ಗುರುವಾರ , ಡಿಸೆಂಬರ್ 3, 2020
19 °C

ಕೃಷ್ಣ ಅವರಿಗೆ ಬಹಿರಂಗ ಪತ್ರ

ಟಿ.ಕೆ. ತ್ಯಾಗರಾಜ್ Updated:

ಅಕ್ಷರ ಗಾತ್ರ : | |

⁠⁠⁠ಪ್ರಿಯ ಶ್ರೀ ಎಸ್.ಎಂ.ಕೃಷ್ಣ ಅವರೇ, ಹೇಗಿದ್ದೀರಿ? ಈ ಪ್ರಶ್ನೆ ಕೇಳುವುದಕ್ಕೆ ಕಾರಣ ನಾನು ನಿಮಗೆ ಆತ್ಮೀಯನೆಂದೋ, ನಿಮ್ಮ ನೆನಪಿನಲ್ಲಿ ಇರಬಹುದಾದ ವ್ಯಕ್ತಿಯೆಂದೋ ಎನ್ನುವುದಲ್ಲ. ನಿಮ್ಮ ರಾಜಕೀಯ ನಡೆಯನ್ನು ಪತ್ರಿಕೋದ್ಯಮದಲ್ಲಿ ಒಂದಷ್ಟು ವರ್ಷ ಗಮನಿಸಿಕೊಂಡು ಬಂದವನು ನಾನು.  ನೀವು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಸುದ್ದಿ ತಿಳಿದು ಅಚ್ಚರಿಗೊಂಡವರಲ್ಲಿ ನಾನೂ ಒಬ್ಬ.ಕೆಲವು ಕನ್ನಡ ಸುದ್ದಿವಾಹಿನಿಗಳು, ನೀವು ರಾಜಕೀಯ ನಿವೃತ್ತಿ ಘೋಷಿಸಿದ್ದೀರಿ ಎಂದು ಪ್ರಸಾರ ಮಾಡಿದಾಗ ನನಗೆ ಖುಷಿಯಾಗಿತ್ತು. ನಿಮಗೆ ಎಂಬತ್ತೈದು ವರ್ಷವಾಗಿದೆ.  ಸಾಹಿತ್ಯ, ಸಂಗೀತ, ಚಲನಚಿತ್ರ, ನಾಟಕ ಮೊದಲಾದ ಸದಭಿರುಚಿಗಳೊಂದಿಗೆ ಸಂಪೂರ್ಣ  ತೊಡಗಿಸಿಕೊಳ್ಳುವುದು ನಿಮಗೆ ಸಾಧ್ಯವಾಗಲಿದೆ ಎನ್ನುವುದು ಒಂದು ಕಾರಣ. ವೃದ್ಧ ರಾಜಕಾರಣಿಗಳು ಹೊಸ ತಲೆಮಾರಿಗೆ ಅವಕಾಶ ನೀಡುವ ನಿಟ್ಟಿನಲ್ಲಿ ನೀವು ಮಾದರಿಯಾಗಿದ್ದೀರಿ ಅಂತ ಭಾವಿಸಿದ್ದೆ.ಆದರೆ ನೀವು ಕರೆದಿದ್ದ ಸುದ್ದಿಗೋಷ್ಠಿಯಲ್ಲಿ, ‘ರಾಜಕೀಯವಾಗಿ ನಿವೃತ್ತಿ ಘೋಷಿಸಿಲ್ಲ, ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದೇನಷ್ಟೇ’ ಎಂದು ಸ್ಪಷ್ಟಪಡಿಸಿದ್ದೀರಿ. ಮತ್ತೆ ರಾಜ್ಯಸಭಾ ಸದಸ್ಯರಾಗುವ ಅವಕಾಶ ಸಿಗಲಿಲ್ಲ ಎನ್ನುವುದೇ ನಿಮ್ಮ ರಾಜೀನಾಮೆಗೆ ಬಹುಮುಖ್ಯ ಕಾರಣ ಅನ್ನುವುದು ನಿಮ್ಮ ಮಾತಿನಿಂದಲೇ ಅನ್ನಿಸಿತು. ಅದಕ್ಕೆ ನೀವು, ‘ಪಕ್ಷ ಹಿರಿತನವನ್ನು ಕಡೆಗಣಿಸಿದೆ. ಹಿರಿತನ ಕಡೆಗಣಿಸಿದ ಪಕ್ಷಕ್ಕೆ ಭವಿಷ್ಯ ಇಲ್ಲ’ ಎಂಬ ಅಸಹನೆಯನ್ನು ಪ್ರಕಟಿಸಿದ್ದೀರಿ. ಒಂದು ಪಕ್ಷದಲ್ಲಿ ನಿಮಗೆ ಭವಿಷ್ಯ ಇಲ್ಲ ಎಂದರೆ ಆ ಪಕ್ಷಕ್ಕೇ ಭವಿಷ್ಯ ಇಲ್ಲ ಎನ್ನುವುದು ಕೇವಲ ಕಾರಿಕೆಯಲ್ಲವೇ?ನಿಮ್ಮ ರಾಜಕೀಯ ಬದುಕಿನ ಬಹುತೇಕ ಸ್ಥಾನಮಾನಗಳು ಕಾಂಗ್ರೆಸ್ ಪಕ್ಷದಿಂದಲೇ ಲಭಿಸಿವೆ. ವಿಧಾನಸಭೆ ಸದಸ್ಯರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ರಾಜ್ಯ ಸರ್ಕಾರದಲ್ಲಿ ಸಚಿವರಾಗಿ, ಲೋಕಸಭಾ ಸದಸ್ಯರಾಗಿ, ರಾಜ್ಯಸಭಾ ಸದಸ್ಯರಾಗಿ, ಕೆಪಿಸಿಸಿ ಅಧ್ಯಕ್ಷರಾಗಿ, ವಿಧಾನಸಭಾಧ್ಯಕ್ಷರಾಗಿ, ಉಪಮುಖ್ಯಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ, ಕೇಂದ್ರದಲ್ಲಿ ಕೈಗಾರಿಕಾ ಖಾತೆ ರಾಜ್ಯ ಸಚಿವರಾಗಿ, ಹಣಕಾಸು ಖಾತೆ ರಾಜ್ಯಸಚಿವರಾಗಿ, ರಾಜ್ಯಪಾಲರಾಗಿ,  ವಿದೇಶಾಂಗ ವ್ಯವಹಾರಗಳ ಸಚಿವರಾಗಿ ನೀವು ಅಧಿಕಾರ ಅನುಭವಿಸುವುದಕ್ಕೆ ಕಾಂಗ್ರೆಸ್ ಪಕ್ಷವೇ ಕಾರಣವಾಗಿದೆ.ಇಷ್ಟೆಲ್ಲದರ ನಂತರವೂ, ಮತ್ತೆ ರಾಜ್ಯಸಭಾ ಸದಸ್ಯತ್ವ ಅನುಗ್ರಹಿಸಲಿಲ್ಲ ಎನ್ನುವ ಕಾರಣಕ್ಕೆ ಬೇಸರವಾಯಿತೆಂದರೆ  ನಗು ಬರುತ್ತದೆ. ನೀವೇ ಈ ರೀತಿ ಪ್ರತಿಕ್ರಿಯಿಸುವುದಾದರೆ ಯಾವತ್ತೋ ರಾಜ್ಯದ ಮುಖ್ಯಮಂತ್ರಿಯಾಗಲು ಎಲ್ಲ ಅರ್ಹತೆಗಳಿದ್ದೂ  ಮುಸ್ಲಿಮರಾದ ಒಂದೇ ಕಾರಣದಿಂದ ಅವಕಾಶ ವಂಚಿತ ರಾದ ಮತ್ತು ರಾಜ್ಯ ಕಂಡ ಪ್ರಮುಖ ನಾಯಕರಲ್ಲಿ ಒಬ್ಬರಾದ ಜಾಫರ್ ಷರೀಫ್ ಹೇಗೆ ಪ್ರತಿಕ್ರಿಯಿಸಬೇಕು? 

ದಲಿತರೆಂಬ ಒಂದೇ ಕಾರಣದಿಂದ ಮುಖ್ಯಮಂತ್ರಿ ಸ್ಥಾನದಿಂದ ವಂಚಿತರಾದ ಮಲ್ಲಿಕಾರ್ಜುನ ಖರ್ಗೆಯಂಥ ವರು ಏನನ್ನಬೇಕು?  ನಿಮಗೆ ಅನುಕೂಲಕರವಾಗಿದ್ದರೆ ಮಾತ್ರ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲ ಸರಿ ಇದೆ ಎಂಬ ಮನೋಭಾವ ನಿಮ್ಮಂಥ stature ಇರುವ ನಾಯಕರಿಗೆ ಸರಿ ಹೊಂದುತ್ತದೆಯೇ? ‘ನಿಮಗೆ ಅನುಕೂಲಕರವಾಗಿದ್ದರೆ’ ಎಂದು ಏಕೆ ಹೇಳಿದ್ದೇನೆ ಗೊತ್ತೇ?ಈ ಹಿಂದೆ ಕೂಡ ನೀವು ಬಯಸಿದ ಅಧಿಕಾರ ಸಿಗದೇ ಇದ್ದಾಗ ನೀವು ಬಂಡಾಯ ಹೂಡಿದ್ದೀರಿ. ಆಗ ಕಾಂಗ್ರೆಸ್ ಪಕ್ಷವೇ ಇನ್ನಿತರ ಪಕ್ಷಗಳಿಗಿಂತ ಬಲಿಷ್ಠವಾಗಿದ್ದರಿಂದ ಅದರೊಳಗೇ ಇದ್ದು ನಿಮ್ಮ ಗುರಿ ಸಾಧನೆಯ ಎಲ್ಲ ತಂತ್ರಗಳನ್ನು ಬಳಸಿದ್ದಿರಿ. ಆದರೆ ಈಗ ಕಾಂಗ್ರೆಸ್ ದುರ್ಬಲವಾಗಿದೆ ಎಂದು ನೀವು ಭಾವಿಸಿರುವುದರಿಂದ ಮತ್ತು ಅಲ್ಲಿದ್ದು ಏನೂ ಪ್ರಯೋಜನ ಇಲ್ಲ ಎಂದು ಈ ನಿರ್ಧಾರ ಕೈಗೊಂಡಿದ್ದೀರಿ.ಈಗ ನೀವು, ‘ನಾನು ಕೇವಲ ಒಕ್ಕಲಿಗ ಸಮುದಾಯವನ್ನು ಪ್ರತಿನಿಧಿಸದೆ ಎಲ್ಲ ಸಮುದಾಯಗಳನ್ನು ಒಗ್ಗೂಡಿಸಿ ಮುನ್ನಡೆದಿದ್ದೆ’ ಎಂದು ಹೇಳುತ್ತಿದ್ದೀರಿ. ಆದರೆ ಅತಿಸಣ್ಣ ಹಿಂದುಳಿದ ಜಾತಿಗೆ ಸೇರಿದ ವೀರಪ್ಪ ಮೊಯಿಲಿ ಮುಖ್ಯಮಂತ್ರಿಯಾದಾಗ ಅವರ ವಿರುದ್ಧ ಬಂಡೆದ್ದು ನಿಮ್ಮ ಹಾಗೆಯೇ ಮುಖ್ಯಮಂತ್ರಿ ಸ್ಥಾನದ ಕನಸು ಕಂಡಿದ್ದ ಲಿಂಗಾಯತ ನಾಯಕ ರಾಜಶೇಖರ ಮೂರ್ತಿ ಅವರ ಜತೆ ಕೈಜೋಡಿಸಿ ಭಿನ್ನಮತ ಚಟುವಟಿಕೆಗಳಿಗೆ ಚಾಲನೆ ನೀಡಿದ್ದಿರಿ.

ಜನಾರ್ದನ ಪೂಜಾರಿ ಅವರು ಕೆಪಿಸಿಸಿ ಅಧ್ಯಕ್ಷರಾದಾಗ ನಿಮ್ಮ ಅತೃಪ್ತಿ ಹೊರ ಹಾಕಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಿರಿ. ಕೆಪಿಸಿಸಿ ಕಾರ್ಯಾಲಯದಿಂದಲೇ ಕಾರ್ಯ ನಿರ್ವಹಿಸುವ ಬದಲು ಶಿವಾನಂದ ಸರ್ಕಲ್ ಬಳಿ ಪ್ರಚಾರ ಸಮಿತಿಯ ಕಾರ್ಯಾಲಯ ತೆರೆಯುವ ಮೂಲಕ ಪರ್ಯಾಯ ಕಚೇರಿ ಆರಂಭಿಸುವ ಪರಂಪರೆಗೆ ಜೀವ ನೀಡಿದಿರಿ.

ಕಾಂಗ್ರೆಸ್ ನಾಯಕತ್ವ ನಿಮ್ಮನ್ನು ಕಡೆಗಣಿಸಿದೆ ಎಂದು ಹೇಳುವ ನೀವು, ಮುಖ್ಯಮಂತ್ರಿಯಾಗಿದ್ದಾಗ ಪ್ರಮುಖ ಲಿಂಗಾಯತ ನಾಯಕರನ್ನು ಕಡೆಗಣಿಸಿದ್ದನ್ನು ಮರೆತುಬಿಟ್ಟಿದ್ದೀರಿ. ಇನ್ನೊಂದು ಪ್ರಬಲ ಜಾತಿಯ ನಾಯಕನನ್ನು ಮಂತ್ರಿ ಮಾಡಿದರೆ ಭಿನ್ನಮತ ಚಟುವಟಿಕೆಗೆ ಒಂದಲ್ಲ ಒಂದು ದಿನ ಅವಕಾಶ ಸಿಕ್ಕೀತು ಎಂಬ ಲೆಕ್ಕಾಚಾರದಲ್ಲಿ ಈ ನಿರ್ಧಾರ ಕೈಗೊಂಡಿದ್ದಿರಿ.ಅದೇನೇ ಇರಲಿ. ಒಂದಷ್ಟು ಪತ್ರಕರ್ತರಿಗೆ ಭ್ರಷ್ಟಾಚಾರದ ಹೆದ್ದಾರಿ ತೋರಿಸಿ, ‘ಜಿ ಕೆಟಗರಿ’ ನಿವೇಶನಗಳನ್ನು ನೀಡಿ  ನಿಮ್ಮ ತೊಡೆಯ ಮೇಲಿನ ಪೊಮರೇನಿಯನ್ ನಾಯಿ ಮರಿಗಳಂತೆ ಸಾಕಿಕೊಂಡಿದ್ದಿರಿ. ಇದರ ಫಲವಾಗಿಯೇ ಫಲಾನುಭವಿಗಳು ಈಗಲೂ ನಿಮ್ಮನ್ನು ಹಾಡಿ ಹೊಗಳುತ್ತಾ ಋಣ ತೀರಿಸುವ ಕಾಯಕದಲ್ಲಿ ನಿರತರಾಗಿದ್ದಾರೆ.ಈಗಿನ ವಿಷಯಕ್ಕೆ ಬರೋಣ. ವಯೋವೃದ್ಧರಾಗಿರುವ ನೀವು ಈಗಲೂ ಅಧಿಕಾರದ ಹಪಾಹಪಿಯಿಂದ ನರಳುವ ಅಗತ್ಯವಾದರೂ  ಏನಿದೆ? ಯಾವುದೇ ಕ್ಷೇತ್ರವಿರಲಿ. ಹೊಸ ವ್ಯಕ್ತಿಗಳು, ಹೊಸ ನಾಯಕತ್ವ, ಹೊಸ ಚಿಂತನೆ ಚಲನಶೀಲತೆಯ ಲಕ್ಷಣ. ಒಂದು ಕಾಲದ ಚಿಂತನೆ, ದಿನಗಳು ಉರುಳಿದಂತೆ ಹಳಸಲಾಗುತ್ತದೆ. ಒಂದು ಕಾಲದ ನಾಯಕ, ವರ್ಷಗಳು ಕಳೆದಂತೆ ಅಪ್ರಸ್ತುತನಾಗುತ್ತಾನೆ.

ಹಾಗೊಂದು ವೇಳೆ ಯಾವತ್ತೂ ಪ್ರಸ್ತುತರಾಗಿರಬೇಕೆಂದರೆ ಏಸುಕ್ರಿಸ್ತ, ಮೊಹಮ್ಮದ್‌ ಪೈಗಂಬರ್, ಬುದ್ಧ, ಬಸವಣ್ಣ, ರಾಮಕೃಷ್ಣ ಪರಮಹಂಸ, ಗಾಂಧಿ, ಅಂಬೇಡ್ಕರ್,  ಮಂಡೇಲಾ ಆಗಿರಬೇಕು. ಈ ಮಹಾಮಹಿಮರೆಲ್ಲ ಒಂದಲ್ಲ ಒಂದು ಕಾಲಘಟ್ಟದಲ್ಲಿ ಜಗದ ಕಣ್ಣು ತೆರೆಸಿದವರು. ಆದರೆ ರಾಜಕಾರಣಿಗಳು ಹಾಗಲ್ಲವಲ್ಲಾ? ನಿಮ್ಮ ಹಾಗೆಯೇ ಅಧಿಕಾರದ ಹಪಾಹಪಿ. ಜೆಡಿಎಸ್ ಸ್ವಂತ ಆಸ್ತಿಯಂತೆ ಇರುವುದರಿಂದ ದೇವೇಗೌಡರು ಆ ಪಕ್ಷಕ್ಕೆ ಪ್ರಸ್ತುತರಾಗಿದ್ದಾರೆ.

ಜ್ಯೋತಿಬಸು ಸುಮಾರು 25 ವರ್ಷ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿದ್ದರು ಎಂದರೆ ಅಷ್ಟೂ ವರ್ಷ ಅವರು ಅಧಿಕಾರದಲ್ಲಿ ಉಳಿಯುವ ಜನಪರ ಕಾರ್ಯಕ್ರಮಗಳನ್ನು ರೂಪಿಸಿದ್ದರು ಎಂದರ್ಥ. ತ್ರಿಪುರಾದಲ್ಲಿ ಮಾಣಿಕ್ ಸರ್ಕಾರ್ 1998ರಿಂದಲೂ ಮುಖ್ಯಮಂತ್ರಿಯಾಗಿದ್ದಾರೆ ಎಂದರೆ ಅವರು ಸರಳ, ಪ್ರಾಮಾಣಿಕ, ಜನಪರ ನಾಯಕ ಎಂದೇ ಅರ್ಥ.

ಅವರು ಪ್ರಸ್ತುತತೆ ಉಳಿಸಿಕೊಳ್ಳುವುದಕ್ಕೆ ಅವರ ವ್ಯಕ್ತಿತ್ವವೇ ಕಾರಣ.  ಆದರೆ ‘ನಂಬರ್ ಒನ್ ಮುಖ್ಯಮಂತ್ರಿ’ ಎಂದು ನಿಯತಕಾಲಿಕವೊಂದರಿಂದ ಕರೆಸಿಕೊಂಡಿದ್ದ ನಿಮಗೆ 2004 ರಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನೇ ಅಧಿಕಾರಕ್ಕೆ ತರಲಾಗಿರಲಿಲ್ಲ. ಅಷ್ಟೇ ಅಲ್ಲ. ಸ್ವಂತ ಕ್ಷೇತ್ರ ಮದ್ದೂರಿನಲ್ಲೇ ಸೋಲಿನ ವಾಸನೆಯಿಂದ ಬೆಂಗಳೂರಿನ ಚಿಕ್ಕಪೇಟೆಗೆ ಕ್ಷೇತ್ರಾಂತರ ಮಾಡಿ ಮಹತ್ಸಾಧನೆ ಮೆರೆದ ಮುಖ್ಯಮಂತ್ರಿ ನೀವೊಬ್ಬರೇ ಅನ್ನಿಸುತ್ತದೆ.

ಈಗ ನೀವು ರಾಷ್ಟ್ರಪತಿ ಹುದ್ದೆ ಮೇಲೆ ಕಣ್ಣಿಟ್ಟು ರಾಜೀನಾಮೆ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳುತ್ತಿದ್ದೀರಿ. ಆದರೆ ಕಾಕತಾಳೀಯವೋ ಏನೋ ಎಂಬಂತೆ ಇನ್ನು ನಾಲ್ಕೈದು ತಿಂಗಳಲ್ಲಿ ಪ್ರಣವ್ ಮುಖರ್ಜಿ ಅವರ ಅಧಿಕಾರಾವಧಿ ಪೂರ್ಣಗೊಳ್ಳಲಿದೆ. ಅಡ್ವಾಣಿ ಅವರನ್ನು ರಾಷ್ಟ್ರಪತಿ ಆಗಿಸುವುದಕ್ಕೆ ನರೇಂದ್ರ ಮೋದಿ ಅವಕಾಶ ನೀಡುತ್ತಾರೆಯೇ?

ನೀವು ಮುಖ್ಯಮಂತ್ರಿಯಾಗಿದ್ದಾಗ ಇತರ ಕಾಂಗ್ರೆಸ್ ನಾಯಕರ ಶಿಫಾರಸುಗಳಿಗಿಂತ ಬಿಜೆಪಿ ನಾಯಕ ಅನಂತಕುಮಾರ್ ಮಾತು ಹೆಚ್ಚು ನಡೆಯುತ್ತಿತ್ತೆಂಬ ಸುದ್ದಿ ಪ್ರಚಲಿತದಲ್ಲಿತ್ತು. ಅನಂತಕುಮಾರ್ ಜತೆಗಿನ ನಿಮ್ಮ ಸ್ನೇಹ ನಿಮ್ಮನ್ನು ರಾಷ್ಟ್ರಪತಿ ಹುದ್ದೆವರೆಗೆ ತರಬಹುದೆಂದು ನಾನು ಭಾವಿಸಿಲ್ಲ. ಆದರೆ ಬಿಜೆಪಿ ನಾಯಕರ ಜತೆಗಿನ ಸ್ನೇಹ ನಿಮಗೇನೂ ಹೊಸತಲ್ಲ ಎಂದು ಹೇಳುತ್ತಿದ್ದೇನಷ್ಟೇ.ಆತ್ಮಾವಲೋಕನ, ಸಮಾಲೋಚನೆ ನಂತರ ಮುಂದಿನ ನಿರ್ಧಾರ ಪ್ರಕಟಿಸುವುದಾಗಿಯೂ, ರಾಜ್ಯ ಸರ್ಕಾರದ ಕಾರ್ಯವೈಖರಿ ಬಗ್ಗೆ ಮುಂದೆ ಮಾತನಾಡುವುದಾಗಿಯೂ ತಿಳಿಸಿದ್ದೀರಿ. ಅಂದರೆ ಮುಂಬರುವ ದಿನಗಳಲ್ಲಿ ನಿಮ್ಮಿಂದ ಪಕ್ಷಾಂತರ? ಕಾಂಗ್ರೆಸ್ ಪಕ್ಷದ ವೃದ್ಧ ನಾಯಕರನ್ನು ಸೇರ್ಪಡೆಗೊಳಿಸಿಕೊಳ್ಳುವ ಕಾರ್ಯಕ್ರಮಕ್ಕೆ ಬಿಜೆಪಿ ಈಗ ಎನ್.ಡಿ.ತಿವಾರಿ ಮೂಲಕ ಚಾಲನೆ ನೀಡಿದೆ. 

ವಿಚಿತ್ರ ಎಂದರೆ ತಮ್ಮ ಪಕ್ಷದಲ್ಲೇ ಇರುವ ಎಲ್.ಕೆ. ಅಡ್ವಾಣಿ ಅವರನ್ನು ಕಡೆಗಣಿಸಿದೆ. ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ಪಡೆಯಲು ಕಾರಣವಾದ ಪಕ್ಷವನ್ನು ತಮಗೆ ಬೇಕಾದ ಒಂದು ಸ್ಥಾನ ಸಿಗಲಿಲ್ಲ ಎಂಬ  ಕಾರಣಕ್ಕಾಗಿ  ಬಿಡುವುದು ಅತ್ಯಂತ ಸ್ವಾರ್ಥ ಮತ್ತು ಹೀನಾಯ ರಾಜಕಾರಣದ ಉದಾಹರಣೆ.  ಅಧಿಕಾರ ಸದಾ ತಮ್ಮ ಬಳಿಯೇ ಇರಬೇಕೆಂಬ ಮನಸ್ಥಿತಿ, ಆರೋಗ್ಯಕರ ಮತ್ತು ಚಲನಶೀಲ ರಾಜಕಾರಣದ ಲಕ್ಷಣವಲ್ಲ.

ಯಾವುದೇ ಪಕ್ಷವಾದರೂ  ಅಲ್ಲಿ ವಿವಿಧ ಜಾತಿ, ಧರ್ಮ, ವರ್ಗಗಳಿಗೆ ಸೇರಿದ ವಿವಿಧ ಹಂತಗಳ ಕಾರ್ಯಕರ್ತರು, ನಾಯಕರಿರುತ್ತಾರೆ. ಎಲ್ಲರಿಗೂ ಇದರ ಹಂಚಿಕೆಯಾಗಬೇಕು. ತಮಗೇ ಎಲ್ಲ ಕಾಲದಲ್ಲಿ ಎಲ್ಲ ರೀತಿಯ ಅಧಿಕಾರ ಇರಲೇಬೇಕೆಂಬ ದುರಾಸೆ ಖಂಡಿತ ಒಳ್ಳೆಯದಲ್ಲ. ಅದೂ ಈ ವಯಸ್ಸಿನಲ್ಲಿ?ಮೌನದ ಮಹತ್ವ ಅರಿತು ಅದರಲ್ಲಿನ ಸುಖವನ್ನು ಹುಡುಕಲು ಈ ಸಂದರ್ಭ ಬಳಸಿಕೊಳ್ಳಿ. ನಿಮಗೆ ಒಳ್ಳೆಯದಾಗಲಿ. ನಿಮ್ಮಂಥವರ ಹರಕೆ,  ಹಾರೈಕೆ ಹೊಸ ತಲೆಮಾರಿನ ಮೇಲಿರಲಿ. ನಿಮ್ಮಂಥ ಹಿರಿಯ ನಾಯಕನಿಗೆ ಬುದ್ಧಿವಾದ ಹೇಳುವ ಉದ್ಧಟತನ ನನ್ನದಲ್ಲ. ನೆನಪಾದ ಸಂಗತಿಗಳನ್ನು ದಾಖಲಿಸಿದ್ದೇನೆ. ವಂದನೆಗಳು.⁠⁠

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.