ಕೃಷಿಗೆ ₹10 ಲಕ್ಷ ಕೋಟಿ ಸಾಲ

7

ಕೃಷಿಗೆ ₹10 ಲಕ್ಷ ಕೋಟಿ ಸಾಲ

Published:
Updated:
ಕೃಷಿಗೆ ₹10 ಲಕ್ಷ ಕೋಟಿ ಸಾಲ

ನವದೆಹಲಿ: ಮುಂಬರುವ ಆರ್ಥಿಕ ವರ್ಷದಲ್ಲಿ ಕೃಷಿ ಕ್ಷೇತ್ರದಲ್ಲಿ ಒಟ್ಟು ₹10 ಲಕ್ಷ ಕೋಟಿ ಸಾಲ ವಿತರಿಸುವ ಗುರಿಯನ್ನು ಕೇಂದ್ರ ಸರ್ಕಾರ ನಿಗದಿ ಮಾಡಿದೆ. ಈ ವರ್ಷ ಕೃಷಿ ಕ್ಷೇತ್ರದ ಬೆಳವಣಿಗೆ ದರ ಶೇಕಡ 4.1ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.

‘ಕೃಷಿ ಸಾಲಕ್ಕೆ ಇಷ್ಟು ದೊಡ್ಡ ಮೊತ್ತ ನಿಗದಿ ಮಾಡಿರುವುದು ಒಂದು ದಾಖಲೆ’ ಎಂದು ಸಚಿವ ಅರುಣ್ ಜೇಟ್ಲಿ ಹೇಳಿದರು.

ಇದುವರೆಗೆ ಸರಿಯಾಗಿ ಸಾಲ ಸಿಗದ ಕ್ಷೇತ್ರಗಳಿಗೆ, ಈಶಾನ್ಯ ರಾಜ್ಯಗಳ ಹಾಗೂ ಜಮ್ಮು ಮತ್ತು ಕಾಶ್ಮೀರದ ರೈತರಿಗೆ ಕೃಷಿ ಸಾಲ ಸರಿಯಾಗಿ ಸಿಗುವಂತೆ ಗಮನ ಹರಿಸಲಾಗುವುದು ಎಂದು ಬಜೆಟ್‌ನಲ್ಲಿ ಹೇಳಲಾಗಿದೆ.

ಕೃಷಿ ವಿಮೆಗೆ ಆದ್ಯತೆ: ರೈತರಿಗೆ ನೆರವಾಗುವ ಉದ್ದೇಶದಿಂದ ಫಸಲು ವಿಮಾ ಯೋಜನೆಯ ವ್ಯಾಪ್ತಿಯನ್ನು 2018–19ರ ವೇಳೆಗೆ ಬಿತ್ತನೆ ಪ್ರದೇಶದ ಶೇಕಡ 50 ರಷ್ಟಕ್ಕೆ ವಿಸ್ತರಿಸಲಾಗುವುದು. ಈ ಯೋಜನೆಗೆ ₹9 ಸಾವಿರ ಕೋಟಿ ಮೀಸಲಿಡಲಾಗುತ್ತದೆ.ಹೈನುಗಾರಿಕೆಗೆ ಉತ್ತೇಜನ ನೀಡಲು ₹8 ಸಾವಿರ ಕೋಟಿ ಮೊತ್ತದ ‘ಹೈನುಗಾರಿಕೆ ಮೂಲಸೌಕರ್ಯ ಅಭಿವೃದ್ಧಿ ನಿಧಿ’ ಯನ್ನು ನಬಾರ್ಡ್‌ ಮೂಲಕ ಆರಂಭಿಸಲಾಗುವುದು. ಆರಂಭದಲ್ಲಿ ಇದಕ್ಕೆ ₹2 ಸಾವಿರ ಕೋಟಿ ನೀಡಲಾಗುತ್ತದೆ.ಇ–ನ್ಯಾಮ್‌ ವ್ಯವಸ್ಥೆ

ಕೃಷಿಕರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರಕಿಸಿಕೊಡಬೇಕು ಎಂಬ ಗುರಿಯೊಂದಿಗೆ ಇ–ನ್ಯಾಮ್‌ ವ್ಯವಸ್ಥೆಯನ್ನು 585 ಎಪಿಎಂಸಿಗಳಿಗೆ ವಿಸ್ತರಿಸಲಾಗುವುದು ಎಂದು ಸಚಿವ ಜೇಟ್ಲಿ ಘೋಷಿಸಿದರು. ಈ ವ್ಯವಸ್ಥೆ ಸದ್ಯ 250 ಎಪಿಎಂಸಿಗಳಲ್ಲಿ ಮಾತ್ರ ಇದೆ. ಇ–ನ್ಯಾಮ್‌ಗಳಲ್ಲಿ ಮೂಲಸೌಕರ್ಯ ಅಭಿವೃದ್ಧಿಗೆ ಗರಿಷ್ಠ ₹ 75 ಲಕ್ಷ ನೆರವು ನೀಡುವ ಪ್ರಸ್ತಾವ ಬಜೆಟ್‌ನಲ್ಲಿದೆ.ಕೃಷಿ ಆದಾಯ ದುಪ್ಪಟ್ಟು ಉದ್ದೇಶ

ಮುಂದಿನ ಐದು ವರ್ಷಗಳಲ್ಲಿ ರೈತರ ಆದಾಯನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ಕೃಷಿ ಮತ್ತು ಅದಕ್ಕೆ ಪೂರಕವಾದ ಯೋಜನೆಗೆ ಒತ್ತು* ₹ 5 ಸಾವಿರ ಕೋಟಿ ಆರಂಭಿಕ ಮೊತ್ತ ಬಳಸಿ, ಸಣ್ಣ ನೀರಾವರಿ ನಿಧಿ ಸ್ಥಾಪನೆ

* ಮಣ್ಣಿನ ಆರೋಗ್ಯ ಪರೀಕ್ಷೆಗೆ ದೇಶದ 648 ಕೃಷಿ ವಿಜ್ಞಾನ ಕೇಂದ್ರಗಳಲ್ಲಿ  ಕಿರು ಪ್ರಯೋಗಾಲಯ ಸ್ಥಾಪನೆ. ಇದರ ಜೊತೆ, ಉದ್ಯಮಿಗಳ ಮೂಲಕ ಹೆಚ್ಚುವರಿಯಾಗಿ ಒಂದು ಸಾವಿರ ಪ್ರಯೋಗಾಲಯಗಳ ಆರಂಭ.

* 63 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ವಹಿವಾಟುಗಳನ್ನು ಮೂರು ವರ್ಷಗಳ ಅವಧಿಯಲ್ಲಿ ಕಂಪ್ಯೂಟರೀಕರಿಸಲು ನಬಾರ್ಡ್‌ಗೆ ನೆರವು. ಇದಕ್ಕೆ ಅಂದಾಜು ₹ 1,900 ಕೋಟಿ ವೆಚ್ಚ.

* ಹಣ್ಣು, ತರಕಾರಿ ಬೆಳೆಯುವ ರೈತರಿಗೆ ಕೃಷಿ ಉತ್ಪನ್ನ ಸಂಸ್ಕರಣಾ ಘಟಕಗಳ ಜೊತೆ ಸಂಪರ್ಕ ಕಲ್ಪಿಸಿ, ಬೆಳೆಗೆ ಉತ್ತಮ ಬೆಲೆ ಸಿಗುವಂತೆ ಕ್ರಮ. ಗುತ್ತಿಗೆ ಕೃಷಿಗೆ ಹೊಸ ಕಾನೂನು ರೂಪಿಸಿ, ರಾಜ್ಯಗಳ ಪರಿಶೀಲನೆಗೆ ರವಾನಿಸುವ ಪ್ರಸ್ತಾಪ.ನರೇಗಾಗೆ ₹ 48 ಸಾವಿರ ಕೋಟಿ ಮೀಸಲು
ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಗೆ (ಎಂ–ನರೇಗಾ) 2017–18ನೇ ಸಾಲಿನಲ್ಲಿ ₹48 ಸಾವಿರ ಕೋಟಿ ಮೀಸಲಿಡಲಾಗಿದೆ.

ಕಳೆದ ವರ್ಷ ನರೇಗಾಗೆ ₹ 38,500 ಕೋಟಿ ನಿಗದಿ ಮಾಡಲಾಗಿತ್ತು. ಈ ಬಾರಿ ಹಂಚಿಕೆ ಮಾಡಿರುವಷ್ಟು ಮೊತ್ತವನ್ನು ನರೇಗಾಕ್ಕೆ ಹಿಂದೆಂದೂ ಮಾಡಿರಲಿಲ್ಲ ಎಂದು ಹಣಕಾಸು ಸಚಿವ ಅರುಣ್‌ ಜೇಟ್ಲಿ ಹೇಳಿದರು.

ದೀನದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಯೋಜನೆಗಳ ಅಡಿ ಹಂಚಿಕೆಯನ್ನು ₹ 4,500 ಕೋಟಿಯಷ್ಟು ಹೆಚ್ಚಿಸಲಾಗಿದೆ.

ಅಂತ್ಯೋದಯ ಯೋಜನೆ
* 2019ರೊಳಗೆ ದೇಶದ ಒಂದು ಕೋಟಿ ಕುಟುಂಬಗಳನ್ನು ಬಡತನದ ಸುಳಿಯಿಂದ ಹೊರತರಲು, 50 ಸಾವಿರ ಗ್ರಾಮ ಪಂಚಾಯಿತಿಗಳನ್ನು ಬಡತನ ಮುಕ್ತ  ಎಂದು ಘೋಷಿಸಲು ಅಂತ್ಯೋದಯ ಯೋಜನೆ.

* ನೀರಿನಲ್ಲಿ ಆರ್ಸೆನಿಕ್‌ ಮತ್ತು ಫ್ಲೋರೈಡ್‌ ಅಂಶ ಇರುವ 28 ಸಾವಿರ ಹಳ್ಳಿಗಳಿಗೆ ನಾಲ್ಕು ವರ್ಷಗಳಲ್ಲಿ ಶುದ್ಧ ಕುಡಿಯುವ ನೀರಿನ  ಪೂರೈಕೆ.
* 2022ರೊಳಗೆ ಐದು ಲಕ್ಷ ಜನರಿಗೆ ಕಲ್ಲು ಕೆಲಸಗಳ ತರಬೇತಿ ನೀಡುವ ಗುರಿ.

ಕೃಷಿ ಕ್ಷೇತ್ರಕ್ಕೆ ನೀಡಿದ ಅನುದಾನ
* ₹44,485 ಕೋಟಿ 2016-17

* ₹51,026 ಕೋಟಿ 2017-18

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry