ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಗ್ನೇಯ ಶಿಕ್ಷಕರ ಕ್ಷೇತ್ರ: ಮೂರೂ ಪಕ್ಷಗಳಿಗೆ ಪ್ರತಿಷ್ಠೆ

Last Updated 2 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ಇದೊಂದು ಸೆಮಿಫೈನಲ್‌ ಚುನಾವಣೆ. ಬರೀ 15 ತಿಂಗಳು ಉಳಿದಿರುವ ಆಗ್ನೇಯ ಶಿಕ್ಷಕರ ಕ್ಷೇತ್ರದ ಉಪಚುನಾವಣೆ ಎಂಬ ಕಾರಣಕ್ಕೆ ರಾಜಕೀಯ ಪಕ್ಷಗಳು ಮೈಮರೆಯುವಂತಿಲ್ಲ. ಮೇಲ್ಮನೆ ಚುನಾವಣೆ ಆಗಿದ್ದರೂ, ಅದರ ಫಲಿತಾಂಶ ಐದು ಜಿಲ್ಲೆಗಳ 32 ವಿಧಾನಸಭೆ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.

ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ವ್ಯಾಪ್ತಿ ಹೊಂದಿರುವ ಆಗ್ನೇಯ ಶಿಕ್ಷಕರ ಕ್ಷೇತ್ರಕ್ಕೆ ಶುಕ್ರವಾರ (ಫೆ.3) ಮತದಾನ ನಡೆಯಲಿದೆ. ಈ ಕ್ಷೇತ್ರ ಪ್ರತಿನಿಧಿಸಿದ್ದ ಬಿಜೆಪಿಯ ವೈ.ಎ. ನಾರಾಯಣಸ್ವಾಮಿ ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಆಯ್ಕೆ ಆಗಿದ್ದರಿಂದ ಅವಧಿಗೆ ಮೊದಲೇ ಚುನಾವಣೆ ಬಂದಿದೆ.

ಕಾಂಗ್ರೆಸ್‌ ಟಿ.ಎಸ್‌. ನಿರಂಜನ್‌, ಬಿಜೆಪಿ ಪಿ.ಆರ್‌. ಬಸವರಾಜು, ಜೆಡಿಎಸ್‌  ರಮೇಶ್‌ ಬಾಬು ಅವರನ್ನು ಕಣಕ್ಕಿಳಿಸಿದೆ. ಅಲ್ಲದೆ, ಜೆಡಿಎಸ್‌ಗೆ ಬಂಡಾಯದ ಬಿಸಿಯೂ ತಟ್ಟಿದೆ. ಹರಿಹರದ ಜೆಡಿಎಸ್‌ ಶಾಸಕ ಎಚ್‌.ಎಸ್‌. ಶಿವಶಂಕರ್‌ ಅವರ ಸಹೋದರ ಅರವಿಂದ ಅವರೂ  ಪಕ್ಷಕ್ಕೆ ಸೆಡ್ಡು ಹೊಡೆದು ಸ್ಪರ್ಧೆಯಲ್ಲಿದ್ದಾರೆ.

ಶಿವಶಂಕರ್‌,  ಬಂಡಾಯ ಅಭ್ಯರ್ಥಿ ಪರ ಭರ್ಜರಿ  ಪ್ರಚಾರ ಮಾಡುತ್ತಿದ್ದಾರೆ. ದೇವೇಗೌಡರು ಅಧಿಕೃತ ಅಭ್ಯರ್ಥಿ   ಗೆಲುವಿಗೆ ಪ್ರಯತ್ನಿಸುತ್ತಿದ್ದಾರೆ. ಐದು ಜಿಲ್ಲೆಗಳಲ್ಲೂ ಪ್ರವಾಸ ಮಾಡಿರುವ ಅವರು ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ.

ಬಿಜೆಪಿ ಅಭ್ಯರ್ಥಿ ಬಸವರಾಜ್‌ ಅವರ ಗೆಲುವಿಗೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಶ್ರಮಿಸುತ್ತಿದ್ದಾರೆ. ಈ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ಶತಾಯ ಗತಾಯ ಹೋರಾಡುತ್ತಿದೆ. ನಾರಾಯಣಸ್ವಾಮಿ ಅವರಿಗೆ ಕ್ಷೇತ್ರದ ನಾಡಿಮಿಡಿತ ಗೊತ್ತಿರುವುದರಿಂದ  ಬಿಜೆಪಿ ಸಂಪೂರ್ಣವಾಗಿ ಅವರನ್ನೇ ನೆಚ್ಚಿಕೊಂಡಿದೆ.

ಆಗ್ನೇಯ ಶಿಕ್ಷಕರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 21 ಸಾವಿರ. ತುಮಕೂರು ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಲಿಂಗಾಯತರ ಪ್ರಾಬಲ್ಯವಿದ್ದು, ಕಾಂಗ್ರೆಸ್‌, ಬಿಜೆಪಿ ಹಾಗೂ ಬಂಡಾಯ ಜೆಡಿಎಸ್‌ ಅಭ್ಯರ್ಥಿಗಳು ಅದೇ ಸಮುದಾಯಕ್ಕೆ ಸೇರಿದವರು.  ಜೆಡಿಎಸ್‌ ಅಭ್ಯರ್ಥಿ ಮಾತ್ರ ಹಿಂದುಳಿದ ಬಲಿಜ ಜಾತಿಯವರು.

ರಮೇಶ್‌ ಬಾಬು ಅವರಿಗೆ ಜೆಡಿಎಸ್‌ ಟಿಕೆಟ್‌ ಕೊಟ್ಟಿರುವುದರ ಹಿಂದೆ ಚಾಣಾಕ್ಷ ತಂತ್ರವೂ ಇರಬಹುದು. ಮೂವರು ಒಂದೇ ಜಾತಿಯವರು ಇರುವುದರಿಂದ ಲಿಂಗಾಯತ ಮತಗಳು ಹಂಚಿ ಹೋಗಬಹುದು. ಹಿಂದುಳಿದವರು ಮತ್ತಿತರ ಜಾತಿಗಳ ಮತಗಳು ಜೆಡಿಎಸ್‌ಗೆ ಬರಬಹುದು ಎಂಬ ಲೆಕ್ಕಾಚಾರ ದೇವೇಗೌಡರದ್ದು. ಅಲ್ಲದೆ, ಕ್ಷೇತ್ರ ಖಾಲಿ ಆದಾಗಿನಿಂದಲೂ  ಬಾಬು ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ಅವರಿಗೆ ಟಿಕೆಟ್ ಕೊಡಲಾಗಿದೆ ಎಂದು ಜೆಡಿಎಸ್‌ ಮೂಲಗಳು ಹೇಳುತ್ತಿವೆ.

ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆ ಮೇಲ್ನೋಟಕ್ಕೆ ಕಾಣುವಷ್ಟು ಸರಳವಾಗಿಲ್ಲ. ಮೂರೂ ಪ್ರಮುಖ ಪಕ್ಷಗಳಿಗೂ ಬಹಳಷ್ಟು ಅಡ್ಡಿ– ಆತಂಕಗಳಿವೆ. ಒಂದು ಜಿಲ್ಲೆಯಲ್ಲಿ ಪ್ರಬಲವಾಗಿರುವಂತೆ ಕಾಣುವ ಪಕ್ಷ ಮತ್ತೊಂದು ಜಿಲ್ಲೆಯಲ್ಲಿ ದುರ್ಬಲವಾದಂತೆ ಕಂಡುಬರುತ್ತದೆ. ತುಮಕೂರಿನಲ್ಲಿ ಮೂರೂ ಪಕ್ಷಗಳು ಸಮಾನ ಬಲ ಹೊಂದಿರುವಂತೆ  ತೋರುತ್ತದೆ. ಕೋಲಾರದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಮಧ್ಯೆ ಹಣಾಹಣಿ ನಡೆಯುವ ಸಂಭವವಿದೆ. ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್‌ ಮತ್ತು ಬಿಜೆಪಿ ನಡುವೆ ಸ್ಪರ್ಧೆ ಏರ್ಪಟ್ಟಂತಿದೆ.

ಯಡಿಯೂರಪ್ಪ ಹಾಗೂ ಈಶ್ವರಪ್ಪನವರ ನಡುವೆ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ರಾಜಿ ಮಾಡಿಸಿದ್ದರೂ, ಎರಡೂ ಬಣದ ಮಧ್ಯದ ತಿಕ್ಕಾಟ ತುಮಕೂರು ಜಿಲ್ಲೆಯಲ್ಲಿ ಇತ್ಯರ್ಥವಾದಂತಿಲ್ಲ. ಈಶ್ವರಪ್ಪನವರ ಬಣಕ್ಕೆ ಸೇರಿದ ಮುಖಂಡರು ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡುತ್ತಿಲ್ಲ. ಈ ಗುಂಪು ತಟಸ್ಥವಾಗಿ ಉಳಿದಿರುವುದು ಬಿಜೆಪಿ ಕಾರ್ಯಕರ್ತರ ಆತಂಕ ಹೆಚ್ಚಿಸಿದೆ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳಲ್ಲಿ ಬಿಜೆಪಿ ಹಾಗೂ ಬಂಡಾಯ ಜೆಡಿಎಸ್‌ ಅಭ್ಯರ್ಥಿಗಳು ಬಿರುಸಿನ ಪ್ರಚಾರ ನಡೆಸಿದ್ದಾರೆ. ಅರವಿಂದ್‌ ದಾವಣಗೆರೆ ಜಿಲ್ಲೆಯವರು. ಅಲ್ಲದೆ, ಅವಿಭಜಿತ ಚಿತ್ರದುರ್ಗ ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಸಾದರ ಲಿಂಗಾಯತ  (ಲಿಂಗಾಯತ ಸಮಾಜದ ಉಪಜಾತಿ)   ಸಮಾಜಕ್ಕೆ ಸೇರಿದವರು. ಇವೆರಡೂ ಕಾರಣಕ್ಕೆ ತಮ್ಮನ್ನು ಬೆಂಬಲಿಸುವಂತೆ ಅರವಿಂದ್‌ ಮತದಾರರಿಗೆ ಮನವಿ ಮಾಡುತ್ತಿದ್ದಾರೆ. 

ಕೋಲಾರ ಹಾಗೂ ತುಮಕೂರು ಜಿಲ್ಲೆ ಹೊರತುಪಡಿಸಿದರೆ ಉಳಿದೆಡೆ ಕಾಂಗ್ರೆಸ್‌  ನಾಯಕರಾಗಲೀ, ಸಚಿವರಾಗಲೀ ಅಥವಾ ಶಾಸಕರಾಗಲೀ  ಪಕ್ಷದ ಅಭ್ಯರ್ಥಿ ಪರ ಸಕ್ರಿಯವಾಗಿ ಕೆಲಸ ಮಾಡುತ್ತಿಲ್ಲ. ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿ ಇರುವುದರಿಂದ  ಗೆದ್ದೇ ಗೆಲ್ಲುತ್ತೇವೆ ಎನ್ನುವ ಆತ್ಮವಿಶ್ವಾಸ ಆ ಪಕ್ಷದ ನಾಯಕರಿಗೆ ಇರಬಹುದು.

ಹೇಳುವುದಕ್ಕೆ ಇದು ಶಿಕ್ಷಕರ ಕ್ಷೇತ್ರ. ಆದರೆ, ಇಲ್ಲಿನ ಮತದಾರರು ಆಸೆ– ಆಮಿಷಗಳಿಂದ ದೂರವಾಗಿಲ್ಲ. ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳು ವಾಚ್‌, ಪೆನ್ನು ಮತ್ತಿತರ ಉಡುಗೋರೆಗಳನ್ನು ಮತದಾರರ ಮನೆ ಬಾಗಿಲಿಗೆ ತಲುಪಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಯಾರೂ ನೇರವಾಗಿ ದುಡ್ಡು ಕೊಟ್ಟು ಮತ ಖರೀದಿಸುತ್ತಿಲ್ಲ ಎನ್ನುವುದೊಂದೇ ಸಮಾಧಾನದ ಸಂಗತಿ.

ಒಟ್ಟಾರೆ ಆಗ್ನೇಯ ಕ್ಷೇತ್ರದ ಉಪ ಚುನಾವಣೆ ಕುತೂಹಲ ಕೆರಳಿಸಿದೆ. ಈ ಚುನಾವಣೆ ನಂಜನಗೂಡು, ಗುಂಡ್ಲುಪೇಟೆ ವಿಧಾನಸಭೆ ಉಪ ಚುನಾವಣೆ ಹಾಗೂ 2018ಕ್ಕೆ ನಡೆಯುವ  ವಿಧಾನಸಭೆ ಚುನಾವಣೆ ಮೇಲೂ ಪ್ರಭಾವ ಬೀರುವುದೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT