7
ಹಳತು ಹೊನ್ನು

‘ಗೇಣಿ’ಯ ಬಹುರೂಪ ದರ್ಶನ

Published:
Updated:
‘ಗೇಣಿ’ಯ ಬಹುರೂಪ ದರ್ಶನ

‘ಗೇಣೀ ವಸೂಲಾತೀ ಆಕ್ಟು’ ಕೃತಿಯನ್ನು ಜನವರಿ 6, 1866ರಲ್ಲಿ ಬೆಂಗಳೂರಿನ ‘ವೆಸ್ಲಿಯನ್ ಮಿಷನ್ ಪ್ರೆಸ್‌’ನಲ್ಲಿ ಮುದ್ರಿಸಲಾಗಿದೆ. ಡೆಮಿ ಆಕಾರದ 28 ಪುಟಗಳ ಈ ಕೃತಿಯ ಬೆಲೆಯನ್ನು ನಮೂದಿಸಲಾಗಿಲ್ಲ. ಮುಖಪುಟ ಹಾಗೂ ಹಿಂಬದಿಯ ರಕ್ಷಾಪುಟಗಳು ಹಾಳಾಗಿರುವ ಈ ಪುಸ್ತಕದ ಮೊದಲ ಆವೃತ್ತಿಯ ಹಳೆಯ ಪ್ರತಿಯನ್ನು ಡಿ.ವಿ. ಗುಂಡಪ್ಪನವರು ನಿಧನರಾಗುವುದಕ್ಕೆ ಕೆಲವು ತಿಂಗಳು ಮೊದಲು ಅವರಿಗೆ ಶಿವರಾಮ ಕಾರಂತರು ನೀಡಿರುತ್ತಾರೆ. 1975ರ ಮಾರ್ಚ್‌ 8ರಂದು ಡಿವಿಜಿ ಅವರ ಬಂಧುಗಳೂ ‘ಗೋಖಲೆ ಸಂಸ್ಥೆ’ಯಲ್ಲಿ ಡಿವಿಜಿ ಅವರಿಗೆ ಹಿರಿಯ ಸಹಾಯಕರೂ ಆಗಿದ್ದ ಸ. ವೆಂಕಟಾಚಲಪತಿಯವರು ತಮ್ಮ ಸ್ವಹಸ್ತಾಕ್ಷರಗಳಲ್ಲಿ ಕಾರಂತರಿಂದ ಈ ಕೃತಿ ಸ್ವೀಕೃತಿಯಾಗಿರುವುದನ್ನು ಹೀಗೆ ನಮೂದಿಸಿರುತ್ತಾರೆ: “109 years old copy received for GIPA from Sri K. shivarama Karanth’. 

 

ಆ ಕಾಲಘಟ್ಟದಲ್ಲಿ ಕಂದಾಯ ಹಾಗೂ ಇತರ ಸರಕಾರೀ ಇಲಾಖೆಗೆ ಸಂಬಂಧಿಸಿದ ಅನೇಕ ಕಾನೂನು ವಿಧಿಗಳನ್ನು ಬ್ರಿಟಿಷ್ ಅಧಿಕಾರಿಗಳು ಹಳ್ಳಿಯ ಹತ್ತೂ ಸಮಸ್ತರಿಗೂ ಅರ್ಥವಾಗುವಂತೆ ಸರಳವಾದ ಕನ್ನಡದಲ್ಲಿ ಪುಸ್ತಕಗಳನ್ನು ರಚಿಸಿದ್ದರು. ಅಂತಹ ಪುಸ್ತಕಗಳಲ್ಲಿ ಇದೂ ಒಂದು.

 

ಪ್ರಸ್ತುತ ಕೃತಿಯಲ್ಲಿ ಗೇಣೀ ಎನ್ನುವ ಕನ್ನಡ ಶಬ್ದಕ್ಕೆ ಇಂಗ್ಲಿಷಿನಲ್ಲಿ ‘ರೆಂಟ್’ ಎನ್ನವ ಪರ್ಯಾಯ ಪದವನ್ನು ಬಳಸಲಾಗಿದೆ. ಅರ್ಥಾತ್ ಇಲ್ಲಿ ‘ರೆಂಟ್’ ಎಂದರೆ ಬಾಡಿಗೆ ಎನ್ನುವ ಅರ್ಥವಲ್ಲ, ಗೇಣೀ ಎಂದರ್ಥ. ಸಾಮಾನ್ಯವಾಗಿ ಕನ್ನಡದಲ್ಲಿ ‘ರೆಂಟ್’ ಎಂದರೆ ಮನೆ ಬಾಡಿಗೆ ಎನ್ನುವ ಅರ್ಥದಲ್ಲಿ ಈಗ ಬಳಕೆಯಲ್ಲಿದೆ. ಈ ಕೃತಿಯು ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚಾಲೂವಿನಲ್ಲಿದ್ದ ಗೇಣೀ ವಸೂಲಾತಿ ವಿಚಾರಕ್ಕೆ ಸಂಬಂಧಿಸಿದ್ದು. ಆ ಕಾಲಘಟ್ಟದಲ್ಲಿ ಕನ್ನಡದ ಆಡಳಿತ ಭಾಷೆಯ ಸ್ವರೂಪ, ವಾಕ್ಯಗಳ ರಚನೆ, ವಿಶಿಷ್ಟ ಶಬ್ದಗಳ ಬಳಕೆ ಹೇಗಿತ್ತು ಎನ್ನುವುದರ ಚಿತ್ರ ಈ ಕೃತಿಯ ಮೂಲಕ ಉಂಟಾಗುವುದಲ್ಲದೆ, ಕನ್ನಡ ಭಾಷೆಯ ಚಾರಿತ್ರಿಕ ಬೆಳವಣಿಗೆಯನ್ನು ಕುರಿತು ಅಧ್ಯಯನ ಮಾಡುವ ಸಂಶೋಧಕರಿಗೆ ಇಂತಹ ಕೃತಿಗಳು ಆಕರ ಗ್ರಂಥಗಳಾಗಿ ಒದಗುತ್ತವೆ. 

 

ಪುಸ್ತಕದ ಆರಂಭದಲ್ಲಿ ‘‘1865ನೇ ಇಸವಿ 8ನೇ ನಂಬರ ಆಕ್ಟು, ಮದ್ರಾಸು, (1865ನೇ ಇಸವಿ ಏಪ್ರಿಲ್ ತಿಂಗಳು 8ನೇ ತಾರೀಖಿನಲ್ಲಿ ಗವರ್ನರವರ ಅನುಮತಿಯನ್ನೂ 1865ನೇ ಇಸವಿ ಸೆಪ್ಟೆಂಬರು ತಿಂಗಳು 19ನೇ ತಾರೀಖಿನಲ್ಲಿ ಗವರ್ನರ್ ಜನರಲವರ ಅನುಮತಿಯನ್ನೂ ಉಳ್ಳದ್ದಾಯಿತು.) ಹಾಗೂ ಗೇಣಿಯನ್ನು ವಸೂಲು ಮಾಡುವ ಬಗ್ಯೆ ನಡಿಸಬೇಕಾದ ಕ್ರಮವನ್ನು ತಿಳಿಸುವ ಕಾನೂನುಗಳನ್ನು ಒಟ್ಟುಪಡಿಸಿ ದಿಟ್ಟ ಮಾಡ ತಕ್ಕ ಬಗ್ಯೆ ಉಂಟಾದ ಆಕ್ಟು’’ ಎನ್ನುವ ಒಕ್ಕಣೆ ಇದೆ. ನಂತರ ಕ್ರಮವಾಗಿ ಒಟ್ಟು 90 ಪ್ರಕರಣಗಳ ವಿಲೇವಾರಿಯನ್ನು ಕುರಿತ ವಿವರಣೆಗಳು ಷುರುವಾಗುತ್ತದೆ. 

 

‘ಅರ್ಥದ ಕಲಂನಲ್ಲಿ ಮೂಲಗಾರ’, ‘ಗೇಣೀ ಒಕ್ಕಲು’, ‘ಕಲೆಕ್ಟರು’, ‘ಲಿಂಗ‘, ’ವಚನ’, ‘ಬಾಕಿಗಳನ್ನು ವಸೂಲು ಮಾಡುವ ಕ್ರಮ’, ‘ಮೂಲಗಾರ ಹಾಗೂ ಗೇಣೀ ಒಕ್ಕಲುಗಳ ನಡುವಣ ಕರಾರು’, ‘ಪಟ್ಟಾವಿನ ಮುಚ್ಚಳಿಕೆಯ ಮಜಲುಗಳು’, ‘ಅಕ್ರಮವಾಗಿ ಸುಲಿಗೆ ಮಾಡಿದರೆ ಅದಕ್ಕೆ ಪರಿಹಾರ’, ‘ಪಟ್ಟಾಗಳನ್ನೂ ಮುಚ್ಚಳಿಕೆಗಳನ್ನು ದಸ್ಕತು ಮಾಡಿ ರಿಜಿಸ್ತರು ಮಾಡಿಸುವ ವಿಚಾರ’, ‘ಪಟ್ಟಾಗಳನ್ನೂ ಮುಚ್ಚಳಿಕೆಗಳನ್ನೂ ಪಡಕೊಳ್ಳದೆಯಾಗಲಿ ಅಸತ್ಯವಿಲ್ಲವೆಂತ ಬಿಟ್ಟಬಿಡದೆಯಾಗಲಿ ಇದ್ದರೆ ಬರುವ ವ್ಯಾಜ್ಯದ ವಿಚಾರ’, ‘ಪಟ್ಟಾಗಳನ್ನು ಕೊಡದೆ ಇದ್ದರೆ, ಪಟ್ಟಾಗಳನ್ನು ತೆಗೆದುಕೊಂಡಿಲ್ಲವೆಂದರೆ ವ್ಯಾಜ್ಯಗಳನ್ನು ತೀರಿಸುವ ಕ್ರಮ’ – ಈ ಮುಂತಾದ ವಿಚಾರಗಳನ್ನು ಮೊದಲ ಹತ್ತು ಪ್ರಕರಣಗಳಲ್ಲಿ ವಿಲೇವಾರಿ ಮಾಡಲಾಗಿದೆ. ಮುಂದಿನ ಐದು ಪ್ರಕರಣಗಳಲ್ಲಿ – ಗೇಣಿಯ ದರಗಳ ಕುರಿತ ತಕರಾರುಗಳನ್ನು ತೀರಿಸಲಿಕ್ಕೆ ಕಾಯಿದೆಗಳು, ಸ್ವಾಧೀನ ತಪ್ಪಿಸುವ ಕ್ರಮ ಗೇಣೀ ಚೀಟಿಗೆ ರಾಜೀನಾಮೆ ಕೊಡೋಣ, ರೈತವಾರಿ ಕಂದಾಯ ಕ್ರಮದ ಬಾಬತು ಮೂಲಗಾರರು ಗೇಣೀ ವಸೂಲು ಮಾಡೋಣ, ಗೇಣೀ ಬಾಕಿ ಅದನ್ನೂ ಜಫ್ತಿ ಮೂಲವಾಗಿ ವಸೂಲು ಮಾಡಬಹುದು, ಚರ ಸ್ವೊತ್ತಿನ ಜಫ್ತಿಯ ವಿಕ್ರಯ – ಬಾಕಿಯ ಬಾಬತು ತಗಾದಾ ಚೇಟು, ಈ ಮೊದಲಾದ ವಿಚಾರಗಳನ್ನು ಕುರಿತಾಗಿದೆ.

 

19ನೇ ಶತಮಾನದ ಮಧ್ಯಭಾಗದ ಹೊತ್ತಿಗೆ ಕಂದಾಯ, ಆರ್ಥಿಕ, ಅಂಕಿ–ಸಂಖ್ಯೆ, ಮುಜರಾಯಿ, ಶಿಕ್ಷಣ, ಅಬಕಾರಿ, ಸಾರಿಗೆ, ಲೋಕೋಪಯೋಗಿ, ರೈಲ್ವೇ, ಅಂಚೆಕಚೇರಿ ಮುಂತಾದ ಸರಕಾರದ ವಿವಿಧ ಇಲಾಖೆಗಳ ಕಾನೂನಿನ ವಿವಿಧ ಆಕ್ಟುಗಳಿಗೆ ಸಂಬಂಧಿಸಿದ ತಿಳಿವಳಿಕೆಯ ಸಾಕಷ್ಟು ಸಂಖ್ಯೆಯ ಪುಸ್ತಕಗಳು ಕನ್ನಡದಲ್ಲಿ ಪ್ರಕಟಗೊಂಡವು. ಅಂತಹುವುಗಳ ಪುಸ್ತಕ ಸರಣಿಯಲ್ಲಿ ಪ್ರಸಕ್ತ ‘ಗೇಣೀ ವಸೂಲಾತಿ ಆಕ್ಟು’ ಕೃತಿ ಕೂಡ ಒಂದು. ಅಮಲು, ಷುರು, ಮಹಸೂಲು, ಮಾಫು, ಬಾಬತು, ಬಚಾವು, ವಸೂಲು, ಜಫ್ತಿ, ತಗಾದ, ಇಜಾರೇದಾರ್, ಜಾಮೀನು, ದಾವೆ, ದಸ್ತಾವೇಜು, ವ್ಯಾಜ್ಯ, ಪಟ್ಟಾ, ಕರಾರು, ಪೇರೇಜು  ಮುಂತಾದ ಹಿಂದೂಸ್ತಾನಿ ಭಾಷೆಯ, ಆಡಳಿತ ಪರಿಭಾಶಾ ಶಬ್ದ ಸಮುದಾಯವು ಇಲ್ಲಿ ಓತಪ್ರೋತವಾಗಿ ಬಳಕೆಯಾಗಿರುವುದನ್ನು ಗಮನಿಸಬಹುದು. 

 

ಅಂದಿನ ಕಾಲಘಟ್ಟದ ಕನ್ನಡ ಭಾಷೆಯ ಕ್ರಮ, ತನ್ನದೇ ಆದ ಶಬ್ದಕೋಶದ ವಿಶಿಷ್ಟ ಚಹರೆ, ಭಾಷೆಯ ದೇಸೀ ನೆಲೆಯ ಅಸ್ಮಿತೆಗಳನ್ನು ಇಲ್ಲಿನ ಕನ್ನಡ ಭಾಷೆಯ ರಚನೆ ಮತ್ತು ಬಳಕೆಗಳಲ್ಲಿ ಸ್ಪಷ್ಟವಾಗಿ ಗುರುತಿಸಬಹುದು. ಈ ನಿಟ್ಟಿನಲ್ಲಿ ಪ್ರಸಕ್ತ ಪುಸ್ತಕವು ಕನ್ನಡ ಭಾಷೆಗೆ ಒಂದು ಅನನ್ಯ ಕೊಡುಗೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry