7

ಭಾರತ ಪ್ರಜಾಸತ್ತೆಯ ಕತ್ತಲ ಭಾಗ

ರಾಮಚಂದ್ರ ಗುಹಾ
Published:
Updated:
ಭಾರತ ಪ್ರಜಾಸತ್ತೆಯ ಕತ್ತಲ ಭಾಗ

ಮೂರನೇ ಸಾರ್ವತ್ರಿಕ ಚುನಾವಣೆ 1962ರಲ್ಲಿ ನಡೆದ ನಂತರ ವಿದ್ವಾಂಸ ಮತ್ತು ಮುತ್ಸದ್ದಿ ಸಿ. ರಾಜಗೋಪಾಲಾಚಾರಿ (ರಾಜಾಜಿ) ಅವರು ನಮ್ಮ ಯುವ ಪ್ರಜಾಸತ್ತೆಯ ಅಪರಿಪೂರ್ಣ ಅಂಶಗಳ ಬಗ್ಗೆ ಬರೆದ ಮನಮುಟ್ಟುವ ಲೇಖನ ಇಂದು ನಮಗೆಲ್ಲ ಮರೆತು ಹೋಗಿದೆ. ‘ಭಾರತದ ಮತದಾರ ಸಮುದಾಯವು ಚಿರಪರಿಚಿತವಾದ ಹಲವು ಲೋಪಗಳಿಂದ ನರಳುತ್ತಿದೆ. ಪಶ್ಚಿಮದ ಪ್ರಜಾಸತ್ತೆಗಳು ತುಲನಾತ್ಮಕವಾಗಿ ಈ ಸಮಸ್ಯೆಗಳಿಂದ ಮುಕ್ತವಾಗಿವೆ. ಭಾರತದ ಮತದಾರರು ಬಡವರು ಮತ್ತು ಹಾಗಾಗಿ ಲಂಚದ ಆಮಿಷಕ್ಕೆ ಅವರು ಸುಲಭವಾಗಿ ತುತ್ತಾಗುತ್ತಾರೆ: ಒಂದು ದಿನದ ಆಹಾರದ ವೆಚ್ಚವನ್ನು ಕೊಟ್ಟರೂ ಬಡವರ ಮತಗಳನ್ನು ದೊಡ್ಡ ಸಂಖ್ಯೆಯಲ್ಲಿ  ಖರೀದಿಸಲು ಸಾಧ್ಯವಿದೆ’.

 

ಬ್ರಿಟಿಷ್‌ ಆಳ್ವಿಕೆಯ ಭಾರತದಲ್ಲಿ ಮತ್ತು ನಂತರ ಸ್ವತಂತ್ರ ಭಾರತದಲ್ಲಿ ನಡೆದ ಚುನಾವಣೆಗಳನ್ನು ರಾಜಾಜಿ ಕಂಡಿದ್ದಾರೆ ಮತ್ತು ಈ ಚುನಾವಣೆಗಳಲ್ಲಿ ಸ್ವತಃ ಪ್ರಚಾರವನ್ನೂ ಮಾಡಿದ್ದಾರೆ. ‘ಇತ್ತೀಚೆಗೆ ನಡೆದ ಚುನಾವಣೆಗಳಲ್ಲಿ ಅತ್ಯಂತ ವಿಷಾದನೀಯ ಅಂಶವೆಂದರೆ ಗಾಬರಿಯಾಗುವಷ್ಟು ಪ್ರಮಾಣದಲ್ಲಿ ಏರಿಕೆಯಾದ ಚುನಾವಣಾ ಖರ್ಚು ಮತ್ತು ಬಡವರು ಮತ್ತು ಅನಕ್ಷರಸ್ಥರ ಮತಗಳನ್ನು ಖರೀದಿಸುವುದಕ್ಕಾಗಿ ಈ ಹಣದ ಹರಿವಿನ ರೀತಿ. ನಮ್ಮ ಪ್ರಜಾಸತ್ತೆಯ ಮುಂದೆ ಇರುವ ಆಶಾಕಿರಣ ಅಥವಾ ಈ ಸಮಸ್ಯೆಗೆ ಪರಿಹಾರ ಏನು ಎಂಬ ಪ್ರಶ್ನೆ ಕೇಳುವಂತೆ ಅಪಾರ ಪ್ರಮಾಣದ ಈ ಹಣದ ಹರಿವು ಮಾಡುತ್ತದೆ. ಹೀಗೆ ಒಳ್ಳೆಯ ಆಡಳಿತದ ಬಗೆಗಿನ ಹಸಿವನ್ನು ನಿಷ್ಫಲಗೊಳಿಸಲಾಗಿದ್ದು, ಅದು ಒಂದು ರೀತಿಯ ಹಿಂಸಾತ್ಮಕ ಪಲಾಯನಕ್ಕೆ ಕಾರಣವಾಗಿದೆ. ಈ ಮೂಲಕ ಪ್ರಜಾಸತ್ತೆಯ ದುರಂತವನ್ನು ಧ್ವನಿಸುತ್ತಿದೆ’ ಎಂದು 1962ರಲ್ಲಿ ರಾಜಾಜಿ ಬರೆದಿದ್ದರು.

 

ಚುನಾವಣೆಗಳಲ್ಲಿ ಹಣಬಲದ ಪಾತ್ರದ ಬಗ್ಗೆ ಮಾತನಾಡಿದ ಮೊದಲಿಗರಲ್ಲಿ ರಾಜಾಜಿ ಅವರೂ ಒಬ್ಬರು. ಹಣಬಲದ ಪಾತ್ರ ನಂತರ ತೋಳ್ಬಲದ ಬಳಕೆಗೆ ಕಾರಣವಾಯಿತು. ಮಿಲನ್‌ ವೈಷ್ಣವ್‌ ಅವರ ಹೊಸ ಪುಸ್ತಕ ‘ವೆನ್‌ ಕ್ರೈಮ್‌ ಪೇಸ್‌’ ಈ ಬಗ್ಗೆ ಬೆಳಕು ಚೆಲ್ಲುತ್ತದೆ. ಇತ್ತೀಚಿನ ದಶಕಗಳಲ್ಲಿ ಭಾರತದ ರಾಜಕಾರಣ ಹೆಚ್ಚು ಹೆಚ್ಚು ಅಪರಾಧೀಕರಣಗೊಳ್ಳುತ್ತಿರುವುದರ ಬಗ್ಗೆ ಅಧ್ಯಯನ ನಡೆಸಿ ಬರೆಯಲಾದ ಪುಸ್ತಕ ಇದು. ಒಬ್ಬೊಬ್ಬ ಗೂಂಡಾ ರಾಜಕಾರಣಿಯನ್ನು ಪ್ರತ್ಯೇಕವಾಗಿ ಅಧ್ಯಯನ ಮಾಡಿ ಅಸೋಸಿಯೇಷನ್‌ ಆಫ್‌ ಡೆಮಾಕ್ರಟಿಕ್‌ ರಿಫಾರ್ಮ್ಸ್‌ (ಎಡಿಆರ್‌) ಸಂಸ್ಥೆ ಸಂಗ್ರಹಿಸಿರುವ ಅಭ್ಯರ್ಥಿಗಳ ವಿರುದ್ಧದ ಆರೋಪಗಳ ಜತೆ ತಮ್ಮ ಶೋಧವನ್ನು ಅವರು ಹೋಲಿಸಿ ನೋಡಿದ್ದಾರೆ. ನಂತರ ವೈಷ್ಣವ್‌ ಅವರು ಈ ಗುಣಾತ್ಮಕ ಮತ್ತು ಪ್ರಮಾಣಾತ್ಮಕ ಸಾಕ್ಷ್ಯಗಳನ್ನು ರಾಜಕೀಯ ಮತ್ತು ಆರ್ಥಿಕ ಸಿದ್ಧಾಂತಗಳ ಮುನ್ನೆಲೆಯಲ್ಲಿಟ್ಟು ವ್ಯಾಖ್ಯಾನಿಸಿದ್ದಾರೆ. 

 

ಕಾಂಗ್ರೆಸ್‌ನ ಹಿಡಿತ ಸಡಿಲಗೊಳ್ಳತೊಡಗಿ ಬಹುಪಕ್ಷಗಳ ಸ್ಪರ್ಧೆ ತೀವ್ರಗೊಂಡ 1960ರ ದಶಕದಿಂದ ತಮ್ಮ ಕಥನವನ್ನು ವೈಷ್ಣವ್‌ ಆರಂಭಿಸಿದ್ದಾರೆ. ಬಹುಪಕ್ಷಗಳ ನಡುವಣ ಸ್ಪರ್ಧೆ ಪ್ರಜಾಪ್ರಭುತ್ವಕ್ಕೆ ಪೂರಕವಾದರೂ ಕಾಂಗ್ರೆಸ್‌ ವಿರೋಧಿ ಮೈತ್ರಿಕೂಟಗಳು ಮತ್ತು ಸರ್ಕಾರಗಳ ರಚನೆಗಾಗಿ ವಿರೋಧ ಪಕ್ಷಗಳು ನಡೆಸಿದ ಪ್ರಯತ್ನ ಗೊಂದಲ ಹುಟ್ಟಿಸಿದ್ದು ಮಾತ್ರವಲ್ಲದೆ, ಭಾರಿ ಪ್ರಮಾಣದ ಪಕ್ಷಾಂತರಗಳಿಗೂ ಕಾರಣವಾಯಿತು. ಆಗ ಅಭ್ಯರ್ಥಿಗಳ ಪಕ್ಷ ಬದಲಾವಣೆಗೆ ಒಂದು ‘ಬೆಲೆ’ ಇತ್ತು. 

 

1969ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರು ರಾಜಕೀಯ ಪಕ್ಷಗಳಿಗೆ ಉದ್ಯಮ ವಲಯದ ದೇಣಿಗೆಯನ್ನು ನಿಷೇಧಿಸಿದರು. ಇದರಿಂದಾಗಿ ಪಕ್ಷಗಳು  ಕಪ್ಪುಹಣದ ಮೂಲಕ ದೇಣಿಗೆ ಸಂಗ್ರಹಕ್ಕಾಗಿ ಸ್ಪರ್ಧೆಗೆ ಬಿದ್ದವು. 1985ರಲ್ಲಿ ಉದ್ಯಮ ವಲಯದ ದೇಣಿಗೆಯನ್ನು ಮತ್ತೆ ಕಾನೂನುಬದ್ಧಗೊಳಿಸಲಾಯಿತು. ಆದರೆ  ಅಷ್ಟು ಹೊತ್ತಿಗಾಗಲೇ ಸಾಕಷ್ಟು ಹಾನಿ ಆಗಿ ಹೋಗಿತ್ತು. ರಾಜಕೀಯ ಪಕ್ಷಗಳು ಕಪ್ಪು ಹಣದ ಬಳಕೆಯನ್ನು ಆಗಲೇ ವ್ಯಾಪಕಗೊಳಿಸಿದ್ದವು. 

 

ತಾವು ಹಣ ನೀಡದ ಪಕ್ಷ ಅಧಿಕಾರಕ್ಕೆ ಬಂದರೆ ಪ್ರತೀಕಾರಕ್ಕೆ ಮುಂದಾಗಬಹುದು ಎಂಬ ಭೀತಿಯಿಂದ ಉದ್ಯಮ ವಲಯ ಕೂಡ ಕಪ್ಪುಹಣದಲ್ಲೇ ರಾಜಕೀಯ ದೇಣಿಗೆ ನೀಡುವುದಕ್ಕೆ ಆದ್ಯತೆ ಕೊಟ್ಟಿತು. 

 

ಮೊದಲ ಕೆಲವು ಚುನಾವಣೆಗಳ ಸಂದರ್ಭದಲ್ಲಿ ತೋಳ್ಬಲ ತೆರೆಮರೆಯಲ್ಲಿ ಕಾರ್ಯಾಚರಣೆ ನಡೆಸಿತ್ತು. ನಿರ್ದಿಷ್ಟ ಪಕ್ಷ ಅಥವಾ ರಾಜಕಾರಣಿಗೆ ಮತ ಹಾಕುವಂತೆ ಮತದಾರರ ಮೇಲೆ ಆ ಸಂದರ್ಭಗಳಲ್ಲಿ ಒತ್ತಡ ಹೇರಲಾಗಿದೆ. ಆದರೆ 1980ರ ದಶಕದಲ್ಲಿ ಈ ಗೂಂಡಾಗಳೇ ಸ್ವತಃ ಮುಖಂಡರಾಗಲು ಮುಂದಾದರು. ಈಗ ಅಪರಾಧ ಹಿನ್ನೆಲೆ ಇದ್ದು ರಾಜಕಾರಣಿಗಳಾಗಲು ಬಯಸುವವರ ಮುಖ್ಯ ಉದ್ದೇಶ ರಕ್ಷಣೆ ಪಡೆದುಕೊಳ್ಳುವುದೇ ಆಗಿದೆ. ಪಕ್ಷಗಳು ಕೂಡ ಇಂತಹ ಅಪರಾಧ ಹಿನ್ನೆಲೆಯವರನ್ನು ಅಭ್ಯರ್ಥಿಗಳಾಗಿ ಆಯ್ಕೆ ಮಾಡಿಕೊಳ್ಳುತ್ತವೆ. ಯಾಕೆಂದರೆ ಅವರು ಚುನಾವಣೆ ಗೆಲ್ಲಲು ಬೇಕಾದ ಹಣದೊಂದಿಗೆ ಕಣಕ್ಕೆ ಇಳಿಯುತ್ತಾರೆ. 

 

ಚುನಾವಣೆಗಳು ದುಬಾರಿಯಾಗಿರುವ, ಪಕ್ಷಗಳು ದುರ್ಬಲವಾಗಿರುವ ಮತ್ತು ಪರಿಣಾಮಕಾರಿಯಲ್ಲದ ರಾಜಕೀಯ ದೇಣಿಗೆ ವ್ಯವಸ್ಥೆಯ ಸನ್ನಿವೇಶದಲ್ಲಿ ರಾಜಕೀಯ ಪಕ್ಷಗಳು ಸ್ವತಃ ಹಣ ಹೂಡಿಕೆ ಮಾಡಬಲ್ಲವರಿಗೇ ಆದ್ಯತೆ ನೀಡುತ್ತವೆ. ಯಾಕೆಂದರೆ ಇಂಥವರಿಗೆ ಆದ್ಯತೆ ನೀಡಿದರೆ ಚುನಾವಣೆ ಖರ್ಚಿಗೆ ಹಣ ನೀಡಬೇಕಿಲ್ಲ ಮಾತ್ರವಲ್ಲ, ಪಕ್ಷ ಅವರಿಂದ ‘ಬಾಡಿಗೆ’ಯನ್ನೂ ಪಡೆಯಬಹುದು. 

 

ವಿಧಾನಸಭೆ ಮತ್ತು ಸಂಸತ್ತಿನಲ್ಲಿ ತಮ್ಮನ್ನು ಪ್ರತಿನಿಧಿಸಲು ಅಪರಾಧ ಹಿನ್ನೆಲೆಯರನ್ನೇ ಜನರು ಹೆಚ್ಚಾಗಿ ಯಾಕೆ ಆಯ್ಕೆ ಮಾಡುತ್ತಾರೆ? ಆರೋಗ್ಯ, ಶಿಕ್ಷಣ, ಸುರಕ್ಷತೆಯಂತಹ ಮೂಲಭೂತ ಸೇವೆಗಳನ್ನು ಒದಗಿಸಲು ಸರ್ಕಾರಗಳು ವಿಫಲವಾಗಿರುವುದು ಇದಕ್ಕೆ ಒಂದು ಕಾರಣ. ಭಾರತದ ಸರ್ಕಾರ ಯಾವುದನ್ನು ನೀಡಲು ವಿಫಲವಾಗಿದೆಯೋ ಅಂಥವುಗಳನ್ನು ಒದಗಿಸುವ ಭರವಸೆಯನ್ನು ಈ ತೋಳ್ಬಲದ ಮುಖಂಡರು ನೀಡುತ್ತಾರೆ.  ಸರ್ಕಾರ ಕಡ್ಡಾಯವಾಗಿ ನಿರ್ವಹಿಸಬೇಕಿರುವ ಕೆಲವು ಕೆಲಸಗಳ ಖಾಸಗೀಕರಣವಾಗಿದೆ ಎಂದು ವೈಷ್ಣವ್‌ ಪ್ರತಿಪಾದಿಸುತ್ತಾರೆ. ಸರ್ಕಾರದ ಕೆಲವು ಅಭಿವೃದ್ಧಿ ಕೆಲಸಗಳನ್ನೂ ಭಾಗಶಃ ಖಾಸಗೀಕರಿಸಲಾಗಿದೆ– ಗೆದ್ದ ಅಭ್ಯರ್ಥಿಗಳು ತಮಗೆ ಬೆಂಬಲ ನೀಡಿದವರಿಗೆ ಉಚಿತ ಕೊಡುಗೆಗಳನ್ನು ನೀಡುತ್ತಾರೆ. ಈ ಕೊಡುಗೆಗಳ ಹಸ್ತಾಂತರ ಮುಖ್ಯವಾಗಿ ಜಾತಿ ಮತ್ತು ಧರ್ಮಗಳ ಆಧಾರದಲ್ಲಿಯೇ ನಡೆಯುತ್ತದೆ. ಸರ್ಕಾರ ಒದಗಿಸುವ ಸೇವೆಗಳು ಮತ್ತು ವಸ್ತುಗಳ ವಿತರಣೆಯ ಅಧಿಕಾರವನ್ನು ರಾಜಕಾರಣಿಗಳು ತಮಗೆ ಬೇಕಾದಂತೆ ತಿರುಚಿ, ಜನಾಂಗೀಯ ಪ್ರೇರಿತ ಮಾದರಿಯಲ್ಲಿ ಅದನ್ನು ನಿರ್ವಹಿಸುತ್ತಾರೆ ಎಂದು ಪುಸ್ತಕದಲ್ಲಿ ಅವರು ವಿವರಿಸುತ್ತಾರೆ. 

 

ಚುನಾವಣೆಗೆ ಅಭ್ಯರ್ಥಿಯಾಗಲು ಟಿಕೆಟ್‌ಗಳ ಮಾರಾಟ ಮತ್ತು ಖರೀದಿ, ಕಾಸಿಗಾಗಿ ಸುದ್ದಿ ಮತ್ತು ಈಗ ಭಾರತದ ಪ್ರಜಾಸತ್ತೆಯಲ್ಲಿ ನಡೆಯುತ್ತಿರವ ವಿಕೃತಿಗಳೆಲ್ಲವನ್ನೂ ‘ವೆನ್‌ ಕ್ರೈಮ್‌ ಪೇಸ್‌’ ಕೃತಿ ದಾಖಲಿಸಿಕೊಂಡಿದೆ. ‘ಕೋಟಿಗಳು ಮತ್ತು ಅಪರಾಧಿಗಳು ಭಾರತದ ರಾಜಕೀಯ ಪಕ್ಷವೊಂದರ ಅನಿವಾರ್ಯ ಅಂಗ’ ಎಂದು ಕಾಂಗ್ರೆಸ್‌ ಸಂಸದರೊಬ್ಬರು ಹೇಳಿದ್ದನ್ನೂ ಪುಸ್ತಕದಲ್ಲಿ ಉಲ್ಲೇಖಿಸಲಾಗಿದೆ. 

 

‘ಮೂಲಭೂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಚುನಾವಣಾ ಯಶಸ್ಸಿಗೆ ಸಿದ್ಧ ಪರಿಹಾರ ಎಂದು ಭಾರತದ ಹೆಚ್ಚಿನ ರಾಜಕಾರಣಿಗಳು ತಿಳಿದಿಲ್ಲ’ ಎಂದು ಅವರು ಬರೆಯುತ್ತಾರೆ. ಇದು ಸಂಪೂರ್ಣವಾಗಿ ನಿಜವಲ್ಲ– ಇತ್ತೀಚಿನ ವರ್ಷಗಳಲ್ಲಿ ಕೆಲವು ರಾಜಕಾರಣಿಗಳಾದರೂ ಕನಿಷ್ಠ ಮಾತಿನ ಮಟ್ಟದಲ್ಲಾದರೂ ಸೇವೆಗಳನ್ನು ಒದಗಿಸುವುದರ ಮೇಲೆಯೇ ತಮ್ಮ ಚುನಾವಣಾ ಪ್ರಚಾರವನ್ನು ಕೇಂದ್ರೀಕರಿಸಿಕೊಂಡಿದ್ದಾರೆ. ತಾವು ಅಧಿಕಾರಕ್ಕೆ ಬಂದರೆ ವಿದ್ಯುತ್‌, ಒಳ್ಳೆಯ ರಸ್ತೆ, ಶುದ್ಧ ನೀರು, ಆಹಾರ, ವಸ್ತ್ರ, ವಸತಿ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ಕೊಡುತ್ತಾರೆ. ಕೊಟ್ಟ ಕೊನೆಯ ವ್ಯಕ್ತಿ ಅಥವಾ ಪ್ರತಿ ವ್ಯಕ್ತಿಯ ಅಭಿವೃದ್ಧಿ ಮತ್ತು ಘನತೆಗಾಗಿ ಕೆಲಸ ಮಾಡುತ್ತೇವೆ ಎಂದು ಹೇಳುತ್ತಾರೆ. ಹಾಗಾಗಿಯೇ ಕಳೆದ ದಶಕದಲ್ಲಿ ‘ಹಮಾರಾ ಹಾಥ್‌ ಆಮ್‌ ಆದ್ಮಿ ಕೆ ಸಾಥ್‌’ ಮತ್ತು ‘ಸಬ್‌ ಕಾ ಸಾಥ್‌, ಸಬ್‌ಕಾ ವಿಕಾಸ್‌’ಗಳಂತಹ ಘೋಷಣೆಗಳು ಸಾರ್ವತ್ರಿಕ ಚುನಾವಣೆಗಳಲ್ಲಿ ಬಳಕೆಯಾಗಿವೆ. 

 

ಆದರೆ ನಿಜ ಏನೆಂದರೆ, ಈ ಘೋಷಣೆಗಳ ಮುಖವಾಡದ ಹಿಂದೆ ಬಹಳ ಭಿನ್ನವಾದ ವಾಸ್ತವ ಇದೆ. ಅಭಿವೃದ್ಧಿಪರ ಎಂದು ಹೇಳಿಕೊಳ್ಳುವ ರಾಜಕಾರಣಿಗಳು ಅಪರಾಧ ಹಿನ್ನೆಲೆ ಇರುವ ರಾಜಕಾರಣಿಗಳ ಜತೆ ನಿಕಟ ಸಂಬಂಧ ಹೊಂದಿರುತ್ತಾರೆ. ಬಿಹಾರದ ನಿತೀಶ್‌ ಕುಮಾರ್‌ ಮತ್ತು ರಾಷ್ಟ್ರ ಮಟ್ಟದಲ್ಲಿ ನರೇಂದ್ರ ಮೋದಿ ಅದಕ್ಕೆ ನಿದರ್ಶನ. 

 

ವೈಷ್ಣವ್‌ ಅವರ ಪುಸ್ತಕದ ಕೊನೆಯ ಭಾಗದಲ್ಲಿ, 2014ರ ಚುನಾವಣೆ ಸಂದರ್ಭದಲ್ಲಿ ಮೋದಿ ಅವರು ಮಾಡಿದ ಭಾಷಣಗಳನ್ನು ಉಲ್ಲೇಖಿಸಲಾಗಿದೆ. ‘ರಾಜಕಾರಣ ಅಪರಾಧಿಗಳಿಂದ ತುಂಬಿ ಹೋಗುವುದನ್ನು ತಡೆಯಬೇಕು ಮತ್ತು ಹೆಚ್ಚು ಹೆಚ್ಚು ಭಾಷಣಗಳಿಂದ ಯಾವುದೇ ಉಪಯೋಗ ಇಲ್ಲ’ ಎಂದು ಒಂದು ಭಾಷಣದಲ್ಲಿ ಮೋದಿ ಅವರು ಹೇಳುತ್ತಾರೆ. ತಾವು ಪ್ರಧಾನಿಯಾದ ಮೇಲೆ ‘ಅಪರಾಧ ಹಿನ್ನೆಲೆಯ ಯಾವ ವ್ಯಕ್ತಿಯೂ ಚುನಾವಣೆಗೆ ನಿಲ್ಲುವ ಧೈರ್ಯ ತೋರಿಲ್ಲ. ಈ ರೀತಿಯ ಶುದ್ಧೀಕರಣ ಸಾಧ್ಯವಿಲ್ಲ ಎಂದು ಹೇಳಿದವರು ಯಾರು? ನಾನು ರಾಜಕಾರಣವನ್ನು ಶುದ್ಧೀಕರಿಸಲೇಬೇಕು’ ಎಂದು ಇನ್ನೊಂದು ಭಾಷಣದಲ್ಲಿ ಅವರು ಹೇಳಿದ್ದಾರೆ.

 

‘ಐದು ವರ್ಷಗಳ ನಮ್ಮ ಆಳ್ವಿಕೆಯ ನಂತರ ವ್ಯವಸ್ಥೆ ಸಂಪೂರ್ಣವಾಗಿ ಶುದ್ಧೀಕರಣವಾಗುತ್ತದೆ ಮತ್ತು ಅಪರಾಧಿಗಳೆಲ್ಲರೂ ಜೈಲುಗಳಲ್ಲಿ ಇರುತ್ತಾರೆ’ ಎಂದು ಮತ್ತೊಂದು ಭಾಷಣದಲ್ಲಿ ಹೇಳುವ ಮೂಲಕ ಶುದ್ಧೀಕರಣಕ್ಕೆ ಅವರು ಸಮಯದ ಗಡುವನ್ನೂ ಹಾಕಿಕೊಳ್ಳುತ್ತಾರೆ.

 

ನರೇಂದ್ರ ಮೋದಿ ಅವರು ಇಂತಹ ಹೇಳಿಕೆಗಳನ್ನು ನೀಡುತ್ತಿರುವಾಗ ಅವರ ಚುನಾವಣಾ ಪ್ರಚಾರದ ವ್ಯವಸ್ಥೆ ನೋಡಿಕೊಳ್ಳುತ್ತಿದ್ದವರು ಅವರ ಆಪ್ತ ಅಮಿತ್‌ ಷಾ. ಅವರ ವಿರುದ್ಧ ಹಲವು ಅಪರಾಧ ಪ್ರಕರಣಗಳು ಇವೆ. ಒಂದು ಹಂತದಲ್ಲಿ ಅವರು ತಮ್ಮ ತವರು ರಾಜ್ಯದಿಂದ ಹೊರಗೆ ಇರಬೇಕು. ಇಲ್ಲವಾದರೆ ರಾಜ್ಯದ ಕಾನೂನು ಜಾರಿ ವ್ಯವಸ್ಥೆಯ ಮೇಲೆ ಪ್ರಭಾವ ಬೀರಬಹುದು ಎಂಬ ಭೀತಿಯನ್ನೂ ಸುಪ್ರೀಂ ಕೋರ್ಟ್‌ ವ್ಯಕ್ತಪಡಿಸಿತ್ತು. ಬಿಜೆಪಿ ಟಿಕೆಟ್‌ನಲ್ಲಿ ಸಂಸತ್ತಿಗೆ ಸ್ಪರ್ಧಿಸಿದ ಹಲವು ವ್ಯಕ್ತಿಗಳ ಮೇಲೆಯೂ ಇಂತಹುದೇ ಕರಿಛಾಯೆ ಇದೆ. ಫಲಿತಾಂಶ ಪ್ರಕಟವಾದಾಗ ಬಿಜೆಪಿಯ ಸಂಸದರ ಪೈಕಿ ಶೇ 35ರಷ್ಟು ಮಂದಿಯ ವಿರುದ್ಧ ಅಪರಾಧ ಪ್ರಕರಣಗಳು ಇವೆ ಎಂಬುದು ಬಹಿರಂಗವಾಯಿತು. 

 

ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೇರಿ ಹತ್ತಿರ ಹತ್ತಿರ ಮೂರು ವರ್ಷಗಳಾದವು.   ಪ್ರಧಾನಿಯವರು ಹೇಳಿಕೊಂಡದ್ದಕ್ಕೆ ವ್ಯತಿರಿಕ್ತವಾಗಿ ಕೇಂದ್ರ ಮತ್ತು ರಾಜ್ಯಗಳ ಆಡಳಿತ ಪಕ್ಷಗಳು ಅಪರಾಧ ಹಿನ್ನೆಲೆಯ ವ್ಯಕ್ತಿಗಳ ಮೇಲೆ ಅವಲಂಬಿತವಾಗಿರುವುದು ಮುಂದುವರಿದಿದೆ. ಉತ್ತರ ಪ್ರದೇಶ ವಿಧಾನಸಭೆಯ ಮೊದಲ ಮೂರು ಹಂತಗಳ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಸಲ್ಲಿಸಿರುವ ಪ್ರಮಾಣಪತ್ರಗಳ ಆಧಾರದಲ್ಲಿ ಎಡಿಆರ್‌ ಸಂಸ್ಥೆ ವಿಶ್ಲೇಷಣೆಯೊಂದನ್ನು ಪ್ರಕಟಿಸಿದೆ. ಮೊದಲ ಹಂತದಲ್ಲಿ ಸ್ಪರ್ಧಿಸುತ್ತಿರುವ ಕಾಂಗ್ರೆಸ್‌ ಅಭ್ಯರ್ಥಿಗಳ ಪೈಕಿ ಶೇ 25 ಮಂದಿ ಅಪರಾಧ ಹಿನ್ನೆಲೆಯವರು. ಸಮಾಜವಾದಿ ಪಕ್ಷದ ಪ್ರಮಾಣ ಶೇ 29 ಮತ್ತು ಬಹುಜನ ಸಮಾಜ ಪಕ್ಷದ ಪ್ರಮಾಣ ಶೇ 38  ಇದ್ದರೆ, ಬಿಜೆಪಿಯ ಶೇ 40ರಷ್ಟು ಅಭ್ಯರ್ಥಿಗಳ ವಿರುದ್ಧ ಅಪರಾಧ ಪ್ರಕರಣಗಳು ಇವೆ. ಮೂರನೇ ಹಂತದ ಚುನಾವಣೆಯಲ್ಲಿ ಅಪರಾಧ ಹಿನ್ನೆಲೆಯ  ಶೇ 36ರಷ್ಟು ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಿರುವ ಕಾಂಗ್ರೆಸ್‌ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಹಂತದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷ ಅಪರಾಧ ಹಿನ್ನೆಲೆಯ ಶೇ 41ರಷ್ಟು ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿ ಮೊದಲ ಸ್ಥಾನ ಪಡೆದಿದೆ. 

 

ಇದು ಚಿಂತೆಗೆ ಕಾರಣವಾಗುವ ಅಂಕಿ ಅಂಶ. ಉತ್ತರ ಪ್ರದೇಶ ಮತ್ತು ದೇಶದ ಇತರ ರಾಜ್ಯಗಳ ಎಲ್ಲ ಪ್ರಮುಖ ಪಕ್ಷಗಳು ಸ್ಪರ್ಧಿಸಲು ಮತ್ತು ಚುನಾವಣೆ ಗೆಲ್ಲಲು ಅಪರಾಧ ಹಿನ್ನೆಲೆಯ ವ್ಯಕ್ತಿಗಳನ್ನೇ ಅವಲಂಬಿಸಿವೆ ಎಂಬುದರತ್ತ ಎಡಿಆರ್‌ ವರದಿ ಬೆಟ್ಟು ಮಾಡಿದೆ. ಭಾರತದ ಪ್ರಜಾಸತ್ತೆ ಅಹಿತಕರ ವಿರೋಧಾಭಾಸವೊಂದರ ಮೇಲೆ ನಿಂತಿದೆ: ವಿಧಾನಸಭೆಗಳು ಮತ್ತು ಲೋಕಸಭೆಯ ಚುನಾವಣೆ ತೃಪ್ತಿಕರ ರೀತಿಯಲ್ಲಿ ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಯುತ್ತವೆ. ಆದರೆ ಗೆಲ್ಲುವ ಅಭ್ಯರ್ಥಿಗಳಲ್ಲಿ ಹಲವರು ಅಪರಾಧಿಗಳು ಮಾತ್ರವಲ್ಲ ಅಪಾಯಕಾರಿಗಳೂ ಆಗಿರುತ್ತಾರೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry