7

ಕಾನೂನಿಗೆ ವಿರುದ್ಧವಾದ ‘ಸರಿಯಾದ ಕೆಲಸ’!

Published:
Updated:
ಕಾನೂನಿಗೆ ವಿರುದ್ಧವಾದ ‘ಸರಿಯಾದ ಕೆಲಸ’!

ಅಧಿಕಾರ  ವಹಿಸಿಕೊಳ್ಳುವಾಗ ಪ್ರಧಾನಿ ಹಾಗೂ ಎಲ್ಲ ಸಚಿವರು ಈ ರೀತಿ ಪ್ರಮಾಣ ವಚನ ಸ್ವೀಕರಿಸುತ್ತಾರೆ: ‘ದೇಶದ ಸಂವಿಧಾನಕ್ಕೆ ನಾನು ಬದ್ಧನಾಗಿರುತ್ತೇನೆ, ನಾನು ದೇಶದ ಸಾರ್ವಭೌಮತ್ವ ಹಾಗೂ ಏಕತೆಯನ್ನು ಎತ್ತಿಹಿಡಿಯುತ್ತೇನೆ, ನನ್ನ ಪಾಲಿನ ಕರ್ತವ್ಯಗಳನ್ನು ನಿಷ್ಠೆಯಿಂದ ಹಾಗೂ ಪ್ರಜ್ಞಾಪೂರ್ವಕವಾಗಿ ನಿಭಾಯಿಸುತ್ತೇನೆ, ನಾನು ಸಂವಿಧಾನಕ್ಕೆ ಅನುಗುಣವಾಗಿ ರಾಗ–ದ್ವೇಷಗಳಿಲ್ಲದೆ ಎಲ್ಲರಿಗೂ ಒಳಿತನ್ನು ಮಾಡುತ್ತೇನೆ ಎಂಬುದನ್ನು ದೇವರ ಹೆಸರಿನಲ್ಲಿ ಪ್ರಮಾಣ ಮಾಡುತ್ತೇನೆ’.

 

ಈ ಪ್ರಮಾಣ ವಚನವನ್ನು ಸಂವಿಧಾನದ ಮೂರನೆಯ ಅನುಬಂಧದಿಂದ ಆಯ್ದುಕೊಳ್ಳಲಾಗಿದೆ. ಇದಲ್ಲದೆ, ‘ಸಚಿವನಾಗಿ ನಾನು ನಿಭಾಯಿಸಬೇಕಿರುವ ಕರ್ತವ್ಯಗಳಿಗೆ ಅಗತ್ಯವಿರುವ ಮಾಹಿತಿ ಹೊರತುಪಡಿಸಿ, ನನ್ನ ಪರಿಶೀಲನೆಗೆ ಬರುವ ಇತರ ಸಂಗತಿಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳ ಗುಂಪಿಗೆ ತಿಳಿಸುವುದಿಲ್ಲ’ ಎಂಬ ಗೋಪ್ಯತೆಯ ಪ್ರಮಾಣ ವಚನ 

ಕೂಡ ಇದೆ.

 

ಸಂವಿಧಾನಕ್ಕೆ ಬದ್ಧರಾಗಿ ಇರಬೇಕು ಅಂದರೆ ಕಾನೂನನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು ಎಂಬ ಪ್ರಮಾಣ ವಚನವನ್ನು ನಮ್ಮ ಸಚಿವರು ಎಷ್ಟರಮಟ್ಟಿಗೆ ಗಂಭೀರವಾಗಿ ಪರಿಗಣಿಸುತ್ತಾರೆ? ಬಿಬಿಸಿ ಹಿಂದಿನ ವಾರ ಈ ಸುದ್ದಿಯನ್ನು ಬಿತ್ತರಿಸಿತು: ‘ಅತ್ಯಾಚಾರದ ಆರೋಪಿಗಳು ಪ್ರಾಣಭಿಕ್ಷೆ ಬೇಡುವಂತೆ ಮಾಡಿದೆ, ಅವರನ್ನು ಹಿಂಸಿಸುವಂತೆ ಪೊಲೀಸರಿಗೆ ಆದೇಶಿಸಿದೆ ಎಂದು ಭಾರತದ ಸಚಿವರೊಬ್ಬರು ಹೇಳಿದರು’ ಎಂಬುದು ವರದಿಯಲ್ಲಿದ್ದ ಅಂಶ.

 

‘ಅತ್ಯಾಚಾರಿಗಳನ್ನು ಅತ್ಯಾಚಾರಕ್ಕೆ ಒಳಗಾದವರ ಎದುರೇ ಹಿಂಸೆಗೆ ಗುರಿಪಡಿಸಬೇಕು. ಆರೋಪಿಗಳು ಕ್ಷಮೆ ಕೇಳುವವರೆಗೂ ಹೀಗೆ ಮಾಡುತ್ತಿರಬೇಕು’ ಎಂದು ಕೇಂದ್ರ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಅವರು ಹೇಳಿದ್ದಾರೆ. ‘ಅತ್ಯಾಚಾರಿಗಳನ್ನು ತಲೆಕೆಳಗೆ ಮಾಡಿ ನೇತುಹಾಕಿ, ಅವರ ಚರ್ಮ ಸುಲಿದುಬರುವವರೆಗೆ ಬಾರಿಸಬೇಕು’ ಎಂದು ಸಚಿವರು ಹೇಳಿರುವುದಾಗಿ ವರದಿಯಾಗಿದೆ.

 

‘ಅವರು ಚೀರಿಕೊಳ್ಳುವವರೆಗೆ ಗಾಯಗಳ ಮೇಲೆ ಉಪ್ಪು ಮತ್ತು ಮೆಣಸಿನ ಪುಡಿ ಸವರಬೇಕು’ ಎಂಬ ವಾಕ್ಯವೂ ಅವರ ಮಾತುಗಳಲ್ಲಿ ಇದೆ.

ಸಚಿವರು ತಾವು ಮಾಡಿರುವುದಾಗಿ ಹೇಳಿರುವುದು ವಾಸ್ತವದಲ್ಲಿ ಒಂದು ಅಪರಾಧ ಕೃತ್ಯ. ಉಮಾ ಅವರು ಹೇಳಿರುವಂತೆ ಮಾಡಲು ಕಾನೂನು ಹಾಗೂ ಸಂವಿಧಾನ ಅವಕಾಶ ನೀಡುವುದಿಲ್ಲ. ಅಪರಾಧ ಕೃತ್ಯಗಳ ವಿಚಾರದಲ್ಲಿ ಏನು ಮಾಡಬೇಕು ಎಂಬುದನ್ನು ಕಾನೂನು ಸ್ಪಷ್ಟವಾಗಿ ಹೇಳುತ್ತದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಬೇಕು, ಆರೋಪಿ ವಿರುದ್ಧ ಕಾನೂನಿನ ಕ್ರಮ ಜರುಗಿಸಲು ಸರ್ಕಾರ ಮುಂದಾಗಬೇಕು, ಆತನಿಗೆ ಶಿಕ್ಷೆ ಏನು ಎಂಬುದನ್ನು ನ್ಯಾಯಾಂಗ ತೀರ್ಮಾನಿಸಬೇಕು. ತಾವು ಏನೋ ಮಾಡಿರುವುದಾಗಿ ಉಮಾ ಅವರು ಹೇಳಿಕೊಳ್ಳುತ್ತಿದ್ದಾರಲ್ಲ? ಅದು, ‘ನಾನು ಕಾನೂನು ಹಾಗೂ ಸಂವಿಧಾನವನ್ನು ಎತ್ತಿಹಿಡಿಯುವೆ’ ಎಂಬ ಪ್ರಮಾಣವನ್ನು ಉಲ್ಲಂಘಿಸಿದಂತೆ.

 

ಭಾರತ ಉಪಖಂಡದಲ್ಲಿ ಉದ್ರಿಕ್ತ ಗುಂಪುಗಳು ವಿಚಾರಣೆಯನ್ನೇ ನಡೆಸದೆ ಶಿಕ್ಷೆ ಕೊಡುತ್ತವೆ. ಇಂಥ ಕೃತ್ಯ ಎಸಗುವ ಸಚಿವರನ್ನು ಹೊಂದಿರುವುದು, ಆ ಸಚಿವರು ತಾವು ಮಾಡಿರುವ ಕೃತ್ಯದ ಬಗ್ಗೆ ಹೆಮ್ಮೆಯಿಂದ ಇರುವುದು ಭಾರತದಲ್ಲಿ ಕಾನೂನುಗಳನ್ನು ಹೇಗೆ ಕಾಣಲಾಗುತ್ತದೆ, ಪ್ರಮಾಣ ವಚನದ ಬಗ್ಗೆ ಸಚಿವರು ಎಷ್ಟು ಗಂಭೀರವಾಗಿದ್ದಾರೆ ಎಂಬುದನ್ನು ತೋರಿಸುತ್ತದೆ.

 

ಅತ್ಯಾಚಾರಿಗಳಿಗೆ ಶಿಕ್ಷೆ ಕೊಡಿಸಿದ್ದೇವೆ ಎಂದು ಈ ರೀತಿ ಜಂಬ ಕೊಚ್ಚಿಕೊಳ್ಳುವುದನ್ನು, ಭಾರತದಲ್ಲಿ ಅತ್ಯಾಚಾರಿಗಳಿಗೆ ನಿಜವಾಗಿ ಆಗಿರುವ ಶಿಕ್ಷೆಯ ಪ್ರಮಾಣದ ಜೊತೆ ಹೋಲಿಸಬೇಕು. ಮುಜಫ್ಫರ್‌ನಗರದಲ್ಲಿ 2013ರಲ್ಲಿ ನಡೆದ ಹಿಂಸಾಚಾರದಲ್ಲಿ ಸರಣಿ ಅತ್ಯಾಚಾರಕ್ಕೆ ಒಳಗಾದ ಏಳು ಜನರಲ್ಲಿ ಯಾರೊಬ್ಬರಿಗೂ ಇದುವರೆಗೆ ನ್ಯಾಯ ಸಿಕ್ಕಿಲ್ಲ. ಏಳು ಜನರ ಪೈಕಿ ಒಬ್ಬ ಮಹಿಳೆ ಮೃತಪಟ್ಟಿದ್ದು, ಇನ್ನುಳಿದ ಆರು ಜನ ವ್ಯವಸ್ಥೆಯು ತಮ್ಮ ಮಾತನ್ನು ಆಲಿಸಲಿ ಎಂಬ ಹೋರಾಟ ನಡೆಸುತ್ತಿದ್ದಾರೆ. ಅತ್ಯಾಚಾರ ನಡೆಸಿದ್ದಾರೆ ಎನ್ನಲಾದವರು ಈ ಮಹಿಳೆಯರಿಗೆ ಬೆದರಿಕೆ ಒಡ್ಡಿದ್ದಾರೆ.

 

ಲೈಂಗಿಕ ಹಿಂಸಾಚಾರ ನಡೆಸಿದವರಿಗೆ ಭಾರಿ ಶಿಕ್ಷೆ ನೀಡಿದ್ದೇವೆ ಎಂದು ಹೇಳಿಕೊಳ್ಳುವವರಿಂದಲೂ ಈ ಮಹಿಳೆಯರಿಗೆ ಬೆಂಬಲ ಸಿಕ್ಕಿಲ್ಲ.

ದೆಹಲಿಯಲ್ಲಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ನಡೆಸಿ, ಆಕೆಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಪ್ರಕರಣ (ನಿರ್ಭಯಾ ಪ್ರಕರಣ) ವರದಿಯಾದ ನಂತರ ದೇಶದಾದ್ಯಂತ ಬೃಹತ್ ಅಭಿಯಾನ ನಡೆಯಿತು. ಈ ಅಭಿಯಾನದ ಪರಿಣಾಮವಾಗಿ, ಲೈಂಗಿಕ ಹಿಂಸಾಚಾರದ ಸಂತ್ರಸ್ತರಿಗೆ ನ್ಯಾಯ ತ್ವರಿತವಾಗಿ ಸಿಗಬೇಕು ಎಂಬ ಉದ್ದೇಶದಿಂದ ಕಾನೂನಿಗೆ ತಿದ್ದುಪಡಿ ತರಲಾಯಿತು. ಆದರೆ ತಳಮಟ್ಟದಲ್ಲಿ ಯಾವ ಬದಲಾವಣೆಯೂ ಕಂಡುಬಂದಿಲ್ಲ ಎಂಬುದು ವಾಸ್ತವ ಸಂಗತಿ. 

 

ಇದನ್ನು ಮುಜಫ್ಫರ್‌ನಗರದಲ್ಲಿ ನಡೆದ ಸರಣಿ ಅತ್ಯಾಚಾರ ತೋರಿಸಿಕೊಟ್ಟಿದೆ.

 

ಒಂದೆಡೆ ನಮ್ಮ ಪ್ರಭುತ್ವವು ಲೈಂಗಿಕ ಹಿಂಸಾಚಾರ ಪ್ರಕರಣಗಳನ್ನು ನಿಭಾಯಿಸುವಲ್ಲಿ ಸಂಪೂರ್ಣವಾಗಿ ಸೋತಿರುವುದು ಕಂಡುಬರುತ್ತದೆ. ಇನ್ನೊಂದೆಡೆ, ಇಂಥ ಅಪರಾಧಗಳನ್ನು ನಿಗ್ರಹಿಸಲು ತಾವು ಮಾಡಿರುವ ಅಸಾಧಾರಣ ಕೆಲಸಗಳನ್ನು ಹೇಳಿಕೊಳ್ಳುವ ಸಚಿವರು ಇದ್ದಾರೆ.

 

ಉಮಾ ಅವರು ಹೇಳಿರುವ ಮಾತುಗಳಲ್ಲಿ ಅಸಾಮಾನ್ಯ ವಿಚಾರವೊಂದು ಇದೆ. ತಾವು ಸಂವಿಧಾನದ ಆಶಯಗಳನ್ನು ಉಲ್ಲಂಘಿಸುತ್ತಿರುವುದು ಅವರ ಅರಿವಿಗೆ ಬಂದಿರುವ ಸಾಧ್ಯತೆ ಇಲ್ಲ. ತಾವು ಮಾಡಿದ್ದು ಸರಿ ಎಂಬ ನಂಬಿಕೆಯೇ ಅವರಲ್ಲಿ ಇದೆ. ಅವರಂತಹ ವ್ಯಕ್ತಿಗಳ ದೃಷ್ಟಿಕೋನದಲ್ಲಿ ‘ಸರಿಯಾದ ಕೆಲಸ’ ಎಂದರೆ ಕಾನೂನಿಗೆ ಅನುಗುಣವಾಗಿ ಶಿಕ್ಷೆ ಕೊಡಿಸುವುದಲ್ಲ.

 

ಒಳ್ಳೆಯ ಕುಟುಂಬಗಳಿಗೆ ಸೇರಿರದ ವ್ಯಕ್ತಿಗಳು ಬಹುಶಃ ಹುಟ್ಟಿನಿಂದಲೇ ಕೆಟ್ಟವರಾಗಿರುತ್ತಾರೆ ಹಾಗೂ ಅವರು ಶಿಕ್ಷೆಗೆ ಗುರಿಯಾಗಬೇಕು ಎಂಬ ನಂಬಿಕೆ ಸಮಾಜದಲ್ಲಿ ಇದೆ. ಆದರೆ, ಕಾನೂನಿನ ಸುಧಾರಿತ ಪರಿಕಲ್ಪನೆಯು ಆರೋಪಿಗಳಿಗೂ ರಕ್ಷಣೆಯನ್ನು ನೀಡುತ್ತದೆ. ಹಾಗಾಗಿಯೇ ನ್ಯಾಯಶಾಸ್ತ್ರದಲ್ಲಿ ‘ಅಪರಾಧ ಸಾಬೀತಾಗುವವರೆಗೂ ನಿರಪರಾಧಿ’ ಎಂಬ ಮಾತು ಇದೆ. ಆದರೆ ಸಚಿವರು ತೋರಿಸಿರುವ ಅನಾಗರಿಕ ಚಿಂತನಾ ಕ್ರಮ ನ್ಯಾಯಶಾಸ್ತ್ರದ ಈ ಮಾತಿಗೆ ವಿರುದ್ಧವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry