7

ಅಮರಕಂಟಕದ ಆದಿವಾಸಿಗಳ ನಡುವೆ ಮೂರು ದಿನ...

Published:
Updated:
ಅಮರಕಂಟಕದ ಆದಿವಾಸಿಗಳ ನಡುವೆ ಮೂರು ದಿನ...

ರಸ್ತೆಗಳು ಕೂಡುವುದು ಎಂದರೆ ಹೀಗೆಯೇ ಇರಬಹುದು. ನಾನು ಅವರು ಒಂದೇ ವಿಶ್ವವಿದ್ಯಾಲಯದಲ್ಲಿ ಓದಿದವರು. ಇಬ್ಬರೂ ಸಾಹಿತ್ಯದ ವಿದ್ಯಾರ್ಥಿಗಳು. ವಾರಿಗೆಯವರು. ಓದುವಾಗ ಆಗಲೀ, ನಂತರ ಕಳೆದ ನಲವತ್ತು ವರ್ಷಗಳಲ್ಲಿಯಾಗಲೀ ಎಂದೂ ಭೇಟಿಯಾದವರು ಅಲ್ಲ. ಮೊನ್ನೆ ರಾಯಚೂರು ಸಾಹಿತ್ಯ ಸಮ್ಮೇಳನದಲ್ಲಿ ರಸ್ತೆಗಳು ಕೂಡಿದುವು. ಮೊದಲ ಭೇಟಿಯಲ್ಲಿಯೇ ತಬ್ಬಿಕೊಂಡಂಥ ಬೆಚ್ಚನೆಯ ಸ್ನೇಹ. ಅವರು ಪ್ರೊ.ಟಿ.ವಿ.ಕಟ್ಟೀಮನಿ. ಈಗ ಇಡೀ ದಕ್ಷಿಣ ಏಷ್ಯಾದ ಏಕೈಕ ಆದಿವಾಸಿ ವಿಶ್ವವಿದ್ಯಾಲಯದ ಕುಲಪತಿ.ಈ ವಿಶ್ವವಿದ್ಯಾಲಯ ಮಧ್ಯಪ್ರದೇಶದ ಅಮರಕಂಟಕದಲ್ಲಿ ಇದೆ. ಅದರ ಪೂರ್ಣ ಹೆಸರು ಇಂದಿರಾ ಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯ. ಅಮರಕಂಟಕ, ಮಧ್ಯಪ್ರದೇಶ ಮತ್ತು ಗುಜರಾತ್‌ ರಾಜ್ಯಗಳ ಜೀವನದಿ ಎನಿಸಿರುವ ನರ್ಮದಾ ನದಿಯ ಉಗಮ ಸ್ಥಳ. ಪುರಾಣಗಳಲ್ಲಿ ಅದಕ್ಕೆ ಆಮ್ರಕೂಟ ಎಂದು ಹೆಸರು. ಆಮ್ರ ಎಂದರೆ ಮಾವು. ಈಗಲೂ ಆ ಪರಿಸರದಲ್ಲಿ 125 ಬಗೆಯ ಮಾವುಗಳು ಸಿಗುತ್ತವೆ. ಕವಿ ಕಾಳಿದಾಸ ತನ್ನ ‘ಮೇಘದೂತ’ ಕಾವ್ಯದಲ್ಲಿ ಮಾಡುವ ಪರಿಸರದ ವರ್ಣನೆ ಆಮ್ರಕೂಟದ್ದೇ.ದೇಶದಲ್ಲಿ ಅತಿ ಹೆಚ್ಚು ಆದಿವಾಸಿಗಳು ನೆಲೆಸಿರುವ ಜಾಗ ಇದು. ಬೈಗಾ ಮತ್ತು ಗೊಂಡ ಆದಿವಾಸಿಗಳು ಬಹಳ ದೊಡ್ಡ ಸಂಖ್ಯೆಯಲ್ಲಿ ಅಲ್ಲಿ ವಾಸವಾಗಿದ್ದಾರೆ. ಅವರ ಜೊತೆಗೆ ಪಣಿಕಾ, ಸಹೇರಿಯಾ ಇತ್ಯಾದಿ ಹಲವು ಹೆಸರುಗಳ ಆದಿವಾಸಿಗಳೂ ಇಲ್ಲಿ ಇದ್ದಾರೆ.  ಕಡಿದಾದ ‘ಮೇಕಲ್‌’ ಬೆಟ್ಟ ಗುಡ್ಡಗಳ ಸಾಲುಗಳ ನಡುವೆ ಎಂಟು ವರ್ಷಗಳ ಹಿಂದೆ ವಿಶ್ವವಿದ್ಯಾಲಯ ಸ್ಥಾಪನೆಯಾಗಿದೆ.ಆದಿವಾಸಿಗಳು ಇರುವ ಪರಿಸರದಲ್ಲಿಯೇ ವಿಶ್ವವಿದ್ಯಾಲಯ ಇದ್ದರೆ ಅವರ ವಿದ್ಯಾಭ್ಯಾಸಕ್ಕೆ ಅನುಕೂಲ ಎಂಬುದು ವಿಶ್ವವಿದ್ಯಾಲಯ ಸ್ಥಾಪನೆಯ ಹಿಂದಿನ ಉದ್ದೇಶ. ವಿಶ್ವವಿದ್ಯಾಲಯದಲ್ಲಿ ಓದುವ ಶೇಕಡ 43 ವಿದ್ಯಾರ್ಥಿಗಳು ಆದಿವಾಸಿ ಸಮುದಾಯದವರು. ಒಟ್ಟು ವಿದ್ಯಾರ್ಥಿಗಳ ಪೈಕಿ ಶೇಕಡ 53ರಷ್ಟು ವಿದ್ಯಾರ್ಥಿನಿಯರು. ಇದು ಬರೀ ಸ್ನಾತಕೋತ್ತರ ಶಿಕ್ಷಣ ಕೊಡುವ ವಿದ್ಯಾಲಯವಲ್ಲ ಜೊತೆಗೆ ಪದವಿ ಶಿಕ್ಷಣವನ್ನೂ ಕೊಡುತ್ತದೆ.

ವಿಶ್ವವಿದ್ಯಾಲಯ ಸ್ಥಾಪಿಸಿದ ಉದ್ದೇಶ ಎರಡು ದೃಷ್ಟಿಯಿಂದ ಸಫಲವಾಗಿದೆ. ಒಂದು, ಇಲ್ಲಿ ಆದಿವಾಸಿಗಳು ಬಹುದೊಡ್ಡ  ಸಂಖ್ಯೆಯಲ್ಲಿ ವಿದ್ಯೆಯ ಲಾಭ ಪಡೆಯುತ್ತಿದ್ದಾರೆ, ಎರಡು, ಹುಡುಗಿಯರು ಅಷ್ಟೇ ದೊಡ್ಡ ಸಂಖ್ಯೆಯಲ್ಲಿ ಹುಡುಗರ ಜೊತೆ ಜೊತೆಯಾಗಿ ಶಿಕ್ಷಣ ಪಡೆಯುತ್ತಿದ್ದಾರೆ. ಆದಿವಾಸಿಗಳ ಜೊತೆಗೆ ಇತರರಿಗೂ ಇಲ್ಲಿ ಪ್ರವೇಶ ಇರುವುದರಿಂದ ಅವರಿಂದ ಇವರು ಕಲಿಯುತ್ತಾರೆ, ಇವರಿಂದ ಅವರು ಕಲಿಯುತ್ತಾರೆ.

ಕಟ್ಟೀಮನಿಯವರು ಈ ವಿಶ್ವವಿದ್ಯಾಲಯದ ಎರಡನೇ ಕುಲಪತಿ. ಮೂರು ವರ್ಷಗಳಿಂದ ಅವರು ಅಲ್ಲಿ ಇದ್ದಾರೆ. ಇನ್ನೂ ಎರಡು ವರ್ಷ ಅವರ ಅವಧಿ ಇದೆ. ಅವರು ತವರು ರಾಜ್ಯ ಕರ್ನಾಟಕಕ್ಕೆ ಹೆಸರು ತರುವ ಹಾಗೆ ಕೆಲಸ  ಮಾಡುತ್ತಿದ್ದಾರೆ.ಬೈಗಾ ಮತ್ತು ಗೊಂಡ ಆದಿವಾಸಿಗಳು ಆಯುರ್ವೇದದಲ್ಲಿ ಅಪ್ರತಿಮ ತಿಳಿವಳಿಕೆಯುಳ್ಳವರು. ನರ್ಮದೆ ಉಗಮಸ್ಥಳದ ಗುಡಿ ಗುಂಡಾರಗಳ ಬಳಿ, ಆಜೂಬಾಜು ರಸ್ತೆಗಳ ಬದಿಗಳಲ್ಲಿ ಗಿಡಮೂಲಿಕೆಗಳನ್ನು ಇಟ್ಟುಕೊಂಡು ಕುಳಿತಿರುತ್ತಾರೆ. ತಮ್ಮ ಬಳಿ ಚಿಕಿತ್ಸೆ ತೆಗೆದುಕೊಳ್ಳಬೇಕು ಎಂದು ಅವರು ಯಾರಿಗೂ ತಲೆ ತಿನ್ನುವುದಿಲ್ಲ. ನೀವು ಹೋಗಿ ನಿಮ್ಮ ಸಮಸ್ಯೆ ಹೇಳಿದರೆ  ಚಿಕಿತ್ಸೆ ಕೊಟ್ಟಾರು.

ಕೆಲವು ಕಾಯಿಲೆಗಳಿಗೆ ರಾಮಬಾಣದಂಥ ಔಷಧಿ ಅವರ ಬಳಿ ಇದೆ ಎಂದು ಹೇಳುವವರು ಇದ್ದಾರೆ.  ಗುಲ್‌ಬಕಾವಲಿ ಹೂವಿನಿಂದ ತೆಗೆದ  ದ್ರಾವಣ ಕಣ್ಣಿನ ರೋಗಗಳಿಗೆ ದಿವ್ಯೌಷಧಿ ಎನ್ನುವವರೂ ಇದ್ದಾರೆ. ಬಾಬಾ ರಾಮದೇವ್ ಅವರ ಅನೇಕ ಆಯುರ್ವೇದ ಔಷಧಿಗಳಿಗೆ ಮೇಕಲ್‌ ಬೆಟ್ಟಸಾಲುಗಳಲ್ಲಿ ಬೆಳೆಯುವ ಔಷಧಿಗಳೇ ಮೂಲ ಸರಕು ಎಂದೂ ಕೆಲವರು ಹೇಳುತ್ತಾರೆ.ಬೈಗಾ ಮತ್ತು ಗೊಂಡ ಆದಿವಾಸಿಗಳು ಅದ್ಭುತ ಕಲಾವಿದರು. ಹಾಡು, ಕುಣಿತ, ವಾದ್ಯಗಳ ಮೇಳ, ಚಿತ್ರಕಲೆ ಎಲ್ಲದರಲ್ಲೂ ಮುಂದು. ವಿಶ್ವವಿದ್ಯಾಲಯದ ಆಡಳಿತ ಕಚೇರಿಯ ಮುಖ್ಯದ್ವಾರ ದಾಟುತ್ತಿದ್ದಂತೆಯೇ ಎರಡೂ ಬದಿಯ ಗೋಡೆಗಳ ಮೇಲೆ ‘ಗೊಂಡ’ ಚಿತ್ರಕಲೆಯ ವೈಭವ ಕಣ್ಣು ತಣಿಸುತ್ತದೆ. ಅವರದು ಎಂದೂ ಮಾಸದ ‘ಬಣ್ಣ’.ಕಳೆದ ವಾರ ಅಮರಕಂಟಕ ವಿಶ್ವವಿದ್ಯಾಲಯದ ಆವರಣದಲ್ಲಿ ಕನ್ನಡ ಸಂಸ್ಕೃತಿ ಇಲಾಖೆ, ಇಂದಿರಾ ಗಾಂಧಿ ರಾಷ್ಟ್ರೀಯ ಆದಿವಾಸಿ ವಿಶ್ವವಿದ್ಯಾಲಯ ಮತ್ತು ನಾಗಪುರದ ದಕ್ಷಿಣ ಮಧ್ಯ ವಲಯ ಸಾಂಸ್ಕೃತಿಕ ಕೇಂದ್ರಗಳ ಆಶ್ರಯದಲ್ಲಿ ಮೂರು ದಿನಗಳ ಕಾಲ ಆದಿವಾಸಿ ಕಲೆ ಮತ್ತು ಸಾಹಿತ್ಯ ಕುರಿತು ರಾಷ್ಟ್ರೀಯ ಸಮ್ಮೇಳನ ನಡೆಯಿತು. ಕರ್ನಾಟಕದಿಂದ ಬಂದಿದ್ದ ಏಳು ನೂರು ಕಲಾವಿದರು  ವಿಶ್ವವಿದ್ಯಾಲಯದ ವೇದಿಕೆ ಮೇಲೆ ಹಾಡಿ, ಕುಣಿದು, ನರ್ತಿಸಿ, ವಾದ್ಯ ನುಡಿಸಿ ತಮ್ಮೊಳಗಿನ ಕಲೆಯನ್ನು ಪ್ರದರ್ಶಿಸಿದರು. ದಕ್ಷಿಣ–ಮಧ್ಯ ಭಾರತದ ಕೆಲವು ರಾಜ್ಯಗಳ ಕಲಾವಿದರೂ ಬಂದಿದ್ದರು.ಇದು ಕಲೆಗಳ ವಿನಿಮಯಕ್ಕೆ ಇರುವ ಅವಕಾಶ. ಇಂಥ ಅವಕಾಶಗಳು ಕಲಾವಿದರ ಜೀವನದಲ್ಲಿ ಸಿಗುವುದೇ ಅಪರೂಪ. ಹೆಚ್ಚೆಂದರೆ ಬಳ್ಳಾರಿಯವರು ವಿಜಯಪುರದಲ್ಲಿ, ಬಾಗಲಕೋಟೆಯವರು ಚಾಮರಾಜನಗರದಲ್ಲಿ ತಮ್ಮ ಕಲೆ ಪ್ರದರ್ಶಿಸಲು ಅವಕಾಶ ಸಿಗುತ್ತದೆ. ಒಂದು ರಾಜ್ಯದವರು ಮತ್ತೊಂದು ರಾಜ್ಯಕ್ಕೆ ಹೋಗುವುದು ಅಲ್ಲಿ ತಮ್ಮ ಕಲೆಯನ್ನು ಪ್ರದರ್ಶಿಸುವುದು ವಿರಳ ಅವಕಾಶ. ಇಂಥದಕ್ಕೆಲ್ಲ ವಿಶ್ವವಿದ್ಯಾಲಯ ಸಹಯೋಗ ಕೊಡುವುದು ಮತ್ತು ವೇದಿಕೆ ಕೊಡುವುದು ಇನ್ನೂ ಅಪರೂಪ. ಆ ದೃಷ್ಟಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆದಿವಾಸಿ ವಿಶ್ವವಿದ್ಯಾಲಯಗಳು ಮಾಡಿದ ಕೆಲಸ  ಪ್ರಶಂಸಾರ್ಹ.ಆದರೆ, ಮೂರು ದಿನ ಸಂಜೆ ಅಲ್ಲಿ ಕುಳಿತು ನೋಡಿದಾಗ, ನಮ್ಮ ಜನಪದ ಕಲೆಗಳು ಯಾವ ವಿಸ್ತರಣೆಯೂ ಇಲ್ಲದೆ ನಿಂತಲ್ಲಿಯೇ ನಿಂತಿವೆಯೇ ಅಥವಾ ಇನ್ನೇನು ಜೀವ ಬಿಡುವ ಸ್ಥಿತಿಯಲ್ಲಿ ಇವೆಯೇ ಎಂದು ಅನಿಸಿತು; ಎರಡೂ ನಿಜ ಇರಬಹುದು. ನಾವು ಹಳ್ಳಿಗಳನ್ನು ನಾಶ ಮಾಡಿ ಜನಪದ ಕಲೆಗಳು ಜೀವಂತ ಉಳಿಯಬೇಕು ಎಂದು ಬಯಸುವುದೇ ತಪ್ಪು ಎಂದು ಅನಿಸುತ್ತದೆ. ಹಳ್ಳಿಗಳು ಈಗ ಸ್ವಾವಲಂಬಿಗಳಾಗಿ ಉಳಿದಿಲ್ಲ.

ಮೊದಲು ಅಲ್ಲಿ ಒಬ್ಬ ಕುಂಬಾರ ಇದ್ದ, ಕಂಬಾರ ಇದ್ದ. ಬಡಗಿ ಇದ್ದ, ನೇಕಾರ ಇದ್ದ. ಅವರಿಗೆ ಈಗ ಅಲ್ಲಿ ಕೆಲಸ ಇಲ್ಲ. ಮಣ್ಣಿನ ಮಡಕೆಗಳ ಜಾಗದಲ್ಲಿ ಲೋಹದ  ಪಾತ್ರೆಗಳು ಬಂದಿವೆ. ಕಂಬಾರ ಮಾಡುವ ಎಲ್ಲ ಕೆಲಸಗಳನ್ನು ಈಗ ಯಂತ್ರಗಳು ಮಾಡುತ್ತಿವೆ. ಮತ್ತು ಕಂಬಾರ ಕೊಡುವುದಕ್ಕಿಂತ ಕಡಿಮೆ ಬೆಲೆಯಲ್ಲಿ ಅವೆಲ್ಲ ಸಿಗುತ್ತಿವೆ. ನೇಕಾರನನ್ನಂತೂ ಕೇಳುವವರೇ ಇಲ್ಲ. ಮನೆ ಮಗ್ಗದಲ್ಲಿ ನೇಯ್ದ ಬಟ್ಟೆಯನ್ನು ಈಗ ಯಾರು ತೊಡುತ್ತಾರೆ?ರೈತನು ಹೊಲದಲ್ಲಿ ಬಿತ್ತುವಾಗ, ಕಸ ಕೀಳುವಾಗ, ರಾಶಿ ಮಾಡುವಾಗ, ಕಣ ಮಾಡುವಾಗ ದಣಿವು ಆಗದಿರಲಿ ಎಂದು ಹಾಡು ಹೇಳುತ್ತಿದ್ದ. ಮನೆಯಲ್ಲಿ ತಾಯಿ ಮಗುವನ್ನು ಮಲಗಿಸುವಾಗ ಜೋಗುಳ ಹಾಡುತ್ತಿದ್ದಳು. ಈಗ ಹೊಲದಲ್ಲಿ ಕೃಷಿ ಕೆಲಸ ಮಾಡುವ ರೈತನ ಜೇಬಿನಲ್ಲಿ ಮೊಬೈಲು ಬಂದು ಕುಳಿತಿದೆ. ಮನೆಯಲ್ಲಿ ಮಗುವನ್ನು ಮಲಗಿಸುವಾಗ ಲಾಲಿ ಹಾಡಬೇಕಿದ್ದ ತಾಯಿಯ ಕೈಯಲ್ಲಿ ರಿಮೋಟು ಬಂದಿದೆ. ಎರಡೂ ಕಡೆ ಹಾಡು ಸತ್ತು ಹೋಗಿದೆ.

ಕಲೆ ಈಗ ಪ್ರದರ್ಶನದ ವಸ್ತು. ಅದು ಬೆಳೆಯಬೇಕು ಎಂದರೆ ಅದು ಜೀವಂತವಾಗಿರಬೇಕು. ಯಕ್ಷಗಾನ ಹೊರತುಪಡಿಸಿ ನಮ್ಮ ನಾಡಿನ ಯಾವ ಕಲೆಗಳಿಗೂ ಈಗ ಮಾರುಕಟ್ಟೆಯಲ್ಲಿ ಬೇಡಿಕೆಯಿಲ್ಲ. ಬೇಡಿಕೆಯಿಲ್ಲದ ವಸ್ತು ನವೀಕೃತವಾಗುತ್ತ ಹೋಗುವುದಿಲ್ಲ. ಅಲ್ಲಿಯೇ ನಿಂತಲ್ಲಿಯೇ ನಿಂತು  ಬಿಡುತ್ತದೆ. ಅಗತ್ಯ ಎನಿಸಿದಾಗಲೆಲ್ಲ ವೇಷ ತೊಟ್ಟು ಹೊರಗೆ ಬರುತ್ತದೆ. ಮತ್ತೆ ಒಳಗೆ  ಹೋಗಿ ಅಡಗಿ ಕುಳಿತುಕೊಳ್ಳುತ್ತದೆ.

ಹೊರಗೆ ಬಂದಾಗಲೂ ಏದುಸಿರು ಬಿಡುತ್ತ ಇರುವಂತೆ ಭಾಸವಾಗುತ್ತದೆ. ನಾವೀನ್ಯ ಇಲ್ಲದೇ ಹೋದಾಗ ಅದು  ಕಸರತ್ತು ಮಾಡುತ್ತ ‘ರಂಜಿಸಲು’ ಯತ್ನಿಸುತ್ತದೆ. ಹೇಗೆ ಎಂದರೆ ಡೊಳ್ಳು ಕುಣಿತಕ್ಕೆ ಅಗತ್ಯವೇ ಇಲ್ಲದ ಕಸರತ್ತುಗಳನ್ನು ಕುಣಿತದವರು ಪ್ರದರ್ಶನ ಮಾಡಲು ತೊಡಗುತ್ತಾರೆ. ಒಬ್ಬರ ಮೇಲೆ ಒಬ್ಬರು ನಿಲ್ಲುತ್ತಾರೆ. ಮಾನವ ಗೋಪುರ ಮಾಡುತ್ತಾರೆ. ಗೋಪುರ ಮಾಡಿ ಡೊಳ್ಳು ಬಾರಿಸುತ್ತಾರೆ.

ಇದು ಕರ್ನಾಟಕದ ಕಲಾವಿದರಿಗೆ  ಮಾತ್ರ ಸೀಮಿತವಾದ ನಡವಳಿಕೆ ಎಂದು ನನಗೆ ಅನಿಸಲಿಲ್ಲ. ಇತರ ಕೆಲವು ರಾಜ್ಯಗಳ ಕಲಾವಿದರೂ ಹೀಗೆಯೇ ಮಾಡಿದರು. ಒಬ್ಬರ ಮೇಲೆ ಒಬ್ಬರು ನಿಂತರು. ಕಾಲ ಕೆಳಗೆ ನುಸುಳಿದರು. ಲಾಗ ಹಾಕಿದರು. ಹಾಕುತ್ತಲೇ ವಾದ್ಯ ಬಾರಿಸಿದರು. ಅವರಿಗೆ ವೇಳೆ ಸಾಕಾಗಲಿಲ್ಲವೋ ಅಥವಾ ಅವರ ನುಡಿಸಾರಿಕೆ ಒಂದು ಹಂತದಲ್ಲಿಯೇ ನಿಂತಿದೆಯೋ ತಿಳಿಯಲಿಲ್ಲ. ಅದು ತಾರಕಕ್ಕೆ ಹೋಗಲೇ ಇಲ್ಲ.

ಒಡಿಶಾ ರಾಜ್ಯದ ಸಂಭಲ್‌ಪುರಿ ಆದಿವಾಸಿ ನೃತ್ಯ ಮಾತ್ರ ಅನನ್ಯ ಎನ್ನುವಂತೆ ಇತ್ತು. ಮೂಲ ನೃತ್ಯ ಹೇಗಿತ್ತೋ ಹಾಗೆಯೇ ಅದನ್ನು ಅವರು ಉಳಿಸಿಕೊಂಡಿದ್ದಾರೆ. ಪ್ರೇಕ್ಷಕರನ್ನು ರಂಜಿಸಲು ಅವರು ಯಾವ ಕಸರತ್ತನ್ನೂ ಮಾಡಲಿಲ್ಲ. ಮೂಲದ ತಾಜಾ ಕಲೆಗೆ ತಾನೇ ತಾನಾಗಿ ರಂಜಿಸುವ ಸ್ವೋಪಜ್ಞ ಗುಣ ಇದ್ದೇ  ಇರುತ್ತದೆ ಎಂಬುದನ್ನು ಸಂಭಲ್‌ಪುರಿ ನೃತ್ಯ ಮತ್ತೆ ಸಾಬೀತು ಮಾಡಿತು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯದಿಂದ 32 ಮಂದಿ ಚಿತ್ರ ಕಲಾವಿದರನ್ನು ಮತ್ತು 22 ಮಂದಿ ಶಿಲ್ಪಿಗಳನ್ನು ಕೆಲವು ವಾರ ಮೊದಲೇ ಅಮರಕಂಟಕಕ್ಕೆ ಕಳಿಸಿಕೊಟ್ಟಿತ್ತು. ಚಿತ್ರ ಕಲಾವಿದರು ಅನೇಕ ಚಿತ್ರಗಳನ್ನು ಅಲ್ಲಿ ಬಿಡಿಸಿದ್ದರು. ಶಿಲ್ಪಿಗಳು 12 ಶಿಲ್ಪಗಳನ್ನು ಸಿಮೆಂಟಿನಲ್ಲಿ ನಿರ್ಮಿಸಿದ್ದರು.

ಅರಳಿಮರದಲ್ಲಿ ಅರಳಿ ನಿಂತ ಅಂಬೇಡ್ಕರ್‌, ಬೋಧಿವೃಕ್ಷದ ಕೆಳಗೆ ಧ್ಯಾನಸ್ಥನಾಗಿದ್ದ ಬುದ್ಧ, ಪ್ರಸಿದ್ಧ ಆದಿವಾಸಿ ಹೋರಾಟಗಾರ– ನಾಯಕ ಬಿರ್ಸಾ ಮುಂಡಾ ಅವರ ಪ್ರತಿಮೆಗಳು ಅಪ್ರತಿಮ ಎನ್ನುವಂತೆ  ಇದ್ದುವು. ಆದರೆ, 12 ಶಿಲ್ಪಗಳ ಪೈಕಿ ಒಬ್ಬರೂ ತಮ್ಮ ಅಭಿವ್ಯಕ್ತಿಗೆ ಮಹಾತ್ಮ ಗಾಂಧಿಯವರನ್ನು ಆಯ್ದುಕೊಂಡುದು ಕಾಣಲಿಲ್ಲ. ಗಾಂಧಿ ಈಗ  ಪ್ರಸ್ತುತ ಅಲ್ಲವೇ ಎಂದುಕೊಂಡೆ. ನಿಜ, ಗಾಂಧೀಜಿಯ ವ್ಯಸನಿ ಮಗ ಹರಿಲಾಲ್‌ನನ್ನು ವೈಭವಿಸುವ ಕಾಲ ಇದು.

ಆದರೆ, ಗಾಂಧೀಜಿಯವರನ್ನು ವಾಗ್ವಾದ ಮಾಡುವುದಕ್ಕಾಗಿಯಾದರೂ ನಾವು ಉಳಿಸಿಕೊಳ್ಳಬೇಕು ಹಾಗೂ ಮತ್ತೆ ಮತ್ತೆ ಎದುರಾಗಬೇಕು. ಗಾಂಧೀಜಿ ಹಳ್ಳಿಗಳು ಉಳಿಯಬೇಕು ಎಂದರು. ಅವು ಸ್ವಾವಲಂಬಿಯಾಗಿರಬೇಕು ಎಂದರು. ಅವರು ಅಲ್ಲಿನ ಗುಡಿ ಕೈಗಾರಿಕೆಗಳು ನಾಶವಾಗಬಾರದು ಎಂದಿದ್ದರು. ನಗರೀಕರಣ ಹಳ್ಳಿಗಳನ್ನು ಕೊಲ್ಲುತ್ತದೆ ಎಂದೂ ಅವರಿಗೆ ಗೊತ್ತಿತ್ತು.

ಈಗ ಹಳ್ಳಿಗಳು ಏನಾಗಿವೆ ಎಂದರೆ  ನಗರಕ್ಕೆ ಜನರನ್ನು ಗುಳೆ ಕಳಿಸುವ ತಾಣಗಳಾಗಿವೆ. ಹೊಲದಲ್ಲಿ ಕೆಲಸ ಮಾಡುವುದಕ್ಕಿಂತ ಇನ್ನೊಬ್ಬರ ಮನೆ ಕಟ್ಟುವುದರಲ್ಲಿ ಕೂಲಿ ಕೆಲಸ  ಮಾಡುವುದು ಹೆಚ್ಚು ಲಾಭಕರ ಎಂದು ಹಳ್ಳಿಗನಿಗೆ ಅನಿಸುತ್ತಿದೆ. ಅಲ್ಲಿಯೇ ಉಳಿಯಲು ಆತನಿಗೆ ಯಾವ ಆರ್ಥಿಕ ಆಕರ್ಷಣೆಗಳೂ ಉಳಿದಂತೆ ಕಾಣುವುದಿಲ್ಲ. ಇದರ ಪರಿಣಾಮ ಏನಾಯಿತು ಎಂದರೆ ನಮ್ಮ ಎಲ್ಲ ಕಲೆಗಳು ಅವನತಿಯ ಅಂಚಿಗೆ ಬಂದು ನಿಂತುವು. ಗಾಂಧಿಯನ್ನು ನಾವು ಮರೆತುದಕ್ಕೂ ಈಗಿನ ನಮ್ಮ ಹಳ್ಳಿಗಳ ಸ್ಥಿತಿಗೂ ಸಂಬಂಧ ಇದ್ದೀತು!ಅಮರಕಂಟಕ ಪರಿಸರದ ಬೈಗಾ ಮತ್ತು ಗೊಂಡ ಆದಿವಾಸಿಗಳು ಮಕ್ಕಳು ಮರಿಗಳನ್ನು ಕಟ್ಟಿಕೊಂಡು ಬಂದು ಸಂಜೆಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೋಡಿದರು. ಅವರ ಕೈಯಲ್ಲಿಯೂ ಮೊಬೈಲು ಇತ್ತು. ಕೆಲವರು ಅದರಲ್ಲಿಯೇ ವೇದಿಕೆ ಮೇಲೆ ನಡೆಯುತ್ತಿದ್ದ ಕಾರ್ಯಕ್ರಮಗಳನ್ನು ರೆಕಾರ್ಡ್‌ ಮಾಡಿಕೊಂಡರು. ಅವರು ತೊಟ್ಟುಕೊಂಡು ಬಂದಿದ್ದ ಬಟ್ಟೆಗಳನ್ನು, ಚಳಿಯಾಗಬಾರದು ಎಂದು ಸುತ್ತಿಕೊಂಡಿದ್ದ ಚಾದರಗಳನ್ನು, ಎಣ್ಣೆ ಕಾಣದ ತಲೆಯನ್ನು, ಮಾಸಿದ್ದ ಮುಖವನ್ನು ನೋಡಿದರೆ ನಮಗೆ ಸ್ವಾತಂತ್ರ್ಯ ಬಂದು ಎಷ್ಟು ವರ್ಷವಾದರೆ ಏನು ಎಂದು ಅನಿಸಿತು. ಕೆಲವರ ಬದುಕು ಬದಲಾಗುವುದೇ ಇಲ್ಲವೇ?

ದಲಿತರ, ಆದಿವಾಸಿಗಳ ಬದುಕಿನ ಸ್ಥಿತಿಗತಿ ಕುರಿತು ವಿಚಾರ ಸಂಕಿರಣದಲ್ಲಿ ಮಾತನಾಡಿದ ಕರ್ನಾಟಕದ ತರುಣ ವಿದ್ವಾಂಸರು, ಅವರೆಲ್ಲ ಬಹುತೇಕರು ದಲಿತರು ಮತ್ತು ಬುಡಕಟ್ಟು ಸಮುದಾಯದವರು, ಇದನ್ನೇ ಹೇಳಿದರು. ಅವರಲ್ಲಿ ಅನೇಕರು ತುಂಬ ಪ್ರತಿಭಾವಂತರು ಎಂದು ನನಗೆ ಅನಿಸಿತು. ಎಷ್ಟೆಲ್ಲ ಓದಿಕೊಂಡಿದ್ದಾರೆ ಎಂದೂ ಗೊತ್ತಾಯಿತು. ಆದರೆ, ‘ಹೊಲೆಯರಾಗಿರುವುದು ಎಷ್ಟು ಕಷ್ಟ’ ಎಂದು ಅವರು ತಮ್ಮ ಅನುಭವಗಳನ್ನೇ ಮುಂದಿಟ್ಟರು.ನನ್ನ ಪಕ್ಕದಲ್ಲಿ ಕುಳಿತ ಒಬ್ಬ ಕವಯಿತ್ರಿ, ಅವರು ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ, ‘ಮಾದಿಗರಾಗಿರುವುದು ಇನ್ನೂ ಕಷ್ಟ’ ಎಂದು ನನ್ನ ಕಿವಿಯಲ್ಲಿ ಪಿಸುಗುಟ್ಟಿದರು. ಈ ಎರಡೂ ಜಾತಿಸೂಚಕ ಪದಗಳನ್ನು ನಾನು ಅವತರಣಿಕೆಯಲ್ಲಿ ಇಟ್ಟಿರುವುದಕ್ಕೆ ಕಾರಣ, ಅದನ್ನು ಅವರು ಬಳಸಿದ್ದು ಎಂಬ ಕಾರಣಕ್ಕಾಗಿ. ನಾನಾಗಿ ಈ ಜಾತಿಸೂಚಕ ಪದಗಳನ್ನು ಬಳಸುತ್ತಿರಲಿಲ್ಲ.ಅಮರಕಂಟಕದಲ್ಲಿ ನಡೆದುದು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕಲಾವಿದರ ಸಮ್ಮೇಳನ. ಹಾಗಾಗಿ ಅದೇ ಸಮುದಾಯದ ಬಹುಪಾಲು  ಕಲಾವಿದರು, ಅಧ್ಯಾಪಕರು ಹಾಗೂ ವಿದ್ವಾಂಸರನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಹ್ವಾನಿಸಿತ್ತು. ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ್ದ ಪ್ರೊ.ಗಿರಡ್ಡಿ ಗೋವಿಂದರಾಜ, ಗುಜರಾತಿನ ನಿವೃತ್ತ  ಕುಲಪತಿ ಬಲವಂತ್‌ ಜಾನಿ ಮತ್ತ ನಾನು ವಿಶ್ವವಿದ್ಯಾಲಯದ ಅತಿಥಿಗಳಾಗಿ ಹೋಗಿದ್ದೆವು.ಕನ್ನಡ ಸಂಸ್ಕೃತಿ ಇಲಾಖೆಯು ಹೀಗೆ ಒಂದೇ ಸಮುದಾಯಕ್ಕೆ ಸೇರಿದ ಕಲಾವಿದರನ್ನು ಕರೆಯುವುದು ಒಂದು ರೀತಿಯಲ್ಲಿ ಸರಿ ಇರಬಹುದು.  ಈ ಸಮುದಾಯಗಳಿಗೆ ಸೇರಿದ ಕಲಾವಿದರು ಅನೇಕ ವರ್ಷಗಳಿಂದ ಅವಕಾಶಗಳಿಂದ ವಂಚಿತರಾದವರು, ಅದಕ್ಕಾಗಿ ಅವರಿಗೆ  ಈಗ ಅವಕಾಶ ಸಿಗುತ್ತಿದೆ ಎಂಬ ಸಮರ್ಥನೆಯೂ ಸರಿ ಇರಬಹುದು;  ಅಥವಾ ಸರ್ಕಾರದ ನಿಯಮವೇ ಹೀಗೆ ಮಾಡುವುದನ್ನು ಸಮರ್ಥಿಸುತ್ತಿರಬಹುದು. ಆದರೆ, ಇದು ಕಲಾವಿದರಲ್ಲಿ ಮತ್ತೆ ಪ್ರತ್ಯೇಕತೆಯನ್ನೇ ಸೃಷ್ಟಿಸುವುದಿಲ್ಲವೇ? 

ಪರಿಶಿಷ್ಟ ಜಾತಿ ಮತ್ತು ವರ್ಗಕ್ಕೆ ಸೇರದ ಆದರೆ, ಹಿಂದುಳಿದ ವರ್ಗಗಳಿಗೆ ಸೇರಿದ ಅನೇಕ ಕಲಾವಿದರಿಗೆ ತಮ್ಮ ಕಲೆಯನ್ನು ಪ್ರದರ್ಶಿಸುವ ಅವಕಾಶ ಸಿಗುವುದು ಹೇಗೆ? ಬಡವರು ಮತ್ತು ಅವಕಾಶವಂಚಿತರಾದ ಎಲ್ಲ ಸಮುದಾಯದವರಿಗೆ ಪ್ರಾತಿನಿಧ್ಯ ಕೊಡುವುದರಿಂದ ಪರಸ್ಪರರಿಂದ ಕಲಿಯಲು ಅವಕಾಶವಾಗುತ್ತದೆ. ಕಲಾವಿದರ ನಡುವಿನ ಗೋಡೆಗಳನ್ನು ಒಡೆಯಲು ಅದು ಅನುವು ಮಾಡುತ್ತದೆ. ಅದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿನ ಗೋಡೆಗಳನ್ನು ಒಡೆಯಲೂ ಅದು ನೆರವಾಗಬಹುದು.ಕುಲಪತಿ ಪ್ರೊ.ಕಟ್ಟೀಮನಿ, ರಿಜಿಸ್ಟ್ರಾರ್‌ ಡಾ.ಬಸವರಾಜ ಡೋಣೂರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ಅಶೋಕ ಚಲವಾದಿ ಅನೇಕ ದಿನಗಳ ಕಾಲ ಹಗಲು ರಾತ್ರಿ ದುಡಿದು ಮೂರು ದಿನಗಳ ಸಾಂಸ್ಕೃತಿಕ ಸಮ್ಮೇಳನವನ್ನು ಯಶಸ್ಸುಗೊಳಿಸಿದರು ಎಂಬುದರಲ್ಲಿ ಅನುಮಾನವಿಲ್ಲ. ಅವರಿಗೆ ಅಭಿನಂದನೆ ಸಲ್ಲಬೇಕು. ಆದರೆ, ನಮ್ಮ ಜನಪದ ಕಲೆಗಳನ್ನು ಉಳಿಸಲು ಇಷ್ಟೇ ಸಾಕೇ? ಅವರ ಕಲೆಗಳನ್ನು ವಿಸ್ತರಿಸಲು ಇನ್ನೂ ಏನು ಮಾಡಬೇಕು? ಅದಕ್ಕೂ ಮಿಗಿಲು ಅವರ ಬದುಕನ್ನು ಉತ್ತಮಗೊಳಿಸುವುದು ಹೇಗೆ?

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry