ತಜ್ಞರ ಸಮಿತಿಗೆ ರಾಜ್ಯ ಆಕ್ಷೇಪ

7
ಮೇಕೆದಾಟು ಯೋಜನೆಗೆ ತಮಿಳುನಾಡು ವಿರೋಧ

ತಜ್ಞರ ಸಮಿತಿಗೆ ರಾಜ್ಯ ಆಕ್ಷೇಪ

Published:
Updated:
ತಜ್ಞರ ಸಮಿತಿಗೆ ರಾಜ್ಯ ಆಕ್ಷೇಪ

ನವದೆಹಲಿ: ಕಾವೇರಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ತಜ್ಞರ ಸಮಿತಿ ರಚಿಸುವುದಕ್ಕೆ ಕೇಂದ್ರ ಸರ್ಕಾರ ಒಲವು ತೋರಿದೆ. ಆದರೆ, ಮೇಲುಸ್ತುವಾರಿ ಸಮಿತಿ ಅಸ್ತಿತ್ವದಲ್ಲಿ ಇರುವುದರಿಂದ ಮತ್ತೊಂದು ಸಮಿತಿ ಅನಗತ್ಯ ಎಂದು ಕರ್ನಾಟಕ ವಿರೋಧ ವ್ಯಕ್ತಪಡಿಸಿದೆ.

‘ಕಾವೇರಿ ಕಣಿವೆ ವ್ಯಾಪ್ತಿಯ ಜಲಾಶಯಗಳಿಂದ ನೀರನ್ನು ಹಂಚಿಕೆ ಮಾಡಲು ತಜ್ಞರ ಸಮಿತಿಯ ಅಗತ್ಯವಿದೆ. ಕಣಿವೆ ವ್ಯಾಪ್ತಿಯ ಎಲ್ಲ ರಾಜ್ಯಗಳು ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿದಲ್ಲಿ ಸರ್ಕಾರ ಕ್ರಮ ಕೈಗೊಳ್ಳಲು ಮುಂದಾಗಲಿದೆ’ ಎಂದು ಕೇಂದ್ರ ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಅಮರಜಿತ್‌ ಸಿಂಗ್‌ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸಿದರು.

ಆ ಸಮಿತಿಯ ಕಣ್ಗಾವಲಿನಲ್ಲೇ ನದಿ ನೀರು ಹಂಚಿಕೆಗೆ ಸಂಬಂಧಿಸಿದ ನಿರ್ಧಾರ ಕೈಗೊಳ್ಳುವಂತಾದಲ್ಲಿ ವಿವಾದಕ್ಕೆ ಆಸ್ಪದ ಇಲ್ಲದಂತಾಗುತ್ತದೆ ಎಂಬ ಕೇಂದ್ರದ ಅಭಿಪ್ರಾಯಕ್ಕೆ ಕರ್ನಾಟಕ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.

ಪುದುಚೇರಿ ಮಾತ್ರ ಈ ಪ್ರಸ್ತಾವನೆಗೆ ತಕ್ಷಣವೇ ತನ್ನ ಒಪ್ಪಿಗೆ ಸೂಚಿಸಿತು. ಅಭಿಪ್ರಾಯ ಸೂಚಿಸುವಂತೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ಸರ್ಕಾರಗಳಿಗೆ ಒಂದು ತಿಂಗಳ ಕಾಲಾವಕಾಶ ನೀಡಲಾಯಿತು.

‘ನೀರು ಹಂಚಿಕೆ ವಿವಾದ ಬಗೆಹರಿಸಲು ಮೇಲುಸ್ತುವಾರಿ ಸಮಿತಿ ಇರುವುದರಿಂದ ಇನ್ನೊಂದು ಸಮಿತಿ ಅನಗತ್ಯ ಎಂಬುದು ರಾಜ್ಯದ ವಾದ. ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸಿದ ಬಳಿಕ ಈ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಸರ್ಕಾರದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಮೇಕೆದಾಟುಗೆ ವಿರೋಧ: ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳುವ ಕರ್ನಾಟಕದ ನಿರ್ಧಾರಕ್ಕೆ ತಮಿಳುನಾಡು ಸಭೆಯಲ್ಲಿ ತನ್ನ ವಿರೋಧ ವ್ಯಕ್ತಪಡಿಸಿತು. ಕರ್ನಾಟಕದ ಪ್ರಸ್ತಾವಿತ ಮೇಕೆದಾಟು ಯೋಜನೆಯಿಂದ ತಮಿಳುನಾಡಿಗೆ ಹಂಚಿಕೆಯಾಗುವ ನೀರಿನಲ್ಲಿ  ಕೊರತೆ ಆಗುವುದಿಲ್ಲ. ಬದಲಿಗೆ, ಯೋಜನೆಯಿಂದ ಸಾಕಷ್ಟು ಅನುಕೂಲವಾಗಲಿದೆ ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಶ್ಚಂದ್ರ ಕುಂಟಿಆ ಹಾಗೂ ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶಸಿಂಗ್‌ ಪ್ರತಿಪಾದಿಸಿದರು.

ಯೋಜನೆಗೆ ಸಂಬಂಧಿಸಿದಂತೆ ಸಿದ್ಧಪಡಿಸಲಾಗಿರುವ ಎಲ್ಲ ದಾಖಲೆಗಳನ್ನೂ ಕರ್ನಾಟಕ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಿದೆ. ವಿಶೇಷವಾಗಿ ಇದು ಕುಡಿಯುವ ನೀರು ಪೂರೈಕೆ ಯೋಜನೆಯಾಗಿದ್ದು, ಕೇಂದ್ರದ ಅನುಮತಿಯನ್ನೂ ಪಡೆಯಬೇಕಿದೆ ಎಂದು ಅವರು ಮನವರಿಕೆ ಮಾಡಿದರು.

ಸುಪ್ರೀಂ ಕೋರ್ಟ್‌ ಆದೇಶದಂತೆಯೇ ತಮಿಳುನಾಡಿಗೆ ನೀರನ್ನು ಹರಿಸಲಾಗಿದೆ. ಜನವರಿಯಿಂದ ಏಪ್ರಿಲ್‌ವರೆಗಿನ ಅವಧಿಯಲ್ಲಿ ಸಾಮಾನ್ಯವಾಗಿ ಮಳೆ ಸುರಿದ ವರ್ಷದಲ್ಲಿ ರಾಜ್ಯದಿಂದ 2.5 ಟಿಎಂಸಿ ಅಡಿ ನೀರು ಹರಿಸುವಂತೆ ನ್ಯಾಯಮಂಡಳಿ ಐತೀರ್ಪಿನಲ್ಲಿ ತಿಳಿಸಿದೆ. ಆದರೆ, ಪ್ರಸಕ್ತ ವರ್ಷ ಈ ಅವಧಿಯಲ್ಲಿ ಹರಿಸಲಾಗುವ ನೀರಿನ ಪ್ರಮಾಣ ಅಷ್ಟೇ ಆಗಲಿದೆ. ಆದರೆ, ನಿತ್ಯ 2,000 ಕ್ಯುಸೆಕ್‌ ನೀರು ಹರಿಸಿದರೆ ಐದು ಟಿಎಂಸಿ ಅಡಿ ನೀರು ಹರಿಸಿದಂತಾಗಲಿದೆ. ಮಳೆಯ ಕೊರತೆಯಾಗಿದ್ದರಿಂದ ಕರ್ನಾಟಕ ಕುಡಿಯುವ ನೀರಿನ ತೀವ್ರ ಸಮಸ್ಯೆ ಎದುರಿಸುತ್ತಿದ್ದು, ಮತ್ತಷ್ಟು ನೀರನ್ನು ಹರಿಸುವುದು ಅಸಾಧ್ಯ ಎಂದು  ವಿವರಿಸಿದರು.

ಕರ್ನಾಟಕದ ಕಾವೇರಿ ಜಲಾಶಯಗಳಲ್ಲಿ 13 ಟಿಎಂಸಿ ಅಡಿ ನೀರಿನ ಸಂಗ್ರಹವಿದೆ. 3 ಟಿಎಂಸಿ ಅಡಿ ನೀರು ಬೇಸಿಗೆಯಲ್ಲಿ ಆವಿಯಾಗಿ ಹೋಗುತ್ತದೆ. ಏಳು ಟಿಎಂಸಿ ಟಿಎಂಸಿ ಅಡಿ ಕುಡಿಯಲು ಪೂರೈಕೆ ಮಾಡಲು ಬೇಕಾಗುತ್ತದೆ ಎಂದು ಅವರು ಹೇಳಿದರು.

ಸುಪ್ರೀಂ ಆದೇಶ ಉಲ್ಲಂಘಿಸಿಲ್ಲ

‘ಕಾವೇರಿ ನೀರು ಹಂಚಿಕೆ ಕುರಿತು ಸುಪ್ರೀಂ ಕೋರ್ಟ್‌ ನೀಡಿರುವ ಆದೇಶಗಳನ್ನು ಕರ್ನಾಟಕ ಉಲ್ಲಂಘಿಸಿದ್ದು, ನಮ್ಮ ಪಾಲಿನ ನೀರನ್ನು ಬಿಡುಗಡೆ ಮಾಡಿಲ್ಲ’ ಎಂದು ಸಭೆಯಲ್ಲಿ ಭಾಗವಹಿಸಿದ್ದ ತಮಿಳುನಾಡು ಲೋಕೋಪಯೋಗಿ ಇಲಾಖೆ ಕಾರ್ಯದರ್ಶಿ ಪ್ರಭಾಕರನ್‌ ಹಾಗೂ ಕಾವೇರಿ ತಾಂತ್ರಿಕ ತಂಡದ ಮುಖ್ಯಸ್ಥ ಸುಬ್ರಹ್ಮಣಿಯನ್‌ ದೂರಿದರು.

ಇದನ್ನು ಒಪ್ಪದ ಕರ್ನಾಟಕ, ಕೋರ್ಟ್‌ ಆದೇಶವನ್ನು ಉಲ್ಲಂಘಿಸಿಲ್ಲ. ಚಾಚೂತಪ್ಪದೆ ಪಾಲಿಸಲಾಗಿದೆ ಎಂದು ಬಲವಾಗಿ ಸಮರ್ಥಿಸಿಕೊಂಡಿತು.

‘ಸಂಕಷ್ಟ ಸೂತ್ರದ ಅಡಿಯಲ್ಲೇ ತಮಿಳುನಾಡಿಗೆ ನೀರು ಹರಿಸಲಾಗಿದೆ. ಕೃಷ್ಣರಾಜ ಸಾಗರ ಅಣೆಕಟ್ಟೆಯಿಂದ ಬಿಳಿಗುಂಡ್ಲುವರೆಗಿನ ಪ್ರದೇಶದಲ್ಲಿರುವ ಜಲಾನಯನ ಪ್ರದೇಶದಲ್ಲಿ ಪ್ರಸಕ್ತ ವರ್ಷ ನಿರೀಕ್ಷಿತ ಪ್ರಮಾಣದ ಮಳೆ ಸುರಿಯದ್ದರಿಂದ ತಮಿಳುನಾಡಿಗೆ ಹರಿಯಬೇಕಿದ್ದ ನೀರಿನಲ್ಲಿ ಸಹಜವಾಗಿಯೇ ಕೊರತೆ ಕಂಡುಬಂದಿದೆ. ಮಳೆ ಸುರಿಯದೆ ನೀರು ಹರಿಯದಿದ್ದರೆ ಅದಕ್ಕೆ ಕರ್ನಾಟಕ ಹೊಣೆಯಲ್ಲ’ ಎಂದು ರಾಜ್ಯದ ಅಧಿಕಾರಿಗಳು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry