7

ಮರೀಚಿಕೆಯಾಗಿರುವ ಹೊಸ ಹೂಡಿಕೆ

ಕೆ. ಜಿ. ಕೃಪಾಲ್
Published:
Updated:

ಇಂದಿನ ವ್ಯಾವಹಾರಿಕ ಶೈಲಿಗಳು ಎಷ್ಟು ತ್ವರಿತವಾದ ಬದಲಾವಣೆಗಳನ್ನು ಕಾಣುತ್ತವೆ ಎಂಬುದಕ್ಕೆ ಸೋಮವಾರ  ದೂರಸಂಪರ್ಕ ಕಂಪೆನಿಗಳಾದ ಐಡಿಯಾ ಸೆಲ್ಯುಲರ್ ಮತ್ತು ವಿನಿಮಯ ಕೇಂದ್ರದಲ್ಲಿ ವಹಿವಾಟಿಗೆ ಲಿಸ್ಟ್ ಆಗದೆ ಇರುವ  ಕಂಪೆನಿ ವೊಡಾಫೋನ್ ವಿಲೀನ ಮಾತುಕತೆ ನಡೆಸುತ್ತಿವೆ ಎಂಬ ಸುದ್ದಿಯು ಐಡಿಯಾ ಸೆಲ್ಯುಲರ್  ಷೇರಿನ ಬೆಲೆಯಲ್ಲಿ ಮಿಂಚು ಸಂಚರಿಸುವಂತೆ ಮಾಡಿತು. ದಿನದ ಆರಂಭದಲ್ಲಿ ₹ 79 ರ ಸಮೀಪದಿಂದ ₹100.50 ಕ್ಕೆ ಏರಿಕೆ ಕಂಡು ನಂತರ ₹97.95 ರಲ್ಲಿ ಕೊನೆಗೊಂಡು ₹20 ರಷ್ಟು  ಅಂದರೆ  ಶೇ 25ಕ್ಕೂ ಹೆಚ್ಚಿನ  ಏರಿಕೆ ಕಂಡಿತು. ಈ ಪ್ರಭಾವದಿಂದ ಮತ್ತೊಂದು ಪ್ರಮುಖ ಟೆಲಿಕಾಂ ಕಂಪೆನಿ ಭಾರ್ತಿ ಏರ್‌ಟೆಲ್‌  ಷೇರಿನ ಬೆಲೆಯೂ ಸಹ ಆರಂಭಿಕ ದರ ₹324 ರ ಸಮೀಪದಿಂದ ₹370 ಕ್ಕೆ ಜಿಗಿಯಿತು. ನಂತರ ₹347 ರ ಸಮೀಪ ಅಂತ್ಯ ಕಂಡಿತು.  ಈ ರೀತಿಯ ಬೆಳವಣಿಗೆ ಅನಿರೀಕ್ಷಿತವಾಗಿತ್ತು. ಲಾಭ ನಗದು ಮಾಡಿಕೊಳ್ಳಲು  ಉತ್ತಮ ಅವಕಾಶ ಕಲ್ಪಿಸಿಕೊಟ್ಟಿತ್ತು.ಷೇರು ಪೇಟೆಯ  ಚಲನೆ ಹೇಗಿರುತ್ತದೆ ಎಂಬುದಕ್ಕೆ ಬುಧವಾರದ ಈ ಬೆಳವಣಿಗೆ ಗಮನಿಸಿ.  ದಿನದ ಮಧ್ಯಂತರದಲ್ಲಿ ಕೋಟಕ್ ಮಹೀಂದ್ರಾ ಬ್ಯಾಂಕ್ ಷೇರಿನ ಬೆಲೆ ₹778 ರ ಸಮೀಪದಿಂದ  ಏಕಮುಖವಾಗಿ ₹739 ರ ಸಮೀಪಕ್ಕೆ ಕುಸಿದು ನಂತರ ಅದೇ ರೀತಿ ಪುಟಿದೆದ್ದು ₹776 ರ ಸಮೀಪಕ್ಕೆ ತಲುಪಿತು.  ಈ ಅಸಹಜ ಏರಿಳಿತಕ್ಕೆ ಅಂದು ಬಜೆಟ್ ಮಂಡನೆಯಂತೂ ಕಾರಣವಲ್ಲ.  ಈ ರೀತಿಯ ಚಲನೆಗೆ   ಭಾರತೀಯ ರಿಸರ್ವ್ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್‌ಗೆ ತನ್ನ ಸದ್ಯದ ಶೇ 33.61ರ  ಪ್ರವರ್ತಕರ ಭಾಗಿತ್ವವನ್ನು ಜೂನ್ ಅಂತ್ಯದೊಳಗೆ ಶೇ 30ಕ್ಕೆ, ಡಿಸೆಂಬರ್ ಅಂತ್ಯದೊಳಗೆ ಶೇ 20ಕ್ಕೆ,  ಮಾರ್ಚ್ ಅಂತ್ಯದೊಳಗೆ ಶೇ 15 ಕ್ಕೆ ಇಳಿಸಬೇಕೆಂದು ನೀಡಿದ ಆದೇಶ  ಕಾರಣವಾಗಿದೆ. ಮರುದಿನವೂ ₹798 ರವರೆಗೂ ಏರಿಕೆ ಕಂಡಿತು.  ಇದು ಪೇಟೆಯು ಒದಗಿಸುವ ಮಧ್ಯಂತರದ  ಅವಕಾಶವಾಗಿರುತ್ತದೆ.  ಷೇರಿನ ಬೆಲೆ ಏರಿಕೆ ಕಂಡಾಗ ಲಾಭದ ನಗದೀಕರಣ ಮಾಡಿಕೊಂಡು ನಗದು ಸಿದ್ಧವಾಗಿದ್ದರೆ ಅದೇ ಕಂಪೆನಿಯ ಷೇರು ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾದ ಅವಕಾಶ ಒದಗಿಸುವ ಸಾಧ್ಯತೆ ಇದೆ ಎಂಬುದನ್ನು ದೃಢಪಡಿಸುತ್ತದೆ.'ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್ ' ಶೈಲಿಯ ವಹಿವಾಟು ಪೇಟೆಯಲ್ಲಿ ತಾಂಡವವಾಡುತ್ತಿರುವುದನ್ನು ಅನೇಕ ದೃಷ್ಟಾಂತಗಳಿಂದ ಅರಿಯಬಹುದಾಗಿದೆ.   ದಿವೀಸ್ ಲ್ಯಾಬೊರೇಟರೀಸ್  ಕಂಪೆನಿಯ ಷೇರಿನ ಬೆಲೆಯು ಗುರುವಾರ ₹686 ರ ಕನಿಷ್ಠ ಬೆಲೆಯಿಂದ ₹742 ರವರೆಗೂ ಜಿಗಿತ ಕಂಡಿತು.  ಈ ಷೇರಿನ ಬೆಲೆಯು ₹672 ರವರೆಗೂ  ತಲುಪಿ ವಾರ್ಷಿಕ ಕನಿಷ್ಠ ದಾಖಲಿಸಿತ್ತು.   ಡಿಸೆಂಬರ್ 21 ರಂದು  ₹1,100 ರ ಸಮೀಪವಿದ್ದ ಷೇರಿನ ಬೆಲೆ ಅಮೆರಿಕದ ಎಫ್ ಡಿ ಎ ಕ್ರಮದಿಂದ ₹672 ರವರೆಗೂ ಕುಸಿತ ಕಂಡಿತ್ತು.  ಈ ರೀತಿಯ ಬೆಳವಣಿಗೆಯು ದೀರ್ಘಕಾಲಿನ ಹೂಡಿಕೆದಾರರಿಗೆ  ಉತ್ತಮ ಅವಕಾಶವಾಗುತ್ತದೆ.   ಕಂಪೆನಿಯು ಈ ತಿಂಗಳ 4 ರಂದು ತ್ರೈಮಾಸಿಕ ಫಲಿತಾಂಶ ಪ್ರಕಟಿಸುವುದಾಗಿ 23 ರಂದು ಪ್ರಕಟಿಸಿತ್ತು. ಅದು ಯಾವುದೇ ಪ್ರಭಾವ ಬೀರದಿದ್ದರೂ, ಆ ದಿನ ಹತ್ತಿರ ಬಂದ ಕಾರಣ ಕೊಳ್ಳುವಿಕೆಯ ಒತ್ತಡವು ಷೇರಿನ ಬೆಲೆ ಏರಿಕೆಗೆ ಕಾರಣವಾಗಿತ್ತು. ಇದು ಅಲ್ಪಕಾಲೀನ ಅವಕಾಶಗಳನ್ನು ಒದಗಿಸುವ ನಮೂನೆಯಾಗಿದೆ.ಅದೇ ರೀತಿ ಭಾರತ್ ಫೈನಾನ್ಷಿಯಲ್ ಇನ್‌ಕ್ಲು ಷನ್ ಕಂಪೆನಿಯು ಡಿಸೆಂಬರ್ ಮೊದಲ ವಾರದಲ್ಲಿದ್ದ  ₹720 ರ ಸಮೀಪದಿಂದ, ನೋಟುಗಳ ಅಮಾನ್ಯತೆಯ ನೆಪದಿಂದ ₹465 ರವರೆಗೂ ಕುಸಿದಿತ್ತು. ಈ ವಾರ ಅತ್ಯುತ್ತಮ, ಅನಿರೀಕ್ಷಿತ ಮಟ್ಟದ ಅಂಕಿ ಅಂಶ ಪ್ರಕಟಿಸಿದ ಕಾರಣ ಏರಿಕೆಯಲ್ಲಿತ್ತು. ಈ ವಾರ ಷೇರಿನ ಬೆಲೆಯು ₹853 ರವರೆಗೂ ಜಿಗಿತ ಕಂಡಿತು. ಈ ರೀತಿಯ ಜಿಗಿತಕ್ಕೆ ಈ ಕಂಪೆನಿಯನ್ನು ಖಾಸಗಿ ಬ್ಯಾಂಕ್‌ನಲ್ಲಿ ವಿಲೀನಗೊಳಿಸುವ ಸಾಧ್ಯತೆ ಇದೆ ಎಂಬ ಗಾಳಿಸುದ್ದಿಯು ಕಾರಣವಾಗಿತ್ತು. ಈ ರೀತಿಯ ಸುದ್ದಿಗಳು ಷೇರಿನ ಬೆಳೆಗಳು ಕುಸಿದಾಗಲೇ ತೇಲಿಬಿಡಲಾಗುತ್ತದೆ ಎಂಬುದು ಗಮನಾರ್ಹ ಅಂಶವಾಗಿದೆ.ಒಟ್ಟಾರೆ ಬಜೆಟ್ ವಾರ ಇದಾಗಿದ್ದರಿಂದ ಬಜೆಟ್ ಪೂರ್ವದ ದಿನಗಳಲ್ಲಿ  ಮಾರಾಟದ ಒತ್ತಡದಿಂದ ಸಂವೇದಿ ಸೂಚ್ಯಂಕವು ಇಳಿಕೆಯಲ್ಲಿದ್ದರೆ ಬಜೆಟ್ ದಿನದ ಚಟುವಟಿಕೆ ಭರಿತ ವಹಿವಾಟು ಸೂಚ್ಯಂಕವನ್ನು ಏರಿಕೆಯತ್ತ ಕೊಂಡೊಯ್ದು  ವಾರಾಂತ್ಯದಲ್ಲಿ ಸುಮಾರು 358 ಪಾಯಿಂಟುಗಳ ಏರಿಕೆ ಕಂಡಿತು. ಇದಕ್ಕೆ ಬೆಂಬಲವಾಗಿ ಮಧ್ಯಮ ಶ್ರೇಣಿ ಸೂಚ್ಯಂಕವು 370 ಪಾಯಿಂಟುಗಳ ಏರಿಕೆ ಕಂಡರೆ ಕೆಳಮಧ್ಯಮ ಶ್ರೇಣಿಯ ಸೂಚ್ಯಂಕವು 309 ಪಾಯಿಂಟುಗಳ ಏರಿಕೆ ಕಂಡಿತು. ವಿದೇಶಿ ವಿತ್ತೀಯ ಸಂಸ್ಥೆಗಳು ಸಹ ಬಜೆಟ್ ನಂತರದಲ್ಲಿ ಕೊಳ್ಳುವಿಕೆಯತ್ತ ಸಾಗಿ ಒಟ್ಟು ₹629 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿವೆ.  ಸ್ವದೇಶಿ ವಿತ್ತೀಯ ಸಂಸ್ಥೆಗಳು ಬಜೆಟ್ ದಿನದಂದು ಭಾರಿ ಪ್ರಮಾಣದ ಖರೀದಿ ಮಾಡಿ ಒಟ್ಟು ₹1,257 ಕೋಟಿ ಮೌಲ್ಯದ ಷೇರುಗಳನ್ನು ಖರೀದಿಸಿವೆ. ಪೇಟೆಯ ಬಂಡವಾಳೀಕರಣ ಮೌಲ್ಯ ₹113.87 ಲಕ್ಷ ಕೋಟಿಯಿಂದ ₹115. 49 ಲಕ್ಷ ಕೋಟಿಗೆ ಏರಿಕೆ ಕಂಡಿತು.ಲಾಭಾಂಶ: ಎಸಿಸಿ ಪ್ರತಿ ಷೇರಿಗೆ ₹6,  ಆಯಿಲ್ ಇಂಡಿಯಾ   ₹9.50 (ನಿಗದಿತ ದಿನಾಂಕ : ಫೆ.14), ಇಂಡಿಯನ್ ಆಯಿಲ್ ಕಾರ್ಪೊರೇಷನ್   ₹13.50 (ಫೆ.10),  ಕೇರ್ ರೇಟಿಂಗ್ಸ್  ₹6,  ಶಾರದಾ ಮೋಟಾರ್ಸ್  ₹6.25,  ಜಿ ಇ ಶಿಪ್ಪಿಂಗ್   ₹3.60 ( ಫೆ 15),  ಗಲ್ಫ್ ಆಯಿಲ್ ಕಾರ್ಪೊರೇಷನ್   ₹3.50

(ಮು.ಬೆ ₹2,ಫೆ. 16),  ಟೊರೆಂಟ್ ಫಾರ್ಮಾ  ₹10 ( ಮು ಬೆ : ₹5),  ಮಾರಿಕೊ  ₹2(ಮು.ಬೆ₹1),  ಎಂಆರ್‌ಎಫ್  ₹3 ( ಫೆ.15) ಮತ್ತು ರೇಡಿಂಗ್ಟನ್ ಪ್ರತಿ ಷೇರಿಗೆ ₹2 (ಮು ಬೆ ₹2)ಹೊಸ ಷೇರು:ಕೋಲ್ಕತ್ತ, ಜಯಪುರ, ದೆಹಲಿ ಮತ್ತು ಲೂಧಿಯಾನ ಷೇರು ವಿನಿಮಯ ಕೇಂದ್ರಗಳಲ್ಲಿ ವಹಿವಾಟಾಗುತ್ತಿದ್ದ ರಾಯ್ ದೀಪ್ ಇಂಡಸ್ಟ್ರೀಸ್ ಲಿಮಿಟೆಡ್ ಕಂಪನಿಯು ಫೆಬ್ರುವರಿ 3 ರಿಂದ ಮುಂಬೈ ಷೇರು ವಿನಿಮಯ ಕೇಂದ್ರದ ಎಕ್ಸ್ ಟಿ ವಿಭಾಗದಲ್ಲಿ ವಹಿವಾಟಿಗೆ ಬಿಡುಗಡೆಯಾಗಿದೆ.

ಮುಖಬೆಲೆ ಸೀಳಿಕೆ: ಗಾಯಿತ್ರಿ ಪ್ರಾಜೆಕ್ಟ್ಸ್ ಲಿಮಿಟೆಡ್ ಕಂಪೆನಿಯ ಷೇರಿನ ಮುಖಬೆಲೆಯನ್ನು ₹10 ರಿಂದ ₹2 ಕ್ಕೆ ಸೀಳಲು ಈ ತಿಂಗಳ 13 ನಿಗದಿತ ದಿನವಾಗಿದೆ.ಹಕ್ಕಿನ ಷೇರು: ಸರ್ಕಾರಿ ವಲಯದ ಕೆನರಾ ಬ್ಯಾಂಕ್ ನ ಆಡಳಿತ ಮಂಡಳಿಯು 8 ರಂದು  ಹಕ್ಕಿನ ಷೇರು ವಿತರಣೆಯನ್ನು ಪರಿಶೀಲಿಸಲಿದೆ.  ಒಂದು ತಿಂಗಳಲ್ಲಿ ಷೇರಿನ ಬೆಲೆಯು ₹262 ರ ಸಮೀಪದಿಂದ ₹314ರವರೆಗೂ ಜಿಗಿತ ಕಂಡಿರುವುದನ್ನು ಗಮನದಲ್ಲಿರಿಸಿ ಚಟುವಟಿಕೆ ನಡೆಸುವುದು ಸೂಕ್ತ.

ಕಂಪೆನಿಗಳ ವಿಲೀನ: ಕಳಿಂದಿ ರೇಲ್ ನಿರ್ಮಾಣ್(ಎಂಜಿನೀರ್ಸ್)ಲಿಮಿಟೆಡ್  ಕಂಪೆನಿಯನ್ನು ಟೆಕ್ಸ್ ಮಾಕೋ  ರೇಲ್ ಅಂಡ್ ಎಂಜಿನೀರ್ಸ್ ಲಿಮಿಟೆಡ್‌ನಲ್ಲಿ ವಿಲೀನಗೊಳಿಸಲು ಈ ತಿಂಗಳ 10 ನಿಗದಿತ ದಿನವಾಗಿದೆ.  ₹10 ರ ಮುಖಬೆಲೆ 100  ಕಾಳಿಂದಿ ರೇಲ್ ನಿರ್ಮಾಣ್ (ಇಂಜಿನೀರ್ಸ್) ಲಿಮಿಟೆಡ್ ಷೇರಿಗೆ ₹1 ರ ಮುಖಬೆಲೆಯ  106ಟೆಕ್ಸ್ ಮಾಕೊ  ರೇಲ್ ಅಂಡ್ ಎಂಜಿನೀರ್ಸ್ ಲಿಮಿಟೆಡ್ ಷೇರುಗಳನ್ನು ನೀಡಲಾಗುವುದು.ಅಮಾನತು ರದ್ದು: ಎಸ್‌ಡಿಅಲ್ಯೂಮಿನಿಯಂ ಲಿಮಿಟೆಡ್ ಕಂಪೆನಿಯ ಷೇರಿನ ವಹಿವಾಟಿಗೆ ಫೆ. 1 ರಿಂದ ವಿಧಿಸಬೇಕಾಗಿದ್ದ ಅಮಾನತನ್ನು ಮುಂಬೈ ಷೇರು ವಿನಿಮಯ ಕೇಂದ್ರ ಹಿಂದೆ ಪಡೆದಿದೆ.  ಕಂಪೆನಿಯು ಲಿಸ್ಟಿಂಗ್ ನಿಯಮಾವಳಿ ಅಳವಡಿಕೆಯಲ್ಲಿ ಉಂಟಾಗಿದ್ದ ಲೋಪವನ್ನು ಸರಿಪಡಿಸಿಕೊಂಡ ಕಾರಣ ಅಮಾನತನ್ನು ರದ್ದುಗೊಳಿಸಿದೆ.ಸೀಮಿತ ವಹಿವಾಟಿಗೆ ಅವಕಾಶ: ಗಂಗೋತ್ರಿ ಐರನ್ & ಸ್ಟಿಲ್ ಕಂಪೆನಿ ಲಿಮಿಟೆಡ್, ಎಂಸಿಎಸ್ ಮತ್ತು ಯುನಿಮಿನ್ ಕಂಪೆನಿಗಳನ್ನು ಲಿಸ್ಟಿಂಗ್  ನಿಯಮ ಪಾಲಿನಲ್ಲಿ ಉಂಟಾಗಿರುವ ಲೋಪಗಳ ಕಾರಣ ಫೆಬ್ರುವರಿ 14 ರಿಂದ  ವಹಿವಾಟಿನಿಂದ ಹಿಂದೆ ಪಡೆದಿದೆ. ಮುಂದಿನ ಆರು ತಿಂಗಳ ಅವಧಿಯಲ್ಲಿ ವಾರದ ಮೊದಲನೇ ದಿನ ಅಂದರೆ ಸೋಮವಾರ  ಜಡ್ ಗುಂಪಿನಲ್ಲಿ , ಟ್ರೇಡ್ ಟು ಟ್ರೇಡ್ ಆಧಾರದ ಮೇಲೆ  ಸೀಮಿತ ವಹಿವಾಟಿಗೆ ಅನುಮತಿಸಲಾಗಿದೆ.

ಬಜೆಟ್ ಮಂಡನೆಯಾಗಿ ವೈವಿಧ್ಯಮಯ ವಿಶ್ಲೇಷಣೆಗಳು ಹೊರಹೊಮ್ಮಿವೆ.  ಅಂದು ಸಂವೇದಿ ಸೂಚ್ಯಂಕವು 485 ಪಾಯಿಂಟುಗಳ ಏರಿಕೆಯಿಂದ ಸಕಾರಾತ್ಮಕವಾಗಿ  ಸ್ಪಂದಿಸಿತು. ತದನಂತರ ಇಳಿಕೆಯತ್ತ ಸಾಗಿದೆ.  ಅಂದು ಪೇಟೆಯ ವಹಿವಾಟಿನ ಗಾತ್ರವು ₹6.87 ಲಕ್ಷ ಕೋಟಿಗೆ ತಲುಪಿತ್ತು,  ನಂತರದ ದಿನ ಅದು ₹7.64 ಲಕ್ಷ ಕೋಟಿಗೆ ಜಿಗಿಯಿತು. ಶುಕ್ರವಾರ ಬಿಎಸ್ಇ ಲಿಮಿಟೆಡ್ ಷೇರು ವಹಿವಾಟಿಗೆ ಬಿಡುಗಡೆಯಾಗಿ ಒಂದೂವರೆ ಕೋಟಿಗೂ ಹೆಚ್ಚಿನ ಷೇರುಗಳು ವಹಿವಾಟಾದ ಮೇಲೂ ವಹಿವಾಟಿನ ಗಾತ್ರವು ₹3 ಕೋಟಿಗೆ ಕುಸಿದಿರುವುದು ವಿಸ್ಮಯಕಾರಿಯಾಗಿದೆ.  ಹೂಡಿಕೆ ಎಂಬುದು ಇತ್ತೀಚಿನ ದಿನಗಳಲ್ಲಿ ಮರೀಚಿಕೆಯಂತಾಗಿ ಕೇವಲ ತ್ವರಿತ ಹಣ ಗಳಿಕೆಯೇ ಮುಖ್ಯವಾದ ವಾತಾವರಣವು ಷೇರುಪೇಟೆಗಳಲ್ಲಿ ವಿಜೃಂಭಿಸುತ್ತಿದೆ. ಶುಕ್ರವಾರ ಫಾರ್ಮಾ ವಲಯದ ಸ್ಟ್ರೈಡ್ಸ್ ಶಾಸೂನ್ ಲಿ ಪ್ರಕಟಿಸಿದ ಫಲಿತಾಂಶದ ಸ್ಫೂರ್ತಿಯಿಂದ ಸುಮಾರು ಒಂದು ಸಾವಿರ ರೂಪಾಯಿಗಳ ಸಮೀಪ ವಹಿವಾಟು ಆಗುತ್ತದ್ದ ಷೇರಿನ ಬೆಲೆಯು ಜಿಗಿತ ಕಂಡು   ₹1,259 ರವರೆಗೂ ಏರಿಕೆ ಕಂಡಿದೆ. ಎನ್‌ಎಸ್ಇಯಲ್ಲಿ ಇದರ ಬೆಲೆ ₹1,270   ದಾಟಿತ್ತು.  ನಂತರ ಇಳಿಕೆಯಿಂದ ₹1,194 ಕ್ಕೆ ಕುಸಿಯಿತು.  ಇದು ಪೇಟೆಯ ತಕ್ಷಣದ ಪ್ರತಿಕ್ರಿಯೆಯ ರೀತಿ.ಸರ್ಕಾರಿ ತೈಲ ಮಾರಾಟ ಕಂಪೆನಿ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಪ್ರತಿ ಷೇರಿಗೆ ₹12.50 ಯಂತೆ ಲಾಭಾಂಶ ಪ್ರಕಟಿಸಿದೆ. ಅಂದು ₹365 ರ ಸಮೀಪವಿದ್ದ ಷೇರುಬೆಲೆ ಎರಡೇ ದಿನಗಳಲ್ಲಿ ₹390ನ್ನು ದಾಟಿದೆ.  ಭಾರತ್ ಎಲೆಕ್ಟ್ರಾನಿಕ್ಸ್ ಲಿ ಕಂಪೆನಿ ಷೇರಿನ ಮುಖಬೆಲೆ ಸೀಳಿಕೆ ಪ್ರಕಟಿಸಿದ ಕಾರಣ ₹1624 ರವರೆಗೂ ಏರಿಕೆ ಕಂಡು ವಾರ್ಷಿಕ ದಾಖಲೆ ನಿರ್ಮಿಸಿ ನಂತರ ₹1,545 ರ ಸಮೀಪಕ್ಕೆ ಇಳಿಯಿತು. ಕೇವಲ ₹3 ರ ಲಾಭಾಂಶದ ನಂತರ ₹30 ರಷ್ಟು ಇಳಿಕೆ ಕಂಡಿದೆ.  ಇಂಡಿಯಾ ಟೂರಿಸಂ ಡೆವೆಲಪ್‌ಮೆಂಟ್ ಕಾರ್ಪೊರೇಷನ್ ಲಿ ಕಂಪೆನಿಯ ಷೇರಿನ ಬೆಲೆಯು ಇತ್ತೀಚೆಗಷ್ಟೇ ವಾರ್ಷಿಕ ಗರಿಷ್ಠ ದಾಖಲಿಸಿದ್ದು ನಂತರದಲ್ಲಿ ಅಂದರೆ ಶುಕ್ರವಾರ 27 ರಂದು ಮತ್ತು 3 ರಂದು,  ದಿನದ ಗರಿಷ್ಠ ಅವರಣಮಿತಿ ತಲುಪಿ ಸ್ವಲ್ಪ ಸಮಯದ ನಂತರ ಹೊರಬಂದು ಯಥಾಸ್ಥಿತಿ ವಹಿವಾಟಿಗೆ ಅವಕಾಶಕೊಟ್ಟಿದೆ. ಇದು ಬಹಳಷ್ಟು ಹೂಡಿಕೆದಾರರನ್ನು ಅಪಾಯಕ್ಕೆ ಸಿಲುಕಿಸುವ ಪ್ರಯತ್ನವಿರಬಹುದು.ಬ್ಯಾಂಕಿಂಗ್ ಕಂಪೆನಿಗಳ ಷೇರುಗಳು ಹೆಚ್ಚಿನ ಏರಿಕೆಯಿಂದ ವಿಜೃಂಭಿಸಿವೆ.  ಇದು ಸಹ ತಾತ್ಕಾಲಿಕ ಅಂಶವಾಗಿರಲು ಸಾಧ್ಯ. ಮುಂದೆ ಮತ್ತೊಮ್ಮೆ ಎನ್‌ಪಿಎ  ಪ್ರಭಾವವು ಷೇರಿನ ಬೆಲೆಗಳನ್ನು ಕೆಳಗೆ ತಳ್ಳುವ  ಸಾಧ್ಯತೆಗಳಿವೆ. ಬಿಎಎಸ್‌ಎಫ್ ಷೇರಿನ ಬೆಲೆಯು ಫಲಿತಾಂಶ ಪ್ರಕಟಣೆಗೆ ಮುನ್ನ ಜಿಗಿತ ಕಂಡು ಹಾನಿಕಾರಕ ಅಂಶಗಳಿಂದ ಮಾರಾಟದ ಒತ್ತಡಕ್ಕೊಳಗಾಗಿ ಕುಸಿಯಿತು.  ನೋಟು ಅಮಾನ್ಯತೆ ಪ್ರಭಾವದಿಂದ ಉಂಟಾಗಿರುವ ಪರಿಸ್ಥಿತಿಯನ್ನು ಕಾರ್ಪೋರೇಟ್ ವಲಯ ಸರಿಯಾಗಿ ಬಿಂಬಿಸದೆ ಕೇವಲ ಇತರೆ ಕಾರಣಗಳು ಆದ್ಯತೆ ಪಡೆದುಕೊಂಡಿವೆ. ಮುಂದೆಯೂ ಈ ರೀತಿಯ ಏರಿಳಿತಗಳು ಪ್ರದರ್ಶಿತವಾಗುವ ಸಾಧ್ಯತೆಯಿಂದ 'ವ್ಯಾಲ್ಯೂ ಪಿಕ್ - ಪ್ರಾಫಿಟ್ ಬುಕ್' ವಿಧದ ಚಟುವಟಿಕೆಯೇ ಸುರಕ್ಷಿತ ಮಾದರಿಯಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry