3

‘ಅಮೆರಿಕ ಮೊದಲು’ ಇದೇ ಮೊದಲಲ್ಲ!

ಸುಧೀಂದ್ರ ಬುಧ್ಯ
Published:
Updated:
‘ಅಮೆರಿಕ ಮೊದಲು’ ಇದೇ ಮೊದಲಲ್ಲ!

ಈ ಬಗ್ಗೆ ಇದಮಿತ್ಥಂ ಎಂದು ವ್ಯಾಖ್ಯಾನಿಸುವುದು ಕಷ್ಟ. ಊರ ಬಾಗಿಲನ್ನು ಸಂಪೂರ್ಣ ತೆರೆದಿಡಬೇಕೇ? ಜಡಿದು ಕೂರಬೇಕೇ? ಕಾವಲು ಭಟರನ್ನು ಇಟ್ಟರೆ ಸಾಕೇ ಎಂಬ ಪ್ರಶ್ನೆ ವಲಸಿಗರ ದೇಶ ಅಮೆರಿಕದಲ್ಲಿ ಬಹುದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ.ಕಾರ್ಯಾಂಗಕ್ಕೆ ದೇಶದ ಬಾಗಿಲು ಮುಚ್ಚುವ, ಗಡಿಗೆ ಗೋಡೆ ಕಟ್ಟುವ ಅವಸರ. ಶಾಸಕಾಂಗದಲ್ಲಿ ಏಕಾಭಿಪ್ರಾಯವಿಲ್ಲ. ನ್ಯಾಯಾಂಗ, ಜನರ ಭಾವನೆಗಳನ್ನು ಮತ್ತು ಸರ್ಕಾರದ ಧೋರಣೆಯನ್ನು ತೂಗುವ ಕೆಲಸ ಮಾಡುತ್ತಿದೆ. ಅಮೆರಿಕದ ಪ್ರಜೆಗಳು ಎಂದಿನಂತೆಯೇ ಎರಡು ಹೋಳಾಗಿದ್ದಾರೆ.‘ಅಮೆರಿಕ ಮೊದಲು’ ಎಂದು ಒಂದು ಗುಂಪು ಭಾವನಾತ್ಮಕವಾಗಿ ಕೈ ಎತ್ತಿ ಕೂಗುತ್ತಿದ್ದರೆ, ಇದು ಅಮೆರಿಕದ ಮೌಲ್ಯಗಳಿಗೆ ಮಾಡುತ್ತಿರುವ ಅಪಚಾರ ಎಂದು ಮತ್ತೊಂದು ಗುಂಪು ಧ್ವನಿ ಏರಿಸಿ ನಿಂತಿದೆ. ಇಡೀ ಜಗತ್ತು ಹಿರಿಯಣ್ಣನ ಹೊಸ ನೀತಿಯಿಂದ ತಮಗಾಗುವ ನಷ್ಟ ಏನು ಎಂದು ಆತಂಕದಿಂದ ನೋಡುವಂತಾಗಿದೆ.ಟ್ರಂಪ್ ಆಡಳಿತ 15 ದಿನಗಳ ಹಿಂದೆ ಹೊರಡಿಸಿದ ಆದೇಶ ಈ ಜಟಾಪಟಿಗೆ ಕಾರಣ. ‘ವಿದೇಶಿ ಭಯೋತ್ಪಾದಕರು ಅಮೆರಿಕದೊಳಗೆ ನುಸುಳದಂತೆ ತಡೆಯುವ’ ಆಡಳಿತಾತ್ಮಕ ಆದೇಶ, 7 ಮುಸ್ಲಿಂ ಪ್ರಾಬಲ್ಯ ರಾಷ್ಟ್ರಗಳಾದ ಇರಾಕ್, ಸಿರಿಯಾ, ಇರಾನ್, ಸುಡಾನ್, ಲಿಬಿಯಾ, ಸೊಮಾಲಿಯಾ ಮತ್ತು ಯೆಮನ್ ನಾಗರಿಕರು 90 ದಿನಗಳ ಕಾಲ ಅಮೆರಿಕ ಪ್ರವೇಶಿಸುವಂತಿಲ್ಲ ಎನ್ನುತ್ತಿದೆ.

ಜೊತೆಗೆ ನಿರಾಶ್ರಿತರನ್ನು 4 ತಿಂಗಳ ಅವಧಿಗೆ ನಿರ್ಬಂಧಿಸುವ ವಿಷಯ ಆದೇಶದಲ್ಲಿದೆ. ಈ ಆದೇಶ ಹೊರಬಿದ್ದೊಡನೆ ಸಾಕಷ್ಟು ಪ್ರತಿಭಟನೆ, ಟೀಕೆ ವ್ಯಕ್ತವಾಗಿ, ಈ ಲೇಖನ ಬರೆಯುವ ಹೊತ್ತಿಗೆ ಫೆಡರಲ್ ನ್ಯಾಯಾಲಯ ಆದೇಶ ಕುರಿತ ವಾದ ಪ್ರತಿವಾದವನ್ನು ಆಲಿಸುತ್ತಿದೆ. ಈ ವಿವಾದಾತ್ಮಕ ಆದೇಶವನ್ನು ಕೆಲವು ಪ್ರಶ್ನೆಗಳೊಂದಿಗೇ ನೋಡಬೇಕು.ಈ ನಿರ್ಬಂಧ ಮತಾಧಾರಿತವೇ? ಸಾರಾಸಗಟಾಗಿ ಏಳು ದೇಶಗಳ ನಾಗರಿಕರೆಲ್ಲರನ್ನೂ ನಿರ್ಬಂಧಿಸುವುದು ಸರಿಯೇ? ಇದುವರೆಗೆ ಅಮೆರಿಕದಲ್ಲಿ ನಡೆದ ಭಯೋತ್ಪಾದಕ ಕೃತ್ಯಗಳಲ್ಲಿ ಈ ಏಳು ರಾಷ್ಟ್ರಗಳ ಪಾತ್ರವೇನು? ನಿರಾಶ್ರಿತರನ್ನು ನಿರ್ಬಂಧಿಸಿ ಭಯೋತ್ಪಾದನೆಯನ್ನು ತಡೆಯಬಹುದೇ?

ಈ ಯಾವುದಕ್ಕೂ ಟ್ರಂಪ್ ಹೊರಡಿಸಿರುವ ಆದೇಶದಲ್ಲಿ ಉತ್ತರವಿಲ್ಲ. ಈ ಆದೇಶ ಸಂವಿಧಾನ ಬಾಹಿರವೇ ಎಂಬ ಪ್ರಶ್ನೆಗೆ, ‘ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆ– 1952’ರ ಅನ್ವಯ, ಒಂದೊಮ್ಮೆ ಪೌರತ್ವವಿಲ್ಲದ ವಿದೇಶಿಯರಿಂದ ಅಮೆರಿಕದ ಹಿತಾಸಕ್ತಿಗೆ ಧಕ್ಕೆಯಾಗಬಹುದು ಎಂದು ಕಂಡುಬಂದರೆ, ನಿಗದಿತ ಅವಧಿಗೆ ಪ್ರವೇಶ ನಿಷೇಧಿಸುವ ಅಧಿಕಾರ ಅಧ್ಯಕ್ಷರಿಗೆ ಇದೆ’ ಎಂದು ಅಟಾರ್ನಿ ಜನರಲ್ ಹೇಳುತ್ತಿದ್ದಾರೆ.

‘ಹಾಗಲ್ಲ, 1965ರ ವಲಸೆ ನೀತಿಯ ಪ್ರಕಾರ ಯಾವುದೇ ವ್ಯಕ್ತಿಯ ಜನಾಂಗ, ಲಿಂಗ, ರಾಷ್ಟ್ರೀಯತೆ, ಜನ್ಮಸ್ಥಳವನ್ನು ಮುಖ್ಯವಾಗಿಸಿಕೊಂಡು ವಲಸೆ ವಿಷಯದಲ್ಲಿ ತಾರತಮ್ಯ ಮಾಡುವುದಾಗಲಿ, ಆದ್ಯತೆ ನೀಡುವುದಾಗಲಿ ಕೂಡದು ಎಂದು ಸಂವಿಧಾನ ಹೇಳುತ್ತದೆ’ ಎಂಬುದು ಪ್ರತಿವಾದ.ಟ್ರಂಪ್ ಸರ್ಕಾರ ‘ಇದು ಮುಸ್ಲಿಮರನ್ನು ಗಮನದಲ್ಲಿಟ್ಟು ಹೊರಡಿಸಿದ ಆದೇಶವಲ್ಲ. ಬದಲಿಗೆ ಭಯೋತ್ಪಾದಕ ಚಟುವಟಿಕೆ ಹೆಚ್ಚಾಗಿರುವ ದೇಶಗಳನ್ನು ದೃಷ್ಟಿಯಲ್ಲಿಟ್ಟು, ಅಮೆರಿಕದ ಸುರಕ್ಷತೆಗಾಗಿ ತೆಗೆದುಕೊಂಡಿರುವ ಕ್ರಮ’ ಎಂದು ಸಬೂಬು ನೀಡಿದೆ. ಅದು ಸಮರ್ಪಕ ಉತ್ತರ ಎನಿಸುವುದಿಲ್ಲ. ಇಲ್ಲಿ ಕೆಲವು ಅಂಶಗಳನ್ನು ಗಮನಿಸಬೇಕು.

‘ವಲಸೆ ಮತ್ತು ಭಯೋತ್ಪಾದನೆ’ಯ ಬಗ್ಗೆ ಅಧ್ಯಯನ ನಡೆಸಿರುವ ಕ್ಯಾಟೋ ಸಂಸ್ಥೆಯ ಅಲೆಕ್ಸ್ ನೊರಾಸ್ಟಾ ಅವರ ಪ್ರಕಾರ ‘1975ರಿಂದ 2015ರವರೆಗೆ ನಡೆದಿರುವ ಭಯೋತ್ಪಾದಕ ಕೃತ್ಯಗಳಲ್ಲಿ 3,432 ಮುಂದಿ ಹತ್ಯೆಯಾಗಿದ್ದಾರೆ ಮತ್ತು ಈ ಪೈಕಿ ಶೇಕಡ 88ರಷ್ಟು ಹತ್ಯೆಗೆ ವೀಸಾ ಪಡೆದು ಪ್ರವಾಸಿಗರಾಗಿ, ಅಧ್ಯಯನ, ಕೆಲಸಕ್ಕೆಂದು ಬಂದಿರುವ ವಿದೇಶಿ ಮೂಲದ ವ್ಯಕ್ತಿಗಳು ಸಹಕರಿಸಿದ್ದಾರೆ’. ಆದರೆ ನಿರಾಶ್ರಿತರಾಗಿ ಅಮೆರಿಕಕ್ಕೆ ಬಂದು ಭಯೋತ್ಪಾದಕ ಕೃತ್ಯ ಎಸಗಿದವರ ಸಂಖ್ಯೆ ತೀರಾ ಕಡಿಮೆ ಇದೆ. ಹಾಗಾಗಿ ಭಯೋತ್ಪಾದನೆ ತಡೆಯಲು ನಿರಾಶ್ರಿತರ ವಲಸೆ ನಿರ್ಬಂಧಿಸುತ್ತೇವೆ ಎಂಬ ವಾದ ಬಿದ್ದು ಹೋಗುತ್ತದೆ.ಇನ್ನು, ಕಳೆದ 40 ವರ್ಷಗಳ ಅವಧಿಯಲ್ಲಿ 154 ವಿದೇಶಿಗರು ಅಮೆರಿಕದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸಿದ್ದಾರೆ ಎಂಬುದು ಅಂಕಿಅಂಶ. ಅದರಲ್ಲಿ 17 ಮಂದಿಯಷ್ಟೇ ಈ 7 ರಾಷ್ಟ್ರಗಳಿಂದ ಬಂದವರಾಗಿದ್ದಾರೆ. ಹಾಗಾಗಿ ಈ ಏಳು ರಾಷ್ಟ್ರಗಳನ್ನಷ್ಟೇ ಗಮನದಲ್ಲಿಟ್ಟುಕೊಂಡು ಆದೇಶ ಜಾರಿ ಮಾಡಿದ್ದನ್ನು ಸಮರ್ಥಿಸುವುದು ಹೇಗೆ?

ಸರ್ಕಾರಿ ವಕೀಲರು ‘ಒಬಾಮ ಅವಧಿಯಲ್ಲೇ ಅಮೆರಿಕದ ಭದ್ರತಾ ಸಂಸ್ಥೆಯ (Homeland Securities) ಶಿಫಾರಸಿನ ಮೇಲೆ ಕಾಂಗ್ರೆಸ್ಸಿನಲ್ಲಿ ಅಂಗೀಕರಿಸಲಾದ ‘ಟೆರರಿಸ್ಟ್‌ ಟ್ರಾವಲ್‌ ಪ್ರಿವೆನ್ಷನ್‌ ಆ್ಯಕ್ಟ್‌–  2015’ರಲ್ಲಿ ಈ ರಾಷ್ಟ್ರಗಳ ಉಲ್ಲೇಖವಿದೆ’ ಎಂದು ವಾದಿಸುತ್ತಿದ್ದಾರೆ. ಈ ಬಗ್ಗೆ ಫೆಡರಲ್ ನ್ಯಾಯಾಲಯ ಅಂತಿಮ ತೀರ್ಪು ನೀಡುತ್ತದೋ, ಸರ್ವೋಚ್ಚ ನ್ಯಾಯಾಲಯದವರೆಗೂ ಇದು ಬೆಳೆಯುತ್ತದೋ ನೋಡಬೇಕು.ಟ್ರಂಪ್ ಆಡಳಿತ ಹೇಳಬಹುದಾಗಿದ್ದ, ಆದರೆ ಹೇಳದ ಮತ್ತೊಂದು ಅಂಶ ಇರಬಹುದು. ಕಳೆದ 9 ವರ್ಷಗಳಲ್ಲಿ ಸುಮಾರು 7 ಲಕ್ಷ ನಿರಾಶ್ರಿತರಿಗೆ ಅಮೆರಿಕ ಆಶ್ರಯ ಕಲ್ಪಿಸಿದೆ ಮತ್ತು ಅದರಲ್ಲಿ 3 ಲಕ್ಷ ಮಂದಿ ಈ ಏಳು ದೇಶಗಳಿಂದ ಬಂದವರೇ ಆಗಿದ್ದಾರೆ.

ದೇಶದ ಮೇಲೆ ಬೀಳುತ್ತಿರುವ ಆರ್ಥಿಕ ಹೊರೆಯನ್ನು ತಗ್ಗಿಸಲು, ನಿರಾಶ್ರಿತರನ್ನು ಅಮೆರಿಕ ಬರಮಾಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ ಎಂಬ ಕಾರಣ ಕೊಟ್ಟು ತಾತ್ಕಾಲಿಕವಾಗಿ ಪ್ರವೇಶ ನಿರ್ಬಂಧಿಸಿದ್ದರೆ ಅದಕ್ಕೊಂದು ಅರ್ಥವಿತ್ತು. ಆದರೆ ಈ ಕಾರಣ ಕೊಟ್ಟರೆ, ‘ಜಗತ್ತಿನ ಹಿರಿಯಣ್ಣ’ ಎನಿಸಿಕೊಂಡಿರುವ ಅಮೆರಿಕದ ಪ್ರತಿಷ್ಠೆ ಮುಕ್ಕಾಗುತ್ತದೆ. ಹಾಗಾಗಿ ಟ್ರಂಪ್ ಆಡಳಿತ ಭಯೋತ್ಪಾದನೆಯ ಕಾರಣ ಮುಂದಿಡುತ್ತಿರಬಹುದು.ಉಳಿದಂತೆ, ಅಮೆರಿಕದಲ್ಲಿನ ಈ ಬೆಳವಣಿಗೆ ಗಮನಿಸುತ್ತಿರುವ ಬಹುತೇಕರು, ‘ವಲಸಿಗರಿಂದ ನಿರ್ಮಿತವಾದ ದೇಶ ವಲಸಿಗರನ್ನೇ ನಿರ್ಬಂಧಿಸಬಹುದೇ?’ ಎಂದು ಕೇಳುತ್ತಿದ್ದಾರೆ. ಆದರೆ ಅಮೆರಿಕದ ಇತಿಹಾಸ ನೋಡಿದರೆ ಆ ಪ್ರಶ್ನೆ ಉದ್ಭವವಾಗುವುದಿಲ್ಲ. ಅಮೆರಿಕ ಹಲವು ಸಂದರ್ಭಗಳಲ್ಲಿ, ನಾನಾ ಕಾರಣಗಳನ್ನು ಮುಂದಿಟ್ಟು ತನ್ನ ಬಾಗಿಲನ್ನು ಸಂಪೂರ್ಣ ಮುಚ್ಚುವ, ತನಗೆ ಬೇಕೆಂದಾಗ ಬೇಕಾದವರಿಗಷ್ಟೇ ಬಾಗಿಲು ತೆರೆಯುವ ಕೆಲಸ ಮಾಡಿದೆ.

ಯುದ್ಧ, ಆರ್ಥಿಕ ಸಂಕಷ್ಟ, ಶತ್ರು ದಾಳಿ ಎಂಬ ನೆಪಗಳನ್ನು ಬಳಸಿಕೊಂಡಿದೆ. 1907ರಲ್ಲಿ ಜಾರಿಗೆ ಬಂದ ‘ಜಂಟಲ್ಮನ್ ಅಗ್ರಿಮೆಂಟ್’ ಜಪಾನಿಯರಿಗೆ ಅಮೆರಿಕದ ಬಾಗಿಲನ್ನು ಸಂಪೂರ್ಣ ಮುಚ್ಚಿತ್ತು. ನಂತರ ಜಾರಿಯಾದ ‘ಚೈನಾ ಎಕ್ಸ್‌ಕ್ಲೂಷನ್‌ ಆ್ಯಕ್ಟ್‌’ ಚೀನಾ ಮೂಲದ ನಾಗರಿಕರನ್ನು ಹಲವು ಕಾಲ ಅಮೆರಿಕದಿಂದ ಹೊರಗಿಟ್ಟಿತ್ತು.

ಒಂದು ಹಂತದಲ್ಲಿ ಭಾರತ, ಆಫ್ಘಾನಿಸ್ತಾನ, ಪರ್ಶಿಯಾ, ರಷ್ಯಾ ಮತ್ತು ಆಗ್ನೇಯ ಏಷ್ಯಾದ ಜನರನ್ನೂ ಅಮೆರಿಕ ಒಳಗೆ ಸೇರಿಸುತ್ತಿರಲಿಲ್ಲ. ಆಗಲೂ ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ, ದೇಶದ ಒಳಿತಿಗಾಗಿ ಎಂಬ ಕಾರಣವನ್ನೇ ನೀಡಲಾಗಿತ್ತು. ಈ ಬಗ್ಗೆ ಎರಿಕಾ ಲೀ ‘ಮೇಕಿಂಗ್ ಆಫ್ ಏಷ್ಯನ್ ಅಮೆರಿಕ: ಎ ಹಿಸ್ಟರಿ’ ಕೃತಿಯಲ್ಲಿ ವಿವರವಾಗಿ ದಾಖಲಿಸಿದ್ದಾರೆ. ಎರಡನೇ ವಿಶ್ವಯುದ್ಧದಲ್ಲಿ ಚೀನಾವು ಅಮೆರಿಕದ ಮಿತ್ರರಾಷ್ಟ್ರ ಎಂದು ಗುರುತಿಸಿಕೊಂಡ ಬಳಿಕವಷ್ಟೇ ಈ ಕಾಯ್ದೆಗಳನ್ನು ಕಿತ್ತು ಹಾಕಲಾಯಿತು.ಆದರೆ ಪರ್ಲ್ ಹಾರ್ಬರ್ ದಾಳಿಯ ತರುವಾಯ ‘ಆಪರೇಷನ್‌ ವೆಟ್‌ಬ್ಯಾಕ್‌’ ಎಂಬ ಆದೇಶ ಹೊರಡಿಸಿ ಜಪಾನ್ ಮೂಲದ ಅಮೆರಿಕನ್ನರನ್ನು ವಿಶೇಷ ಶಿಬಿರದಲ್ಲಿ ಇರಿಸಲಾಗಿತ್ತು. ಸಾಕಷ್ಟು ಜನರನ್ನು ದೇಶದಿಂದ ಹೊರದಬ್ಬಿದ್ದೂ ನಡೆದಿತ್ತು. ನಂತರ ಇರಾನ್ ಒತ್ತೆಯಾಳು ಪ್ರಕರಣದ (1979- 1981) ಸಂದರ್ಭದಲ್ಲಿ ಕಾರ್ಟರ್ ಆಡಳಿತ, ಇರಾನ್ ಮೂಲದ ವಲಸಿಗರ ಮೇಲೆ ಮುನಿಸಿಕೊಂಡಿತು.

ವಲಸೆ ಅಧಿಕಾರಿಗಳು ಅಮೆರಿಕದ ಕಾಲೇಜುಗಳಿಗೆ ತೆರಳಿ, ಇರಾನ್ ಮೂಲದ ವಿದ್ಯಾರ್ಥಿಗಳನ್ನು ತಪಾಸಣೆಗೆ ಒಳಪಡಿಸುತ್ತಿದ್ದರು, ಅವರ ಭಾವಚಿತ್ರಗಳನ್ನು ದಾಖಲಿಸುವ ಕೆಲಸವೂ ನಡೆದಿತ್ತು. ದೀರ್ಘ ಅವಧಿವರೆಗೆ ಹೊಸ ವೀಸಾ ನೀಡುವುದನ್ನು ತಡೆಹಿಡಿಯಲಾಗಿತ್ತು. ಇದೇ ವಿಷಯ ಆಧರಿಸಿ ‘ಚೆಕ್ ಪಾಯಿಂಟ್’ ಎನ್ನುವ ಸಿನಿಮಾ ಬಂತು. ನಂತರ ಬಂದ ಅಧ್ಯಕ್ಷರು ಕಾಲಕಾಲಕ್ಕೆ ಒಂದಿಲ್ಲೊಂದು ನಿರ್ಬಂಧದ ಆದೇಶವನ್ನು ಜಾರಿಯಲ್ಲಿಟ್ಟವರೇ.2001ರ 9/11 ಘಟನೆಯ ನಂತರ ಪ್ರವೇಶ ಮತ್ತು ನಿರ್ಗಮನ ದಾಖಲಾತಿ ವ್ಯವಸ್ಥೆ (NSEERS) ಜಾರ್ಜ್‌ ಬುಷ್ ಅಧಿಕಾರದ ಅವಧಿಯಲ್ಲಿ ಜಾರಿಗೆ ಬಂತು. ಆಫ್ಘಾನಿಸ್ತಾನ, ಬಾಂಗ್ಲಾ, ಈಜಿಪ್ಟ್, ಪಾಕಿಸ್ತಾನ, ಕುವೈತ್, ಯುಎಇ ಸೇರಿದಂತೆ ಒಟ್ಟು 25 ದೇಶಗಳ ನಾಗರಿಕರನ್ನು ವಿಶೇಷ ದಾಖಲಾತಿ ಯೋಜನೆಯಡಿ ತರಲಾಗಿತ್ತು.

ಈ ಕ್ರಮ ಅರಬ್ ಮತ್ತು ಮುಸ್ಲಿಂ ನಾಗರಿಕರನ್ನು ಗಮನದಲ್ಲಿಟ್ಟು ತಂದದ್ದರಿಂದ ಆಗಲೂ ಒಂದು ವರ್ಗ ಸರ್ಕಾರದ ವಿರುದ್ಧ ಪ್ರತಿಭಟಿಸಿತ್ತು. ಮೊದಲಿಗೆ, ಹೊಸದಾಗಿ ಅಮೆರಿಕಪ್ರವೇಶಿಸುವ ವಿದೇಶಿ ನಾಗರಿಕರು, ‘ವಿಶೇಷ ದಾಖಲಾತಿ’ ವ್ಯವಸ್ಥೆಗೆ ಒಳಪಟ್ಟಿದ್ದರು. ನಂತರ ಅಮೆರಿಕದಲ್ಲಿ ಅದಾಗಲೇ ಇರುವವರೂ ನಿಯಮಿತವಾಗಿ ಅಧಿಕಾರಿಗಳ ಮುಂದೆ ಹಾಜರಾಗಿ, ದಾಖಲೆಗಳನ್ನು ಪರಿಶೀಲಿಸಿಕೊಳ್ಳಬೇಕು ಎಂಬ ನಿಯಮ ಬಂತು.

ವೀಸಾ ಅವಧಿ ಮುಗಿದ ಬಳಿಕವೂ ಅಮೆರಿಕದಲ್ಲೇ ಉಳಿದವರನ್ನು ಪತ್ತೆಹಚ್ಚಲು ಈ ಕ್ರಮ ಎನ್ನಲಾಗಿತ್ತು. ಅಂದಿನ ಅಟಾರ್ನಿ ಜನರಲ್ ಜಾನ್ ಆಶ್ರಫ್ ‘ಈ ಹೊಸ ಮಾದರಿಯ ಯುದ್ಧದಲ್ಲಿ ನಮ್ಮ ಶತ್ರುಗಳು ಪ್ರವಾಸ, ಶಿಕ್ಷಣ, ನೌಕರಿಯ ಹೆಸರಿನಲ್ಲಿ ನಮ್ಮ ದೇಶವನ್ನು ಪ್ರವೇಶಿಸುತ್ತಿದ್ದಾರೆ. ಅದನ್ನು ತಡೆಯುವುದು ಆಡಳಿತದ ಕರ್ತವ್ಯ’ ಎಂಬ ಮಾತನ್ನು ಆಡಿದ್ದರು.

ಇತ್ತೀಚಿನ ವರ್ಷಗಳಲ್ಲಿ ವಲಸೆ ನಿರ್ಬಂಧದ ಸಾಂವಿಧಾನಿಕ ಅವಕಾಶವನ್ನು ಹೆಚ್ಚಾಗಿ ಬಳಸಿಕೊಂಡವರು ಒಬಾಮ. ಸೈಬರ್ ದಾಳಿ ಆರೋಪ, ಮಾನವ ಹಕ್ಕು ಉಲ್ಲಂಘನೆ, ಜನಾಂಗೀಯ ಹತ್ಯೆ ಆರೋಪಿಗಳಿಗೆ ವೀಸಾ ನಿರಾಕರಿಸುವ ಆದೇಶ ಒಬಾಮ ಅವಧಿಯಲ್ಲಿ ಹೊರಬಿತ್ತು. 2011ರಲ್ಲಿ ಇರಾಕ್ ಮೂಲದ ನಿರಾಶ್ರಿತರಿಗೆ ಪ್ರವೇಶ ಕಲ್ಪಿಸುವ ಪ್ರಕ್ರಿಯೆಯನ್ನು ನಿಧಾನಿಸಲಾಯಿತು.

ಅದಾಗಲೇ ಅಮೆರಿಕದಲ್ಲಿದ್ದ 58 ಸಾವಿರ ಇರಾಕ್ ನಿರಾಶ್ರಿತರನ್ನು ಪುನಃ ತಪಾಸಣೆಗೆ ಒಳಪಡಿಸಲಾಗಿತ್ತು. ಆದರೆ ಹಿಂದಿನ ಅಧ್ಯಕ್ಷರು ಹೊರಡಿಸಿದ ವಲಸೆ ನಿರ್ಬಂಧ ಆದೇಶಕ್ಕೂ, ಟ್ರಂಪ್ ಆದೇಶಕ್ಕೂ ಮುಖ್ಯವಾದ ವ್ಯತ್ಯಾಸವೊಂದಿದೆ. ಹಿಂದಿನ ಅಧ್ಯಕ್ಷರು ಉದ್ದೇಶ ಸ್ಪಷ್ಟಪಡಿಸಿ, ಪುರಾವೆ ಎದುರಿಟ್ಟು ಪ್ರತಿಕ್ರಿಯಾತ್ಮಕವಾಗಿ ಆದೇಶ ಹೊರಡಿಸಿದ್ದರು.

ಆದರೆ ಟ್ರಂಪ್ ಆದೇಶಕ್ಕೆ ಅಂಕಿತ ಹಾಕಿರುವುದು ‘ಅಮೆರಿಕದ ಮೇಲೆ ಆಗಬಹುದಾದ ಸಂಭಾವ್ಯ ದಾಳಿ ತಡೆಗಟ್ಟಲು’ ಎಂಬ ಕಾರಣದಿಂದ. ಆ ಭೀತಿಗೆ ಪೂರಕವಾಗಿ ಗುಪ್ತಚರ ಇಲಾಖೆಯ ವರದಿಯನ್ನೂ ಉಲ್ಲೇಖಿಸಿಲ್ಲ. ಅಂದರೆ ನಿರ್ಧಾರದ ಹಿಂದಿರುವುದು ಊಹೆ. ಹಾಗಾಗಿ ಆಡಳಿತ ತನ್ನ ನಿರ್ಣಯವನ್ನು ಸಮರ್ಥಿಸಿಕೊಳ್ಳುವಲ್ಲಿ ಸೋಲುತ್ತಿದೆ.ಇನ್ನು ಟ್ರಂಪ್ ಪ್ರಮಾಣ ಸ್ವೀಕರಿಸುವಾಗ, ‘ಅಮೆರಿಕ ಮೊದಲು’ ಎಂಬ ಧೋರಣೆ ನನ್ನದು ಎಂದಿದ್ದರು. ಅವರು ಹೊರಡಿಸುತ್ತಿರುವ ಎಲ್ಲ ಆದೇಶಗಳಲ್ಲೂ ಆ ಛಾಯೆ ಕಾಣುತ್ತಿದೆ. ಭದ್ರತೆ, ಉದ್ಯೋಗ ಸೃಷ್ಟಿ, ವಾಣಿಜ್ಯ ಒಪ್ಪಂದ, ರಾಜತಾಂತ್ರಿಕ ನಿರ್ಧಾರಗಳು ‘ಅಮೆರಿಕ ಮೊದಲು’ ಎಂಬ ಹಿನ್ನೆಲೆಯಲ್ಲೇ ರೂಪುಗೊಳ್ಳುತ್ತಿವೆ. ಆದರಿದು ಅಮೆರಿಕದ ಹೊಸ ಧೋರಣೆಯೇನೂ ಅಲ್ಲ. ಹಿಂದಿನಿಂದಲೂ ಸ್ವಹಿತಾಸಕ್ತಿ ಪೊರೆಯಲು ಅದು ಹಲವು ಯುದ್ಧಗಳನ್ನು ಸಾರಿದೆ, ಮೇಲೆರಗಿದವರ ಬೆನ್ನಟ್ಟಿ ಬಡಿದು ಬಂದಿದೆ. ಬೇಕಾದಾಗ ಬರಸೆಳೆದುಕೊಂಡು, ಬೇಡವಾದಾಗ ದೂರ ಇಟ್ಟಿದೆ.

ಒಂದೊಮ್ಮೆ ಟ್ರಂಪ್, ಜಾಗತಿಕ ಭಯೋತ್ಪಾದನೆಯನ್ನು ಗಂಭೀರವಾಗಿ ಪರಿಗಣಿಸಿದ್ದರೆ, ವಲಸೆ ನಿರ್ಬಂಧ ಎಂಬ ಮೊಂಡು ಆಯುಧವನ್ನು ಬಿಸುಟಿ, ಪ್ರಬಲ ಅಸ್ತ್ರವನ್ನೇ ಹುಡುಕಬೇಕಿದೆ. ಒಂದು ಹಂತದಲ್ಲಿ ತನ್ನ ಲಾಭಕ್ಕಾಗಿ ಭಯೋತ್ಪಾದಕರನ್ನು ಹುಟ್ಟುಹಾಕಿದ್ದ ಅಮೆರಿಕಕ್ಕೆ, ಜಾಗತಿಕ ಭಯೋತ್ಪಾದನೆಗೆ ಶಕ್ತಿ ತುಂಬುತ್ತಿರುವ ರಾಷ್ಟ್ರಗಳು ಯಾವುವು, ಉಗ್ರರಿಗೆ ಶಸ್ತ್ರಗಳು ಎಲ್ಲಿಂದ ಸರಬರಾಜು ಆಗುತ್ತಿವೆ ಎಂಬುದನ್ನು ಮತ್ತೊಬ್ಬರು ಹೇಳಬೇಕಿಲ್ಲ.

2001ರ ಸೆಪ್ಟೆಂಬರ್‌ 11ರಂದು ನಡೆದ ದಾಳಿಯ ಹಿಂದೆ ಯಾವ ದೇಶಗಳು ಇದ್ದವು ಎಂಬುದನ್ನು ಸಿಐಎ ವರದಿಉಲ್ಲೇಖಿಸಿದೆ. ಲಾಡೆನ್ ಅಡಗಿ ಕುಳಿತದ್ದು ಎಲ್ಲಿ ಎಂದು ಅಮೆರಿಕ ಕಂಡುಕೊಂಡಿದೆ. 2015ರ ಡಿಸೆಂಬರ್ 2ರಂದು ಸ್ಯಾನ್ ಬರ್ನಾರ್ಡಿನೋ ಶೂಟೌಟ್ ಪ್ರಕರಣದಲ್ಲಿ 14 ಜನರನ್ನು ಕೊಂದದ್ದು ಯಾರು ಎಂಬ ವರದಿ ಹಸಿಯಾಗಿದೆ. ಮುಖ್ಯವಾಗಿ, ತನ್ನ ಪರಂಪರಾಗತ ದ್ವಂದ್ವ ನಿಲುವನ್ನು ಅಮೆರಿಕ ಬಿಟ್ಟರೆ ಮಾತ್ರ, ಅದು ಹೊಸ ಹೆಜ್ಜೆ ಎನಿಸುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry