7

ಲಾಭಾಂಶ ಪ್ರಕಟಿಸದೆ ಜಿಪುಣತನ ಪ್ರದರ್ಶನ

ಕೆ. ಜಿ. ಕೃಪಾಲ್
Published:
Updated:
ಲಾಭಾಂಶ ಪ್ರಕಟಿಸದೆ ಜಿಪುಣತನ ಪ್ರದರ್ಶನ

ಷೇರುಪೇಟೆಯ ಚಲನೆ ಈ ವಾರ ದಿಕ್ಕು ಬದಲಿಸಿ ಏರಿಕೆಯತ್ತ ಸಾಗಿರುವುದು ಹೂಡಿಕೆದಾರರಲ್ಲಿ ಹರ್ಷ ಮೂಡಿಸಿದೆ. ನೋಟು ರದ್ದತಿಯು ಬಹುತೇಕ ಕಂಪೆನಿಗಳ ಮೇಲೆ ನಕಾರಾತ್ಮಕ  ಪ್ರಭಾವ ಬೀರಬಹುದೆಂಬ ಭಾವನೆ ದೂರವಾಗಿ ಹೆಚ್ಚಿನ ಕಂಪೆನಿಗಳು ನಿರೀಕ್ಷೆಗಿಂತ ಉತ್ತಮ ಫಲಿತಾಂಶ ಪ್ರಕಟಿಸಿವೆ.

ಡಿಸೆಂಬರ್ ಮೊದಲ ವಾರದಲ್ಲಿ ನೋಟು ರದ್ದತಿಯ ನೆಪದಲ್ಲಿ  ₹ 720 ರಿಂದ ₹ 465 ರವರೆಗೂ ಕುಸಿದಿದ್ದ  ಭಾರತ್ ಫೈನಾನ್ಷಿಯಲ್ ಇನ್‌ಕ್ಲುಷನ್  ಕಂಪೆನಿಯು ಈ ವಾರ  ₹658 ರಿಂದ ₹765ರವರೆಗೂ ಏರಿಕೆ ಪ್ರದರ್ಶಿಸಿ, ₹ 742ರ ಸಮೀಪ ಕೊನೆಗೊಂಡಿದೆ.

ಅನೇಕ ಕಂಪನಿಗಳು ಉತ್ತಮವಾಗಿ  ಕಾರ್ಯ ನಿರ್ವಹಿಸಿದರೂ ಸಹ ಕಾರ್ಪೊರೇಟ್ ಲಾಭಾಂಶ ಘೋಷಿಸದೆ ಜಿಪುಣತನ ಪ್ರದರ್ಶಿಸಿವೆ. ಪ್ರತಿ ಬಾರಿಯೂ ಮಧ್ಯಂತರ ಲಾಭಾಂಶ ಪ್ರಕಟಿಸುತ್ತಿದ್ದ ಇನ್ಫೊಸಿಸ್,  ಕಾಲ್ಗೇಟ್ ಪಾಮೋಲಿವ್ ಮತ್ತು ಅತ್ಯುತ್ತಮ ಅಂಕಿ– ಅಂಶ ಪ್ರದರ್ಶಿಸಿದ ಬಯೊಕಾನ್, ಮಾರುತಿ ಸುಜುಕಿ, ಇಂಡಸ್ ಇಂಡ್ ಬ್ಯಾಂಕ್, ಯೆಸ್ ಬ್ಯಾಂಕ್ ಲಾಭಾಂಶ ಪ್ರಕಟಿಸಲಿಲ್ಲ. 

ಇನ್ನು ಸರ್ಕಾರಿ ವಲಯದ ಗೇಲ್ ಇಂಡಿಯಾ,  ಇಂಡಿಯಾ ಬುಲ್ ಹೌಸಿಂಗ್ ಫೈನಾನ್ಸ್, ಇಂಡಿಯಾ ನಿಪ್ಪಾನ್ ಎಲೆಕ್ಟ್ರಿಕಲ್ಸ್, ಇಂಪಾಲ್, ಕೇವಲ್ ಕಿರಣ್ ಕ್ಲೋದಿಂಗ್‌ನಂತಹ ಕಂಪೆನಿಗಳು  ಸಾಂಪ್ರದಾಯಿಕ ರೀತಿಯಲ್ಲಿ ಆಕರ್ಷಕ ಲಾಭಾಂಶ ಪ್ರಕಟಿಸಿವೆ.  

ಆದರೆ, ಗೇಲ್ ಇಂಡಿಯಾ ಪ್ರಕಟಿಸಿದ ಬೋನಸ್ ಷೇರು ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು,   ಒಎನ್‌ಜಿಸಿ 1:2 ರ ಅನುಪಾತ  ಹಾಗೂ  ಆಯಿಲ್ ಇಂಡಿಯಾದ 1:3ರ ಅನುಪಾತದ ಬೋನಸ್ ಪ್ರಕಟಿಸಿರುವುದು ಈ ವಲಯದ ಕಂಪೆನಿಗಳಲ್ಲಿ ಉತ್ಸಾಹ ಕ್ಷೀಣಿಸುತ್ತಿದೆಯೇ ಎಂಬ ಭಾವನೆ ಮೂಡಿಸುತ್ತದೆ.

ಬಜೆಟ್‌ ನಿರೀಕ್ಷೆ: ವಾಹನ ವಲಯದ ಕಂಪನಿಗಳ ಡಿಸೆಂಬರ್ ತ್ರೈಮಾಸಿಕ  ಫಲಿತಾಂಶ ಉತ್ತಮವಾಗಿದ್ದರೂ ಅದೇ ರೀತಿಯ ಸಾಧನೆ ಮುಂದಿನ ತ್ರೈಮಾಸಿಕದಲ್ಲಿ ಸಾಧ್ಯವಿಲ್ಲ. 

ವರ್ಷಾಂತ್ಯದಲ್ಲಿ ವಿವಿಧ ರೀತಿಯ ಸವಲತ್ತು ನೀಡಿ ಹಳೆ ಮಾಡೆಲ್‌  ಮಾರಾಟ ಮಾಡಿರುತ್ತಾರೆ.  ಹೊಸ ವರ್ಷದಲ್ಲಿ ಹೊಸ ಮಾಡೆಲ್ ಬಂದ ಮೇಲೆ ಅದೇ ರೀತಿಯ ಮಾರಾಟ ಸಾಧ್ಯವಿರುವುದಿಲ್ಲ. ಜೊತೆಗೆ ಬೆಲೆ ಏರಿಕೆಯು ಮಾರಾಟದ ವೇಗವನ್ನು ಕಡಿತಗೊಳಿಸುತ್ತದೆ. 

ಇವೆಲ್ಲದರ ಜೊತೆಗೆ ಫೆಬ್ರವರಿ ಒಂದರಂದು ಕೇಂದ್ರ ಸರ್ಕಾರದ ಬಜೆಟ್‌ ಮಂಡನೆಯಾಗಲಿದೆ. ಬಜೆಟ್‌ ಸಂಗತಿಗಳು ಉದ್ಯಮ ವಲಯದ ನಿರೀಕ್ಷೆ, ಅಪೇಕ್ಷೆಗಳಿಗೆ ಎಷ್ಟರ ಮಟ್ಟಿಗೆ ಸ್ಪಂದಿಸಿವೆ ಎಂಬುದನ್ನು ಅವಲಂಬಿಸಿ  ಪೇಟೆಯ ಮುಂದಿನ  ದಾರಿಗೆ ಸೂಚನೆಯಾಗಲಿವೆ.

ಮೂಲಾಧಾರಿತ ಪೇಟೆಯ ಚುಕ್ತಾ ಚಕ್ರದ ಕೊನೆಯ ದಿನವಾದ ಬುಧವಾರ ಪೇಟೆಯಲ್ಲಿ ₹8.99  ಲಕ್ಷ ಕೋಟಿ ಮೌಲ್ಯದ ವಹಿವಾಟು ದಾಖಲಾಗಿದೆ. ಅಂದು ವಿದೇಶಿ ಹಣಕಾಸು ಸಂಸ್ಥೆಗಳು ₹1,378 ಕೋಟಿ ಮೌಲ್ಯದ ಷೇರು ಖರೀದಿಸಿದ್ದಾರೆ.  ಆದರೆ, ಶುಕ್ರವಾರ ವಹಿವಾಟಿನ ಗಾತ್ರ ₹2.89 ಲಕ್ಷ ಕೋಟಿಗೆ ಕುಸಿದಿರುವುದು, ಪೇಟೆಯಲ್ಲಿ ನಡೆಯುತ್ತಿರುವ ವಹಿವಾಟಿನ ರೀತಿಗೆ ಹಿಡಿದ ಕನ್ನಡಿಯಾಗಿದೆ.

ವಿಸ್ಮಯಕಾರಿ ವಿಚಾರಗಳು: ಮಂಗಳವಾರ ಪೇಟೆಯ ಆರಂಭಿಕ ಕ್ಷಣಗಳಲ್ಲಿ ₹1,794ರಷ್ಟಿದ್ದ ಅಜಂತಾ ಫಾರ್ಮಾ ಲಿಮಿಟೆಡ್ ಷೇರು  ಕೇವಲ 15  ನಿಮಿಷದಲ್ಲಿ  ₹1,572 ರ ಸಮೀಪಕ್ಕೆ ಕುಸಿಯಿತು.  ನಂತರ ಸ್ವಲ್ಪ ಸಮಯದಲ್ಲಿ ₹1,725ಕ್ಕೆ ಪುಟಿದೆದ್ದು ₹1,700 ರ ಸಮೀಪ ಸ್ಥಿರತೆಯಿಂದ ಸಾಗಿ ₹1,756ರಲ್ಲಿ ಕೊನೆಗೊಂಡಿತು. ಇದು  ಪೇಟೆ ಚಲಿಸುವ ವೇಗ ಮತ್ತು ವಹಿವಾಟಿನ ತ್ವರಿತ ಗತಿಗೆ  ಸಾಕ್ಷಿ.  ಕಂಪನಿಗೆ ಅಮೆರಿಕದ ಎಫ್‌ಡಿಎ ಎಚ್ಚರಿಕೆ ಪತ್ರ ನೀಡಿದೆ ಎಂದು  ಮಾಧ್ಯಮದಲ್ಲಿ ಪ್ರಕಟವಾದ ಸುದ್ದಿ ಆರಂಭದಲ್ಲಿ ಷೇರಿನ ಬೆಲೆ ಆಳದ ಅರಿವಿಲ್ಲದ ರೀತಿ ಕೆಳಗೆ ಜಗ್ಗಿತು. ಆದರೆ, ಕಂಪನಿ ಈ ಸುದ್ದಿಯನ್ನು ಸ್ಪಷ್ಟವಾಗಿ ತಳ್ಳಿ ಹಾಕಿದ್ದರಿಂದ  ಷೇರಿನ ಬೆಲೆ ಪುಟಿದೆದ್ದಿತು.  ಒಂದೇ ದಿನ ₹276 ಇಳಿಕೆ ಕಂಡು ನಂತರ ಅಲ್ಲಿಂದ ₹250 ರಷ್ಟು ಪುಟಿದೆದ್ದ ವೇಗ ಆಶ್ಚರ್ಯ ಮೂಡಿಸುವಂತಿದೆ. ಯಾವುದೇ ಅಂಶದ ಸತ್ಯಾಸತ್ಯತೆ ಅರಿಯುವುದಕ್ಕಿಂತ ಮುಂಚೆ ಅನಿರೀಕ್ಷಿತ ಬೆಳವಣಿಗೆ  ನಡೆದಿರುತ್ತದೆ.   ಇಂತಹ ಅನಿರೀಕ್ಷಿತ ಬೆಳವಣಿಗೆ ಸಾಧ್ಯ ಎಂಬುದನ್ನು ಅರಿತಿರುವುದು ಅಗತ್ಯ. ವಿಶೇಷವಾಗಿ ಫಾರ್ಮಾ ವಲಯದ ಷೇರುಗಳಲ್ಲಿ ವಹಿವಾಟು ನಡೆಸುವಾಗ ಸೀಮಿತ ಲಾಭಕ್ಕೆ ಹೊಂದಿಕೊಳ್ಳುವುದು ಉತ್ತಮ.

ಪಿಎನ್‌ಬಿ ಹೌಸಿಂಗ್ ಫೈನಾನ್ಸ್ ಲಿಮಿಟೆಡ್‌ ಮಂಗಳವಾರ ತ್ರೈಮಾಸಿಕ ಫಲಿತಾಂಶ ಪ್ರಕಟಿಸಿದೆ. ಅಂದು ಅದರ ಷೇರಿನ ದರ ₹858ರ ಸಮೀಪವಿತ್ತು.

ಸೆಪ್ಟೆಂಬರ್ ಮತ್ತು ಡಿಸೆಂಬರ್  ತ್ರೈಮಾಸಿಕಗಳಲ್ಲಿ ಕಂಪನಿಯ ಲಾಭ ಗಳಿಕೆ ಸಮನಾಗಿದ್ದರೂ ಸಾರ್ವಜನಿಕ ವಿತರಣೆ ಕಾರಣ ಕಂಪೆನಿಯ ಬಂಡವಾಳ ₹126.97 ಕೋಟಿಯಿಂದ ₹165.64  ಕೋಟಿಗೆ ಏರಿಕೆಯಾಗಿದೆ.  ಅಂದರೆ  ಲಾಭ ಗಳಿಕೆಯೂ ಇಳಿಕೆ ಕಂಡಿದೆ. ಆದರೂ ಬುಧವಾರ ಷೇರಿನ ಬೆಲೆ ₹947ರವರೆಗೂ ಏರಿಕೆ ಕಂಡಿರುವುದು ಆಶ್ಚರ್ಯ ಮೂಡಿಸುತ್ತದೆ. ಒಂದೇ ದಿನ ₹89 ರಷ್ಟು ಏರಿಕೆ ಕಂಡಿರುವುದು ಫಲಿತಾಂಶ ಆಧರಿಸಿ ಅಲ್, ಪೇಟೆಯ ಪರಿಸ್ಥಿತಿಯ ಪ್ರಭಾವವಿರಬೇಕು.

ಒಟ್ಟಾರೆ ಹಿಂದಿನ ವಾರ ಸಂವೇದಿ ಸೂಚ್ಯಂಕ 847 ಅಂಶ ಏರಿಕೆ ಕಂಡು  ಮಧ್ಯಮ ಶ್ರೇಣಿಯ ಸೂಚ್ಯಂಕ 380 ಅಂಶ ಮತ್ತು ಕೆಳ ಮಧ್ಯಮ ಶ್ರೇಣಿ ಸೂಚ್ಯಂಕ 351 ಅಂಶ ಏರಿಕೆ ಕಾಣುವಂತೆ ಮಾಡಿತು.  ವಿದೇಶಿ ಹಣಕಾಸು ಸಂಸ್ಥೆಗಳು ಈ ವಾರದಲ್ಲಿ ₹1,395 ಕೋಟಿ ಮೌಲ್ಯದ ಷೇರು ಖರೀದಿಸಿದರೆ, ಸ್ಥಳೀಯ ಹಣಕಾಸು  ಸಂಸ್ಥೆಗಳು ₹1,919 ಕೋಟಿ ಮೌಲ್ಯದ ಷೇರು ಖರೀದಿಸಿವೆ.

ಹೊಸ ಷೇರು: ಬಿಎಸ್ಇ ಲಿಮಿಟೆಡ್‌ನ ಆರಂಭಿಕ ಷೇರು ವಿತರಣೆ ಅಭೂತಪೂರ್ವ ಸ್ಪಂದನ ಪಡೆಯಿತು. ವಿತರಣೆಯ ಎರಡನೇ ದಿನವೇ ರಿಟೇಲ್ ವಿಭಾಗ ಎರಡು ಪಟ್ಟು ಹೆಚ್ಚು ಸಂಗ್ರಹಣೆಗೆ ಕಾರಣವಾಯಿತು.  ಕೊನೆಯ ದಿನ  ವಿತರಣೆಯು ಒಟ್ಟು 51.22 ರಷ್ಟು ಹೆಚ್ಚು ಸಂಗ್ರಹಣೆಯಾಗಿದೆ.  

ಅಹಮದಾಬಾದ್‌ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟು ಆಗುತ್ತಿದ್ದ ಫ್ಲೋರಾ ಕಾರ್ಪೊರೇಷನ್ ಲಿಮಿಟೆಡ್  ಷೇರು 27 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್‌ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಅಹಮದಾಬಾದ್ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟು ಆಗುತ್ತಿದ್ದ ಧನ್ ವರ್ಷ ಫಿನ್ ಇನ್ವೆಸ್ಟ್ ಲಿಮಿಟೆಡ್ ಕಂಪೆನಿಯು 30 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್ ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಲಿದೆ.

ಬೋನಸ್ ಷೇರು:  ಸರ್ಕಾರಿ ವಲಯದ ಗೇಲ್ ಇಂಡಿಯಾ ಕಂಪನಿ 1:3ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ. 

ಲಾಭಾಂಶ: ಗೇಲ್ ಇಂಡಿಯಾ ಪ್ರತಿ ಷೇರಿಗೆ ₹8.50 (ನಿಗದಿತ ದಿನ: ಫೆಬ್ರುವರಿ 3), ಜಿಎಂಎಂ ಪೌಡ್ಲ್ಯಾರ್ ಪ್ರತಿ ಷೇರಿಗೆ ₹0.70 (ಮುಖಬೆಲೆ ₹2), ಗಾಂಧಿ ಸ್ಪೆಷಲ್ ಟ್ಯೂಬ್ಸ್  ₹9 ( ಮುಖ ಬೆಲೆ ₹5).

  ಎಚ್‌ಸಿಎಲ್ ಟೆಕ್  ₹6 ( ಮುಖ ಬೆಲೆ ₹2),  ಜೆ ಎಂ ಫೈನಾನ್ಶಿಯಲ್ಸ್ ಲಿಮಿಟೆಡ್‌  ₹0.65 (ಮುಖ ಬೆಲೆ ₹1, ನಿಗದಿತ ದಿನ ಫೆ.3),  ಇಂಡಿಯಾ ನಿಪ್ಪಾನ್ ಎಲೆಕ್ಟ್ರಿಕಲ್ಸ್ ₹4,  ಐಆರ್‌ಬಿ   ಇನ್ಫ್ರಾ  ಗೆ ₹2, ಇಂಪಾಲ್   ₹5,  ಐಐಎಫ್ ಎಲ್ ಹೋಲ್ಡಿಂಗ್ಸ್  ₹4.5(ಮುಖ ಬೆಲೆ ₹2),

ಕೇವಲ್‌ ಕಿರಣ್ ಕ್ಲೋದಿಂಗ್‌   ₹8.50 ( ನಿಗದಿತ ದಿನ  ಫೆ.8).

  ರಾಣೆ ಮದ್ರಾಸ್  ₹2 ( ನಿಗದಿತ ದಿನ ಫೆ.3),  ವಿಆರ್ಎಲ್ ಲಾಜಿಸ್ಟಿಕ್ಸ್   ₹4, ವಿಪ್ರೊ   ₹2 (ಮುಖ ಬೆಲೆ ₹ 2), ವೆಂಟ್ ಇಂಡಿಯಾ   ₹10 ಮತ್ತು  ಜೇನ್ಸಾರ್ ಟೆಕ್ನಾಲಜಿಸ್ ಪ್ರತಿ ಷೇರಿಗೆ ₹5 (ನಿಗದಿತ ದಿನ ಫೆ. 4).ವಾರದ ವಿಶೇಷ;

ಸಲಹೆ ನಂಬಿ ಕೈ ಸುಟ್ಟೀತು!


ಷೇರುಪೇಟೆ ಚಟುವಟಿಕೆ ಭರಿತವಾಗಿ ಹೂಡಿಕೆದಾರರ ಆಸಕ್ತಿ ಚುರುಕಾಗಿದ್ದಾಗ ವಿವಿಧ ವಲಯಗಳಿಂದ ಮೊಬೈಲ್‌ಗಳಿಗೆ ವಿವಿಧ ರೀತಿಯ ಸಂದೇಶ, ಶಿಫಾರಸು ರವಾನೆಯಾಗುತ್ತವೆ. ಇಂತಹ ಶಿಫಾರಸುಗಳಲ್ಲಿ ಹೆಚ್ಚಿನವು  ಕಳಪೆ ಕಂಪೆನಿಗಳಾಗಿರುತ್ತವೆ. 

ಅಕ್ಟೋಬರ್ ತಿಂಗಳಲ್ಲಿ ಸೂರ್ಯ ಮಾರ್ಕೆಟಿಂಗ್  ಕಂಪೆನಿ ಷೇರನ್ನು ₹4.85ರಲ್ಲಿ ಕೊಳ್ಳಿರಿ ಇದಕ್ಕೆ ₹8.75ರ ಟಾರ್ಗೆಟ್ ಇದೆ ಎಂಬ ಸಂದೇಶದೊಂದಿಗೆ ₹3.90ರ ಸ್ಟಾಪ್ ಲಾಸ್ ನೀಡಿ ಸಂದೇಶಗಳು ರವಾನೆಯಾಗಿವೆ. 

ಆ ಷೇರಿನ ಬೆಲೆ ನಂತರದಲ್ಲಿ ಏಕ ಮುಖವಾಗಿ ಇಳಿಕೆ ಕಂಡು ಸದ್ಯ ₹1.60 ರ ವಾರ್ಷಿಕ ಕನಿಷ್ಠಕ್ಕೆ ತಲುಪಿ ₹1.80ರ ಸಮೀಪವಿದೆ.  ನವೆಂಬರ್‌ನಲ್ಲಿ ಈ ಕಂಪೆನಿಯ ಹೆಸರು ಸೋಲಿಸ್ ಮಾರ್ಕೆಟಿಂಗ್ ಎಂದು ಬದಲಾಗಿದೆ. ಈ ಕಂಪೆನಿಯ ಪ್ರವರ್ತಕರು ಕೇವಲ ಶೇ 6.2 ರಷ್ಟು ಪಾಲು ಹೊಂದಿರುತ್ತಾರೆ. ಅದೇ ರೀತಿ ಅಕ್ಟೋಬರ್ ತಿಂಗಳಲ್ಲಿ ಅರ್ಣವ ಕಾರ್ಪೊರೇಷನ್ ಎಂಬ ಕಂಪೆನಿಯ ಷೇರಿಗೆ ಶಿಫಾರಸು ರವಾನೆಯಾದವು. ಆ ಸಂದರ್ಭದಲ್ಲಿ ಅಚಲ ಇನ್‌ವೆಸ್ಟ್‌ಮೆಂಟ್ಸ್, ಸಿದ್ದಾರ್ಥ ಬಿಸಿನೆಸ್ ಲಿಮಿಟೆಡ್ ಕಂಪೆನಿಗಳು ಸಹ ಈ ಶಿಫಾರಸು ಪಟ್ಟಿಯನ್ನು ಅಲಂಕರಿಸಿದ್ದವು. 

ಆದರೆ, ನಂತರದ ದಿನಗಳಲ್ಲಿ ಈ ಷೇರಿನ ಬೆಲೆಗಳು ಕುಸಿಯುತ್ತಲೇ ಇವೆ. ಈ ಶಿಫಾರಸುಗಳಿಗೆ 'ಸ್ಟಾಪ್ ಲಾಸ್' ಎಂಬುದು ಶ್ರೀರಕ್ಷೆಯಾಗಿದೆ.   ಅಲ್ಪ ಬೆಲೆಯ ಷೇರುಗಳನ್ನು ಸಾವಿರಗಟ್ಟಲೆ ಕೊಳ್ಳುವ ಕಾರಣ ಒಂದು ರೂಪಾಯಿ ಏರಿಕೆಯಾದರೆ ಎಷ್ಟೊಂದು ಲಾಭ ಬರುವುದು ಎಂಬ ಭಾವನೆ ಮೂಡುವುದು ಸಹಜ. ಆದರೆ, ಆ ಸಂದರ್ಭದಲ್ಲಿ ರೂಪಾಯಿ ಇಳಿಕೆಯಾದರೆ ಎಷ್ಟು ಹಾನಿಯಾಗುತ್ತದೆಂಬ ಅಂಶ ಮರೆಯಾಗುವ ಕಾರಣ ಅಪಾಯಕ್ಕೆ ಆಹ್ವಾನ ನೀಡಿದಂತಾಗುತ್ತದೆ. ಈ ಎಲ್ಲ ಕಂಪೆನಿಗಳು ಹೆಚ್ಚಿನ ಕುಸಿತಕ್ಕೊಳಗಾಗಿವೆ.

ಇಂತಹ ಸಂದೇಶ ನಂಬಿ ಹೂಡಿಕೆ ಮಾಡಿದವರಿಗೆ ಅಗಾಧ ಪ್ರಮಾಣದ ಹಾನಿ ನಿಶ್ಚಿತ. ಇತ್ತೀಚಿಗೆ ಓದುಗರೊಬ್ಬರು ಕರೆ ಮಾಡಿ ಯಾರದೋ ಶಿಫಾರಸಿನ ಮೇಲೆ ತಾವು ಒಂದು ಲಕ್ಷ ಎಸ್ ಕುಮಾರ್ ನೇಷನ್ ವೈಡ್ ಷೇರುಗಳನ್ನು ₹7 ರಂತೆ ಖರೀದಿಸಿದ್ದಾಗಿ ತಿಳಿಸಿದರು.ಆ ಷೇರು ನಂತರ ದಿನೇ ದಿನೇ ಇಳಿಕೆ ಕಂಡು 2015ರಲ್ಲಿ ₹2ರ ಸಮೀಪ ತಲುಪಿ ನಂತರ ವಹಿವಾಟಿನಿಂದ ಅಮಾನತುಗೊಂಡಿದೆ. ಸುಮಾರು ಎರಡು ವರ್ಷಗಳಿಂದಲೂ ವಹಿವಾಟಾಗುತ್ತಿಲ್ಲ. ಭಾರಿ ಮೊತ್ತ ಬ್ಲಾಕ್ ಆಗಿದೆ. ಇದರಿಂದ ಹೊರಬರುವುದು ಹೇಗೆ ಎಂದು ಕೇಳಿದರು. 

ಈ ಯೋಚನೆ ಹೂಡಿಕೆ ಮಾಡುವ ಮುನ್ನ ಮಾಡಿದ್ದಲ್ಲಿ ಅಪಾಯದಿಂದ ತಪ್ಪಿಸಿಕೊಳ್ಳಬಹುದಿತ್ತು. ಈಗಲೂ ಕಂಪೆನಿ ವಹಿವಾಟಿಗೆ ಅಮಾನತು ತೆರವುಗೊಳಿಸಿಕೊಂಡು, ಬಿಡುಗಡೆಯಾದರೂ ಹೂಡಿಕೆ ಮಾಡಿದ್ದ ಹಣ ಹಿಂದಿರುಗಿ ಬರುವ ಸಾಧ್ಯತೆ ಕಡಿಮೆ. ಇಂತಹ ಅಪಾಯದ ಮಟ್ಟ ಅರಿತು ಉಚಿತ ಮಾಹಿತಿ ಇಲ್ಲವೇ ಶುಲ್ಕ ಪಾವತಿಸಿ ಪಡೆದ ಮಾಹಿತಿ ಆಧರಿಸಿ ಚಟುವಟಿಕೆ ನಡೆಸುವುದು ಅಲ್ಪ ಮಟ್ಟಿನ ಸುರಕ್ಷೆ. ಈ ರೀತಿ ಉಚಿತ ಸಂದೇಶಗಳನ್ನು ಒಂದೊಂದು ಸಲ ಒಂದೊಂದು ಹೆಸರಿನಲ್ಲಿ ರವಾನೆಯಾಗುತ್ತವೆ.  ಇದರಿಂದ ಪ್ರೇರಿತವಾಗದೆ ಇರುವುದು ಒಳಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry