ಹೊಸ ‘ಆಹಾರ ಸೂತ್ರ’ದ ಚಮತ್ಕಾರ!

7
ರಾಜ್ಯದಲ್ಲಿ ತೀವ್ರ ಬರಗಾಲವಿದ್ದರೂ ಕ್ಷೀರ ಸಮೃದ್ಧಿ: ರೈತರಿಗೆ ಉತ್ತಮ ಆದಾಯ

ಹೊಸ ‘ಆಹಾರ ಸೂತ್ರ’ದ ಚಮತ್ಕಾರ!

Published:
Updated:
ಹೊಸ ‘ಆಹಾರ ಸೂತ್ರ’ದ ಚಮತ್ಕಾರ!

ಬೆಂಗಳೂರು: ರಾಜ್ಯ ಎದುರಿಸುತ್ತಿರುವ  ಭೀಕರ ಬರಗಾಲದಲ್ಲೂ ಹೈನುಗಾರಿಕೆ ನೆಚ್ಚಿಕೊಂಡಿರುವ ನಾಡಿನ ರೈತರು ಉತ್ತಮ ಹಣ ಸಂಪಾದನೆ ಮಾಡುತ್ತಿದ್ದಾರೆ.ಇದಕ್ಕೆ ಮುಖ್ಯ ಕಾರಣ, ಬರದ ಮಧ್ಯೆಯೂ ಹಾಲಿನ ಉತ್ಪಾದನೆ ಕುಸಿಯದೇ ಇಳುವರಿ ಹೆಚ್ಚುತ್ತಿರುವುದು. ಬರದಿಂದಾಗಿ ನೀರು, ಮೇವಿನ ಕೊರತೆಯ ಇದ್ದರೂ ಹಸುಗಳು ಹೆಚ್ಚಿನ ಪ್ರಮಾಣದಲ್ಲಿ ಹಾಲು ನೀಡಲು ಸಾಧ್ಯವಾಗಿರುವುದು ಪಶು ಆಹಾರದಲ್ಲಿ ಬದಲಿಸಿರುವ ಸೂತ್ರ!‘ಬರದಿಂದಾಗಿ ದೇಶದ ಬಹುತೇಕ ಭಾಗಗಳಲ್ಲಿ ಹಾಲಿನ  ಇಳುವರಿ ಕಡಿಮೆ ಆಗಿದೆ. ಆದರೆ, ರಾಜ್ಯದಲ್ಲಿ ಮಾತ್ರ ಹಾಲಿನ ಉತ್ಪಾದನೆ ಹೆಚ್ಚಾಗಿದೆ. ಇದಕ್ಕೆ  ಪಶು ಆಹಾರದ ಸೂತ್ರ ಬದಲಾಯಿಸಿರುವುದೇ ಕಾರಣ’ ಎನ್ನುತ್ತಾರೆ ಎನ್‌ಡಿಆರ್‌ಐನ  ವಿಜ್ಞಾನಿ ಡಾ. ಬಂದ್ಲಾ ಶ್ರೀನಿವಾಸ್‌.‘ರೈತರ ಆದಾಯವನ್ನು ಹೆಚ್ಚಿಸುವ ಉದ್ದೇಶದಿಂದ ಪಶು ಆಹಾರಕ್ಕೆ ಸೇರಿಸುವ ಪದಾರ್ಥಗಳ ಸೂತ್ರವನ್ನು ಬದಲಿಸಿದೆವು. ಇದನ್ನು ಕೆಎಂಎಫ್‌ ಪಶು ಆಹಾರಕ್ಕೆ ಅಳವಡಿಸಲು ಒಪ್ಪಿಕೊಂಡಿದ್ದರಿಂದ ಹಾಲಿನ ಉತ್ಪಾದನೆ, ಗುಣಮಟ್ಟ ಹೆಚ್ಚಿದೆ.ವಿಶೇಷವಾಗಿ ಬರದ ಸಂದರ್ಭದಲ್ಲೂ ಹಾಲಿನ ಇಳುವರಿ ಮತ್ತು ಗುಣಮಟ್ಟ ಕಡಿಮೆ ಆಗಿಲ್ಲ. ಬರ ಇದ್ದಾಗ ಎಸ್‌ಎನ್‌ಎಫ್‌(ಸಾಲಿಡ್‌ ನಾಟ್‌ ಫ್ಯಾಟ್‌) ಪ್ರಮಾಣ ಶೇ 15 ರಷ್ಟು ಕುಸಿಯುತ್ತದೆ.  ಹೊಸ ಆಹಾರ ಸೂತ್ರದಿಂದ ಆ ಪ್ರಮಾಣ ಕಡಿಮೆ ಆಗಿಲ್ಲ’ ಎಂದು ಶ್ರೀನಿವಾಸ್‌ ತಿಳಿಸಿದರು.‘ಕೆಎಂಎಫ್‌ನ ಹೊಸ ಪಶು ಆಹಾರ ‘ನಂದಿನಿ ಗೋಲ್ಡ್‌’ ತಿನ್ನುವ ಪ್ರತಿ ಹಸು ಉತ್ಪಾದಿಸುವ ಹಾಲಿನ  ಪ್ರಮಾಣ ಸರಾಸರಿ 1 ಲೀಟರ್‌ಗಳಿಂದ 2 ಲೀಟರ್‌ಗಳಿಗೆ ಹೆಚ್ಚಳವಾಗಿದೆ. ಅಂದರೆ, ಪ್ರತಿ ಹಸುವಿನ ಇಳುವರಿ ಸರಾಸರಿ 8 ಲೀಟರ್‌ ಇದ್ದದ್ದು 9.5 ರಿಂದ 10.5 ಲೀಟರ್‌ಗಳಿಗೆ ಹೆಚ್ಚಳವಾಗಿದೆ.

ಹಾಲಿನಲ್ಲಿರುವ ಕೊಬ್ಬಿನ ಪ್ರಮಾಣವೂ ಶೇ 3.0  ರಿಂದ ಶೇ 4.7 ಕ್ಕೆ ಹೆಚ್ಚಳವಾಗಿದೆ’ ಎನ್ನುತ್ತಾರೆ ಕೆಎಂಎಫ್‌ ಅಧ್ಯಕ್ಷ ಪಿ.ನಾಗರಾಜು. ಪ್ರತಿ ರೈತನಿಗೆ ದಿನಕ್ಕೆ  ಒಂದು ಹಸುವಿನಿಂದ (ಹೆಚ್ಚುವರಿ) ₹  45,  ವರ್ಷಕ್ಕೆ ₹ 16, 200 ಗಳಷ್ಟು ಆದಾಯ ಹೆಚ್ಚಿದೆ. ರಾಜ್ಯದಲ್ಲಿರುವ 4.3 ಲಕ್ಷ ರೈತರಿಗೆ ವರ್ಷಕ್ಕೆ ₹ 648 ಕೋಟಿ ಹೆಚ್ಚುವರಿ ಆದಾಯ ಸಿಗುತ್ತಿದೆ ಎಂದರು.ವಿಜ್ಞಾನಿಗಳು ಮಾಡಿದ್ದೇನು?: ಪಶು ಆಹಾರಕ್ಕೆ ಬಳಸುತ್ತಿದ್ದ ಕಚ್ಚಾ  ಪದಾರ್ಥಗಳ ಬಳಕೆಯ ಪ್ರಮಾಣವನ್ನು ಬದಲಾಯಿಸಿದರು.  ಈ ಹಿಂದಿನ ಫಾರ್ಮುಲಾ ಪ್ರಕಾರ, ಅಕ್ಕಿ ತೌಡು(ಎಣ್ಣೆ ಸಹಿತ) ಶೇ 40 ರಿಂದ ಶೇ 51, ಮುಸುಕಿನ ಜೋಳ ಶೇ 6 ರಿಂದ ಶೇ 18, ಅಕ್ಕಿ ತೌಡು(ಎಣ್ಣೆ ಸಹಿತ) ಶೇ 8, ಎಣ್ಣೆ ಬೀಜದ ಹಿಂಡಿ ಶೇ 6 ಇತ್ತು.‘ಹೊಸ ಸೂತ್ರದಲ್ಲಿ ಅಕ್ಕಿ ತೌಡು(ಎಣ್ಣೆ ರಹಿತ) ಶೇ 10, ಮುಸುಕಿನ ಜೋಳ ಶೇ 40, ಅಕ್ಕಿ ತೌಡು (ಎಣ್ಣೆ ಸಹಿತ) ಶೇ 5 ಮತ್ತು ಎಣ್ಣೆ ಬೀಜದ ಹಿಂಡಿ ಶೇ 11 ಮಿಶ್ರಣ ಮಾಡಲಾಗುತ್ತಿದೆ’ ಎಂದು ಮತ್ತೊಬ್ಬ ಪಶು ಆಹಾರ ತಜ್ಞ ಡಾ.ನಾಗೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.ಈ ಹಿಂದಿನ ಪಶು ಆಹಾರದಲ್ಲಿ ಎಣ್ಣೆ ರಹಿತ ಅಕ್ಕಿ ತೌಡು ಬಳಸಲಾಗುತ್ತಿತ್ತು. ಇದರಿಂದ ಹಸುಗಳು ಆಗಾಗ್ಗೆ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದವು. ಗರ್ಭ ಧರಿಸುವ ಸಾಮರ್ಥ್ಯವೂ ಇಳಿಕೆಯಾಗಿ  ಕಡಿಮೆ ಪ್ರಮಾಣದಲ್ಲಿ ಹಾಲು ಕೊಡುತ್ತಿದ್ದವು. ಮೊದಲು ಬೈಪಾಸ್‌ ನ್ಯೂಟ್ರಿಷಿಯನ್‌ ಸೂತ್ರ ಬಳಸಲಾಗುತ್ತಿತ್ತು. ಈಗ ಎನರ್ಜಿ ಸೂತ್ರ ಬಳಸಲಾಗುತ್ತಿದೆ’ ಎಂದು ತಿಳಿಸಿದರು.‘ಪ್ರಸ್ತುತ ರೈತರಿಂದ ದಿನಕ್ಕೆ 2,500 ಟನ್‌ ಪಶು ಆಹಾರಕ್ಕೆ ಬೇಡಿಕೆ ಇದ್ದು, ಕೇವಲ 1,400 ಟನ್‌ಗಳಷ್ಟು ಮಾತ್ರ ಉತ್ಪಾದಿಸಲು ಸಾಧ್ಯವಾಗುತ್ತಿದೆ’ ಎನ್ನುತ್ತಾರೆ ನಾಗರಾಜು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry