ಮತದಾನ: ಗೋವಾ ಶೇ 83, ಪಂಜಾಬ್‌ ಶೇ 75

7
2 ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಮುಗಿದ ಚುನಾವಣೆ

ಮತದಾನ: ಗೋವಾ ಶೇ 83, ಪಂಜಾಬ್‌ ಶೇ 75

Published:
Updated:
ಮತದಾನ: ಗೋವಾ ಶೇ 83, ಪಂಜಾಬ್‌ ಶೇ 75

ಚಂಡೀಗಡ/ಪಣಜಿ: ಪಂಜಾಬ್‌ನ 117 ಮತ್ತು ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ಶನಿವಾರ ಒಂದೇ ಹಂತದಲ್ಲಿ ಮತದಾನ ನಡೆಯಿತು. ಗೋವಾದಲ್ಲಿ ದಾಖಲೆಯ ಶೇ 83 ಮತ್ತು ಪಂಜಾಬ್‌ನಲ್ಲಿ ಶೇ 75ರಷ್ಟು ಮತದಾನವಾಗಿದೆ.

ಗೋವಾದಲ್ಲಿ ಮತದಾನ ಶಾಂತಿಯುತವಾಗಿ ನಡೆದಿದ್ದರೆ, ಪಂಜಾಬ್‌ನ ಹಲವೆಡೆ ವಿವಿಧ ಪಕ್ಷಗಳ ಕಾರ್ಯಕರ್ತರ ನಡುವೆ ಸಂಘರ್ಷ ನಡೆದಿದೆ.

ಪಂಜಾಬ್‌ನ ತರನಾ ತರನಾ ಜಿಲ್ಲೆಯ ಗ್ರಾಮವೊಂದರಲ್ಲಿ ಕಾಂಗ್ರೆಸ್‌ ಮತ್ತು ಅಕಾಲಿದಳ ಕಾರ್ಯಕರ್ತರ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಅಕಾಲಿದಳದ ಬೆಂಬಲಿಗರೊಬ್ಬರು ಬಂದೂಕಿನಿಂದ ಗುಂಡು ಹಾರಿಸಿದ್ದಾರೆ. ಗುಂಡು ತಗುಲಿದ್ದರಿಂದ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರಿಗೆ ಗಾಯವಾಗಿದೆ. ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.  ಗುಂಡು ಹಾರಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಂಗ್ರೂರ್‌ ಜಿಲ್ಲೆಯ ಸುಲ್ತಾನ್‌ಪುರದ ಮತಗಟ್ಟೆ ಸಮೀಪ ಕಾಂಗ್ರೆಸ್ ಮತ್ತು ಎಎಪಿ ಕಾರ್ಯಕರ್ತರ ನಡುವೆ ಜಗಳ ನಡೆದಿದೆ. ಘಟನೆಯಲ್ಲಿ ಎರಡೂ ಪಕ್ಷದ ಕಾರ್ಯಕರ್ತರಿಗೆ ಗಾಯಗಳಾಗಿವೆ ಎಂದು ಮೂಲಗಳು ತಿಳಿಸಿವೆ.

2012ರ ಪಂಜಾಬ್‌ ವಿಧಾನಸಭಾ ಚುನಾವಣೆಯಲ್ಲಿ ಶೇ 79ರಷ್ಟು ಜನರು ಮತ ಚಲಾಯಿಸಿದ್ದರು. ಆದರೆ, ಈ ಬಾರಿ ಶೇ 75ರಷ್ಟು ಜನ ಮಾತ್ರ ಮತ ಚಲಾಯಿಸಿದ್ದಾರೆ ಎಂದು ಚುನಾವಣಾ ಆಯೋಗ ಹೇಳಿದೆ.

ಗೋವಾದಲ್ಲಿ ಬೆಳಿಗ್ಗೆ ಮತದಾನ ಆರಂಭವಾದಾಗಿನಿಂದ ಸಂಜೆಯವರೆಗೆ ಮತಗಟ್ಟೆಗಳಲ್ಲಿ ಜನರು ಸಾಲುಗಟ್ಟಿ ನಿಂತಿದ್ದರು. ಒಂದು ಮತಗಟ್ಟೆಯಲ್ಲಿ ಮಾತ್ರ ವಿದ್ಯುನ್ಮಾನ ಮತಯಂತ್ರ ಕೆಟ್ಟಿತ್ತು. ಉಳಿದಂತೆ ರಾಜ್ಯದಲ್ಲಿ ಮತದಾನ ಸರಾಗವಾಗಿ ನಡೆಯಿತು. 2012ರ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ 81.8ರಷ್ಟು ಮತದಾನ ನಡೆದಿತ್ತು ಎಂದು ಚುನಾವಣಾ ಆಯೋಗ ತಿಳಿಸಿದೆ.

ಗೋವಾದ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ, ಕಾಂಗ್ರೆಸ್‌, ಎಎಪಿ  ಮತ್ತು ಶಿವಸೇನಾಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿದ್ದವು.  ಎಎಪಿ ಇದೇ ಮೊದಲ ಬಾರಿ ರಾಜ್ಯದಿಂದ ಸ್ಪರ್ಧಿಸಿದೆ.ಕೈಕೊಟ್ಟ ಯಂತ್ರಗಳು

ಮತದಾರರು ತಾವು ಚಲಾಯಿಸಿದ ಮತ ಅದೇ ಅಭ್ಯರ್ಥಿಗೇ ಹೋಗಿದೆ ಎಂಬುದನ್ನು ರಸೀದಿ ಮೂಲಕ ದೃಢಪಡಿಸುವ  ‘ಮತದಾನ ದೃಢೀಕರಣ  ಯಂತ್ರ’ಗಳನ್ನು ಭಾರತದಲ್ಲಿ ಇದೇ ಮೊದಲ ಬಾರಿ  ಪ್ರಾಯೋಗಿಕವಾಗಿ ಬಳಸಲಾಗಿತ್ತು. ಗೋವಾ ಮತ್ತು ಪಂಜಾಬ್‌ನ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಷ್ಟೇ ಇವನ್ನು ಬಳಸಲಾಗಿತ್ತು. ಎರಡೂ ರಾಜ್ಯಗಳ ಕೆಲವೆಡೆ ಈ ಯಂತ್ರಗಳು ಕೆಟ್ಟುಹೋದ್ದರಿಂದ ಮತದಾನಕ್ಕೆ ಅಡಚಣೆಯಾಯಿತು. ನಂತರ ಅವನ್ನು ಸರಿಪಡಿಸಲಾಯಿತು ಎಂದು ಚುನಾವಣಾ ಆಯೋಗ ತಿಳಿಸಿದೆ.ಅವಧಿ ಮುಗಿದರೂ ಮತದಾನ

ಪಂಜಾಬ್‌ನಲ್ಲಿ ಮಧ್ಯಾಹ್ನ 3ರವರೆಗೆ ಮತದಾನ ನೀರಸವಾಗಿತ್ತು. ಆದರೆ ಆನಂತರ ಮತದಾರರು ಮತಗಟ್ಟೆಗಳ ಎದುರು ಸಾಲುಗಟ್ಟಲಾರಂಭಿಸಿದರು.  ಹೀಗಾಗಿ ಮತದಾನದ ಅವಧಿ ಮುಗಿದಾಗ, ಮತಗಟ್ಟೆಯೊಳಗೆ ಇದ್ದವರಿಗೆ ಮತ ಚಲಾಯಿಸಲು ಅವಕಾಶ ನೀಡಲಾಯಿತು ಎಂದು ಆಯೋಗದ ಮೂಲಗಳು ತಿಳಿಸಿವೆ.106ರ ವೃದ್ಧೆಯ ಮತ

ಪಂಜಾಬ್‌ನ ಲೂಧಿಯಾನಾದ ಮತಗಟ್ಟೆಯೊಂದರಲ್ಲಿ 106 ವರ್ಷದ ಮಾಲಾದೇವಿ ಅವರು ಮತ ಚಲಾಯಿಸಿದರು. ಅವರನ್ನು ಮನೆಯಿಂದ ಮತಗಟ್ಟೆಗೆ ಕರೆತರಲು ಮತ್ತು ಮನೆಗೆ ವಾಪಾಸ್ ಕರೆದೊಯ್ಯಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿತ್ತು.* ಗೋವಾದಲ್ಲಿ ಶಾಂತಿಯುತ ದಾಖಲೆಯ ಮತದಾನ

* ಪಂಜಾಬ್‌ನ ಕೆಲವೆಡೆ ಘರ್ಷಣೆ; ಗುಂಡು ಹಾರಿಸಿದ ಅಕಾಲಿದಳ ಬೆಂಬಲಿಗ

* ಮಾ.11ಕ್ಕೆ ಫಲಿತಾಂಶಅಧಿಕಾರಕ್ಕಾಗಿ ಭಾರಿ ಪೈಪೋಟಿ

* 1,145 ಪಂಜಾಬ್‌ನಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳ ಸಂಖ್ಯೆ

* 250 ಗೋವಾದ ಕಣಕ್ಕಿಳಿದಿರುವ  ಅಭ್ಯರ್ಥಿಗಳ ಸಂಖ್ಯೆ

ಮೊದಲ ಬಾರಿ ಪ್ರಯೋಗ 

ಗಡಿ ಪ್ರದೇಶದಲ್ಲಿರುವ ಸೈನಿಕರಿಗೆ ಇದೇ ಮೊದಲ ಬಾರಿ ಇ–ಮೇಲ್‌ನಲ್ಲಿ ಮತಪತ್ರ ರವಾನಿಸಲಾಯಿತು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry