7

ಸುಧಾರಿತ, ಸುಂದರ ನೋಟ್‌ 4

ಯು.ಬಿ. ಪವನಜ
Published:
Updated:
ಸುಧಾರಿತ, ಸುಂದರ ನೋಟ್‌ 4

ನೀಡುವ ಹಣಕ್ಕೆ ಉತ್ತಮ ಫೋನ್‌ಗಳನ್ನು ನೀಡುತ್ತ ಬಂದಿರುವ ಶಿಯೋಮಿ ಕಂಪೆನಿಯ ಹಲವು ಉತ್ಪನ್ನಗಳ ಬಗ್ಗೆ ಈ ಅಂಕಣದಲ್ಲಿ ಹಲವು ಸಲ ಬರೆಯಲಾಗಿದೆ. ಶಿಯೋಮಿ ಕಂಪೆನಿಯವರು ಜಾಹೀರಾತು, ಮಧ್ಯವರ್ತಿಗಳಿಲ್ಲದೆ ನೇರವಾಗಿ ಗ್ರಾಹಕರಿಗೆ ತಮ್ಮ ಉತ್ಪನ್ನಗಳನ್ನು ನೀಡುತ್ತಿರುವುದರಿಂದ ಅವರಿಗೆ ಕಡಿಮೆ ಹಣಕ್ಕೆ ಉತ್ತಮ ಉತ್ಪನ್ನಗಳನ್ನು ನೀಡಲು ಸಾಧ್ಯವಾಗಿದೆ. ಈ ಹಿಂದೆ ಇದೇ ಅಂಕಣದಲ್ಲಿ ಅವರ ರೆಡ್‌ಮಿ ನೋಟ್ 3, 2, ಎಂಐ4, ಎಂಐ4i, ಫೋನ್‌ಗಳಲ್ಲದೆ ಅವರ ಹೆಡ್‌ಫೋನ್ ವಿಮರ್ಶೆಯನ್ನೂ ನೀಡಲಾಗಿತ್ತು. ಇತ್ತೀಚೆಗೆ ಅವರು ತಮ್ಮ ಉತ್ಪನ್ನಗಳನ್ನು ಭಾರತದಲ್ಲೂ ತಯಾರಿ ಮಾಡುತ್ತಿ ದ್ದಾರೆ. ಈ ಸಲ ಅವರು ಭಾರತದಲ್ಲೇ ತಯಾರಿಸಿದ ಒಂದು ಫೋನಿನ ವಿಮರ್ಶೆ. ಅದುವೇ ಶಿಯೋಮಿ ರೆಡ್‌ಮಿ ನೋಟ್ 4 (Xiaomi Redmi Note 4).

ಗುಣವೈಶಿಷ್ಟ್ಯಗಳು

2 ಗಿಗಾಹರ್ಟ್ಸ್ ವೇಗದ ಎಂಟು ಹೃದಯಗಳ ಕ್ವಾಲ್ಕಾಂ ಸ್ನಾಪ್‌ಡ್ರಾಗನ್ ಪ್ರೊಸೆಸರ್ (625), ಗ್ರಾಫಿಕ್ಸ್‌ಗೆಂದೇ ಪ್ರತ್ಯೇಕ ಆಡ್ರೆನೋ ಪ್ರೊಸೆಸರ್, 2+32 ಗಿಗಾಬೈಟ್ ಮೆಮೊರಿ (3+32 ಮತ್ತು 4+64 ಗಿಗಾಬೈಟ್ ಮಾದರಿಗಳೂ ಇವೆ), 2ಜಿ/3ಜಿ/4ಜಿ (ಎರಡು) ಮೈಕ್ರೊ ಮತ್ತು ನ್ಯಾನೋ ಸಿಮ್, ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಹಾಕುವ ಸೌಲಭ್ಯ ಇದೆ, ಯುಎಸ್‌ಬಿ ಆನ್-ದ-ಗೋ (USB OTG) ಇದೆ, 5.5 ಇಂಚು ಗಾತ್ರದ 1080 x 1920 ಪಿಕ್ಸೆಲ್ ರೆಸೊಲೂಶನ್‌ನ ಐಪಿಎಸ್ ಪರದೆ, 16 ಮೆಗಾಪಿಕ್ಸೆಲ್‌ನ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್‌ನ ಇನ್ನೊಂದು ಕ್ಯಾಮೆರಾ, ಕ್ಯಾಮೆರಾಕ್ಕೆ ಎಲ್ಇಡಿ ಫ್ಲಾಶ್, ಪೂರ್ತಿ ಹೈಡೆಫಿನಿಶನ್ (1080p) ವಿಡಿಯೊ ಚಿತ್ರೀಕರಣ, ತೆಗೆಯಲಸಾಧ್ಯವಾದ 4100mAh ಶಕ್ತಿಯ ಬ್ಯಾಟರಿ, 151 x 76 x 8.45 ಮಿ.ಮೀ ಗಾತ್ರ, 165 ಗ್ರಾಂ ತೂಕ, ವೈಫೈ, ಬ್ಲೂಟೂತ್, ಜಿಪಿಎಸ್, ಎಫ್ಎಂ ರೇಡಿಯೊ, ಅವಕೆಂಪು (infrared) ದೂರನಿಯಂತ್ರಕ, ಬೆರಳಚ್ಚು ಸ್ಕ್ಯಾನರ್, ಆಂಡ್ರಾಯ್ಡ್‌ 6.0.1+ ಶಿಯೋಮಿಯವರದೇ ಆದ ಎಂಐಯುಐ 8 (MIUI 8) ಇತ್ಯಾದಿ. ಬೆಲೆ ₹9,999 (2+32), ₹10,999 (3+32), ₹12,999 (4+64). ಫ್ಲಿಪ್‌ಕಾರ್ಟ್‌ ಮೂಲಕ ಮಾತ್ರ ಲಭ್ಯ.

ಎಲ್ಲ ಶಿಯೋಮಿ ಫೋನ್‌ಗಳಂತೆ ಈ ಫೋನಿನ ರಚನೆ ಮತ್ತು ವಿನ್ಯಾಸ ಕೂಡ ಚೆನ್ನಾಗಿದೆ. ಇದನ್ನು ಬಹುಮಟ್ಟಿಗೆ ರೆಡ್‌ಮಿ ನೋಟ್ 3ಯ ಉತ್ತರಾಧಿಕಾರಿ ಎನ್ನಬಹುದು. ಗಾತ್ರ, ರಚನೆ ಮತ್ತುವಿನ್ಯಾಸಗಳು ನೋಟ್ 3ರದ್ದೇ ಇವೆ.

ಹಿಂದುಗಡೆ ಕವಚ ತೆಗೆಯಲು ಸಾಧ್ಯವಿಲ್ಲ. ಈ ಕವಚ  ತುಂಬ ನಯವೂ ಅಲ್ಲದ, ಅತಿ ದೊರಗೂ ಅಲ್ಲದ ವಿನ್ಯಾಸವಾಗಿದೆ. ಬದಿಗಳು ವಕ್ರವಾಗಿವೆ. ಆದರೂ ಕೈಯಿಂದ ಜಾರಿ ಬೀಳಬಹುದೆಂಬ ಭಯವಿಲ್ಲ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಗಡೆ 3.5 ಮಿ.ಮೀ ಇಯರ್‌ಫೋನ್ ಕಿಂಡಿ ಮತ್ತು ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿಗಳಿವೆ. ಎಡಭಾಗದಲ್ಲಿ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಲು ಚಿಕ್ಕ ಟ್ರೇ ಇದೆ. ಇದರಲ್ಲಿ ಒಂದು ಮೈಕ್ರೊ ಸಿಮ್ ಮತ್ತು ಇನ್ನೊಂದು ನ್ಯಾನೋ ಸಿಮ್ ಅಥವಾ ಮೆಮೊರಿ ಕಾರ್ಡ್ ಹಾಕಬಹುದು.

ಮೇಲ್ಗಡೆ ಅವಕೆಂಪು ಕಿರಣದ ಕಿಂಡಿ ಇದೆ. ಇದನ್ನು ಬಳಸಿ ನಿಮ್ಮ ಮನೆಯ ಟಿ.ವಿ., ಆಂಪ್ಲಿಫೈಯರ್, ಇತ್ಯಾದಿ ಹಲವು ಉಪಕರಣಗಳನ್ನು ನಿಯಂತ್ರಿಸಬಹುದು. ಹಿಂಬದಿಯ ಕ್ಯಾಮೆರಾದ ಕೆಳಗೆ ಬೆರಳಚ್ಚು ಸ್ಕ್ಯಾನರ್ ಇದೆ. ಎಂಟು ಹೃದಯಗಳ ಪ್ರೊಸೆಸರ್ ಇರುವುದರಿಂದ ಇದರ ಕೆಲಸದ ವೇಗ ನಿಜಕ್ಕೂ ಚೆನ್ನಾಗಿದೆ. ಎಲ್ಲ ನಮೂನೆಯ ಆಟಗಳನ್ನು ತೃಪ್ತಿದಾಯಕವಾಗಿ ಆಡಬಹುದು. ಅತಿ ಶಕ್ತಿಯನ್ನು ಬೇಡುವ ಮೂರು ಆಯಾಮದ ಮೇಲ್ದರ್ಜೆಯ ಆಟಗಳನ್ನು ಕೂಡ ಈ ಫೋನಿನಲ್ಲಿ ಆಡಬಹುದು. ಹೈಡೆಫಿನಿಶನ್ ವಿಡಿಯೊ ವೀಕ್ಷಣೆ ಮಾಡಬಹುದು.

ಅಲ್ಟ್ರಾಹೈಡೆಫಿನಿಶನ್ (4k) ವಿಡಿಯೊ ವೀಕ್ಷಣೆ ಕೂಡ ಮಾಡಬಹುದು. ನನಗೆ ವಿಮರ್ಶೆಗೆ ಬಂದಿರುವುದು 4+64 ಗಿಗಾಬೈಟ್ ಮಾದರಿಯದು. ಈ ಅನುಭವಗಳು ಆ ಫೋನ್ ಬಳಸಿ ಆಗಿರುವಂಥದ್ದು. ಕಡಿಮೆಮೆಮೊರಿಯ  ಫೋನಿನ ಅನುಭವ ಇದಕ್ಕಿಂತ ತುಂಬ ಕೆಟ್ಟದಾಗಿಯೇನೂ ಇರಬೇಕಾಗಿಲ್ಲ.

ಅತ್ಯಧಿಕ ಶಕ್ತಿಯ ಆಟಗಳನ್ನು ಆಡುವಾಗ ಮತ್ತು ಹಲವು ಕೆಲಸಗಳನ್ನು ಒಟ್ಟಿಗೇ ಮಾಡುವಾಗ ಮಾತ್ರ ಕಡಿಮೆ ಮೆಮೊರಿಯ ತೊಂದರೆ ವೇದ್ಯವಾಗುವುದು.

13 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಪ್ರಾಥಮಿಕ ಮತ್ತು 5 ಮೆಗಾಪಿಕ್ಸೆಲ್‌ನ ಎದುರುಗಡೆಯ ಕ್ಯಾಮೆರಾ ಎರಡೂ ಚೆನ್ನಾಗಿವೆ. f/2 ಲೆನ್ಸ್ ಇರುವುದರಿಂದ ಸುಮಾರಾಗಿ ಉತ್ತಮ ಎನ್ನಬಹುದಾದ ಫೋಟೊ  ಮೂಡಿಬರುತ್ತದೆ. ನೋಟ್3ರಲ್ಲಿ ಇದ್ದ ಕ್ಯಾಮೆರಾಕ್ಕಿಂತ ಇದರ ಕ್ಯಾಮೆರಾ ಚೆನ್ನಾಗಿದೆ. ನಿಖರವಾಗಿ ಫೋಕಸ್ ಮಾಡುತ್ತದೆ. ಕಡಿಮೆ ಬೆಳಕಿನಲ್ಲೂ ಅತ್ಯುತ್ತಮ ಅಲ್ಲದಿದ್ದರೂ ತೃಪ್ತಿದಾಯಕವಾದ ಫೋಟೊ ತೆಗೆಯುತ್ತದೆ.

ವಿಡಿಯೊ ಚಿತ್ರೀಕರಣವೂ ಚೆನ್ನಾಗಿದೆ. ಇದರ ಆಡಿಯೊ ಇಂಜಿನ್ ತೃಪ್ತಿದಾಯಕವಾಗಿದೆ. ಇಯರ್‌ಫೋನ್ ನೀಡಿಲ್ಲ. ಅಂದರೆ ವಿಡಿಯೊ ವೀಕ್ಷಣೆ, ಆಟಗಳ ಆಡುವಿಕೆ, ಇವಕ್ಕೆಲ್ಲ ಇದು ತೃಪ್ತಿದಾಯಕ ಎನ್ನಬಹುದು.

ಮೈಕ್ರೊಎಸ್‌ಡಿ ಮೆಮೊರಿ ಕಾರ್ಡ್ ಹಾಕಿ ಮೆಮೊರಿ ಜಾಸ್ತಿ ಮಾಡಿಕೊಳ್ಳಬಹುದು.  ಮಾತ್ರವಲ್ಲ ಯುಎಸ್‌ಬಿ ಆನ್‌-ದ-ಗೋ ಕೂಡ ಇರುವುದರಿಂದ ಹೊರಗಡೆಯಿಂದ ಯುಎಸ್‌ಬಿ ಡ್ರೈವ್ ಜೋಡಿಸಬಹುದು.

ಇತ್ತೀಚೆಗೆ ದೊರೆಯುತ್ತಿರುವ ಬಹುತೇಕ ಫೋನ್‌ಗಳಂತೆ ಇದರಲ್ಲೂ ಇದರಲ್ಲಿ 4ಜಿ ಸೌಲಭ್ಯ ಇದೆ.  ಜೊತೆಗೆ ವೋಲ್ಟ್ (VoLTE) ಕೂಡ ಇರುವುದರಿಂದ ಇದರಲ್ಲಿ ರಿಲಯನ್ಸ್ ಜಿಯೋ ಸಿಮ್ ಹಾಕಿ ಬಳಸಬಹುದು. ಇದರ ಬ್ಯಾಟರಿ 4100mAh ಶಕ್ತಿಯದು ಎಂದರೆ ತುಂಬ ಶಕ್ತಿಶಾಲಿಯದು ಎಂದು ತೀರ್ಮಾನಿಸಬಹುದು. ಕನ್ನಡ ಪಠ್ಯದ ತೋರುವಿಕೆ ಸರಿಯಾಗಿದೆ. ಜೊತೆಗೆ ಪೂರ್ತಿ ಕನ್ನಡದ ಯೂಸರ್ ಇಂಟರ್‌ಫೇಸ್ ಇದೆ. ಒಟ್ಟಿನಲ್ಲಿ ಹೇಳುವುದಾದರೆ ನೀಡುವ ಬೆಲೆಗೆ ಇದು ನಿಜಕ್ಕೂ ಅತ್ಯುತ್ತಮ ಫೋನ್ ಎಂದು ಖಂಡಿತವಾಗಿ ಹೇಳಬಹುದು. ಅಂದ ಹಾಗೆ ಇದು ಭಾರತದಲ್ಲೇ ತಯಾರಾದ ಫೋನ್.

***

ವಾರದ ಆ್ಯಪ್

ನೀವೇ ದುರಸ್ತಿ ಮಾಡಿ

ನಿಮ್ಮ ಮನೆಯ ಯಾವುದೋ ಒಂದು ಸಾಧನ ಹಾಳಾಗಿದೆ. ಉದಾಹರಣೆಗೆ, ಫೋನಿನ ಪರದೆ ಒಡೆದಿದೆ. ಆಗ ಏನು ಮಾಡಬೇಕು? ಸಾಮಾನ್ಯವಾಗಿ ಕಂಪೆನಿಯ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಅದನ್ನು ದುರಸ್ತಿ ಮಾಡಿಸಬೇಕು. ಕೆಲವೊಮ್ಮೆ ಈ ಸೇವಾ ಕೇಂದ್ರಗಳು ಎಲ್ಲೋ ಇಡಿಯ ರಾಜ್ಯಕ್ಕೆ ಒಂದೇ ಇರುತ್ತವೆ. ಇನ್ನೂ ಕೆಲವು ಸಲ ಅಲ್ಲಿ ಬೇಕಾದ ಅಂಗ ಕೂಡಲೇ ಲಭ್ಯವಿರುವುದಿಲ್ಲ.

ಎಷ್ಟೋ ದಿನ, ವಾರ, ತಿಂಗಳುಗಳ ಕಾಲ ಕಾಯಬೇಕಾಗುತ್ತದೆ. ನಾನೇ ದುರಸ್ತಿ ಮಾಡಿಕೊಳ್ಳುತ್ತೇನೆ ಎಂಬುವರಿಗಾಗಿ www.ifixit.com ಎಂಬ ಒಂದು ಜಾಲತಾಣವಿದೆ. ಈ ಜಾಲತಾಣದಲ್ಲಿ ಹಲವಾರು ಉಪಕರಣಗಳನ್ನು ನಾವೇ ದುರಸ್ತಿ ಮಾಡಿಕೊಳ್ಳುವುದು ಹೇಗೆ ಎಂದು ವಿವರಿಸಲಾಗಿದೆ. ಇದೇ ಜಾಲತಾಣಕ್ಕೆ ಒಂದು ಕಿರುತಂತ್ರಾಂಶ (ಆ್ಯಪ್) ಕೂಡ ಇದೆ. ಅದು ಬೇಕಿದ್ದರೆ ನೀವು ಗೂಗಲ್‌ ಪ್ಲೇ ಸ್ಟೋರಿನಲ್ಲಿ  iFixit: Repair Manual ಎಂದು ಹುಡುಕಬೇಕು ಅಥವಾ bit.ly/gadgetloka264 ಜಾಲತಾಣಕ್ಕೆ ಭೇಟಿ ನೀಡಬೇಕು. ಇದರಲ್ಲಿ ಹಲವು ಉತ್ತಮ ವಿಡಿಯೊಗಳಿವೆ. ಅವುಗಳನ್ನು ವೀಕ್ಷಿಸಲು ಅಂತರಜಾಲ ಸಂಪರ್ಕ ಅಗತ್ಯ.ಗ್ಯಾಜೆಟ್‌ ಸುದ್ದಿ

ದುರಸ್ತಿ ಮಾಡಲು ಅಧಿಕಾರ

ನಿಮಗೆ ಗೊತ್ತೆ? ಐಫೋನ್ ಮತ್ತು ಇತರೆ ಆಪಲ್ ಸಾಧನಗಳನ್ನು ನೀವೇ ದುರಸ್ತಿ ಮಾಡುವುದು ಅವರ ಒಪ್ಪಂದದ ಉಲ್ಲಂಘನೆ ಆಗುತ್ತದೆ ಎಂದು? ಏನಿದು ಅಸಂಬದ್ಧ ಎನ್ನುತ್ತೀರಾ? ನಮ್ಮ ಸಾಧನವನ್ನು ನಾವು ದುರಸ್ತಿ ಮಾಡಿದರೆ ಏನೀಗ ಎನ್ನುತ್ತೀರಾ? ಈ ರೀತಿ ಮಾಡದಂತೆ ಅವರ ಒಪ್ಪಂದದಲ್ಲಿರುತ್ತದೆ ಮತ್ತು ಇನ್ನೂ ಮುಖ್ಯವಾಗಿ ಬಹುತೇಕ ಆಧುನಿಕ ಉತ್ಪನ್ನಗಳನ್ನು ಅದನ್ನು ತಯಾರಿಸಿದ ಕಂಪೆನಿಯವರು ಮಾತ್ರವೇ ದುರಸ್ತಿ ಮಾಡಲು ಸಾಧ್ಯವಿರುವಂತೆ ರಚಿಸಿರುತ್ತಾರೆ.

ಆಪಲ್ ಕಂಪೆನಿಯ ಉತ್ಪನ್ನಗಳನ್ನು ಅವರ ಸೇವಾ ಕೇಂದ್ರದಲ್ಲಿ ದುರಸ್ತಿ ಮಾಡಿಸಿದರೆ ಹೊಸ ಉತ್ಪನ್ನದ ಅಂದಾಜು 50% ಖರ್ಚು ಬರುತ್ತದೆ. ನಾವೇ ದುರಸ್ತಿ ಮಾಡಿಕೊಂಡರೆ 10% ಖರ್ಚು ಆಗಬಹುದಷ್ಟೆ. ಗ್ರಾಹಕರನ್ನು ಇಂತಹ ತೊಂದರೆಯಿಂದ ಕಾಪಾಡಬೇಕು ಎಂದು ಅಮೆರಿಕ ಐದು ರಾಜ್ಯಗಳಲ್ಲಿ ಹೊಸ ಕಾನೂನು ಮಾಡುತ್ತಿದೆ. ಈ ಕಾನೂನಿನ ಪ್ರಕಾರ ನಿಮ್ಮ ಸಾಧನವನ್ನು ನೀವೇ ದುರಸ್ತಿ ಮಾಡಿಕೊಳ್ಳುವುದು ಯಾವುದೇ ಒಪ್ಪಂದದ ಉಲ್ಲಂಘನೆ ಆಗುವುದಿಲ್ಲ.

ಗ್ಯಾಜೆಟ್‌ ಸಲಹೆ

ಕೃಷ್ಣಮೂರ್ತಿಯವರ ಪ್ರಶ್ನೆ: ಸ್ಮಾರ್ಟ್‌ಟಿ.ವಿ ಮತ್ತು ಸ್ಮಾರ್ಟ್‌ಫೋನ್‌ಗಳನ್ನು ಬ್ಲೂಟೂತ್ ಮೂಲಕ ಸಂಪರ್ಕಿಸಬಹುದೇ?

ಉ: ಸ್ಮಾರ್ಟ್‌ಟಿ.ವಿ.ಗಳಲ್ಲಿ ಸಾಮಾನ್ಯವಾಗಿ ಬ್ಲೂಟೂತ್ ಸೌಲಭ್ಯ ಇರುವುದಿಲ್ಲ. ಬ್ಲೂಟೂತ್ ಡಾಂಗಲ್ ಕೊಂಡುಕೊಂಡು ಯುಎಸ್‌ಬಿ ಕಿಂಡಿ ಮೂಲಕ ಜೋಡಿಸಬಹುದು. ಆದರೆ ಅದು ನಿಮ್ಮ ಟಿ.ವಿ. ಜೊತೆ ಕೆಲಸ ಮಾಡುತ್ತದೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಬೇಕು. ನಂತರ ಸ್ಮಾರ್ಟ್‌ಫೋನ್‌ ಮೂಲಕ ಟಿ.ವಿ.ಯ ನಿಯಂತ್ರಣ ಮಾಡಬಹುದು. ಆದರೆ ಸ್ಮಾರ್ಟ್‌ಫೋನಿಗೆ ಟಿ.ವಿ.ಯನ್ನು ಪರದೆಯನ್ನಾಗಿಸಬೇಕಾದರೆ ವೈ ಫೈ ಸೂಕ್ತ. ಜೊತೆಗೆ ಫೋನಿನಲ್ಲಿ ಡಿಎಲ್‌ಎನ್‌ಎ (Digital Living Network Alliance  - DLNA) ಸೌಲಭ್ಯ ಬೇಕು.

ಗ್ಯಾಜೆಟ್‌ ತರ್ಲೆ

ದುಬಾರಿ ಟೂತ್‌ಬ್ರಶ್


ಒಂದು ಟೂತ್‌ಬ್ರಶ್‌ನ ಬೆಲೆ ಅಬ್ಬಬ್ಬಾ ಎದರೆ ಎಷ್ಟಿರಬಹುದು? ಕೇವಲ ₹13,000 ಎಂದರೆ ನಂಬುತ್ತೀರಾ? ಅದರಲ್ಲಿ ಅಂಥದ್ದೇನಿದೆ?

ಅದು ಸ್ಮಾರ್ಟ್‌ಟೂತ್‌ಬ್ರಶ್. ನಿಮ್ಮ ಹಲ್ಲುಗಳ ಆಕಾರ ವಿಕಾರಕ್ಕೆ ಸರಿಯಾಗಿ ಅದು ಹೊಂದಿಕೊಳ್ಳುತ್ತದೆ. ಒತ್ತಡ ಹೆಚ್ಚು ಕಡಿಮೆ ಮಾಡಿಕೊಳ್ಳುತ್ತದೆ. ಅದನ್ನು ಬ್ಲೂಟೂತ್ ಮೂಲಕ ಸ್ಮಾರ್ಟ್‌ಫೋನಿಗೆ ಸಂಪರ್ಕಿಸಿ ನೀವು ಎಷ್ಟು ತಪ್ಪು ತಪ್ಪಾಗಿ ಹಲ್ಲುಜ್ಜಿದ್ದೀರಿ ಎಂಬುದನ್ನು ವಿಡಿಯೊ ಮೂಲಕ ತೋರಿಸುತ್ತದೆ!

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry