7

ಹೆಚ್ಚು ಆಯ್ಕೆಗಳ ಕ್ಯಾಮೆರಾ ಫೋನ್

ಯು.ಬಿ. ಪವನಜ
Published:
Updated:
ಹೆಚ್ಚು ಆಯ್ಕೆಗಳ ಕ್ಯಾಮೆರಾ ಫೋನ್

ಚೀನಾ ದೇಶದ ಹೋನರ್ (Honor) ಹೆಸರಿನ ಕೆಲವು ಸ್ಮಾರ್ಟ್‌ಫೋನ್‌ಗಳ ವಿಮರ್ಶೆಯನ್ನು ಈ ಅಂಕಣದಲ್ಲಿ ನೀಡಲಾಗಿತ್ತು. ಬಹುತೇಕ ಸ್ಮಾರ್ಟ್‌ಫೋನ್ ಕಂಪೆನಿಗಳಂತೆ ಹೋನರ್ ಕೂಡ ಹಲವು ನಮೂನೆಯ ಮತ್ತು ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿದೆ. ಸುಲಭವಾಗಿ ಕೈಗೆಟುಕುವ ಬೆಲೆಯ ಸಾಮಾನ್ಯ ಫೋನ್‌ಗಳಿಂದ ಹಿಡಿದು ಸ್ವಲ್ಪ ದುಬಾರಿ ಬೆಲೆಯ ಫೋನ್‌ಗಳ ತನಕ ಅದರ ವ್ಯಾಪ್ತಿ ಹಬ್ಬಿದೆ. ಈ ವಾರ ನಾವು ವಿಮರ್ಶಿಸುತ್ತಿರುವುದು ಹೋನರ್ 6 ಎಕ್ಸ್ (Honor 6x).ಗುಣವೈಶಿಷ್ಟ್ಯಗಳು

2.11 ಗಿಗಾಹರ್ಟ್ಸ್ ವೇಗದ ಎಂಟು ಹೃದಯಗಳ ಪ್ರೊಸೆಸರ್ (HiSilicon Kirin 650), 4+64 ಗಿಗಾಬೈಟ್ ಮೆಮೊರಿ, 128 ಗಿಗಾಬೈಟ್ ತನಕ ಅಧಿಕ ಮೆಮೊರಿಗೆ ಮೈಕ್ರೊಎಸ್‌ಡಿ ಕಾರ್ಡ್‌ ಹಾಕುವ ಸೌಲಭ್ಯ, 5.5 ಇಂಚು ಗಾತ್ರದ ಐಪಿಎಸ್ ಪರದೆ, ಗೊರಿಲ್ಲ ಗಾಜು, 1920x1080 ಪಿಕ್ಸೆಲ್ ರೆಸೊಲೂಶನ್, 12+2 ಮೆಗಾಪಿಕ್ಸೆಲ್ ಎರಡು ಲೆನ್ಸ್‌ಗಳ ಪ್ರಾಥಮಿಕ ಮತ್ತು 8 ಮೆಗಾಪಿಕ್ಸೆಲ್ ಸ್ವಂತೀ ಕ್ಯಾಮೆರಾಗಳು, ಎರಡು ಕ್ಯಾಮೆರಾಗಳಿಗೂ ಎಲ್‌ಇಡಿ ಫ್ಲಾಶ್, ಎರಡು ನ್ಯಾನೊಸಿಮ್, 2ಜಿ/3ಜಿ/4ಜಿ, 150.9 x 72.6 x 8.2 ಮಿ.ಮೀ. ಗಾತ್ರ, 162 ಗ್ರಾಂ ತೂಕ, ಬ್ಲೂಟೂತ್, ವೈಫೈ, ಜಿಪಿಎಸ್, ಎಫ್.ಎಂ ರೇಡಿಯೊ, ಯುಎಸ್‌ಬಿ ಓಟಿಜಿ ಸವಲತ್ತು ಇದೆ, 3340 mAh ಶಕ್ತಿಯ ಬ್ಯಾಟರಿ, ಆಂಡ್ರಾಯ್ಡ್ 6.0, ಇತ್ಯಾದಿ. ನಿಗದಿತ ಬೆಲೆ ₹15,999.ಕೈಯಲ್ಲಿ ಹಿಡಿದಾಗ ಒಂದು ಉತ್ತಮ ಮೇಲ್ದರ್ಜೆಯ ಫೋನನ್ನು ಹಿಡಿದ ಭಾವನೆ ಬರುತ್ತದೆ. ಬಲಭಾಗದಲ್ಲಿ ಆನ್/ಆಫ್ ಮತ್ತು ವಾಲ್ಯೂಮ್ ಬಟನ್‌ಗಳಿವೆ. ಮೇಲ್ಭಾಗದಲ್ಲಿ 3.5 ಮಿ.ಮೀ. ಇಯರ್‌ಫೋನ್ ಕಿಂಡಿಯಿದೆ. ಎಡಭಾಗದಲ್ಲಿ ಚಿಕ್ಕ ಪಿನ್ ತೂರಿಸಿದಾಗ ಹೊರಬರುವ ಟ್ರೇ ಇದೆ. ಇದನ್ನು ಎರಡು ನ್ಯಾನೋಸಿಮ್ ಅಥವಾ ಒಂದು ನ್ಯಾನೋ ಸಿಮ್ ಮತ್ತು ಮೆಮೊರಿ ಕಾರ್ಡ್ ಹಾಕಲು ಬಳಸಲಾಗುತ್ತದೆ. ಅಂದರೆ ಮೆಮೊರಿ ಕಾರ್ಡ್ ಹಾಕಿದಾಗ ಎರಡು ಸಿಮ್ ಬಳಸಲು ಸಾಧ್ಯವಿಲ್ಲ. ಯುಎಸ್‌ಬಿ ಓಟಿಜಿ ಸವಲತ್ತು ಇರುವುದರಿಂದ ಮೆಮೊರಿ ಕಾರ್ಡ್ ಬದಲು ಇದನ್ನು ಬಳಸಬಹುದು. ಸಿಮ್-1ರಲ್ಲಿ ಮಾತ್ರ 2ಜಿ/3ಜಿ/4ಜಿ ಸವಲತ್ತು ಇರುವುದು. ಎರಡನೆಯ ಸಿಮ್ 2ಜಿ ಮಾತ್ರ. ಕೆಳಭಾಗದಲ್ಲಿ ಮೈಕ್ರೊಯುಎಸ್‌ಬಿ ಕಿಂಡಿಯಿದೆ. ಫ್ರೇಂನ ಕೆಳಭಾಗದಲ್ಲಿ ಎರಡು ಗ್ರಿಲ್‌ಗಳಿದ್ದು ಸ್ಪೀಕರ್ ಅದರೊಳಗಿದೆ. ಹಿಂಭಾಗದಲ್ಲಿ ಮಧ್ಯಭಾಗದಲ್ಲಿ ಕ್ಯಾಮೆರಾ ಇದೆ.ಅದರ ಕೆಳಭಾಗದಲ್ಲಿ ಬೆರಳಚ್ಚು ಸ್ಕ್ಯಾನರ್ ಇದೆ. ಹಿಂಭಾಗದ ಕವಚ ಸ್ವಲ್ಪ ನಯವಾಗಿದೆ. ದೊರಗಾದ ಕವಚವೊಂದನ್ನು ಹಾಕಿಕೊಂಡರೆ ಉತ್ತಮ. ಈ ಫೋನಿನಲ್ಲಿ ಪರದೆಯ ಕೆಳಭಾಗದಲ್ಲಿ ಹೆಚ್ಚಿನ ಆಂಡ್ರಾಯ್ಡ್ ಫೋನ್‌ಗಳಲ್ಲಿರುವಂತೆ ಮೂರು ಸಾಫ್ಟ್‌ಬಟನ್‌ಗಳಿಲ್ಲ. ಪರದೆಯಲ್ಲೇ ಬೇಕಾದಾಗ ಮೂರು ಬಟನ್‌ಗಳು ಗೋಚರಿಸುತ್ತವೆ. ಇದು ಕೆಲವರಿಗೆ ಇಷ್ಟವಾಗದಿರಬಹುದು. ನನಗಂತೂ ಇದು ಇಷ್ಟವಾಗಲೇ ಇಲ್ಲ. ಎಲ್ಲ ಹೋನರ್ ಫೋನ್‌ಗಳಲ್ಲಿ ಇದೇ ರೀತಿ ಇದೆ. ಕೆಲವು ಆಟ ಆಡುವಾಗ ಈ ಬಟನ್‌ ಮೂಡಿಬರುವುದೇ ಇಲ್ಲ. ಆಟವನ್ನು ಒಂದು ಹಂತದ ತನಕ ತೆಗೆದುಕೊಂಡು ಹೋದ ನಂತರವೇ ಆಟದಲ್ಲೇ ನೀಡಿರುವ ಬಟನ್ ಮೂಲಕ ಅದರಿಂದ ಹೊರಬರಬೇಕು. ಹೋನರ್‌ನವರು ತಮ್ಮದೇ ಇಎಂಯುಐ ಎಂಬ ಯೂಸರ್ ಇಂಟರ್‌ಫೇಸ್ ಬಳಸುತ್ತಾರೆ. ಈ ಇಂಟರ್‌ಫೇಸ್ ಕೂಡ ನನಗೆ ಅಷ್ಟೇನೂ ಹಿಡಿಸಲಿಲ್ಲ.


ಪರದೆಯ ಗುಣಮಟ್ಟ ಉತ್ತಮವಾಗಿದೆ. ಫೋನಿನ ಕೆಲಸದ ವೇಗ ಪರವಾಗಿಲ್ಲ. ವಿಡಿಯೊ ವೀಕ್ಷಣೆ, ಸಾಮಾನ್ಯ ಆಟ ಆಡುವುದು ಎಲ್ಲ ತೃಪ್ತಿದಾಯಕವಾಗಿದೆ. ಆದರೆ ಅಧಿಕ ಶಕ್ತಿಯನ್ನು ಬೇಡುವ ಮೂರು ಆಯಾಮದ ಆಟಗಳನ್ನು ಆಡುವಾಗ ಇದು ಸ್ವಲ್ಪ ಕಷ್ಟಪಡುತ್ತದೆ. ಹೈಡೆಫಿನಿಶನ್ ಸಹಿತ ಬಹುತೇಕ ಎಲ್ಲ ವಿಡಿಯೊಗಳ ವೀಕ್ಷಣೆ ಚೆನ್ನಾಗಿದೆ. 4k ವಿಡಿಯೊ ಪ್ಲೇ ಆಗುತ್ತದೆ. ಇದರ ಆಡಿಯೊ ಇಂಜಿನ್ ಪರವಾಗಿಲ್ಲ. ಇಯರ್‌ಫೋನ್ ನೀಡಿಲ್ಲ. ಬೋಸ್ ಇಯರ್‌ಫೋನ್ ಜೋಡಿಸಿ ಪರಿಶೀಲಿಸಿದೆ. ಆಶ್ಚರ್ಯವೆಂದರೆ ಕಡಿಮೆ ಕಂಪನಾಂಕಗಳ ಧ್ವನಿ (bass) ಬಹುಮಟ್ಟಿಗೆ ತೃಪ್ತಿದಾಯಕವಾಗಿದೆ. ಅಧಿಕ ಕಂಪನಾಂಕ (treble) ಮತ್ತು ಮಧ್ಯಮ ಕಂಪನಾಂಕದ ಧ್ವನಿಗಳ ಪುನರುತ್ಪತ್ತಿಯ ಗುಣಮಟ್ಟ ಇನ್ನೂ ಸ್ವಲ್ಪ ಉತ್ತಮವಾಗಿರಬಹುದಿತ್ತು.

ಇದರಲ್ಲಿ 12 ಮೆಗಾಪಿಕ್ಸೆಲ್ ಮತ್ತು 2 ಮೆಗಾಪಿಕ್ಸೆಲ್‌ಗಳ ಎರಡು ಕ್ಯಾಮೆರಾಗಳಿವೆ. ಒಂದು ಕ್ಯಾಮೆರಾ ಹತ್ತಿರದ ವಸ್ತುವನ್ನು ನಿಖರವಾಗಿ ಫೋಕಸ್ ಮಾಡುವಾಗ ಇನ್ನೊಂದು ಕ್ಯಾಮೆರಾ ಅದರ ಹಿನ್ನೆಲೆಯನ್ನು ಫೋಕಸ್ ಮಾಡುತ್ತದೆ. ಇವರ ಕ್ಯಾಮೆರಾ ಕಿರುತಂತ್ರಾಂಶದಲ್ಲಿ (ಆ್ಯಪ್) ಒಂದು ವಿಶೇಷ ಸವಲತ್ತಿದೆ. ಅದು ವೈಡ್ ಅಪೆರ್ಚರ್. ಅದನ್ನು ಬಳಸಿ ಫೋಟೊ ತೆಗೆದರೆ ನಂತರ ಫೋಟೊದ ಬೇರೆ ಬೇರೆ ಜಾಗಗಳ ಮೇಲೆ ಬೆರಳಿಟ್ಟು ಆಯಾ ಜಾಗಕ್ಕೆ ಫೋಕಸ್ ಮಾಡಬಹುದು. ಅಂದರೆ ನಿಮಗೆ ವ್ಯಕ್ತಿ ಮಾತ್ರ ಬೇಕಿದ್ದರೆ ಹಿನ್ನೆಲೆಯನ್ನು ಮಸುಕಾಗಿಸಬಹುದು ಮತ್ತು ಅಗತ್ಯವಿದ್ದಾಗ ಹಿನ್ನೆಲೆಯನ್ನು ಸ್ಪಷ್ಟಮಾಡಬಹುದು. ಕ್ಯಾಮೆರಾದ ಕಿರುತಂತ್ರಾಂಶದಲ್ಲಿ ಮ್ಯಾನ್ಯುವಲ್ ಫೋಕಸ್ ಆಯ್ಕೆ ಕೂಡ ಇದೆ. ಫೋಟೊಗಳು ಚೆನ್ನಾಗಿ ಮೂಡಿಬರುತ್ತವೆ. ಕಡಿಮೆ ಬೆಳಕಿನಲ್ಲೂ ಒಂದು ಮಟ್ಟಿಗೆ ಉತ್ತಮ ಎನ್ನಬಹುದಾದ ಫೋಟೊ ಬರುತ್ತದೆ. ಈ ಫೋನಿನ ಹೆಚ್ಚುಗಾರಿಕೆ ಇರುವುದು ಇದರ ಕ್ಯಾಮೆರಾದಲ್ಲೇ. ಸ್ವಂತೀ ಕ್ಯಾಮೆರಾ ಪರವಾಗಿಲ್ಲ.

ಇದರಲ್ಲಿ VoLTE ಇದೆ. ಅಂದರೆ ಜಿಯೋ ಸಿಮ್ ಕೆಲಸ ಮಾಡುತ್ತದೆ. HD ಕರೆ ಕೂಡ ಮಾಡಬಹುದು. ಆದರೆ ಇದಕ್ಕಾಗಿ ನೀವು ಪ್ರಾಶಸ್ತ್ಯಗಳಿಗೆ (settings) ಹೋಗಿ ನಿಮ್ಮ ಫೋನಿನಲ್ಲಿ ಒಂದೆರಡು ಆಯ್ಕೆಗಳನ್ನು ಮಾಡಿಕೊಳ್ಳಬೇಕು. ಆಂಡ್ರಾಯ್ಡ್‌ 6.0 ಆಗಿರುವುದರಿಂದ ಕನ್ನಡ ಸರಿಯಾಗಿದೆ. ಕನ್ನಡದ ಯೂಸರ್ ಇಂಟರ್‌ಫೇಸ್ ಕೂಡ ಇದೆ. ಒಟ್ಟಿನಲ್ಲಿ ಹೇಳುವುದಾದರೆ ಉತ್ತಮ ಕ್ಯಾಮೆರಾ ಮಾತ್ರ ನಿಮ್ಮ ಅಗತ್ಯವಾಗಿದ್ದು, ಉಳಿದೆಲ್ಲ ವಿಭಾಗಗಳಲ್ಲಿ ಸ್ವಲ್ಪಮಟ್ಟಿಗೆ ರಾಜಿಗೆ ತಯಾರಿದ್ದರೆ ಈ ಫೋನ್ ನೀವು ಕೊಳ್ಳಬಹುದು. 

***
ವಾರದ ಆ್ಯಪ್ –  ಫೋರ್ ಪ್ಲಸ್
ಮೆದುಳಿಗೆ ಅಲ್ಪಸ್ವಲ್ಪ ಕೆಲಸ ಕೊಡುವ ಅಥವಾ ಬುದ್ಧಿಗೆ ಸಾಣೆಹಿಡಿಯಲು ಸಹಾಯ ಮಾಡುವಂತಹ ಆಟಗಳನ್ನು ದಿನದಲ್ಲಿ ಒಂದಿಷ್ಟು ಹೊತ್ತು ಆಡುವುದು ಉತ್ತಮ. ಅದರಲ್ಲೇನೂ ಅನುಮಾನವಿಲ್ಲ. ಅಂತಹ ಹಲವು ಆಟಗಳು ಲಭ್ಯವಿವೆ. ಅಂತಹ ಆಟಗಳನ್ನು ಈ ಅಂಕಣದಲ್ಲಿ ಆಗಾಗ ನೀಡಲಾಗಿದೆ. ಈ ಸಲವೂ ಅಂತಹ ಒಂದು ಆಟದ ಕಡೆಗೆ ಗಮನ ಹರಿಸೋಣ. ಇದರ ಹೆಸರು Four Plus. ಇದೇ ಹೆಸರಿನಲ್ಲಿ ಗೂಗಲ್ ಪ್ಲೇ ಸ್ಟೋರಿನಲ್ಲಿ ಹುಡುಕಿದರೆ ದೊರೆಯುತ್ತದೆ. bit.ly/gadgetloka265 ಜಾಲತಾಣಕ್ಕೆ ಭೇಟಿ ನೀಡಿಯೂ ಇದನ್ನು ಪಡೆಯಬಹುದು. ಇದರಲ್ಲಿ ಲಭ್ಯವಿರುವ ಬಣ್ಣ ಬಣ್ಣದ ಚೌಕಗಳನ್ನು ಎಳೆದು ತಂದು ಖಾಲಿ ಜಾಗದಲ್ಲಿ ಕೂರಿಸಬೇಕು. ಒಂದೇ ಬಣ್ಣದ ನಾಲ್ಕು ಚೌಕಗಳು ಪಕ್ಕ ಪಕ್ಕ ಬಂದಾಗ ಅವು ಮಾಯವಾಗುತ್ತವೆ ಮತ್ತು ನಿಮಗೆ ಪಾಯಿಂಟ್ ಬರುತ್ತದೆ. ಇನ್ನು ಖಾಲಿ ಜಾಗ ಇಲ್ಲ ಎಂದಾಗ ಆಟ ಮುಗಿಯುತ್ತದೆ. ಸರಳವಾದ, ಹೊತ್ತು ಕಳೆಯಲು ಸಹಕಾರಿಯಾದ, ಜೊತೆಗೆ ಮೆದುಳಿಗೆ ಸ್ವಲ್ಪ ಕೆಲಸವನ್ನೂ ಕೊಡುವ ಒಂದು ಆಟ ಇದು.

ಗ್ಯಾಜೆಟ್‌ ಸುದ್ದಿ – ಸ್ಮಾರ್ಟ್  ಚಾರ್ಜಿಂಗ್ ಕೇಬಲ್
ನಿಮಗೆ ಗೊತ್ತೆ? ನಿಮ್ಮ ಸ್ಮಾರ್ಟ್‌ಫೋನಿನ ಚಾರ್ಜಿಂಗ್ ಕೇಬಲ್ ಕೂಡ ತುಂಬ ಪ್ರಮುಖವಾದುದು. ಕಳಪೆ ಕೇಬಲ್ ಬಳಸಿ ಚಾರ್ಜ್ ಮಾಡಲು ಹೊರಟರೆ ಸರಿಯಾಗಿ ಚಾರ್ಜ್ ಆಗದಿರುವುದು, ಅತಿಯಾಗಿ ಬಿಸಿಯಾಗುವುದು, ಕೆಲವೊಮ್ಮೆ ಬೆಂಕಿ ಕಾಣಿಸಿಕೊಳ್ಳುವುದು, ಇತ್ಯಾದಿ ಸಮಸ್ಯೆಗಳು ಕಂಡುಬರುತ್ತವೆ. ಚಾರ್ಜ್ ಸರಿಯಾಗಿ ಆಗುತ್ತಿದೆಯೇ, ಫೋನಿನ ನಿಗದಿತ ಚಾರ್ಜಿಂಗ್ ವಿದ್ಯುತ್ ಪ್ರವಾಹಕ್ಕಿಂತ ಹೆಚ್ಚು ವಿದ್ಯುತ್ ಪ್ರವಹಿಸುತ್ತಿದೆಯೇ, ಕೇಬಲ್ ಬಿಸಿಯಾಗುತ್ತಿದೆಯೇ, ಇತ್ಯಾದಿ ವಿಷಯಗಳನ್ನು ಕೇಬಲ್ಲೇ ತೋರಿಸುತ್ತಿದ್ದರೆ ಒಳ್ಳೆಯದಲ್ಲವೇ? ಹೌದು. ಅಂತಹ ಕೇಬಲ್ ಬರುತ್ತಿದೆ. ಸದ್ಯಕ್ಕೆ ಇದು ಅಮೆರಿಕದಲ್ಲಿ ಮತ್ತು ಸಿಂಗಪುರಗಳಲ್ಲಿ ಲಭ್ಯವಿದೆ. ಭಾರತಕ್ಕೆ ಯಾವಾಗ ಬರುತ್ತದೋ ಗೊತ್ತಿಲ್ಲ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry