7

ಪ್ರಯಾಣದ ಮೂಲಕ ತಾಯ್ನೆಲದ ಮರುಶೋಧ

ರಾಮಚಂದ್ರ ಗುಹಾ
Published:
Updated:
ಪ್ರಯಾಣದ ಮೂಲಕ ತಾಯ್ನೆಲದ ಮರುಶೋಧ

2017ರ ಎರಡನೆಯ ದಿನ ನಾನು ವಸಾಹತುಕಾಲದ ಗಿರಿಧಾಮ ಕೂನೂರ್‌ನಿಂದ ನಮ್ಮ ಹಳೆಯ ಬಂದರು ನಗರಗಳಲ್ಲಿ ಒಂದಾದ ಕೊಚ್ಚಿಗೆ ಬಂದೆ. ಹೀಗೆ ಬಹುತೇಕ ನಿರಂತರ ಪ್ರಯಾಣದ ಒಂದು ತಿಂಗಳು ಆರಂಭಗೊಂಡಿತು. ಹಲವು ಸ್ಥಳಗಳಿಗೆ ವಿಮಾನಗಳಲ್ಲಿ ಹೋದರೂ ಸುದೀರ್ಘ ದೂರಗಳನ್ನು ರಸ್ತೆಯ ಮೂಲಕ ಕ್ರಮಿಸಿದ್ದೇನೆ. ನೆಲವನ್ನು ಆಕಾಶದಿಂದ ಮತ್ತು ನೆಲದಿಂದ ನೋಡಿದ್ದೇನೆ. ಪರ್ವತಗಳಿಂದ ಬಯಲು ಪ್ರದೇಶಗಳತ್ತ ಇಳಿದಿದ್ದೇನೆ, ದೊಡ್ಡ ನಗರಗಳಲ್ಲಿ ಮತ್ತು ಸಣ್ಣ ಪಟ್ಟಣಗಳಲ್ಲಿ ತಂಗಿದ್ದೇನೆ. ಹಲವು ಗ್ರಾಮಗಳನ್ನು ಕಂಡಿದ್ದೇನೆ, ಅಲ್ಲಿ ನಿಂತಿದ್ದೇನೆ, ಅಷ್ಟೇ ಅಲ್ಲ, ಘನ ಗಂಭೀರ ಹಿಂದೂ ಮಹಾಸಾಗರವನ್ನೂ ಮುಟ್ಟಿ ಬಂದಿದ್ದೇನೆ.

ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ನಾನು ಭಾರತದಾದ್ಯಂತ ಸುದೀರ್ಘವಾದ ಬಸ್ ಮತ್ತು ರೈಲು ಪ್ರಯಾಣಗಳನ್ನು ನಡೆಸಿದ್ದೇನೆ. ನನ್ನ ಹೆತ್ತವರು ಡೆಹ್ರಾಡೂನ್‌ನಲ್ಲಿದ್ದರೆ ಅಜ್ಜ ಅಜ್ಜಿ ಬೆಂಗಳೂರಿನಲ್ಲಿದ್ದರು. ಹೀಗಾಗಿ ಈ ಪ್ರಯಾಣಗಳ ಉದ್ದೇಶ ಸಂಬಂಧಿಕರನ್ನು ಭೇಟಿಯಾಗುವುದು, ಕ್ರಿಕೆಟ್ ಪಂದ್ಯಗಳನ್ನು ಆಡುವುದು ಮತ್ತು ಕ್ವಿಜ್‌ಗಳಲ್ಲಿ ಭಾಗವಹಿಸುವುದಾಗಿತ್ತು. ನಂತರ, ಯುವ ಸಂಶೋಧಕನಾಗಿ ಗುಡ್ಡಗಾಡು ಮತ್ತು ಕಾಡು ಪ್ರದೇಶಗಳಲ್ಲಿ ಅಲೆದಾಡಿದ್ದೇನೆ. ನನ್ನ ಮೂವತ್ತರ ವಯಸ್ಸಿನ ನಂತರ ದೇಶದೊಳಗಿನ ಪ್ರಯಾಣ ಕಡಿಮೆಯಾಗಿ ವಿದೇಶ ಪ್ರವಾಸ ಭಾರಿ ಪ್ರಮಾಣದಲ್ಲಿ ಏರಿಕೆಯಾಯಿತು. ಇತ್ತೀಚಿನ ವರ್ಷಗಳಲ್ಲಿ ಈ ಪ್ರವೃತ್ತಿ ಮತ್ತೆ ತಿರುವು ಮುರುವಾಗಿದೆ. ಮತ್ತೆ ನನ್ನ ದೇಶವನ್ನು ತಿಳಿದುಕೊಳ್ಳುವ ಪ್ರಯತ್ನ ಆರಂಭಿಸಿದ್ದೇನೆ. ನನ್ನ ಜೀವಮಾನದ ಪ್ರಯಾಣಗಳಲ್ಲಿ ಕಳೆದ ತಿಂಗಳ ಪ್ರಯಾಣ ಅತ್ಯಂತ ತೀವ್ರವಾದುದಾಗಿತ್ತು. ದೇಶದ ಆರು ರಾಜ್ಯಗಳು, ಎರಡು ಕೇಂದ್ರಾಡಳಿತ ಪ್ರದೇಶಗಳು ಮತ್ತು ನೆರೆಯ ದೇಶವೊಂದಕ್ಕೆ ಕೂಡ ಭೇಟಿ ನೀಡಿ ಬಂದಿದ್ದೇನೆ.

2017ರ ಜನವರಿಯಲ್ಲಿ ನನ್ನ ದೇಶದ ಬಗ್ಗೆ ಏನು ಕಲಿಕೆಯಾಯಿತು ಅಥವಾ ಮರುಕಲಿಕೆಯಾಯಿತು? ಮೊದಲನೆಯದಾಗಿ, ದೇಶದ ನಾಗರಿಕ ಇತಿಹಾಸದ ಅಗಾಧ ಆಳವನ್ನು ಪರಿಚಯಿಸಿಕೊಂಡೆ ಅಥವಾ ಮರುಪರಿಚಯ ಮಾಡಿಕೊಂಡೆ. ಇದು ಅತ್ಯಂತ ಗಾಢವಾಗಿ ಅಭಿವ್ಯಕ್ತಿಗೊಂಡಿರುವುದು ವಾಸ್ತುಶಿಲ್ಪದಲ್ಲಿ. ನಾನು ನೋಡಿದ ಅತ್ಯಂತ ಸುಂದರ ರಚನೆ ಅತ್ಯಂತ ಹಳೆಯದೂ ಆಗಿದೆ- ಇದು ತಂಜಾವೂರಿನ ಬೃಹದೀಶ್ವರ ದೇವಾಲಯ. ನಿಜಕ್ಕೂ ಇದು ಜಗತ್ತಿನ ಅದ್ಭುತಗಳಲ್ಲಿ ಒಂದು. ತಾಜ್‌ಮಹಲ್‌ನಂತೆ ದಿವ್ಯವೂ ಭವ್ಯವೂ ಆಗಿರುವ ಇದು ನಿರ್ಮಾಣವಾದದ್ದು ಅದಕ್ಕಿಂತ ಆರು ನೂರಕ್ಕೂ ಹೆಚ್ಚು ವರ್ಷಗಳ ಹಿಂದೆ.

ನನ್ನ ಪ್ರಯಾಣದಲ್ಲಿ ಆಗ್ರಾಕ್ಕೆ ಭೇಟಿ ನೀಡಿಲ್ಲ. ಆದರೆ ಕೆಲವು ಉಜ್ವಲವಾದ ಇಸ್ಲಾಂ ಸ್ಮಾರಕಗಳನ್ನು ನೋಡಿದ್ದೇನೆ. ಅಹಮದಾಬಾದ್‌ನ ಸಿದ್ದಿ ಸಯ್ಯದ್ ಮಸೀದಿ ಮನಮೋಹಕವಾದ ಸುಂದರ ಆಭರಣ. ಇದು ತಾಜ್‌ಮಹಲ್‌ಗಿಂತ ಸುಮಾರು 70 ವರ್ಷ ಹಿಂದೆ ನಿರ್ಮಾಣವಾಗಿದೆ. ಕೆಲವು ಅತ್ಯುತ್ತಮವಾದ ಚರ್ಚ್‌ಗಳನ್ನೂ ಕಂಡಿದ್ದೇನೆ. ತಮಿಳುನಾಡಿನ ತರಗಂಬಡಿಯ ಚರ್ಚ್ ಅವುಗಳಲ್ಲಿ ಒಂದು. 18ನೇ ಶತಮಾನದಲ್ಲಿ ನಿರ್ಮಾಣವಾದ ಈ ಚರ್ಚ್ ಭಾರತದಲ್ಲಿರುವ ಅತ್ಯಂತ ಹಳೆಯ ಪ್ರಾಟೆಸ್ಟೆಂಟ್ ಚರ್ಚ್ ಎಂದು ಹೇಳಲಾಗುತ್ತಿದೆ. ಫೋರ್ಟ್ ಕೊಚ್ಚಿಯಲ್ಲಿ ನಾನು ಕಂಡ ಕ್ಯಾಥೊಲಿಕ್ ಚರ್ಚ್ (ವಾಸ್ಕೊ ಡ ಗಾಮನ ಸಮಾಧಿ ಇರುವ ಚರ್ಚ್ ಇದು) 16ನೇ ಶತಮಾನದ್ದು. ಫೋರ್ಟ್ ಕೊಚ್ಚಿಯ ಯಹೂದಿ ವಠಾರದಲ್ಲಿಯೂ ನಡೆದಾಡಿದೆ. ಅಲ್ಲಿನ ಯಹೂದ್ಯರ ಆರಾಧನಾ ಮಂದಿರ ಮುಚ್ಚಿ ಹೋಗಿರುವುದು ಬೇಸರದ ಸಂಗತಿ. ತಂಜಾವೂರಿನ ವಸ್ತುಸಂಗ್ರಹಾಲಯದಲ್ಲಿ ಬುದ್ಧನ ಅತ್ಯುತ್ತಮವಾದ ಹಲವು ಪ್ರತಿಮೆಗಳನ್ನು ನೋಡಿದೆ.

ಮೂಲದಲ್ಲಿ ಧಾರ್ಮಿಕ ಪಂಡಿತನಾಗಿ ತರಬೇತಿ ಪಡೆದ ಮಾನವಶಾಸ್ತ್ರಜ್ಞ ವೆರಿಯರ್ ಎಲ್ವಿನ್ ಒಮ್ಮೆ ಹೀಗೆ ಬರೆದಿದ್ದರು: ‘ಭಾರತದ ಸಂತರು ಮತ್ತು ಕವಿಗಳ ಮೂಲಕ ಪೂರ್ವದ ಅಸಂಖ್ಯ ಧ್ವನಿಗಳು ಅವತಾರದ ಬರುವಿಕೆಯನ್ನು ಸಾರಿ ಹೇಳುತ್ತವೆ. ಭಾರತದ ಭವ್ಯ ಕಲೆ ಮತ್ತು  ಹಾಡುಗಳ ಸದ್ದಿನಲ್ಲಿ ದೇವರ ನಾಮ ಮೌನವಾಗಿ ಧ್ವನಿಸುತ್ತದೆ... ಭಾರತ ಭೂಮಿ ದೇವರ ಧ್ಯಾನದಲ್ಲಿ ಸಜೀವ, ಆತನ ಅಪಾರ ಕುರುಹುಗಳು ದಿಗಿಲುಗೊಳಿಸುವಂತಿದ್ದರೂ ಭಾರತ ಧರ್ಮಗಳ ತಾಯಿ’. ಪ್ರಯಾಣದ ಉದ್ದಕ್ಕೂ ಈ ಮಾತುಗಳು ನನ್ನೊಳಗಿದ್ದವು. ತಂಜಾವೂರು ಮತ್ತು ಕುಂಭಕೋಣಂಗಳ ಸುತ್ತಮುತ್ತಲಿನಲ್ಲಿ ನಾನು ಭೇಟಿ ನೀಡಿದ ದೇವಾಲಯಗಳಲ್ಲಿ ಭಕ್ತರು ಗಿಜಿಗುಡುತ್ತಿದ್ದರು. ನಾನು ನೋಡಿದ ಚರ್ಚ್‌ಗಳು ಮತ್ತು ದೇವಾಲಯಗಳ ಪ್ರಾಚೀನತೆ ಈ ದೇಶ ಪೂರ್ಣವಾಗಿ ‘ಹಿಂದೂ’ ಅಲ್ಲ ಮತ್ತು ಯಾವತ್ತೂ ಆಗಿರಲಿಲ್ಲ ಎಂಬ ಅರಿವನ್ನು ನನ್ನಲ್ಲಿ ಮೂಡಿಸಿತು.

ಭಾರತದ ವೈವಿಧ್ಯ, ಧಾರ್ಮಿಕ ಮತ್ತು ಸಾಂಸ್ಕೃತಿಕ ಅಂಶಗಳನ್ನು ಮೀರಿ ನಿಲ್ಲುವಂತಹುದು ಎಂಬುದು ನಿಜ. ಇದು ಪಾರಿಸರಿಕವೂ ಹೌದು. ಚಹಾ ತೋಟಗಳು ಮತ್ತು ಶೋಲಾ ಕಾಡು ನಾನು ಪ್ರಯಾಣ ಆರಂಭಿಸಿದ ನೀಲಗಿರಿ ಬೆಟ್ಟಗಳ ಮುಖ್ಯ ಲಕ್ಷಣ. ನಾನು ಇಡೀ ದಿನ ಪ್ರಯಾಣಿಸಿದ ಅತ್ಯಂತ ದಟ್ಟ ಜನದಟ್ಟಣೆಯ ಕೇರಳದಲ್ಲಿ ಪಟ್ಟಣಗಳು ಮತ್ತು ಹಳ್ಳಿಗಳು ಒಂದರೊಳಗೊಂದು ಹಾದು ಹೋಗುತ್ತವೆ. ಕೆಲವು ಅರಣ್ಯ ಪ್ರದೇಶಗಳ ಮೂಲಕವೂ ನಾನು ಸಾಗಿದ್ದೇನೆ. ಇವು ಒಂದು ಕಾಲದಲ್ಲಿ ಇನ್ನೂ ಹೆಚ್ಚು ಸಮೃದ್ಧವಾಗಿದ್ದ ಕಾಡಿನ ಅವಶೇಷಗಳಾಗಿವೆ. ದಕ್ಷಿಣ ತಮಿಳುನಾಡಿನಲ್ಲಿ ಅತ್ಯಂತ ಚಂದದ ಹಳ್ಳಿಗಾಡನ್ನು ನಾನು ನೋಡಿದೆ. ಈ ಪ್ರಯಾಣದ ನಡುವೆ ಹೊರಲಾರದ ಹೊರೆಯ ಬೃಹತ್ ಮತ್ತು ಕರ್ಕಶವಾದ ಬೆಂಗಳೂರು, ಪುಣೆ, ಅಹಮದಾಬಾದ್ ಮತ್ತು ನವದೆಹಲಿಯಂತಹ ಆಧುನಿಕ ಭಾರತದ ನಗರಗಳಲ್ಲಿ ತಂಗಿದ್ದೇನೆ.

ಈ ಪ್ರಯಾಣದಲ್ಲಿ ನಾನು ಭೇಟಿ ನೀಡಿದ ಆರು ರಾಜ್ಯಗಳೆಂದರೆ ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ, ಗುಜರಾತ್ ಮತ್ತು ಪಶ್ಚಿಮ ಬಂಗಾಳ. ಪ್ರತಿ ರಾಜ್ಯವೂ ಭಿನ್ನ ಭಾಷೆಯನ್ನು ಹೊಂದಿದೆ. ಇಲ್ಲಿನ ಸಾಹಿತ್ಯ ಮತ್ತು ಜನಪದ ಜನರ ಪ್ರಜ್ಞೆಯಲ್ಲಿ ಆಳವಾಗಿ ಬೇರುಬಿಟ್ಟಿವೆ. ಈ ರಾಜ್ಯಗಳ ರಾಜ್ಯಮಟ್ಟದ ಅಸ್ಮಿತೆಗಳು ಎಷ್ಟು ದೃಢ ಮತ್ತು ಸಮೃದ್ಧ ಎಂಬುದು ಈ ಪ್ರಯಾಣದಲ್ಲಿ ಮತ್ತೊಮ್ಮೆ ನನಗೆ ಮನದಟ್ಟಾಯಿತು. ಕೆಲವೊಮ್ಮೆ ಇವು ಎಷ್ಟು ಗಟ್ಟಿಯಾಗಿ ಸಕಾರಾತ್ಮಕವಾಗಿರುತ್ತವೆ ಎಂಬುದನ್ನೂ ಕಂಡೆ. ಮಲಯಾಳಿ ಕಲಾವಿದರು ಸಂಘಟಿಸುವ ಕೊಚ್ಚಿ ದ್ವೈವಾರ್ಷಿಕ ಕಾರ್ಯಕ್ರಮದಲ್ಲಿ ನಾನು ಎರಡು ದಿನ ಭಾಗವಹಿಸಿದೆ. ಇದಕ್ಕೆ ಸರ್ಕಾರದ ಗಟ್ಟಿ ಬೆಂಬಲ ಇದೆ (ಕಾಂಗ್ರೆಸ್ ಅಥವಾ ಎಡರಂಗದ ಯಾವುದೇ ಸರ್ಕಾರ ಇದ್ದರೂ ಬೆಂಬಲ ಹಾಗೆಯೇ ಇರುತ್ತದೆ). ಇದು ಕೇರಳದ ಮಣ್ಣಿನಲ್ಲಿ ಬೇರುಬಿಟ್ಟಿರುವ ಕಾರ್ಯಕ್ರಮವಾದರೂ ಭಾರತವನ್ನು, ಜಗತ್ತನ್ನು ತುಂಬು ಮನಸ್ಸಿನಿಂದ ಅಪ್ಪಿಕೊಳ್ಳುತ್ತದೆ.

ಪುಣೆಗೆ ನನ್ನ ಭೇಟಿ ಕೂಡ ರಾಜ್ಯ ಮಟ್ಟದ ಅಭಿಮಾನಪಡಬಹುದಾದ ಕಾರ್ಯಕ್ರಮವೊಂದರ ಭಾಗವಾಗಿತ್ತು. ಈಗ ಉತ್ತರ ಅಮೆರಿಕದಲ್ಲಿ ನೆಲೆಯಾಗಿರುವ ಮರಾಠಿ ಭಾಷಿಕರು ಯಶಸ್ವಿಯಾಗಿ ನಡೆಸುತ್ತಿರುವ ಮಹಾರಾಷ್ಟ್ರ ಫೌಂಡೇಷನ್, ಅತ್ಯಂತ ಗೌರವಾನ್ವಿತ ‘ಸಾಧನಾ’ ಸಾಪ್ತಾಹಿಕದ ಸಹಭಾಗಿತ್ವದಲ್ಲಿ ಕಾರ್ಯಕ್ರಮವೊಂದನ್ನು ನಡೆಸುತ್ತಿದೆ. ‘ಸಾಧನಾ’ ಸಾಪ್ತಾಹಿಕವನ್ನು 1940ರ ದಶಕದಲ್ಲಿ ಸ್ಥಾಪಿಸಿದವರು ಸಮಾಜ ಸುಧಾರಕ ಸಾನೆ ಗುರೂಜಿ. ಸಂಗೀತ, ಕಲೆ, ಸಾಹಿತ್ಯ, ಸಮಾಜ ಸೇವೆ ಮತ್ತು ಸಾಮಾಜಿಕ ಹೋರಾಟಕ್ಕೆ ಗಣನೀಯ ಕೊಡುಗೆ ನೀಡಿದ ಮಹಾರಾಷ್ಟ್ರದವರನ್ನು ಈ ಕಾರ್ಯಕ್ರಮದಲ್ಲಿ ಗೌರವಿಸಲಾಗುತ್ತದೆ. ವಿದ್ಯಾರ್ಥಿಗಳೂ ಸೇರಿ ಪುಣೆಯ ವಿವಿಧ ವರ್ಗಗಳ ಜನ ಇದರಲ್ಲಿ ಭಾಗವಹಿಸುತ್ತಾರೆ. ಭಾರತದ ಇತರ ಭಾಗಗಳ ಅನಿವಾಸಿಗಳು ಕೂಡ ತಾವು ಬಿಟ್ಟು ಹೋದ ನಾಡಿನ ಲೇಖಕರು ಮತ್ತು ಸಮಾಜ ಸುಧಾರಕರ ಜತೆ ಮತ್ತೆ ರಚನಾತ್ಮಕವಾಗಿ ಸಂಬಂಧ ಸ್ಥಾಪಿಸಿಕೊಳ್ಳುವುದಕ್ಕೆ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಎಷ್ಟು ಚಂದ ಎಂದು ನನಗೆ ಅನಿಸುತ್ತಿದೆ.

ಪ್ರಾದೇಶಿಕ ಅಭಿಮಾನವನ್ನು ಅದರ ಕಚ್ಚಾ ರೂಪದಲ್ಲಿ ನೋಡುವ ಅವಕಾಶ ತಮಿಳುನಾಡಿನಲ್ಲಿ ಸಿಕ್ಕಿತು. ಜಲ್ಲಿಕಟ್ಟುವಿನ ಮೇಲೆ ಸುಪ್ರೀಂ ಕೋರ್ಟ್ ನಿಷೇಧ ಹೇರಿದ್ದರ ಪ್ರತಿಭಟನೆ ನನ್ನ ಪ್ರವಾಸದ ಸಂದರ್ಭದಲ್ಲಿಯೇ ನಡೆಯಿತು. ಸೇಲಂನಲ್ಲಿ ಕಾರಿನಲ್ಲಿ ಸಾಗುತ್ತಿದ್ದಾಗ ಪ್ರತಿಭಟನಾಕಾರರ ದೊಡ್ಡ ಗುಂಪೊಂದು ಕಾರನ್ನು ತಡೆಯಿತು. ಪ್ರಾಚೀನ ಕೃಷಿ ಸಮುದಾಯದ ಆಚರಣೆಯೊಂದು ಕೆಲವು ವಾರಗಳ ಮಟ್ಟಿಗೆ ಇಡೀ ತಮಿಳುನಾಡಿನ ಅಸ್ಮಿತೆಯ ಪ್ರಶ್ನೆಯಾಗಿ ಬದಲಾಯಿತು ಎಂಬುದನ್ನು ತಮಿಳುನಾಡಿನ ಹೊರಗಿನವರು ಸುದ್ದಿವಾಹಿನಿಗಳಲ್ಲಿ ನೋಡಿದರೆ ನನಗೆ ಅದರ ಪ್ರತ್ಯಕ್ಷ ಅನುಭವವಾಯಿತು. ಭಾರತ ಸ್ವಾತಂತ್ರ್ಯಗೊಂಡ ಮರು ವರ್ಷ 1948ರಲ್ಲಿ ಭಾರತ ಸೇನೆಯ ಮಾಜಿ ಮುಖ್ಯಸ್ಥ ಕ್ಲಾಡ್ ಔಷ್ಲೆಕ್ ಗೆಳೆಯನೊಬ್ಬನಿಗೆ ಹೀಗೆ ಬರೆಯುತ್ತಾರೆ: ‘ಸಿಖ್ಖರು ಪ್ರತ್ಯೇಕ ದೇಶ ರಚಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅವರು ಅದರಲ್ಲಿ ಯಶಸ್ವಿಯಾಗಬಹುದು ಎಂದು ನನಗೆ ಅನಿಸುತ್ತದೆ. ಭಾರತ ಒಂದು ದೇಶ ಎಂಬ ಪರಿಕಲ್ಪನೆ ಮುರಿದು ಹೋಗಿ ವಿಕೇಂದ್ರೀಕರಣದತ್ತ ಸಾಗಲು ಇದು ಆರಂಭ ಮಾತ್ರ. ಯುರೋಪ್‌ನಷ್ಟೇ ವೈವಿಧ್ಯಗಳನ್ನು ಹೊಂದಿರುವ ಉಪಖಂಡ ಭಾರತ. ಸ್ಕಾಟ್ಲೆಂಡ್‌ನ ವ್ಯಕ್ತಿಗಿಂತ ಇಟಲಿಯ ವ್ಯಕ್ತಿ ಹೇಗೆ ಭಿನ್ನವೋ ಹಾಗೆಯೇ ಪಂಜಾಬಿಯೊಬ್ಬ ಮದ್ರಾಸಿ ವ್ಯಕ್ತಿಗಿಂತ ಭಿನ್ನ. ಇದರ ಏಕೀಕರಣಕ್ಕೆ ಬ್ರಿಟಿಷರು ಯತ್ನಿಸಿದರೂ ಶಾಶ್ವತವಾಗಿ ಏನನ್ನೂ ಸಾಧಿಸಲಾಗಿಲ್ಲ. ಹಲವು ದೇಶಗಳ ಖಂಡವೊಂದನ್ನು ಒಂದು ದೇಶವಾಗಿ ರೂಪಿಸುವುದು ಯಾರಿಂದಲೂ ಸಾಧ್ಯವಿಲ್ಲ’.

ಆದರೆ ನಾವದನ್ನು ಸಾಧಿಸಿದ್ದೇವೆ. ಭಾರತದ ಈ ಪ್ರಯೋಗದ ಶ್ರೇಷ್ಠ ಮತ್ತು ವಿಶಿಷ್ಟ ಅಂಶವೆಂದರೆ, ನಮ್ಮ ಸ್ಥಾಪಕರು ಈ ದೇಶದ ಅಸ್ತಿತ್ವವನ್ನು ಎಲ್ಲರದ್ದೂ ಆದ ಒಂದೇ ಧರ್ಮ, ಒಂದೇ ಭಾಷೆ ಅಥವಾ ಒಬ್ಬ ಸಮಾನ ಶತ್ರುವಿನ ಆಧಾರದಲ್ಲಿ ಕಟ್ಟಲು ಯತ್ನಿಸಲಿಲ್ಲ. ಇದರಲ್ಲಿ ಬಹುತೇಕ ನಾವು ಯಶಸ್ವಿಯೂ ಆಗಿದ್ದೇವೆ. ಸ್ವಾತಂತ್ರ್ಯ ಬಂದು ಎಪ್ಪತ್ತು ವರ್ಷಗಳ ನಂತರವೂ ಪಂಜಾಬಿ ಮತ್ತು ಮದ್ರಾಸಿ, ಬಂಗಾಳಿ ಮತ್ತು ಮರಾಠಿಗರು- ಎಲ್ಲರಲ್ಲೂ ಪರಸ್ಪರರಿಗಿಂತ ಭಿನ್ನ ಎಂಬ ಭಾವನೆಯೇ ಇದೆ. ಹಾಗಿದ್ದೂ ನಾವೆಲ್ಲ ಜತೆಯಾಗಿ ಬದುಕುವವರು ಎಂಬ ಭಾವನೆ ಇದೆ. ದೇಶದ ಬಹುಭಾಗ ಶಾಂತಿಯುತವಾಗಿಯೇ ಇದೆ.

ನನ್ನ 2017ರ ಜನವರಿಯ ಪ್ರಯಾಣ ಸದಾ ಅರಿವು ಮೂಡಿಸುವಂತಹುದು, ಕೆಲವೊಮ್ಮೆ ಕುತೂಹಲ ಹುಟ್ಟಿಸುವಂತಹುದು ಮತ್ತು ಚಿಂತನೆಯನ್ನು ಉನ್ನತೀಕರಿಸುವಂತಹುದೂ ಆಗಿತ್ತು. ಅವು ಕೆಲವೊಮ್ಮೆ ಖಿನ್ನತೆ ಮೂಡಿಸುವಂತಹುದೂ ಹೌದು. ನಾನು ಹೋದ ಭಿನ್ನವಾದ ಎಲ್ಲ ರಾಜ್ಯಗಳಲ್ಲಿಯೂ ನನ್ನನ್ನು ಅನುಸರಿಸಿಕೊಂಡು ಬಂದ ಮತ್ತು ಎಲ್ಲೆಡೆಯೂ ಸಮಾನವಾಗಿದ್ದ ಒಂದು ಅಂಶ ಪ್ಲಾಸ್ಟಿಕ್ ಚೀಲ. ನಾನು ಎದುರಾದ ಭಾಷೆ, ಪ್ರಾದೇಶಿಕತೆ, ಧರ್ಮ ಮತ್ತು ಹೊರಮೈ ದೃಶ್ಯಗಳ ವೈವಿಧ್ಯಗಳನ್ನೆಲ್ಲ ಮೆಟ್ಟಿನಿಲ್ಲುವಂತಿತ್ತು ಪ್ಲಾಸ್ಟಿಕ್ ಚೀಲಗಳ ಸರ್ವವ್ಯಾಪಿತ್ವ. ಬೀದಿಗಳಲ್ಲಿ, ಮರಗಳ ಅಡಿಯಲ್ಲಿ, ಹೊಲಗಳಲ್ಲಿ ಮತ್ತು ಕೆಲವು ಪವಿತ್ರ ಸ್ಥಳಗಳಲ್ಲಿ ಕೂಡ ಎಲ್ಲೆಂದರಲ್ಲಿ ಚೆಲ್ಲಾಡಿಕೊಂಡಿದ್ದವು ಈ ಚೀಲಗಳು. ದೊಡ್ಡ ನದಿ ಕಾವೇರಿಯ ಪಾತ್ರ ಬರಗಾಲದಿಂದಾಗಿ ಖಾಲಿಯಾಗಿದೆ. ಆದರೆ ಹಸಿರು, ಹಳದಿ, ನಸುಗೆಂಪು ಬಣ್ಣದ ಪ್ಲಾಸ್ಟಿಕ್ ಚೀಲಗಳು ದಡದಿಂದ ದಡಕ್ಕೆ ಚೆಲ್ಲಾಡಿಕೊಂಡಿದ್ದದ್ದು ಬಹಳ ಬೇಸರ ಮೂಡಿಸಿದ ದೃಶ್ಯ.

ಈ ಅಸಹಜ ವಸ್ತು ಇಲ್ಲದಿದ್ದ ಒಂದೇ ಒಂದು ಸ್ಥಳವೆಂದರೆ ನಾನು ಪ್ರಯಾಣ ಆರಂಭಿಸಿದ ಕೂನೂರು. ನೀಲಗಿರಿಯ ದೂರದೃಷ್ಟಿಯ ಜಿಲ್ಲಾಧಿಕಾರಿಯೊಬ್ಬರು ಕೆಲವು ವರ್ಷಗಳ ಹಿಂದೆ ಜಿಲ್ಲೆಯಲ್ಲಿ ಪ್ಲಾಸ್ಟಿಕ್ ಚೀಲವನ್ನು ನಿಷೇಧಿಸಿದರು. ಜಿಲ್ಲಾಧಿಕಾರಿ ವರ್ಗಾವಣೆಗೊಂಡು ಹೋದ ಹಲವು ವರ್ಷಗಳ ನಂತರವೂ ಇಲ್ಲಿನ ಜನ ಈ ನಿಷೇಧಕ್ಕೆ ಬದ್ಧರಾಗಿದ್ದಾರೆ. ಇದು ಈ ಗುಡ್ಡಗಳನ್ನು ಇನ್ನಷ್ಟು ಸುಂದರವೂ ಆಹ್ಲಾದಕರವೂ ಆಗಿಸಿದೆ.

ಪ್ಲಾಸ್ಟಿಕ್ ಚೀಲಗಳು ಸೌಂದರ್ಯ, ಪರಿಸರ ಮತ್ತು ಸಾಮಾಜಿಕವಾದ ಮೂರು ರೀತಿಯ ದೌರ್ಭಾಗ್ಯಗಳಿಗೆ ಕಾರಣ. ಪ್ಲಾಸ್ಟಿಕ್‌ ಚೀಲಗಳು ಕುರೂಪದ ಸಂಕೇತವಾಗಿದ್ದು, ಮಣ್ಣು ಮತ್ತು ನೀರಿನ ಗುಣಮಟ್ಟವನ್ನು ಕುಂದಿಸುತ್ತವೆ ಮತ್ತು ಕೆಲಸವನ್ನು ಇಲ್ಲವಾಗಿಸುತ್ತವೆ. ಇವುಗಳ ಬದಲಿಗೆ ಬಟ್ಟೆ ಅಥವಾ ಕಾಗದದ ಚೀಲಗಳನ್ನು ಬಳಸಿದರೆ ಭಾರತ ಹೆಚ್ಚು ಸುಂದರವಾಗುತ್ತದೆ ಮತ್ತು ಮಾಲಿನ್ಯ ಕಡಿಮೆಯಾಗುತ್ತದೆ. ಜತೆಗೆ ಹೆಚ್ಚು ಕೆಲಸ ಸೃಷ್ಟಿಯಾಗುತ್ತದೆ. ದೇಶದಾದ್ಯಂತ ಪ್ಲಾಸ್ಟಿಕ್ ಚೀಲ ನಿಷೇಧಿಸುವ ನಿರ್ಧಾರವನ್ನು ಕೇಂದ್ರ ಸರ್ಕಾರ ಕೈಗೊಳ್ಳಬೇಕಾದ ಕಾಲ ಎಂದೋ ಕಳೆದು ಹೋಗಿದೆ. ನಮ್ಮ ದೇಶವನ್ನು ಪ್ಲಾಸ್ಟಿಕ್ ಚೀಲದಷ್ಟು ಹಾನಿಗೊಳಿಸಿರುವ ಮತ್ತು ಕುರೂಪಗೊಳಿಸಿರುವ ಮತ್ತೊಂದು ವಸ್ತು ಇಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry