶಿನ ಶಾಸ್ತ್ರ, ಮೆಹೆಂದಿ, ಪೂಜೆ, ಗೃಹಪ್ರವೇಶ, ಆರತಕ್ಷತೆ ಸಮಾರಂಭಗಳಿಗೆ  ಸೀರೆಗೆ ಸರಿಹೊಂದುವ ಒಡವೆಗಳನ್ನು  ಮೊದಲೇ ಪಟ್ಟಿ ಮಾಡಿಟ್ಟುಕೊಳ್ಳಬೇಕು.
ಜರತಾರಿ ಸೀರೆ,  ಆಭರಣಗಳು, ಮುಖದ ಅಲಂಕಾರ, ಕೈಕಾಲುಗಳಿಗೆ ಮೆಹೆಂದಿಯ ಚಿತ್ತಾರ - ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ವಧುವಿನ ಕೇಶ ಶೃಂಗಾರವನ್ನು ಆಕರ್ಷಕವಾಗಿ ಮಾಡಬೇಕಾಗುತ್ತದೆ.

ವಧುವಿನ ಕೇಶ ವಿನ್ಯಾಸದಲ್ಲೂ ವೈವಿಧ್ಯವಿದೆ. ಮೊಗ್ಗಿನ ಜಡೆ ಜನಪ್ರಿಯ ಆಯ್ಕೆ. ಅದರಲ್ಲೇ ಇಂದು ಸಾಂಪ್ರದಾಯಿಕವಾಗಿ ಹರಳು, ಗುಲಾಬಿ ಹೂಗಳ ಪಕಳೆ, ಮಣಿಗಳಿಂದ ಮಾಡಿದ ಹೂವಿನ ಜಡೆಯನ್ನು ಜೋಡಿಸಲಾಗುತ್ತದೆ.

ಮದುವೆ ಶಾಂಪಿಂಗ್‌ ಎಂಬುದು  ತ್ರಾಸದಾಯಕ ಹಾಗೂ ಖುಷಿಯ ಸಂಗತಿ. ಹೊಸ ಜೀವನಕ್ಕೆ ಕಾಲಿಡಲು ಹೊರಟಿರುವ ವರ ಹಾಗೂ ವಧುವಿನ ಸಂಭ್ರಮದ ಜೊತೆಗೇ ಈ ಶಾಂಪಿಂಗ್‌ ಜವಾಬ್ದಾರಿಯೂ ಹೆಗಲಿಗೇರಿರುತ್ತದೆ. ಮದುವೆ ದಿನ, ಮೆಹೆಂದಿ, ರಿಸೆಪ್ಷನ್‌ ಹೀಗೆ ಎಲ್ಲಾ ಸಮಾರಂಭಕ್ಕೂ ಅಗತ್ಯವಿರುವ ಎಲ್ಲಾ ವಸ್ತುಗಳ ಪಟ್ಟಿಯನ್ನು ಮಾಡಿಕೊಂಡು, ಶಾಂಪಿಂಗ್‌ಗೆ ಹೊರಟರೆ ತುಸು ಆರಾಮದಾಯಕ.

ಇದರಿಂದ ಅನಗತ್ಯ ಖರೀದಿಗೆ ತಡೆ ಹಾಕಬಹುದಲ್ಲದೇ ಅವಸರದಲ್ಲಿ ಖರೀದಿ ಮಾಡುವುದನ್ನು ತಪ್ಪಿಸಬಹುದು.   ಇಲ್ಲಿ ಮೊದಲ ಆದ್ಯತೆ ಚಿನ್ನ, ಸೀರೆ ಖರೀದಿಗೆ. ನಂತರದ್ದು ಸೌಂದರ್ಯ ಪ್ರಸಾಧನ, ಚಪ್ಪಲಿ, ಅಗತ್ಯ ವಸ್ತುಗಳ  ಖರೀದಿಗೆ. ಇನ್ನು ಕುರ್ತಾ, ಜೀನ್ಸ್‌, ಟೀಶರ್ಟ್‌, ಸಲ್ವಾರ್‌ಗಳನ್ನು ಖರೀದಿ ಮಾಡುವುದೂ ಮುಖ್ಯ.

ಮದುವೆ ದಿನದ ಅಲಂಕಾರ
ಮದುವೆ ಗೊತ್ತಾದ ಕೂಡಲೇ  ಬ್ಯೂಟಿಷಿಯನ್‌ಗಳನ್ನು ಸಂಪರ್ಕಿಸಿ ಸೀರೆ, ಆಭರಣ ಹಾಗೂ ಮೇಕಪ್‌ಗಳ ಬಗ್ಗೆ ಚರ್ಚೆ ನಡೆಸುವುದು ಉತ್ತಮ.  ಇಲ್ಲದಿದ್ದಲ್ಲಿ  ಕೊನೆ ಕ್ಷಣದಲ್ಲಿ ಸಂವಹನ ಕೊರತೆಯಿಂದ ಮುಖದ ಸೌಂದರ್ಯ ಹಾಳಾಗಬಹುದು. ಮದುಮಗಳ ಕೇಶವಿನ್ಯಾಸ, ಸೀರೆ ಶೈಲಿ, ಅಲಂಕಾರ ಬಗ್ಗೆ ಚರ್ಚೆ ನಡೆಸಬೇಕು.

ಈಗ ‘ಹೈ ಡೆಫಿನಿಶನ್‌ ಮೇಕಪ್‌’ ಚಾಲ್ತಿಯಲ್ಲಿದೆ. ಇದರಿಂದ ಮುಖ ಸಹಜವಾಗಿ ಮತ್ತು ಸುಂದರವಾಗಿ ಕಾಣುವುದಲ್ಲದೇ ಫೋಟೊಗ್ರಫಿಗೂ ಒಪ್ಪುತ್ತದೆ.  ಇಲ್ಲಿ ಮುಖದಲ್ಲಿನ ಕಲೆಗಳು ಕಾಣುವುದಿಲ್ಲ. ಬ್ಯೂಟಿಷಿಯನ್‌ಗಳು ಇದಕ್ಕಾಗಿ ಎಚ್‌ಡಿ ಫೌಂಡೇಷನ್‌ ಉಪಯೋಗಿಸುತ್ತಾರೆ.

ಮದುಮಗಳ ಮೇಕಪ್‌ನಲ್ಲಿ ಕಣ್ಣಿನ ಅಲಂಕಾರಕ್ಕೆ ಗಮನ ನೀಡಬೇಕಾದುದು ಮುಖ್ಯ. ತೊಟ್ಟ ಬಟ್ಟೆಗೆ ಅನುಗುಣವಾಗಿ ಕಣ್ಣುಗಳು ಅಗಲವಾಗಿ, ಆಕರ್ಷಕವಾಗಿ ಕಾಣುವಂತೆ ಮಾಡಿ, ಕಣ್ಣುಗಳಿಗೆ ಕಲರ್‌ ಐಶ್ಯಾಡೊಗಳನ್ನು ಬಳಸಲಾಗುತ್ತದೆ.

ವಿವಾಹಕ್ಕೆ  ಪೂರ್ವ ತಯಾರಿ
ಮದುವೆ ದಿನ ಮುಖದ ಹೊಳಪಿಗೆ ಫೇಶಿಯಲ್‌ ಬದಲು ಸ್ಕಿನ್‌ ಪಾಲಿಶಿಂಗ್‌ ಮಾಡಿಸಿಕೊಂಡಲ್ಲಿ ಮುಖದ ಕಾಂತಿ ಹೆಚ್ಚುತ್ತದೆ. ಇದನ್ನು ಮದುವೆಯ ಐದು ಅಥವಾ ಮೂರು ದಿನಗಳ ಹಿಂದೆ ಮಾಡಿಸಿಕೊಳ್ಳಬೇಕು. ಇನ್ನು ಕೈಗಳಿಗೆ ಹ್ಯಾಂಡ್‌ ಸ್ಪಾ ಮಾಡಿಸಿಕೊಳ್ಳುವುದು ಉತ್ತಮ. ಕೂದಲಿಗೆ ಆಯುರ್ವೇದಿಕ್‌ ಬಾದಾಮಿ ಎಣ್ಣೆಯ ಮಸಾಜ್‌ ಮಾಡಿಸಿಕೊಳ್ಳಬೇಕು. ಇದರಿಂದ ಕೂದಲು ದಪ್ಪವಾಗಿ ಕಾಣುತ್ತದೆ.

*
ಒಬ್ಬರಿಗೆ ಚೆಂದ ಕಾಣುವ  ಮೇಕಪ್‌ ಇನ್ನೊಬ್ಬರಿಗೆ ಚೆನ್ನಾಗಿ ಕಾಣಲೇಬೇಕು ಎಂದು ಹೇಳಲು ಆಗದು. ಆತುರದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕಿಂತ ಪೂರ್ವ ಸಿದ್ಧತೆ ಒಳಿತು.
–ದೀಪಾ ನಾಗೇಶ್,
ಆಯುರ್ವೆದಿಕ್‌ ಬ್ಯೂಟಿಷಿಯನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT