ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಮೇಲೆ ದೃಷ್ಟಿ ನೆಟ್ಟ ಪ್ಲಾನೆಟ್‌ ಲ್ಯಾಬ್ಸ್

Last Updated 15 ಫೆಬ್ರುವರಿ 2017, 20:17 IST
ಅಕ್ಷರ ಗಾತ್ರ

ಬೆಂಗಳೂರು:  ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೊ) ಬುಧವಾರ ನಭಕ್ಕೆ ಸೇರಿಸಿದ 104 ಉಪಗ್ರಹಗಳಲ್ಲಿ 96 ನ್ಯಾನೊ ಉಪಗ್ರಹಗಳು ಅಮೆರಿಕದ ಖಾಸಗಿ ಕಂಪೆನಿಗಳದ್ದು.  ಅವುಗಳಲ್ಲಿ 88 ಉಪಗ್ರಹಗಳು ಅಮೆರಿಕದ ‘ಪ್ಲಾನೆಟ್‌ ಲ್ಯಾಬ್ಸ್ ಇಂಕ್’ ಎಂಬ ಖಾಸಗಿ ಕಂಪೆನಿಯದ್ದು.

2010ರಲ್ಲಿ ಆರಂಭವಾದ ಈ ಸಂಸ್ಥೆ, ಉಪಗ್ರಹಗಳಿಂದ ಭೂಮಿಯ ಚಿತ್ರಗಳನ್ನು ತೆಗೆದುಕೊಡುವ ಸೇವೆ ನೀಡುತ್ತದೆ. ಹೆಚ್ಚು ಸ್ಪಷ್ಟವಾದ ಚಿತ್ರಗಳಿಗೆ ಈ ಕಂಪೆನಿ ಹೆಸರುವಾಸಿಯಾಗಿದೆ. ಬುಧವಾರ ಕಕ್ಷೆಗೆ ಸೇರಿದ 88 ಉಪಗ್ರಹಗಳೂ ಸೇರಿ, ಪ್ಲಾನೆಟ್‌ ಲ್ಯಾಬ್ಸ್‌ನ ಒಟ್ಟು 143 ಉಪಗ್ರಹಗಳು ಈಗ ಕಕ್ಷೆಯಲ್ಲಿವೆ.
‘ಕಾರ್ಖಾನೆಗಳು, ಗಣಿ ಕಂಪೆನಿಗಳು, ಬೃಹತ್‌ ಜಮೀನು ಇರುವ ಕೃಷಿಕರು ನಮ್ಮಿಂದ ಚಿತ್ರಗಳನ್ನು ಖರೀದಿಸುತ್ತಾರೆ. ವಿಸ್ತಾರವಾದ ತಮ್ಮ ಸ್ವತ್ತಿನ ಮೇಲೆ ನಿಗಾ ಇಡುವ ಸಲುವಾಗಿ ಇಂತಹ ಚಿತ್ರಗಳ ಮೊರೆ ಹೋಗುತ್ತಾರೆ. ಬೇಹುಗಾರಿಕೆಗೆ ನಮ್ಮ ಚಿತ್ರಗಳನ್ನು  ಬಳಸಿಕೊಳ್ಳುವವರ ಸಂಖ್ಯೆ ಇತ್ತೀಚೆಗೆ ಹೆಚ್ಚುತ್ತಿದೆ’ ಎಂದು ಪ್ಲಾನೆಟ್‌ ಲ್ಯಾಬ್ಸ್‌ ಹೇಳಿದೆ.

ಡವ್‌ಗಳು
ಪ್ಲಾನೆಟ್ ಲ್ಯಾಬ್ಸ್‌  ಈ ಕ್ಯಾಮೆರಾ ಉಪಗ್ರಹಗಳನ್ನು ಡವ್‌ಗಳೆಂದು ಕರೆದಿದೆ. ಕೇವಲ 4.7 ಕೆ.ಜಿ ತೂಕ ಇರುವ ಈ ಉಪಗ್ರಹಗಳು ಪಕ್ಷಿಯನ್ನು ಹೋಲುತ್ತವೆ.   ಬುಧವಾರ ಕಕ್ಷೆಗೆ ಸೇರಿಸಿದ 88 ಡವ್‌ ಉಪಗ್ರಹಗಳು ಮೂಲತಃ ಹೆಚ್ಚು ಸ್ಪಷ್ಟವಾದ (ರೆಸಲ್ಯೂಶನ್) ಚಿತ್ರಗಳನ್ನು ಕಳುಹಿಸುವ ಕ್ಯಾಮೆರಾಗಳಾಗಿವೆ. ಅದರ ಜತೆಯಲ್ಲೇ ಕ್ಯಾಮೆರಾ ದಿಕ್ಕನ್ನು ಬದಲಿಸುವ ಮತ್ತು ಚಿತ್ರಗಳನ್ನು ಭೂಮಿಗೆ ಕಳುಹಿಸುವ ಉಪಕರಣಗಳು ಇದರಲ್ಲಿವೆ. ಕೆಲಸ ನಿರ್ವಹಿಸಲು ಅಗತ್ಯವಾದ ಶಕ್ತಿಯನ್ನು ಸೂರ್ಯನ ಬೆಳಕಿನ ಮೂಲಕ ಪಡೆಯಲು ಸೌರಫಲಕಗಳನ್ನು ಇವುಗಳಿಗೆ ಅಳವಡಿಸಲಾಗಿದೆ.

ಸೂರ್ಯಸ್ಥಾಯಿ ಕಕ್ಷೆ

ಇದು ಉಪಗ್ರಹಗಳು ಭೂಮಿಯ ಉತ್ತರ ಮತ್ತು ದಕ್ಷಿಣ ಧ್ರುವಗಳನ್ನು ಸುತ್ತಿಕೊಂಡು ಬರುವ ಕಕ್ಷೆ. ಇವು ನಿಗದಿತ ಪಥದಲ್ಲಿ ಸುತ್ತುತಲೇ ಇರುತ್ತವೆ. ಭೂಸ್ಥಿರ ಉಪಗ್ರಹಗಳು ಪ್ರತಿ ಕ್ಷಣವೂ ಒಂದೇ ಸ್ಥಳವನ್ನು ಕೇಂದ್ರೀಕರಿಸಿರುತ್ತವೆ. ಆದರೆ ಸೂರ್ಯಸ್ಥಾಯಿ ಕಕ್ಷೆಯಲ್ಲಿರುವ ಉಪಗ್ರಹಗಳು ದಿನವೊಂದರ ಒಂದು ಸಮಯದಲ್ಲಿ ಹಾದುಹೋಗುವ ಜಾಗವನ್ನು ಮರುದಿನವೂ ಅದೇ ಸಮಯದಲ್ಲಿ ಹಾದು ಹೋಗುತ್ತದೆ.
ಪ್ಲಾನೆಟ್‌ ಲ್ಯಾಬ್ಸ್‌ ಇಂಕ್‌ನ 88 ಡವ್ ಕ್ಯಾಮೆರಾ ಉಪಗ್ರಹಗಳೂ ಭೂಮಿಯಿಂದ 505 ಕಿ.ಮೀ ಎತ್ತರದ ಸೂರ್ಯ ಸ್ಥಾಯಿ ಕಕ್ಷೆಯಲ್ಲಿ ಇರಲಿವೆ. ಕಂಪೆನಿಯ ಉಳಿದ ಉಪಗ್ರಹಗಳು ಬೇರೆ ಬೇರೆ ಎತ್ತರದ ಸೂರ್ಯಸ್ಥಾಯಿ ಕಕ್ಷೆಯಲ್ಲಿ ಇರಲಿವೆ. ಕಡಿಮೆ ಎತ್ತರದಲ್ಲಿರುವ ಉಪಗ್ರಹಗಳು ನೀಡುವ ಚಿತ್ರಗಳ ಸ್ಪಷ್ಟತೆ ಹೆಚ್ಚಿರಲಿದೆ.

ಹೀಗೆ ಒಂದರ ಪಕ್ಕದಲ್ಲಿ ಒಂದರಂತೆ 88 ಡವ್‌ ಉಪಗ್ರಹಗಳನ್ನು ಪಿಎಸ್‌ಎಲ್‌ವಿ ಕಕ್ಷೆಗೆ ಸೇರಿಸಿದೆ. ಇವು ಈಗ ಸೂರ್ಯ ಸ್ಥಾಯಿ ಕಕ್ಷೆಯಲ್ಲಿ ಸಂಚರಿಸಲಿವೆ

143- ಕಕ್ಷೆಯಲ್ಲಿರುವ ಸಂಸ್ಥೆಯ ಉಪಗ್ರಹಗಳ ಸಂಖ್ಯೆ

88- ಬುಧವಾರ ಕಕ್ಷೆಗೆ ಸೇರಿದ ಪ್ಲಾನೆಟ್ ಸಂಸ್ಥೆಯ ಉಪಗ್ರಹಗಳ ಸಂಖ್ಯೆ

ಆಧಾರ: ಇಸ್ರೊ, ಪ್ಲಾನೆಟ್‌ ಲ್ಯಾಬ್ಸ್‌ ಇಂಕ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT