ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರ್ಭಾವಸ್ಥೆ: ಸಂತಸದ ಸಮಯ ಎಚ್ಚರಿಕೆ ಸಮಯವೂ ಹೌದು

Last Updated 10 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

-ಡಾ. ಟೀನಾ ಥಾಮಸ್

**

ಸಾಮಾನ್ಯರಿಗೆ ಹೋಲಿಸಿದಂತೆ ಗರ್ಭಿಣಿಯರಿಗೆ ವೈರಸ್, ಬ್ಯಾಕ್ಟೀರಿಯಾ ಮತ್ತು ಇತರ ಸೋಂಕುಗಳ ಅಪಾಯ ಹೆಚ್ಚು. ಏಕೆಂದರೆ ಅವರಲ್ಲಿ ರೋಗನಿರೋಧಕ ಶಕ್ತಿಯು ಕುಂದಿರುತ್ತದೆ. ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದರ ಬಗ್ಗೆ ಜಾಗೃತಿ ಹೊಂದಿದ್ದು, ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾದುದು.

ಗರ್ಭಿಣಿಯರನ್ನು ಕಾಡಬಹುದಾದ ಸೋಂಕುಗಳಲ್ಲಿ ಅನೇಕ ರೀತಿಯದ್ದಾಗಿವೆ. ಇವನ್ನು ಹೀಗೆ ವರ್ಗೀಕರಿಸಬಹುದು:
 
ವೈರಸ್‌–ಸೋಂಕು
1. ಚಿಕನ್ ಪಾಕ್ಸ್: ಈ ಸೋಂಕು ಗರ್ಭಿಣಿಯರಲ್ಲಿ ಬಹಳ ವಿರಳವಾಗಿ ಕಾಣಿಸಿಕೊಳ್ಳುತ್ತದೆ. ಏಕೆಂದರೆ ಬಹಳಷ್ಟು ಜನರಿಗೆ ಬಾಲ್ಯದಲ್ಲಿಯೇ ಚಿಕನ್ ಪಾಕ್ಸ್ ಕಾಡುತ್ತದೆ. ಹೀಗಾಗಿ ಅವರು ಇದರ ವಿರುದ್ಧ ಪ್ರತಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳುತ್ತಾರೆ. ಆದರೆ ಈ ಸೋಂಕನ್ನು ಪಡೆಯದ ಮಹಿಳೆಯರಲ್ಲಿ ಅದು ಗರ್ಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ.
 
ಚಿಕನ್ ಪಾಕ್ಸ್ ವೈರಸ್ ಸೋಂಕು ತಗುಲಿದರೆ, ಗರ್ಭಿಣಿಯರಿಗೆ ನ್ಯುಮೊನಿಯಾ ಆಗುವ ಅಪಾಯವಿರುತ್ತದೆ. ಮೊದಲನೇ ತ್ರೈಮಾಸಿಕದಲ್ಲಿ ಅಥವಾ ಹೆರಿಗೆಯಾಗುವ ಸಮಯದಲ್ಲಿ ವೈರಸ್ ಆವರಿಸಿದರೆ, ಇದು ಶಿಶುವಿಗೆ ಬಹಳ ಅಪಾಯವಾಗಬಹುದು. ಮೊದಲ ತ್ರೈಮಾಸಿಕದಲ್ಲಿ, ಶಿಶುವಿಗೆ ವಾರಿಸೆಲ್ಲಾ ಸಿಂಡ್ರೋಂ ಎನ್ನುವ ಗಂಭೀರ ಸ್ಥಿತಿ ಉಂಟಾಗಬಹುದು; ಇದರಿಂದಾಗಿ ಶಿಶುವಿನ ತೂಕ ಬಹಳ ಕಡಿಮೆಯಿರುತ್ತದೆ. ಅಷ್ಟೇ ಅಲ್ಲ, ಬೆಳವಣಿಗೆಯ/ಮೆದುಳಿನ ದೋಷಗಳು ಕಾಣಿಸಿಕೊಂಡು, ಗರ್ಭವನ್ನೇ ನಿಲ್ಲಿಸಬೇಕಾಗಬಹುದು. ಹೆರಿಗೆಗೆ ಹತ್ತಿರವಾದ ಸಮಯದಲ್ಲಿ ಗರ್ಭಿಣಿಗೆ ಚಿಕನ್ ಪಾಕ್ಸ್ ಬಂದರೆ, ಈ ಸೋಂಕು ಶಿಶುವಿಗೂ ಹರಡಬಹುದು.
 
2. ಸೈಟೊಮೆಗಾಲೊ ವೈರಸ್ (CMV): ಇದು ಒಂದು ಸಾಮಾನ್ಯ ವೈರಸ್; ಹರ್ಪಿಸ್ ವೈರಸ್ ಕುಟುಂಬಕ್ಕೆ ಸೇರಿರುವಂಥದ್ದು. ಇದು ಬಹಳಷ್ಟು ಜನರಿಗೆ ಯಾವಾಗಲಾದರೂ ಅಂಟಹುದು. ಆದರೆ ಇದು ಯಾವುದೇ ಲಕ್ಷಣಗಳನ್ನು ಹೊಂದಿರುವುದಿಲ್ಲ. 
 
CMV ಸೋಂಕು ವಿರಳವಾದರೂ, ಗರ್ಭಿಣಿಯರಲ್ಲಿ ಇದು ಸಮಸ್ಯೆಗಳನ್ನುಂಟುಮಾಡಬಹುದು, ಏಕೆಂದರೆ 100ರಲ್ಲಿ 1–4 ಮಕ್ಕಳಿಗೆ ತಮ್ಮ ತಾಯಿಯ ಮೂಲಕ ಈ ಸೋಂಕು ಹರಡಬಹುದು. ಗರ್ಭಿಣಿಯರಲ್ಲಿ ಇದು ಫ್ಲ್ಯೂ ರೀತಿಯ ಲಕ್ಷಣಗಳನ್ನು ಉಂಟುಮಾಡಬಹುದು. ಸೋಂಕು ಪಡೆದ ಬಹಳಷ್ಟು ಶಿಶುಗಳಿಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಆದರೆ ಕೆಲವು ಶಿಶುಗಳಿಗೆ ಕಿವುಡುತನ, ದೃಷ್ಟಿಹೀನತೆಗಳಂತಹ ಜನ್ಮಜಾತ ದೋಷಗಳುಂಟಾಗಬಹುದು. ರಕ್ತಪರೀಕ್ಷೆಯಿಂದ ಈ ವೈರಸ್ ಅನ್ನು ಪತ್ತೆ ಮಾಡಿ, ಚಿಕಿತ್ಸೆ ನೀಡಬಹುದು.
 
3. ಹೆಪಟೈಟಿಸ್–ಬಿ (HBV): ಈ ವೈರಸ್ ತೀವ್ರ ಸೋಂಕುಕಾರಿ. ಇದು ರಕ್ತದ ಮೂಲಕ ಅಥವಾ ಲೈಂಗಿಕ ಕ್ರಿಯೆಯಿಂದ ಹರಡುತ್ತದೆ. ಇದರಿಂದ ಮುಂದೆ ಯಕೃತ್ತಿಗೆ ಸಮಸ್ಯೆಯುಂಟಾಗಬಹುದು. ಈ ಸೋಂಕನ್ನು ಪಡೆದ ಗರ್ಭಿಣಿಯರು ಇದನ್ನು ತಮ್ಮ ಭ್ರೂಣಕ್ಕೂ ಹರಡಬಹುದು. ಹಾಗಾಗಿ ಇದರ ಅಪಾಯವಿರುವ ಶಿಶುಗಳಿಗೆ ಹುಟ್ಟಿದಾಗಲೇ HBV ಲಸಿಕೆಯನ್ನು ನೀಡಬೇಕು; ಈ ರೋಗವನ್ನು ತಡೆಗಟ್ಟುವಲ್ಲಿ ಇದು ಶೇ. 90–95ರಷ್ಟು ಪರಿಣಾಮಕಾರಿ.
 
4. ಹೆಪಟೈಟಿಸ್ –ಸಿ: ಈ ವೈರಸ್ ಕೂಡ ರಕ್ತದ ಮೂಲಕ ಅಥವಾ ಲೈಂಗಿಕ ಕ್ರಿಯೆಯಿಂದ ಹರಡುತ್ತದೆ. ತಾಯಿಯು ಈ ಸೋಂಕನ್ನು ತನ್ನ ಶಿಶುವಿಗೆ ಹರಡಿದರೆ, ವೈದ್ಯಕೀಯ ತಪಾಸಣೆ ಮಾಡಿಸಬೇಕು ಮತ್ತು ಚಿಕಿತ್ಸೆ ನೀಡಬೇಕು.
 
5. ಹರ್ಪಿಸ್: ಈ ವೈರಸ್ ಸೋಂಕು ವಿವಿಧ ರೀತಿಯದ್ದಾಗಿರಬಹುದು, ಸಾಮಾಸ್ಯವಾದದ್ದು, ಬಾಯಿಯ ಹರ್ಪಿಸ್, ಮತ್ತು ಜನನಾಂಗಗಳ ಹರ್ಪಿಸ್. ಪ್ರಾಥಮಿಕ ಜನನಾಂಗಗಳ ಹರ್ಪಿಸ್ ಅನ್ನು ಬೊಬ್ಬೆಗಳಿಂದ ಪತ್ತೆ ಮಾಡಬಹುದು; ಯೋನಿಯ ಭಾಗದಲ್ಲಿ ಹುಣ್ಣುಗಳಿದ್ದರೆ ಇದು ಶಿಶುವಿಗೆ ಬಹಳ ಅಪಾಯಕಾರಿ. ಏಕೆಂದರೆ ಸಹಜ ಹೆರಿಗೆಯಲ್ಲಿ ಇದು ಮಗುವಿಗೂ ಹರಡಬಹುದು. ಸಾಮಾನ್ಯವಾಗಿ, ಈ ಹರಡುವಿಕೆಯನ್ನು ತಡೆಗಟ್ಟಲು ವೈದ್ಯರು ‘ಸಿಸೇರಿಯನ್ ಸೆಕ್ಶನ್’ ಹೆರಿಗೆಯನ್ನು ಶಿಫಾರಸು ಮಾಡುತ್ತಾರೆ.
 
6. ಎಚ್‌ಐವಿ: ಎಚ್‌ಐವಿ ಸೋಂಕನ್ನು ಪಡೆದ ತಾಯಿಯು ಇದನ್ನು ತನ್ನ ಮಗುವಿಗೂ ಹರಡಬಹುದು. ಆದರೆ ನಿರಂತರ ಪರಿಶೀಲನೆ ಮತ್ತು ಗರ್ಭಾವಸ್ಥೆಯ 28ನೇ ವಾರದಿಂದ ಚಿಕಿತ್ಸೆ ನೀಡುವುದರಿಂದ, ಜೊತೆಗೆ ‘ಸಿ-ಸೆಕ್ಶನ್’ ಹೆರಿಗೆಯನ್ನು ಮಾಡುವುದರಿಂದ ಹರಡುವಿಕೆಯ ಅಪಾಯವನ್ನು ಕಡಿಮೆ ಮಾಡಬಹುದು.
 
7. ಪಾರ್ವೊವೈರಸ್: ಇದು ವಿರಳವಾದ ವೈರಸ್. ಆದರೆ ಗರ್ಭಾವಸ್ಥೆಯಲ್ಲಿ ಪ್ರಾಥಮಿಕ ಸೋಂಕಾದಲ್ಲಿ, ತಾಯಿಯಾಗುವವಳಿಗೆ ಸ್ವಲ್ಪ ಗುಳ್ಳೆಗಳು ಕಾಣಿಸಿಕೊಳ್ಳಬಹುದು; ಜ್ವರವೂ ಆಗಬಹುದು. ಪಾರ್ವೊವೈರಸ್‌ನ ಕೆಲವು ಸಮಸ್ಯೆಗಳೆಂದರೆ ಗರ್ಭಪಾತ ಅಥವಾ ಭ್ರೂಣದ ರಕ್ತಹೀನತೆ.
 
8. ರುಬೆಲ್ಲಾ: ಇದು ‘ರುಬೆಲ್ಲಾ’  ವೈರಸ್‌ನಿಂದ ಉಂಟಾಗುವ ಸಾಂಕ್ರಾಮಿಕ ಸೋಂಕು; ಇದರಿಂದ ಜ್ವರ, ಗುಳ್ಳೆಗಳು, ಗಂಟಲ ಒಣಗುವಿಕೆ ಮತ್ತು ಗ್ರಂಥಿಗಳ ಊದುವಿಕೆಗಳು ಉಂಟಾಗುತ್ತವೆ. ಭಾರತದಲ್ಲಿ ರುಬೆಲ್ಲಾ ಸಾಮಾನ್ಯ ರೋಗನಿರೋಧಕ ಯೋಜನೆಯ ಅಂಗವಾಗಿರುವುದರಿಂದ ಇದು ಬಹಳ ವಿರಳವಾಗಿದೆ. ಆದರೆ  ಗರ್ಭಾವಸ್ಥೆಯ ಮೊದಲ ಭಾಗದಲ್ಲಿ ಪ್ರಾಥಮಿಕ ರುಬೆಲ್ಲಾ ಉಂಟಾದರೆ, ಮಗುವಿಗೆ, ದೃಷ್ಟಿಹೀನತೆ ಮತ್ತು ಬುದ್ಧಿಮಾಂದ್ಯತೆ ಸೇರಿದಂತೆ ಗಂಭೀರವಾದ ಸಮಸ್ಯೆಗಳು ಎದುರಾಗಬಹುದು. ಗರ್ಭಾವಸ್ಥೆಯ ಕೊನೆಯ ಭಾಗದಲ್ಲಾದರೆ, ಇದರಿಂದ ಅವಧಿಪೂರ್ವ ಹೆರಿಗೆಯಾಗಬಹುದು.
ಪರೋಪಜೀವಿ
 
ಟಾಕ್ಸೊಪ್ಲಾಸ್ಮೊಸಿಸ್: ಇದು ಗರ್ಭಾವಸ್ಥೆಯಲ್ಲಿ ಬಹಳ ಸಾಮಾನ್ಯವಾಗಿ ಕಂಡುಬರುವ ಪರೋಪಜೈವಿಕ ಸೋಂಕು; ಇದು ಬೆಕ್ಕುಗಳ ಮಲದಲ್ಲಿ ಕಂಡುಬರುವ ‘ಟಾಕ್ಸೊಪ್ಲಾಸ್ಮಾ ಗೋಂಡೈ’ ಎಂಬ ಪರೋಪಜೀವಿಯಿಂದ ಉಂಟಾಗುತ್ತದೆ. ಬೆಕ್ಕನ್ನು ಮುಟ್ಟುವುದರಿಂದ ಅಥವಾ ಕಲುಷಿತ ಆಹಾರ ಸೇವಿಸುವುದರಿಂದ ಗರ್ಭಿಣಿಯು ಈ ಕ್ರಿಮಿಯ ಸಂಪರ್ಕಕ್ಕೆ ಬಂದಲ್ಲಿ, ಇದು ಭ್ರೂಣಕ್ಕೂ ಹರಡುವ ಅಪಾಯವಿದೆ. ಗರ್ಭಾವಸ್ಥೆಯಲ್ಲಿ ಈ ಸೋಂಕು ಬಹಳ ಅಪಾಯವಾದದ್ದು. ಏಕೆಂದರೆ ಇದರಿಂದ ಮೃತಶಿಶುವಿನ ಜನನ, ಗರ್ಭಪಾತ ಮತ್ತು ಮಗುವಿನಲ್ಲಿ ಜನ್ಮಜಾತ ದೋಷಗಳು ಉಂಟಾಗುತ್ತವೆ.
 
ಬ್ಯಾಕ್ಟೀರಿಯಾ: ಮೂತ್ರನಾಳದ ಸೋಂಕು (UTI): ಗರ್ಭಾವಸ್ಥೆಯಲ್ಲಿ ಬಹಳ ಸಾಮಾನ್ಯವಾದ ಸೋಂಕು; ಇದು ಬ್ಯಾಕ್ಟೀರಿಯಾದಿಂದ ಉಂಟಾಗುವ ಮೂತ್ರನಾಳದ ಸೋಂಕಾಗಿದ್ದು, ಇದರಿಂದ ಉರಿ, ಜ್ವರ ಮತ್ತು ಚಳಿ ಉಂಟಾಗುತ್ತದೆ. ಲಕ್ಷಣರಹಿತ ಬ್ಯಾಕ್ಟೀರಿಯಾ ಸೋಂಕಿಗೂ ಚಿಕಿತ್ಸೆ ನೀಡಬೇಕು. ಇದು ಜನನದಲ್ಲಿ ಕಡಿಮೆ ತೂಕ ಮತ್ತು ಅವಧಿಪೂರ್ವ ಹೆರಿಗೆಗೆ ಕಾರಣವಾಗುತ್ತದೆ.
 
ಬ್ಯಾಕ್ಟೀರಿಯಲ್ ವಜಿನೊಸಿಸ್ (BV): ಯೋನಿಯಲ್ಲಿ ಹಾರ್ಮೊನಲ್ ಕಮ್ಮೆನ್ಸಾಲ್ ಬ್ಯಾಕ್ಟೀರಿಯಾದ ಅಧಿಕ ಪ್ರಮಾಣದ ಬೆಳವಣಿಗೆಯಿಂದ ಈ ಸೋಂಕುಂಟಾಗುತ್ತದೆ. ಇದರ ಲಕ್ಷಣವೆಂದರೆ ಯೋನಿಯ ಸ್ರಾವದಲ್ಲಿ ಮೀನಿನ ವಾಸನೆ ಇರುವುದು. ಗರ್ಭಾವಸ್ಥೆಯಲ್ಲಿ BV ಆಗುವುದರಿಂದ ಅವಧಿಪೂರ್ವ ಹೆರಿಗೆ, ಗರ್ಭಪಾತ ಮತ್ತು ಪೊರೆಯ ಅಕಾಲಿಕ ಹರಿತ ಉಂಟಾಗಬಹುದು; ಹಾಗಾಗಿ ಇದಕ್ಕೆ ಶೀಘ್ರವಾಗಿ ಜೀವನಿರೋಧಕಗಳಿಂದ ಚಿಕಿತ್ಸೆ ನೀಡಬೇಕು.
 
ಬಿ ಗುಂಪಿನ ಸ್ಟ್ರೆಪ್ಟೊಕೊಕ್ಕೈ: ಈ ಬ್ಯಾಕ್ಟೀರಿಯಾದ ಸೋಂಕಿಗೆ ಯಾವುದೇ ಲಕ್ಷಣಗಳಿಲ್ಲ. ಆದರೆ ಗರ್ಭಾವಸ್ಥೆಯಲ್ಲಾದರೆ, ಮಗುವಿನಲ್ಲಿ ಗಂಭೀರ ಸಮಸ್ಯೆಗಳಾಗಬಹುದು. ಇದರಿಂದ ಅವಧಿಪೂರ್ವ ಹೆರಿಗೆ ಮತ್ತು ಪೊರೆಯ ಅಕಾಲಿಕ ಹರಿತವುಂಟಾಗಬಹುದು.
 
ಲೈಂಗಿಕವಾಗಿ ಹರಡುವ ರೋಗಗಳು (STD): ಗೊನೊರ್ರಿಯಾ, ಮತ್ತು ಕ್ಲಾಮಿಡಿಯಾದಂತಹ ಕೆಲವು ಸಾಮಾನ್ಯ ಲೈಂಗಿಕತೆಯಿಂದ ಹರಡುವ ರೋಗಗಳು ಗರ್ಭಿಣಿಯರಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು. ಇವು ಯಾವುವೆಂದರೆ – ಅವಧಿಪೂರ್ವ ಹೆರಿಗೆ, ಗರ್ಭಪಾತ, ಮತ್ತು ನವಜಾತ ಶಿಶುವಿನಲ್ಲಿ ಸೋಂಕುಗಳು. STDಯ ತಪಾಸಣೆ ಮಾಡಿ, ಶೀಘ್ರವಾಗಿ ಔಷಧಗಳಿಂದ ಚಿಕಿತ್ಸೆ ನೀಡಬೇಕು.
 
ಸೋಂಕುಗಳನ್ನು ತಡೆಗಟ್ಟುವುದು ಹೇಗೆ?
ಗರ್ಭಾವಸ್ಥೆಯಲ್ಲಿ ಅಪಾಯಕಾರಿ ಸೋಂಕುಗಳನ್ನು ತಡೆಗಟ್ಟುವಲ್ಲಿ ಎಚ್ಚರಿಕೆ ಮತ್ತು ಸ್ತ್ರೀರೋಗತಜ್ಞರ ಸಲಹೆಗಳು ಬಹಳ ಉಪಯುಕ್ತವಾಗಿರುತ್ತವೆ.
 
**
ರೋಗನಿಯಂತ್ರಣ ಮತ್ತು ನಿರೋಧ ಕೇಂದ್ರದ ಪ್ರಕಾರ, ಕೆಲವು ಸರಳ ಕ್ರಮಗಳಿಂದ ಸೋಂಕುಗಳನ್ನು ತಡೆಗಟ್ಟಬಹುದು. ಅವು ಯಾವುವೆಂದರೆ:

* ಆಗಾಗ ಕೈಗಳನ್ನು ತೊಳೆಯುತ್ತಿರಿ, ಅದರಲ್ಲೂ ಹಸಿ ಆಹಾರ ಮತ್ತು ಮಾಂಸವನ್ನು ಮುಟ್ಟಿದಾಗ; ಶೌಚಾಲಯವನ್ನು ಬಳಸಿದ ಮೇಲೆ; ಮಕ್ಕಳೊಡನೆ ಅಟ ಆಡಿದ ನಂತರ ಮತ್ತು ಮಣ್ಣು–ಕಸಗಳಂಥವನ್ನು ಮುಟ್ಟಿದ ನಂತರ.

* ಬೇಯಿಸಿರದ ಆಹಾರವನ್ನು, ಹಸಿಯಾದ ಮತ್ತು ಸಂಸ್ಕರಿದ ಮಾಂಸದ ಸೇವನೆಯನ್ನು ಮಾಡಬೇಡಿ

* ಸಾಕಷ್ಟು ನೀರನ್ನು ಕುಡಿಯಿರಿ (ಸುಮಾರು 2.5 ಲೀ/ದಿನ)

* ಪ್ರಾಣಿಗಳ ಮಲಮೂತ್ರದಿಂದ ದೂರವಿರಿ.

* ಎಚ್. ಐ.ವಿ., ಎಸ್.ಟಿ.ಡಿ. ಮತ್ತು ಹೆಪಟೈಟಿಸ್–ಬಿ – ಇವುಗಳ ತಪಾಸಣೆ ಮಾಡಿಸಿಕೊಳ್ಳಿ.

* ಖಂಡಿತವಾಗಿ ಲಸಿಕೆ ಹಾಕಿಸಿಕೊಳ್ಳಿ.

* ಆರೋಗ್ಯಕರ ಆಹಾರಸೇವನೆ ಮತ್ತು ಆರೋಗ್ಯಕರ ಜೀವನಶೈಲಿ – ಇವನ್ನು ಅಳವಡಿಸಿಕೊಳ್ಳುವುದು ಅತ್ಯಂತ ಮುಖ್ಯ.
 
**
(ಲೇಖಕರು ಪ್ರಸೂತಿತಜ್ಞರು ಮತ್ತು ಸ್ತ್ರೀರೋಗತಜ್ಞೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT