6

ಹಕ್ಕಿಗಳು ಗೂಡು ಕಟ್ಟಿಕೊಳ್ಳುತ್ತವೆ...

ಪ್ರಸನ್ನ
Published:
Updated:
ಹಕ್ಕಿಗಳು ಗೂಡು ಕಟ್ಟಿಕೊಳ್ಳುತ್ತವೆ...

ನಿರ್ಮಿತಿ ತಂತ್ರಜ್ಞಾನದ ಬೆಳವಣಿಗೆಯನ್ನು ಸಂಭ್ರಮಿಸುತ್ತಿದ್ದೇವೆ ನಾವು. ಬಂಗಲೆ, ರಸ್ತೆ, ಫ್ಲೈಓವರ್, ಫ್ಯಾಕ್ಟರಿಗಳನ್ನು ನಿರ್ಮಿಸಿ ನಿರ್ಮಿಸಿ - ಈಗಾಗಲೇ ಅಗತ್ಯಕ್ಕಿಂತ ಹೆಚ್ಚು ಸ್ಮಾರ್ಟಾಗಿರುವ ನಗರಗಳನ್ನು ಮತ್ತೂ ಮತ್ತೂ ಸ್ಮಾರ್ಟಾಗಿಸಿ, ಜೀವಜಂತುಗಳ ಉಸಿರು ಕಟ್ಟಿಸುತ್ತಿದ್ದೇವೆ. ಮನುಷ್ಯನೂ ಜೀವಜಂತುವೇ ಸರಿ. ಅವನಿಗೊಂದು ಮೂಲ ಸ್ವಭಾವವಿದೆ. ಅದನ್ನು ನಿರ್ಲಕ್ಷಿಸಿ ನಮ್ಮ ಮೇಲೆ ನಾವೇ ಗೋರಿಗಳನ್ನು ಕಟ್ಟಿಕೊಳ್ಳುತ್ತಿದ್ದೇವೆ.  

 

ಹಕ್ಕಿಗಳು ಗೂಡು ಕಟ್ಟಿಕೊಳ್ಳುತ್ತವೆ. ಪ್ರಾಣಿಗಳು ಗವಿ, ಪೊಟರೆ, ಹುತ್ತಗಳಲ್ಲಿ ಆಶ್ರಯ ಪಡೆಯುತ್ತವೆ. ಮನುಷ್ಯ ಗುಡಿಸಲು ಕಟ್ಟಿಕೊಳ್ಳುತ್ತಾನೆ. ಗೂಡು, ಗವಿ, ಗುಡಿಸಲು ಎಲ್ಲವೂ ಅದರೊಳಗೆ ವಾಸಿಸುವ ಹಕ್ಕಿ, ಪ್ರಾಣಿ, ಮನುಷ್ಯರ ಅಳೆತೆಗಿಂತ ಹೆಚ್ಚೆಂದರೆ ಒಂದೆರಡು ಪಟ್ಟು ದೊಡ್ಡದಿರುತ್ತವೆ. ಬಳಕೆಯಾಗುವ ಪದಾರ್ಥಗಳೂ ಹಾಗೆಯೇ. ಅಲ್ಲೇ ಸುತ್ತಮುತ್ತಲ ಪರಿಸರದಲ್ಲಿ ಲಭ್ಯವಿರುತ್ತಿದ್ದ ಹುಲ್ಲುಕಡ್ಡಿ, ಮಣ್ಣು, ಕಲ್ಲು, ತರಗೆಲೆಗಳಾಗಿರುತ್ತವೆ. ಅಥವಾ ಕೂಗಳತೆಯಲ್ಲಿ ಸಿಕ್ಕುವ ಕಂಬ, ಬೊಂಬು, ಕೃಷಿಯ ಉಪಪದಾರ್ಥವಾಗಿ ಸಿಕ್ಕುವ ಹುಲ್ಲುಸೋಗೆ ನಿರ್ಮಾಣ ಪದಾರ್ಥವಾಗಿರುತ್ತವೆ. 

 

ಉದಾಹರಣೆಗೆ, ಮಂಜುಗಡ್ಡೆ ಮಾತ್ರವೇ ಲಭ್ಯವಿರುತ್ತಿದ್ದ ಧ್ರುವ ಪ್ರದೇಶದ ಎಸ್ಕಿಮೋ ಮನುಷ್ಯ ಮಂಜುಗಡ್ಡೆಯನ್ನೇ ಇಟ್ಟಿಗೆಗಳನ್ನಾಗಿಸಿಕೊಂಡು ಅರ್ಧ ಗೋಳಾಕೃತಿಯ ಪುಟ್ಟ ಇಗ್ಲೂಗಳನ್ನು ಕಟ್ಟಿಕೊಳ್ಳುತ್ತಾನೆ. ಅದು ಹಾಗೆಯೇ ಇರಬೇಕು. ಹಕ್ಕಿ, ಪ್ರಾಣಿಗಳ ಮಟ್ಟಿಗೆ ಈಗಲೂ ಹಾಗೆಯೇ ಉಳಿದಿದೆ. ಮನುಷ್ಯ ನಿರ್ಮಿತಿ ಮಾತ್ರ ರಾಕ್ಷಸಾಕಾರವಾಗಿ ಬೆಳೆಯತೊಡಗಿದೆ.

 

ಇದಕ್ಕೆ ಕಾರಣವಿದೆ: ನಾವು ಶಾಶ್ವತವಾಗಿರಬೇಕು, ನಮ್ಮ ಮನೆಗಳು ಶಾಶ್ವತವಾಗಿರಬೇಕು ಎಂದು ಹಂಬಲಿಸತೊಡಗಿದ್ದೇವೆ. ತಾಜಮಹಲು ಸಾವಿನಮನೆ ಎಂಬುದನ್ನು ಮರೆತು, ಮನೆಗಳು ತಾಜಮಹಲಿನಷ್ಟು ಶಾಶ್ವತವಾಗಿರಬೇಕು, ತಾಜಮಹಲಿನಷ್ಟು ಭವ್ಯವಾಗಿರಬೇಕು ಎಂದು ಬಯಸತೊಡಗಿದ್ದೇವೆ. ಗುಡಿಸಲು ಅಶಾಶ್ವತ ಎಂಬ ಕಾರಣಕ್ಕಾಗಿ ಗುಡಿಸಲುಗಳನ್ನು ತಿರಸ್ಕರಿಸುತ್ತೇವೆ. ಗುಡಿಸಲು ಅಶಾಶ್ವತ ನಿಜ. ಆದರೆ ಗುಡಿಸಲಿನ ಸಂಸ್ಕೃತಿ ಹೆಚ್ಚು ಶಾಶ್ವತ. ಹೆಚ್ಚು ಸುಸ್ಥಿರ, ಹೆಚ್ಚು ಸುಂದರ.

 

ತಡವಾಗಿಯಾದರೂ ಸರಿ ಈ ಸಂಗತಿ ನಮ್ಮ ಅರಿವಿಗೆ ಬರತೊಡಗಿದೆ. ಗುಡಿಸಲಿನ ನಿರ್ಮಿತಿ ತಂತ್ರಜ್ಞಾನವೇ ಸೂಕ್ತ ನಿರ್ಮಿತಿ ತಂತ್ರಜ್ಞಾನವೆಂದು ಪರಿಸರ ವಿಜ್ಞಾನ ಹೇಳತೊಡಗಿದೆ. ವಿಜ್ಞಾನವು ಹೀಗೆ ಧ್ವನಿ ಬದಲಿಸಲಿಕ್ಕೆ ಕಾರಣವಿದೆ. ಮಾನವರು ಸರಳ ಬದುಕಿಗೆ ಮರಳುವುದು ಇನ್ನು ಮುಂದೆ ಅನಿವಾರ್ಯವಾಗಲಿದೆ. ಈವರೆಗೆ ನೈತಿಕ ಆಯ್ಕೆ ಮಾತ್ರವೇ ಆಗಿತ್ತು ಅದು. ಅರ್ಥಾತ್, ಧರ್ಮಗ್ರಂಥಗಳ ಗೊಡ್ಡು ಬೆದರಿಕೆ ಮಾತ್ರವೇ ಆಗಿತ್ತು. ಈಗ, ಸರಳ ಬದುಕನ್ನು ಕಡೆಗಣಿಸಿದರೆ ಮನುಕುಲದ ವಿನಾಶ ಖಂಡಿತ ಎಂದು ಪರಿಸರ ವಿಜ್ಞಾನ ಹೇಳತೊಡಗಿದೆ. 

 

ಇದು ಹಿನ್ನೆಲೆ. ಈ ಹಿನ್ನೆಲೆಯಲ್ಲಿ, ಮೂಲತಃ ಸಾರ್ವಜನಿಕ ಕಟ್ಟಡಗಳಾದ ಆಶ್ರಮಗಳ ಉದಾಹರಣೆ ತೆಗೆದುಕೊಂಡು, ಸರಳ ಕಟ್ಟಡಗಳ ಸೌಂದರ್ಯ, ಆಪ್ತತೆ ಹಾಗೂ ಕಲ್ಯಾಣಕಾರಿ ಗುಣಗಳ ಬಗ್ಗೆ ಬರೆಯುವವನಿದ್ದೇನೆ. ಆದರೆ ಒಂದು ಎಚ್ಚರಿಕೆ ನೀಡುತ್ತೇನೆ. ಆಶ್ರಮ ಎಂದಾಗ ಸರಳತೆಯ ಅಪಕೃತಿಗಳಾದ ಪಂಚತಾರಾ ಆಶ್ರಮಗಳನ್ನು ನಿಮ್ಮ ನೆನಪಿಗೆ ದಯಮಾಡಿ ತಂದುಕೊಳ್ಳಬೇಡಿ.

 

ಆಶ್ರಮಗಳ ಬಗ್ಗೆ ಬರೆಯಲಿಕ್ಕೆ ಮತ್ತೊಂದು ಕಾರಣವೂ ಇದೆ. ಕರ್ನಾಟಕ ಸರ್ಕಾರವು ರಾಜ್ಯದ ಪ್ರತಿಯೊಂದು ಜಿಲ್ಲೆಯಲ್ಲಿ ಒಂದೊಂದು ಗಾಂಧಿಮಂದಿರ ನಿರ್ಮಾಣ ಮಾಡುವ ನಿರ್ಧಾರ ಕೈಗೊಂಡಿದೆ. ಈಗಾಗಲೇ ಅಂಬೇಡ್ಕರ್ ಭವನಗಳನ್ನು ಅದು, ಪೊಳ್ಳು ಭವ್ಯತೆಯ ಸಂಕೇತಗಳನ್ನಾಗಿ ನಿರ್ಮಿಸಿರುವುದು ನಮ್ಮ ಕಣ್ಣ ಮುಂದಿದೆ. ಗಾಂಧಿ ಮಂದಿರಗಳೂ ಹಾಗಾಗದಿರಲಿ ಎಂಬ ಒತ್ತಾಸೆ ಈ ಲೇಖನದ ಹಿಂದಿದೆ.

 

ಆಶ್ರಮಗಳಿಗೆ ಬಡವನ ಗುಡಿಸಲು ಮಾದರಿ. ಹಳೆಯ ಸಂತರ ಪ್ರಕಾರ ಗುಡಿಸಲೇ ಮಂದಿರಗಳಿಗೂ ಮಾದರಿ. ಬಡವನ ಗುಡಿಸಲಿನ ಮಾದರಿಯನ್ನು ಶ್ರೀಮಂತರ ಬಂಗಲೆಗಳ ಅಸಹ್ಯ ಮಾದರಿಯ ಎದುರಿಗೆ ಎತ್ತಿ ನಿಲ್ಲಿಸುವ ಪ್ರಯತ್ನ ಆಶ್ರಮಗಳು. ಆಶ್ರಮಗಳು ಅನಾದಿ ಕಾಲದಿಂದಲೂ ಇದೇ ಪ್ರಯತ್ನ ಮಾಡಿವೆ. ಕಾಡು ಹಾಗೂ ನಾಡಿನ ಅಂಚಿನಲ್ಲಿ ಉಳಿದುಕೊಂಡು ಜ್ಞಾನ, ಅನುಭವ, ಅನುಭಾವಗಳನ್ನು ಸಮಾಜದ ಒಳಿತಿಗಾಗಿ ಕ್ರೋಡೀಕರಿಸುವ ಕೆಲಸ ಮಾಡಿಕೊಂಡು ಬಂದಿವೆ. 

 

ಸ್ವಾತಂತ್ರ್ಯ ಚಳವಳಿಯ ಸಂದರ್ಭದ ಒಂದು ಘಟನೆ ಇಲ್ಲಿ ನೆನಪಾಗುತ್ತಿದೆ ನನಗೆ. 1938ರಲ್ಲಿ ಹರಿಪುರದಲ್ಲಿ ಕಾಂಗ್ರೆಸ್ ಅಧಿವೇಶನ ನಡೆಯುವುದಿತ್ತು. ಬಂಗಾಲದ ಹೆಸರಾಂತ ದೃಶ್ಯ ಕಲಾವಿದ ನಂದಲಾಲ ಬೋಸರು ಸಮ್ಮೇಳನದ ಪೆಂಡಾಲು ಹಾಗೂ ಪರಿಸರಗಳನ್ನು ವಿನ್ಯಾಸ ಮಾಡುವವರಿದ್ದರು. ನಂದಾಲಾಲ ಬೋಸರು ಗಾಂಧೀಜಿ ಹತ್ತಿರ ತೆರಳಿ ವಿನ್ಯಾಸ ಹೇಗಿರಬೇಕೆಂದು ಕೇಳಿದರು. ಗಾಂಧೀಜಿ, ತುಂಬ ನಿರ್ದಿಷ್ಟವಾದ ಹಾಗೂ ನಿರ್ಮಿತಿ ತಂತ್ರಜ್ಞಾನದ ದೃಷ್ಟಿಯಿಂದ ತುಂಬ ಮಹತ್ತರವಾದ ಕೆಲವು ಸೂಚನೆಗಳನ್ನು ನೀಡಿದ್ದರು. 

 

ಗೂಡು, ಗವಿ, ಗುಡಿಸಲುಗಳ ನಿರ್ಮಿತಿ ವಿಧಾನ ಹಾಗೂ ಅವುಗಳಿಗಾಗಿ ಬಳಕೆಯಾಗುವ ನಿರ್ಮಾಣ ಸಾಮಗ್ರಿಗಳನ್ನು ದೃಢೀಕರಿಸಿದ್ದರು ಗಾಂಧೀಜಿ. ಮುಂದುವರೆದು, ‘ಹರಿಪುರದ ಸುತ್ತಮುತ್ತ ಇರುವ ಕುಶಲಕರ್ಮಿ ಪರಂಪರೆ ಹಾಗೂ ನಿರ್ಮಿತಿ ಪರಂಪರೆಗಳಿಗೆ ಒತ್ತು ನೀಡು ನೀನು’ ಎಂದು ನಂದಲಾಲ ಬೋಸರಿಗೆ ಸೂಚನೆ ನೀಡಿದ್ದರು. ಜಾನಪದ ಕಲೆಗಳು, ಕರಕುಶಲ ವಸ್ತುಗಳು ಹಾಗೂ ಹಸೆಚಿತ್ತಾರಗಳು ಅಧಿವೇಶನದ ವಾತಾವರಣವನ್ನು ಬೆಳಗಲಿ ಎಂದಿದ್ದರು. 

 

ಮತ್ತೊಂದು ಮಹತ್ತರವಾದ ವಿಷಯವನ್ನು ಅವರು ಒತ್ತಿ ಹೇಳಿದ್ದರು: ಅಧಿವೇಶನಕ್ಕಾಗಿ ಬಳಕೆಯಾದ ನಿರ್ಮಾಣ ಸಾಮಗ್ರಿಗಳೆಲ್ಲವೂ ಅಧಿವೇಶನದ ನಂತರದಲ್ಲಿ ಸುತ್ತಮುತ್ತಲ ರೈತರಿಗೆ ಮರುಬಳಕೆಗಾಗಿ ಲಭ್ಯವಾಗಲಿ ಎಂದಿದ್ದರು. ಮರುಬಳಕೆ ಮಾಡಲಾಗದ ಸೋಗೆ ಹುಲ್ಲಿನಂಥ  ಕೊಳೆಯುವ ವಸ್ತುಗಳು ರೈತರ ಗೊಬ್ಬರ ಗುಂಡಿಗಳನ್ನು ತಲುಪಲಿ ಎಂದಿದ್ದರು. ಪಾರಂಪರಿಕ ನಿರ್ಮಿತಿ ತಂತ್ರಜ್ಞಾನವು ಸುಂದರ ಮಾತ್ರವಲ್ಲ, ಅದು ವೈಜ್ಞಾನಿಕವೂ ಹೌದು ಎಂದು ಆಗಲೇ ಮನಗಂಡಿದ್ದರು ಗಾಂಧೀಜಿ.

 

ಸ್ಪಷ್ಟ ನಿರ್ದೇಶನ ಹಾಗೂ ನಂದಲಾಲರ ಅಸಾಧಾರಣ ಕರ್ತೃತ್ವ ಶಕ್ತಿಗಳ ಸಂಯುಕ್ತ ಕಾರಣಗಳಿಂದಾಗಿ ಹರಿಪುರ ಕಾಂಗ್ರೆಸ್ ಪೆಂಡಾಲು ಹೊಸದೊಂದು ಸೌಂದರ್ಯ ಶಾಸ್ತ್ರಕ್ಕೆ ಎಡೆಮಾಡಿಕೊಟ್ಟಿತ್ತು. ಸ್ಥಾವರ ನಿರ್ಮಾಣದಲ್ಲಿ ಗಾಂಧೀಜಿಗೆ ಸಾಕಷ್ಟು ಅನುಭವವಿತ್ತು. ತನ್ನ ಜೀವಿತಾವಧಿಯಲ್ಲಿ ಅವರು ಮೂರು ಆಶ್ರಮಗಳನ್ನು ನಿರ್ಮಿಸಿದ್ದರು. ಮೊದಲ ಆಶ್ರಮವನ್ನು ಅವರು ನಿರ್ಮಾಣ ಮಾಡಿದ್ದು ಇಪ್ಪತ್ತನೆಯ ಶತಮಾನದ ಹೊಸ್ತಿಲಿನ ಮೇಲೆ ನಿಂತಿದ್ದಾಗ, ದಕ್ಷಿಣ ಆಫ್ರಿಕೆಯಲ್ಲಿ. ಅದನ್ನವರು ಟಾಲ್‌ಸ್ಟಾಯ್ ಆಶ್ರಮ ಎಂದು ಕರೆದಿದ್ದರು. 

 

ತಾನು ಕಟ್ಟಿದ ಮೊದಲ ಆಶ್ರಮಕ್ಕೆ ಗಾಂಧೀಜಿ ಪಾಶ್ಚಾತ್ಯ ಲೇಖಕನೊಬ್ಬನ ಹೆಸರಿಟ್ಟದ್ದು ಕೇವಲ ಕಾಕತಾಳೀಯವಾಗಿರಲಿಲ್ಲ. ಟಾಲ್‌ಸ್ಟಾಯರ ವಿಚಾರಗಳಿಂದ ಹಾಗೂ ಇತರೆ ಅನೇಕ ಪಾಶ್ಚಾತ್ಯ ವೈಚಾರಿಕರಿಂದ ಅವರು ಪ್ರಭಾವಿತರಾಗಿದ್ದರು. ಈ ಮಾತನ್ನಿಲ್ಲಿ ಒತ್ತಿ ಹೇಳಲಿಕ್ಕೆ ಕಾರಣವಿದೆ. ಸರಳ ಬದುಕು ಗೊಡ್ಡು ಸಂಪ್ರದಾಯವೆಂದೂ ಯಂತ್ರ ನಾಗರಿಕತೆಯೇ ಆಧುನಿಕವೆಂದು ತಪ್ಪುಕಲ್ಪನೆಯೊಂದು ನಮ್ಮಲ್ಲಿ ಜಾರಿಯಲ್ಲಿದೆ. ಇದು ತಪ್ಪು ಕಲ್ಪನೆ ಮಾತ್ರವಲ್ಲ, ಬೇಕೆಂದೇ ಹರಡಲಾಗಿರುವ ತಪ್ಪು ಕಲ್ಪನೆಯಾಗಿದೆ. 

 

ಯಂತ್ರನಾಗರಿಕತೆ ಗೊಡ್ಡು ಸಂಪ್ರದಾಯದೊಟ್ಟಿಗೆ ಬೆರೆತು ಹೋಗಿದೆ; ಹಾಲು– ಸಕ್ಕರೆಯಷ್ಟು ಮಧುರವಾಗಿ ಬೆರೆತು ಹೋಗಿದೆ. ಬೆರೆಯದೆ ಪರಿಶುದ್ಧವಾಗಿ ಉಳಿದಿರುವುದು ಸರಳ ಬದುಕು ಮಾತ್ರ. ಸರಳ ಬದುಕು ಆಧುನಿಕವೂ ಹೌದು, ಪಾರಂಪರಿಕವೂ ಹೌದು, ಶಾಶ್ವತವೂ ಹೌದು. ಅದು ಏಕಕಾಲದಲ್ಲಿ ಮೂರೂ ಹೌದು.

 

ಗೊಡ್ಡು ಸಂಪ್ರದಾಯಗಳು ಸಂಪ್ರದಾಯದ ಪ್ರತಿಕೃತಿ ಮಾತ್ರ; ಯಂತ್ರ ನಿರ್ಮಿತವಾದ ಹಾಗೂ ತೀರ ಇತ್ತೀಚಿನದ್ದಾದ ಪ್ರತಿಕೃತಿ. ಬೃಹತ್ ದೇವಳಗಳು, ಬೃಹನ್‌ಮಠಗಳು, ಜರತಾರಿ ಜಗದ್ಗುರುಗಳು ಎಲ್ಲವೂ ಪ್ರತಿಕೃತಿಗಳು; ಸಿಮೆಂಟು, ಕಬ್ಬಿಣ, ಪ್ಲಾಸ್ಟಿಕ್ಕು ಹಾಗೂ ರಾಶಿರಾಶಿ ಹಣ ಸುರಿದು ನಿರ್ಮಿಸಿದ ಅಬ್ಬರದ ಪ್ರತಿಕೃತಿಗಳು. ಪ್ರತಿಕೃತಿಯೇ ಪರಂಪರೆಯೆಂದು ನಮ್ಮನ್ನು ನಂಬಿಸಲಾಗಿದೆ ಅಷ್ಟೆ. 

 

ಇಷ್ಟಕ್ಕೂ ಆಶ್ರಮಗಳನ್ನು ಗಾಂಧೀಜಿ ಮಾತ್ರವೇ ಕಟ್ಟಲಿಲ್ಲ. ಜಯಪ್ರಕಾಶ್ ನಾರಾಯಣ್‌, ಸಿ.ರಾಜಗೋಪಾಲಾಚಾರಿ, ಜೆ.ಸಿ.ಕುಮಾರಪ್ಪ, ನಾನಾಜಿ ದೇಶಮುಖ್ ಆದಿಯಾಗಿ ಹಲವು ಮಹನೀಯರು ಕಟ್ಟಿದರು. ಅಂಬೇಡ್ಕರ್ ಇನ್ನಷ್ಟು ಕಾಲ ಬದುಕಿದ್ದಿದ್ದರೆ ಬೌದ್ಧವಿಹಾರದ ಮಾದರಿಯ ಆಶ್ರಮವೊಂದನ್ನು ಕಟ್ಟುತ್ತಿದ್ದರು ಎಂದು ನಾನು ಗಟ್ಟಿಯಾಗಿ ನಂಬುತ್ತೇನೆ. 

 

ಆಶ್ರಮಗಳು ನಾಲ್ಕು ಪ್ರಮುಖ ಜವಾಬ್ದಾರಿಗಳನ್ನು ನಿರ್ವಹಿಸುತ್ತವೆ: ಶ್ರಮಸಹಿತ ಸರಳ ಬದುಕಿನ ಅನುಷ್ಠಾನ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತವೆ. ಗ್ರಾಮೀಣ ಉತ್ಪಾದನಾ ವಿಧಾನಗಳ ಪ್ರಯೋಗಶಾಲೆ ಹಾಗೂ ಪ್ರಾತ್ಯಕ್ಷಿಕೆಗಳಾಗಿ ಕಾರ್ಯ ನಿರ್ವಹಿಸುತ್ತವೆ. ತಮ್ಮದೇ ಉತ್ಪಾದನೆಯ ಮೂಲಕ ಖರ್ಚಿನ ಬಹುಭಾಗವನ್ನು ನಿಭಾಯಿಸುವ ಸುಸ್ಥಿರ ವ್ಯವಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತವೆ. ನಾಲ್ಕನೆಯದಾಗಿ, ಈ ಮೂರೂ ಸಂಗತಿಗಳ ತರಬೇತಿ ಕೇಂದ್ರಗಳಾಗಿ ಕಾರ್ಯ ನಿರ್ವಹಿಸುತ್ತವೆ.

ಸ್ಮಾರ್ಟ್‌ಸಿಟಿಗಳ ತದ್ವಿರುದ್ಧ ಮಾದರಿ ಆಶ್ರಮಗಳು: ಸ್ಮಾರ್ಟ್ ಸಿಟಿಗಳಲ್ಲಿ ಕೇವಲ ಕಟ್ಟಡಗಳಿರುತ್ತವೆ. ಆಶ್ರಮಗಳಲ್ಲಿ ಕಟ್ಟಡ ಕಡಿಮೆಯಿರುತ್ತದೆ, ಕಟ್ಟದಿರುವ ಭಾಗ ಹೆಚ್ಚಿರುತ್ತದೆ. ತನ್ನದೇ ತಲೆಗೂದಲಿನಿಂದ ತನ್ನ ಬತ್ತಲನ್ನು ಮುಚ್ಚಿಕೊಂಡಿರುತ್ತಿದ್ದ ಅಕ್ಕನಂತೆ, ಆಶ್ರಮಗಳು ತರುಲತೆಗಳಿಂದ ತನ್ನನ್ನು ಮುಚ್ಚಿಕೊಂಡಿರುತ್ತವೆ. ಭವ್ಯತೆ ಇರುತ್ತದೆ, ಆದರೆ ಬಯಲಿನಲ್ಲಿರುತ್ತದೆ. ಬಣ್ಣವೂ ಇರುತ್ತದೆ, ಆದರೆ ಮಣ್ಣಬಣ್ಣವಾಗಿರುತ್ತದೆ. ಶ್ರಮದಾನವು ಆಶ್ರಮದ ಪರಿಶುದ್ಧತೆಯನ್ನು ದಿನವಹಿ ಕಾಪಾಡುತ್ತಿರುತ್ತದೆ. ಆಶ್ರಮದ ಸೌಂದರ್ಯವನ್ನು ಸಗಣಿ ಸಾರಿಸಿ, ಕೈಮಣ್ಣು ಮಾಡಿ, ಚಿತ್ತಾರ ಬರೆದು, ಬೆಳಗಿಸಲಾಗುತ್ತದೆ. ದಿನವಹಿ ವ್ಯಾಯಾಮ ಮಾಡುವ ಮಾನವ ದೇಹವಿದ್ದಂತೆ ಆಶ್ರಮಗಳು.

 

ಬಂಗಲೆಗಳ ಬಗ್ಗೆ ಯೋಚಿಸಿ. ಅವು ಉಬ್ಬಸಪಡುವ ಸ್ಥೂಲಕಾಯರಿದ್ದಂತೆ. ಇನ್ನೂರು ಕೋಣೆಗಳು, ಮುನ್ನೂರು ಸೇವಕರು, ನೂರಾರು ವಾಹನಗಳು ಇರುವ ಖಾಸಗಿಮನೆ ಮನುಷ್ಯನ ಅಗತ್ಯವೇ? ಮೈಸೂರಿನ ಮಹಾರಾಜರನ್ನು ಕೇಳಿ ನೋಡಿ. ‘ಇಲ್ಲ’ ಎಂದೇ ಹೇಳುತ್ತಾರೆ ಅವರು. ಮತ್ತೇಕೆ ಇಷ್ಟೆಲ್ಲ ವ್ಯರ್ಥ ಆಡಂಬರ? ಎಂದು ಕೇಳಿನೋಡಿ, ‘ಮಹಾರಾಜ ಕೀಳಾಗಿ ಕಾಣಬಾರದಲ್ಲ’! ಎನ್ನುತ್ತಾರೆ. ಈಗ ರಾಜರು ನಿರ್ಗಮಿಸಿದ್ದಾರೆ. ಪ್ರಜೆಗಳ ಪ್ರಭುತ್ವ ಬಂದಿದೆ. ಕಟ್ಟಡಗಳು ಸಾಮಾನ್ಯವಾಗಬೇಕಿತ್ತು. ಆದರೆ ಮತ್ತಷ್ಟು ಅಸಾಮಾನ್ಯವಾಗಿವೆ. ಉಳ್ಳವರೆಲ್ಲ ಅರಸರಾಗಿದ್ದಾರೆ. ಬಡವರ ಬಡತನ ನಿವಾರಣೆಯಾಗದಿದ್ದರೂ, ಅವರಿಗೆ ಕಾಂಕ್ರೀಟಿನ ಮನೆ ಕಟ್ಟಿಸಿಕೊಡಲಾಗಿದೆ.

 

ದೇಶಕ್ಕೆ ಸ್ವಾತಂತ್ರ್ಯ ಬಂದ ಹೊಸತು ಅದು. ಆಗ ಒಂದು ಚರ್ಚೆ ನಡೆದಿತ್ತು. ಅದನ್ನು ನೆನಪಿಗೆ ತಂದುಕೊಂಡು ಈ ಲೇಖನವನ್ನು ಮುಗಿಸುತ್ತೇನೆ. ದೇಶದ ಮೊದಲ ಪ್ರಜಾಸತ್ತೆಯ ಮೊದಲ ಪ್ರಧಾನಿಯಾಗಿ ಜವಾಹರಲಾಲ್‌ ನೆಹರೂ ಆಯ್ಕೆಯಾಗಿದ್ದರು. ತೀನ್‌ಮೂರ್ತಿ ಭವನವೆಂಬ ರಾಕ್ಷಸಾಕಾರದ, ವಸಾಹತುಶಾಹಿ ಸಂಕೇತವನ್ನು ಅವರು ತಮ್ಮ ವಾಸದ ಮನೆಯಾಗಿ ಆಯ್ದುಕೊಂಡಿದ್ದರು. ‘ಸರಳ ಮನೆಯಲ್ಲಿ ಬದುಕಿ’ ಎಂದು ಕೆಲವರು ಅವರನ್ನು ಕೇಳಿಕೊಂಡರು. ನೆಹರೂ ಖಂಡಿತವಾಗಿ ಆ ಕೆಲಸ ಮಾಡಬಹುದಿತ್ತು, ಮಾಡಲಿಲ್ಲ. ಮಾಡಿದ್ದಿದ್ದರೆ ಈ ದೇಶ ಹೀಗಿರುತ್ತಿರಲಿಲ್ಲ.

 

ಅವರು ತೀನ್‌ಮೂರ್ತಿ ಬಂಗಲೆಯಲ್ಲಿ ಬದುಕುತ್ತಲೇ ಪ್ರಜಾಸತ್ತೆಯನ್ನು ಗುಡಿಸಲಿನೊಳಗೆ ಕೊಂಡೊಯ್ಯುವ ಮಾತನಾಡಿದರು. ಮಾತನಾಡುತ್ತಲೇ ಹೋದರು. ಇಂದಿನ ರಾಜಕಾರಣಿಗಳು ಅಷ್ಟನ್ನೂ ಮಾಡುತ್ತಿಲ್ಲ. ಎಲ್ಲ ಗುಡಿಸಲುಗಳನ್ನೂ ತೀನ್‌ಮೂರ್ತಿ ಭವನಗಳನ್ನಾಗಿ ಮಾಡುತ್ತೇವೆ ಎಂದು ಸ್ಮಾರ್ಟಾದ ಸುಳ್ಳು ಹೇಳಿ ತಾವು, ಬೃಹತ್ ಬಂಗಲೆಗಳಲ್ಲಿ ಹಾಗೂ ಬಂದೂಕಿನ ಅಂಗಳಗಳಲ್ಲಿ ಬದುಕು ಸವೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry